‘ಹಿಂಸೆಗೆ ಪ್ರಚೋದನೆ ಆರೋಪ’: ‘ಕಾಶ್ಮೀರಿ ರೀಡರ್’ ಮುದ್ರಣಕ್ಕೆ ಸ್ಥಳೀಯ ಸರಕಾರದ ಮೂಗುದಾರ!
ಮೀಡಿಯಾ 2.0

‘ಹಿಂಸೆಗೆ ಪ್ರಚೋದನೆ ಆರೋಪ’: ‘ಕಾಶ್ಮೀರಿ ರೀಡರ್’ ಮುದ್ರಣಕ್ಕೆ ಸ್ಥಳೀಯ ಸರಕಾರದ ಮೂಗುದಾರ!

‘ಕಾಶ್ಮೀರ ಸಂಘರ್ಷ’

ಜಾರಿಯಲ್ಲಿರುವಾಗಲೇ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ದಿನ ಪತ್ರಿಕೆ ‘ಕಾಶ್ಮೀರ್ ರೀಡರ್’ ಮುದ್ರಣದ ಮೇಲೆ ಸ್ಥಳೀಯ ಸರಕಾರ ನಿಷೇಧ ಹೇರಿದೆ.

ಬುರ್ಹಾನ್ ವನಿ ಸಾವಿನ ನಂತರ ಕಾಶ್ಮೀರ ಕಣಿವೆಯಲ್ಲಿ ಹುಟ್ಟಿಕೊಂಡ ಹಿಂಸಾಚಾರದ ವೇಳೆ ಜನರ ಧ್ವನಿಯಾಗಿ ‘ಕಾಶ್ಮೀರಿ ರೀಡರ್’ ಗುರುತಿಸಿಕೊಂಡಿತ್ತು. ಈಗ ಅದೇ ಪತ್ರಿಕೆಯನ್ನು ‘ಹಿಂಸೆಗೆ ಪ್ರಚೋದನೆ’ ನೀಡುತ್ತಿದೆ ಎಂಬ ಕಾರಣ ಮುಂದೊಡ್ಡಿ ಮುದ್ರಣವನ್ನು ಸ್ಥಗಿತಗೊಳಿಸಲು ಹೇಳಲಾಗಿದೆ.

ದೇಶದ ಗಮನವೇ ಇವತ್ತು ಕಾಶ್ಮೀರದತ್ತ ಹೊರಳಿರುವ ಈ ಸಂದರ್ಭದಲ್ಲಿ, ಬಿಜೆಪಿ ಬೆಂಬಲಿತ ಮೆಹಬೂಬ ಮುಫ್ತಿ ನೇತೃತ್ವದ ಸರಕಾರದ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ. ಕಾಶ್ಮೀರ ಕಣಿವೆಯ ಉದ್ದಕ್ಕೂ ಸದ್ಯ ಬಿಗುವಿನ ವಾತಾವರಣವಿದೆ. ವಾರಾಂತ್ಯದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪ್ರಮುಖ ಪತ್ರಿಕೆ ‘ಗ್ರೇಟರ್ ಕಾಶ್ಮೀರ್’ ವರದಿ ಮಾಡಿದೆ. ಇದೇ ಹೊತ್ತಿಗೆ ಸೋಮವಾರ ಮುಂಜಾನೆ ಬರಾಮುಲ್ಲಾದ ಮಿಲಿಟರಿ ಕ್ಯಾಂಪ್ ಮೇಲೆ ನಡೆದ ದಾಳಿಗೆ ಓರ್ವ ಜವಾನ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಭಾರತದ ಸೇನೆ ಹೇಳಿಕೊಳ್ಳುತ್ತಿರುವಂತೆ ಪಾಕಿಸ್ತಾನದ ಮೇಲೆ ‘ಸರ್ಜಿಕಲ್ ದಾಳಿ’ ನಡೆಸಿದ ಮೂರು ದಿನಗಳ ತರುವಾಯ ಈ ದಾಳಿ ನಡೆದಿದೆ. ಇದಕ್ಕೆ ಪಾಕಿಸ್ತಾನದ ಕುಮ್ಮಕ್ಕೇ ಕಾರಣ ಅಂತ ಪ್ರತಿಪಾದಿಸಲಾಗುತ್ತಿದೆ.

ಹಿಂಸೆಗೆ ಪ್ರಚೋದನೆ:

“ಸ್ಥಳೀಯ ಪತ್ರಿಕೆಯನ್ನು ‘ಹಿಂಸೆಯನ್ನು ಪ್ರಚೋದಿಸುವ’ ಬರಹಗಳನ್ನು ಮುದ್ರಿಸುತ್ತಿದೆ ಎಂದು ಆರೋಪಿಸಿ ಬ್ಯಾನ್ ಮಾಡಲಾಗಿದೆ,” ಎಂದು 'ಕಾಶ್ಮೀರಿ ರೀಡರ್' ಪತ್ರಿಕೆಯ ಸಂಪಾದಕ ಹಿಲಾಲ್ ಮಿರ್ ‘ಅಲ್ ಜಝೀರಾ’ಗೆ ಮಾಹಿತಿ ನೀಡಿದ್ದಾರೆ.

ಪತ್ರಿಕೆಯ ಮುದ್ರಣ ನಿಲ್ಲಿಸಬೇಕು ಎಂಬ ಶ್ರೀನಗರ ಜಿಲ್ಲಾಧಿಕಾರಿಯವರ ಆದೇಶ ಹಿಡಿದುಕೊಂಡಿದ್ದ, ಪೊಲೀಸ್ ಅಧಿಕಾರಿಗಳ ಒಂದು ಗುಂಪು ಪತ್ರಿಕೆಯ ಮುದ್ರಣ ಘಟಕಕ್ಕೆ ಭಾನುವಾರ ಸಂಜೆ ಪ್ರವೇಶಿಸಿದೆ. “ನಿನ್ನೆ ಸಂಜೆ 5-6 ಪೊಲೀಸರು ನಮ್ಮ ಕಚೇರಿಗೆ ಬಂದು ಪತ್ರಿಕೆಯ ಮುದ್ರಣವನ್ನು ನಿಲ್ಲಿಸುವ ಆದೇಶವನ್ನು ಕೈಗಿತ್ತರು. ಇದೆಲ್ಲ ಯಾಕೆಂದು ನಮಗೆ ಗೊತ್ತಿಲ್ಲ. ಪರಿಸ್ಥಿತಿ (ಸಂಘರ್ಷ) ನಮ್ಮ ಸೃಷ್ಟಿಯೇನೂ ಅಲ್ಲ. ಉಳಿದ ಪತ್ರಿಕೆಗಳ ರೀತಿ ನಾವೂ ಏನು ನಡೆಯುತ್ತದೋ ಅದನ್ನು ವರದಿ ಮಾಡುತ್ತಾ ಬಂದಿದ್ದೇವೆ” ಎಂದು ಸಂಪಾದಕರು ಹೇಳಿದ್ದಾರೆ. “ಈಗ ನಾವು ಸಂಜೆ ಸಂಪಾದಕರು ಮತ್ತು ಪ್ರಕಾಶಕರ ಸಭೆ ನಡೆಸಲಿದ್ದೇವೆ, ಅದರ ಪ್ರಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ನಾವು ಕಾನೂನು ಮೊರೆಯೂ ಹೊಗಬಹುದು. ನಮಗೆ ಇದು ಯಾಕೆ ನಡೆದಿದೆ ಎಂದು ಗೊತ್ತಾಗಬೇಕಾಗಿದೆ,” ಎಂದು ಅಲ್ ಜಝೀರಾಗೆ ಜೊತೆ ಮಾತನಾಡಿದಾಗ ಹಿಲಾಲ್ ಮಿರ್ ಹೇಳಿದ್ದಾರೆ.

ಈ ಕುರಿತು ಸ್ವತಃ ಕಾಶ್ಮೀರ್ ರೀಡರ್ ತನ್ನ ವೆಬ್ಸೈಟಿನಲ್ಲಿ ವರದಿ ಪ್ರಕಟಸಿದ್ದು, ಕೋರ್ಟ್ ಆದೇಶದಲ್ಲಿ, “ಪತ್ರಿಕೆಯು ಹಿಂಸೆಗೆ ಪ್ರಚೋದನೆ ನೀಡುವ, ಶಾಂತಿ ಸುವ್ಯವಸ್ಥೆಗೆ ಭಂಗ ತರುವ ವಿಷಯ ಮತ್ತು ವರದಿಗಳನ್ನು ಪ್ರಕಟಿಸುತ್ತಿತ್ತು,” ಎಂದು ಹೇಳಲಾಗಿದೆ.

“ಹಾಗಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ತಕ್ಷಣ ಎಲ್ಲಾ ಮುದ್ರಣ ಘಟಕಗಳು ಕಾಶ್ಮೀರ್ ರೀಡರ್ ಮುದ್ರಣವನ್ನು ನಿಲ್ಲುಸಬೇಕು,” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜನಪ್ರಿಯ ಪ್ರತ್ಯೇಕತಾವಾದಿ ನಾಯಕ ಬುರ್ಹಾನ್ ವನಿ ಜುಲೈ 7ರಂದು ಸಾವಿಗೀಡಾದ ಬೆನ್ನಿಗೇ ಕಾಶ್ಮೀರದಲ್ಲಿ ಹುಟ್ಟಿಕೊಂಡ ಸಂಘರ್ಷ ಇವತ್ತಿಗೂ ನಿಂತಿಲ್ಲ. ಮುಂದುವರಿದಿರುವ ಸಂಘರ್ಷದಲ್ಲಿ ಈವರಗೆ 83 ಜನ ಸಾವಿಗೀಡಾಗಿದ್ದರೆ 12,000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇವರ ಧ್ವನಿಯಾಗಿ ಈವರಗೆ ‘ಕಾಶ್ಮೀರ್ ರೀಡರ್’ ನಡೆದುಕೊಂಡು ಬಂದಿತ್ತು. ಈ ಎಲ್ಲಾ ಹಿನ್ನಲೆಗಳನ್ನು ಇಟ್ಟುಕೊಂಡು ‘ಕಾಶ್ಮಿರ್ ರೀಡರ್’ ಮಾರುಕಟ್ಟೆಗೆ ಬರದಂತೆ ತಡೆಹಿಡಿಯಲಾಗಿದೆ.

ಮಾಧ್ಯಮ ನಿಯಂತ್ರಣದ ಮುಂದುವರಿದ ಭಾಗ

‘ಹಿಂಸೆಗೆ ಪ್ರಚೋದನೆ ಆರೋಪ’: ‘ಕಾಶ್ಮೀರಿ ರೀಡರ್’ ಮುದ್ರಣಕ್ಕೆ ಸ್ಥಳೀಯ ಸರಕಾರದ ಮೂಗುದಾರ!

ಹಾಗಂಥ ಕಾಶ್ಮೀರದ ಪಾಲಿಗೇನೂ ಇದು ಹೊಸ ಬೆಳವಣಿಗೆಯಲ್ಲ. ಬುರ್ಹಾನ್ ವನಿ ಸಾವಿನ ನಂತರ ಕಾಶ್ಮೀರ ಕಣಿವೆಯಲ್ಲಿ ಸಮೂಹ ಸಂಪರ್ಕ ಮಾಧ್ಯಮಗಳಿಗೆ ನಿಯಂತ್ರಣ ಹೇರಲಾಗಿತ್ತು. ಜುಲೈನಿಂದ ಮೊಬೈಲ್ ಸೇವೆಗಳನ್ನು ಕಡಿತಗೊಳಿಸಲಾಗಿತ್ತು. ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿದ್ದರೆ ಪತ್ರಿಕೆಗಳ ಮೇಲೆ ನಿರಂತರವಾಗಿ ಪೊಲೀಸರು ದಾಳಿ ನಡೆಸಿಕೊಂಡು ಬಂದಿದ್ದಾರೆ. ಕಾಶ್ಮೀರದಲ್ಲಿ ಈ ರೀತಿ ಮಾಧ್ಯಮಗಳನ್ನು ತುಳಿಯುತ್ತಿರುವ ಸರಕಾರದ ಧೋರಣೆ ವಿರುದ್ಧ ಜುಲೈನಲ್ಲಿ ಭಾರತೀಯ ಪತ್ರಕರ್ತರ ಒಕ್ಕೂಟ ನವದೆಹಲಿಯಲ್ಲಿ ಪ್ರತಿಭಟನೆಯನ್ನೂ ನಡೆಸಿತ್ತು.

“ಕಣಿವೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇದೆ ಎಂದು ಹೇಳಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತೆಗೆದುಕೊಳ್ಳುತ್ತಿರುವ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದು ಪ್ರಜಾಫ್ರಭುತ್ವ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ. ಪೊಲೀಸರು ಈ ರೀತಿಯ ಅಸಂವಿಧಾನಿಕ ಮತ್ತು ಕಾನೂನು ವಿರೋಧಿ ಧೋರಣೆಯನ್ನು ತಕ್ಷಣ ನಿಲ್ಲಿಸಬೇಕು; ಮತ್ತು ಮಾಧ್ಯಮಗಳಿಗೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಐಜೆಯು ಒತ್ತಾಯಿಸುತ್ತದೆ,” ಎಂದು ಭಾರತೀಯ ಪತ್ರಕರ್ತರ ಯೂನಿಯನ್ (ಐಜೆಯು) ಹೇಳಿಕೆ ಬಿಡುಗಡೆ ಮಾಡಿದೆ.

ತೀವ್ರ ಖಂಡನೆ

‘ಹಿಂಸೆಗೆ ಪ್ರಚೋದನೆ ಆರೋಪ’: ‘ಕಾಶ್ಮೀರಿ ರೀಡರ್’ ಮುದ್ರಣಕ್ಕೆ ಸ್ಥಳೀಯ ಸರಕಾರದ ಮೂಗುದಾರ!

ಪತ್ರಿಕೆಯೊಂದರ ಮೇಲೆ ಪೊಲೀಸರು ಮುಗಿಬಿದ್ದ ಬೆನ್ನಿಗೆ ಮಾಧ್ಯಮದ ಮೇಲಿನ ಈ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಕುರಿತು ‘ಕಾಶ್ಮೀರ್ ರೀಡರ್’ ತನ್ನದೇ ವೆಬ್ಸೈಟಿನಲ್ಲಿ ಪ್ರಕಟಿಸಿದ ವರದಿಗೆ ಓದುಗರೊಬ್ಬರಿಂದ ಬಂದ ಪ್ರತಿಕ್ರಿಯೆಯೊಂದು ಇಲ್ಲಿದೆ:

“ಇತ್ತೀಚೆಗೆ ದೊಡ್ಡ ಸಂಖ್ಯೆಯ ಕಾಶ್ಮೀರಿಗರು ಬರಹಗಾರರಾಗಿ ಬದಲಾಗಿದ್ದರು. ಅವರೆಲ್ಲಾ ಕಾವ್ಯಾತ್ಮಕವಾಗಿ ರಕ್ತ ಮೆತ್ತಿದ ಸಮಕಾಲೀನ ಕಾಶ್ಮೀರದ ರಾಜಕೀಯದ ಬಗ್ಗೆ ಬರೆಯುತ್ತಿದ್ದರು. ಇವತ್ತು ಮನುಷ್ಯರನ್ನು ಯೋಚನೆಗೀಡು ಮಾಡುತ್ತಿರುವ, ಮಿಲಟರಿಯಿಂದ ತುಂಬಿ ತುಳುಕುತ್ತಿರುವ, ಅತ್ಯಂತ ಪ್ರತಿಕೂಲ ಬದುಕಿನ ಸ್ಥಿತಿಗತಿಗಳನ್ನು ಅಷ್ಟೇ ಸಹಜವಾಗಿ ಅವರೆಲ್ಲಾ ವ್ಯಕ್ತಪಡಿಸುತ್ತಿದ್ದರು. ಶಾಲುಗಳ ಮತ್ತು ಕಾರ್ಪೆಟ್ಗಳ ನೇಯ್ಗೆಯನ್ನು ಶತಮಾನಗಳಿಂದ ಮಾಡಿಕೊಂಡು ಬಂದಿರುವ, ಪ್ರಕೃತಿಯನ್ನು ಪ್ರೀತಿಸುವ ಈ ಜನರು ಮನುಷ್ಯರ ನೋವಿಗೆ ತುಂಬಾ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾರೆ; ಅದು ಅವರ ಹುಟ್ಟುಗುಣ. SEN ನ್ಯೂಸ್, JK ನ್ಯೂಸ್, ವಾದಿ ನ್ಯೂಸ್ ಥರಹದ ಹಲವಾರು ಇತರ ಸುದ್ದಿ ವಾಹಿನಿಗಳನ್ನು ಇಲ್ಲಿನ ಕೇಬಲ್ ಆಪರೇಟರ್ಗಳು ಆರಂಭಿಸಿದಾಗ, ಇಲ್ಲಿನ ಕಡುಗತ್ತಲೆಯಲ್ಲೂ ಬೆಳಕಿನ ಕಿರಣವೊಂದು ಮೂಡಿದಂತಾಗಿತ್ತು; ಹೊಸ ಭರವಸೆ ಹುಟ್ಟಿಕೊಂಡಿತ್ತು. ಪ್ರತಿಭಾನ್ವಿತ ವಾಗ್ಮಿಗಳು ತಮ್ಮ ನಿಖರ ಮತ್ತು ಮೊನಚಾದ ಮಾತುಗಳಿಂದ ರಾಜಕೀಯ ವಿಶ್ಲೇಷಣೆಗಳನ್ನು ಮಾಡಲು ಆರಂಭಿಸಿದಾಗ ಕಣಿವೆ ರಾಜ್ಯದಲ್ಲಿ ಭಾರತದ ಚಾನಲ್ಲುಗಳ ವೀಕ್ಷಕರೆ ಸಂಖ್ಯೆ ತಳಮುಟ್ಟಿತ್ತು. ಆದರೆ ಎಲ್ಲಾ ಚಾನಲ್ಲುಗಳನ್ನು ನಿಧಾನವಾಗಿ ಬ್ಯಾನ್ ಮಾಡಲಾಯಿತು. ಇದೀಗ ಪತ್ರಿಕೆಗಳ ಸರದಿ; ಅದೇ ಹಣಬರಹ ಕಣಿವೆ ರಾಜ್ಯದ ಮುದ್ರಣ ಮಾಧ್ಯಮಕ್ಕೂ ಎದುರಾಗಿದೆ.” - ಸಾಜದ್ ಮಲಿಕ್