ರಾಜ್ಯ ಮಟ್ಟದ ಪತ್ರಿಕೆ ಆರಂಭಿಸಲು ಜಾರಕಿಹೋಳಿ ತಯಾರಿ: ಡಿಸೆಂಬರ್‌ಗೆ 'ಉದಯನಾಡು'?
ಮೀಡಿಯಾ 2.0

ರಾಜ್ಯ ಮಟ್ಟದ ಪತ್ರಿಕೆ ಆರಂಭಿಸಲು ಜಾರಕಿಹೋಳಿ ತಯಾರಿ: ಡಿಸೆಂಬರ್‌ಗೆ 'ಉದಯನಾಡು'?

"ನಾವು

ಕಾಲೇಜಿನ ದಿನಗಳಲ್ಲಿ ಮುಖಕ್ಕೆ ಪೌಡರ್ ಹಚ್ಚಿಕೊಳ್ಳುತ್ತಿದ್ದೆವು. ಆದರೆ ಮತ್ತೆ ಯಾವತ್ತೂ ಹಚ್ಚಲಿಲ್ಲ. ಈಗ ಟಿವಿಗಾಗಿ ಪೌಡರ್ ಹಚ್ಚಿಕೊಂಡಿರುವುದು ವಿಶೇಷ. ಹಳೆಯ ನೆನಪುಗಳನ್ನು ಟಿವಿ ವಾಹಿನಿ ಮಾಡಿಕೊಟ್ಟಿತು..."

ಹೀಗಂತ ಸುಮಾರು 7 ವರ್ಷಗಳ ಹಿಂದೆ, 2010ರ ಜೂನ್ ತಿಂಗಳಿನಲ್ಲಿ ಸಮಯ ಸುದ್ದಿ ವಾಹಿನಿಯನ್ನು ಉದ್ಘಾಟಿಸಿ  'ಸತೀಶ್ ಶುಗರ್ಸ್ ಪ್ರೈ. ಲಿ.' ಮಾಲೀಕ, ರಾಜಕಾರಣಿ ಸತೀಶ್ ಜಾರಕಿಹೊಳಿ ಹೇಳಿದ್ದರು. ಆದರೆ ಅವರ ಕನಸು ನನಸಾಗುವ ಮುನ್ನವೇ ಅವರು ಸಮಯ ಟಿವಿಯಿಂದ ಹೊರ ನಡೆದರು. ಇದೀಗ, ಸತೀಶ್ ಜಾರಕಿಹೊಳಿ 'ಉದಯನಾಡು' ಹೆಸರಿನಲ್ಲಿ ಹೊಸ ಪತ್ರಿಕೆಯೊಂದನ್ನು ಆರಂಭಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮೂಲಗಳ ಪ್ರಕಾರ, ಇದೇ ವರ್ಷದ ಡಿಸೆಂಬರ್ ವೇಳೆಗೆ 'ಉದಯನಾಡು' ಪತ್ರಿಕೆ ರಾಜ್ಯಮಟ್ಟದಲ್ಲಿ ಪ್ರಸರಣಗೊಳ್ಳುವ ಸಾಧ್ಯತೆ ಇದೆ.

ರಾಜಕಾರಣಿಗಳು ಮಾಧ್ಯಮ ಸಂಸ್ಥೆಗಳನ್ನು ಸ್ಥಾಪಿಸುವುದು ಇವತ್ತಿಗೆ ಹೊಸ ವಿದ್ಯಮಾನ ಏನಲ್ಲ. ಕರ್ನಾಟಕದ ಬಹುತೇಕ ಟಿವಿ ವಾಹಿನಿಗಳಲ್ಲಿ ರಾಜಕಾರಣಿಗಳ ಹಣ ಹೂಡಿಕೆಯಾಗಿದೆ, ಇಲ್ಲವೇ ರಾಜಕಾರಣಿಗಳೇ ಟಿವಿ ವಾಹಿನಿಗಳನ್ನು ಕಟ್ಟಿಕೊಂಡಿದ್ದಾರೆ. ಈ ಸಮಯದಲ್ಲಿಯೇ ಉತ್ತರ ಕರ್ನಾಟಕ ಮೂಲದ ಸತೀಶ್ ಜಾರಕಿಹೊಳಿ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸುವ ತಯಾರಿ ನಡೆಸುತ್ತಿದ್ದಾರೆ. "ಇದು ಎರಡನೇ ಸಾಹಸ ಅನ್ನುವುದಕ್ಕಿಂತ ಅವರ ಮೂರನೇ ಸಾಹಸ ಅನ್ನಬಹುದು. 1988ರಲ್ಲಿಯೇ ಅವರು'ಟೈಮ್ಸ್ ಆಫ್ ಕರ್ನಾಟಕ' ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಅದು ಇವತ್ತಿಗೂ ಪ್ರಸರಣದಲ್ಲಿದೆ. ಇದೀಗ ಸಮಯ ಸುದ್ದಿ ವಾಹಿನಿಯ ನಂತರ ಮುದ್ರಣ ಮಾಧ್ಯಮದ ಕಡೆ ಹೊರಳಿದ್ದಾರೆ,'' ಎನ್ನುತ್ತಾರೆ ಅವರ ಸಮೀಪದಲ್ಲಿರುವ ಮುನ್ನಾ ಭಗವಾನ್. ಸದ್ಯ ಮುನ್ನಾ ಅವರೇ 'ಉಯದನಾಡು' ಪತ್ರಿಕೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಅದೇ ಹೆಸರಿನ ವೆಬ್‌ತಾಣ ಈಗಾಗಲೇ ಆರಂಭಗೊಂಡಿದ್ದು, ಬೆಳಗಾವಿಯಲ್ಲಿ ಕಚೇರಿಯನ್ನು ಹೊಂದಿದೆ.

"ಸಾಹೇಬ್ರಿಗೆ (ಸತೀಶ್ ಜಾರಕಿಹೋಳಿ) ಸಮಯ ಸುದ್ದಿ ವಾಹಿನಿ ಆರಂಭಿಸುವ ಸಮಯದಲ್ಲಿಯೇ ರಾಜ್ಯ ಮಟ್ಟದಲ್ಲಿ ಪತ್ರಿಕೆಯೊಂದನ್ನು ಆರಂಭಿಸುವ ಕನಸು ಇತ್ತು. ಆದರೆ ಅವತ್ತು ಅದು ಕೈಗೂಡಿರಲಿಲ್ಲ. ಹೀಗಾಗಿ ಇದೀಗ ಉಯಯನಾಡು ಹೆಸರಿನಲ್ಲಿ ಪತ್ರಿಕೆಯ ನೋಂದಾವಣಿ ಪ್ರಕ್ರಿಯೆ ಮುಗಿದಿದೆ. ಡಿಸೆಂಬರ್ ವೇಳೆಗೆ ರಾಜ್ಯದ 30 ಜಿಲ್ಲೆಗಳ 175 ತಾಲೂಕುಗಳಿಗೆ ಪತ್ರಿಕೆ ಪ್ರಸಾರ ಹೊಂದುವ ಗುರಿಯನ್ನು ಹೊಂದಿದೆ. ತಾಂತ್ರಿಕವಾಗಿ ಕೆಲಸ ಆರಂಭವಾಗಿದೆ,'' ಎಂದು ಮುನ್ನಾ 'ಸಮಾಚಾರ'ಕ್ಕೆ ಮಾಹಿತಿ ನೀಡಿದರು.

ದುಬಾರಿ ಸಾಹಸ:

ಇವತ್ತಿನ ಮಟ್ಟಿಗೆ ರಾಜ್ಯಮಟ್ಟದಲ್ಲಿ ಮುದ್ರಣ ಮಾಧ್ಯಮವನ್ನು ಆರಂಭಿಸುವುದು ಎಲ್ಲಾ ದೃಷ್ಟಿಗಳಿಂದಲೂ ದುಬಾರಿ ಸಾಹಸ. ಈಗಾಗಲೇ ಮುಖ್ಯವಾಹಿನಿಯಲ್ಲಿರುವ ಪತ್ರಿಕೆಗಳಿಗೆ ಪೈಪೋಟಿ ನೀಡುವುದಕ್ಕಾಗಿ ದೊಡ್ಡ ಮಟ್ಟದ ಹೂಡಿಕೆಯನ್ನು ಇದು ಬೇಡುತ್ತದೆ. "ಟೈಮ್ಸ್ ಆಫ್‌ ಇಂಡಿಯಾ ಬೆಂಗಳೂರಿನಲ್ಲಿಯೇ ಮೂರು ಮುದ್ರಣ ಘಟಕಗಳನ್ನು ಹೊಂದಿದೆ. ಅವರು ಮಲೇಶಿಯಾ, ಸಿಂಗಪೂರದಿಂದ ಕಚ್ಚಾ ಪೇಪರ್‌ ತರಿಸಿಕೊಳ್ಳುವ ವ್ಯವಸ್ಥೆಯನ್ನು ಹೊಂದಿದ್ದಾರೆ. 'ವಿಜಯ ಕರ್ನಾಟಕ' ಮುದ್ರಣಗೊಳ್ಳುವ ಒಂದು ಘಟಕದ ವೆಚ್ಚವೇ 100 ಕೋಟಿಯಷ್ಟಿದೆ. ಅಂತವರ ನಡುವೆ ಪೈಪೋಟಿಗೆ ಇಳಿಯಬೇಕು ಎಂದರೆ ಹೂಡಿಕೆಯೂ ಹೆಚ್ಚಾಗಿಯೇ ಇರಬೇಕು,'' ಎನ್ನುತ್ತಾರೆ ಮುದ್ರಣ ಮಾಧ್ಯಮಗಳ ಮಾರುಕಟ್ಟೆಯನ್ನು ಬಲ್ಲ ಹಿರಿಯ ಪತ್ರಕರ್ತರೊಬ್ಬರು.

ಸಮಯ ಸುದ್ದಿ ವಾಹಿನಿಯನ್ನು ಆರಂಭಿಸುವ ಸಮಯದಲ್ಲಿಯೇ ಜಾರಕಿಹೊಳಿ, "ವಾಹಿನಿ ಯಾವತ್ತಿಗೂ ನಂ. 1 ಸ್ಥಾನಕ್ಕೆ ಪೈಪೋಟಿ ನಡೆಸುವುದಿಲ್ಲ,'' ಎಂದು ಹೇಳಿದ್ದರು. ತಳಮಟ್ಟದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಸುದ್ದಿ ಮಾಡುವ ಮಾಧ್ಯಮ ಸಂಸ್ಥೆ ಅದಾಗಲಿದೆ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದರು.

"ಜಾರಕಿಹೋಳಿ ಸಮಯ ಸುದ್ದಿ ಟಿವಿಯಲ್ಲಿ ಗ್ರಾಮೀಣ ಹಿನ್ನೆಲೆಯಿಂದ ಬಂದ ಅನೇಕರಿಗೆ ಕೆಲಸ ನೀಡಿದರು. ಅವರಿಂದಾಗಿಯೇ ಅನೇಕರು ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಬರಲು ಸಾಧ್ಯವಾಯಿತು. ಆದರೆ ಅವರ ಆಶಯವನ್ನು ಈಡೇರಿಸುವಲ್ಲಿ ಸಂಪಾದಕೀಯ ತಂಡ ವಿಫಲವಾಯಿತು. ಈ ಬಾರಿ ಅವರು ಎಚ್ಚರಿಕೆಯಿಂದಲೇ ಹೆಜ್ಜೆ ಇಡಬಹುದು,'' ಎನ್ನುತ್ತಾರೆ ಸಮಯದ ಮಾಜಿ ಉದ್ಯೋಗಿಯೊಬ್ಬರು.

ಮಾರುಕಟ್ಟೆಯಲ್ಲಿ ಹಲ್‌ಚಲ್:

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಾಗುತ್ತಿರುವ ಸಮಯದಲ್ಲಿಯೇ ರಾಜ್ಯದ ಮಾಧ್ಯಮ ಮಾರುಕಟ್ಟೆಯಲ್ಲಿ ಭಾರಿ ಹಲ್‌ಚಲ್‌ ಕೇಳಿ ಬರುತ್ತಿದೆ. ವಿಶೇಷವಾಗಿ ಟಿವಿ ವಾಹಿನಿಗಳ ಅಬ್ಬರ ಹೆಚ್ಚಾಗಿದೆ. ಈಗಾಗಲೇ ವಿಆರ್‌ಎಲ್ ಸಂಸ್ಥೆ 'ದಿಗ್ವಿಜಯ' ಹೆಸರಿನಲ್ಲಿ ಸುದ್ದಿ ವಾಹಿನಿಯನ್ನು ಆರಂಭಿಸಿದೆ. ಆಂಧ್ರದಲ್ಲಿ ಟಿವಿ9ಗೆ ಭಾರಿ ಪೈಪೋಟಿ ನೀಡಿದ್ದ ಟಿವಿ5 ಕರ್ನಾಟಕದಲ್ಲಿಯೂ ಸುದ್ದಿ ವಾಹಿನಿ ಆರಂಭಿಸುವ ಪ್ರಕಟಣೆ ನೀಡಿದೆ. ಇದರ ಜತೆಗೆ, ಇನ್ನೊಂದಷ್ಟು ವಾಹಿನಿಗಳು ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ.

ಮಾಧ್ಯಮ ಕ್ಷೇತ್ರದ ಹೂಡಿಕೆ ದೃಶ್ಯ ಹಾಗೂ ಡಿಜಿಟಲ್‌ಗೆ ಸೀಮಿತವಾಗುತ್ತಿರುವ ಈ ದಿನಗಳಲ್ಲಿ ಸತೀಶ್ ಜಾರಕಿಹೊಳಿ ರಾಜ್ಯಮಟ್ಟದ ಪತ್ರಿಕೆ ಆರಂಭಿಸಲು ಹೊರಟಿದ್ದಾರೆ. ಏಕತಾನತೆಯ ಪ್ರಪಾತ ಕಂಡಿರುವ, ರಾಜಧಾನಿ ಕೇಂದ್ರಿತ ಕನ್ನಡ ಮುಖ್ಯವಾಹಿನಿ ಮುದ್ರಣ ಮಾಧ್ಯಮದಲ್ಲಿ ಉತ್ತರ ಕರ್ನಾಟಕ ಮೂಲದಿಂದ 'ಉದಯನಾಡು' ಪ್ರಾರಂಭಗೊಳ್ಳಲಿದೆ. ಇದು ಇಡುವ ಹೆಜ್ಜೆಗಳು ಸಹಜವಾಗಿಯೇ ಗಮನ ಸೆಳೆಯುವ ಸಾಧ್ಯತೆಗಳಿವೆ.