ನಿಜಕ್ಕೂ ನಡೆದಿದ್ದೇನು?: ‘ಪಬ್ಲಿಕ್ ಟಿವಿ’ಯ ರಾಧ ಮತ್ತು ಆತ್ಮಹತ್ಯೆ ಎಂಬ ಗಾಳಿ ಸುದ್ದಿ!
ಮೀಡಿಯಾ 2.0

ನಿಜಕ್ಕೂ ನಡೆದಿದ್ದೇನು?: ‘ಪಬ್ಲಿಕ್ ಟಿವಿ’ಯ ರಾಧ ಮತ್ತು ಆತ್ಮಹತ್ಯೆ ಎಂಬ ಗಾಳಿ ಸುದ್ದಿ!

ಪಬ್ಲಿಕ್ ಟಿವಿಯ ನಿರೂಪಕಿ ರಾಧ ಹಿರೇಗೌಡರ್ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ... ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ... ಹೊಸ ವಾಹಿನಿ ತೆರೆಯುವ ಮಾತುಕತೆಯಲ್ಲಿದ್ದಾರೆ........

ಪಬ್ಲಿಕ್ ಟಿವಿಯ ನಿರೂಪಕಿ ರಾಧ ಹಿರೇಗೌಡರ್ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ... ಸುದ್ದಿ ಅಷ್ಟಕ್ಕೆ ನಿಲ್ಲಲಿಲ್ಲ; ರಾಧ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ... ಆಸ್ಪತ್ರೆಯಲ್ಲಿರುವ ರಾಧ, ಅದೇ ವೇಳೆ ಡಾಲರ್ಸ್ ಕಾಲೋನಿಯ ಕಚೇರಿಯಲ್ಲಿ ಬಿಜೆಪಿ ಮಹಿಳಾ ನಾಯಕಿರ ಜತೆ ಕುಳಿತು ಹೊಸ ವಾಹಿನಿ ಸಂಬಂಧ ಮಾತುಕತೆಯನ್ನೂ ನಡೆಸುತ್ತಿದ್ದಾರೆ...

ಸುದ್ದಿಯ ರೂಪದಲ್ಲಿ ಸುಳ್ಳುಗಳು ಹೇಗೆ ಹರಡಬಹುದು ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕೆಲವು ದಿನಗಳ ಹಿಂದೆ 'ಸಮಾಚಾರ'ಕ್ಕೆ ಲಭ್ಯವಾದ ಅಧಿಕೃತ ಮಾಹಿತಿ ಏನಿತ್ತು ಎಂದರೆ;

'ರಾಧ ಹಿರೇಗೌಡರ್ ವೃತ್ತಿ ಸಂಬಂಧಿತ ವಿಚಾರವೊಂದರ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾಗಿದ್ದರು. ಅದು ಅವರ ಕುಟುಂಬದಲ್ಲಿಯೂ ಬಿಗುವಿನ ವಾತಾವರಣ ಸೃಷ್ಟಿಸಿತ್ತು. ಈ ಸಮಯದಲ್ಲಿ ಅವರು ಹೆಚ್ಚು ಮಾತ್ರೆಗಳನ್ನು ಸೇವಿಸಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು' ಎಂಬುದು.

ವೈಯಕ್ತಿಕ ನೆಲೆಯಲ್ಲಿದ್ದ ಈ ವಿಚಾರವನ್ನು ವರದಿ ಮಾಡದಿರಲು ನಿರ್ಧರಿಸಿದ್ದೆವು. ಆದರೆ ಮಂಗಳವಾರ ಸಂಜೆ ವೇಳೆಗೆ ದಕ್ಷಿಣ ಕನ್ನಡ ಮೂಲದ ಸುದ್ದಿ ತಾಣವೊಂದು ರಾಧಾ ಹಿರೇಗೌಡರ್ ಆತ್ಮಹತ್ಯಾ ಯತ್ನ ಎಂಬ ಸುದ್ದಿಯನ್ನು ಪ್ರಕಟಿಸಿದೆ. ಸಹಜವಾಗಿಯೇ ಇದು ಜನರ ಕುತೂಹಲಕ್ಕೆ ಕಾರಣವಾಗಿದೆ. ಸುದ್ದಿಯ ಕೇಂದ್ರ ಬಿಂದು ರಾಧ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದೆ.

ಈ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾದ ರಾಧ ಮಾರ್ಮಿಕವಾದ ಪೋಸ್ಟೊಂದನ್ನು ಹಾಕಿದರು.

ರಾಧಾ ಅವರ ವಿಚಾರದಲ್ಲಿ ಸುದ್ದಿಗಳಾಗುತ್ತಿರುವ ಇದೇ ಮೊದಲೇನೂ ಅಲ್ಲ. ಈ ಹಿಂದೆ 'ಪಬ್ಲಿಕ್ ಟಿವಿ'ಯಲ್ಲಿ ಪ್ರಕಟವಾದ ಸುದ್ದಿಯೊಂದರ ಹಿನ್ನೆಲೆಯಲ್ಲಿ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆದಿದ್ದವು. ಕೊನೆಗೆ, ಅವರು ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರನ್ನೂ ಈ ಸಂಬಂಧ ದಾಖಲಿಸಿದ್ದರು. ಈ ಸಮಯದಲ್ಲಿ ಅವರನ್ನು 'ಸಮಾಚಾರ' ಮಾತನಾಡಿಸಿತ್ತು ಕೂಡ.

ನಡೆದಿದ್ದೇನು?:

ಈ ಬಾರಿ ರಾಧ ಕಡೆಗೆ ಮತ್ತೆ 'ಫೋಕಸ್' ಶಿಫ್ಟ್ ಆಗಲು ಪ್ರಮುಖ ಕಾರಣ ಕನ್ನಡದಲ್ಲಿ ಆರಂಭವಾಗಲಿರುವ ಹೊಸ ಸುದ್ದಿವಾಹಿನಿ ಅವರಿಗೆ ನೀಡಿದ ಆಫರ್‌. 'ಫೋಕಸ್' ಹೆಸರಿನಲ್ಲಿ ತೆರೆಗೆ ಬರಲು ತಯಾರಿ ನಡೆಸುತ್ತಿರುವ ತಂಡವೊಂದು ಕನ್ನಡದಲ್ಲಿ ಮೊದಲ ಬಾರಿಗೆ ಟಿವಿ ವಾಹಿನಿಯೊಂದಕ್ಕೆ ಮಹಿಳಾ ಸಂಪಾದಕರನ್ನು ನೇಮಕ ಮಾಡಲು ಮುಂದಾಗಿದೆ. ಹಲವರನ್ನು ಈ ಸಂಬಂಧದಲ್ಲಿ ಸಂಪರ್ಕಿಸಿದ್ದಾರೆ ಕೂಡ. ಅದೇ ರೀತಿ 'ಪಬ್ಲಿಕ್ ಟಿವಿ'ಯ ರಾಧ ಹಿರೇಗೌಡರ್ ಅವರನ್ನೂ ಸಂಪರ್ಕಿಸಿದ್ದಾರೆ .

“ಅವರು ನನ್ನನ್ನು ಸಂಪರ್ಕಿಸಿದ್ದು ನಿಜ. ಸಹಜವಾಗಿಯೇ ನಾವು ನಿರ್ಧಾರ ತೆಗೆದುಕೊಳ್ಳಲು ಗೊಂದಲಕ್ಕೆ ಒಳಗಾಗಿದ್ದೆ. ಅದೊಂದು ಒಳ್ಳೆಯ ಅವಕಾಶವೂ ಹೌದು, ಅದೇ ವೇಳೆ ನನ್ನ ವೃತ್ತಿ ಬದುಕಿನ ಅಪಾಯಗಳೂ ಕಾಣಿಸಿದವು. ರಂಗನಾಥ್ ಸರ್ (ಪಬ್ಲಿಕ್ ಟಿವಿ) ಯಾವುದೇ ಕಾರಣಕ್ಕೂ ಹೋಗಬೇಡ ಎಂದರು. ಅವರು ನನ್ನ ವೃತ್ತಿ ಬದುಕು ಕಟ್ಟಿಕೊಟ್ಟವರು ಅವರು. ಪಬ್ಲಿಕ್ ಟಿವಿಯಲ್ಲಿ ಎಲ್ಲರಿಗಿಂತಲೂ ಜಾಸ್ತಿ ಸಂಬಳ ಹೆಚ್ಚಿಸಿದವರು. ನನ್ನ ಅಶಿಸ್ತುಗಳನ್ನು ಸಹಿಸಿಕೊಂಡವರು. ಆದರೆ ಮನೆಯಲ್ಲಿ ಹೊಸ ಅವಕಾಶವನ್ನು ಒಪ್ಪಿಕೊಳ್ಳುವಂತೆ ಹೇಳಿದರು. ಹೀಗಾಗಿ ನನಗೆ ಒತ್ತಡ ಹೆಚ್ಚಾಯಿತು. ಮೊದಲೇ ಲೋ ಬಿಪಿಯ ಸಮಸ್ಯೆ ಹೊಂದಿರುವ ನಾನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದೆ. ಆದರೆ ಇದ್ಯಾವುದನ್ನೂ ಗಮನಿಸದೇ, ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಸುದ್ದಿ ಬರೆದರೆ ಏನು ಮಾಡಬೇಕು, ನೀವೇ ಹೇಳಿ,’’
ರಾಧಾ ಹಿರೇಗೌಡರ್‌

ಎರಡು ದಿನಗಳ ಹಿಂದೆ ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ವೈದ್ಯ ಡಾ. ದಿಲೀಪ್ ಅವರ ಬಳಿ ರಾಧ ಹಾಗೂ ಅವರ ಪತಿಗೆ ಆಂಟಿ- ಡಿಪ್ರೆಶನ್ ಸಮಾಲೋಚನೆ ಪಡೆದುಕೊಂಡು ಮನೆಗೆ ಮರಳಿದರು. ಅಷ್ಟೊತ್ತಿಗಾಗಲೇ ಪತ್ರಿಕೋದ್ಯಮದ ಸರ್ಕಲ್‌ನಲ್ಲಿ ನಾನಾ ರೀತಿಯ ಸುದ್ದಿಗಳಿಗೆ ರಾಧ ಆಹಾರವಾಗಿ ಹೋಗಿದ್ದರು. ಕೊನೆಗೆ ಅವರ 'ಆತ್ಮಹತ್ಯೆ ಯತ್ನ, ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ' ಹೆಸರಿನಲ್ಲಿ ಸುದ್ದಿ ಸ್ವರೂಪ ಪಡೆದು, ಸುಳ್ಳಿಗೆ ಅಧಿಕೃತ ಮುದ್ರೆ ಒತ್ತುವ ಪ್ರಯತ್ನವೊಂದು ನಡೆದಿದೆ.

“ಅತ್ಯಂತ ಕಷ್ಟಪಟ್ಟು ವೃತ್ತಿಜೀವನ ಕಟ್ಟಿಕೊಂಡಿದ್ದೇನೆ. ಕಾಡಿಂದ ಬಂದವಳು ಇವತ್ತು ಈ ಹಂತವನ್ನು ಮುಟ್ಟಿದ್ದೇನೆ. ಭವಿಷ್ಯದ ಬಗ್ಗೆಯೂ ಕನಸುಗಳಿವೆ. ನಾನು ಮತ್ತು ನನ್ನ ಪತಿಯನ್ನು ಒಂದೇ ತೊಟ್ಟಲಿನಲ್ಲಿ ಮಲಗಿಸುತ್ತಿದ್ದರು. ಮೊದಲಿಂದಲೂ ಸ್ನೇಹಿತರಾಗಿದ್ದೆವು. ನಂತರ ಪ್ರೀತಿಸಿ, ಸಮಾಜವನ್ನು ಎದುರು ಹಾಕಿಕೊಂಡು ಮದುವೆಯಾದೆವು. ನಮ್ಮ ನಡುವೆ ಜಗಳ ಇಲ್ಲ ಅಂತಿಲ್ಲ. ಆದರೆ ಅಷ್ಟೇ ಪ್ರೀತಿಯೂ ಇದೆ. ಇವತ್ತು ನನ್ನ ಅನಾರೋಗ್ಯವನ್ನು ಇಟ್ಟುಕೊಂಡು ವೈಯಕ್ತಿಕವಾಗಿ ಇಲ್ಲಸಲ್ಲದ ಸುದ್ದಿ ಹಬ್ಬಿಸುವವರಿಗೆ ಇದನ್ನೆಲ್ಲಾ ಹೇಗೆ ಅರ್ಥಪಡಿಸುವುದು ಹೇಳಿ,’’
ರಾಧಾ ಹಿರೇಗೌಡರ್‌

ಸುಳ್ಳಿಗೆ ಇರುವ ಹಬ್ಬುವ ಶಕ್ತಿ ಸತ್ಯಕ್ಕೆ ಕಡಿಮೆ. ರಾಧ ವಿಚಾರದಲ್ಲಿಯೂ ಈಗಾಗಲೇ ಗಾಳಿ ಸುದ್ದಿಗಳು ರೆಕ್ಕೆ ಪುಕ್ಕವನ್ನು ಕಟ್ಟಿಕೊಂಡು ಹಾರಾಟ ಶುರುಮಾಡಿವೆ. ಸಾಮಾಜಿಕ ಜಾಲತಾಣಗಳು ಬೆಳೆಯುತ್ತಿರುವ ಈ ದಿನಗಳಲ್ಲಿ ವೈಯಕ್ತಿಕ ವಿಚಾರಗಳೂ ಕೂಡ ಹೇಗೆ ವ್ಯಕ್ತಿಗತ ತೇಜೋವಧೆಗೆ ಕಾರಣವಾಗಬಹುದು ಎಂಬುದು ಮತ್ತೊಮ್ಮೆ ಸಾಭೀತಾಗುತ್ತಿದೆ. ಈ ನಡುವೆ ರಾಧ ತಮ್ಮ 'ಫೋಕಸ್ ಟಿವಿ'ಯ ಆಲೋಚನೆಯನ್ನು ಕೈಬಿಟ್ಟಿದ್ದಾರೆ. ನಾನು ಎಲ್ಲಿಯೂ ಹೋಗಲ್ಲ. ನನಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಿಂತ ಪಬ್ಲಿಕ್ ಟಿವಿಯನ್ನು ಬಿಡುವುದು ಸುಲಭವಲ್ಲ. ಶುಕ್ರವಾರ ಕಚೇರಿಗೆ ಬರಲು ರಂಗನಾಥ್ ಸರ್ ಹೇಳಿದ್ದಾರೆ. ನಾನು ಹೋಗುತ್ತಿದ್ದೇನೆ. ಭವಿಷ್ಯ ಹಾದಿ ಇನ್ನೂ ದೊಡ್ಡದಿದೆ. ಗೊಂದಲಗಳ ನಡುವೆಯೇ ನಾನು ನನ್ನ ಗಮ್ಯವನ್ನು ತಲುಪುತ್ತೇನೆ ಎಂದರು ರಾಧ.