ಮೀಡಿಯಾ 2.0

'ಥ್ಯಾಂಕ್ಸ್ ಟು ರಾಜೀವ್ ಚಂದ್ರಶೇಖರ್': ಕನ್ನಡ ಪ್ರಭ, ಸುವರ್ಣಗಳಲ್ಲಿ ಬದಲಾವಣೆ ಮಾತ್ರವೇ ಶಾಶ್ವತ!

"ಸ೦ಪಾದಕರನ್ನು ಅತ್ಯ೦ತ ನಿದ೯ಯವಾಗಿ, ಹೇಯವಾಗಿ ಹೇಗೆ ಕೆಲಸದಿ೦ದ ತೆಗೆದುಹಾಕಬಹುದು ಎ೦ಬುದನ್ನು ಒ೦ದು ಕಲೆಯಾಗಿ ಕರಗತ ಮಾಡಿಕೊ೦ಡ ಶ್ರೇಯಸ್ಸು ರಾಜೀವ ಚ೦ದ್ರಶೇಖರ್ ಅವರದ್ದು..."

ಹೀಗಂತ ರಾಜೀವ್ ಚಂದ್ರಶೇಖರ್ ಮಾಲೀಕತ್ವದ 'ಸುವರ್ಣ ನ್ಯೂಸ್' ಮತ್ತು ಕನ್ನಡ ಪ್ರಭ ಪತ್ರಿಕೆಗಳಿಗೆ ಪ್ರಧಾನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ನಂತರದ ದಿನಗಳಲ್ಲಿ ತಮ್ಮ ಅಂಕಣವೊಂದರಲ್ಲಿ ಪ್ರಸ್ತಾಪಿಸಿದ್ದರು. ಇವರ ಮಾತುಗಳಿಗೆ ಪೂರಕವಾಗಿ ಉದ್ಯಮಿ, ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಸಂಸದ ರಾಜೀವ್ ಚಂದ್ರಶೇಖರ್ ತಮ್ಮ ಮಾಲೀಕತ್ವದ ಕನ್ನಡದ ಮಾಧ್ಯಮ ಸಂಸ್ಥೆಗಳಿಗೆ ಹೊಸ ಸಂಪಾದಕರನ್ನು ಕರೆತರಲು ಹೊರಟಿದ್ದಾರೆ. ಹೊಸ ವರ್ಷ2017ಕ್ಕೆ 'ಸುವರ್ಣ ನ್ಯೂಸ್' ಮತ್ತು 'ಕನ್ನಡ ಪ್ರಭ'ಗಳಲ್ಲಿ ಸಂಪಾದಕರ ಸ್ಥಾನ ಬದಲಾಗಲಿದೆ.

ಸದ್ಯ ಸಂಸ್ಥೆಯ ಸಂಪಾದಕೀಯ ನಿರ್ದೇಶಕರಾಗಿರುವ

. ಅದಕ್ಕೆ ಒಂದು ವಾರ ಮುಂಚೆಯೇ ಅವರ ಕಾರಿಗೆ ಕಲ್ಪಿಸಿದ್ದ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಸ್ಥೆ ಕಿತ್ತುಕೊಂಡಿತ್ತು. ಈ ವಿಚಾರ ರಾಜೀವ್ ಚಂದ್ರಶೇಖರ್ ಗಮನಕ್ಕೆ ಬರುತ್ತಿದ್ದಂತೆ ಆಡಳಿತ ವರ್ಗದ ವಿರುದ್ಧ 'ಕೂಗಾಡಿರುವ' ಪ್ರಸಂಗವೂ ನಡೆದಿದೆ. ಈ ವಿಚಾರವನ್ನು ಸ್ವತಃ ಸುಗತ ಅವರೇ ತನ್ನ ಸಂಪಾದಕೀಯ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಜೀವ್ ಚಂದ್ರಶೇಖರ್ ಪತ್ರಕರ್ತರನ್ನು, ಅದರಲ್ಲೂ ವಿಶೇಷವಾಗಿ ತಮ್ಮ ಮಾಧ್ಯಮ ಸಂಸ್ಥೆಗಳ ಸಂಪಾದಕರನ್ನು ಕೊನೆಯ ಕಾಲದಲ್ಲಿ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ ಎಂಬುದು ಮತ್ತೊಮ್ಮೆ ಜಾಹೀರಾಗಿದೆ.

ಇದೇ ವೇಳೆ, ಸುಗತ ಸಂಪಾದಕೀಯ ನಿರ್ದೆಶಕರಾಗಿ ಬಂದ ನಂತರ 'ಕನ್ನಡ ಪ್ರಭ' ಒಂದಷ್ಟು ಹೊಸ ಅಂಕಣಕಾರರನ್ನು ಕಂಡಿತ್ತು. ಇದೀಗ ಸಂಪಾದಕೀಯ ಪುಟದ ಹೊಣೆಗಾರಿಕೆ ವಹಿಸಿಕೊಂಡಿರುವ ಸಿಬ್ಬಂದಿಯೊಬ್ಬರು, ಎಲ್ಲಾ ಅಂಕಣಕಾರರಿಗೆ ಸಂಸ್ಥೆಯೊಳಗಿನ ಬೆಳವಣಿಗೆ ಹಿನ್ನೆಲೆಯಲ್ಲಿ, 'ವಿದಾಯ ಹೇಳಲು ಮಿಂಚಂಚೆಯನ್ನು ಟೈಪಿಸಿದ್ದಾರೆ'. 'ಮುಂಜಾಗ್ರತ ಕ್ರಮ'ವಾಗಿ ಸುಗತ ಅವರ ಕಾಲದಲ್ಲಿ ಆರಂಭವಾದ ಅಂಕಣಗಳನ್ನೂ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ.

ಎಂತಹ ಅನಿಶ್ಚಿತತೆ ಇದು?:

ಆರಂಭದಿಂದಲೂ ಸುವರ್ಣ ನ್ಯೂಸ್, ರಾಜೀವ್ ಚಂದ್ರಶೇಖರ್ ಪಾಲುದಾರರಾದ ನಂತರ ಕನ್ನಡ ಪ್ರಭ ಮಾಧ್ಯಮ ಸಂಸ್ಥೆಗಳಲ್ಲಿ ಅನಿಶ್ಚಿತತೆಯು ನಿರಂತರತೆ ಕಾಪಾಡಿಕೊಂಡಿದೆ. ಇಲ್ಲಿ ಯಾವಾಗ ಯಾರು ಬದಲಾಗುತ್ತಾರೆ ಎಂಬುದನ್ನು ಊಹಿಸುವುದು ಕಷ್ಟ. ವರ್ಷಕ್ಕೋ, ಎರಡು ವರ್ಷಕ್ಕೋ ಒಮ್ಮೆ ಸಂಪಾದಕೀಯ ವಿಭಾಗದ ಹಿರಿತಲೆಗಳ ಸ್ಥಾನಪಲ್ಲಟ ಇಲ್ಲಿ ಸಂಪ್ರದಾಯವಾಗಿದೆ.

ಕನ್ನಡದ ಹೆಸರು ಹೇಳಿಕೊಂಡು ರಾಜ್ಯಸಭೆಗೆ ಹೋಗಿರುವ, ಬೆಂಗಳೂರಿನ ವಿಚಾರ ಬಂದಾಗ ಬೀದಿಗೆ ಇಳಿಯುವ ಉದ್ಯಮಿ, ರಾಜೀವ್ ಚಂದ್ರಶೇಖರ್ ಕನ್ನಡದ ಪತ್ರಕರ್ತರನ್ನು ನಡೆಸಿಕೊಳ್ಳುವ ಪರಿ ಇದು. "ಇವತ್ತಿಗೂ ಇವರ ಮಾಲೀಕತ್ವದ ಕನ್ನಡ ಮೂಲದ ಮಾಧ್ಯಮ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಕನ್ನಡಿಗರು ಇಲ್ಲ. ಕನ್ನಡವೇ ಗೊತ್ತಿಲ್ಲದ ಮಂದಿಯ ಕೈಯಲ್ಲಿ ಕನ್ನಡ ವಾಹಿನಿ ಹಾಗೂ ದಿನ ಪತ್ರಿಕೆಗಳ ಆಡಳಿತಾಧಿಕಾರ ಇದೆ. ಇದು ಸಮಸ್ಯೆಯ ಮೂಲ," ಎನ್ನುತ್ತಾರೆ ಸಂಸ್ಥೆಯ ಹಳೆಯ ಸಿಬ್ಬಂದಿಯೊಬ್ಬರು.

ಇವರ ಹುಚ್ಚಾಟ ಯಾವ ಪರಿ ಇರುತ್ತದೆ ಎಂಬುದಕ್ಕೆ ಸುವರ್ಣ ನ್ಯೂಸ್ ಸಿಬ್ಬಂದಿಯೊಬ್ಬರು ಸಂಸ್ಥೆಯೊಳಗೆ ನಡೆದ ಘಟನೆಯನ್ನು ಉದಾಹರಣೆಯಾಗಿ ಮುಂದಿಡುತ್ತಾರೆ. 'ಟೌಮ್ಸ್ ನೌ' ಇಂಗ್ಲಿಷ್ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ ಅನುಭವ ಇದ್ದ ಪತ್ರಕರ್ತೆಯೊಬ್ಬರನ್ನು ಸುವರ್ಣ ನ್ಯೂಸ್ಗೆ ಇತ್ತೀಚೆಗೆ ಕರೆತರಲಾಗಿದೆ. "ಅವರು ಇಂಗ್ಲಿಷ್ನಲ್ಲಿ ಬರೆದುಕೊಡುವ ತಲೆಬರಹವನ್ನು ಕನ್ನಡದಕ್ಕೆ ಭಾಷಾಂತರಿಸಿ, ಟಿವಿಯ ಪರದೆಯಲ್ಲಿ ಭಿತ್ತರಿಸುವ ಕೆಲಸ ಮಾಡಬೇಕಾಗಿ ಬಂದಿದೆ,'' ಎನ್ನುತ್ತವೆ ವಾಹಿನಿಯ ಮೂಲಗಳು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯೊಬ್ಬರು ಕೆಲಸ ಬಿಟ್ಟು ಹೋಗಿದ್ದರು. ಈ ವಿಚಾರ ರಾಜೀವ್ ಚಂದ್ರಶೇಖರ್ ಗಮನಕ್ಕೆ ಬಂದ ನಂತರ, ಅವರನ್ನು ಮತ್ತೆ ಕೆಲಸಕ್ಕೆ ವಾಪಾಸ್ ಕರೆಸಿಕೊಳ್ಳಲಾಗಿದೆ. ಮತ್ತು ಈ ಎಲ್ಲಾ ಯಡವಟ್ಟುಗಳನ್ನು ಪಶ್ಚಿಮ ಬಂಗಾಳ ಮೂಲಕ ಸಿಇಓ ತಲೆಗೆ ಕಟ್ಟಲಾಗಿದೆ. ಸದ್ಯ ಸದರಿ ಸಿಇಓ 'ಸುವರ್ಣ ನ್ಯೂಸ್' ಕಡೆಗೆ ತಲೆ ಹಾಕಬಾರದು ಎಂದು ಫರ್ಮಾನು ಹೊರಡಿಸಲಾಗಿದೆ ಎಂಬುದು ಸಿಕ್ಕಿರುವ ಮಾಹಿತಿ.

ಗಾಳಿ ಸುದ್ದಿಗಳಿಗೆ ತೆರೆ:

ಹೀಗಿರುವಾಗಲೇ, ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಕನ್ನಡ ಮಾಧ್ಯಮ ಸಂಸ್ಥೆಗಳಿಗೆ ಸಂಪಾದಕೀಯ ಹೊಣೆಯನ್ನು ಉದಯವಾಣಿಯ ಸಮೂಹ ಸಂಪಾದಕರಾಗಿದ್ದ ರವಿ ಹೆಗಡೆ ಹೊಸ ವರ್ಷದಿಂದ ವಹಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಜತೆಯಲ್ಲಿ 30ಕ್ಕೂ ಹೆಚ್ಚು ಪತ್ರಕರ್ತ ತಂಡವನ್ನು ಕರೆತರುತ್ತಿದ್ದಾರೆ ಎಂದು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಈ ಬದಲಾವಣೆಯ ಕುರಿತು 'ಸಮಾಚಾರ' ರವಿ ಹೆಗಡೆಯವರನ್ನು ಸಂಪರ್ಕಿದಾಗ ಗಾಳಿ ಸುದ್ದಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

"ಕನ್ನಡ ಪತ್ರಿಕೋದ್ಯಮದಲ್ಲಿ ಗಾಳಿ ಸುದ್ದಿಗಳಿಗೆ ಕೊರತೆ ಇರುವುದಿಲ್ಲ. ಸೊಳ್ಳೆ ಹೋಯ್ತು ಅಂದ್ರೆ ಆನೆ ಹೋಯ್ತು ಅಂತ ಸುದ್ದಿಯಾಗುತ್ತದೆ. ನಾನು ಜನವರಿ ಮಧ್ಯದಲ್ಲಿ ಹೊಸ ಹೊಣೆಗಾರಿಕೆ ವಹಿಸುಕೊಳ್ಳುತ್ತಿದ್ದೇನೆ. ಆದರೆ ಜತೆಗೆ 8- 10ಜನರ ನನ್ನ ತಂಡವನ್ನು ಕರೆದುಕೊಂಡು ಹೋಗುತ್ತಿದ್ದೇನೆ, ಅಷ್ಟೆ. ಕನ್ನಡ ಪ್ರಭದಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಇನ್ನಷ್ಟು ಜನರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ನಮ್ಮಿಂದ ಯಾರಿಗೂ ತೊಂದರೆ ಇರುವುದಿಲ್ಲ. ಆದರೆ ಒಂದಷ್ಟು ಮುಖ್ಯಸ್ಥರ ಸ್ಥಾನಗಳು ಬದಲಾಗಬಹುದು,'' ಎಂದು ರವಿ ಹೆಗಡೆ ಮಾಹಿತಿ ನೀಡಿದರು.

ಕನ್ನಡ ಮಾಧ್ಯಮ ಲೋಕದಲ್ಲಿ ಸಂಪಾದಕರು ಬದಲಾಗುತ್ತಿದ್ದಂತೆ ಸಂಸ್ಥೆಯ ಆಯಕಟ್ಟಿನ ಜಾಗಗಳೂ ಬದಲಾಗುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ರವಿ ಹೆಗಡೆ ಹೊಣೆಗಾರಿಕೆ ವಹಿಸಿಕೊಳ್ಳುತ್ತಿದ್ದಂತೆ 'ಕನ್ನಡ ಪ್ರಭ'ದ ಒಳಗಡೆಯೂ ಅಂತಹ ಬೆಳವಣಿಗೆಗಳು ನಡೆಯಲಿವೆ ಎಂಬುದರ ಮುನ್ಸೂಚನೆ ಅವರ ಮಾತುಗಳಲ್ಲಿಯೇ ಸಿಗುತ್ತಿದೆ. "ನಾವು ಮನೆಗಿಂತ ಹೆಚ್ಚು ಕಚೇರಿಯಲ್ಲಿಯೇ ಸಮಯವನ್ನು ಕಳೆಯುತ್ತೇವೆ. ಹೀಗಾಗಿ ಕಚೇರಿಯ ವಾತಾವರಣವನ್ನು ನಮ್ಮ ಕೆಲಸಕ್ಕೆ ಪೂರಕವಾಗಿ ನಿರ್ಮಿಸಿಕೊಳ್ಳಬೇಕಾಗುತ್ತದೆ. ಹಾಗಾದಾಗ ಮಾತ್ರವೇ ವೃತ್ತಿಯಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ,'' ಎನ್ನುವ ಮೂಲಕ ರವಿ ಹೆಗಡೆ ತಮ್ಮ ಅವಧಿಯಲ್ಲಿ ಆಗಬಹುದಾದ ಬದಲಾವಣೆಗಳನ್ನು ತಾತ್ವಿಕವಾಗಿ ಸಮರ್ಥಿಸಿಕೊಂಡರು.

ರಾಜೀವ್ ಗಮನಿಸಲಿ:

ಇಂತಹ ಬೆಳವಣಿಗೆಗಳ ನಡುವೆ ರಾಜೀವ್ ಚಂದ್ರಶೇಖರ್ ಗಮನಿಸಬೇಕಾದ ಕೆಲವು ಅಂಶಗಳಿವೆ. ಅವು ಅವರು ಕನ್ನಡದ ಪತ್ರಕರ್ತರನ್ನು ನಡೆಸಿಕೊಳ್ಳುವ ರೀತಿಗೆ ಸಂಬಂಧಿಸಿದ್ದು. ತಮ್ಮ ಸಂಸ್ಥೆಗಾಗಿ ದುಡಿಯುವ ಪತ್ರಕರ್ತರನ್ನು, ಸಂಪಾದಕರನ್ನು ಕೊನೆಗಾಲದಲ್ಲಿ ಅವರು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ ಎಂದು ಅವರ ಮಾಜಿ ಸಿಬ್ಬಂದಿಗಳೇ ಆರೋಪಿಸುತ್ತಾರೆ. "ಬೆಂಗಳೂರನ್ನು ಮೂಲವಾಗಿಟ್ಟುಕೊಂಡು ತಮ್ಮ ಕಾರ್ಯಾಚರಣೆಯನ್ನು ಹೆಣೆಯುವ ರಾಜೀವ್ ಚಂದ್ರಶೇಖರ್ ಇದನ್ನು ಗಮನಿಸಬೇಕಿದೆ. ಮುಂದಿನ ದಿನಗಳಲ್ಲಾದರೂ ಸಂಸ್ಥೆಯೊಳಗೆ ಸ್ಥಿರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅವರ ಕೆಲಸ ಮಾಡಬೇಕಿದೆ. ಅದಕ್ಕಿಂತ ಹೆಚ್ಚಾಗಿ ಕನ್ನಡ ಮಾಧ್ಯಮ ಸಂಸ್ಥೆಗಳ ಆಡಳಿತವನ್ನು ಕನ್ನಡದ ನಾಡು, ನುಡಿ, ಸೊಗಡನ್ನು ಬಲ್ಲವರ ಮೂಲಕವೇ ನಿಭಾಯಿಸಿದರೆ ಒಳ್ಳೆಯದು,'' ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಇಂತಹ ಬೆಳವಣಿಗೆಗಳ ನಡುವೆಯೇ, 'ಸುವರ್ಣ ನ್ಯೂಸ್' ಮತ್ತು 'ಕನ್ನಡ ಪ್ರಭ' ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಪಾಲಿಗೆ ಹೊಸ ವರ್ಷ ಸ್ಥಿತ್ಯಂತರಗಳ, ಅನಿಶ್ಚಿತತೆಯ ಸ್ವಾಗತವನ್ನು ಕೋರುತ್ತಿದೆ ಎಂಬುದಷ್ಟೆ ಸತ್ಯ.