samachara
www.samachara.com
ಪತ್ರಿಕೋದ್ಯಮಕ್ಕೆ ಬರುವವರಲ್ಲಿ ಕೌಶಲ್ಯದ ಕೊರತೆ: ಸಮಸ್ಯೆಯ ಮೂಲ ಎಲ್ಲಿದೆ?
ಮೀಡಿಯಾ 2.0

ಪತ್ರಿಕೋದ್ಯಮಕ್ಕೆ ಬರುವವರಲ್ಲಿ ಕೌಶಲ್ಯದ ಕೊರತೆ: ಸಮಸ್ಯೆಯ ಮೂಲ ಎಲ್ಲಿದೆ?

ಸಿಲಿಕಾನ್ ಸಿಟಿಯಲ್ಲಿ ಐಟಿ ಮತ್ತು ಬಿಟಿ ಉದ್ಯೋಗಗಳು ಸೃಷ್ಟಿಯಾದವು, ಅವುಗಳನ್ನು ತುಂಬಲು ಅರ್ಹತೆ ಇರುವ ಮಾನವ ಸಂಪನ್ಮೂಲ ಸಿಗುತ್ತಿಲ್ಲ ಎಂದು 2012ರ ಸುಮಾರಿಗೆ ಬೆಂಗಳೂರಿನಲ್ಲಿ ‘ಸ್ಕಿಲ್ ಕಾಲೇಜ್‌’ಗೆ ಅಡಿಗಲ್ಲು ಹಾಕಲಾಯಿತು. 

Summary

ಕೆಲಸಗಳು ಖಾಲಿ ಇವೆ; ಅರ್ಹರು ಸಿಗುತ್ತಿಲ್ಲ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ; ಕೆಲಸಗಳು ಸಿಗುತ್ತಿಲ್ಲ!ಇದು ಇವತ್ತಿನ ಆರ್ಥಿಕ ವ್ಯವಸ್ಥೆ ಮುಂದಿಟ್ಟಿರುವ ಔದ್ಯಮಿಕ ವಲಯದ ಸವಾಲುಗಳಲ್ಲಿ ಒಂದು. ಒಂದು ಹಂತದಲ್ಲಿ ಐಟಿ- ಬಿಟಿ ಬೆಂಗಳೂರಿನಲ್ಲಿ ಬೆಳೆದ ನಂತರ ಇಂತಹದೊಂದು ಸಮಸ್ಯೆ ತೀವ್ರವಾಗಿ ಕಾಡಲು ಶುರುವಾಯಿತು.

ಸಿಲಿಕಾನ್ ಸಿಟಿಯಲ್ಲಿ ಐಟಿ ಮತ್ತು ಬಿಟಿ ಉದ್ಯೋಗಗಳು ಸೃಷ್ಟಿಯಾದವು, ಅವುಗಳನ್ನು ತುಂಬಲು ಅರ್ಹತೆ ಇರುವ ಮಾನವ ಸಂಪನ್ಮೂಲ ಸಿಗುತ್ತಿಲ್ಲ ಎಂದು 2012ರ ಸುಮಾರಿಗೆ ಬೆಂಗಳೂರಿನಲ್ಲಿ 'ಸ್ಕಿಲ್ ಕಾಲೇಜು'ಗೆ ಅಡಿಗಲ್ಲು ಹಾಕಲಾಯಿತು. ಇದರಿಂದ ಸಮಸ್ಯೆ ಪರಿಹಾರ ಆಯಿತಾ? ಗೊತ್ತಿಲ್ಲ. ಆದರೆ, ಹೆಚ್ಚು ಕಡಿಮೆ ಇದೇ ರೀತಿಯ ಸಮಸ್ಯೆಯೊಂದು ರಾಜ್ಯದ ಪತ್ರಿಕೋದ್ಯಮವನ್ನೀಗ ಕಾಡುತ್ತಿದೆ.ಕೆಲವು ವರ್ಷಗಳ ಹಿಂದೆ 'ಪ್ರಜಾವಾಣಿ' ಹಿರಿಯ ಪತ್ರಕರ್ತ ದಂಡಾವತಿ ಅಂಕಣವೊಂದನ್ನು ಬರೆದಿದ್ದರು.

ಪತ್ರಿಕೋದ್ಯಮ ಮುಗಿಸಿ ಬಂದ ವಿದ್ಯಾರ್ಥಿಗಳ ಸಂದರ್ಶನ ಮಾಡುವಾಗ ಆದ ಅನುಭವಗಳನ್ನು ಅವರು ಉಲ್ಲೇಖಿಸಿದ್ದರು. ಸಾಹಿತ್ಯದ ಗಂಧ ಗಾಳಿಯೂ ಇಲ್ಲದೆ, ಓದಿನ ಆಸಕ್ತಿ ಅಭಿರುಚಿಗಳೂ ಇಲ್ಲದೆ ಪತ್ರಕರ್ತರಾಗುತ್ತೀವಿ ಎಂದು ಬರುವ ಯುವಕ ಯುವತಿಯರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಸುದ್ದಿ ವಾಹಿನಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಾದಂತೆ, ಸುದ್ದಿ ನಿರೂಪಕರಾಗಬೇಕು, ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಹಂಬಲದೊಂದಿಗೆ ಬರುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ನಿಜ, ಸಮಸ್ಯೆಯೇನೋ ಇದೆ.

ಆದರೆ ಅದಕ್ಕೆ ಕಾರಣಗಳೇನು? ಹೀಗೊಂದು ಪ್ರಶ್ನೆಯನ್ನು ಮುಂದಿಡುತ್ತಿದ್ದಂತೆ ಸಾಮಾನ್ಯವಾಗಿ ಆರೋಪದ ಮೊನೆ ಪತ್ರಿಕೋದ್ಯಮ ಕಾಲೇಜುಗಳತ್ತ ತಿರುಗುತ್ತದೆ. "ನಮ್ಮಲ್ಲಿ ಫೊಟೋಗ್ರಫಿಯ ಬಗ್ಗೆ ಪಾಠ ಮಾಡಲು ಉಪನ್ಯಾಸಕರೊಬ್ಬರು ಬರುತ್ತಿದ್ದರು. ಅವರಿಗೆ ಕ್ಯಾಮೆರಾ ಬಗ್ಗೆ ಬೇಸಿಕ್ ಕೂಡ ಗೊತ್ತಿರಲಿಲ್ಲ. ಹೀಗಿರುವಾಗ ನಾವು ಏನನ್ನು ಕಲಿಯಲು ಸಾಧ್ಯ?'' ಎಂದು ಇತ್ತೀಚೆಗಷ್ಟೆ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಯುವಕನೊಬ್ಬ ಹೇಳುತ್ತಾನೆ. ಇದು ಫೊಟೋಗ್ರಫಿಯ ವಿಚಾರದಲ್ಲಿ ಮಾತ್ರವಲ್ಲ, ಪತ್ರಿಕೋದ್ಯಮವನ್ನು ಪಾಠ ಮಾಡುವ ಬಹುತೇಕ ಉಪನ್ಯಾಸಕರಿಗೆ ಪತ್ರಿಕೋದ್ಯಮದ ವೃತ್ತಿಯಾಗಿ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಅರಿವು ಇರುವುದಿಲ್ಲ.

ಇದಕ್ಕೆ ಕಾರಣ, ಅವರು ಪತ್ರಕರ್ತ ಅಥವಾ ಪತ್ರಕರ್ತೆಯಾಗಿ ಕೆಲಸವನ್ನೇ ಮಾಡಿರುವುದಿಲ್ಲ. ಮಾಡಿದ್ದರೂ, ಒಂದು ಅಥವಾ ಎರಡು ವರ್ಷಗಳಲ್ಲಿ ಪತ್ರಿಕೋದ್ಯಮ ತೊರೆದು, ಪತ್ರಿಕೋದ್ಯಮದ ಪಾಠ ಮಾಡಲು ಹೊರಟು ಹೋಗಿರುತ್ತಾರೆ.ಇನ್ನು, ಪತ್ರಿಕೋದ್ಯಮದ ಪಠ್ಯಕ್ರಮದ ಕುರಿತು. 'ಟಿವಿಯ ಹುಟ್ಟು, ರೇಡಿಯೋ ಉಗಮ, ಭಾರತದ ಪತ್ರಿಕೋದ್ಯಮದ ಇತಿಹಾಸ' ಹೀಗೆ ಪತ್ರಿಕೋದ್ಯಮ ಕಾಲೇಜುಗಳ ಪಠ್ಯಕ್ರಮ ಹಳೆಯ ಕಾಲದ ಜಾಡಿನಲ್ಲಿಯೇ ಇದೆ. ಇಂತಹ ಇತಿಹಾಸದ ಜತೆಗೆ, ಹೊಸ ಕಾಲದಲ್ಲಿ ಪತ್ರಿಕೋದ್ಯಮ ತೆಗೆದುಕೊಂಡಿರುವ ತಿರುವುಗಳನ್ನು ಪಠ್ಯಕ್ರಮದಿಂದ ಹೊರಗಿಡಲಾಗಿದೆ.

ಉದಾಹರಣೆಗೆ, ಕನ್ನಡದಲ್ಲಿ ಬೆಳೆಯುತ್ತಿರುವ ಸುದ್ದಿ ವಾಹಿನಿಗಳು. ಈ ಸುದ್ದಿವಾಹಿನಿಗಳು ಏನೇ ಕೆಲಸ ಮಾಡಿದರೂ, ಅಂತಿಮವಾಗಿ ಬಂದು ನಿಲ್ಲುವುದು ರೇಟಿಂಗ್ ವಿಚಾರಕ್ಕೆ. ಜನರ ಟಿವಿ ನೋಡುವ ಅಭಿರುಚಿಯನ್ನು ಅಳೆಯುವ ಈ ರೇಟಿಂಗ್ ಎಂದರೇನು? ಇದನ್ನು ಅಳೆಯುವ ಸಂಸ್ಥೆಗಳು ಯಾವವು? ಈ ಸಂಸ್ಥೆಗಳ ಜತೆಗೆ ಒಡಂಬಡಿಕೆ ಮಾಡಿಕೊಂಡ ಜಾಹೀರಾತು ಕಂಪನಿಗಳು ನಿರ್ವಹಿಸುತ್ತಿರುವ ಪಾತ್ರವೇನು? ಇವೆಲ್ಲವುಗಳ ಬಗ್ಗೆ ಸುಳಿವೂ ಇಲ್ಲದ ಪಠ್ಯವನ್ನು ಓದಿಕೊಂಡು ಬಂದವರು, ಟಿವಿಗಳಿಗೆ ತಮ್ಮದೇ ಆಲೋಚನಾ ಕ್ರಮದ ಮೂಲಕ ಕೆಲಸ ಮಾಡುವ ಉಮ್ಮೇದಿಯಲ್ಲಿರುತ್ತಾರೆ. ಕೆಲವು ದಿನಗಳಲ್ಲಿಯೇ, ಅವರ ಉತ್ಸಾಹ ಇಳಿದು ಹೋಗಿ, ವಾಸ್ತವ ಬೇರೆಯದೇ ಸವಾಲನ್ನು ಮುಂದೆ ಮಾಡಿರುತ್ತದೆ.

ಇದರ ಜತೆಗೆ, ಕನಿಷ್ಟ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡಲು ಬೇಕಾದ ಮೂಲ ಸರಕುಗಳನ್ನೂ ಕೂಡ ಕಾಲೇಜುಗಳು ಕಲಿಸದೇ ಹೊರ ಜಗತ್ತಿಗೆ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುತ್ತವೆ. ನ್ಯೂಸ್ ರೂಮಿಗೆ ಬಂದವರು, ಎವಿ, ಎವಿಬಿ, ಪ್ಯಾಕೇಜ್ ಅನ್ನುತ್ತಿದ್ದಂತೆ ಕಣ್ಣು ಕಣ್ಣು ಬಿಡುತ್ತಾರೆ."ವಿದೇಶಗಳ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಅಷ್ಟೇ ಏಕೆ ನಮ್ಮಲ್ಲಿಯೇ ಇರುವ ಏಷಿಯನ್ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಥಿಯರಿಗಿಂತ ಪತ್ರಿಕೋದ್ಯಮದ ಪಠ್ಯಕ್ರಮ ಪ್ರಾಕ್ಟಿಕಲ್ಗೆ ಒತ್ತು ನೀಡುತ್ತದೆ. ಅವರು ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳ ಕೈಲಿ ಮಾಡಿರುವ ಡೆಸರ್ಟೇಶನ್ ವಿಷಯಗಳಲ್ಲಿ ಕಾಲಘಟ್ಟದ ಪ್ರಜ್ಞೆ ಕಾಣಿಸುತ್ತದೆ. ನಮ್ಮಲ್ಲಿ ಮಾತ್ರ ತೌಲನಿಕ ಅಧ್ಯಯನಕ್ಕೇ ಇನ್ನೂ ಅಂಟಿಕೊಂಡಿದ್ದಾರೆ,'' ಎನ್ನುತ್ತಾರೆ ಪತ್ರಿಕೋದ್ಯಮ ಕಾಲೇಜಿನ ಉಪನ್ಯಾಸಕರೊಬ್ಬರು.

ತಮ್ಮ ಹೆಸರನ್ನು ಗೌಪ್ಯವಾಗಿಡಬೇಕು ಎಂಬ ಕಂಡಿಷನ್ ಜತೆಗೇ ಮಾತನಾಡಿದ ಅವರು, "ನಮ್ಮಲ್ಲಿ ವ್ಯವಸ್ಥೆ ಇನ್ನೂ ಹಳೆಯ ಕಾಲದಲ್ಲಿಯೇ ಉಳಿದುಕೊಂಡಿದೆ. ಅದನ್ನು ಬದಲಾವಣೆ ಮಾಡುವುದು ಸುಲಭವಿಲ್ಲ. ಹೀಗಾಗಿ, ಏನೇ ಹೇಳಿದರೂ ಹೊಸ ಕಾಲಘಟ್ಟದ ಬೆಳವಣಿಗೆಗಳನ್ನು ಪಠ್ಯಕ್ರಮಗಳು ಒಳಗೊಳ್ಳುವುದು ಕಷ್ಟವಿದೆ. ಹಾಗಂತ ಒಳಗೊಂಡರೂ, ಅದನ್ನು ಪಾಠ ಮಾಡುವವರು ಮತ್ತೆ ಹೊರಗಿನಿಂದಲೇ ಬರಬೇಕಾಗುತ್ತದೆ. ಪತ್ರಿಕೋದ್ಯಮದ ಉದ್ಯೋಗಿಗಳಲ್ಲಿರುವ ಕೌಶಲ್ಯಗಳ ಕೊರತೆ ಇಲ್ಲಿಯೂ ಇದೆ,'' ಎನ್ನುತ್ತಾರೆ ಅವರು.ಸಮಾಜದ ಎಲ್ಲಾ ಉದ್ಯೋಗಗಳಲ್ಲೂ ವೃತ್ತಿ ಮತ್ತು ಕೌಶಲ್ಯದ ಕೊರತೆ ಇದೆ ಎನ್ನುವ ಸಮಯದಲ್ಲಿ, ಪತ್ರಿಕೋದ್ಯಮದ ಕಾಲೇಜುಗಳನ್ನು ಅದರಿಂದ ಹೊರಗಿಟ್ಟು ನೋಡುವುದು ಕೂಡ ಕಷ್ಟವೇ. ಇದನ್ನು ಸರಿಪಡಿಸಿಕೊಳ್ಳದ ಹೊರತು, ಕೌಶಲ್ಯಗಳನ್ನು ಹೊಂದಿದ ಅಭ್ಯರ್ಥಿಗಳೇ ಸಂದರ್ಶನಕ್ಕೆ ಬರಬೇಕು ಎಂದು ಇವತ್ತಿನ ಪತ್ರಿಕೋದ್ಯಮ ನಿರೀಕ್ಷೆ ಮಾಡಲು ಸಾದ್ಯವಿಲ್ಲ.