samachara
www.samachara.com
ಉಳಿದಿರುವುದು 4 ದಿನ: ಕಿರುತೆರೆಗೆ ಅಪ್ಪಳಿಸಲಿರುವ ‘ಗೋಸ್ವಾಮಿ ರಿಪಬ್ಲಿಕ್’ ಹೇಗಿರಲಿದೆ?
ಮೀಡಿಯಾ 2.0

ಉಳಿದಿರುವುದು 4 ದಿನ: ಕಿರುತೆರೆಗೆ ಅಪ್ಪಳಿಸಲಿರುವ ‘ಗೋಸ್ವಾಮಿ ರಿಪಬ್ಲಿಕ್’ ಹೇಗಿರಲಿದೆ?

ಇನ್ನು ಉಳಿದಿರುವುದು ನಾಲ್ಕು ದಿನಗಳು ಅಷ್ಟೆ.ದೇಶದ ಇಂಗ್ಲಿಷ್ ಸುದ್ದಿ ವಾಹಿನಿಗಳ ಸಾಲಿಗೆ ಹೊಸ ‘ಅಬ್ಬರ’ವೊಂದು ಅಧಿಕೃತವಾಗಿ ಸೇರ್ಪಡೆಯಾಗಲಿದೆ.

samachara

samachara

ಕಳೆದ ವರ್ಷ ಅಕ್ಟೋಬರ್ ಹೊತ್ತಿಗೆ 'ಟೈಮ್ಸ್ ನೌ' ವಾಹಿನಿಯಲ್ಲಿ 'ನೇಷನ್ ವಾಂಟ್ಸ್ ಟು ನೋ' ಅನ್ನುತ್ತಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ, ಈಗ 'ರಿಪಬ್ಲಿಕ್' ಟಿವಿಯಲ್ಲಿ 'ನೇಷನ್ ಸ್ಟಿಲ್ ವಾಂಟ್ಸ್‌ ಟು ನೋ' ಎನ್ನಲು ರೆಡಿಯಾಗಿದ್ದಾರೆ. ಮೇ. 6ಕ್ಕೆ ಅರ್ನಾಬ್ ಗೋಸ್ವಾಮಿ ನೇತೃತ್ವದ 'ರಿಪಬ್ಲಿಕ್' ಕಿರುತೆರೆಗೆ ಅಪ್ಪಳಿಸಲಿದೆ.

ಈ ಗೋಸ್ವಾಮಿ 'ರಿಪಬ್ಲಿಕ್' ಟಿವಿ ಹೇಗಿರಲಿದೆ ಎಂಬುದಕ್ಕೆ ಕಳೆದ ತಿಂಗಳು 'ಮ್ಯಾನ್ಸ್ ವರ್ಲ್ಡ್‌' ಮ್ಯಾಗ್ಸೀನ್‌ಗೆ ನೀಡಿದ ಸುದೀರ್ಘ ಸಂದರ್ಶನ ಹಾಗೂ 'ರಿಪಬ್ಲಿಕ್' ಟಿವಿಯ ಪ್ರೊಮೊಗಳು ಸುಳಿವು ನೀಡಿವೆ. ಬಲಪಂಥೀಯ ವಿಚಾರಗಳನ್ನು ಇನ್ನಷ್ಟು ಗಟ್ಟಿಯಾಗಿ ಅರ್ನಾಬ್ ಅಪ್ಪಿಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿವೆ.

'ರಿಪಬ್ಲಿಕ್' ಟಿವಿಯ ಪ್ರೊಮೊದಲ್ಲಿ ಅರ್ನಾಬ್ 'ಮುಸ್ಲಿಂ ಪರ್ಸನಲ್ ಬೋರ್ಡ್‌'ಗೆ ಪತ್ರವೊಂದನ್ನು ಬರೆಯುತ್ತಾರೆ. ಹಿನ್ನೆಲೆ ದನಿಯಲ್ಲಿ, 'ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕುಗಳನ್ನು ಅಪರಹಣ ಮಾಡಬೇಡಿ. ಸಂವಿಧಾನವೇ ಎಲ್ಲದಕ್ಕಿಂತ ಮಿಗಿಲು. ಇದರ ಬಗ್ಗೆ ಹೋರಾಟ ಮಾಡಲು ಮರಳಿ ಬರುತ್ತಿದ್ದೇನೆ. ಸದ್ಯದಲ್ಲಿಯೇ ಸಿಗೋಣ...'' ಎನ್ನುತ್ತಾರೆ.[embed]https://youtu.be/7_Iold1NRvY[/embed]ಇದು ಅರ್ನಾಬ್ ಗೋಸ್ವಾಮಿ ಭವಿಷ್ಯದ 'ಅಗ್ರೆಸಿವ್ ಜರ್ನಲಿಸಂ' ಪರಿಕಲ್ಪನೆ ಹೇಗಿರಲಿದೆ ಎಂಬದರ ಸಂಕೇತ.

ಧರ್ಮದಂತಹ ಸೂಕ್ಷ್ಮ ವಿಚಾರಗಳು ಯಾವತ್ತಿಗೂ 'ಟಿಆರ್‌ಪಿ' ವಿಚಾರಗಳೇ ಎಂಬುದನ್ನು ಅರ್ನಾಬ್ ಅಷ್ಟು ಸುಲಭವಾಗಿ ಮರೆಯಲು ಸಾಧ್ಯವೂ ಇಲ್ಲ. ಇದೇ ಮಾದರಿಯ ಇನ್ನೊಂದು ಪ್ರೊಮೊದಲ್ಲಿ ಅರ್ನಾಬ್ ಗೋಸ್ವಾಮಿ ಲಂಡನ್‌ನಲ್ಲಿರುವ ವಿಜಯ್ ಮಲ್ಯಗೆ ಪತ್ರವೊಂದನ್ನು ಬರೆಯುತ್ತಾರೆ. ಪರೋಕ್ಷವಾಗಿ ಮಲ್ಯರನ್ನು ಭಾರತಕ್ಕೆ ಕರೆತರುವ ಹೊಣೆಗಾರಿಕೆಯನ್ನು ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ.

ಅರ್ನಾಬ್ ಗೋಸ್ವಾಮಿ ತನ್ನ ಭವಿಷ್ಯದ ಟಿವಿ ವಾಹಿನಿಯ ಸಂಪಾದಕೀಯ ನಿಲುವುಗಳು ಹೇಗಿರಲಿವೆ ಎಂಬ ಸುಳಿವನ್ನು 'ಮ್ಯಾನ್ಸ್‌ ವರ್ಲ್ಡ್‌' ಮ್ಯಾಗ್ಸೀನ್‌ಗೆ ನೀಡಿದ ಸಂದರ್ಶನದಲ್ಲಿ ಬಿಟ್ಟುಕೊಟ್ಟಿದ್ದಾರೆ.

‘’ನಾನು ನನ್ನ ಶೋನಲ್ಲಿ ಜಡ್ಜ್‌, ಜ್ಯೂರಿ ಎಲ್ಲವೂ ಆಗಿರುತ್ತೇನೆ,’’ ಎಂದವರು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮನ್ನು ಅನುಕರಿಸುವವರಿಗೆ, “ಕಾಮಿಡಿ ಶೋ ಮಾಡುವವರಾದರೆ ನನ್ನನ್ನು ಅನುಕರಿಸುವುದು ಸರಿ. ಆದರೆ ಒಬ್ಬ ವೃತ್ತಿಪರ ಪತ್ರಕರ್ತ ನನ್ನ ಶೈಲಿಯನ್ನು ಅನುಕರಿಸಿದರೆ ಬೇಸರವಾಗುತ್ತದೆ. ಅವರು ಅವರಾಗಿಯೇ ಏಕೆ ಇರುವುದಿಲ್ಲ ಎಂದು ನನಗೆ ಅಚ್ಚರಿಯಾಗುತ್ತದೆ. ಅಂತವರಲ್ಲಿ (ಅನುಕರಣೆ ಮಾಡುವವರು) ಬಹುತೇಕರು ನನಗಿಂತ ಚಿಕ್ಕ ವಯಸ್ಸಿನವರು. ಅನುಕರಣೆ ಮಾಡಲು ಹೋಗಿ ಅವರ ವೃತ್ತಿ ಬದುಕನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಹಿತವಚನ ನೀಡಲು ಬಯಸುತ್ತೇನೆ,’’
ಅರ್ನಾಬ್‌ ಗೋಸ್ವಾಮಿ

ಅರ್ನಾಬ್ ಗೋಸ್ವಾಮಿಯ 'ರಿಪಬ್ಲಿಕ್' ಟಿವಿಯ ಜಾಹೀರಾತು ದಿಲ್ಲಿ ಸೇರಿದಂತೆ ಹಲವು ಮಹಾನಗರಗಳಲ್ಲಿ ಈಗಾಗಲೇ ರಾರಾಜಿಸುತ್ತಿದೆ. ಜತೆಗೆ ಜಾಹೀರಾತುದಾರರ ಪಟ್ಟಿಯನ್ನೂ 'ರಿಪಬ್ಲಿಕ್' ಪೋಸ್ಟರ್‌ಗಳು ಬಹಿರಂಗ ಮಾಡಿವೆ.ಅಚ್ಚರಿ ಎಂಬಂತೆ 'ರಿಪಬ್ಲಿಕ್' ಭಿತ್ತಿ ಪತ್ರಗಳ ಪಕ್ಕದಲ್ಲಿಯೇ 'ಇಂಡಿಯಾ ಟುಡೆ' ಟಿವಿ ತನ್ನ ಹೊಸ ಜಾಹೀರಾತನ್ನು ಹಾಕುವ ಮೂಲಕ ಆಸಕ್ತಿ ಮೂಡಿಸಿದೆ. ಇತ್ತೀಚೆಗಷ್ಟೆ ಪತ್ರಕರ್ತ ಕರಣ್ ಥಾಪರ್ ವಾಹಿನಿಯಿಂದ ಹೊರನಡೆದಿದ್ದಾರೆ. ಅವರ ಜಾಗಕ್ಕೆ ಹಿಂದಿ ಸುದ್ದಿ ವಾಹಿನಿಗಳ ಅನುಭವಿ ಮುಖ ಅಂಜನ ಓಂ ಕಶ್ಯಪ್ ಅವರನ್ನು ವಾಹಿನಿ ಕರೆತರುತ್ತಿದೆ. 'ರಿಪಬ್ಲಿಕ್' ಟಿವಿ ಜಾಹೀರಾತಿನ ಪಕ್ಕದಲ್ಲಿಯೇ ಕಶ್ಯಪ್ ಅವರ ಹೊಸ ಶೋ ಬಗ್ಗೆ 'ಇಂಡಿಯಾ ಟುಡೆ' ಜಾಹೀರಾತು ನೀಡಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಅರ್ನಾಬ್ ಗೋಸ್ವಾಮಿ 'ಟೈಮ್ಸ್ ನೌ' ವಾಹಿನಿಯ ಚರ್ಚೆಯಲ್ಲಿ ಬಳಸುತ್ತಿದ್ದ 'ನೇಶನ್ ವಾಂಟ್ಸ್‌ ಟು ನೋ' ಎಂಬ ವಾಕ್ಯ ಜನಪ್ರಿಯವಾಗಿತ್ತು. ಕುಹಕಗಳಿಗೂ ಕಾರಣವಾಗಿತ್ತು. ಆದರೆ ಈ ಪದವನ್ನು ಬಳಸದಂತೆ ಕಳೆದ ತಿಂಗಳು 'ಟೈಮ್ಸ್‌ ಗ್ರೂಪ್' ಕಾನೂನು ಸಮರದ ಮನ್ಸೂಚನೆ ನೀಡಿತ್ತು. ಈ ಕಾರಣಕ್ಕಾಗಿ ಅರ್ನಾಬ್, 'ನೇಶನ್ ಸ್ಟಿಲ್ ವಾಂಟ್ಸ್‌ ಟು ನೋ' ಎಂಬ ಹೊಸ ವಾಕ್ಯವೊಂದನ್ನು ಸೃಷ್ಟಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಅದರ ಜತೆಗೆ, 'ರಾಷ್ಟ್ರಪ್ರೇಮ'ದ ಅಬ್ಬರ ಈ ಬಾರಿ ಕೊಂಚ ಹೆಚ್ಚೇ ಇರಲಿದೆ ಎಂಬುದರ ಸುಳಿವನ್ನು ಅವರು ನೀಡಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಅವರ ಹಿಂಬಾಲಕರಿಂದ ಸಾಮಾಜಿಕ ಜಾಲತಾಣಗಳಲ್ಲಿ 'ಪ್ರೆಸ್‌ಸ್ಟಿಟ್ಯೂಟ್ಸ್‌' ಎಂದು ದೂಷಣೆಗೆ ಒಳಗಾಗುತ್ತಿದ್ದ ಪತ್ರಕರ್ತರ ಪೈಕಿ ಬಹುತೇಕರು 'ರಾಷ್ಟ್ರ ಭಕ್ತಿ'ಯ ಜಪ ಆರಂಭಿಸಿದ್ದಾರೆ. ಕಠರ್ ಬಲಪಂಥೀಯ ವಿಚಾರಧಾರೆಗಳನ್ನು ಅವರು ಪ್ರತಿಪಾದಿಸಲು ಶುರುಮಾಡಿದ್ದಾರೆ. ವಿಶೇಷವಾಗಿ ಕಾಶ್ಮೀರದ ವಿಚಾರ ಬಂದಾಗ, ಗಡಿ ಆಚೆಗಿನ ಭಯೋತ್ಪಾದನೆ ವಿಚಾರಕ್ಕೆ ಬಂದಾಗ ಉದ್ರೇಕಗೊಳ್ಳುವ ಇಂಗ್ಲಿಷ್ ಸುದ್ದಿವಾಹಿನಿಗಳ ರಕ್ತದೊತ್ತಡವನ್ನು 'ರಿಪಬ್ಲಿಕ್' ಇನ್ನಷ್ಟು ಏರಿಸಲಿದೆ.

ಅದಕ್ಕೆ ಮುನ್ಸೂಚನೆ 'ಟೈಮ್ಸ್ ನೌ' ವಾಹಿನಿಯ ಪ್ರೈಂ ಟೈಮ್‌ ಚರ್ಚೆಗಳಲ್ಲಿ ಸಿಗುತ್ತಿದೆ. ದಿನದಿಂದ ದಿನಕ್ಕೆ ಅರ್ನಾಬ್ ಹಿಂದೆ ಅನುಸರಿಸುತ್ತಿದ್ದ 'ಗಿಮಿಕ್‌'ಗಳಿಗೆ 'ಟೈಮ್ಸ್‌ ನೌ' ಹತ್ತಿರಾಗುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. 'ರಾಷ್ಟ್ರ ಭಕ್ತಿ'ಯ ವೇದಿಕೆಯನ್ನು ಪ್ರತಿ ರಾತ್ರಿಯೂ ಇಲ್ಲಿ ನಿರ್ಮಿಸುವ ಪ್ರಯತ್ನ ಕಾಣಿಸುತ್ತಿದೆ.

ಆದರಾಚೆಗೆ ಈವರೆಗೆ ಅರ್ನಾಬ್ 'ರಿಪಬ್ಲಿಕ್' ವಿಚಾರದಲ್ಲಿ 'ಟೈಮ್ಸ್ ಗ್ರೂಪ್' ಕಡೆಯಿಂದ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂಬುದು ಗಮನಾರ್ಹ. ಮುಂದಿನ ದಿನಗಳಲ್ಲಿ 'ರಿಪಬ್ಲಿಕ್' ಕಿರುತೆರೆ ಅಪ್ಪಳಿದ ನಂತರ ದೇಶದ ಭವಿಷ್ಯದ ಪತ್ರಿಕೋದ್ಯಮ ಯಾವ ದಿಕ್ಕನ್ನು ಹಿಡಿಯಲಿದೆ ಎಂಬುದನ್ನು 'ಇನ್ನೂ' ಕಾದು ನೋಡಬೇಕಿದೆ. ನೇಷನ್ ಸ್ಟಿಲ್ ವಾಂಟ್ಸ್‌ ಟು ನೋ...!