samachara
www.samachara.com
ಗಂಡ ಹೆಂಡತಿಯ ‘ಪಬ್ಲಿಕ್’ ಜಗಳದಲ್ಲಿ ಏರಿದ್ದು ಟಿಆರ್ಪಿ; ಬಡವಾಗಿದ್ದು ‘ಉತ್ತಮ ಸಮಾಜ’!
ಮೀಡಿಯಾ 2.0

ಗಂಡ ಹೆಂಡತಿಯ ‘ಪಬ್ಲಿಕ್’ ಜಗಳದಲ್ಲಿ ಏರಿದ್ದು ಟಿಆರ್ಪಿ; ಬಡವಾಗಿದ್ದು ‘ಉತ್ತಮ ಸಮಾಜ’!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಇದೊಂದು

ವಿಷ ಚಕ್ರ.

ಹತ್ತು ವರ್ಷಗಳ ಹಿಂದೆ ಕಾರಣವಿಲ್ಲದೆ ಟಿವಿ ಚಾನಲ್ ಒಂದು ನಡೆಸಿದ ಪ್ರಯೋಗದ ಯಶಸ್ಸು ತಂದಿಟ್ಟ ಫಜೀತಿ ಇದು. ಇವತ್ತು ಉಗುಳಿದರೆ ಟಿಆರ್ಪಿ ಎಂಬ ತುಪ್ಪ ಹೋಗುತ್ತದೆ, ನುಂಗಿದರೆ ಜನರ ಛೀಮಾರಿಯಿಂದ ಗಂಟಲು ಸುಡುತ್ತಿದೆ. ಒಟ್ಟಿನಲ್ಲಿ, ಇದು ಸೆರಗಿನಲ್ಲಿ ಕಟ್ಟಿಕೊಂಡಿರುವ ಕೆಂಡ. ಇವತ್ತಲ್ಲ ನಾಳೆ ಉಟ್ಟುಕೊಂಡಿರುವ ಸೀರೆ ಸುಟ್ಟು, ಬೆತ್ತಲಾಗುವುದರಲ್ಲಿ ಅನುಮಾನವಿಲ್ಲ.

ಅಂದಾಗೆ, ಇದೇನಿದು ಸ್ವಗತ ಅಂತ ಆಲೋಚನೆ ಮಾಡುತ್ತಿದ್ದೀರಾ? ನಾವು ಹೇಳಲು ಹೊರಟಿರುವ ವಿಚಾರ ಈ ಸುದ್ದಿ ವಾಹಿನಿಗಳಲ್ಲಿ, ಮನೋರಂಜನೆ ವಾಹಿನಿಗಳಲ್ಲಿ ಬರುವ ಗಂಡ- ಹೆಂಡತಿ ಜಗಳಗಳ ಕುರಿತಾಗಿದ್ದು. ಕೆಲವು ವರ್ಷಗಳ ಹಿಂದೆ, 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ತಳಮಟ್ಟದ, ಬೀದಿ ಬದಿಯ ಜನರ ಕುರಿತು ಅಂಕಣವೊಂದನ್ನು ಹೊರತರಲಾಗುತ್ತಿತ್ತು. ಇದಕ್ಕೆ 'ಬದುಕು ಜಟಕಾ ಬಂಡಿ' ಎಂದು ಹೆಸರಿಡಲಾಗಿತ್ತು. ಈ ಸರಣಿ ಅಂಕಣಗಳು ಶುರುವಾದ ಕೆಲವು ದಿನಗಳಲ್ಲಿಯೇ, 'ಗಂಡ- ಹೆಂಡತಿ ಜಗಳ ಪರಿಹರಿಸಿ, ದಯವಿಟ್ಟು ಟಿವಿ ಕ್ಯಾಮೆರಾ ತೆಗೆದುಕೊಂಡು ಮನೆಗೆ ಬನ್ನಿ,' ಎಂಬ ಮನವಿಗಳನ್ನು ಒಳಗೊಂಡ ಪತ್ರಗಳು ಬರಲಾರಂಭಿಸಿದವು. ನಂತರ ಅರ್ಥವಾಗಿದ್ದು ಏನು ಅಂದರೆ, ಅವತ್ತಿಗಾಗಲೇ ಮನೋರಂಜನಾ ವಾಹಿನಿಯೊಂದರಲ್ಲಿ, 'ಬದುಕು ಜಟಕಾ ಬಂಡಿ' ಹೆಸರಿನಲ್ಲಿ ಗಂಡ- ಹೆಂಡತಿಯರನ್ನು ಕರೆಸಿ, ಹೊಡೆದಾಡಿಸಿ, ಕಣ್ಣೀರು ಹಾಕಿಸಿ ಮನೆಗೆ ಕಳುಹಿಸುತ್ತಿದ್ದರು. ಅದರ ಜತೆಗೆ ಪತ್ರಿಕೆಯ ಅಂಕಣವನ್ನು ಹೋಲಿಸಿಕೊಂಡ ಜನ ಪತ್ರ ಬರೆಯುತ್ತಿದ್ದರು.

ಹೀಗೆ, ಜನರಲ್ಲಿ ತಮ್ಮ ಮನೆಗೆ ಕೌಟುಂಬಿಕ ಸಮಸ್ಯೆಗಳನ್ನು ಟಿವಿ ಚಾನಲ್ಗಳು ಪರಿಹಾರ ಮಾಡುತ್ತವೆ ಎಂಬ ಮನಸ್ಥಿತಿ ರೂಪುಗೊಂಡಿದ್ದು ಹೇಗೆ? ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ಮತ್ತೊಂದು ದಶಕ ಹಿಂದಕ್ಕೆ ಹೋಗಬೇಕು. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ 24/7 ಸುದ್ದಿ ವಾಹಿನಿ ಹುಟ್ಟಿಕೊಂಡ ಸಮಯವದು. ಅವತ್ತು ಆ ವಾಹಿನಿಯ ಅಪರಾಧ ವಿಭಾಗದ ವರದಿಗಾರ್ತಿಯೊಬ್ಬರು ಸುದ್ದಿಯೊಂದನ್ನು ತಂದು ಸಂಪಾದಕರ ಮುಂದಿಟ್ಟಿದ್ದಳು. ಅದು, ಹುಡುಗ ಮೋಸ ಮಾಡಿದ್ದಾನೆ ಎಂದು ಆತನ ಮದುವೆ ಮನೆಗೆ ಯುವತಿಯೊಬ್ಬಳು ನುಗ್ಗಿ ಗಲಾಟೆ ಮಡುತ್ತಾಳೆ ಎಂಬ ವಿಚಾರವಾಗಿತ್ತು. ಅದನ್ನು ನೇರ ಪ್ರಸಾರ ಮಾಡಲು ವಾಹಿನಿ ತೀರ್ಮಾನಿಸಿತು. ಬಿಳೀ ಬಣ್ಣದ ಚೂಡಿದಾರ್ ತೊಟ್ಟ ಯುವತಿಯೊಬ್ಬಳು, ಮದುವೆ ಮಂಟಪದ ಮುಂದೆ ಗಲಾಟೆ ಮಾಡುವ ದೃಶ್ಯಗಳು ಇಡೀ ದಿನ ಪ್ರಸಾರವಾಯಿತು. ಅಕ್ಕ ಪಕ್ಕ ಕೆಲವು ಮಹಿಳಾ ಮುಖಂಡರು, ಯುವತಿ ಪರವಾಗಿ 'ಫೆಮಿನಿಸ್ಟ್' ಭಾಷಣಗಳನ್ನು ಮಾಡಿದರು. ಅವತ್ತಿಗೆ ರಾಜ್ಯದ ಜನ ಧಾರವಾಹಿಗಳಲ್ಲಿ ಮಾತ್ರವೇ ನೋಡಿದ್ದ ಬೆಡ್ ರೂಂ ಜಗಳವನ್ನು ನೇರ ಪ್ರಸಾರ ಮಾಡಿದ್ದನ್ನು ನೋಡಿ ದಂಗಾಗಿದ್ದರು. ಚಾನಲ್ ಟಿಆರ್ಪಿ ಅಥವಾ ವೀಕ್ಷಕರ ರೇಟಿಂಗ್ ಪಾಯಿಂಟ್ ಜರ್ರೆಂದು ಏರಿತ್ತು. ಅದಾದ ಮೇಲೆ ವಾಹಿನಿ ಸುದ್ದಿಯನ್ನು ತಂದ ಮಹಿಳಾ ವರದಿಗಾರ್ತಿಗೆ ಬಹುಮಾನ ಘೋಷಿಸಿತು. ಇಂತಹ ಸುದ್ದಿಗಳಿಗೆ ನಮ್ಮಲ್ಲಿ ಮಣೆ ಹಾಕಲಾಗುತ್ತದೆ, ಮಿಸ್ ಮಾಡದೆ ತನ್ನಿ ಎಂಬ ಸಂದೇಶವನ್ನು ತನ್ನ ವರದಿಗಾರರಿಗೆ ನೀಡಿತು.

ಇವತ್ತಿಗೆ ಒಂದು ದಶಕ ಕಳೆದ ಮೇಲೂ ಪರಿಸ್ಥಿತಿ ಬದಲಾಗಿಲ್ಲ. ಗಂಡ- ಹೆಂಡತಿ ಜಗಳ, ಕೌಟುಂಬಿಕ ಕಲಹಗಳು ಹೆಚ್ಚು ಕಡಿಮೆ ಪ್ರತಿ ದಿನ ಸುದ್ದಿ ವಾಹಿನಿಗಳಲ್ಲಿ, ಮನೋರಂಜನಾ ವಾಹಿನಿಗಳ ಕಾರ್ಯಕ್ರಮದಲ್ಲಿ ಹೊಸ ಹೊಸ ಆಯಾಮದಲ್ಲಿ ಪ್ರಸಾರವಾಗುತ್ತಲೇ ಇವೆ. ಅಂದರೆ, ಕರ್ನಾಟಕದ ಒಂದಲ್ಲ ಒಂದು ಕುಟುಂಬದ ಬಾಳಿಗೆ ಈ ಟಿವಿ ವಾಹಿನಿಗಳು ಪ್ರತಿ ದಿನ ಬೆಳಕು ನೀಡುತ್ತಿವೆ. ಮೊನ್ನೆ ಮೊನ್ನೆಯಷ್ಟೆ, ಬೆಂಗಳೂರಿನ ಯುವತಿ ವಯಸ್ಸಾದ ವ್ಯಕ್ತಿಯ ಜತೆ ಅಧಿಕೃತವಾಗಿ ಮದುವೆ ಮಾಡಿಕೊಂಡಿದ್ದು, ಅದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದು, ಅದೇ ಸಮಯಕ್ಕೆ ಟಿವಿ ಕ್ಯಾಮೆರಾಗಳು ಅಲ್ಲಿ ಹಾಜರಿದ್ದದ್ದು... ಅಬ್ಬಾ, ಮಾಧ್ಯಮ ಮನಸ್ಸು ಮಾಡಿದರೆ ಹೇಗೆ ಜನರ ಮನಸ್ಸು ಬದಲಾಯಿಸಬಹುದು ಎಂಬುದಕ್ಕೆ ಸಾಕ್ಷಿ. ಆದರೆ ಅದು ಆರೋಗ್ಯಪೂರ್ಣ ಮನಸ್ಥಿತಿಯಾ? ಸಮಾಜದ ಸ್ವಾಥ್ಯಕ್ಕೆ ಮಾರಕವಾ ಎಂಬುದಷ್ಟೆ ಪ್ರಶ್ನೆ.

ಕೊನೆ ಹನಿ:

ಆಶಾದಾಯಕ ಎಂಬಂತೆ ಇದು ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ಡ್ರಾಮ ಜ್ಯೂನಿಯರ್ಸ್'ನಲ್ಲಿ ಹೊಸ ತಲೆಮಾರಿನ ಮಕ್ಕಳು ನಡೆಸಿಕೊಡುತ್ತಿರುವ ಕಾರ್ಯಕ್ರಮದ ತುಣುಕು ಇದು. ಅಷ್ಟರ ಮಟ್ಟಿಗೆ ದಶಕದ ನಂತರ ಕ್ಯಾಮೆರಾ ಹಿಂದಿನ ಜಗತ್ತು ಹೇಗಿದೆ ಎಂಬುದು ಜನರಿಗೂ ಅರ್ಥವಾಗಿದೆ.

https://www.youtube.com/watch?v=EtWTgAj_nJY