samachara
www.samachara.com
ನಾವು ಸುಳ್ ಹೇಳಲ್ಲ: ಸುದ್ದಿ ಟಿವಿ; ಇದು ‘ಕಾಂಗ್ರೆಸ್ ಸಂಗಾತಿ’!
ಮೀಡಿಯಾ 2.0

ನಾವು ಸುಳ್ ಹೇಳಲ್ಲ: ಸುದ್ದಿ ಟಿವಿ; ಇದು ‘ಕಾಂಗ್ರೆಸ್ ಸಂಗಾತಿ’!

samachara

samachara

ಫೆಬ್ರವರಿ

23, 2016ರ ಮಧ್ಯಾಹ್ನ...

ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದ ದಿನವದು. ಅವತ್ತಿಗೆ 'ಸುದ್ದಿ ಟಿವಿ' ಶಾಂತಿ ನಗರ ಬಸ್ ಸ್ಟ್ಯಾಂಡ್ ಎದುರಿಗೆ ಇರುವ ‘ಖೈಖಾ ಬಿಸಿನೆಸ್ ಪಾರ್ಕ್’ ಕಟ್ಟಡದ ಒಂದನೇ ಮಹಡಿಯಲ್ಲಿನ್ನೂ ಭ್ರೂಣಾವಸ್ಥೆಯಲ್ಲಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಾ ಕಾರ್ಯಕ್ರಮವನ್ನು ಇದ್ದ ಚಿಕ್ಕ ಜಾಗದಲ್ಲಿಯೇ ತರಬೇತಿ ಕಾರಣಕ್ಕೆ ಮಧ್ಯಾಹ್ನ ನಡೆಸಲಾಯಿತು. ಪ್ಯಾನಲ್ನಲ್ಲಿ ವಾಹಿನಿಯ ಪ್ರಧಾನ ಸಂಪಾದಕ ಶಶಿಧರ್ ಭಟ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಆ್ಯಂಕರ್ ಚರ್ಚೆಯನ್ನು ಆರಂಭಿಸುತ್ತ ಭಟ್ಟರಿಗೆ ಪ್ರಶ್ನೆಯೊಂದನ್ನು ಕೇಳಿದರು. ತಕ್ಷಣ ಇರುಸು ಮುರುಸುಗೊಂಡ ಅವರು, 'ನೀವು ಕೇಳುವ ಪ್ರಶ್ನೆಯೇ ಇದಲ್ಲ' ಎಂದು ಆಕ್ರೋಶವನ್ನು ಹೊರಹಾಕಿದರು. ನಂತರ ಸುಮಾರು 45 ನಿಮಿಷ ಒಬ್ಬರೇ ಮಾತನಾಡಿದರು. ಸಾರಾಂಶದಲ್ಲಿ ಪ್ರಶ್ನೆ ಕೇಳಿದ ತಮ್ಮ ಸಹೋದ್ಯೋಗಿ ಮೇಲೆಯೇ ರೇಗಿ, ಅವಮಾನಿಸಿ, ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಿ ಎದ್ದು ಹೋಗಿದ್ದರು ಭಟ್ಟರು.

'ಸುದ್ದಿ ಟಿವಿ' ಏನು? ಹೇಗಿರಲಿದೆ? ಎಂಬುದಕ್ಕೆ ಮುನ್ಸೂಚನೆಯೊಂದು ಸಿಕ್ಕಿದ್ದು ಆ ದಿನ. 'ಸುದ್ದಿ ಟಿವಿ' ಎಂದರೆ ಶಶಿಧರ್ ಭಟ್, ಶಶಿಧರ್ ಭಟ್ ಅಂದರೆ 'ಸುದ್ದಿ ಟಿವಿ'. ಭಟ್ಟರು ಆಗಾಗ್ಗೆ ಎಲ್ಲರ ಎದುರಿಗೇ 'ಪಬ್ಲಿಕ್ ಟಿವಿ' ಸಂಪಾದಕ ಎಚ್. ಆರ್. ರಂಗನಾಥ್ ಬಗ್ಗೆ ಅಸಮಾಧಾನವನ್ನು ಹೊರಹಾಕುತ್ತಿರುತ್ತಾರೆ. 'ಯಾವುದನ್ನಾದರೂ ಅತಿಯಾಗಿ ವಿರೋಧಿಸಿದರೆ, ಕೊನೆಗೊಂದು ದಿನ ನಾವು ಅದೇ ಆಗುತ್ತೇವೆ' ಎಂಬ ನೆಲ್ಸನ್ ಮಂಡೇಲಾರ ಮಾತೊಂದಿದೆ. ಭಟ್ಟರು ಕೂಡ ಇವತ್ತು ಹೆಚ್ಚು ಕಡಿಮೆ ಇನ್ನೊಂದು 'ಪಬ್ಲಿಕ್ ಟಿವಿ' ಕಟ್ಟಲು, ರಂಗನಾಥ್ ಮಾದರಿಯಲ್ಲಿ, ಸಂಪಾದಕರ ಚರ್ಚೆಗೇ ವಾಹಿನಿಯನ್ನು ಸೀಮಿತಗೊಳಿಸಲು ಅಣಿಯಾಗಿದ್ದಾರೆ. ಅದಕ್ಕೆ ಮೇಲಿನದ್ದು ಒಂದು ಉದಾಹರಣೆ ಅಷ್ಟೆ. ಅದು ಅವರಿಗೆ ಸಿಕ್ಕಿರುವ ಅವಕಾಶದಲ್ಲಿ ಸೃಷ್ಟಿಸಲು ಹೊರಟ ಅನಿವಾರ್ಯತೆ.

'ಸುದ್ದಿ ಸಂಗಾತಿ'ಯ ತಂಡ:

ಕನ್ನಡದಲ್ಲಿ ಕಳೆದ ಒಂದು ದಶಕಗಳ ಅಂತರದಲ್ಲಿ ಸುದ್ದಿ ವಾಹಿನಿಗಳು ಹುಟ್ಟಿಕೊಳ್ಳುತ್ತಿವೆ. ಪ್ರತಿ ವಾಹಿನಿ ಕಾರ್ಯಾರಂಭ ಮಾಡುವಾಗಲೂ ಹೊಸದೊಂದು ಆಶಯ ಒಡಮೂಡುತ್ತದೆ. 'ಜನಪಂಥ' ಎಂಬ ಮಾತುಗಳು ರಾರಾಜಿಸುತ್ತವೆ. ಜನರ ನೋವಿಗೆ, ಸಂಕಷ್ಟಗಳಿಗೆ ದನಿಯಾಗುತ್ತೀವಿ ಎಂಬ ಘೋಷಣೆಗಳು ಮೊಳಗುತ್ತವೆ. ವಾಸ್ತವದಲ್ಲಿ ಸುದ್ದಿ ವಾಹಿನಿ ಎಂಬುದು ಕನಿಷ್ಟ 15ರಿಂದ 30 ಕೋಟಿ ಬಂಡವಾಳ ಬೇಡುವ ಉದ್ಯಮ. ಇಷ್ಟು ಪ್ರಮಾಣದ ಹಣ ಹಾಕಿದ ಮೇಲೆ ಅದನ್ನು ವಾಪಾಸ್ ತೆಗೆಯುವ ಜರೂರತ್ತುಗಳೂ ಇರುತ್ತವೆ. ಬಂಡವಾಳ- ಹೂಡಿಕೆ- ವ್ಯಹವಾರ- ಲಾಭಗಳ ವಿಷಚಕ್ರದಲ್ಲಿ ಎಂತವರೇ ಮಾಧ್ಯಮ ಮಾಡಿದರೂ, ಜನಪರ ಎಂಬುದು 'ಮೂಗಿನ ಮೇಲಿನ ತುಪ್ಪ'ವಾಗಿರುತ್ತದೆ. ಅದನ್ನು ಮೀರಬೇಕು ಎಂದರೆ, ಇವತ್ತು ವಾಹಿನಿಗಳ ವಿನ್ಯಾಸ ಬದಲಾಗುವುದು ಮಾತ್ರವಲ್ಲ, ಅದರ 'ಬಿಜಿನೆಸ್ ಮಾಡೆಲ್' ಕೂಡ ಬದಲಾವಣೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, 'ಸುದ್ದಿ ಟಿವಿ' ಯಾವ ರೀತಿಯಲ್ಲೂ ಭಿನ್ನವಾಗಿಲ್ಲ. ಆದರೂ, ಒಂದಷ್ಟು ಜನರಿಗೆ ಅದರ ಬಗ್ಗೆ ಆಶಯಗಳು ಹುಟ್ಟಿಕೊಂಡಿವೆ. ಅದಕ್ಕೆ ಕಾರಣ, ಅದನ್ನು ಕಟ್ಟಿದ ತಂಡದಲ್ಲಿರುವ ಹಿರಿಯ ಮುಖಗಳು.

ಒಬ್ಬರು ಶಶಿಧರ್ ಭಟ್, ಇನ್ನೊಬ್ಬರು ಎನ್. ಎಸ್. ಶಂಕರ್. ಕನ್ನಡದ ಎರಡು ಸುದ್ದಿ ವಾಹಿನಿ (ಕಾವೇರಿ, ಸುವರ್ಣ)ಗಳನ್ನು ಕಟ್ಟಿದವರು, ಕೆಲವು ವಾಹಿನಿ (ಸಮಯ, ಕಸ್ತೂರಿ)ಗಳನ್ನು ಮುನ್ನಡೆಸಿದವರು ಶಶಿಧರ್ ಭಟ್ಟರು. ಭ್ರಷ್ಟಾಚಾರ, ಜಾತಿವಾದಗಳಿಂದ ದೂರ ಉಳಿದ ಕಾರಣಕ್ಕೆ ಅವರಿಗೆ ಒಂದು ವಲಯದಲ್ಲಿ ಮನ್ನಣೆ ಸಿಕ್ಕಿತ್ತು. ಶಂಕರ್ ಅವರ ಪಾಲಿಗೆ 24/7 ಸುದ್ದಿ ವಾಹಿನಿ ಎಂಬುದು ಹೊಸ ಅಖಾಡ. ಆದರೆ ಸಾಹಿತ್ಯ, ಸಿನೆಮಾ ಕ್ಷೇತ್ರಗಳಲ್ಲಿ ಒಂದು ಮಟ್ಟಿಗಿನ ಟ್ರ್ಯಾಕ್ ರೆಕಾರ್ಡ್ ಹೊಂದಿದವರು. ಇಬ್ಬರೂ ಹಿಂದೆ, 'ಸುದ್ದಿ ಸಂಗಾತಿ' ಎಂಬ ಪರ್ಯಾಯ ಮಾಧ್ಯಮದ ಪ್ರಯೋಗದಲ್ಲಿ ಜತೆಗಿದ್ದವರು.

ಇದರ ಜತೆಗೆ 'ಸುದ್ದಿ ಟಿವಿ' ಈ ಕಾಲಕ್ಕೆ ಅತಿ ದೊಡ್ಡ ಹೂಡಿಕೆಯನ್ನು ಹಾಗೂ ಹೊರನೋಟಕ್ಕೆ ನವೀನ ಅನ್ನಿಸುವ ಸ್ಟುಡಿಯೋವನ್ನು ಹೊಂದಿದೆ. ಸುಮಾರು ಒಂದೂವರೆ ವರ್ಷಗಳ ಕಾಲ, ನೂರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ 'ಕವರ್'ನಲ್ಲಿಯೇ ಸಂಬಳ ನೀಡಿದ ಹೆಗ್ಗಳಿಕೆ ಈ ವಾಹಿನಿಯದ್ದು. ಈಗಾಗಲೇ ಜ್ಯೋತಿಷ್ಯದಂತಹ ಕಾರ್ಯಕ್ರಮಗಳನ್ನು ಹಾಕುವುದಿಲ್ಲ ಎಂಬ ವಾಹಿನಿಯ ಸಂಪಾದಕೀಯ ನಿಲುವನ್ನು ಪ್ರಕಟಿಸಿದೆ. ಜತೆಗೆ, 'ನಾವು ಸುಳ್ಳು ಹೇಳಲ್ಲ' ಎಂಬ ಘೋಷವಾಕ್ಯವನ್ನೂ ತಗಲಿಸಿಕೊಂಡಿದೆ. ಹೀಗಿರುವಾಗ, ಸಹಜವಾಗಿಯೇ 'ಸುದ್ದಿ ಟಿವಿ' ಕುರಿತು ಒಂದಷ್ಟು ನಿರೀಕ್ಷೆಗಳು ಗರಿಗೆದರಿವೆ. ಆದರೆ, ಅದು ಇವತ್ತು ಆಯ್ದುಕೊಂಡಿರುವ 'ಬಿಜಿನೆಸ್ ಮಾಡೆಲ್' ಎಷ್ಟು ದಿನ ವಾಹಿನಿಯನ್ನು ಜನಪರವಾಗಿ ಇಡಲಿದೆ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿವೆ.

ಎರಡು ವರ್ಷಗಳ ದೊಂಬರಾಟ:

'ಸುದ್ದಿ ಟಿವಿ' ಎಂಬ ಪರಿಕಲ್ಪನೆಯ ಹೃದಯ ಬಡಿತ ಆರಂಭವಾಗಿದ್ದು 2014ರ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ. ಆ ಸಮಯದಲ್ಲಿ ಶಶಿಧರ್ ಭಟ್ 'ಕಸ್ತೂರಿ 24/7' ವಾಹಿನಿಯನ್ನು ಬಿಟ್ಟು ಬಂದು ಹೊಸ ವಾಹಿನಿ ಕಟ್ಟಲು ಬಂಡವಾಳ ಹೂಡುವವರಿಗಾಗಿ ಹುಡುಕಾಟದಲ್ಲಿದ್ದರು. ಆ ಸಮಯದಲ್ಲಿಯೇ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಕನ್ನಡದಲ್ಲಿ ಪಕ್ಷದ ಹಿತಾಸಕ್ತಿಯನ್ನು ಕಾಪಾಡಲು, ನಿಲುವುಗಳನ್ನು ಜನರಿಗೆ ತಿಳಿಸಲು ಒಂದು ವಾಹಿನಿಯ ಅಗತ್ಯತೆ ಕುರಿತು ಚರ್ಚೆ ನಡೆದಿತ್ತು (ಕನ್ನಡದಲ್ಲಿರುವ ಬಹುತೇಕ ವಾಹಿನಿಗಳು ಬಿಜೆಪಿ ಮನಸ್ಥಿತಿಯನ್ನು ಹೊಂದಿವೆ ಎಂಬುದು ಇದಕ್ಕೆ ಕಾರಣ). ಕೊನೆಗೆ, ಶಶಿಧರ್ ಭಟ್ಟರ ಅನುಭವದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಕೆಲವು ಸಚಿವರು ಮತ್ತು ಶಾಸಕರು 'ಸುದ್ದಿ ಟಿವಿ'ಗೆ ಹಣ ಹಾಕಲು ಮುಂದೆ ಬಂದರು ಎಂಬುದು ಆಂತರಿಕ ಮೂಲಗಳು ನೀಡುವ ಮಾಹಿತಿ. 2015ರ ಆರಂಭದಲ್ಲಿ ಆನಂದ ರಾವ್ ವೃತ್ತದ ಬಳಿ, ಕುಮಾರಕೃಪಾ ರಸ್ತೆಯ ಕಟ್ಟಡವೊಂದರಲ್ಲಿ (ಇದು ಬಿಎಸ್ಆರ್ ಕಾಂಗ್ರೆಸ್ ಕಚೇರಿಯಾಗಿತ್ತು) ಭಟ್ಟರು ಕೆಲಸ ಆರಂಭಿಸಿದರು.

ನಾವು ಸುಳ್ ಹೇಳಲ್ಲ: ಸುದ್ದಿ ಟಿವಿ; ಇದು ‘ಕಾಂಗ್ರೆಸ್ ಸಂಗಾತಿ’!

ಅಲ್ಲಿ ಜಾಗದ ಸಮಸ್ಯೆಯಾದ ಹಿನ್ನೆಲೆಯಲ್ಲಿ ಹೊಸ ಕಚೇರಿ ಹುಡುಕಾಟ ಶುರುವಾಯಿತು. ಕೊನೆಗೆ, ಬಂದು ನಿಂತಿದ್ದು ಶಾಂತಿ ನಗರಕ್ಕೆ. ಬಿಎಂಟಿಸಿಯ ವಾಣಿಜ್ಯ ಸಂಕೀರ್ಣದಲ್ಲಿ ನೆಲ ಮಹಡಿಯಲ್ಲಿ ಜಾಗವೊಂದು ಸಿಕ್ಕಿತ್ತು. ಅಲ್ಲಿ 'ಸುದ್ದಿ ಟಿವಿ'ಯ ಸ್ಟುಡಿಯೋ ಕಟ್ಟಲು ತೀರ್ಮಾನಿಸಲಾಯಿತು. ಅದರ ಎದುರಿಗೆ ಇರುವ 'ಖೈಖಾ ಬಿಜೆನೆಸ್ ಪಾರ್ಕ್' ಕಟ್ಟಡದ ಮೊದಲ ಮಹಡಿಯಲ್ಲಿ ತಾತ್ಕಾಲಿಕ ಕಚೇರಿಯನ್ನು ಶುರು ಮಾಡಲಾಯಿತು. ಅದು ನಡೆದಿದ್ದು 2015ರ ಜೂನ್ ತಿಂಗಳಿನ ಕೊನೆಯಲ್ಲಿ. ಅದೇ ವರ್ಷದ ಅಂತ್ಯಕ್ಕೆ ವಾಹಿನಿ ತೆರೆಗೆ ಬರಲಿದೆ ಎಂಬುದು ಭಟ್ಟರ ಆರಂಭದ ಹೇಳಿಕೆಯಾಗಿತ್ತು. ಆದರೆ, ಒಂದೂವರೆ ವರ್ಷಗಳ ಕಾಲ ವಾಹಿನಿ ಕಟ್ಟುವ ಕೆಲಸ ಕುಂಟುತ್ತಾ ಸಾಗಿ ಬಂತು. ಕನ್ನಡಕ್ಕೊಂದು ಅಪರೂಪದ ವಾಹಿನಿ ಕಟ್ಟುವ ಕನಸು ಇಟ್ಟುಕೊಂಡು ಭಟ್ಟರ ಕೆಳಗೆ ಕೆಲಸಕ್ಕೆ ಸೇರಿದ ಒಬ್ಬೊಬ್ಬರೇ ದೂರವಾದರು. ಅದರಲ್ಲಿ ಸತ್ಯಮೂರ್ತಿ ಆನಂದೂರು, ರವೀಂದ್ರ ರೇಷ್ಮೆ ಅಂತಹ ಹಿರಿಯ ಪತ್ರಕರ್ತರೂ ಇದ್ದರು. ಕೊನೆ ಹಂತದಲ್ಲಿ ಭಟ್ಟರ ಗರಡಿಗೆ ಬಂದವರು, ಪತ್ರಿಕೋದ್ಯಮದಿಂದ ದೂರವಾಗಿದ್ದ ಲಕ್ಷಣ್ ಹೂಗಾರ್ ಮತ್ತು ಗೌರೀಶ್ ಅಕ್ಕಿ. ಸದ್ಯ 'ಸುದ್ದಿ ಟಿವಿ'ಯ ನಾಲ್ಕು ಸ್ಥಂಭಗಳು ಇವರು.

ವಾಹಿನಿ ಹಿಂದಿರುವ ಹಿತಾಸಕ್ತಿ:

ಈ ಸುದೀರ್ಘ ಅವಧಿಯಲ್ಲಿ ಭಟ್ಟರ ಮೇಲೆ ಆರೋಪಗಳು ಕೇಳಿ ಬಂದವು. 2016ರ ಮಾರ್ಚ್ ಅಂತ್ಯದಲ್ಲಿ ಪ್ರಾಮಾಣಿಕತೆಯ ಕುರಿತು ಆಗಾಗ್ಗೆ ಮಾತನಾಡುವ ಭಟ್ಟರ ಮುಂದೆ ಸುಮಾರು 17 ಪ್ರಶ್ನೆಗಳನ್ನು ತೇಲಿ ಬಿಡಲಾಯಿತು. ಪ್ರಮುಖ ಪ್ರಶ್ನೆಗಳೆಲ್ಲವೂ ವಾಹಿನಿಯಲ್ಲಿ ಬಂಡವಾಳ ಹೂಡಿದ ಕಾಂಗ್ರೆಸ್ ಪಕ್ಷದವರ ಮೇಲೆಯೇ ಕೇಂದ್ರೀಕೃತವಾಗಿತ್ತು. ಅವುಗಳಿಗೆ ಉತ್ತರಿಸುವುದು 'ನನ್ನ ನೈತಿಕ ಜವಾಬ್ದಾರಿ' ಎಂದು ಆರೋಪಿಸಿಕೊಂಡ ಭಟ್ಟರು ಕೊನೆಗೆ ತೇಲಿಕೆಯ, ಅಡ್ಡ ಗೋಡೆ ಮೇಲೆ ದೀಪ ಇಟ್ಟಂತ ಉತ್ತರಗಳನ್ನು ನೀಡಿ ಕೈತೊಳೆದುಕೊಂಡರು. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವ ಉಸಾಬರಿಗೇ ಹೋಗಲಿಲ್ಲ.

ಇದೆಲ್ಲಾ ಕಳೆಯುವಷ್ಟರಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆಯಿತು. ಡಿವೈಎಸ್ಪಿ ಎಂ. ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡರು. ಇದರಲ್ಲಿ ಪ್ರಮುಖವಾಗಿ ಸಚಿವ

ಹೆಸರು ಕೇಳಿ ಬಂತು. ಆಗ ಅವರ ಬೆನ್ನಿಗೆ ನಿಲ್ಲುವ ಧಾಟಿಯಲ್ಲಿ ಶಶಿಧರ್ ಭಟ್ ತರಹೇವಾರಿ ವಾದ ಹೂಡಿದರು. ಜುಲೈ 9 ಹಾಗೂ 19 ರಂದು ತಮ್ಮ ಬ್ಲಾಗಿನಲ್ಲಿ ಬರೆದ ಭಟ್ಟರ ಬರಹಗಳೇ ಅದಕ್ಕೆ ಸಾಕ್ಷಿ. ಇದರ ನಡುವೆ ಸರಕಾರದ ಒಂದು ಕಾರ್ಯಕ್ರಮದ ನಿರೂಪಣೆಯನ್ನೂ ಮಾಡಿ ಬಂದರು. ತಮ್ಮ ಸುದೀರ್ಘ ಪತ್ರಿಕೋದ್ಯಮದ ಇತಿಹಾಸದಲ್ಲಿ 'ಶುದ್ಧ ಹಸ್ತರು' ಎಂದು ಹೆಸರಾಗಿದ್ದ ಶಶಿಧರ್ ಭಟ್ಟರು ಇಂಥ ಅನಿವಾರ್ಯ ಪರಿಸ್ಥಿತಿಯನ್ನು ಯಾಕೆ ಸೃಷ್ಟಿಸಿಕೊಂಡರು ಎಂಬುದನ್ನು ಅವರನ್ನು ಹತ್ತಿರದಿಂದ ಬಲ್ಲವರಿಗೆ ಅರ್ಥವಾಗಿತ್ತು.

ಹಿನ್ನಲೆ ಹೀಗಿರುವಾಗ, 'ಸುದ್ದಿ ಟಿವಿ' ಯಾವ 'ಪಂಥ'ವನ್ನು ಪ್ರತಿನಿಧಿಸಲಿದೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಅದರ ಮನ್ಸೂಚನೆಗಳು ಅದರ ಪ್ರಾಯೋಗಿಕ ಪ್ರಸಾರದ ವೇಳೆಯಲ್ಲಿಯೇ ಸಿಕ್ಕಿ ಆಗಿದೆ.

ವೃತ್ತಿಪರತೆಯ ಕೊರತೆ:

ನಾವು ಸುಳ್ ಹೇಳಲ್ಲ: ಸುದ್ದಿ ಟಿವಿ; ಇದು ‘ಕಾಂಗ್ರೆಸ್ ಸಂಗಾತಿ’!

30 ಕೋಟಿ ಬಂಡವಾಳ ಹೂಡಿದ ಮೇಲೆ ಹಿತಾಸಕ್ತಿಯನ್ನು ರಕ್ಷಿಸಬಾರದು ಎಂದು ನಿರೀಕ್ಷಿಸುವುದು ಇವತ್ತಿನ ಕಾಲದಲ್ಲಿ ಮೂರ್ಖತನ. ಅದರ ಆಚೆಗೂ 'ಸುದ್ದಿ ಟಿವಿ' ನಿಜಕ್ಕೂ ಸದ್ದು ಮಾಡುತ್ತಾ? ಎಂದರೆ ಅಲ್ಲಿಯೂ ನಿರಾಸೆಯೇ ಕಾಡುತ್ತದೆ. ಮೊದಲನೆಯದಾಗಿ, ಸುಮಾರು ಎರಡು ವರ್ಷಗಳ ಕಾಲ ನೂರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸಂಬಳ ನೀಡಿಕೊಂಡು ಬಂದ ವಾಹಿನಿ, ಇವತ್ತಿಗೂ ಸರಿಯಾದ ಸಿದ್ಧತೆಗಳಿಲ್ಲದೆ ತೆರೆಗೆ ಬರುತ್ತಿದೆ. ಕಾರ್ಯಕ್ರಮಗಳಿಂದ ಶುರುವಾಗಿ, ಸುದ್ದಿಯ ವಿಚಾರದಲ್ಲಿ ವೃತ್ತಿಪರ ಸಿದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ವಾಹಿನಿ ಆ. 9ರಂದು ಉದ್ಘಾಟನೆಯಾಗಲಿದ್ದರೂ, ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಇನ್ನೂ ಹಲವು ದಿನಗಳ ಹಿಡಿಯುತ್ತವೆ ಎಂಬುದು ಮಾಹಿತಿ.

ಅವೆಲ್ಲಕ್ಕಿಂತ ಹೆಚ್ಚಾಗಿ, ಹಲವು ದಿನಗಳಿಂದ ತೆರೆಯಿಂದ ಮರೆಯಾಗಿದ್ದ ಭಟ್ಟರ ಹಪಾಹಪಿಗಳ ವಿಜೃಂಭಣೆ ಅದರ 'ಟೆಸ್ಟ್ ಸಿಗ್ನಲ್' ಸಮಯದಲ್ಲಿಯೇ ಎದ್ದು ಕಾಣುತ್ತಿದೆ. ಕ್ಯಾಮೆರಾ ಮುಂದೆ ಅವರ ವಾಗಾಡಂಬರ ಶುರುವಾಗಿದೆ. 'ಸುದ್ದಿ ಟಿವಿ' ಎಂದರೆ ಶಶಿಧರ್ ಭಟ್; ಅದರಾಚೆಗೆ ಇವತ್ತು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ ಎನ್ನುತ್ತವೆ ಈವರೆಗೆ ಲಭ್ಯ ಇರುವ ಅಂತರಾಳದ ಮಾಹಿತಿ. ಇಷ್ಟೆಲ್ಲದರ ಆಚೆಗೆ, ಭಟ್ಟರು ಎಷ್ಟು ದಿನ 'ಸುದ್ದಿ'ಯಲ್ಲಿ ಉಳಿಯಲಿದ್ದಾರೆ ಎಂಬ ಪ್ರಶ್ನೆಯೊಂದು ವಲಯದಲ್ಲಿದೆ. ಇದಕ್ಕೆ ಕಾರಣ ಅವರ ಪತ್ರಿಕೋದ್ಯಮ ನಡೆದು ಬಂದ ರೀತಿ. ಭಟ್ಟರು ಭಾರಿ ಹೂಡಿಕೆಯ ಮೂಲಕ ವಾಹಿನಿಯನ್ನು ಕಟ್ಟಿ ನಿಲ್ಲಿಸಿದ್ದಾರೆ. ಆದರೆ, ಅದು ನಿಜವಾದ ಅರ್ಥದ ಜನಪರ, ನಿಷ್ಪಕ್ಷಪಾತಿ ವಾಹಿನಿಯಾಗಿ ನಿಲ್ಲುತ್ತದಾ ಎಂಬುದನ್ನು ಕಾಲವೇ ಹೇಳಲಿದೆ. ಜತೆಗೆ, ರೇಟಿಂಗ್ ವಿಚಾರದಲ್ಲಿ ವಾಹಿನಿ ಸೃಷ್ಟಿಸಿಕೊಳ್ಳುವ ಸ್ಥಾನವೂ ಅದು ವ್ಯಕ್ತಪಡಿಸುವ ನಿಲುವುಗಳ ಭವಿಷ್ಯವನ್ನು ನಿರ್ಧರಿಸಲಿದೆ. ಅವೆಲ್ಲವೂ ನಿಚ್ಚಳವಾಗುವುದು ಇಂದಷ್ಟು ಕಾಲ ಸವೆಸಿದ ನಂತರವೇ.