samachara
www.samachara.com
‘ವಿಶ್ವವಾಣಿ’ಯ ಮಿಸ್ಸಿಂಗ್ ಲಿಂಕ್ ಹಾಗೂ ಹೈಕಮಾಂಡ್ ತಲುಪಿದ ನಂಜುಂಡಿ ‘ಹೊಸ ಸಾಹಸ’!
ಮೀಡಿಯಾ 2.0

‘ವಿಶ್ವವಾಣಿ’ಯ ಮಿಸ್ಸಿಂಗ್ ಲಿಂಕ್ ಹಾಗೂ ಹೈಕಮಾಂಡ್ ತಲುಪಿದ ನಂಜುಂಡಿ ‘ಹೊಸ ಸಾಹಸ’!

2015 ಮೇ..ವಿಶ್ವೇಶ್ವರ ಭಟ್ಟರು 'ಕನ್ನಡ ಪ್ರಭ' ಹಾಗೂ 'ಸುವರ್ಣ ನ್ಯೂಸ್' ನಡೆಸುತ್ತಿರುವ ಏಷಿಯಾನೆಟ್ ಸಂಸ್ಥೆಯಿಂದ ಹೊರ ಬಿದ್ದಿದ್ದರು. 'ವಿಜಯ ಕರ್ನಾಟಕ'ದ ಆಡಳಿತ ಮಂಡಳಿಯೊಂದಿಗೆ ಕಹಿ ನೆನಪುಗಳನ್ನು ಹೊತ್ತು ಹೊರ ಬಂದಿದ್ದ ಭಟ್ಟರು ಮತ್ತು ತಂಡ ಹೊಸ ಹುಮ್ಮಸ್ಸಿನೊಂದಿಗೆ ರಾಜೀವ್ ಚಂದ್ರಶೇಖರ್ ಅವರ ಸಂಸ್ಥೆ ಕಟ್ಟುವ ಕೆಲಸಕ್ಕೆ ತೊಡಗಿಕೊಂಡಿದ್ದರು. ಆದರೆ, ಅಲ್ಲಿದ್ದಷ್ಟು ದಿನ ಒಂದಷ್ಟು ಭರವಸೆ, ತಮ್ಮ ಸುತ್ತಮುತ್ತಲಿನವರಿಗೆ ಕೆಲಸ ಕೊಡಿಸಿದ್ದು ಬಿಟ್ಟರೆ, ಪತ್ರಿಕೋದ್ಯಮದಲ್ಲಿ ಹಿಂದೆ ತಂದ ಸಂಚಲವನ್ನು ಮೂಡಿಸುವಲ್ಲಿ ಭಟ್ಟರು ಸೋತು ಹೋಗಿದ್ದರು. ಆದರೂ, ಪ್ರಯತ್ನಗಳು ಜಾರಿಯಲ್ಲಿತ್ತು. ಒಂದು ದಿನ ಆಡಳಿತ ಮಂಡಳಿ ಅವರನ್ನು ಕಳಿಸಿಕೊಡುವ ತೀರ್ಮಾನ ತೆಗೆದುಕೊಳ್ಳುವವರೆಗೆ....

ಮುಂದೆ, ಏಷಿಯಾನೆಟ್ ಸಂಸ್ಥೆಯಿಂದ ಹೊರಬಿದ್ದ ಬಳಿಕ ಭಟ್ಟರ ಮುಂದಿನ ನಡೆ ಏನು ಎಂಬುದು ಎಲ್ಲರ ಕುತೂಹಲದ ಪ್ರಶ್ನೆಯಾಗಿ, ಅಷ್ಟೆ ನಿಗೂಢವಾಗಿತ್ತು. ಹೀಗಿರುವಾಗಲೇ, ಅದೊಂದು ದಿನ ವಾಟ್ಸ್ ಆಪ್ ಸಂದೇಶವೊಂದು ಎಲ್ಲ ಕಡೆ ಹರಿದಾಡತೊಡಗಿತು. ಅದೊಂದು ಆಡಿಯೋ ಕ್ಲಿಪ್. ಡೌನ್ ಲೋಡ್ ಮಾಡಿಕೊಂಡು ಕೇಳಿದರು, 'ಭಟ್ಟರು- ವಿಶ್ವೇಶ್ವರ ಭಟ್ಟರು' ಎಂಬ ವೃತ್ತಿಪರ ಸಿನಿಮಾ ರೀತಿಯ ಹಾಡು. ಭಟ್ಟರು ಈ ಹಿಂದೆ ಕೆಲಸ ಮಾಡಿದ ಪತ್ರಿಕೆಗಳಿಗೆ ನೀಡಿದ ಸೇವೆಯ ಗುಣಗಾನ ಅದರಲ್ಲಿತ್ತು. ಶೀಘ್ರದಲ್ಲೇ ‘ವಿಕ್ರಮ’ನಾಗಿ ತೆರೆಯ ಮೇಲೆ ಬರುತ್ತಾರೆ ಎಂಬ ಸಂದೇಶ ಹಾಡಿನಲ್ಲಿತ್ತು. ಆ ಕಾಲಕ್ಕೆ ಓಡುತ್ತಿದ್ದ ಗಾಸಿಪ್, ಭಟ್ಟರು ‘ವಿಕ್ರಮ’ ಪತ್ರಿಕೆ ಮಾಡುತ್ತಾರಂತೆ ಎಂಬುದು.

ಪತ್ರಿಕೆ ಕಟ್ಟುವ ಸಾಹಸ'

ಕನ್ನಡ ಪ್ರಭ' ಬಿಟ್ಟ ಭಟ್ಟರು ನಿರುದ್ಯೋಗಿಯಾಗಿದ್ದರು. ಅದಕ್ಕಿಂತ ಹೆಚ್ಚಾಗಿ, ಅವರ ಸ್ಥಾನ ಎಲ್ಲಿಯೂ ಖಾಲಿ ಇರಲಿಲ್ಲ. ಸ್ವಂತಕ್ಕೊಂದು ಮಾಧ್ಯಮವನ್ನು ಹುಟ್ಟು ಹಾಕುವ ಅನಿವಾರ್ಯತೆ ಬಿತ್ತು. ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಭವ್ಯ ಮನೆಯಲ್ಲೇ ಕಚೇರಿಯನ್ನು ಶುರುಮಾಡಿದರು. ಇದೊಂತರ ಸ್ವೀವ್ ಜಾಬ್ಸ್ ತನ್ನ ಮನೆಯ ಗ್ಯಾರೇಜಿನಲ್ಲಿ 'ಆಪಲ್' ಕಂಪನಿ ಶುರುಮಾಡಿದಂತೆ ಎಂದು ಭಟ್ಟರ ಕ್ರೀಯಾಶೀಲತೆಯ ಬಗ್ಗೆ ನಂಬಿಕೆ ಇಟ್ಟವರು ಹೇಳತೊಡಗಿದರು.

ಭಟ್ಟರ ಈ ಹೊಸ ಸಾಹಸಕ್ಕೆ ಅವರ ಸಂಬಂಧಿ ಹಾಗೂ ಒಡನಾಡಿ ವಿನಾಯಕ ಭಟ್ ಮೂರೂರು, ರಾಧಾಕೃಷ್ಣ ಭಡ್ತಿ, 'ಸುವರ್ಣ ನ್ಯೂಸ್'ನಿಂದ ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ಮತ್ತಿತರರು ಜತೆಯಾದರು. ಈ ಸಮಯದಲ್ಲಿ ಭಟ್ಟರು 'ವಿಜಯ ಕರ್ನಾಟಕ'ದಲ್ಲಿದ್ದಾಗ ಕಟ್ಟಿಕೊಂಡಿದ್ದ ಹಳೇ ತಂಡ ಮತ್ತೆ ಒಂದಾದರೆ ಗೆಲುವು ಗ್ಯಾರೆಂಟಿ ಎಂದು ಯಾರೋ ಜ್ಯೋತಿಷಿಯೊಬ್ಬ ಹೇಳಿದ್ದಾಗಿ ಸುದ್ದಿಯಾಗಿತ್ತು.

ಇದಕ್ಕೆ ಪೂರಕ ಎಂಬಂತೆ ಭಟ್ಟರ ಕಡೆಯಿಂದ ತಮ್ಮ ಹಳೆಯ ಸಂಗಾತಿಗಳಾದ, ಇವತ್ತು 'ಡಿಜಿಟಲ್ ಕನ್ನಡ' ನ್ಯೂಸ್ ಪೋರ್ಟಲ್ ಹುಟ್ಟುಹಾಕಿರುವ ಪಿ. ತ್ಯಾಗರಾಜ್, 'ಸುವರ್ಣ ನ್ಯೂಸ್'ನ ಹಿರಿಯ ಸಂಪಾದಕರಾಗಿರುವ ಎಲ್. ಪ್ರಕಾಶ್, 'ಸಂಯುಕ್ತ ಕರ್ನಾಟಕ'ದ ಸಂಪಾದಕರಾಗಿರುವ ಕೆ. ಎಸ್. ಜಗನ್ನಾಥ್ ಅವರುಗಳಿಗೂ ಕರೆ ಹೋಗಿತ್ತು ಎಂಬ ಅಂತೆ ಕಂತೆಗಳಿವೆ. ಆದರೆ ಪತ್ರಿಕೋದ್ಯಮದಲ್ಲಿ ಮುರಿದ ಮನಸ್ಸುಗಳು ಕನ್ನಡಿ ಹೋಳುಗಳಂತೆ. ಹಳೇ ತಂಡ ಒಟ್ಟಾಗಲಿಲ್ಲ. ಭಟ್ಟರು ತಮ್ಮ ಹೊಸ ತಂಡದೊಂದಿದೆ ಒಂದಷ್ಟು ಯುವ ಪತ್ರಕರ್ತರನ್ನು ಕಟ್ಟಿಕೊಂಡು ತಮ್ಮ ಕೆಲಸವನ್ನು ಶುರುಮಾಡಿಯೇ ಬಿಟ್ಟರು.

ತೆರೆಗೆ ಬಂದ ನಂಜುಂಡಿ:

ಮೊದಲು ಪತ್ರಿಕೆ ಮಾಡುತ್ತಾರಂತೆ. ನಂತರ ಮ್ಯಾಗಜಿನ್ ಒಂದನ್ನು ತರುವ ಇರಾದೆಯೂ ಭಟ್ಟರಿಗೆ ಇದೆಯಂತೆ. ಇದಾದ ನಂತರ ಆರು ತಿಂಗಳೊಳಗೆ ಸುದ್ದಿ ವಾಹಿನಿಯೊಂದನ್ನು ಶುರುಮಾಡುತ್ತಾರಂತೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆಲ್ಲಾ ಉತ್ತರಿಸುವ ಗೋಜಿಗೆ ಹೋಗದ ಭಟ್ಟರು, ತಮ್ಮ ತಂಡವನ್ನು ಅಣಿಗೊಳಿಸುವ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಅವರಿಗದು ಕನಸನ್ನು ನನಸು ಮಾಡಿಕೊಳ್ಳುವ ಕಾಲಘಟ್ಟ. ಕೊನೆಗೊಂದು ದಿನ ಭರ್ಜರಿ ಪ್ರಚಾರವನ್ನು ಬೆನ್ನಿಗುಟ್ಟುಕೊಂಡು 'ವಿಶ್ವವಾಣಿ' ಮಾರುಕಟ್ಟೆಗೆ ಬಂತು.

ಅಲ್ಲಿಯವರೆಗೂ ಕೆ. ಪಿ. ನಂಜುಂಡಿ ಎಂಬ ಕೋಲಾರ ಮೂಲಕ ಚಿನ್ನದ ವ್ಯಾಪಾರಿ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿ 'ವಿಶ್ವವಾಣಿ'ಯ ಜತೆ ಇದ್ದಾರೆ ಎಂಬ ಸುಳಿವು ಸಿಕ್ಕಿರಲಿಲ್ಲ. ಪತ್ರಿಕೆ ಬಿಡುಗಡೆಗೆ ಕೆಲವೇ ದಿನಗಳ ಹಿಂದೆಯಷ್ಟೆ ಈ ಸುದ್ದಿ ಸೋರಿಕೆಯಾಗುವಂತೆ ನೋಡಿಕೊಳ್ಳಲಾಗಿತ್ತು.

ಯಾವಾಗ, ವಿಶ್ವೇಶ್ವರ ಭಟ್ಟರ ಸಾಹಸದಲ್ಲಿ ನಂಜುಂಡಿ ಹೆಸರು ಕೇಳಿಬಂತೋ, ಒಂದು ವಲಯದಲ್ಲಿ ಅಚ್ಚರಿ, ಪ್ರಶ್ನೆಗಳು ಏಕಕಾಲಕ್ಕೆ ಹುಟ್ಟಿಕೊಂಡವು. ಭಟ್ಟರ ರಾಜಕೀಯ ನಿಲುವುಗಳಿಗೂ, ನಂಜುಂಡಿಯ ನಿಲುವುಗಳಿಗೂ ಸಂಬಂಧ ಕಲ್ಪಿಸಿಕೊಂಡು ಗೊಂದಲಕ್ಕೀಡಾದರು. ಹೀಗಿದ್ದೂ, ಜನವರಿ 15ರಂದು 'ವಿಶ್ವವಾಣಿ' ಪತ್ರಿಕೆ ಹೊರ ಬಂದಾಗ ಮಾಸ್ಟ್ ಹೆಡ್ನಲ್ಲಿ 'ಕೆ.ಪಿ. ನಂಜುಂಡಿ ಹೊಸ ಸಾಹಸ, ವಿಶ್ವೇಶ್ವರ ಭಟ್ ಹೊಸ ಪತ್ರಿಕೆ' ಎಂಬ ಸಾಲುಗಳು ಸ್ಥಾನ ಪಡೆದುಕೊಂಡಿದ್ದವು.

ಮಿಸ್ಸಿಂಗ್ ಲಿಂಕ್:

'ವಿಶ್ವವಾಣಿ' ಪತ್ರಿಕೆ ತನ್ನ ಮೊದಲ ದಿನವೇ ಸಿದ್ದರಾಮಯ್ಯ ಸರಕಾರ ವಿರೋಧಿಸಿ ಅಂಕಣವನ್ನು ಪ್ರಕಟಿಸಿತು. ಮುಂದಿನ ದಿನಗಳಲ್ಲಿ ಇದು ಸಿದ್ದರಾಮಯ್ಯ ಮೀರಿ ಕಾಂಗ್ರೆಸ್ ವಿರೋಧಿ, ಸಂಘಪರಿವಾರದ ಅಜೆಂಡಾಗಳಿಗೆ ಹೆಚ್ಚು ಸ್ಥಾನ ಇರುವ ಪತ್ರಿಕೆ ಎಂಬ 'ಸಂಪಾದಕೀಯ ನಿಲುವು' ಪುಟಪುಟಗಳಲ್ಲೂ ವ್ಯಕ್ತವಾಗತೊಡಗಿತು. ಒಂದು ಹಂತದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆ ಕೂಡ.

ಪತ್ರಿಕೆಗೆ ಹಣ ಹಾಕಿದ ನಂಜುಂಡಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ, ಅವರ ಪಾಲಿರುವ 'ಪತ್ರಿಕೆ' ವಿರುದ್ಧ ನಿಲುವು ಹೊಂದಿರುವುದು ಪತ್ರಿಕೋದ್ಯಮದ ಹೊಸ ಸಾಧ್ಯತೆಯಂತೆ ಕಾಣಿಸುತ್ತಿತ್ತು. ಆದರೆ, ಪತ್ರಿಕೆ ಭಾವಿಸಿದ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡಲಿಲ್ಲ. ಇವತ್ತು 'ವಿಶ್ವವಾಣಿ' ಪ್ರಸರಣ ಸಂಖ್ಯೆ 22 ಸಾವಿರ ಎಂದು ಮೂಲಗಳು ಹೇಳುತ್ತವೆ. ಇದು ಕೊಂಚ ಹೆಚ್ಚಿದ್ದರೂ ಇರಬಹುದು.

ಕಾಂಗ್ರೆಸ್ ವಲಯದಲ್ಲಿ:

'ವಿಶ್ವವಾಣಿ'ಯ ಈ ನಡೆಯ ನಡುವೆಯೇ ಕೆಪಿಸಿಸಿ ಮಟ್ಟದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನಂಜುಂಡಿ ಎಂಎಲ್ಸಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿರುವ ವಿಚಾರವೂ ಚರ್ಚೆಯಾಗಿದೆ. ಅವರ ವಿರೋಧಿಗಳು, 'ವಿಶ್ವವಾಣಿ' ಪತ್ರಿಕೆಯಲ್ಲಿ ಈವರೆಗೆ ಬಂದ ಕಾಂಗ್ರೆಸ್, ನೆಹರೂ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರೋಧಿ ಬರಹಗಳನ್ನೆಲ್ಲಾ ಕಲೆ ಹಾಕಿಸಿ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿಸಿ, ಸೀದಾ ಹೈಕಮಾಂಡ್ ತಲುಪಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಇದರಿಂದಾಗಿ 'ವಿಶ್ವವಾಣಿ' ಪತ್ರಿಕೆ ವಿಚಾರದಲ್ಲಿ ಕೆ. ಪಿ. ನಂಜುಂಡಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಗುಲ್ಲೆದ್ದಿದೆ. ಇದಕ್ಕೆ ಪೂರಕ ಎಂಬಂತೆ ಪತ್ರಿಕೆ ಮಾಸ್ಟ್ ಹೆಡ್ ಅಲಂಕರಿಸಿದ್ದ ಜಂಟಿ ಹೆಸರುಗಳುಳ್ಳ ವಾಕ್ಯ ಕಣ್ಮರೆಯಾಗಿದೆ. ಈ ಕುರಿತು ‘ಸಮಾಚಾರ’ ನಂಜುಡಿಯವರನ್ನು ಸಂಪರ್ಕಿಸಿದಾಗ, "ಅದೆಲ್ಲಾ ಸುಳ್ಳು" ಎಂದರು. ವಿಶ್ವೇಶ್ವರ ಭಟ್ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.ಈ ವರದಿ ಸಿದ್ಧಪಡಿಸುತ್ತಿದ್ದ ಕೊನೆಯ ಗಳಿಗೆಯಲ್ಲಿ 'ವಿಶ್ವವಾಣಿ'ಯನ್ನು ಹತ್ತಿರದಿಂದ ಬಲ್ಲ ಮೂಲಗಳಿಂದ ವಾಟ್ಸ್ ಆಪ್ನಲ್ಲಿ ಈ ಫೊಟೋ 'ಸಮಾಚಾರ'ಕ್ಕೆ ತಲುಪಿದೆ. ಇದನ್ನು ತೆಗೆದ ದಿನಾಂಕವೂ ಸ್ಪಷ್ಟವಾಗಿ ಕಾಣಿಸುವಂತಿದೆ. ಮಾಧ್ಯಮ ವಲಯದಲ್ಲಿ ಕಳೆದ ಒಂದು ವಾರದಿಂದ 'ವಿಶ್ವವಾಣಿ' ಬಗ್ಗೆ ಹಬ್ಬುತ್ತಿರುವ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಇದಾ? ಗೊತ್ತಿಲ್ಲ.