ಲೀಕಾಯ್ತು ಪತ್ರಕರ್ತೆಯ ಟೇಪು: ಚರ್ಚೆಗೆ ಬಂತು ಚುನಾವಣೆ ಸಮಯದಲ್ಲಿ ನಡೆಯುವ ‘ಕಾಸಿಗಾಗಿ ಸುದ್ದಿ’ ವಿಚಾರ!
ಮೀಡಿಯಾ 2.0

ಲೀಕಾಯ್ತು ಪತ್ರಕರ್ತೆಯ ಟೇಪು: ಚರ್ಚೆಗೆ ಬಂತು ಚುನಾವಣೆ ಸಮಯದಲ್ಲಿ ನಡೆಯುವ ‘ಕಾಸಿಗಾಗಿ ಸುದ್ದಿ’ ವಿಚಾರ!

ಕೇರಳದಲ್ಲಿ ಚುನಾವಣೆ ಕಾವು ಜೋರಾಗುತ್ತಿರುವಂತೆ ಪತ್ರಕರ್ತೆಯೊಬ್ಬರ ಆಡಿಯೋ ಕ್ಲಿಪ್ ಲೀಕ್ ಆಗಿದ್ದು ಚರ್ಚೆಗೆ ಕಾರಣವಾಗಿದೆ. ಪತ್ರಕರ್ತೆಯೊಬ್ಬರು ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ತನ್ನ ಗಂಡನ ಪರವಾಗಿ ಬೇರೆ ಬೇರೆ ಮಾಧ್ಯಮಗಳ ಪತ್ರಕರ್ತರನ್ನೇ ‘ಬುಕ್’ ಮಾಡಲು ಹೊರಟಿದ್ದರು ಎಂಬ ಗುಲ್ಲು ಹಬ್ಬಿದೆ.

ನಡೆದಿದ್ದೇನು?

ಲೆಬಿ ಡೆನಿಸ್ ಕೇರಳದ ಪ್ರತಿಷ್ಠಿತ ಮಾತೃಭೂಮಿ ಚಾನಲ್‌ನ ಕೊಚ್ಚಿ ವಿಭಾಗದ ವಿಶೇಷ ವರದಿಗಾರ್ತಿ. ಈಕೆಯ ಗಂಡ ವಿ ಪಿ ಸಜೀಂದ್ರನ್ ಯುಡಿಎಫ್ (ಯುನೈಟೆಡ್ ಡೆಮಕ್ರಾಟಿಕ್ ಫ್ರಂಟ್)ನ ಕುನ್ನತುನಾಡು ಕ್ಷೇತ್ರದ ಅಭ್ಯರ್ಥಿ. ತನ್ನ ಗಂಡನ ಪರವಾಗಿ ಈಕೆ ಜರ್ನಲಿಸ್ಟ್’ಗಳನ್ನೇ ಖರೀದಿಸಲು ಹೊರಟ್ಟಿದ್ದರು ಎಂಬುದು ಈಕೆಯ ಮೇಲೆ ಕೇಳಿ ಬಂದಿರುವ ಸದ್ಯದ ಆರೋಪ.

ಇದಕ್ಕೆ ಆಧಾರವಾಗಿ ಸಿಕ್ಕಿದ್ದು ಈಕೆಯದೆಂದು ಹೇಳಲಾದ ಸುಮಾರು 9 ನಿಮಿಷಗಳ ಆಡಿಯೋ ಕ್ಲಿಪ್ ರಲ್ಲಿ ಈಕೆ ಅಪರಿಚಿತ ವ್ಯಕ್ತಿಯ ಜೊತೆ ಪತ್ರಕರ್ತರ ಖರೀದಿ ವಿಷಯವಾಗಿ ಮಾತನಾಡುವ ಧ್ವನಿಗಳಿವೆ ಎಂದು 'ದಿ ನ್ಯೂಸ್ ಮಿನಿಟ್' ವರದಿ ತಿಳಿಸಿದೆ. ಆದರೆ ಇದನ್ನು ಈಕೆ ನಿರಾಕರಿಸಿದ್ದು, ಆಡಿಯೋದಲ್ಲಿರುವ ಧ್ವನಿ ನನ್ನದೇ, ಆದರೆ ಬೇರೆ ಬೇರೆ ಸಂದರ್ಭಗಳ ಮಾತುಗಳನ್ನು ಎಡಿಟ್ ಮಾಡಿ ಸೋರಿಕೆ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಆಕೆಯ ಆಡಿಯೋ ಟೇಪಿನ ಆಚೆಗೆ ಚುನಾವಣೆ ಸಮಯದಲ್ಲಿ ನಡೆಯುವ ಇಂತಹ 'ಪೇಯ್ಡ್ ನ್ಯೂಸ್' ಸಂಸ್ಕೃತಿಗಳ ಬಗ್ಗೆ 'ಸಮಾಚಾರ' ಬೆಳಕು ಚೆಲ್ಲುತ್ತಿದೆ.

ಕಾಸಿಗಾಗಿ ಸುದ್ದಿ ಮತ್ತು ಚುನಾವಣೆ:

ಚುನಾವಣೆ ಸಂದರ್ಭದಲ್ಲಿ ‘ಕಾಸಿಗಾಗಿ ಸುದ್ದಿ’ (ಪೇಯ್ಡ್ ನ್ಯೂಸ್) ಎಂಬ ಪದ ಚರ್ಚೆಯ ಮುನ್ನೆಲೆಗೆ ಬರುವುದು ಸಾಮಾನ್ಯ. ತಮ್ಮ ಪರವಾಗಿ ಸುದ್ದಿ ಮಾಡಲು, ವಿಶೇಷ ವರದಿಗಳನ್ನು ಸಿದ್ದಪಡಿಸಲು ರಾಜಕಾರಣಿಗಳು ಪತ್ರಕರ್ತರ ಕೈ ಬೆಚ್ಚಗೆ ಮಾಡುತ್ತಾರೆ ಎಂಬುದು ಇದರ ಹಿಂದಿರುವ ತಾತ್ಪರ್ಯ ಅಷ್ಟೆ. ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣಕ್ಕೋ ಏನೋ ಈ ರೀತಿಯ ವರದಿಗಳು ಹೆಚ್ಚಾಗುತ್ತಿವೆ. ಕೆಲವು ಸಲ ಮಾಧ್ಯಮ ಸಂಸ್ಥೆಗಳೇ ಚುನಾವಣೆ ಸಮಯದಲ್ಲಿ 'ಪೇಯ್ಡ್ ನ್ಯೂಸ್'ಗೆ ಬಲಿಯಾಗುತ್ತವೆ ಎಂಬ ಆರೋಪಗಳಿವೆ.

ಈ ಹಿನ್ನೆಲೆಯಲ್ಲಿ ‘ಸುಪಾರಿ ಜರ್ನಲಿಸಂ’ ಎಂಬ ಪದವೂ ಹುಟ್ಟಿಕೊಂಡಿದೆ. ಯಾರು ಕಾಸು ಬಿಚ್ಚುತ್ತಾನೋ ಆತನ ಪರವಾಗಿ ಮಾಧ್ಯಮಗಳು ಸಾರ್ವಜನಿಕ ವಕಾಲತ್ತು ವಹಿಸಕೊಳ್ಳುತ್ತವೆ. ಚುನಾವಣೆ ಸಂದರ್ಭದಲ್ಲಿ ನಡೆಯುವ ಈ ರೀತಿಯ ಪ್ರಕರಣಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಡುತ್ತದೆ. ಆದರೆ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ರೀತಿಯಲ್ಲಿ ಇದನ್ನು ಅಷ್ಟು ಸುಲಭವಾಗಿ ಪತ್ತೆ ಮಾಡುವುದು ಕಷ್ಟ.

ಯಾವುದೋ ಪತ್ರಕರ್ತ ಅಭ್ಯರ್ಥಿಯ ಕಡೆಯವರ ಜತೆ ಡೀಲ್ ಕುದುರಿಸಿದ್ದನ್ನು ಕಾನೂನಿನ ಚೌಕಟ್ಟುಗಳ ಪರಿಧಿಯಲ್ಲಿ ನಿರ್ವಹಿಸುವುದು ಕಷ್ಟ.2012ರ ಗುಜರಾತ್ ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಾನಾ ಪ್ರತಿಕೆಗಳಲ್ಲಿ ಪ್ರಕಟಗೊಂಡ 444 ವರದಿಗಳ ಬಗ್ಗೆ ಚುನಾವಣಾ ಆಯೋಗ ಅನುಮಾನ ವ್ಯಕ್ತಪಡಿಸಿತ್ತು. ಕೊನೆಗೆ ಸಾಬೀತು ಪಡಿಸಲು ಸಾಧ್ಯವಾಗಿದ್ದು ಕೇವಲ 126 ಮಾತ್ರ.

ಅಲ್ಲಿ ಅನುಮಾನ ವ್ಯಕ್ತಪಡಿಸಿದ ಕೇಸುಗಳ ಆಚೆಗೂ ಪ್ರಕರಣಗಳಿದ್ದವು. ಆದರೆ ನಾಜೂಕಾಗಿ ಹೆಣೆದ ವರದಿಗಳನ್ನು ಸೀಮಿತ ಕಾನೂನುಗಳ ಅಡಿಯಲ್ಲಿ ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ."ವೃತ್ತಿಪರ ಪತ್ರಕರ್ತರು ಈ ಕೃತ್ಯ ಎಸಗುವುದರಿಂದ ಯಾವುದು ಪೇಯ್ಡ್ ನ್ಯೂಸ್ ಯಾವುದು ನೈಜ ವರದಿ ಎಂಬುದನ್ನು ಗುರುತಿಸುವುದು ಅಸಾಧ್ಯ," ಅಂತ ಭಾರತೀಯ ಪತ್ರಿಕಾ ಒಕ್ಕೂಟದ ತಜ್ಞರ ತಂಡ ಹಿಂದೊಮ್ಮೆ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಪೇಯ್ಡ್ ನ್ಯೂಸ್ಗಳಿಗೆ ಮೂಗುದಾರ ಹಾಕಲು ಮಾರ್ಗದರ್ಶಿ ಸೂತ್ರಗಳನ್ನು ಚುನಾವಣಾ ಆಯೋಗ ಸಿದ್ದಪಡಿಸಿದೆ. ಆದರೆ ಈ ಮಾರ್ಗದರ್ಶಿ ಸೂತ್ರಗಳ ಅರಿವಿರುವ ಪತ್ರಕರ್ತರು ಜಾಗರೂಕತೆಯಿಂದ ಅವುಗಳನ್ನು ಮೀರುತ್ತಾರೆ ಎಂಬುದು ವಾಸ್ತವ ಸತ್ಯ. ಈ ಹಿನ್ನೆಲೆಯಲ್ಲಿ ಕೇರಳದ ಪತ್ರಕರ್ತೆಯ ಟೇಪು ಮಹತ್ವ ಪಡೆದುಕೊಂಡಿದೆ.2018ರ ಕರ್ನಾಟಕ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಮ್ಮಲ್ಲೂ ಚುನಾವಣಾ ಪೂರ್ವದಲ್ಲಿ ಸಂಭವಿಸಬಹುದಾದ ಇಂತಹ ಘಟನೆಗಳ ಬಗ್ಗೆ ಸಹಜ ಕುತೂಹಲವೊಂದು ಮೂಡಿದೆ.