ಅಪರೂಪದ ಪತ್ರಕರ್ತನ ಪರಿಚಯ ಅಷ್ಟೆ; ಮುಖ ನೋಡಿದವರೇ ಇಲ್ಲ!
ಮೀಡಿಯಾ 2.0

ಅಪರೂಪದ ಪತ್ರಕರ್ತನ ಪರಿಚಯ ಅಷ್ಟೆ; ಮುಖ ನೋಡಿದವರೇ ಇಲ್ಲ!

ಇತ್ತೀಚೆಗೆ ಆಫ್ರಿಕಾ ಖಂಡದ ಪುಟ್ಟ ದೇಶ ಘಾನವನ್ನು ತುದಿಗಾಲ ಮೇಲೆ ನಿಲ್ಲಿಸಿದ ಪತ್ರಕರ್ತ ಈತ- ಅನಾಸ್ ಅರೆಮಿಯೋ ಅನಾಸ್. ಆಫ್ರಿಕನ್ ದೇಶದ ನ್ಯಾಯಾಂಗ ವ್ಯವಸ್ಥೆಒಳಗಿನ ಹುಳುಕುಗಳನ್ನು ಅಡಿಯಿಂದ ಮುಡಿವರೆಗೆ ಜನರ ಎದುರಿಗೆ ತೆರೆದಿಟ್ಟ ಈತನ ತನಿಖಾ ವರದಿ ವಿಶ್ವದಾದ್ಯಂತ ಭಾರಿ ಸದ್ದು ಮಾಡಿತ್ತು.

ಪತ್ರಕರ್ತರಿಗೆ ಪತ್ರಕರ್ತರು ಮಾತ್ರವೇ ಮಾದರಿಯಾಗುವುದು ಸಾಮಾನ್ಯ. ವೃತ್ತಿಯೊಳಗೆ ಎಷ್ಟೇ ಮತ್ಸರಗಳಿದ್ದರೂ, ಅಸೂಯೆಗಳಿದ್ದರೂ, ಪತ್ರಕರ್ತರು ತನ್ನ ಸಹೋದ್ಯೋಗಿಯನ್ನು ಗೊತ್ತೇ ಇಲ್ಲದಂತೆ ಅನುಸರಿಸುತ್ತಿರುತ್ತಾರೆ. ಅದನ್ನು ಆತ ಅಥವಾ ಆಕೆ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ, ಮನಸ್ಥೈರ್ಯವನ್ನು ಉಳಿಸಿಕೊಳ್ಳಲು ಇದು ಅನಿವಾರ್ಯ ಕೂಡ. ಹೀಗಾಗಿಯೇ, ಕನ್ನಡ ಪತ್ರಿಕೋದ್ಯಮ ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಅನಾಸ್ ಮತ್ತವನ ಪತ್ರಿಕೋದ್ಯಮದ ಶೈಲಿ 'ಜೀವಜಲ'ದಂತೆ ನಮಗೆ ಕಾಣಿಸುತ್ತಿದೆ.

ಇಂತಹದೊಂದು ಪುಟ್ಟ ಪೀಠಿಕೆ ಇಟ್ಟುಕೊಂಡು ನಾವು ಅನಾಸ್ ಎಂಬ ಪತ್ರಕರ್ತನ ಸಾಗುತ್ತಿರುವ ಹಾದಿಯನ್ನೊಮ್ಮೆ ಪರಿಚಯ ಮಾಡಿಕೊಳ್ಳೊಣ. ಪತ್ರಿಕೋದ್ಯಮದಲ್ಲಿ ಸುದ್ದಿ ಮಾಡುವವರೇ ಸುದ್ದಿಯಾಗುವುದು ಅಪರೂಪ. ಇದಕ್ಕೆ ತದ್ವಿರುದ್ಧ ಉದಾಹರಣೆ ಆಫ್ರಿಕಾ ಖಂಡದ ಈ ಪತ್ರಕರ್ತ. ಕಳೆದ 20 ವರ್ಷಗಳಿಂದ ಆತನ ಮುಖ ಎಲ್ಲಿಯೂ ಬಹಿರಂಗವಾಗಿಲ್ಲ. ನಮ್ಮಂತೆಯೇ ಪತ್ರಿಕೋದ್ಯಮದ ಪದವಿ ಮುಗಿಸಿ ಹೊರಬಂದವನು ಮೊದಲು ಆರಿಸಿಕೊಂಡಿದ್ದು 'ದಿ ಗೈಡ್' ಎಂಬ ಭ್ರಷ್ಟಾಚಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ವರದಿ ಮಾಡುತ್ತಿದ್ದ ಪುಟ್ಟ ಪತ್ರಿಕೆಯೊಂದನ್ನು. ಆಗ ಅದರ ಸಂಪಾದಕ ಜೈಲಿನಲ್ಲಿದ್ದ.

ಹಾಗೆ ವೃತ್ತಿ ಆರಂಭಿಸಿದ ಅನಾಸ್ ಸಾಂಪ್ರದಾಯಿಕ ಪತ್ರಿಕೋದ್ಯಮ ತನಗೆ ಆಗಿ ಬರುವುದಿಲ್ಲ ಎಂಬುದನ್ನು ವೃತ್ತಿಜೀವನದ ಆರಂಭದಲ್ಲಿಯೇ ಅರ್ಥ ಮಾಡಿಕೊಂಡ. ಆತನ ಮೊದಲ ದೊಡ್ಡ ಸ್ಟೋರಿ ಘಾನಾದ ಹುಚ್ಚಾಸ್ಪತ್ರೆಗಳ ಕುರಿತಾಗಿದ್ದು. ಅದಕ್ಕಾಗಿ ಆತ ಹುಚ್ಚನಂತೆ ನಟನೆ ಮಾಡಿ, ಆಸ್ಪತ್ರೆಯನ್ನು ಸೇರಿಕೊಂಡಿದ್ದ. ಹಾಗೆ ಶುರುವಾದ ಆತನ ತನಿಖಾ ಪತ್ರಿಕೋದ್ಯಮದ ಶೈಲಿ ಇವತ್ತು ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ದೊಡ್ಡ ವರದಿ:

ಅಪರೂಪದ ಪತ್ರಕರ್ತನ ಪರಿಚಯ ಅಷ್ಟೆ; ಮುಖ ನೋಡಿದವರೇ ಇಲ್ಲ!

ಎರಡು ತಿಂಗಳ ಹಿಂದೆ ಅನಾಸ್ ಹಾಗೂ 'ಟೈಗರ್ ಐ ಪಿ' ಎಂದು ಗುರುತಿಸಿಕೊಂಡಿರುವ ಆತನ ತಂಡ, ಇಡೀ ಆಫ್ರಿಕಾ ಉಪಖಂಡವೇ ಬೆಚ್ಚಿ ಬೀಳುವಂಥ ತನಿಖಾ ವರದಿಯೊಂದನ್ನು ಇಲ್ಲಿನ ಜನರ ಮುಂದಿಟ್ಟಿತು. ಅದು ಘಾನ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಭ್ರಷ್ಟತೆ ಕುರಿತಾಗಿದ್ದು. ಸುಮಾರು 34 ಜಡ್ಜ್‍ಗಳು ಹಾಗೂ 160 ಕ್ಕೂ ಹೆಚ್ಚು ನ್ಯಾಯಾಂಗ ಸಿಬ್ಬಂದಿ ಲಂಚ ತೆಗೆದುಕೊಂಡಿದ್ದನ್ನು ಅನಾಸ್ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ. ಘಾನದ ಒಬ್ಬೊಬ್ಬ ಜಡ್ಜ್‍ಗಳನ್ನು ಭ್ರಷ್ಟತೆಯ ಖೆಡ್ಡಾಕ್ಕೆ ಕೆಡವುತ್ತಾ ಹೋಗಲು ಆತನ ತಂಡ ತೆಗೆದುಕೊಂಡಿದ್ದು ಎರಡು ವರ್ಷಗಳು. ಕೊನೆಗೆ ಅವರ ಬಳಿ ಗುಡ್ಡೆಯಾಗಿದ್ದು 900 ಗಂಟೆಗಳ ರಹಸ್ಯ ಕಾರ್ಯಾಚರಣೆಯ ವೀಡಿಯೊ. ಕೆಲವು ಹೆಸರಾಂತ ಸುಪ್ರಿಂ ಕೋರ್ಟ್ ಜಡ್ಜ್‍ಗಳಿಗೆ ಅವರ ಕಾರಿನಲ್ಲೇ ಲಂಚ ನೀಡುವ ದೃಶ್ಯಗಳಿದ್ದವು. ಇನ್ನು ಕೆಲವರಿಗೆ ಮನೆಯಲ್ಲಿ ಲಂಚ ಕೊಟ್ಟಿದ್ದೂ ಇತ್ತು. ಸಾಲದ್ದಕ್ಕೆ ಘಾನದ ಸಂಪ್ರದಾಯದಂತೆ ಒಂದು ಮೇಕೆಯನ್ನೂ ಒಬ್ಬ ಜಡ್ಜ್‍ಗೆ ಅನಾಸ್ ಬಳುವಳಿ ನೀಡಿದ್ದು ಸೆರೆ ಸಿಕ್ಕಿತ್ತು. ನ್ಯಾಯಾಲಯದ ನೌಕರನೊಬ್ಬ ಮಹಿಳೆಯೊಬ್ಬರನ್ನು ಹಾಸಿಗೆಗೆ ಕರೆದಿದ್ದ ದೃಶ್ಯಗಳು ಇದ್ದವು. ಇವೆಲ್ಲವನ್ನೂ ಎಡಿಟ್, ಮಾಡಿ ಮೂರು ಗಂಟೆಗಳ ನ್ಯೂಸ್ ಫಿಲ್ಮ್ ರೂಪದಲ್ಲಿ ಜನರಿಗೆ ತೋರಿಸಿತ್ತು ಅನಾಸ್ ತಂಡ.

ಸಿನೆಮಾ ಪ್ರದರ್ಶನಕ್ಕೂ ಮುನ್ನವೇ ಸ್ಥಳೀಯ ಪತ್ರಿಕೆಗಳು, ಅನಾಸ್- ತನಿಖಾ ವರದಿಯ ವಿಚಾರಗಳನ್ನು ಬಿಡಿ ಬಿಡಿಯಾಗಿ ಪ್ರಕಟಿಸಿದ್ದವು. ಸಿನೆಮಾ ಪ್ರದರ್ಶನ ಕೂಡ ಅಷ್ಟೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು.

ಚರ್ಚೆ ಆಚೆಗೆ: 

ಅನಾಸ್ ಪತ್ರಿಕೋದ್ಯಮ ಶೈಲಿಯ ಬಗ್ಗೆ ಎಲ್ಲರಿಗೂ ಸಂಪೂರ್ಣ ಸಹಮತ ಇದೆ ಅಂತೇನಿಲ್ಲ. ಅಲ್ಲಿನ ಕೆಲವು ಸ್ಥಳೀಯ ಪತ್ರಕರ್ತರಿಗೆ ಅನಾಸ್ ನಡೆಸುವ ರಹಸ್ಯ ಕಾರ್ಯಚರಣೆ ಕುರಿತು ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಆದರೆ, ಅನಾಸ್ "ರೋಗ ದೊಡ್ಡದಾಗಿದ್ದರೆ, ಅದಕ್ಕೆ ಕೊಡು ಟ್ರೀಟ್ ಮೆಂಟ್ ಕೂಡ ಅಷ್ಟೇ ಪ್ರಬಲವಾಗಿರಬೇಕು,'' ಎಂದು ನಂಬಿಕೊಂಡಾತ. ಇಂತಹ ಚರ್ಚೆ, ಮಾತುಗಳ ಆಚೆಗೂ ಅನಾಸ್ ವೃತ್ತಿ ಬದುಕು ಸಾಗಿ ಬರುತ್ತಿದೆ. ಕೆಲವು ವರ್ಷಗಳ ಹಿಂದೆ ಘಾನಕ್ಕೆ ಭೇಟಿ ನೀಡಿದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಭಾಷಣದಲ್ಲಿ ಅಸಾನ್ ಪತ್ರಿಕೋದ್ಯಮವನ್ನು ಹೊಗಳಿ ಕೊಂಡಾಡಿದ್ದರು.

ತನಿಖಾ ಪತ್ರಿಕೋದ್ಯಮ ಸಮಯ ಮತ್ತು ಹಣವನ್ನು ಬೇಡುವ ಕಸರತ್ತು. ನಮ್ಮಲ್ಲಿ ಆರ್‍ಟಿಐ ದಾಖಲೆಗಳನ್ನು ಇಟ್ಟುಕೊಂಡು ವರದಿ ಮಾಡುವುದೇ ತನಿಖಾ ಪತ್ರಿಕೋದ್ಯಮ ಎನ್ನಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಸ್ಟಿಂಗ್ ಆಪರೇಷನ್ ಎಂಬುದು ಸುಲಿಗೆಯ ಇನ್ನೊಂದು ತಂತ್ರ ಎಂಬ ಭಾವನೆ ಬೆಳೆದಿದೆ. ಈ ಸಮಯದಲ್ಲಿ ರಹಸ್ಯ ಕ್ಯಾಮೆರಾ, ಸರಕಾರಿ ದಾಖಲೆಗಳು ಹಾಗೂ ನಿಗೂಢತೆಯನ್ನು ಹೇಗೆ ಆರೋಗ್ಯಪೂರ್ಣವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಅನಾಸ್ ಉದಾಹರಣೆ.