ಅನಾಣ್ಯೀಕರಣಕ್ಕೆ 3 ತಿಂಗಳು: ಮಾಧ್ಯಮ ಸಂಸ್ಥೆಗಳ ಮೇಲೆ ಬೀರಿರುವ ಪರಿಣಾಮಗಳು
ಮೀಡಿಯಾ 2.0

ಅನಾಣ್ಯೀಕರಣಕ್ಕೆ 3 ತಿಂಗಳು: ಮಾಧ್ಯಮ ಸಂಸ್ಥೆಗಳ ಮೇಲೆ ಬೀರಿರುವ ಪರಿಣಾಮಗಳು

ನರೇಂದ್ರ ಮೋದಿ

ನೇತೃತ್ವದ ಕೇಂದ್ರ ಸರಕಾರದ ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಗೆ ನಾಳೆಗೆ ಮೂರು ತಿಂಗಳು ತುಂಬುತ್ತಿದೆ.

ಆರಂಭದ ಮೂರು ತಿಂಗಳು ದೇಶವಾಸಿಗಳು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ, ಚಿಲ್ಲರೆಗಾಗಿ ಪರದಾಡಿದ್ದ ದೃಶ್ಯಗಳು ದೇಶಾದ್ಯಂತ ವರದಿಯಾಗಿದ್ದವು. ಜತೆಗೆ, ಐಟಿ ದಾಳಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಇದೀಗ, ಅಂತಹ ಮುಖ್ಯವಾಹಿನಿಯ ಬೆಳವಣಿಗೆಗಳು ತೆರೆಮರೆಗೆ ಸರಿದಿವೆ. ಆದರೆ, ಹಿನ್ನೆಲೆಯಲ್ಲಿ ಅನಾಣ್ಯೀಕರಣದ ಪರಿಣಾಮಗಳು ನಿಧಾನವಾಗಿ ಬೀರಲಾರಂಭಿಸಿವೆ; ಇದಕ್ಕೆ ಮಾಧ್ಯಮ ಕ್ಷೇತ್ರ ಕೂಡ ಹೊರತಾಗಿಲ್ಲ.

ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ನೇಮಕಾತಿ ನಿಂತು ಹೋಗಿದೆ. ತಮ್ಮ ವರಮಾನದಲ್ಲಿ ಶೇ. 20ರಷ್ಟು ಕಡಿಮೆಯಾಗಿದೆ ಎಂದು ಆಡಳಿತ ಮಂಡಳಿಗಳು ಹೇಳುತ್ತಿವೆ. ಕೆಲವು ಮಾದ್ಯಮ ಸಂಸ್ಥೆಗಳಿಂದ ಪತ್ರಕರ್ತರು ಮತ್ತು ಸಿಬ್ಬಂದಿಗಳನ್ನು 'ಕಾಸ್ಟ್ ಕಟ್ಟಿಂಗ್' ಹೆಸರಿನಲ್ಲಿ ಹೊರ ಹಾಕಲಾಗಿದೆ. ಈ ಆರ್ಥಿಕ ವರ್ಷದ ಕೊನೆಯಲ್ಲಿ ಸಂಬಳದಲ್ಲಿ ಹೇಳಿಕೊಳ್ಳುವಂತಹ ಹೆಚ್ಚಳ ಸಾಧ್ಯವಿಲ್ಲ ಎಂದು ಮಾಧ್ಯಮ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದವರು ಮುನ್ಸೂಚನೆ ನೀಡುತ್ತಿದ್ದಾರೆ. ಕೆಲವರು ತಮ್ಮ ಪತ್ರಿಕೆಯನ್ನು 'ರಿ ಲಾಂಚ್' ಮಾಡಲು ಅಣಿಯಾಗುತ್ತಿದ್ದಾರೆ. ಇದು ರಾಷ್ಟ್ರೀಯ ಮಾಧ್ಯಮಗಳ ಪರಿಸ್ಥಿತಿಯಾದರೆ, ಕನ್ನಡದ ಪ್ರಾದೇಶಿಕ ಮಾಧ್ಯಮ ಲೋಕದಲ್ಲಿ ಇದಕ್ಕೆ ವ್ಯತಿರಿಕ್ತವಾದ ಪರಿಣಾಮಗಳು ಕಾಣಿಸುತ್ತಿವೆ.

500 ಹಾಗೂ 1000 ಸಾವಿರ ರೂಪಾಯಿ ನೋಟುಗಳ ಮಾನ್ಯತೆ ರದ್ಧುಗೊಂಡ ನಂತರ ಮಾಧ್ಯಮದೊಳಗೆ ಕಂಡುಬರುತ್ತಿರುವ ಪರಿಣಾಮಗಳ ಸಮಗ್ರ ನೋಟ ಇದು.

ವರಮಾನಕ್ಕೆ ಹೊಡೆತ:

ಈ ತಿಂಗಳ ಆರಂಭದಲ್ಲಿ 'ದಿ ಹಿಂದೂ' ಪತ್ರಿಕೆಯ ಕಾರ್ಯ ನಿರ್ವಹಣಾಧಿಕಾರಿ ರಾಜೀವ್ ಲೋಚನ್ ತಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ಕಳುಹಿಸಿರುವ ಇ- ಮೇಲ್‌ನಲ್ಲಿ ಅನಾಣ್ಯೀಕರಣದಿಂದ ಉಂಟಾಗಿರುವ ಪರಿಣಾಮಗಳ ಕುರಿತು ವಿಸ್ತೃತವಾಗಿ ಬರೆದಿದ್ದಾರೆ. 'Demonetisation: short-term pain, long-term gain (hopefully)' ಎಂಬ ತಲೆಬರಹದೊಂದಿಗೆ ಸಮಸ್ಯೆಗಳನ್ನು ಅವರು ಪಟ್ಟಿಮಾಡಿದ್ದಾರೆ.

"ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಯಾಗಿ ಮೂರು ತಿಂಗಳು ತುಂಬುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಲಾಭದ ಪ್ರಮಾಣದ ಕೇವಲ ಶೇ. 3. 6ರಷ್ಟಿದೆ. ಸ್ಥಳೀಯ ಹಾಗೂ ರಾಷ್ಟ್ರೀಯ ಪತ್ರಿಕೆಗಳು ತಮ್ಮ ವರಮಾನಕ್ಕೆ ಜಾಹೀರಾತುಗಳನ್ನೇ ನಂಬಿರುವುದರಿಂದ ಭಾರಿ ಹೊಡೆತ ಹೊಡೆತ ಬಿದ್ದಿದೆ. ನಮ್ಮಂತಹ ಇತರೆ ಮಾಧ್ಯಮ ಸಂಸ್ಥೆಗಳು ಇದನ್ನು ಎದುರಿಸಲು ಈಗಾಗಲೇ ಕೆಲವು ಕಠಿಣ ನಿಲುವುಗಳನ್ನು ತೆಗೆದುಕೊಂಡಿದ್ದಾರೆ. ಪತ್ರಿಕೆಗಳ ಪುಟಗಳ ಸಂಖ್ಯೆಯನ್ನು ಇಳಿಸುವುದು ಮತ್ತು ಮಾನವ ಸಂಪೂನ್ಮೂಲದಲ್ಲಿ ಕಡಿತ ಮಾಡುವ ಮೂಲಕ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದ್ದಾರೆ,'' ಎಂದು ಅವರು ಬರೆದಿದ್ದಾರೆ.

"ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಪರಿಣಾಮಗಳು ನಮ್ಮ ಮೇಲೂ ಆಗಿವೆ. ಶೇ. 15- 20ರಷ್ಟು ಆದಾಯಕ್ಕೆ ಹೊಡೆತ ಬಿದ್ದಿದೆ. ಪ್ರಸರಣ ಆದಾಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಇದರ ಜತೆಗೆ ಚಂಡಮಾರುತ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮರಣ ಕೂಡ ಕೊಂಚ ಸಮಸ್ಯೆಯನ್ನು ತಂದೊಡ್ಡಿದ್ದವು. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ನಮ್ಮ ಪಾಲಿಗೆ ಕಷ್ಟಕರವಾಗಿದ್ದವು. ಸದ್ಯ ನಮ್ಮ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ,'' ಎಂದು ಸಿಇಓ ರಾಜೀವ್ ಕಳಿಸಿರುವ ಇ- ಮೇಲ್‌ನಲ್ಲಿ ವಿವರಿಸಿದ್ದಾರೆ.

ನೇಮಕಾತಿ ನಿಲ್ಲಿಸಿದ ಟೈಮ್ಸ್:

ಅನಾಣ್ಯೀಕರಣಕ್ಕೆ 3 ತಿಂಗಳು: ಮಾಧ್ಯಮ ಸಂಸ್ಥೆಗಳ ಮೇಲೆ ಬೀರಿರುವ ಪರಿಣಾಮಗಳು

ದೇಶದ ಮತ್ತೊಂದು ಪ್ರಮುಖ ಮಾಧ್ಯಮ ಸಂಸ್ಥೆ 'ಟೈಮ್ಸ್ ಆಫ್ ಇಂಡಿಯಾ' ಅನಾಣ್ಯೀಕರಣ ಮಾಧ್ಯಮಗಳ ಮೇಲೆ ಬೀರಿರುವ ಪರಿಣಾಮಗಳ ಕುರಿತು ಸಂಪಾದಕೀಯವನ್ನೇ ಬರೆದಿತ್ತು. ಸದ್ಯ ಟೈಮ್ಸ್ ಸಮೂಹ, ಪತ್ರಕರ್ತರು ಸೇರಿದಂತೆ ಯಾವ ವಿಭಾಗಗಳಿಗಳಿಗೂ ನೇಮಕಾತಿ ನಡೆಸದಂತೆ ಸೂಚನೆ ನೀಡಿದೆ. ಹೀಗಾಗಿ ದೇಶಾದ್ಯಂತ ಟೈಮ್ಸ್ ಸಮೂಹದ ಯಾವುದೇ ಮಾಧ್ಯಮ ಸಂಸ್ಥೆಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಕಡಿವಾಣ ಬಿದ್ದಿದೆ. "ಮೊದಲು ಜನವರಿ ಒಂದು ತಿಂಗಳು ಮಾತ್ರವೇ ನೇಮಕಾತಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಅದು ಫೆಬ್ರವರಿಯಲ್ಲಿಯೂ ಮುಂದುವರಿದೆ. ಮುಂದಿನ ಎಷ್ಟು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಹೇಳಲು ಸಾಧ್ಯವಿಲ್ಲ,'' ಎನ್ನುತ್ತಾರೆ ಟೈಮ್ಸ್ ಮಾನವ ಸಂಪನ್ಮೂಲದ ಮೂಲಗಳು.

"ಸಾಮಾನ್ಯವಾಗಿ ಏಪ್ರಿಲ್ ತಿಂಗಳಿನಲ್ಲಿ ಸಂಬಳ ಹೆಚ್ಚಳ ಮಾಡುತ್ತಿದ್ದೆವು. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಶೇ. 8- 12ರಷ್ಟು ಹೆಚ್ಚಳ ನೀಡುವ ಪ್ರಕ್ರಿಯೆ ನಡೆಯುತ್ತಿತ್ತು. ಈ ಬಾರಿ ಇನ್ನೂ ಸ್ಪಷ್ಟ ಮಾರ್ಗಸೂಚಿ ಬಂದಿಲ್ಲ. ಆದರೆ, ಕಳೆದ ವರ್ಷದಷ್ಟು ಹಚ್ಚಳ ಸಾಧ್ಯವಾಗುವುದು ಕಷ್ಟ,'' ಎನ್ನುತ್ತಾರೆ ಅವರು.

ಸದ್ಯ ಕರ್ನಾಟಕದಲ್ಲಿ ಟೈಮ್ಸ್ ಸಮೂಹದ ಪ್ರಮುಖ ಪತ್ರಿಕೆಗಳಾದ 'ಟೈಮ್ಸ್ ಆಫ್ ಇಂಡಿಯಾ', 'ವಿಜಯ ಕರ್ನಾಟಕ' ಮತ್ತು 'ಬೆಂಗಳೂರು ಮಿರರ್'ಗಳಲ್ಲಿ ಸ್ಥಾನಗಳು ಖಾಲಿ ಇವೆ. ಆದರೆ ನೇಮಕಾತಿ ನಿಂತುಹೋಗಿದೆ. ಇದರ ನಡುವೆಯೇ ಅನಾಣ್ಯೀಕರಣ ಘೋಷಣೆಗೂ ಮುನ್ನವೇ ದಕ್ಷಿಣ ಭಾರತದ ಪ್ರಾದೇಶಿಕ ಭಾ‍ಷೆಗಳ ಪತ್ರಿಕೆಗಳನ್ನು ಆನ್‌ಲೈನ್‌ಗೆ ಅವಳವಡಿಸುವ ಹಿನ್ನೆಲೆಯಲ್ಲಿ ಹೊಸ ಕಂಪನಿಯೊಂದನ್ನು ಟೈಮ್ಸ್ ಆರಂಭಿಸಿತ್ತು. ಕನ್ನಡದ 'ವಿಜಯ ಕರ್ನಾಟಕ' ವೆಬ್‌ಸೈಟ್‌ ಕೂಡ ಅದೇ ಸಂಸ್ಥೆಗೆ ಹಸ್ತಾಂತರಗೊಂಡಿತ್ತು. ಅದಕ್ಕೆ ಒಂದಷ್ಟು ನೇಮಕಾತಿಗಳು ನಡೆದಿದ್ದು, 'ರಿ- ಲಾಂಚ್' ಕೆಲಸ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ.

ಪತ್ರಕರ್ತರಿಗೆ ಮರಣ ಮೃದಂಗ:

ರಾಷ್ಟ್ರೀಯ ಮಾಧ್ಯಮಗಳ ಪೈಕಿ ಅನಾಣ್ಯೀಕರಣ ಪ್ರಕ್ರಿಯೆ ನಂತರ ಗಂಭೀರ ಬೆಳವಣಿಗೆ ನಡೆದಿರುವುದು ಎಬಿಪಿ ಮಾಧ್ಯಮ ಸಂಸ್ಥೆಯಲ್ಲಿ. ಅದರ ಅಡಿಯಲ್ಲಿ ಬರುವ ಬಂಗಾಳಿ ಭಾಷೆಯ 'ಆನಂದ ಬಜಾರ್' ಮತ್ತು 'ದಿ ಟೆಲಿಗ್ರಾಫ್' ಪತ್ರಿಕೆಗಳಿಂದ ಒಟ್ಟು 120 ಪತ್ರಕರ್ತರಿಗೆ ಗೇಟ್‌ಪಾಸ್ ನೀಡಲಾಗಿದೆ. ಇದಕ್ಕೆ ಅವರು ನೀಡಿರುವ ಕಾರಣ, ಖರ್ಚುಗಳನ್ನು ಕಡಿಮೆ ಮಾಡುವುದು.

ಪ್ರಗತಿಪರ ನಿಲುವುಗಳಿಗೆ ಹೆಸರಾಗಿದ್ದ ಈ ಎರಡೂ ಪತ್ರಿಕೆಗಳು ಹೊರಹೋಗುವ ಪತ್ರಕರ್ತರಿಗೆ ಮೂರು ತಿಂಗಳ ಮೂಲ ವೇತನವನ್ನು ನೀಡಿದೆ. ಕೆಲವು ಹಿರಿಯ ಪತ್ರಕರ್ತರಿಗೆ ನಿವೃತ್ತರಾಗುವವರೆಗೂ ನೀಡಲಿದ್ದ ಮೂಲವೇತನವನ್ನು ಕೊಟ್ಟೇ ಮನೆಗೆ ಕಳುಹಿಸಲಾಗಿದೆ. ಜತೆಗೆ, ಪತ್ರಿಕೆಗಳ ಪುಟಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಅವರು ಭಾನುವಾರ ವಿಶೇಷ ಪುರವಣಿ 'ಗ್ರಾಫಿಟಿ'ಯನ್ನು ನಿಲ್ಲಿಸಲಾಗಿದೆ.

ಕನ್ನಡದಲ್ಲಿ ಹೊಸ ಅಲೆ:

ಇದಕ್ಕೆ ಹೋಲಿಸಿದರೆ ಕನ್ನಡದ ಪ್ರಾದೇಶಿಕ ಮಾಧ್ಯಮಗಳ ಮೇಲೆ ಅನಾಣ್ಯೀಕರಣ ದೊಡ್ಡ ಪರಿಣಾಮಗಳು ಬೀರಿದಂತೆ ಕಾಣಿಸುತ್ತಿಲ್ಲ. ಅನಾಣ್ಯೀಕರಣದ ಕಾರಣಕ್ಕೇ, ಮಾನವ ಸಂಪನ್ಮೂಲಕ್ಕೆ ಕಡಿತ ಹಾಕುವ ಕೆಲಸಕ್ಕೆ ಯಾವ ಮಾಧ್ಯಮ ಸಂಸ್ಥೆಗಳೂ ಮುಂದಾಗಿಲ್ಲ. ಜಾಹೀರಾತು ಆದಾಯದಲ್ಲಿ ವ್ಯತ್ಯಗಳಾಗಿವೆ. ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ರಿಯಾಲಿಟಿ, ಫರ್ನಿಚರ್ ಎಕ್ಸ್‌ಪೋಗಳಿಗೆ ಕೆಲವು ಮಾಧ್ಯಮ ಸಂಸ್ಥೆಗಳು ಮೊರೆ ಹೋಗಿವೆ.

ಇದರ ಜತೆಗೆ, ಒಂದಷ್ಟು ಮಾಧ್ಯಮ ಸಂಸ್ಥೆಗಳಲ್ಲಿ ನೇಮಕಾತಿಯೂ ನಡೆಯುತ್ತಿದೆ. ಪತ್ರಕರ್ತರಿಗೆ ಕೆಲಸಗಳು ಸಿಗುತ್ತಿವೆ. ಒಂದಷ್ಟು ಸಂಸ್ಥೆಗಳಲ್ಲಿ ಸಂಬಳದ ಹೆಚ್ಚಳವೂ ನಡೆದಿದೆ. ಕನ್ನಡಕ್ಕೆ ಒಂದಷ್ಟು ಹೊಸ ಸುದ್ದಿ ವಾಹಿನಿಗಳು ಕಾಲಿಡುತ್ತಿವೆ. ಸೋಮವಾರ ವಿಆರ್‌ಎಲ್ ಸಮೂಹದಿಂದ 'ದಿಗ್ವಿಜಯ' ಎಂಬ ಹೊಸ ವಾಹಿನಿಯ ಲಾಂಛನವನ್ನು ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲಿಯೇ ವಾಹಿನಿ ತೆರೆಗೆ ಬರುವ ಮುನ್ಸೂಚನೆ ಸಿಕ್ಕಿದೆ.

ಇದು ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಯಾಗಿ ನಾಲ್ಕು ತಿಂಗಳು ತುಂಬುತ್ತಿರುವ ಹೊತ್ತಿನಲ್ಲಿ ಮಾಧ್ಯಮ ಲೋಕದಲ್ಲಿ ಕಂಡು ಬರುತ್ತಿರುವ ಪರಿಣಾಮಗಳು. ಮುಂದಿನ ದಿನಗಳಲ್ಲಿ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಇನ್ನೊಂದಿಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ. ಜತೆಗೆ, ಪ್ರಾದೇಶಿಕ ಮಾಧ್ಯಮ ಸಂಸ್ಥೆಗಳು ಈ ಸನ್ನಿವೇಶನವನ್ನು ಎದುರಿಸಲು ಯಾವ ಅಸ್ತ್ರಗಳನ್ನು ಬಳಸಬಹುದು ಎಂಬುದನ್ನು ಕಾದು ನೋಡಬೇಕಿದೆ.