samachara
www.samachara.com
ತೆರೆಗೆ ಬಂದು ವಾರ ಕಳೆಯುವ ಮುನ್ನವೇ 'ಅರ್ನಾಬ್ ರಿಪಬ್ಲಿಕ್' ವಿರುದ್ಧ ಮೊದಲ ದೂರು?
ಮೀಡಿಯಾ 2.0

ತೆರೆಗೆ ಬಂದು ವಾರ ಕಳೆಯುವ ಮುನ್ನವೇ 'ಅರ್ನಾಬ್ ರಿಪಬ್ಲಿಕ್' ವಿರುದ್ಧ ಮೊದಲ ದೂರು?

ತೆರೆಗೆ ಅಪ್ಪಳಿಸಿ ವಾರ ಕಳೆಯುವ ಮೊದಲೇ ಅರ್ನಾಬ್ ಗೋಸ್ವಾಮಿ ನೇತೃತ್ವದ 'ರಿಪಬ್ಲಿಕ್ ಟಿವಿ' ವಿರುದ್ಧ ಮೊದಲ ದೂರು ದಾಖಲಾಗುವ ಸಾಧ್ಯತೆ ಇದೆ. ಅದೂ ಕರ್ನಾಟಕದಲ್ಲಿ...!

ಕಳೆದ ವಾರವಷ್ಟೆ 'ರಿಪಬ್ಲಿಕ್ ಟಿವಿ' ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಸಂಪಾದಕ, ಜನಪ್ರಿಯ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಆರು ತಿಂಗಳ ನಂತರ ಟಿವಿ ಪರದೆ ಮೇಲೆ ಪ್ರತ್ಯಕ್ಷರಾಗಿದ್ದಾರೆ. ಟಿವಿ ಪರದೆಗೆ ಗ್ರಾಫಿಕ್ಸ್ ಬೆಂಕಿ ಹಾಕುವ ಅವರ ಪತ್ರಿಕೋದ್ಯಮದ ಸ್ವರೂಪ ಇನ್ನಷ್ಟು ಬಿರುಸಾಗಿದೆ. ಈಗ, ಸ್ವತಂತ್ರ ಪತ್ರಿಕೋದ್ಯಮದ ಕುರಿತು ಮಾತನಾಡುವ ಅರ್ನಾಬ್ ನಿಲುವು ಯಾರ ಪರ ಎಂಬುದು ಸ್ಪಷ್ಟವಾಗುತ್ತಿದೆ. ಜತೆಗೆ ಅರ್ನಾಬ್ ಬಳಸುವ ಭಾಷೆ ಮತ್ತು ನಡವಳಿಕೆಯಲ್ಲೊಂದಿಷ್ಟು ಅಹಂ ಬೆರೆತಂತಿದೆ. ಹೀಗಿರುವಾಗಲೇ, ಕರ್ನಾಟಕ ಮೂಲದ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಮತ್ತು ಅರ್ನಾಬ್ ನಡುವೆ ವಾಕ್ಸಮರಕ್ಕೆ 'ರಿಪಬ್ಲಿಕ್ ಟಿವಿ' ಸಾಕ್ಷಿಯಾಗಿದೆ. 

ಶುಕ್ರವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕುಟುಂಬದ ಒಡೆತನಕ್ಕೆ ಸೇರಿದ 'ನ್ಯಾಷನಲ್ ಹೆರಾಲ್ಡ್' ಪ್ರಕರಣದಲ್ಲಿ ಇದರ ಅಂಗ 'ಯಂಗ್ ಇಂಡಿಯಾ' ಸಂಸ್ಥೆಯ ಮೇಲೆ ಐಟಿ ತನಿಖೆಗೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದಕ್ಕೆ ಸಂಬಂಧಪಟ್ಟಂತೆ 'ರಿಪಬ್ಲಿಕ್ ಟಿವಿ'ಯಲ್ಲಿ ಸುದ್ದಿಯೊಂದು ಪ್ರಸಾರವಾಗುತ್ತಿತ್ತು. ಇದಕ್ಕೆ ಕಾಂಗ್ರೆಸ್ ವಕ್ತಾರ, ಕರ್ನಾಟಕದ ಕೊಡಗು ಮೂಲದ ವಕೀಲ, ರಾಜಕಾರಣಿ ಬ್ರಿಜೇಶ್ ಕಾಳಪ್ಪರನ್ನು 'ರಿಪಬ್ಲಿಕ್ ಟಿವಿ'ಯರು ದೂರವಾಣಿ ಮೂಲಕ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದರು. ಈ ಸಮಯದಲ್ಲಿ ಅರ್ನಾಬ್ ಬಳಸಿದ ಭಾಷೆಯ ಹಿನ್ನೆಲೆಯಲ್ಲಿ ಬ್ರಿಜೇಶ್ ಕಾಳಪ್ಪ ದೂರು ದಾಖಲಿಸಲು ಮುಂದಾಗಿದ್ದಾರೆ. ಈ ಕುರಿತು 'ಸಮಾಚಾರ'ಕ್ಕೆ ಮಾಹಿತಿ ನೀಡಿದ ಅವರು, "ಇಂದು ಎರಡನೇ ಶನಿವಾರ. ನ್ಯಾಯಾಲಯ ರಜೆಯಲ್ಲಿದೆ. ಸೋಮವಾರ ಅರ್ನಾಬ್ ವಿರುದ್ಧ ದೂರು ದಾಖಲಿಸಲು ಸಿದ್ಧತೆ ಮಾಡುತ್ತಿದ್ದೇನೆ,'' ಎಂದರು. 

ನಡೆದಿದ್ದೇನು?

'ನ್ಯಾಷನಲ್ ಹೆರಾಲ್ಡ್' ಪ್ರಕರಣದ ಸುದ್ದಿ ಓದುತ್ತಿದ್ದ 'ರಿಪಬ್ಲಿಕ್ ಟಿವಿ' ಆ್ಯಂಕರ್ ಇದು ಕಾಂಗ್ರೆಸಿಗೆ ಹಿನ್ನಡೆಯಲ್ಲವೇ ಎಂದು ಬ್ರಿಜೇಶ್ ಕಾಳಪ್ಪ ಬಳಿ ಪ್ರತಿಕ್ರಿಯೆ ಕೇಳಿದರು. ಬ್ರಿಜೇಶ್, ''ಇದರಲ್ಲಿ ನಮಗೆ ಹಿನ್ನಡೆ ಏನೂ ಇಲ್ಲ. ನಾವೇನು ತನಿಖೆ ನಡೆಯಬಾರದು ಎಂದು ವಾದಿಸಿಯೇ ಇಲ್ಲ,'' ಎಂದು ಹೇಳಿದರು. ಹೀಗೆ ಮಾತನಾಡುತ್ತಾ ಇದೊಂದು ಬಿಜೆಪಿ ಪ್ರೇರಿತ ಪ್ರಕರಣ ಎಂದು ನೀವು ಹೇಳಿದ್ದೀರಿ ಎಂದು ಆ್ಯಂಕರ್ ಬ್ರಿಜೇಶ್ ಬಳಿ ಪ್ರಶ್ನಿಸಿದರುಇದಕ್ಕೆ ಬ್ರಿಜೇಶ್ ನನಗೆ ನಿಮ್ಮದು 'ಬಿಜೆಪಿ ಚಾನಲ್' ಎಂದು ಗೊತ್ತಿದೆ ಎಂದು ಬಿಟ್ಟರು.

ಅಷ್ಟು ಹೇಳುತ್ತಿದ್ದಂತೆ ಅದೇ ಟಿವಿಯ ಪತ್ರಕರ್ತೆ ಶೀತಲ್ ರಜಪೂತ್, "ನೀವು ನಿಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು" ಎಂಬ ಬೇಡಿಕೆಯನ್ನು ಉಗ್ರವಾಗಿ ಮಂಡಿಸತೊಡಗಿದರು. ಈ ಸಮಯದಲ್ಲಿ 'ರಿಪಬ್ಲಿಕ್ ಟಿವಿ'ಗೆ ಬಿಜೆಪಿ ಜತೆಗಿರುವ ಸಂಸದರೊಬ್ಬರು ಹಣ ಹಾಕಿದ ವಿಚಾರವನ್ನು ಬ್ರಿಜೇಶ್ ಮತ್ತೆ ಪ್ರಸ್ತಾಪಿಸಿದರು. ಈ ಸಮಯದಲ್ಲಿ ಪರದೆ ಮೇಲೆ ಕಾಣಿಸಿಕೊಂಡ ಸಂಪಾದಕ ಅರ್ನಬ್ ಗೋಸ್ವಾಮಿ "ದಿಸ್ ಈಸ್ ಅರ್ನಬ್ ಜಸ್ಟ್ ಶಟಪ್.. ಜಸ್ಟ್ ಶಟಪ್ ಆ್ಯಂಡ್ ಹಿಯರ್ ಮಿ" ಎಂದು ಮಾತು ಆರಂಭಿಸಿದರು. ಪ್ರತಿಕ್ರಿಯಿಸಿದ ಬ್ರಿಜೇಶ್ ಸುಮ್ಮನಾಗಲಿಲ್ಲ. "ಮೈಂಡ್ ಯುವರ್ ಲಾಂಗ್ವೇಜ್.." ಎಂದು ಅವರೂ ಧ್ವನಿ ಏರಿಸಿದರು. ಹೀಗೆ ಮಾತು ಮುಂದುವರಿಯಿತು.

ಅರ್ನಬ್ ನೇರ ವೈಯಕ್ತಿಕ ನಿಂದನೆ, ವ್ಯಂಗ್ಯಕ್ಕೆ ಇಳಿದರು. "ನಿಮ್ಮ ಮಾನಸಿಕ ಸ್ಥಿಮಿತದ ಬಗ್ಗೆ ನನಗೆ ಕಾಳಜಿ ಇದೆ.. ದಯವಿಟ್ಟು ಆಸ್ಪತ್ರೆಗೆ ಅಡ್ಮಿಟ್ ಆಗಿ. ಮಾನಸಿಕ ತಜ್ಞರ ಜತೆ ಕೌನ್ಸಿಲಿಂಗ್ ತೆಗೆದುಕೊಳ್ಳಿ. ಆದಷ್ಟು ಬೇಗ ಡಾಕ್ಟರನ್ನು ಕಾಣಿ... ," ಎಂದರು.

ಅದರ ವಿಡಿಯೋ ತುಣುಕು ಇಲ್ಲಿದೆ. ವಿಶೇಷ ಅಂದರೆ, ಅದೇ ವಿಡಿಯೋವನ್ನು ನಾನಾ ಹೆಸರಿನಲ್ಲಿ ಯೂ- ಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಯಿತು. ಜತೆಗೆ, ಅರ್ನಾಬ್ ಗೋಸ್ವಾಮಿ ಕಾಂಗ್ರೆಸ್ ಪಕ್ಷದ ಬ್ರಿಜೇಶ್ ಕಾಳಪ್ಪರನ್ನು 'ಹರಿದು ಹಾಕಿದರು' ಎಂಬ ದಾರಿ ತಪ್ಪಿಸುವ ತಲೆ ಬರಹಗಳನ್ನು ಕೊಡಲಾಯಿತು.

https://www.youtube.com/watch?v=i69VY3v2laI

ಇವುಗಳ ಹೆಡ್ಲೈನ್ ಏನೇ ಇದ್ದರೂ ವಿಡಿಯೋಗಳಿಗೆ ಬಂದ ಪ್ರತಿಕ್ರಿಯೆಗಳು ವಿಶೇಷವಾಗಿವೆ

.

ಹಲವರು ಅರ್ನಬ್ ಗೋಸ್ವಾಮಿಯ ನಡೆಯನ್ನು ಟೀಕಿಸಿದ್ದಾರೆ

.

ಅವರ ಪತ್ರಿಕೋದ್ಯಮದ ಶೈಲಿ ಚರ್ಚೆಗೆ ಗ್ರಾಸವಾಗಿದೆ

.

ಮಾನಸಿಕ ಸ್ಥಿಮಿತ ಇಲ್ಲ ಎಂದು ಟಿವಿ ಪರದೆ ಮೇಲೆ ಪ್ರಶ್ನಿಸುವುದಾದರೆ ಅಂಥಹವರನ್ನು ಟಿವಿಗೆ ಕರೆದು ತಂದಿದ್ದು ಯಾಕೆ ಎಂಬ ಪ್ರಶ್ನೆಯನ್ನೂ ಒಂದಷ್ಟು ಜನ 'ರಿಪಬ್ಲಿಕ್ ಟಿವಿ'ಗೆ ಕೇಳಿದ್ದಾರೆ

.

ಇತ್ತ ಇದೇ ಹೊತ್ತಿಗೆ ಬ್ರಿಜೇಶ್ ಕಾಳಪ್ಪ ತನ್ನನ್ನು ಮಾನಸಿಕ ಸ್ಥಿಮಿತ ಇಲ್ಲದ ವ್ಯಕ್ತಿ ಎಂದು ನಿಂದಿಸಿದ ಅರ್ನಬ್ ಗೋಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಬ್ರಿಜೇಶ್ ಕಾಳಪ್ಪ ದೂರು ದಾಖಲಿಸಿದ್ದೇ ಆದರೆ, ಇದು 'ರಿಪಬ್ಲಿಕ್ ಟಿವಿ' ವಿರುದ್ಧ ದಾಖಲಾಗುವ ಮೊದಲ ದೂರು ಎನ್ನಿಸಿಕೊಳ್ಳುತ್ತದೆ. 

ಮತ್ತೆ ಕರೆ ಮಾಡಿದ ಅರ್ನಾಬ್: 

ಟಿವಿ ಪರದೆಯ ಮೇಲೆ ನಡೆದ ಈ ಡ್ರಾಮದ ನಂತರ ಬ್ರಿಜೇಶ್ ಕಾಳಪ್ಪ ಅವರಿಗೆ ಅರ್ನಾಬ್ ಗೋಸ್ವಾಮಿ ಕರೆ ಮಾಡಿ ಬೆದರಿಕೆಯ ದನಿಯಲ್ಲಿ ಮಾತನಾಡಿದ್ದಾರೆ. ಈ ಕುರಿತು ಮಾಹಿತಿ ಬ್ರಿಜೇಶ್, "ನಿನ್ನ ಡರ್ಟಿ ಕೆಲಸಗಳು ನನಗೆ ಗೊತ್ತಿದೆ ಎಂದು ಏರು ದನಿಯಲ್ಲಿ ಅರ್ನಾಬ್ ಮಾತನಾಡತೊಡಗಿದರು. ನಾನು ನಿಮ್ಮ ಕರೆಯನ್ನು ರೆಕಾರ್ಡ್‌ ಮಾಡುತ್ತಿದ್ದೇನೆ ಎನ್ನುತ್ತಲೇ ದನಿ ತಗ್ಗಿತು,'' ಎಂದರು.