'ಕೋರ್ಟ್ ಬೀಟ್' ವರದಿಗಾರರಿಗೆ ಕಾನೂನು ಪದವಿ ಕಡ್ಡಾಯ: ಕೇರಳ ಹೈಕೋರ್ಟ್ ಹೊಸ ನಿಯಮ
ಮೀಡಿಯಾ 2.0

'ಕೋರ್ಟ್ ಬೀಟ್' ವರದಿಗಾರರಿಗೆ ಕಾನೂನು ಪದವಿ ಕಡ್ಡಾಯ: ಕೇರಳ ಹೈಕೋರ್ಟ್ ಹೊಸ ನಿಯಮ

ಕೇರಳ ಹೈಕೋರ್ಟಿನ

 ವಕೀಲರು ಮತ್ತು ಪತ್ರಕರ್ತರ ನಡುವಿನ ಮುಸುಕಿನ ಗುದ್ದಾಟ ಹೊಸ ನಿಯಮದೊಂದಿಗೆ ಅಂತ್ಯವಾಗಿದೆ. ಕೇರಳ ಹೈಕೋರ್ಟಿನ ವಿಚಾರಣೆಗಳನ್ನು ವರದಿ ಮಾಡಲು ತೆರಳುವ ಪತ್ರಕರ್ತರಿಗೆ ಕಾನೂನು ಪದವಿಯನ್ನು ಕೋರ್ಟ್ ಕಡ್ಡಾಯಗೊಳಿಸಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಹೈಕೋರ್ಟ್ ಈ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕೋರ್ಟ್ ಬೆಳವಣಿಗೆಗಳನ್ನು ವರದಿ ಮಾಡುವ ಪತ್ರಕರ್ತರು ‘ಲೀಗಲ್ ಕರೆಸ್ಪಾಂಡೆಂಟ್’ ಮಾನ್ಯತೆ ಪಡೆದುಕೊಳ್ಳಲು ಲಾ ಪದವಿ ಹೊಂದುವುದು ಅನಿವಾರ್ಯವಾಗಿದೆ.

ಹೊಸ ನಿಯಮಗಳ ಪ್ರಕಾರ, ವರದಿಗಾರರಿಗೆ ಎರಡು ಪ್ರಕಾರದ ಮಾನ್ಯತೆಗಳನ್ನು ಕೋರ್ಟ್ ನೀಡುತ್ತದೆ. ಸಾಮಾನ್ಯ ಮತ್ತು ತಾತ್ಕಾಲಿಕ ಎಂಬ ಎರಡೂ ಪ್ರಕಾರದ ಮಾನ್ಯತೆಗಳಿಗೆ ಎಲ್. ಎಲ್. ಬಿ ಡಿಗ್ರಿ ಪಡೆಯುವುದು ಕಡ್ಡಾಯವಾಗಿದೆ. ಈ ಮಾನ್ಯತೆಯನ್ನು ಹೊರತುಪಡಿಸಿ ರಿಜಿಸ್ಟಾರ್ ಜನರಲ್ ಒಂದು ದಿನ ಅಥವಾ ಕೆಲವು ವಿಶೇಷ ಪ್ರಕರಣಗಳ ವಿಚಾರಣೆಗೆ ಹಾಜರಾಗಲು ತಾತ್ಕಾಲಿಕ ಅನುಮತಿಯನ್ನೂ ನೀಡಲಿದ್ದಾರೆ.

ಸಾಮಾನ್ಯ ಮಾನ್ಯತೆ ಪಡೆದುಕೊಳ್ಳಲು ಪತ್ರಕರ್ತರು ದೈನಿಕ, ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ನ್ಯೂಸ್ ಏಜೆನ್ಸಿ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮ ಸಂಸ್ಥೆಯಲ್ಲಿ ಕನಿಷ್ಟ ಐದು ವರ್ಷ ಕೋರ್ಟ್ ವರದಿ ಮಾಡಿದ ಅನುಭವ ಹೊಂದಿರಬೇಕು. ಇದರಲ್ಲಿ ಕನಿಷ್ಟ ಮೂರುವರೆ ವರ್ಷ ಕೇರಳ ಹೈಕೋರ್ಟಿನಲ್ಲಿ ಅಥವಾ ಸುಪ್ರಿಂ ಕೋರ್ಟಿನಲ್ಲಿ ಇಲ್ಲವೇ ಭಾರತದ ಯಾವುದಾದರೂ ಒಂದು ಹೈಕೋರ್ಟಿನಲ್ಲಿ ವರದಿ ಮಾಡಿದ ಅನುಭವ ಇರಲೇಬೇಕು.  ಇನ್ನು ತಾತ್ಕಾಲಿಕ ಮಾನ್ಯತೆಯನ್ನು ಪಡೆದುಕೊಳ್ಳಲು ಎರಡು ವರ್ಷಗಳ ಕಾಲ ಕೋರ್ಟ್ ವರದಿ ಮಾಡಿದ  ಅನುಭವ ಸಾಲುತ್ತದೆ ಎಂದು ಹೊಸ ನಿಯಮಗಳು ಹೇಳುತ್ತಿವೆ.

ಮಾನ್ಯತೆ ಪಡೆದುಕೊಂಡ ಪತ್ರಕರ್ತರಿಗೆ ಕೆಲವು ಷರತ್ತುಗಳನ್ನೂ ಹಾಕಲಾಗುತ್ತದೆ. ಆತ/ಆಕೆ ಕೋರ್ಟ್ ಆವರಣ ಪ್ರವೇಶ ಮಾಡಲು ಫಾರ್ಮಲ್ ಬಟ್ಟೆಯನ್ನು ತೊಡಬೇಕು. ಕೋರ್ಟಿನ ವಾತಾವರಣಕ್ಕೆ ಅದು ಸರಿ ಹೊಂದುವಂತಿರಬೇಕು. ಗುರುತಿನ ಚೀಟಿಯನ್ನು ಕಾಣಿಸುವಂತೆ ಹಾಕಿಕೊಂಡಿರಬೇಕು. ಮಾತ್ರವಲ್ಲ ಕೋರ್ಟ್ ಆವರಣದಲ್ಲಿ ನಿಯಮಗಳನ್ನು ಪಾಲಿಸಬೇಕು. ಒಂದೊಮ್ಮೆ ಅನುಚಿತ ವರ್ತನೆ ತೋರಿದಲ್ಲಿ ಅವರಿಗೆ ಮಂಜೂರು ಮಾಡಿದ ಮಾನ್ಯತೆಯನ್ನು ಪುನರ್ ಪರಿಶೀಲನೆಗೆ ಒಳಪಡಿಸಲು ಅವಕಾಶವಿದೆ.

ಸದ್ಯ ಸುಪ್ರಿಂ ಕೋರ್ಟಿನಲ್ಲಿಯೂ ಪತ್ರಕರ್ತರು ವರದಿಗಾರಿಕೆ ಮಾಡಲು ಇದೇ ರೀತಿ ಕಾನೂನು ಪದವಿ ಪಡೆಯವುದನ್ನು ಕಳೆದ ವರ್ಷ ಕಡ್ಡಾಯ ಮಾಡಲಾಗಿದೆ. ಇಲ್ಲೂ ಪತ್ರಕರ್ತರಿಗೆ ತಾತ್ಕಾಲಿಕ ಮತ್ತು ಸಾಮಾನ್ಯ ಕೋರ್ಟ್ ಕರೆಸ್ಪಾಂಡೆಂಟ್ ಎಂಬ ಮಾನ್ಯತೆ ನೀಡಲಾಗುತ್ತದೆ.

ಚಿತ್ರ, ಮಾಹಿತಿ ಕೃಪೆ:

ಲೈವ್ ಲಾ