samachara
www.samachara.com
ಇವರು (ಪತ್ರಕರ್ತರು) ದೂರದ ಬೆಟ್ಟ; ಹತ್ತಿರ ಬಂದರೆ ಡೇಟಿಂಗ್ ಕಷ್ಟ!
ಮೀಡಿಯಾ 2.0

ಇವರು (ಪತ್ರಕರ್ತರು) ದೂರದ ಬೆಟ್ಟ; ಹತ್ತಿರ ಬಂದರೆ ಡೇಟಿಂಗ್ ಕಷ್ಟ!

ನೀವು ಪತ್ರಕರ್ತ ಅಥವಾ ಪತ್ರಕರ್ತೆಯ ಬೆನ್ನು ಬಿದ್ದರೆ ನಿರಾಸೆ ಗ್ಯಾರೆಂಟಿ. ಯಾಕೆಂದರೆ, ಪತ್ರಕರ್ತರ ಮನಸ್ಥಿತಿ ಸಂಕೀರ್ಣವಾದುದು. ಅದನ್ನು ಅರ್ಥ ಮಾಡಿಕೊಳ್ಳುವುದು ಅದಕ್ಕಿಂತಲೂ ಕಾಂಪ್ಲೆಕ್ಸ್ ಆದ ಸಂಗತಿ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಜರ್ನಲಿಸಂ ಇಸ್ ಸೆಕ್ಸಿಯಸ್ಟ್ ಪ್ರೊಫೆಶನ್ ಅನ್ನೋ ಮಾತಿದೆ. ಹೌದು, ಒಳಗಿರುವವರ ಪಾಲಿಗೆ ಪತ್ರಿಕೋದ್ಯಮ ಸೆಕ್ಸಿಯೇ.

ನಾವು ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುತ್ತೇವೆ. ಗಣ್ಯರೊಂದಿಗೆ ಒಂದು ಗುಂಡು ಪಾರ್ಟಿ ಮಾಡುತ್ತೇವೆ. ಫೈವ್ ಸ್ಟಾರ್ ಹೊಟೇಲ್ಗಳಲ್ಲಿ ಪುಕ್ಕಟೆ ಊಟ ಮಾಡುತ್ತೇವೆ. ನಯಾಪೈಸೆ ಖರ್ಚಿಲ್ಲದೆ ಸಮಾಜದ ಐಶಾರಾಮಿ ಬದುಕನ್ನು ಅನುಭವಿಸುತ್ತೇವೆ. ಆದರೆ, ಅವನ್ನಷ್ಟೆ ಗಮನದಲ್ಲಿ ಇಟ್ಟುಕೊಂಡು ನೀವು ಪತ್ರಕರ್ತ ಅಥವಾ ಪತ್ರಕರ್ತೆಯ ಬೆನ್ನು ಬಿದ್ದರೆ ನಿರಾಸೆ ಗ್ಯಾರೆಂಟಿ. ಯಾಕೆಂದರೆ, ಪತ್ರಕರ್ತರ ಮನಸ್ಥಿತಿ ಸಂಕೀರ್ಣವಾದುದು. ಅದನ್ನು ಅರ್ಥ ಮಾಡಿಕೊಳ್ಳುವುದು ಅದಕ್ಕಿಂತಲೂ ಕಾಂಪ್ಲೆಕ್ಸ್ ಆದ ಸಂಗತಿ.

ಪತ್ರಕರ್ತರು ಅವರ ಕೆಲಸವನ್ನು ಅವರು ಎಂಜಾಯ್ ಮಾಡುತ್ತಾರೆ. ಹಾಗಂತ ಹೊರಗಿನವರ ಜತೆ ಅದನ್ನು ಹಂಚಿಕೊಳ್ಳುವುದು ಕಷ್ಟ. ಕೆಲವೊಮ್ಮೆ ಅವರು ನಿಮ್ಮ ಬದುಕಿನಲ್ಲಿ ದುಃಸ್ವಪ್ನವೂ ಆಗಿಬಿಡಬಹುದು ಎನ್ನುತ್ತವೆ ಕೆಲವು ಸಂಶೋಧನೆಗಳು. ಅಷ್ಟಕ್ಕೂ ಪತ್ರಕರ್ತ ಅಥವಾ ಪತ್ರಕರ್ತೆಯ ಜತೆ ಡೇಟಿಂಗ್, ಬದುಕು ಹಂಚಿಕೊಳ್ಳುವುದು ಕಷ್ಟ ಎಂಬುದಕ್ಕೆ ಹಲವು ಕಾರಣಗಳಿವೆ.

ಇವತ್ತು ಇಲ್ಲಿ ಅವುಗಳನ್ನು ಪಟ್ಟಿ ಮಾಡಿದ್ದೇವೆ. ಒಂದಿಷ್ಟು ಕಡ ತಂದವು; ಉಳಿದವು ಸ್ವಂತ ಅನುಭವಗಳು!

ಅನುಭವವೇ ಆಧಾರ:

ಪತ್ರಕರ್ತರಿಗೆ ಓದು, ತಿಳಿವಳಿಕೆ, ಜ್ಞಾನ ಇವೆಲ್ಲಕ್ಕಿಂತ ಮಿಗಿಲಾದದ್ದು ಸ್ವಂತ ಅನುಭವಗಳು. ಬದುಕು ಕಟ್ಟಿಕೊಡುವ ಅನುಭವವಗಳನ್ನೇ ಅವರು ಬರಹ ರೂಪಕ್ಕೆ ಇಳಿಸುತ್ತಾರೆ. ಇಲ್ಲವೇ ಚೆಂದದೊಂದು ಸ್ಟೋರಿ ಮಾಡುತ್ತಾರೆ. ಅದು ಅವರದ್ದೇ ಆಗಬೇಕು ಅಂತೇನಿಲ್ಲ. ಸಂಗಾತಿಯಾಗಿ ನಿಮ್ಮ ಅನುಭವವನ್ನೂ ಅವರು ಅಕ್ಷರ ರೂಪಕ್ಕೆ ತರುವುದಕ್ಕೆ ಹಿಂದೆ ಮುಂದೆ ನೋಡುವ ಜಾಯಮಾನ ಅವರದ್ದಲ್ಲ. ಹೀಗಾಗಿ, ಒಂದು ರೀತಿಯಲ್ಲಿ ಪತ್ರಕರ್ತರು ಮಾತ್ರವಲ್ಲ; ಅವರ ಹತ್ತಿರದವರ ಬದುಕೂ ಕೂಡ ಸಾರ್ವಜನಿಕ ಆಸ್ತಿ ಇದ್ದಂತೆಯೇ.

ಡೆಡ್ಲೈನ್ ಮುಖ್ಯ:

ಜಗತ್ತು ಮುಳುಗಿ ಹೋದರೂ, ಪತ್ರಕರ್ತರಿಗೆ ಅವರ ಡೆಡ್ಲೈನ್ ಮುಖ್ಯ, ಅಷ್ಟೆ. ನೀವು ಕಾಫಿ ಡೇಯಲ್ಲಿ ಕಾಯುತ್ತಾ ಕುಳಿತಿದ್ದರೆ, ಹೇಳಿದ ಸಮಯದಲ್ಲಿ ನಿಮ್ಮ ಪತ್ರಕರ್ತ ಸಂಗಾತಿ ಬರಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಕಿಲ್ಲ. ಪ್ರಾಮಾಣಿಕವಾಗಿ ನಿಮ್ಮನ್ನು ಭೇಟಿ ಮಾಡಲು ಹೊರಟ ಅವರಿಗೆ ಮಾರ್ಗ ಮಧ್ಯೆದಲ್ಲಿ ಕೆಲಸವೊಂದು ತಗಲಾಕಿಕೊಳ್ಳಬಹುದು. ಈ ಸಮಯದಲ್ಲಿ ಅವರು ನಿಮಗಿಂತ ಕೆಲಸವನ್ನೇ ಪ್ರಯಾರಿಟಿ ಮಾಡಿಕೊಳ್ಳುವ ಅಸಾಮಿಗಳು. ಹೀಗಾಗಿ, ಅದೆಷ್ಟೋ ಪತ್ರಕರ್ತರ ಖಾಸಗಿ ಬದುಕು ಮೂರಾಬಟ್ಟೆಯಾದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಸುಳ್ಳು ಹೇಳುವುದು ಕಷ್ಟ:

ಏನೇ ಹೇಳಿ ಸಂಬಂಧಗಳು ನಿಂತಿರುವುದು ಅಪಾಯಕಾರಿ ಅಲ್ಲದ ಸುಳ್ಳುಗಳ ಮೇಲೆ. ಅದರಲ್ಲಿ ಸಂಗಾತಿ ಜತೆ ಪೂರ್ತಿಯಾಗಿ ಸತ್ಯ ಹೇಳುವುದಕ್ಕಿಂತ ಸುಳ್ಳು ಹೇಳಿದರೆ ಹೆಚ್ಚು ಅನ್ಯೂನ್ಯತೆ ಇರುತ್ತದೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟ ವಿಚಾರ ಕೂಡ. ಆದರೆ ನಿಮ್ಮ ಸಂಗಾತಿಯಾಗಿ ಪತ್ರಕರ್ತರು ಇದ್ದರೆ, ಕಷ್ಟ ಕಷ್ಟ. ಅವರು ಸುಳ್ಳುಗಳನ್ನು ಗುರುತಿಸುವಲ್ಲಿ ಯಾವಾಗಲೂ, ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಫೋನ್ ಕರೆಯಲ್ಲೇ ಸಂದರ್ಶನ ಮಾಡುವವರಿಗೆ, ತಮ್ಮ ಹತ್ತಿರದವರ ಮಾತುಗಳ ಹಿಂದಿನ ಭಾವವನ್ನು ಅರಿಯುವುದು ಯಾವತ್ತಿಗೂ ಕಷ್ಟ ಅಲ್ಲ, ಅಲ್ವಾ?

ನೆನಪು ಜಾಸ್ತಿ:

ಪತ್ರಕರ್ತರು ನಿಮ್ಮ ಸಂಗಾತಿಯೇ ಆಗಿದ್ದರೂ ಕೊಂಚ ಎಚ್ಚರಿಕೆಯಿಂದ ವ್ಯವಹಾರ ಮಾಡುವುದು ಸೇಫು. ಅವರಿಗೆ ನೆನಪಿನ ಶಕ್ತಿ ಕೊಂಚ ಜಾಸ್ತಿ. ಹೀಗಾಗಿ, ನೀವು ಎಂದೋ ಹೇಳಿದ ವಿಚಾರವನ್ನು ಇನ್ನೆಂದೋ ನೆನಪಿಸಿಕೊಳ್ಳುವ ಜೀವಿಗಳು ಅವರು. ಹಾಗಂತ, ಆನಿವರ್ಸರಿಗಳನ್ನು, ಹುಟ್ಟಿದ ಹಬ್ಬಗಳನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದ್ದರೆ, ಈಗಲೇ ಕೈ ಬಿಟ್ಟುಬಿಡಿ. ಮೊದಲ ಮಹಾಯುದ್ಧ ಯಾವಾಗ ಕೇಳಿ, ಅವರು ಹೇಳುತ್ತಾರೆ. ಆದರೆ, ಅವರು ಹುಟ್ಟಿದ ದಿನಾಂಕ ಯಾವುದು ಎಂಬುದು ಸರಿಯಾಗಿ ನೆನಪಿರುವುದಿಲ್ಲ. ಅಂತಹ ವಿಚಿತ್ರ ಪ್ರಾಣಿ ಸಂಕುಲಕ್ಕೆ ಸೇರಿದ ಜೀವಿಗಳು ಅವರು!

ಪಕ್ಕಾ ಪ್ರಾಕ್ಟಿಕಲ್:

ಪತ್ರಕರ್ತರು ಬಹಳ ವಿಚಾರದಲ್ಲಿ ಬಹಳ ಪ್ರಾಕ್ಟಿಕಲ್. ಎಷ್ಟರ ಮಟ್ಟಿಗೆ ಎಂದರೆ, ಅವರ ಪ್ರೀತಿ ಪಾತ್ರರು ಕಳಿಸುವ ಪ್ರೇಮ ಸಂದೇಶಗಳಲ್ಲೂ ತಪ್ಪುಗಳನ್ನು ಹುಡುಕುವಷ್ಟು. ಹೆಚ್ಚು ಕಡಿಮೆ ರಸ್ತೆಯಲ್ಲಿ ವಾಹನಗಳ ನಂಬರ್ ಪ್ಲೇಟ್ ನೋಡಿದರೂ, ಅಲ್ಲೊಂದು ಪ್ರೂಫ್ ಮಿಸ್ಟೇಕ್ ಇದೆ ಎಂದು ಕಂಡು ಹಿಡಿಯವ ಮನಸ್ಥಿತಿ ಅವರದ್ದು. ಹೀಗಾಗಿ, ಅವರ ಜತೆ ಕೂಲ್ ಜಾಯಿಂಟ್ ಹೋಗಿ ಕುಳಿತರೂ, ತಲೆ ಇನ್ನೇನೋ ತಪ್ಪನ್ನೇ ಹುಡುಕುತ್ತಿರುತ್ತದೆ. ಹಾಗಂತ ಅದನ್ನು ಆ್ಯಬ್ಸೆಂಟ್ ಮೈಂಡ್ ಅಂದುಕೊಳ್ಳಬೇಡಿ.

ಅವರದ್ದೇ ಲೋಕ:

ಇದು ಪತ್ರಕರ್ತರನ್ನು ಬಾಳ ಸಂಗಾತಿಯನ್ನಾಗಿ ಪಡೆದವರ ಸಾಮಾನ್ಯ ದೂರು; ಇವರು ಮನೆಗೆ ಬಂದ ಮೇಲೂ ಫೋನು, ಕಂಪ್ಯೂಟರ್ನಲ್ಲೇ ಕಾಲ ಕಳೆಯುತ್ತಾರೆ ಎಂಬುದು. ಹಾಗಂತ ಅವರು ಹೊಸ ಸಂಗಾತಿಯನ್ನು ಹುಡುಕುತ್ತಿರುತ್ತಾರೆ ಅಂತಲ್ಲ. ನಿಮಗೆ ಯಾವ ಆಸಕ್ತಿಯನ್ನು ಮೂಡಿಸದ ನ್ಯೂಸ್ ಸೈಟ್ನಲ್ಲಿ ಅವರು ಕಳೆದು ಹೋಗಿರುತ್ತಾರೆ. ಫೇಸ್ಬುಕ್ ಮುಂದೆ ಕುಳಿತು ಸುದ್ದಿ ಹುಡುಕುತ್ತಿರುತ್ತಾರೆ. ಟಿಂಡರ್ ಆ್ಯಪ್ನಲ್ಲೂ ಸ್ಕೂಪ್ ಸಿಗಬಹುದಾ ಎಂದು ನೋಡುವಷ್ಟು ರಸಿಕರು ಅವರು!

ಇರೋದ್ರಲ್ಲಿ ಸುಖ ಇಲ್ಲ:

ನಿಮಗೆ ಪತ್ರಕರ್ತ ಸಂಗಾತಿ ಇದ್ದರೆ ಇದನ್ನೊಮ್ಮೆ ಪರೀಕ್ಷೆ ಮಾಡಿ ನೋಡಿ. ಅವರಿಗೆ ನೀವು ಇರುವ ಪ್ರದೇಶದಲ್ಲಿ ಒಳ್ಳೆಯ ಹೋಟೆಲ್, ರೆಸ್ಟೋರೆಂಟ್, ಜಾಯಿಂಟ್ಗಳು ಎಲ್ಲಿವೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಹಾಗಂತ, ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ ಅಂತಲ್ಲ. ಒಂದು ವೇಳೆ, ನಿಮ್ಮ ಮುನಿಸಿಗೆ ಹೆದರಿ ಕರೆದುಕೊಂಡು ಹೋದರು, ಅಲ್ಲಿನ ಫುಡ್ ಎಂಜಾಯ್ ಮಾಡಲ್ಲ. ಬದಲಿಗೆ, ಏನೋ ಒಂದಷ್ಟು ಹೊಸ ಕಂಪ್ಲೇಂಟ್ ಮಾಡಿ, ತಿಂದಿದ್ದೂ ಜೀರ್ಣವಾಗಲು ಬಿಡದ ಗಿರಾಕಿಗಳು ಅವರು.

ಏಕಾಂತ ಪ್ರಿಯರು:

ಜನರ ನಡುವೆ ಅಪಾರ ಸಂಪರ್ಕ ಹೊಂದಿರುವವರು ಒಳ್ಳೆಯ ಪತ್ರಕರ್ತರಾಗುತ್ತಾರೆ ಎಂಬುದು ಉದ್ಯಮದ ಒಳಗಿರುವ ಮಾತು. ಇದು ನಿಜ ಕೂಡ. ಹಾಗಂತ ಪತ್ರಕರ್ತರು ಹೆಚ್ಚು ಸಮಯ ಜನರ ನಡುವೆ ಕಳೆದು ಹೋಗುವ ಮನಸ್ಥಿತಿಯವರಲ್ಲ. ಅವರಿಗೆ ಏಕಾಂತ ಬೇಕೆ ಬೇಕು. ಮನೆಗೆ ಬಂದರೂ, ತಮ್ಮ ಪಾಡಿಗೆ ತಾವು ಇರುವುದನ್ನು ಅವರು ಇಷ್ಟಪಡುತ್ತಾರೆ. ಇದನ್ನು ತಪ್ಪಾಗಿ ಗ್ರಹಿಸಿ, ಅವರನ್ನು 'ಮೂಡಿ' ಎಂದುಕೊಂಡರೆ ನೀವೇ ತಪ್ಪು ಹಾದಿಯಲ್ಲಿ ಸಾಗುತ್ತಿರುತ್ತೀರಿ.

ಕೊನೆಯಲ್ಲಿ, ಪತ್ರಕರ್ತರನ್ನು ಪತ್ರಕರ್ತರು ಮಾತ್ರವೇ ಅರ್ಥಮಾಡಿಕೊಳ್ಳಬಲ್ಲರು. ಬಹುಶಃ ಈ ಕಾರಣಕ್ಕೋ, ಅಥವಾ ಹೊರಗಿನ ಸಂಬಂಧಗಳು ಹೆಚ್ಚು ದಿನ ಬಾಳಿಕೆ ಬರದ ಕಾರಣಕ್ಕೋ, ಮಾಧ್ಯಮದೊಳಗೇ ಬಾಳ ಸಂಗಾತಿಗಳನ್ನು ಇವರು ಆಯ್ಕೆ ಮಾಡಿಕೊಳ್ಳುವುದು ಜಗತ್ತಿನಾದ್ಯಂತ ನಡೆದುಕೊಂಡು ಬರುತ್ತಿರುವ ಟ್ರೆಂಡ್. ಅಂದಹಾಗೆ, ಇವಿಷ್ಟು ನಾವು ಪಟ್ಟಿ ಮಾಡಿದ ಸಂಗತಿಗಳು. ಇದನ್ನೂ ಮೀರಿ ನಿಮಗೇನಾದರೂ ಅನುಭವಗಳಿದ್ದರೆ ಹಂಚಿಕೊಳ್ಳಿ... ಒಂದಷ್ಟು ಜನರಿಗಾದರೂ ಸಹಾಯ ಆಗುತ್ತದೆ.