samachara
www.samachara.com
ಅಂತರಾಳದ ಕಣ್ಣುಗಳಲ್ಲಿಯೇ ಪ್ರಪಂಚವನ್ನು ಅರಿಯುವ ಈಕೆ ನಮ್ಮ ನಡುವಿನ ಅಪರೂಪದ ಪತ್ರಕರ್ತೆ!
ಮೀಡಿಯಾ 2.0

ಅಂತರಾಳದ ಕಣ್ಣುಗಳಲ್ಲಿಯೇ ಪ್ರಪಂಚವನ್ನು ಅರಿಯುವ ಈಕೆ ನಮ್ಮ ನಡುವಿನ ಅಪರೂಪದ ಪತ್ರಕರ್ತೆ!

ಪತ್ರಕರ್ತರಾದವರಿಗೆ,

ಅದರಲ್ಲೂ ವರದಿಗಾರರಿಗೆ ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡುತ್ತಿರಬೇಕು ಎಂಬುದು ಪತ್ರಿಕೋದ್ಯಮದಲ್ಲಿ ಚಾಲ್ತಿಯಲ್ಲಿರುವ ಮಾತು. ಸುದ್ದಿಗಳನ್ನು ಗ್ರಹಿಸಲು ಇವು ಅತ್ಯಗತ್ಯ ಎನ್ನುತ್ತಾರೆ. ಆದರೆ ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧದ ಅಮಾನವೀಯ ಮುಖವನ್ನು ಲೋಕದ ಮುಂದೆ ತೆರೆದಿಟ್ಟ ಈ ಪತ್ರಕರ್ತೆಗೆ ಕಣ್ಣು ಕಾಣುವುದಿಲ್ಲ. ಆಕೆಯ ಹೆಸರು ಬುಡೋರ್ ಹಸ್ಸನ್.

ಬುಡೋರ್ ಹಸ್ಸನ್ ವಿಕಲಚೇತನ ಪತ್ರಕರ್ತೆ. ಈಕೆಗೆ ದೃಷ್ಠಿ ದೋಷವಿದೆ. ಆದರೆ ಸುತ್ತಲಿನ ಪ್ರಪಂಚವನ್ನು ಅರಿಯಲು ಅಥವಾ ತನಗೆ ಅರಿವಿಗೆ ಬಂದ ಸಂಗತಿಯನ್ನು ಜಗತ್ತಿಗೆ ತಿಳಿಸಲು ಈಕೆಗೆ ಯಾವುದೇ ಸಮಸ್ಯೆ ಇಲ್ಲ. ನಮ್ಮಂತಹ ಸಾಮಾನ್ಯರು ನೋಡುವುದಕ್ಕಿಂತ ಭಿನ್ನವಾದ ದೃಷ್ಟಿಕೋನ ಈಕೆ ಮಾಡುತ್ತಿರುವ ವರದಿಗಳಲ್ಲಿ ಕಾಣಿಸುತ್ತಿದೆ.

ಪ್ಯಾಲೆಸ್ತೇನ್’ನ ಈ ಪತ್ರಕರ್ತೆ ಹಲವು ಅರೇಬಿಕ್ ಮತ್ತು ಇಂಗ್ಲೀಷ್ ಮಾಧ್ಯಮಗಳಿಗೆ ವರದಿ ಮಾಡುತ್ತಾರೆ. ಇವತ್ತು 26ನೇ ವಯಸ್ಸಿನಲ್ಲಿರುವ ಈಕೆ ಪ್ರತಿಭಟನೆಯಂತಹ ಸಾಮಾನ್ಯ ವರದಿಗಳನ್ನು ಮಾಡುವ ರೀತಿಯಲ್ಲಿಯೇ ಹೊಸತನವೊಂದು ಕಾಣಿಸುತ್ತಿದೆ. ಇಸ್ರೇಲ್ ಮತ್ತು ಪ್ಯಾಲಿಸ್ಟೇನ್ ಗಡಿಭಾಗಳಲ್ಲಿ ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಹಸ್ಸನ್ ಕಣ್ಣುಗಳಿಗೆ ಅಲ್ಲಿ ನಡೆಯುವ ಅಶ್ರುವಾಯು ಪ್ರಯೋಗಗಳು, ಲಾಠಿ ಚಾರ್ಚ್ ಹಾಗೂ ಫೈರಿಂಗ್ ಕಾಣುವುದಿಲ್ಲ. ಆದರೆ ಅಲ್ಲಿನ ಪ್ರತಿ ಧ್ವನಿಗೂ ಕಿವಿಯಾಗುವ ಈಕೆ ಅವುಗಳಿಗೆ ಅಕ್ಷರ ರೂಪ ನೀಡುತ್ತಾರೆ.

ಜನರು ಈಕೆ ಕುರುಡಿಯಾಗಿದ್ದೂ ಪತ್ರಕರ್ತೆಯಾಗಿರುವುದನ್ನು ಕೇಳಿ ಅಚ್ಚರಿ ವ್ಯಕ್ತಪಡಿಸುತ್ತಾರಂತೆ.  ಹಾಗಂತ ಆಕೆಯೇ ಹೇಳಿಕೊಂಡಿದ್ದಾಳೆ.  ಪ್ಯಾಲೆಸ್ತೇನ್ ನಝರತ್ನಿಂಧ ಜೆರುಸಲೆಂನ ಬೀದಿಗೆ ಪತ್ರಕರ್ತೆಯಾಗಿ ಬಂದಾಗ ಈಕೆಯ ವಯಸ್ಸು ಕೇವಲ 18. ಅಲ್ಲಿಂದ ಈಕೆ ಅಮೆರಿಕಾದ ವೆಬ್’ಸೈಟ್ ಒಂದಕ್ಕೆ ಕ್ರೀಡಾ ವರದಿಗಳನ್ನು ಬರೆಯಲಾರಂಭಿಸಿದರು. ಹೀಗಿದ್ದಾಕೆ 21ನೇ ವಯಸ್ಸಿಗೆ  ಮಧ್ಯಪೂರ್ವ ದೇಶಗಳ ಪಾಲಿನ ಹಾಟ್ ಟಾಪಿಕ್, ಇಸ್ರೇಲಿ ಆಕ್ರಮಣದ ವಿಚಾರವಾಗಿ ತನ್ನ ಬರವಣಿಗೆ ಆರಂಭಿಸಿದರು. ಅಲ್ಲಿಂದ ಆಕೆಯ ಬದುಕೇ ಬದಲಾಗಿ ಹೋಯ್ತು.

ಬ್ರೈಲ್ ಲಿಪಿ ಇರುವ ಕಂಪ್ಯೂಟರ್ನಲ್ಲಿ ಟೈಪ್ ಮಾಡುವ ಈಕೆ ಪ್ಯಾಲೆಸ್ಟೀನ್ ಕುರಿತಾದ ವರದಿಗಳನ್ನು ಭಿನ್ನವಾಗಿ ಬರೆಯುತ್ತಾರೆ. ಮನೆ ಕಳೆದುಕೊಂಡವರು, ಮಗು ಕಳೆದುಕೊಂಡವರಿಗೆಲ್ಲಾ ಈಕೆಯ ಅಂತರಾಳದ ಕಣ್ಣುಗಳು ಬೆಳಕು ನೀಡುತ್ತಿವೆ. ಮುಖ್ಯವಾಹಿನಿ ಮಾಧ್ಯಮಗಳ ಕಸದ ಬುಟ್ಟಿಯಿಂದಲೇ ಸುದ್ದಿಗಳನ್ನು ಹೆಕ್ಕಿ ತಂದು ಹಸ್ಸನ್ ಜನರ ಮುಂದಿಡುತ್ತಾರೆ.

ಈಕೆ ಕಣ್ಣಿನ ಸಮಸ್ಯೆಗಳಿಂದಾಗಿ ಹಲವು ಬಾರಿ ತೊಂದರೆ ಅನುಭಸಿದ್ದಿದೆ. ಅದರಲ್ಲೂ ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಭಾಗದಲ್ಲಿ ವರದಿಗಾಗಿ ತೆರಳಿದಾಗ ಸಹಾಯಕರನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಪ್ರಶ್ನೆ ಕೇಳಿದಾಗ ಉತ್ತರಿಸುವವನ ಮುಖ ಚರ್ಯೆ, ಆತನ ಹಾವ ಭಾವಗಳನ್ನು ತಾನು ಮಿಸ್ ಮಾಡಿಕೊಳ್ತೇನೆ ಎನ್ನುವ ಕೊರಗು ಈಕೆಗೆ ಇದೆ. "ಅದಕ್ಕಾಗಿ ನಾನು ಉತ್ತಮ ಕೇಳುಗಳಾಗಿದ್ದೇನೆ. ಅವರ ಧ್ವನಿಯಲ್ಲಿಯೇ ಅವರ ಮಖದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ,'' ಎನ್ನುತ್ತಾರೆ ಅವರು.

ಈಕೆಯ ಬಗ್ಗೆ ಇಸ್ರೇಲಿಗಳು ಅಪಪ್ರಚಾರ ಮಾಡಿದ್ದಿದೆ. ಆಗ ಎಷ್ಟೋ ಬಾರಿ ಮನೆಯರು ಇದನ್ನೆಲ್ಲಾ ಬಿಟ್ಟು ಬಿಡುವಂತೆ ಹೇಳಿದ್ದಿದೆ. ಆದರೆ ಇದ್ಯಾವುದಕ್ಕೂ ಹಿಂಜರಿಯದ ಹಸ್ಸನ್ ಜನರ ದೃಷ್ಠಿಕೋನವನ್ನೇ ಬದಲಿಸುತ್ತೇನೆ ಎಂದು ಮತ್ತಷ್ಟು ಉತ್ಸಾಹದಿಂದ ಪೆನ್ನು ಪೇಪರ್ ಕೈಗೆತ್ತಿಕೊಂಡು ಸಂದರ್ಶನ, ವರದಿಗಾರಿಕೆ ಅಂತ ಹೊರಟು ನಿಲ್ಲುತ್ತಾರೆ.

ಸವಾಲುಗಳ ಮಧ್ಯೆಯೂ ತನ್ನ ಭವಿಷ್ಯದ ಬಗ್ಗೆ ಆಶಾವಾದ ಇಟ್ಟುಕೊಂಡಿರುವ ಹಸ್ಸನ್ ಮುಂದೊಂದು ದಿನ ಲ್ಯಾಟಿನ್ ಅಮೆರಿಕಾದಲ್ಲಿ ಕೆಲಸ ಮಾಡುವ ತಮ್ಮ ಕನಸನ್ನು ಬಿಚ್ಚಿಡುತ್ತಾರೆ.

"ನಿಮಗೆಲ್ಲಾ ಎರಡು ಕಣ್ಣು, ಎರಡು ಕಿವಿಗಳಿವೆಯಲ್ಲ. ನನಗೆ ನಾಲ್ಕು ಕಿವಿಗಳಿವೆ. ಸರಿಯಾಗಿ ಕೇಳಿಸದೇ ಇದ್ದರೆ ಎಷ್ಟೊಂದು ಅಂಶಗಳು ಮಿಸ್ ಆಗುತ್ತವೆ," ಎನ್ನುತ್ತಾರೆ. ಪತ್ರಕರ್ತರಿಗೆ ಪಂಚೇಂದ್ರಿಯಗಳು ಇದ್ದರಷ್ಟೆ ಸಾಲವು, ಅವುಗಳಲ್ಲಿ ಸೂಕ್ಷ್ಮತೆಯೂ ಇರಬೇಕು ಎಂಬುದ್ನು ಹಸ್ಸನ್ ಪ್ರಾಕ್ಟಿಕಲ್ ಆಗಿ ನಮಗೆ ಅರ್ಥ ಪಡಿಸುತ್ತಿದ್ದಾರೆ.

ಕೃಪೆ: ಅಲ್ ಜಜೀರಾ