samachara
www.samachara.com
ಸಾಂದರ್ಬಿಕ ಚಿತ್ರ
ಮೀಡಿಯಾ 2.0

‘ಕ್ರೈಂ ಸ್ಟೋರಿ’ಯಲ್ಲಿ ರಕ್ತಪಾತ ನೋಡಿಯೇ ಮಲಗುತ್ತಿದ್ದ ವೀಕ್ಷಕರೆಲ್ಲಾ ಎಲ್ಲಿ ಮಾಯವಾದರು?

ಕೆಲವು ವರ್ಷಗಳ ಹಿಂದಿನ ನಮ್ಮಲ್ಲಿ ಕತ್ತಲಾಗುತ್ತಿದ್ದಂತೆ ಮನೆ ಮನೆಗಳ ಟಿವಿ ಪರದೆಗಳ ಮೇಲೆ ರಕ್ತ ಚಿಮ್ಮುತ್ತಿತ್ತು. ಗಡುಸಾದ ಗಂಡು ದನಿಗಳು ಯಾರನ್ನು ಹೇಗೆ ಎಲ್ಲಿ ಕೊಚ್ಚಿದರು ಎಂದು ಕಾವ್ಯಾತ್ಮಕವಾಗಿ ವಿವರಿಸುತ್ತಿದ್ದವು. ಅದರ ಹಿನ್ನೆಲೆಯಲ್ಲಿ ಮೂಡಿ ಬರುತ್ತಿದ್ದ ಸಂಗೀತ ಕಿವಿಯ ತಮಟೆಗಳನ್ನು ಅಪ್ಪಳಿಸಿ, ರಕ್ತ ಬಿಸಿಯಾಗುವಂತೆ ಮಾಡುತ್ತಿತ್ತು.

'ಇನ್ನಾದರೂ ಪೊಲೀಸರು ಬಳೆ ಕಳಚಿಟ್ಟು ಗಂಡಸರಾಗಲಿ' ಎಂಬ ಅಭಿರುಚಿಗಳಿಂದ ಕೂಡಿರುವ, ಅನೂಹ್ಯವಾದ ಸಂದೇಶವನ್ನು ಸಾರುವ ಬರವಣಿಗೆ ಅಡುಗೆ ಮನೆಯಿಂದ ಹಿಡಿದು, ಕಚೇರಿಯ ಟೇಬಲ್ಲುಗಳವರೆಗೆ ಚರ್ಚೆಯ ವಸ್ತುವಾಗಿರುತ್ತಿತ್ತು.

ಸೀನ್ ಕಟ್ ಮಾಡಿ ಒಂದೈದು ವರ್ಷ ಮುಂದಕ್ಕೆ ಬಂದರೆ, ಇವತ್ತು ಮನೋರಂಜನೆ ಹಾಗೂ ಸುದ್ದಿ ವಾಹಿನಿಗಳಲ್ಲಿ ರಾತ್ರಿ ವೇಳೆ ಅಪರಾಧ ಲೋಕದ ಕತೆಗಳು ಅದೇ ಶೈಲಿಯಲ್ಲಿ, ಒಂಚೂರು ಆಚೀಚೆ ಆಗದಂತೆ ಮೂಡಿ ಬರುತ್ತಿವೆ. ಆದರೆ ನೋಡುವವರು, ಅವುಗಳ ಕುರಿತು ಚರ್ಚಿಸುವ ವರ್ಗ ಮಾತ್ರ ಕಾಣೆಯಾಗಿದೆ.

ಹೀಗಂತ ನಾವು ಹೇಳುತ್ತಿಲ್ಲ. ಕಳೆದ ಐದಾರು ತಿಂಗಳುಗಳ ವಾರದ ಟಿವಿ ವೀಕ್ಷಕರ ರಿಪೋರ್ಟ್ (ಬಾರ್ಕ್ ಮತ್ತು ಟ್ಯಾಮ್) ಹೇಳುತ್ತಿದೆ. ರಾತ್ರಿ 10 ರಿಂದ 10. 30ರ ಟಿವಿ ಸ್ಲಾಟ್ ನೋಡುವವರು ಸಂಖ್ಯೆ ನಿಧಾನವಾಗಿ ಕ್ಲೀಣಿಸುತ್ತಿದೆ ಎನ್ನುತ್ತಿವೆ ಈ ವರದಿಗಳು.

ಅದೊಂದು ಕಾಲವಿತ್ತು:

ಕ್ರೈಂ ಕಾರ್ಯಕ್ರಮಗಳಿಗೆ ಇವತ್ತಿಗೂ ಅನ್ವರ್ಥನಾಮದಂತಿರುವ ಬಾಲಕೃಷ್ಣ ಕಾಕತ್ಕರ್ ಅವರ 'ಕ್ರೈಮ್ ಸ್ಟೋರಿ' ಕನ್ನಡ ಟಿವಿ ಇತಿಹಾಸದಲ್ಲಿ ಮೊದಲ ಕ್ರೈಂ ಕಾರ್ಯಕ್ರಮವೇನಲ್ಲ. ಅದಕ್ಕೂ ಮೊದಲ ಈ ಕುರಿತು ಒಂದಷ್ಟು ಪ್ರಯೋಗಗಳು ನಡೆದಿದ್ದವಾದರೂ, ಕಾಲಕ್ಕಿಂತ ಮುಂದಿದ್ದ ಅವು ಜನರ ಗಮನ ಸೆಳೆದಿರಲಿಲ್ಲ.

ಆದರೆ, 2003ರ ಸುಮಾರಿಗೆ 'ಈ ಟಿವಿ' ಮನೋರಂಜನಾ ವಾಹಿನಿ ಅರ್ಧಗಂಟೆಯ ಕ್ರೈಂ ಕಾರ್ಯಕ್ರಮವನ್ನು ಜನರ ಊಟ ಮಾಡಿ ಮಲಗುವ ವೇಳೆಯಲ್ಲಿ ಶುರುಮಾಡಿತು. ಅದನ್ನು ನಡೆಸಿಕೊಡುತ್ತಿದ್ದವರು ಬಾಲಕೃಷ್ಣ ಕಾಕತ್ಕರ್. ಅವರಿಗೂ, ಚಾನಲ್ ಆಡಳಿತ ಮಂಡಳಿಗೂ ಆರಂಭದಲ್ಲಿಯೇ ಕಿತ್ತಾಟವಾಗಿ, ಕಾಕತ್ಕರ್ ತಮ್ಮ ತಂಡವನ್ನು ಕರೆದುಕೊಂಡು ಉದಯ ಟಿವಿಯಲ್ಲಿ 'ಕ್ರೈಂ ಸ್ಟೋರಿ'ಯನ್ನು ಶುರು ಮಾಡಿದರು.

ಕೊನೆಗೆ, ಈ ಟಿವಿ ವಾಹಿನಿಯು ಪತ್ರಕರ್ತ ರವಿ ಬೆಳೆಗೆರೆ ಅವರಿಗೆ ಆ ಸ್ಲಾಟ್ ಕೊಟ್ಟಿತು."ಅವತ್ತಿನ ಪರಿಸ್ಥಿತಿ ಹೇಗಿತ್ತು ಎಂದರೆ ಎಲ್ಲೇ ಇದ್ದರೂ ಜನ ರಾತ್ರಿಯಾಗುತ್ತಿದ್ದಂತೆ ಉದಯ ಟಿವಿ ಮುಂದೆ ಬಂದು ಕುಳಿತುಕೊಳ್ಳುತ್ತಿದ್ದರು. ನಾವು ಹೆಸರಿಗಷ್ಟೆ ಕ್ರೈಂ ಸ್ಟೋರಿ ಆಗಿದ್ದೆವು. ಬೆಂಗಳೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದ್ದನ್ನು ಸ್ಟೋರಿ ಮಾಡಿದ್ದೆವು. ಏನೇ ಕೊಟ್ಟರೂ ಜನ ನೋಡುತ್ತಿದ್ದರು,'' ಎಂದು ನೆನಪು ಮಾಡಿಕೊಳ್ಳುತ್ತಾರೆ ಅಂದು ಕಾಕತ್ಕರ್ ಜತೆಗಿದ್ದ ರಾ. ಪ್ರವೀಣ್.

"ಇವತ್ತು ಅಂತೆವೆಲ್ಲಾ ಸ್ಟೋರಿಗಳು ಓಡಲ್ಲ. ಏನಿದ್ದರೂ ಕೊಲೆ, ಅನೈತಿಕ ಸಂಬಂಧದ ಸ್ಟೋರಿಗಳಷ್ಟೆ ಜನ ನೋಡುತ್ತಿದ್ದಾರೆ. ಮೊದಲಿನ ಹಾಗೆ ಇವತ್ತು ಒಂದು ಚಾನಲ್ ಇಲ್ಲ. ಕಾಂಪಿಟೇಶನ್ ಜಾಸ್ತಿ ಇದೆ. ವೀಕ್ಷಕರು ಹಂಚಿ ಹೋಗುತ್ತಾರೆ. ರಾತ್ರಿ ಯಾವುದು ಸ್ಟೋರಿ ತೆಗೆದುಕೊಳ್ಳಬೇಕು ಎಂಬುದೇ ಒಂದು ಚಾಲೆಂಜ್,'' ಎನ್ನುತ್ತಾರೆ ಸುದ್ದಿ ವಾಹಿನಿಯ ಕ್ರೈಂ ಕಾರ್ಯಕ್ರಮದ ನಿರ್ಮಾಪಕರೊಬ್ಬರು.

ಬದಲಾಗದ ಶೈಲಿ:

ಇವತ್ತಿಗೆ ಕನ್ನಡದ ಸುದ್ದಿವಾಹಿನಿಗಳಲ್ಲಿ ರಾತ್ರಿ ವೇಳೆ ಬರುತ್ತಿರುವ ಕ್ರೈಂ ಕಾರ್ಯಕ್ರಮಗಳು ಸುಮಾರು 13 ವರ್ಷಗಳ ನಂತರವೂ ಬರವಣಿಗೆಯಲ್ಲಿ, ಹಿನ್ನೆಲೆ ಧ್ವನಿ ಹಾಗೂ ನಿರೂಪಣೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಂಡಿಲ್ಲ.

ಇದಕ್ಕೆ ಹೋಲಿಸಿದರೆ ಅಂತರಾಷ್ಟ್ರೀಯ ವಾಹಿನಿಗಳಾದ ಸಿಎನ್ಬಿಸಿ, ಸ್ಕೈ ನ್ಯೂಸ್ ವಿಶೇಷವಾಗಿ ಫಾಕ್ಸ್ ನ್ಯೂಸ್ ವಿಜೃಂಬಣೆಯ ಕ್ರೈಂ ಕಾರ್ಯಕ್ರಮಗಳಿಗೆ ಹೊಸ ಸ್ಪರ್ಶಗಳನ್ನು ನೀಡಿವೆ. ಅವುಗಳ ನಿರೂಪಣಾ ಶೈಲಿ ಬದಲಾಗಿದೆ. ಅದಕ್ಕಿಂತ ಹೆಚ್ಚಾಗಿ ಕೊಲೆ, ದರೋಡೆ, ಅನೈತಿಕ ಸಂಬಂಧದ ಕತೆಗಳ ಜಾಗಗಳಲ್ಲಿ ಫೊರೆನ್ಸಿಕ್ ಸೈನ್ಸ್, ಜೈಲು ಮತ್ತಿತರ ಅಪರಾಧ ಲೋಕಗಳ ಅನ್ ಟಚ್ಡ್ ವಿಷಯಗಳನ್ನು ನಿರೂಪಿಸಲು ಶುರುಮಾಡಿವೆ.

ಹೀಗಾಗಿ, ಪೈಪೋಟಿಯ ನಡುವೆಯೂ ಅವು ವೀಕ್ಷಕರನ್ನು ಸೆಳೆದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಇದರ ಜತೆಗೆ, ನಮ್ಮಲ್ಲಿ ಅಪರಾಧ ಸುದ್ದಿಗಳು ಬೆಲೆ ಕಳೆದುಕೊಳ್ಳಲು ಸುದ್ದಿ ಆಯ್ಕೆಯ ಸಮಸ್ಯೆಯೂ ಒಂದು ಕಾರಣ ಎನ್ನಿಸುತ್ತದೆ. ಪ್ರತಿ ಗಂಟೆಗೊಮ್ಮೆ ಪ್ರಸಾರವಾಗುವ ವಾರ್ತಾ ಸಂಚಿಕೆಗಳಲ್ಲಿ ಅಪರಾಧ ಸುದ್ದಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ.

ಸಾಲದು ಎಂಬಂತೆ, ಪ್ರಾದೇಶಿಕ ಸುದ್ದಿ ಸಂಚಿಕೆಗಳಲ್ಲಿ ಹಾಗೂ ಬೆಂಗಳೂರಿಗ ಸೀಮಿತವಾಗಿರುವ ವಾರ್ತಾ ಸಂಚಿಕೆಗಳಲ್ಲಿಯೂ ಅಪರಾಧ ಸುದ್ದಿಗಳಿಗೆ ಮೊದಲ ಸ್ಥಾನ ನೀಡಲಾಗುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೂ ಅಪರಾಧ ಸುದ್ದಿಗಳನ್ನು ಹೊತ್ತು ತರುವ ವಾರ್ತೆಗಳ ಭರಾಟೆಯಲ್ಲಿ ಅರ್ಧ ಗಂಟೆ ಕ್ರೈಂ ಪ್ರೋಗ್ರಾಂ ನೋಡುವ ಅಗತ್ಯ ವೀಕ್ಷರಿಗೆ ಬೀಳದೆ ಹೋಗಿರುವ ಸಾಧ್ಯತೆಯೂ ಇದೆ.

ಒಟ್ಟಾರೆ, ಕಳೆದ ಒಂದು ದಶಕದಲ್ಲಿ ಬದಲಾಗದ ಕ್ರೈಂ ಕಾರ್ಯಕ್ರಮಗಳ ನಿರೂಪಣಾ ಶೈಲಿಯಿಂದಾಗಿ ಅರ್ಧ ಗಂಟೆಯ ಅಪರಾಧಗಳ ಧಾರಾವಾಹಿಗಳು ಬೆಲೆ ಕಳೆದುಕೊಳ್ಳುತ್ತಿವೆ. ನಿಧಾನವಾಗಿ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ.

ಇವತ್ತು ಒಟ್ಟಾರೆ ಸುದ್ದಿ ವಾಹಿನಿಗಳ ರೇಟಿಂಗ್ ಬೀಳುತ್ತಿರುವುದರ ಹಿಂದೆ ಇರುವ ಹಲವು ಕಾರಣಗಳಲ್ಲಿ ಇದೂ ಕೂಡ ಒಂದು.ಇದು ಕ್ರೈಂ ಕಾರ್ಯಕ್ರಮಗಳ ಶವಪರೀಕ್ಷೆ; ಕ್ರೈಂ ವರದಿಗಾರಿಕೆ ಬಗೆಗಿನದ್ದಲ್ಲ. ಅದರದ್ದೊಂದು ಪ್ರತ್ಯೇಕ ಕತೆ.