ಮಾಧ್ಯಮ, ಭಯೋತ್ಪಾದನೆ ಮತ್ತು ಒಂದು 'ಸಂಚಿನ ಪ್ರಕರಣ'!
ಮೀಡಿಯಾ 2.0

ಮಾಧ್ಯಮ, ಭಯೋತ್ಪಾದನೆ ಮತ್ತು ಒಂದು 'ಸಂಚಿನ ಪ್ರಕರಣ'!

  • ಪಿಎಚ್

ಅದು

2012ರ ಅಕ್ಟೋಬರ್ ತಿಂಗಳು.

ಗಾಂಧಿ ಜಯಂತಿಯನ್ನು ಮುಗಿಸಿ ಇನ್ನೂ ಹತ್ತು ದಿನಗಳು ಕಳೆದಿದ್ದವು ಅಷ್ಟೆ. ನಾನಾಗ ಕನ್ನಡದ ನಂಬರ್ 1 ದೈನಿಕವೊಂದರಲ್ಲಿ ಹಿರಿಯ ವರದಿಗಾರ. ಎಂದಿನಂತೆ ದಿನದ ಸುದ್ದಿಗಳನ್ನು ಅರಸಲು ಹೊರಟವನಿಗೆ ಹೊಸ ಸುದ್ದಿಯೊಂದು ಕಿವಿಗೆ ಬಿದ್ದಿತ್ತು. ಅದು ಇಂಗ್ಲಿಷ್ ದೈನಿಕವೊಂದರಲ್ಲಿ ವರದಿಗಾರನಾಗಿದ್ದ ಯುವಕನೊಬ್ಬ 'ಇಂಡಿಯನ್ ಮುಜಾಹಿದೀನ್' (ಅವತ್ತಿಗೆ 'ಐಸಿಸ್' ಇಷ್ಟು ಫೇಮಸ್ ಆಗಿರಲಿಲ್ಲ) ಸಂಘಟನೆ ಜತೆ ಇದ್ದನಂತೆ; ಆತನನ್ನು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ ಎಂಬ ವಿಚಾರವಾಗಿತ್ತು. ಅವತ್ತಿಗೆ ಪತ್ರಕರ್ತರಲ್ಲಿಯೇ ಒಬ್ಬ, ಮುಸ್ಲಿಂ ಭಯೋತ್ಪಾದಕ ಸಂಘಟನೆ ಜತೆ ಗುರುತಿಸಿಕೊಂಡಿದ್ದ ಎಂಬುದು ಎಂತವರಿಗೂ ಒಂದು ಕ್ಷಣ ಯೋಚಿಸುವಂತೆ ಮಾಡುವ ಸುದ್ದಿಯಾಗಿತ್ತು. ಆದರೆ, ನನ್ನ ಹೊಣೆ ಇದ್ದ 'ಬೀಟ್'ಗೆ ಈ ಸುದ್ದಿ ಸಂಬಂಧಪಡದ ಹಿನ್ನೆಲೆಯಲ್ಲಿ, ಕೇಳಿಸಿಕೊಂಡು ಸುಮ್ಮನಾಗಿದ್ದೆ; ಎಂದಿನಂತೆ ಕಚೇರಿಗೆ ಹೋಗಿ ನನ್ನ ಕೆಲಸ ಮುಗಿಸಿ ಹೊರಡುವವನಿದ್ದೆ.

ಆ ಸಮಯದಲ್ಲಿ ನನ್ನ ಮುಖ್ಯ ವರದಿಗಾರರು ಕರೆದರು. "ನಾಳೆ ಏನೂ ಅಸೈನ್ಮೆಂಟ್ ಹಾಕೋದಿಲ್ಲ, ನಂಗೆ ಆ ಟೆರರ್ ಸ್ಟೋರಿ ಮೇಲೆ ಸ್ಪೆಷಲ್ ಏನಾದ್ರೂ ಬೇಕು,'' ಎಂದರು. ಏನೂ ಮಾತನಾಡದೆ ಮನೆಗೆ ಬಂದು ಮಲಗಿಕೊಂಡೆ. ಬೆಳಗ್ಗೆ ಎದ್ದವನೇ, ಪತ್ರಕರ್ತನ ಸಹಿತ ಇನ್ನೂ ಐದು ಜನ ಮುಸ್ಲಿಂ ಯುವಕರನ್ನು ಬಂಧಿಸಿದ್ದ ಏರಿಯಾಗೆ ಹೋದೆ. ಆ ಮನೆಯ ಸುತ್ತ ಅಷ್ಟೊತ್ತಿಗಾಗಲೇ ಪೊಲೀಸರ ಕಾವಲು ಆರಂಭವಾಗಿತ್ತು. ಬಂದು ಹೋಗುವವರನ್ನು ವಿಚಾರಿಸಿಕೊಳ್ಳುತ್ತಿದ್ದರು. ಅವರ ಕಣ್ಣು ತಪ್ಪಿಸಿ, ನಾನು ಆ ಮನೆಯ ಮೊದಲ ಮಹಡಿಯಲ್ಲಿದ್ದ ರೂಮಿನ ಸುತ್ತ ಓಡಾಡಿಕೊಂಡು, ಸ್ಥಳೀಯರನ್ನು ಮಾತಾಡಿಸಿಕೊಂಡು ಬಂದೆ. 'ಯಾಕೋ ಏನೋ ಮಿಸ್ ಹೊಡೆಯುತ್ತಿದೆ' ಎಂದು ಅನ್ನಿಸಿತ್ತು(ವರದಿಗಾರರ ಕರ್ಮ ಇದು).

ಮಾರನೇ ದಿನಕ್ಕೆ ತಳಮಟ್ಟದ ಚಿತ್ರಣಗಳನ್ನು ಇಟ್ಟುಕೊಂಡು ಒಂದು ಕಾಪಿ (ವರದಿ) ಬರೆದು ಸುಮ್ಮನಾದೆ. ಬೆಳಗ್ಗೆ ನೋಡಿದರೆ, ಇಂಗ್ಲಿಷ್ ದೈನಿಕಗಳು ಸೇರಿದಂತೆ ಹಲವು ಕನ್ನಡ ಪತ್ರಿಕೆಗಳು, 'ಕರ್ನಾಟಕದ ಟೆರರ್ ಪ್ಲಾಟ್; ಅದರ ಹಿಂದಿರುವ ಮಾಸ್ಟರ್ ಮೈಂಡ್' ಅಂತೆಲ್ಲಾ ಸುದ್ದಿ ಬರೆದು ಬಿಟ್ಟಿದ್ದವು. ಅದನ್ನು ನೋಡುತ್ತಿದ್ದಂತೆ ನನಗೆ ಎರಡು ವಿಚಾರ ಮನಸ್ಸಿನಲ್ಲಿ ಬಂದು ಹೋಯಿತು. ಒಂದು, "ನೀನ್ಯಾಕೆ ಇದನ್ನು ಬರೆಯಲಿಲ್ಲ,'' ಎಂಬ ಮುಖ್ಯವರದಿಗಾರರ ಬೈಗುಳ, ಮತ್ತೊಂದು, 'ಎಂಥ ಸಾವು ಇದು' ಎಂದು ಸ್ವಗತ. ಖುಷಿಯ ಸಂಗತಿ ಏನೆಂದರೆ ಸಂಜೆ ನಂಗೆ ಯಾರೂ ಬೈಯಲಿಲ್ಲ. ಬದಲಿಗೆ ಎಲ್ಲವೂ ಎಂದಿನಂತೆ ನಡೆದು ಹೋಯಿತು. ಅದಾದ ಒಂದು ವಾರ, ಹದಿನೈದು ದಿನ ಮನಬಂದಂತೆ ಮಾಧ್ಯಮಗಳಲ್ಲಿ ಸ್ಟೋರಿಗಳು ಬಂದವು. 'ಅಸಾಸಿನ್ ಪ್ಲಾಟ್' ಅಂತ ಲಂಗು ಲಾಗುಮುಗಳಿಲ್ಲದೆ ಕಿಡಿಗೇಡಿಗಳ ರೀತಿಯಲ್ಲಿ, ಎನ್ಐಎ ವಕ್ತಾರರಂತೆ ತಲೆ ಬುಡವಿಲ್ಲದ, ಒಂದೇ ಒಂದು ಅಧಿಕೃತ ಹೇಳಿಕೆಗಳಿಲ್ಲದ ವರದಿಗಳನ್ನು ಗೀಚಿದರು. ಕೊನೆಗೆ, ಅವರ ಕೈ ಸೋತ ನಂತರ ಬರೆಯುವುದನ್ನು ಬಿಟ್ಟರು.

ಹೀಗೆ, ಒಂದು ಘಟನೆಯ ಸುತ್ತು ಸರಣಿಯೋಪಾದಿಯಲ್ಲಿ ಘಟನೆಗಳು ನಡೆದು ನಿಧಾನವಾಗಿ ಕಡಿಮೆಯಾಗತೊಡಗಿದವು. ಸುಮಾರು ಒಂದೂವರೆ ತಿಂಗಳು ಉರುಳಿತ್ತು. ಒಂದು ದಿನ ಮುಖ್ಯ ವರದಿಗಾರರು ಕರೆದು, "ಆ ಟೆರರ್ ಸ್ಟೋರಿ ಬಗ್ಗೆ ಏನಾದ್ರೂ ಅಪ್ ಡೇಡ್ ಇದ್ಯಾ ಚೆಕ್ ಮಾಡು. ಒಂದು ಡೀಟೆಲ್ ಆಗಿರೋ ಸ್ಟೋರಿ ಬೇಕು; ಎಡಿಟರ್ ಹೇಳಿದ್ದಾರೆ,'' ಎಂದರು. ನನಗೆ ಅದಕ್ಕಿಂತ ಖುಷಿಯ ವಿಚಾರ ಬೇರೆ ಇರಲಿಲ್ಲ. ಯಾಕೆಂದರೆ, ನಮ್ಮದೇ ಸಮುದಾಯ ಒಬ್ಬನನ್ನು ಭಯೋತ್ಪಾದಕ ಎಂದು ನಾವು ಯಾವ ವಿಚಾರಣೆ ಇಲ್ಲದೆ ಕರೆದು ಆಗಿತ್ತು. ಅದರ ತಳಮಟ್ಟದ ವರದಿಗಳ 'ಲೀಡ್'ಗಳು ನನ್ನ ಕೈಲಿದ್ದರೂ ಸುಮ್ಮನೆ ಕುಳಿತಿದ್ದೆ. ಇದೀಗ ಸಮಯ ಬಂದಿದೆ. ತಡ ಮಾಡದೆ 'ಫೀಲ್ಡ್ ವರ್ಕ್' ಶುರುಮಾಡಿದೆ.

ಮೊದಲು ಭೇಟಿ ನೀಡಿದ್ದು ಪ್ರಕರಣವನ್ನು ದಾಖಲಿಸಿದ್ದ ಸಿಸಿಬಿ ಕಚೇರಿಗೆ. ಅಲ್ಲಿ ಪ್ರಕರಣದ ತನಿಖಾಧಿಕಾರಿಯನ್ನು ಭೇಟಿ ಮಾಡಿದೆ. ಅವರು ಹೆಚ್ಚು ಕಡಿಮೆ 'ರಾಷ್ಟ್ರೀಯ ಸ್ವಯಂ ಸೇವಕ ಸಂಘ'ದ ವಕ್ತಾರರಂತೆ ಮಾತನಾಡಿದರು. ನಂತರ ಆರೋಪಿಗಳ ಮನೆಯವರನ್ನು ಮಾತನಾಡಿಸಿದೆ. ಅವರಿಗೆ ಕಾನೂನು ನೆರವು ನೀಡುತ್ತಿದ್ದ 'ಮುಸ್ಲಿಂ ಮಾನವ ಹಕ್ಕು ಸಂಘಟನೆ'ಯವರನ್ನು ಭೇಟಿ ಮಾಡಿದೆ. ಅಷ್ಟೊತ್ತಿಗೆ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕಲೆ ಹಾಕಿಕೊಂಡಿದ್ದೆ. ಮಾರನೇ ದಿನದ ಸಂಜೆ ಹೊತ್ತಿಗೆ ವಿವರವಾದ ವರದಿಯೊಂದನ್ನು ಬರೆದೆ; ಅದು ಮುಂದಿನ ಸರಣಿ ವರದಿಗಳಿಗೆ ಮುನ್ನಡಿ ಬರೆಯಿತು. ಹಾಗೆ ಶುರುವಾಯಿತು, 'ಶಂಕಿತ ಉಗ್ರರ ಸಂಚಿನ ಪ್ರಕರಣ'ಗಳ ವರದಿಗಳ ಮಾಲೆ.

ಅದಾದ ಒಂದು ತಿಂಗಳ ಅಂತರದಲ್ಲಿ ಆರೋಪ ಹೊತ್ತಿದ್ದ ವರದಿಗಾರ, ಒಬ್ಬ ಎಂಜಿನಿಯರ್ ಸೇರಿದಂತೆ ಮೂವರನ್ನು ಸಾಕ್ಷಿಗಳ ಕೊರತೆ ಕಾರಣಕ್ಕೆ ಎನ್ಐಎ ಪ್ರಕರಣದಿಂದ ಖುಲಾಸೆ ಮಾಡಿತು. ಆತ ಬೇರೆ ಯಾವ ಮಾಧ್ಯಮಗಳಿಗೂ ಮಾತನಾಡುವ ಮುಂಚೆ, ನಮಗೆ ಮಾತನಾಡಿದ. ಜೈಲಿನ ಪರಿಸ್ಥಿತಿಗಳನ್ನು, ಪ್ರಕರಣದಲ್ಲಿ ತಾನು ಸಿಲುಕಿದ ಬಗೆಯನ್ನು ವಿವರಿಸಿದ. ರಾಷ್ಟ್ರೀಯ ತನಿಖಾ ದಳ ತನ್ನ ಮೊದಲ ಹಂತದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಪ್ರಕರಣದಲ್ಲಿ ಒಟ್ಟು 10 ಜನ ತಲೆಮರೆಸಿಕೊಂಡಿದ್ದಾರೆ ಎಂದು ನಮೋದಿಸಿತ್ತು. ನ್ಯಾಯಂಗ ಬಂಧನದಲ್ಲಿದ್ದ 13 ಜನರೂ, ಹಿಂದೂ ಸಂಘಟನೆಗಳ ಪ್ರಮುಖರು, ಬಿಜೆಪಿ ಮುಖಂಡರು ಹಾಗೂ ಬಲಪಂಥೀಯ ವಿಚಾರಗಳಿಂದ ಗುರುತಿಸಿಕೊಂಡಿದ್ದ ಪತ್ರಕರ್ತರ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಹೇಳಿತು. ಅದರ ನಂತರ ಪ್ರಕರಣ ನಿಧಾನವಾಗಿ ಮುಖ್ಯವಾಹಿನಿಯಿಂದ ತೆರೆಮರೆಗೆ ಸರಿಯಿತು. ನಾನೂ ಕೂಡ ಒಂದು ಸಂಸ್ಥೆಯಿಂದ ಮತ್ತೊಂದು ಮಾಧ್ಯಮ ಸಂಸ್ಥೆಗೆ ಜಂಪ್ ಹೊಡೆಯುವ ದುಸ್ಸಾಹಸದಲ್ಲಿ ಇಡೀ ಪ್ರಕರಣವನ್ನು ಮರೆತು ಬಿಟ್ಟೆ.

ಇದೆಲ್ಲಾ ನಡೆದು ಇವತ್ತಿಗೆ ಹೆಚ್ಚು ಕಡಿಮೆ ನಾಲ್ಕು ವರ್ಷ. ಮೊನ್ನೆ, ಸೆ. 1 ರಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಎಲ್ಲಾ 13 ಆರೋಪಿಗಳು 'ಪ್ಲೀಡ್ ಗಿಲ್ಟಿ' ಎಂದು ಸುದ್ದಿ ಬಂತು. ನಾಲ್ಕು ವರ್ಷಗಳಲ್ಲಿ ಎನ್ಐಎ ಹೆಸರಿಸಿದ್ದ 350 ಸಾಕ್ಷಿಗಳಲ್ಲಿ ಕೇವಲ 23 ಜನ ಮಾತ್ರವೇ ನ್ಯಾಯಾಲಯ ಕಟಕಟೆಗೆ ಬಂದು ಸಾಕ್ಷಿ ನುಡಿದಿದ್ದರು. ನ್ಯಾಯಾಂಗ ವ್ಯವಸ್ಥೆಯ ನಿಧಾನಗತಿ ಇಲ್ಲಿಯೂ ಕಾಣಿಸಿಕೊಂಡಿತ್ತು. 'ಕಾಯುತ್ತಾ ಕುಳಿತರೆ ಕೇಸು ಮುಗಿಯುವುದಿಲ್ಲ, ನನ್ನನ್ನು ತಪ್ಪಿಸ್ಥರು ಅಂದುಕೊಂಡು ಶಿಕ್ಷೆ ಕೊಟ್ಟು ಬಿಡಲಿ' ಎಂದು ಆರೋಪಿಗಳು ತಮ್ಮ ವಕೀಲರ ಬಳಿ, ಮನೆಯವರ ಬಳಿ ಹೇಳಿಕೊಂಡರು. ಕೊನೆಗೆ ಅದನ್ನೇ ನ್ಯಾಯಾಧೀಶರ ಮುಂದೆಯೂ ವಿವರಿಸಿದರು. ನ್ಯಾಯಾಲಯದಲ್ಲಿ 'ತಾವು ತಪ್ಪಿ ಮಾಡಿದ್ದೇವೆ; ಶಿಕ್ಷೆ ವಿಧಿಸಿ' ಎಂದು ವಿನಂತಿಸಿಕೊಂಡರು.

ಇವತ್ತು ಪ್ರಕರಣದ ತೀರ್ಪು ಹೊರಬೀಳಲಿದೆ. ಯಾರಿಗೆ ಎಷ್ಟು ಶಿಕ್ಷೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಶಿಕ್ಷೆ ಎಂಬುದು ಈ ಪ್ರಕರಣದಲ್ಲಿ ತಾರ್ಕಿಕ ಅಂತ್ಯ ಅಲ್ಲ ಎಂಬುದು ಈಗ ನಡೆಯುತ್ತಿರುವ ಘಟನೆಗಳಿಂದಲೇ ಅನ್ನಿಸುತ್ತಿದೆ. ಒಬ್ಬ ವರದಿಗಾರನಾಗಿ ನನಗೆ ಇದೊಂದು ಅಪರೂಪದ ಪ್ರಕರಣ. ಇಡೀ ದೇಶದಲ್ಲಿ ಮುಸ್ಲಿಂ ಯುವಕರ ಮೇಲೆ ಭಯೋತ್ಪಾದನೆ ಆರೋಪಗಳನ್ನು ಹೊರಿಸಿಕೊಂಡು ಬರುತ್ತಿರುವ ವ್ಯವಸ್ಥೆಯ ಕುರಿತು ಚರ್ಚೆಯನ್ನು ಹುಟ್ಟು ಹಾಕಿದ್ದು ಇದೇ ಪ್ರಕರಣ. ಜತೆಗೆ, ಮಾಧ್ಯಮಗಳು ಭಯೋತ್ಪಾದನಾ ಪ್ರಕರಣಗಳಲ್ಲಿ ವರದಿ ಮಾಡುವ ಬಗೆಗೆ 'ಸತ್ಯ ಶೋಧನೆ'ಯೊಂದು ಇದೇ ಪ್ರಕರಣದಿಂದಾಗಿ ನಡೆಯುವಂತಾಗಿತ್ತು. ಇವತ್ತು, ವಿಚಾರಣೆ ಮಧ್ಯದಲ್ಲಿಯೇ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಮೂಲಕ, ನ್ಯಾಯಾಂಗದ ನಿಧಾನಗತಿಯ ಬಗ್ಗೆ ಆಲೋಚನೆಯೊಂದನ್ನು ಹುಟ್ಟು ಹಾಕುವಂತೆಯೂ ಪ್ರೇರಣೆ ನೀಡಿದ್ದಾರೆ.

ನಾಲ್ಕು ವರ್ಷಗಳ ಅಂತರದಲ್ಲಿ ಏನೆಲ್ಲಾ ನಡೆಯಿತು; ಕಾವೇರಿಯ ನೀರೂ ಹರಿದು ಹೋಯಿತು. ಇವತ್ತು ಪ್ರಕರಣದಲ್ಲಿಈವರೆಗಿನ ದಾಖಲೆಗಳನ್ನು ಹರಡಿಕೊಂಡು ಕುಳಿತರೆ ಯಾಕೋ ಇದೊಂದು ಬೆಳವಣಿಗೆ ಕಸಿವಿಸಿ ಅನ್ನಿಸುತ್ತಿದೆ. ಹಳೆಯ ಗಾಯವೊಂದು ಗುಣವಾಗುವ ಬದಲು; ಭವಿಷ್ಯದಲ್ಲಿ ವೃಣವಾಗುವ; ಗ್ಯಾಂಗ್ರಿನ್ ಆಗಿರುವ ಸಾಧ್ಯತೆಯೊಂದು ಕಣ್ಣೆದುರಿಗೆ ಬರುತ್ತಿದೆ.

ಸತ್ಯ ಮೇವ ಜಯತೇ...