ಟಿವಿ ಕಾರ್ಯಕ್ರಮಗಳಿಂದ ಬೇಸತ್ತವರನ್ನು 'ಚೇಸ್' ಮಾಡುತ್ತಿರುವ ಈ ಹೊಸ ಸಾಹಸ!
ಮೀಡಿಯಾ 2.0

ಟಿವಿ ಕಾರ್ಯಕ್ರಮಗಳಿಂದ ಬೇಸತ್ತವರನ್ನು 'ಚೇಸ್' ಮಾಡುತ್ತಿರುವ ಈ ಹೊಸ ಸಾಹಸ!

ನ್ಯೂಸ್ ಡಾಕ್ಯುಮೆಂಟರಿ...

ಇದು ಇವತ್ತಿಗೆ ಜಾಗತಿಕ ಪತ್ರಿಕೋದ್ಯಮದಲ್ಲಿ ಅತೀ ಹೆಚ್ಚು ಗಮನವನ್ನು, ಹಾಗೆಯೇ ಹೂಡಿಕೆಯನ್ನು ಕಾಣುತ್ತಿರುವ ಕ್ಷೇತ್ರ. ಒಂದು ಕಾಲದಲ್ಲಿ ನ್ಯೂಸ್ ಹಾಗೂ ಡಾಕ್ಯುಮೆಂಟರಿ ನಿರ್ಮಾಣ ಎಂಬುದು ಪ್ರತ್ಯೇಕ ಕ್ಷೇತ್ರಗಳು ಎಂದು ಭಾವನೆ ಇತ್ತು. ಆದರೆ, ಜಾಗತಿಕ ಮಾಧ್ಯಮಗಳ ನಡುವಿನ ಪೈಪೋಟಿಯಿಂದಾಗಿ, ನ್ಯೂಸ್ ಚಾನಲ್ಗಳೇ ತಮ್ಮದೇ ನಿರ್ಮಾಣದ ಸುದ್ದಿ ಸಾಕ್ಷ್ಯಚಿತ್ರಗಳನ್ನು ಜನರ ಮುಂದಿಡಲು ಶುರುಮಾಡಿದವು. ಇದಕ್ಕೊಂದು ಗುಣಮಟ್ಟದ ಚೌಕಟ್ಟು ಹಾಕಿಕೊಟ್ಟಿದ್ದು ಬಿಬಿಸಿ. ನಂತರ ಸಿಎನ್ಎನ್, ಅಲ್ ಜಝೀರಾ ತರಹದ ಚಾನಲ್ಗಳು, ವೈಸ್ ತರಹದ ಮಾಧ್ಯಮ ಸಂಸ್ಥೆಗಳು ನ್ಯೂಸ್ ಡಾಕ್ಯುಮೆಂಟರಿಗಳನ್ನೇ ತನ್ನ ವಾಹಿನಿಗಳು ಪ್ರಮುಖ ಕಂಟೆಂಟ್ ಆಗಿ ಬೆಳೆಸಿದವು.

ಸದ್ಯ ಗಾರ್ಡಿಯನ್ ಮತ್ತಿತರ ಪತ್ರಿಕೆಗಳೂ ಕೂಡ ಈ ಕ್ಷೇತ್ರಕ್ಕೆ ಕಾಲಿಟ್ಟಿವೆ. ಭಾರತದ ಪೈಕಿ ನ್ಯೂಸ್ ಡಾಕ್ಯುಮೆಂಟರಿಗಳು ಇನ್ನೂ ಸುದ್ದಿ ವಾಹಿನಿಗಳ ವ್ಯಾಪ್ತಿಗೆ ಬಂದಿಲ್ಲ. ಹೀಗೊಂದು ಸಾಧ್ಯತೆಯನ್ನು ಅವು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ, ಸ್ಕೂಪ್ ವೂಪ್ ಮತ್ತು ನ್ಯೂಸ್ ಲಾಂಡ್ರಿ ವೆಬ್ ತಾಣಗಳು ಭಾರತದ ಹೊಸ ತಲೆಮಾರಿನ ನ್ಯೂಸ್ ಡಾಕ್ಯುಮೆಂಟರಿಗಳನ್ನು ತಯಾರಿಸುವ ಕೆಲಸಕ್ಕೆ ಕೈ ಹಾಕಿವೆ. ಕೆಲವು ತಿಂಗಳ ಹಿಂದೆ 'ಚೇಸ್' ಹೆಸರಿನಲ್ಲಿ ನ್ಯೂಸ್ ಡಾಕ್ಯುಮೆಂಟರಿಗಳನ್ನು ತೆರೆಗೆ ತರುವುದಾಗಿ ಸ್ಕೂಪ್ ವೂಪ್ ಹಾಗೂ ನ್ಯೂಸ್ ಲಾಂಡ್ರಿ ಘೋಷಿಸಿದಾಗ ಸಹಜವಾಗಿಯೇ, ಕುತೂಹಲ ಹುಟ್ಟಿಹಾಕಿತ್ತು. ಭವಿಷ್ಯ, ನಕಲಿ ಡಾಕ್ಟರ್ಗಳ ಹಾವಳಿಯಲ್ಲಿ ಕಳೆದು ಹೋಗುತ್ತಿರುವ ನ್ಯೂಸ್ ಚಾನಲ್ಗಳ ನಡುವೆ, ಸುದ್ದಿಯನ್ನು ಸಾಕ್ಷ್ಯಚಿತ್ರ ರೂಪದಲ್ಲಿ ಸ್ಥಳೀಯ ಮಾಧ್ಯಮ ಸಂಸ್ಥೆಗಳು ನೀಡಲು ಹೊರಟಿರುವ ಈ ಬೆಳವಣಿಗೆ ಆಶಾದಾಯಕವಾಗಿ ಕಾಣಿಸಿತ್ತು.

ಈಗಾಗಲೇ 'ಚೇಸ್' ಸರಣಿಯ ಮೊದಲ ಸಾಕ್ಷ್ಯ ಚಿತ್ರ ಯೂಟ್ಯೂಬ್ನಲ್ಲಿ ಲಭ್ಯವಿದೆ.

[embed]https://www.youtube.com/watch?v=tH8rG4Jn5xU[/embed]

ನ್ಯೂಸ್ ಲಾಂಡ್ರಿ ಹಾಗೂ ಸ್ಕೂಪ್ ವೂಪ್ ಸಾರಥ್ಯದ ಈ ಸರಣಿಯ ಎರಡನೇ ಸಾಕ್ಷ್ಯಚಿತ್ರದ ಟ್ರೈಲರ್ ಕೂಡ ಬಿಡುಗಡೆ ಮಾಡಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ಕುರಿತು ತಯಾರಿಸಲಾಗಿರುವ ಈ ನ್ಯೂಸ್ ಫಿಲ್ಮ್ ಬಗೆಗಿನ ಟ್ರೈಲರ್ ಅಸಕ್ತಿ ಮೂಡಿದೆ. ತನಿಖಾ ಪತ್ರಿಕೋದ್ಯಮದ ಝಲಕ್ ಇಲ್ಲಿ ಸಿಗುತ್ತಿದೆ.

[embed]https://www.youtube.com/watch?v=MT5mEGJ5eg4[/embed]

ಇವತ್ತಿನ ಸುದ್ದಿ ಮಾಧ್ಯಮಗಳ ಜನರ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡ ಕಾರ್ಯಕ್ರಮಗಳಿಂದ ಬೇಸತ್ತವರು ಪರ್ಯಾಯದ ಹುಡುಕಾಟದಲ್ಲಿದ್ದರೆ ಈ ಮಾಹಿತಿ ನೆರವಾಗಬಹುದು. ಅಂತವರಿಗೆ 'ಚೇಸ್' ಸರಣಿಯ ಸುದ್ದಿ ಸಾಕ್ಷ್ಯಚಿತ್ರಗಳು ಹೊಸ ಹೊಳವುಗಳನ್ನು ನೀಡಬಹುದು.