ಯುವ ಪತ್ರಕರ್ತೆಯ 'ಮಾತ್ರೆ ಸೇವನೆ' ಮತ್ತು 'ಈ ಟಿವಿ' ನ್ಯೂಸ್ ಸುತ್ತ ನಡೆದ ಬೆಳವಣಿಗೆಗಳು!
ಮೀಡಿಯಾ 2.0

ಯುವ ಪತ್ರಕರ್ತೆಯ 'ಮಾತ್ರೆ ಸೇವನೆ' ಮತ್ತು 'ಈ ಟಿವಿ' ನ್ಯೂಸ್ ಸುತ್ತ ನಡೆದ ಬೆಳವಣಿಗೆಗಳು!

ದೇಶದ

ಅತಿದೊಡ್ಡ ಉದ್ಯಮಿಯ ಒಡೆತನಕ್ಕೆ ಇತ್ತೀಚೆಗೆ ಒಳಗಾಗಿರುವ ‘ಈಟಿವಿ ನ್ಯೂಸ್ ಕನ್ನಡ’ (ಪ್ರದೇಶ್ 18) ವಾಹಿನಿಯ ಪತ್ರಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಗುರುವಾರ ಮಾಧ್ಯಮ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಯಿತು.

ಅದರಲ್ಲೂ ಕಳೆದ ಕೆಲವು ದಿನಗಳಿಂದ ಅಧಿಕಾರಿಗಳ ಆತ್ಮಹತ್ಯೆ ಕುರಿತಾದ ನಿರಂತರ ಸುದ್ದಿಗಳನ್ನು ನೀಡುತ್ತಿದ್ದ ಸುದ್ದಿ ಮಾಧ್ಯಮಗಳ ವಲಯದೊಳಗೇ ನಡೆದ ಈ ಬೆಳವಣಿಗೆ ಸಹಜ ಕುತೂಹಲಕ್ಕೆ, ಆತುರದಲ್ಲಿ ಹುಟ್ಟಿಕೊಳ್ಳುವ ಊಹಾಪೋಹಗಳಿಗೆ ಕಾರಣವಾಯಿತು. ಇದರ ಜತೆಗೆ, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾದ ಪತ್ರಕರ್ತೆಯ ಫೊಟೋ, ಅರ್ಧಂಬರ್ಧ  ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಇದರ ಹಿನ್ನೆಲೆ ಹುಡುಕಿಕೊಂಡು ಹೊರಟ

'ಸಮಾಚಾರ'

ಕ್ಕೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಸಿಕ್ಕ ವಿಚಾರಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಈ ಕುರಿತು ಈಗಾಗಲೇ ವರದಿ ಪ್ರಕಟಿಸಿದ ವೆಬ್ ತಾಣವೊಂದರ ಮೇಲೆ 'ಈ ಟಿವಿ' ನ್ಯೂಸ್ ಕಡೆಯಿಂದ ಮಾನನಷ್ಟ ಮೊಕದ್ದಮೆ ದಾಖಲಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸಂದರ್ಭದಲ್ಲಿ ನಡೆದ ಘಟನೆಗಳ ನಿರೂಪಣೆ ಇಲ್ಲಿದೆ.

ಇಂದಿನ ಸ್ಥಿತಿಯ ಪ್ರತಿಫಲ:

ಹಾಗೆ ನೋಡಿದರೆ ಇದು ಇವತ್ತಿನ ಎಲ್ಲಾ ಕಾರ್ಪೊರೇಟ್ ವಲಯದಲ್ಲಿರುವ ಕಂಪನಿಗಳ ಅಂತರಾಳದ ಕತೆಯಂತೆ ಕಾಣಿಸುತ್ತಿದೆ. ಅಪಾರ ಕನಸುಗಳನ್ನು, ಅದಕ್ಕೆ ತಕ್ಕನಾದ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ದುಡಿಮೆಗೆ, ಕಾಲಿಡುವ ಯುವ ಮನಸ್ಸುಗಳು ಅನುಭವಿಸುತ್ತಿರುವ ಯಾತನೆಯ ಮತ್ತೊಂದು ಮುಖವೂ ಇಲ್ಲಿ ಅನಾವರಣಗೊಳ್ಳುತ್ತದೆ.

ಆಕೆ ಕರಾವಳಿ ಮೂಲದ ಸಾಮಾನ್ಯ ಕುಟುಂಬದ ಯುವತಿ. ಎರಡು ವರ್ಷಗಳ ಹಿಂದೆ ಕನ್ನಡ ಮಾಧ್ಯಮ ಲೋಕಕ್ಕೆ ಕಾಲಿಟ್ಟಿವರು. "ಕಚೇರಿಯಲ್ಲಿ ನೋಡಿದರೆ ಎಲ್ಲರಂತೆಯೇ ಕೆಲಸ ಮಾಡುತ್ತಿದ್ದರು. ಕೆಲಸದಲ್ಲಿ ಶ್ರದ್ಧೆಯೂ ಕಾಣಿಸುತ್ತಿತ್ತು,'' ಎನ್ನುತ್ತಾರೆ ಈಕೆಯ ಜತೆ 'ಈ ಟಿವಿ'ನ್ಯೂಸ್ ಡೆಸ್ಕಿನಲ್ಲಿ ಕೆಲಸ ಮಾಡುವವರು. ಹೀಗಿರುವಾಗಲೇ ಆಕೆಗೆ ಮಂಗಳವಾರ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಹೈದ್ರಾಬಾದಿನಲ್ಲಿರುವ ಮಾನವ ಸಂಪನ್ಮೂಲ ವಿಭಾಗದವರಿಂದ ಕರೆ ಬಂದಿದೆ. 'ನಿಮಗೆ ಎರಡು ತಿಂಗಳ ಸಂಬಳವನ್ನು ಮುಂಗಡವಾಗಿ ನೀಡುತ್ತೇವೆ. ನೀವು ಬೇರೆ ಕೆಲಸ ನೋಡಿಕೊಳ್ಳಿ,' ಎಂಬುದು ಕರೆಯ ಸಾರಾಂಶ ಎಂದು ಆಕೆಯ ಸ್ನೇಹಿತೆಯರು 'ಸಮಾಚಾರ'ಕ್ಕೆ ತಿಳಿಸಿದ್ದಾರೆ.

ಹಾಗೆ, "ಇತ್ತೀಚೆಗೆ ಒಟ್ಟು 17 ಜನರಿಗೆ ಸಂಸ್ಥೆಯಿಂದ ಹೊರಕ್ಕೆ ಹಾಕುವ ನಿರ್ಧಾರ ಆಗಿದೆ. ನಮ್ಮಲ್ಲಿ ಕೆಲಸದಿಂದ ತೆಗೆಯುವ ಮುಂಚೆ ಮೂರು ನೋಟಿಸ್ ನೀಡುವ ಪರಿಪಾಠ ಇದೆ. ಆದರೆ ಈ ಪ್ರಕರಣದಲ್ಲಿ ಅದು ಪಾಲನೆಯಾದಂತೆ ಕಾಣಿಸುತ್ತಿಲ್ಲ,'' ಎನ್ನುತ್ತಾರೆ 'ಈ ಟಿವಿ' ನ್ಯೂಸ್ ಮೂಲಗಳು.

ಆತ್ಮಹತ್ಯೆ ಯತ್ನಾನಾ? 

ಕರೆ ಬರುತ್ತಿದ್ದಂತೆ ಯುವ ಪತ್ರಕರ್ತೆ ಸಂಸ್ಥೆಯ ಬೆಂಗಳೂರು ಕಚೇರಿಯ ಎಚ್ಆರ್ ವಿಭಾಗವನ್ನು ಸಂಪರ್ಕಿಸಿದಾಗ, "ಮಾಹಿತಿ ಇಲ್ಲ," ಎಂಬ ಉತ್ತರ ಬಂದಿದೆ. ಕೊನೆಗೆ ಸಂಪಾದಕರಾದ ರಂಗನಾಥ್ ಭಾರಧ್ವಜ್ ಅವರನ್ನು ಸಂಪರ್ಕಿಸಿದ್ದಾರೆ. ಆಗ ಅವರೂ "ಮಾಹಿತಿಯಿಲ್ಲ; ವಿಚಾರಿಸಿ ತಿಳಿಸುತ್ತೇನೆ ಎಂದಿದ್ದಾರೆ,". ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಆಕೆ ಜ್ವರದಿಂದಲೂ ನಲುಗುತ್ತಿದ್ದಳು.

ಈ ಸಮಯದಲ್ಲಿ ಜ್ವರಕ್ಕೆ ನೀಡಿದ್ದ ಮಾತ್ರಗಳನ್ನೇ ಹೆಚ್ಚಾಗಿ ತೆಗೆದುಕೊಂಡಿದ್ದಾಳೆ ಎಂಬುದು ಸದ್ಯಕ್ಕೆ ಸಿಗುತ್ತಿರುವ ಮಾಹಿತಿ. ಅದು ಆತ್ಮಹತ್ಯೆ ಪ್ರಯತ್ನನಾ? ಅಥವಾ ಆ ಕ್ಷಣದ ಮಾನಸಿಕ ಒತ್ತಡಗಳ ಹಿನ್ನೆಲೆಯಲ್ಲಿ ತೆಗೆದುಕೊಂಡ ನಿರ್ಧಾರನಾ? ಈ ಕುರಿತು ಊಹಾಪೋಹಗಳು ಹುಟ್ಟಿಕೊಂಡವು. ಆದರೆ ಅದಕ್ಕಿಂತಲೂ ಮುಖ್ಯವಾಗಿರುವುದು ಇವತ್ತು ಮಾಧ್ಯಮ ಸಂಸ್ಥೆಗಳು ವಿಶೇಷವಾಗಿ ನ್ಯೂಸ್ ಮೀಡಿಯಾ ಬೇಡುತ್ತಿರುವ ಕಾರ್ಯಕ್ಷಮತೆ ಹಾಗೂ ಒತ್ತಡಗಳನ್ನು ತಡೆದುಕೊಳ್ಳುವ ಅನಿವಾರ್ಯತೆಯ ವಿಚಾರ.

"ಹಾಗೆ ನೋಡದರೆ ಕನ್ನಡದ ಎಲ್ಲಾ ನ್ಯೂಸ್ ಚಾನಲ್ಗಳ ಪೈಕಿ ಅತ್ಯಂತ ಕಡಿಮೆ ಮಾನವ ಸಂಪನ್ಮೂಲ ಮತ್ತು ಕಡಿಮೆ ಗುಣಮಟ್ಟದ ತಂತ್ರಜ್ಞಾನ ಬಳಸುತ್ತಿರುವುದು 'ಈ ಟಿವಿ' ನ್ಯೂಸ್. ಇಲ್ಲಿ ಕೆಲಸ ಮಾಡುವವರು ಪ್ರತಿಯೊಬ್ಬರೂ ಒತ್ತಡದಲ್ಲಿಯೇ ದಿನ ನೂಕುತ್ತಿದ್ದಾರೆ. ನ್ಯೂಸ್ ಚಾನಲ್ ಬೇಡುವ ವೇಗಕ್ಕೆ ಹೊಂದದವರನ್ನು ಕೆಲಸದಿಂದ ತೆಗೆಯಲು ಪ್ರತಿ ವರ್ಷದ ಕೊನೆಯಲ್ಲಿ ಹಿರಿಯರಿಂದ ನೀಡುವ ಅಪ್ರೈಸಲ್ ಮಾನದಂಡವಾಗುತ್ತಿದೆ,'' ಎಂದು ಸಂಸ್ಥೆ ಒಳಗಿನ ಕೆಲಸದ ಒತ್ತಡಗಳ ವಿಚಾರವನ್ನು ಬಿಚ್ಚಿಡುತ್ತಾರೆ ಸಂಸ್ಥೆಯ ಇನ್ನೊಬ್ಬ ಉದ್ಯೋಗಿ.

ಸಂಸ್ಥೆಯಿಂದ ಕೆಲಸ ಬಿಡಿ ಎಂಬ ಕರೆ ಬರುತ್ತಿದ್ದಂತೆ, "ಖಿನ್ನತೆಗೆ ಒಳಗಾದ ಆಕೆಗೆ ನಾವೆಲ್ಲಾ ಧೈರ್ಯ ಹೇಳಿದೆವು. ಆಕೆ ನಾನೇನೂ ಮಾಡಿಕೊಳ್ಳುವುದಿಲ್ಲ, ನೀವು ಮಲಗಿ ಎಂದಳು. ಆಕೆಗೆ ಹೇಗೆ ಆಫೀಸಿನಲ್ಲಿ ಮುಖ ತೋರಿಸಲಿ ಎಂಬ ಚಿಂತೆ ಕಾಡುತ್ತಿತ್ತು. ಬೆಳಿಗ್ಗೆ ನೋಡಿದಾಗ ಆಕೆ ಎದ್ದಿರಲಿಲ್ಲ. ನಂತರ ಮಧ್ಯಾಹ್ನದ ವೇಳೆಗೆ ಆಕೆಗೆ ತೀವ್ರ ಹಟ್ಟೆ ನೋವು ಕಾಣಿಸಿಕೊಂಡಾಗ ಆಕೆ ತಾನು ಏನು ಮಾಡಿದೆ ಎಂಬುದನ್ನು ತಮ್ಮ ಬಳಿ ಹೇಳಿದಳು ಎನ್ನುತ್ತಾರೆ,” ಹೆಸರು ಹೇಳಲಿಚ್ಚಿಸದ ಪತ್ರಕರ್ತೆಯ ಸ್ನೇಹಿತೆ.

ಜ್ವರದ ಒಟ್ಟು 7 ಮಾತ್ರಗಳನ್ನು ಆಕೆ ಒಟ್ಟಿಗೆ ತೆಗೆದುಕೊಂಡಿದ್ದಾಳೆ ಎಂಬುದು ಅವರ ನೀಡುವ ಮಾಹಿತಿ.

ಆಸ್ಪತ್ರೆಯಲ್ಲಿ ಏನಾಯಿತು?

ಕೊನೆಗೆ ಅದೇ ದಿನ ಆಕೆಯನ್ನು ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಆಸ್ಪತ್ರೆಗೆ ಸಂಜೆ 4 ಗಂಟೆಗೆ ಸೇರಿಸಲಾಯಿತು. "ಬೆಂಗಳೂರಿನ ವಿಳಾಸ ನೀಡಿ ಒಬ್ಬರು ಯುವತಿ ದಾಖಲಾಗಿದ್ದಾರೆ,'' ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಒಂದು ದಿನ ತೀವ್ರ ನಿಗಾ ಘಟಕದಲ್ಲಿದ್ದು, ಗುರುವಾರ ಸಂಜೆ 6:30ರ ವೇಳೆಗೆ ಆಕೆಯನ್ನು ಡಿಸ್ಚಾರ್ಚ್ ಮಾಡಿ ಕರೆದುಕೊಂಡು ಹೋಗಲಾಗಿದೆ. ಸದ್ಯ ಆಕೆ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ‘ಸಮಾಚಾರ’ಕ್ಕೆ ಸಿಕ್ಕಿದೆ.

ಇಷ್ಟಕ್ಕೂ ನಿಜವಾಗಿಯೂ 'ಈ ಟಿವಿ' ನ್ಯೂಸ್ ಒಳಗೆ ನಡೆದಿದ್ದು ಏನು? “ಇತ್ತೀಚೆಗೆ ಚಾನಲಿನಿಂದ ಹೆಚ್ಚಿನವರು ಹೊರಗೆ ಹೋಗುತ್ತಿದ್ದಾರೆ. ನನ್ನ ಗೆಳೆಯರೇ ಹಲವರು ಕೆಲಸ ಬಿಟ್ಟು ಹೋಗಿದ್ದಾರೆ. ಕೆಲವರು ಒತ್ತಡದಿಂದ ಹೋಗಿದ್ದಾರೆ. ಇನ್ನು ಕೆಲವರನ್ನು ಕಳುಹಿಸಲಾಗಿದೆ,” ಎನ್ನುವುದು ಡೆಸ್ಕ್ನಲ್ಲಿ ಕೆಲಸ ಮಾಡುವ ಪತ್ರಕರ್ತರೊಬ್ಬರ ಮಾತು.

ಸಂಸ್ಥೆಯೊಳಗೆ: 

ಈ ಘಟನೆ ಹಿಂದೆಯೂ ಅಂತಹದ್ದೇ ಕಾರಣಗಳಿವೆ. ಕೆಲವು ದಿನಗಳ ಹಿಂದೆ ‘ಪರ್ಫಾರ್ಮೆನ್ಸ್’ ಇಲ್ಲದವರ ಪಟ್ಟಿ ನೀಡುವಂತೆ ಮೇಲಿನಿಂದ ಸೂಚನೆ ಬಂದಿತ್ತು. ಅದನ್ನು ಪಾಲಿಸುವ ಸಲುವಾಗಿ 17 ಜನರ ಪಟ್ಟಿಯನ್ನು ಬ್ಯೂರೋ ಮುಖ್ಯಸ್ಥರು, ಸಂಪಾದಕರು, ಎಚ್ಆರ್ ಮೂಲಕ ಮೇಲಿನ ಕಚೇರಿಗೆ ಕಳುಹಿಸಲಾಗಿತ್ತು. ಅದರಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ಹೆಸರೂ ಇತ್ತು ಎಂದು 'ಈ ಟಿವಿ'ಯ ಉನ್ನತ ಮೂಲಗಳು ದೃಢಪಡಿಸಿವೆ.

ಗುರುವಾರ ಮಧ್ಯಾಹ್ನದ ನಂತರ “ಆಸ್ಪತ್ರೆಗೆ ಎಚ್ಆರ್ ಬಂದಿದ್ದರು. ನಾವೇನೂ ಕೆಲಸದಿಂದ ತೆಗೆದು ಹಾಕಿಲ್ಲವಲ್ಲ. ಕಂಪ್ಲೆಂಟ್ ಯಾಕೆ ಕೊಡುತ್ತಿಯಾ ಕೇಳಿದರು. ಪೊಲೀಸರೂ ಯಾಕಮ್ಮಾ ಇದೆಲ್ಲಾ ಬೇಕು? ಹೆಣ್ಣು ಮಗಳು.. ಸರಿ ಮಾಡಿಕೊಳ್ಳಿ,'' ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ ಎನ್ನುತ್ತಾರೆ ಪತ್ರಕರ್ತೆಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು.

ನಿಯಮದಂತೆ ಪೊಲೀಸರು ಡಿಸ್ಚಾರ್ಚ್ ಮಾಡುವ ಮೊದಲು ಆಕೆಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಹೇಳಿಕೆಯಲ್ಲಿ 'ಕಚೇರಿಯಲ್ಲಿ ನನ್ನನ್ನು ಎಲ್ಲ ಸೇರಿ 'ಟಾರ್ಗೆಟ್' ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಆಕೆ ಮಾತನಾಡಿದ್ದಾಳೆ. ಅಲ್ಲಿ ರಂಗನಾಥ್ ಭಾರದ್ವಜ್ ಮತ್ತು ಎಚ್ಆರ್ ದಿವ್ಯಾ ಹೆಸರನ್ನೂ ಆಕೆ ಉಲ್ಲೇಖಿಸಿದ್ದಾರೆ,' ಎಂದು ಪೊಲೀಸ್ ಮೂಲ 'ಸಮಾಚಾರ'ಕ್ಕೆ ಮಾಹಿತಿ ನೀಡಿದ್ದಾರೆ. ಸದ್ಯ ದೂರಷ್ಟೇ ದಾಖಲಾಗಿದೆ; ಪ್ರಕರಣವನ್ನು ಇನ್ನೂ ದಾಖಲಿಸಬೇಕಷ್ಟೆ.

ಹೆಚ್ಚಿವರಿ ಮಾಹಿತಿ:

ಇದರ ನಡುವೆಯೇ 'ಈ ಟಿವಿ' ನ್ಯೂಸ್ ರಾಜ್ಯ ಸರಕಾರದ ಕಡೆಯಿಂದ ನಾಲ್ಕು ಕೋಟಿ ರೂಪಾಯಿಗಳ ಜಾಹೀರಾತು ಪ್ಯಾಕೇಜ್ ಒಂದನ್ನು ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಇದರ ಹಿಂದಿರುವುದು ಸಂಸ್ಥೆಯ ಪ್ರಧಾನ ಸಂಪಾದಕ ರಂಗನಾಥ್ ಭಾರದ್ವಾಜ್ ಅವರ ಖಾಸ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ, ಪಾರ್ಲಿಮೆಂಟಿ ಸೆಕ್ರೆಟರಿ ಎಂಬ ಸ್ಥಾನವನ್ನೂ ಪಡೆದುಕೊಂಡಿರುವ ಗೋವಿಂದಯ್ಯ ಎಂಬುದು ಸರಕಾರದ ಮೂಲಗಳು ನೀಡುತ್ತಿರುವ ಮಾಹಿತಿ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಹೊರಬರಬೇಕಿದೆ. ಸುದ್ದಿಗಳಿಗೆ ಸಂಪಾದಕರಾಗಿರುವ ರಂಗನಾಥ್ ಅವರಿಗೆ ಸಂಸ್ಥೆಯ ಆರ್ಥಿಕ ವಿಚಾರಗಳು ಎಷ್ಟರ ಮಟ್ಟಿಗೆ ಮುಖ್ಯ ಎನ್ನಿಸಿವೆ ಎಂಬುದು ತಿಳಿಯಬೇಕಿದೆ. ಈ ಕುರಿತು ಕರೆ ಮಾಡಿದರೆ ಅವರ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ.

ಅಂದಹಾಗೆ, ಮಾಧ್ಯಮ ಸಂಸ್ಥೆಗಳ ಜಾಡನ್ನು ಅರಿಸುವುದು; ಸಿಕ್ಕ ಕಡೆಗೆಲ್ಲಾ ಸುದ್ದಿ ಆಯುವ ಪತ್ರಕರ್ತರಿಗೂ ಕಷ್ಟವೇ. ಹೀಗಿರುವಾಗ ವಾಟ್ಸಾಪ್ ಮೂಲಕ ಹರಡಲು ಆರಂಭವಾಗಿದ್ದ ಸುದ್ದಿಯನ್ನೇ ಸತ್ಯ ಎಂಬಂತೆ ಬರೆಯಲು ಹೊರಟ ವೆಬ್ ತಾಣವೊಂದು ಮಾನನಷ್ಟ ಮೊಕದ್ದಮೆಯ ಬೆದರಿಕೆಯನ್ನು ಎದುರಿಸುವಂತಾಗಿ ಬಂದಿದೆ.

ಇವೆಲ್ಲವುಗಳ ಆಚೆಗೆ, ಯುವ ಪತ್ರಕರ್ತೆ ಬೇಗ ಗುಣಮುಖರಾಗಲಿ; ಮತ್ತೆ ವೃತ್ತಿ ಬದುಕಿಗೆ ವಾಪಾಸಾಗಲಿ ಎಂದಷ್ಟೆಈ ಸಮಯದಲ್ಲಿ ಹಾರೈಸಬೇಕಿದೆ.