ವಿಶ್ವೇಶ್ವರ ಭಟ್ಟರ 'ಸುದ್ದಿ ಮನೆ'ಯಿಂದ ಹೊರಬಿದ್ದ ಭಡ್ತಿ:  ಆಟದ ನಡುವೆಯೇ ಮತ್ತೊಂದು ವಿಕೆಟ್ ಔಟ್!
ಮೀಡಿಯಾ 2.0

ವಿಶ್ವೇಶ್ವರ ಭಟ್ಟರ 'ಸುದ್ದಿ ಮನೆ'ಯಿಂದ ಹೊರಬಿದ್ದ ಭಡ್ತಿ: ಆಟದ ನಡುವೆಯೇ ಮತ್ತೊಂದು ವಿಕೆಟ್ ಔಟ್!

ವಿಶ್ವೇಶ್ವರ

ಭಟ್ಟರ 'ಸುದ್ದಿ ಮನೆ'ಯಿಂದ ನಿರೀಕ್ಷಿತ ಸುದ್ದಿಯೊಂದು ಹೊರಬಿದ್ದಿದೆ.

ಭಟ್ಟರ ಒಡನಾಡಿ, ಅವರ ಹೊಸ ಪತ್ರಿಕೆ 'ವಿಶ್ವವಾಣಿ'ಯ ಕಾರ್ಯ ನಿರ್ವಾಹಕ ಸಂಪಾದಕ ರಾಧಾಕೃಷ್ಣ ಭಡ್ತಿ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ವಿಶ್ವೇಶ್ವರ ಭಟ್ಟರ ನಿಕಟ ವಲಯದಲ್ಲಿ ಗುರುತಿಸಿಕೊಂಡವರಲ್ಲಿ ರಾಧಾಕೃಷ್ಣ ಭಡ್ತಿ ಕೂಡಾ ಒಬ್ಬರು. ಕೆಲವು ಪುಸ್ತಕಗಳನ್ನೂ ಬರೆದಿರುವ ರಾಧಾಕೃಷ್ಣ ಭಡ್ತಿ ಒಂದು ಕಾಲದಲ್ಲಿ 'ವಿಜಯ ಕರ್ನಾಟಕ'ದಲ್ಲಿ ಹೆಸರು ಮಾಡಿದವರು. 'ವಿಜಯ ಕರ್ನಾಟಕ'ದಿಂದ ವಿಶ್ವೇಶ್ವರ ಭಟ್ ಆಂಡ್ ಟೀಮ್ ಹೊರ ಬಿದ್ದಾಗ ಅದರಲ್ಲಿ ಭಡ್ತಿ ಕೂಡಾ ಇದ್ದರು. ಅಲ್ಲಿಂದ ವಿಶ್ವೇಶ್ವರ ಭಟ್ಟರ ಗುಂಪಿನ ಸದಸ್ಯರು 'ಕನ್ನಡ ಪ್ರಭ' ಸೇರಿಕೊಂಡಾಗ ಇವರೂ ಜೊತೆಯಾದರು. ಅಲ್ಲಿ 'ಮೇಘ ಮೇದಿನಿ' ಎನ್ನುವ ಅಂಕಣವನ್ನೂ ಬರೆಯುತ್ತಿದ್ದರು. ಮತ್ತೆ ವಿಶ್ವೇಶ್ವರ ಭಟ್ 'ಕನ್ನಡ ಪ್ರಭ' ತೊರೆದು ಹೊಸ ಪತ್ರಿಕೆ ಆರಂಭಿಸಲು ಹೊರಟಾಗ ಭಟ್ಟರ ನಡೆಯನ್ನು ಹಿಂಬಾಲಿಸಿದ ಕೆಲವೇ ಜನರ ಪೈಕಿ ಭಡ್ತಿ ಕೂಡ ಒಬ್ಬರು.

'ವಿಶ್ವವಾಣಿ'ಗೆ ರೂಪು ನೀಡುವಲ್ಲಿ ಭಡ್ತಿ ಅವರ ಡೆಸ್ಕ್ ಪತ್ರಿಕೋದ್ಯಮದ ಕೌಶಲ್ಯಗಳು ಕೊಡುಗೆ ನೀಡಿವೆ ಎನ್ನುತ್ತಾರೆ ಹತ್ತಿರದಿಂದ ಬಲ್ಲವರು. ಅಲ್ಲಿ 'ಸುಪ್ತ ಸಾಗರ' ಎನ್ನವ ಹೆಸರಿನಲ್ಲಿ ಅಂಕಣ ಬರೆಯಲು ಶುರು ಮಾಡಿದ್ದವರು ರಾಧಾಕೃಷ್ಣ ಭಡ್ತಿ. ಆದರೆ ಪತ್ರಿಕೆ ನಿರೀಕ್ಷಿತ ಮಟ್ಟದಲ್ಲಿ ಮೇಲೇಳಲೇ ಇಲ್ಲ. ಮಧ್ಯದಲ್ಲಿ ಪತ್ರಿಕೆಯ ಮಾಲೀಕ ನಂಜುಂಡಿ 'ವಿಶ್ವವಾಣಿ' ಬಿಡುತ್ತಾರಂತೆ ಎಂಬ

ಹಬ್ಬಿತ್ತು. ಈ ಎಲ್ಲಾ ಬೆಳವಣಿಗೆಗಳ ಮುಂದುವರಿದ ಭಾಗ ಎನ್ನುವಂತೆ ರಾಧಾಕೃಷ್ಣ ಭಡ್ತಿ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.

"ಇಲ್ಲಿ (ವಿಶ್ವವಾಣಿ) ನನ್ನ ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಮುಂದೆ ಅವರು ಎಲ್ಲಿಗೆ ಹೋಗಲಿದ್ದಾರೆ ಎಂಬುದನ್ನು ಹೇಳಲಿಲ್ಲ,'' ಎಂದು ಅವರ ಆಪ್ತ ವಲಯದ ಪತ್ರಕರ್ತರೊಬ್ಬರು 'ಸಮಾಚಾರ'ಕ್ಕೆ ತಿಳಿಸಿದರು. "ಎರಡು ತಿಂಗಳ ಹಿಂದೆಯೇ ತಮ್ಮ ಆಪ್ತ ವಲಯದಲ್ಲಿ ಭಡ್ತಿ ಕೆಲಸದ ಬಗ್ಗೆ ಅಸಮಾಧಾನಗಳನ್ನು ಹಂಚಿಕೊಂಡಿದ್ದರು,'' ಎಂಬುದು ಮತ್ತೊಬ್ಬ ಹಿರಿಯ ಪತ್ರಕರ್ತರೊಬ್ಬರು ನೀಡುವ ಮಾಹಿತಿ.

ಸಂಪಾದಕೀಯ ವಿಭಾಗದಲ್ಲಿ ಎಲ್ಲರ ಜೊತೆಗೂ ಬೆರೆಯುತ್ತಾ ಉತ್ತಮ ಒಡನಾಟವನ್ನು ಭಡ್ತಿ ಇಟ್ಟುಕೊಂಡಿದ್ದರಂತೆ. ಇನ್ನು ಕಳೆದ 15-20 ವರ್ಷಗಳಿಂದ ವಿಶ್ವೇಶ್ವರ ಭಟ್ಟರ ಜೊತೆಯಲ್ಲಿದ್ದವರು ಹೀಗಾಗಿ ಅವರ ಜೊತೆಗೂ ಯಾವುದೇ ಬಿನ್ನಾಭಿಪ್ರಾಯಗಳಿರಲಿಲ್ಲ ಎಂದು ವಿಶ್ವವಾಣಿಯ ಮೂಲಗಳು ಹೇಳುತ್ತಿವೆ. ಕೇವಲ ಮ್ಯಾನೇಜ್ಮೆಂಟ್ ಜೊತೆಗಿನ ಕಾದಾಟಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಆದರೆ ವಿಶ್ವೇಶ್ವರ ಭಟ್ಟರ ಜೊತೆಗೆ ಉತ್ತಮ ಒಡನಾಟ ಇದ್ದೂ ಈ ತೀರ್ಮಾನಕ್ಕೆ ಬಂದಿದ್ದು ಹೇಗೆ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕಾದವರು ರಾಧಾಕೃಷ್ಣ ಭಡ್ತಿ ಮತ್ತು ಸಂಸ್ಥೆಯ ಸಂಪಾದಕರಾದ ವಿಶ್ವೇಶ್ವರ ಭಟ್.  ಇಬ್ಬರೂ ಫೋನ್ ಕರೆಗೆ ಲಭ್ಯರಾಗಲಿಲ್ಲ.

ಮುಂದೇನು?: 

ಭಡ್ತಿ ಮುಂದಿನ ನಡೆ ಎಲ್ಲಿಗೆ ಎಂಬುದರ ಕುರಿತು ಈಗಾಗಲೇ ಚರ್ಚೆ ನಡೆಯುತ್ತಿವೆ. 'ಕನ್ನಡ ಪ್ರಭ', 'ವಿಜಯ ಕರ್ನಾಟಕ', 'ವಿಜಯವಾಣಿ' ಹೀಗೆ ಪ್ರಮುಖ ಪತ್ರಿಕೆಗಳಿಗೆ ಭಡ್ತಿ ಹೋಗುತ್ತಾರಂತೆ ಎಂದು ಸುದ್ದಿಯಾಗಿದೆ. ಸದ್ಯ 'ಕಾಸ್ಟ್ ಕಟಿಂಗ್' ಸರ್ಕಸ್ ನಡೆಸುತ್ತಿರುವ 'ಕನ್ನಡ ಪ್ರಭ'ಕ್ಕೆ ಭಡ್ತಿ ಹೋಗುವ ಬಗ್ಗೆ ಅಲ್ಲಿನ ಪ್ರಮುಖರಿಗೇ ಅನುಮಾನಗಳಿವೆ. ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತು ಪಡಿಸಿದರೆ, ಭಡ್ತಿ ತಮ್ಮ ಹಿಂದಿನ ಸಂಸ್ಥೆಗೆ ಹೋಗುವುದ ಕಷ್ಟ ಎನ್ನಲಾಗುತ್ತಿದೆ. ಇನ್ನು 'ವಿಜಯವಾಣಿ'ಯಲ್ಲಿ ಅಂತಹ ಸಾಧ್ಯತೆಯೇ ಇಲ್ಲ ಎಂದು ಸಂಸ್ಥೆಯ ಹಿರಿಯ ವರದಿಗಾರರೊಬ್ಬರು ಹೇಳುತ್ತಾರೆ. ಆದರೆ, ಆಡಳಿತ ಮಂಡಳಿಯ ಆಲೋಚನೆ ಏನಿರಬಹುದು ಎಂಬುದು ಇನ್ನೂ ಇಳಿದು ಬಂದಿಲ್ಲ. ಸದ್ಯ ಇರುವ ಸಾಧ್ಯತೆ 'ವಿಜಯ ಕರ್ನಾಟಕ'. ಆದರೆ, ಅದರ ಬಗ್ಗೆಯೂ ನಿಖರವಾಗಿ ಹೇಳುವುದು ಕಷ್ಟ ಎಂಬಂತಿದೆ ಪರಿಸ್ಥಿತಿ.

"ವಿಶ್ವವಾಣಿ ಮಟ್ಟಿಗಂತೂ ಭಡ್ತಿ ರಾಜೀನಾಮೆ ಪ್ರಮುಖ ಬೆಳವಣಿಗೆ. ಅವರು ಮುಂದೆ ಎಲ್ಲಿಗೆ ಹೋಗಬಹುದು, ಯಾವ ಸ್ಥಾನಕ್ಕೆ ಹೋಗಬಹುದು ಎಂಬುದರ ಮೇಲೆ, ಇದು ಕನ್ನಡ ಪ್ರಿಂಟ್ ಮೀಡಿಯಾದ ಮೇಲೆ ಎಂತಹ ಪರಿಣಾಮಗಳನ್ನು ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ,'' ಎನ್ನುತ್ತಾರೆ ಭಡ್ತಿಯವರ ಆಪ್ತ ಪತ್ರಕರ್ತರೊಬ್ಬರು.