samachara
www.samachara.com
ಪೊರ್ನೋಗ್ರಫಿ, ಪ್ರೇಮಶೇಖರ್, ಫಿಲಾಸಫಿ, ಪೋಲಿ ಮತ್ತು ಪಬ್ಲಿಕ್ ಟಿವಿ!
ಮೀಡಿಯಾ 2.0

ಪೊರ್ನೋಗ್ರಫಿ, ಪ್ರೇಮಶೇಖರ್, ಫಿಲಾಸಫಿ, ಪೋಲಿ ಮತ್ತು ಪಬ್ಲಿಕ್ ಟಿವಿ!

ಚಿಂತಕ,

ಅಂಕಣಕಾರ, ಹಿರಿಯ ಜೀವ ಪ್ರೇಮಶೇಖರ್ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಉದ್ಘಾಟನೆಯಲ್ಲಿ ಮಾಡಿದ ಭಾಷಣದ ಅಂಶಗಳೀಗ ವಿವಾದಕ್ಕೆ ಕಾರಣವಾಗಿದೆ.

ಭಾಷಣದಲ್ಲಿ ಲೋಕಾಭಿರಾಮ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದ ಪ್ರೇಮಶೇಖರ್, ಪೊರ್ನೋಗ್ರಫಿಯ ಬಗ್ಗೆಯೂ ಪ್ರಸ್ತಾಪ ಮಾಡಿದ್ದರು. ಇದನ್ನು ಸುದ್ದಿಯನ್ನಾಗಿ ಮಾಡಿದ 'ಪಬ್ಲಿಕ್ ಟಿವಿ', 'ಪೋಲಿ ಪ್ರೊಫೆಸರ್' ಎಂಬ ಎಂಬ ತಲೆ ಬರಹ (ಸ್ಲಗ್) ನೀಡಿ ಪ್ರಸಾರ ಮಾಡಿತ್ತು.

ಇದಕ್ಕೆ ಸಾಮಾಜಿಕ ಜಾಲತಾಣ ಫೇಸ್ಬುಕ್ಕಿನಲ್ಲಿ ವಿಡಿಯೋ ರೂಪದ ಪ್ರತಿಕ್ರಿಯೆ ನೀಡಿರುವ ಪ್ರೇಮಶೇಖರ್, ಮನುಷ್ಯನ ಮನಸ್ಸುಗಳ ಬೆಳವಣಿಗೆಯಲ್ಲಿ 'ಅಶ್ಲೀಲ ಸಾಹಿತ್ಯ'ದ ವಾಸ್ತವತೆಯ ಕುರಿತು ಮಾತನಾಡಿದ್ದಾರೆ. ಜತೆಗೆ, ಯಾವ ಸಂದರ್ಭದಲ್ಲಿ ತಾವು ಭಾಷಣದ ನಡುವೆ ಪೊರ್ನ್ ವಿಚಾರವನ್ನು ಪ್ರಸ್ತಾಪಿಸಿದ್ದೆ ಎಂಬುದಕ್ಕೆ ಸಮಜಾಯಿಷಿ ನೀಡಿದ್ದಾರೆ. ಈ ಕುರಿತು 'ಸಮಾಚಾರ'ದ ಜತೆ ಮಾತನಾಡಿದ 'ಪಬ್ಲಿಕ್ ಟಿವಿ'ಯ ಸಂಪಾದಕೀಯ ಮಂಡಳಿಯ ಸದಸ್ಯರೊಬ್ಬರು, "ಬೆಡ್ ರೂಮಿನ ವಿಚಾರಗಳನ್ನು ಬೀದಿಗೆ ತರಬಾರದು. ಎರಡರ ನಡುವೆ ವ್ಯತ್ಯಾಸಗಳಿವೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಪೋರ್ನೊಗ್ರಫಿ ನೋಡಿ ಎಂದು ಪ್ರೇಮಶೇಖರ್ ಹೇಳಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಅದರ ಸಂದರ್ಭವನ್ನೂ ನಾವು ಗಮನಿಸಿದ್ದೇವೆ. ತಪ್ಪು ಮಾರು ಮಾಡಿದರು ತಪ್ಪೇ. ವಿದ್ವಾಂಸರು ಎಲ್ಲಾ ಕಾಲಕ್ಕೂ ಸರಿಯಾಗಿಯೇ ಮಾತನಾಡುತ್ತಾರೆ ಅಂತೇನಿಲ್ಲ ಅಲ್ವಾ?'' ಎಂದು ಪ್ರಶ್ನಿಸುತ್ತಾರೆ. ಒಟ್ಟಾರೆ, ನಾಲ್ಕು ಗೋಡೆಗಳ ನಡುವಿನ ಭಾಷಣವೊಂದು ಈಗ ಪೊರ್ನೋಗ್ರಫಿಯ ಸುತ್ತ ಚರ್ಚೆಗೆ ಗ್ರಾಸವಾಗಿದೆ.

ಪ್ರೇಮಶೇಖರ್ ಹೇಳಿದ್ದೇನು?: 

ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಜತೆ ವೇದಿಕೆ ಹಂಚಿಕೊಂಡಿದ್ದ ಪ್ರೇಮಶೇಖರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 'ಸಮಾಚಾರ'ಕ್ಕೆ ದೂರವಾಣಿ ಮೂಲಕ ಮಾತನಾಡಿದ ಪ್ರೇಮಶೇಖರ್, "ನಾನು ಮಾತನಾಡಿದ್ದು ಹೌದು. ಇರಾಕ್ನಿಂದ ಶುರುಮಾಡಿ ಚೀನಾವರೆಗೆ, ಫ್ರೆಂಚ್ ಕ್ರಾಂತಿಯಿಂದ ಹಿಡಿದು, 1980ರ ಅಮೆರಿಕಾ ವಿದ್ಯಾರ್ಥಿ ಚಳವಳಿವರೆಗೆ ಮಾತನಾಡಿದೆ. ನಿಜ ಹೇಳಬೇಕು ಅಂದರೆ, ನಾನು ಮಾತನಾಡಿದ ಹಲವು ಸಂಗತಿಗಳನ್ನು ಉಪಕುಲಪತಿಗಳು ತಮ್ಮ ಭಾಷಣದಲ್ಲಿಯೂ ಪ್ರಸ್ತಾಪಿಸಿದರು. ಹೀಗಿರುವಾಗ ಪಬ್ಲಿಕ್ ಟಿವಿಗೆ ಭಾಷಣದ ನಡುವೆ ಉಲ್ಲೇಖಿಸಿದ ಪೊರ್ನೋಗ್ರಫಿ ವಿಚಾರ ಮಾತ್ರವೇ ಯಾಕೆ ಮುಖ್ಯವಾಯಿತು,'' ಎಂದರು.

'ಪಬ್ಲಿಕ್ ಟಿವಿ' ಈ ಕುರಿತು ಪ್ರಸಾರ ಮಾಡಿದ ಸುದ್ದಿಯ ದೃಶ್ಯಗಳು ಯೂ- ಟ್ಯೂಬ್ನಲ್ಲಿ ಲಭ್ಯ ಇದೆ. ಇದರಲ್ಲಿ ಪೊರ್ನೋಗ್ರಫಿ ಜತೆಗೆ, ಭಾರತ- ಪಾಕ್ ಸಂಬಂಧಗಳ ಕುರಿತೂ ಪ್ರೇಮಶೇಖರ್ ಮಾತನಾಡಿದ್ದಾರೆ. "ಪಾಕಿಸ್ತಾನಿಯೊಬ್ಬ ನಮ್ಮನ್ನು ಸಹೋದರ ಎಂದು ಅಪ್ಪಿಕೊಂಡರೆ ಅದು ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗುವುದಿಲ್ಲ. ನಮ್ಮನ್ನು ಸಹೋದರರು ಎಂದು ಒಪ್ಪಿಕೊಳ್ಳುವ ಕೋಟ್ಯಾಂತರ ಜನ ಅಲ್ಲಿದ್ದಾರೆ. ಇದು ನನಗೂ ಅನುಭವಕ್ಕೆ ಬಂದಿದೆ,'' ಎಂದು ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

https://www.youtube.com/watch?v=dLZb1U8waso

"ಅಲ್ಲಿದ್ದವರು ಭಾವನಾತ್ಮಕವಾಗಿ ಇನ್ನೂ ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿಗಳು. ಅವರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಹಲವು ವಿಚಾರಗಳನ್ನು ತಿಳಿಸಿದ್ದೇನೆ. ನಾನು ಯಾವ ಪಂಥಕ್ಕೂ ಸೇರಿದವನಲ್ಲ. ಇಂದಿರಾಗಾಂಧಿ ಮತ್ತು ಮೋದಿ ಅವರ ಒಳ್ಳೆಯ ಕೆಲಸಗಳ ಬಗ್ಗೆಯೂ ಮಾತನಾಡಿದ್ದೇನೆ. ಇವರಿಬ್ಬರು ತಪ್ಪು ಮಾಡಿದಾಗ ಅದನ್ನೂ ಪ್ರಸ್ತಾಪಿಸಿದ್ದೇನೆ. ನನ್ನ ಅಂಕಣ ಬರಹಗಳ ಎರಡು ಪುಸ್ತಕಗಳು ನಿನ್ನೆಯಷ್ಟೆ ಬಿಡುಗಡೆಯಾಗಿವೆ. ಅದನ್ನು ಓದಿದರೆ ಅರ್ಥವಾಗುತ್ತದೆ,'' ಎಂದರು ಪ್ರೇಮಶೇಖರ್.

ಸದ್ಯ ಅವರು 'ವಿಜಯವಾಣಿ' ಪತ್ರಿಕೆಯಲ್ಲಿ ಅಂಕಣಕಾರರಾಗಿದ್ದಾರೆ. ಪ್ರೇಮಶೇಖರ್ ಅವರ ಭಾಷಣದ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಅವರು ಪ್ರತಿಕ್ರಿಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಅದನ್ನು ಪ್ರಚಾರಕ್ಕೆ ಕೊಂಡೊಯ್ದ ಅವರ ಸ್ನೇಹಿತರು, 'ಅಟ್ರಾಸಿಟಿ ಕೇಸು ಜಡಿದು ಅರ್ಧ ದಿನದೊಳಗೆ ನೀವಿಬ್ಬರೂ ಕಂಬಿ ಎಣಿಸುವಂತೆ ಮಾಡಬಹುದಿತ್ತು. ಆದರೆ ಅಂತಹ ದಾರಿ ತುಳಿಯದೆ ತನ್ನ ಕಡೆಯಿಂದ ಅತ್ಯಂತ ಸಭ್ಯ ಭಾಷೆಯಲ್ಲಿ ಸ್ಪಷ್ಟೀಕರಣ ಕೊಡುವ ಕೆಲಸವನ್ನು ಅವರು ಮಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

"ಅವರ ಭಾಷೆ ನೋಡಿ. ಪೊರ್ನೋಗ್ರಫಿಗೂ ಜಾತಿ ನಿಂದನೆಗೂ ಎಲ್ಲಿಂದೆಲ್ಲಿಯ ಸಂಬಂಧ. ದಲಿತರ ಮೇಲಿನ ದೌರ್ಜನ್ಯ ತಡೆಗಾಗಿ ಮಾಡಿರುವ ಕಾನೂನನ್ನು ದುರ್ಬಳಿಕೆ ಮಾಡಿಕೊಳ್ಳುವ ಬೆದರಿಕೆ ಇದು ಅಷ್ಟೆ,'' ಎನ್ನುತ್ತಾರೆ ಪಬ್ಲಿಕ್ ಟಿವಿಯ ಪತ್ರಕರ್ತರೊಬ್ಬರು. ಇದನ್ನು ಪ್ರೇಮಶೇಖರ್ ಮುಂದಿಟ್ಟರೆ, "ನೋಡಿ, ನಾನು ಹಾಗೆ ಹೇಳಿಲ್ಲ. ನನ್ನ ಸ್ನೇಹಿತರು ಅಟ್ರಾಸಿಟಿಯ ಕುರಿತು ಪ್ರಸ್ತಾಪಿಸಿದ್ದಾರೆ. ನೀವು ಅವರನ್ನೇ ಕೇಳಿ,'' ಎಂದರು.

ವಿದ್ವಾಂಸರ ಭಾಷಣಗಳು ವಿವಾದಕ್ಕೆ ಒಳಗಾಗುವುದು ಇದೇ ಮೊದಲೇನೂ ಅಲ್ಲ. ಹಿಂದೆ, ಎಂ. ಎಂ. ಕಲ್ಬುರ್ಗಿ ಅವರ ಕುರಿತು ಅನಂತಮೂರ್ತಿ ಅವರ ಭಾಷಣವೊಂದು ವಿವಾದಕ್ಕೆ ಒಳಗಾಗಿತ್ತು. ಈ ಸಮಯದಲ್ಲಿಯೂ ಭಾ‍ಷಣದ ಫಿಲಾಸಫಿ, ಅವುಗಳ ಸಂದರ್ಭಗಳ ಕುರಿತು ಚರ್ಚೆಗಳು ನಡೆದಿದ್ದವು. ಈ ಬಾರಿ ಪ್ರೇಮಶೇಖರ್ ಅವರ ಸರದಿ, ಅಷ್ಟೆ.