‘ಪನಾಮ ಪೇಪರ್ಸ್’: ಸುದ್ದಿಯಾಗದೇ ಉಳಿದ ಸುದ್ದಿ ಆಚೆಗಿರುವ ಸಾಧ್ಯತೆಗಳು!
ಮೀಡಿಯಾ 2.0

‘ಪನಾಮ ಪೇಪರ್ಸ್’: ಸುದ್ದಿಯಾಗದೇ ಉಳಿದ ಸುದ್ದಿ ಆಚೆಗಿರುವ ಸಾಧ್ಯತೆಗಳು!

ಕಳೆದ ವಾರ ಜಗತ್ತಿನಾದ್ಯಂತ ಭಾರಿ ಸದ್ದು ಮಾಡಿದ್ದ 'ಪನಾಮ ಪೇಪರ್ಸ್' ಸುತ್ತ ಹೊಸ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಅವುಗಳಲ್ಲಿ ಪ್ರಮುಖವಾದುದ್ದು, 'ಪನಾಮ ಪೇಪರ್ಸ್' ಮೂಲಕ ಬಹಿರಂಗಪಡಿಸಿದ್ದ ಸುದ್ದಿಗಳಿಗಿಂತ, ಸುದ್ದಿಯಾಗದೇ ಉಳಿದ ದಾಖಲೆಗಳ ಬಗ್ಗೆ ಹಲವರ ಟೀಕೆಗಳು ವ್ಯಕ್ತವಾಗುತ್ತಿರುವುದು.ಇಂದು ಮಾಹಿತಿ ತಂತ್ರಜ್ಞಾನ ಬೆಳೆದು ನಿಂತಿದ್ದು, ಪತ್ರಿಕೋದ್ಯಮ ಮತ್ತು ತಂತ್ರಜ್ಞಾನ ಒಂದಾದರೆ ಏನೇನು ಮಾಡಬಹುದು, ಏನೆಲ್ಲಾ ಘಟಿಸುತ್ತವೆ ಎಂಬುದಕ್ಕೆ ಕಳೆದ ಆರು ವರ್ಷಗಳಲ್ಲಿ ಹೊರಬಂದ ದೊಡ್ಡ 'ಸ್ಟೋರಿ'ಗಳೇ ಸಾಕ್ಷಿ.

ಸರಕಾರಗಳ ಅಥವಾ ಕಂಪನಿಗಳ ದಾಖಲೆಗಳನ್ನು ದೊಡ್ಡ ಮಟ್ಟದಲ್ಲಿ ಸೋರಿಕೆ ಮಾಡುವ 'ಡಾಟ ಜರ್ನಲಿಸಂ' ಈಗ ಮುನ್ನೆಲೆಗೆ ಬಂದು ನಿಂತಿದೆ. ಹಾಗೆ ನೋಡಿದರೆ, ನಮ್ಮ ಕರ್ನಾಟಕದಲ್ಲಿ 3 ದಶಕಗಳ ಹಿಂದೆಯೇ ದಾಖಲೆಗಳನ್ನು ಇಟ್ಟುಕೊಂಡು ಅವತ್ತಿನ 'ಲಂಕೇಶ್ ಪತ್ರಿಕೆ' ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಇರಸು ಮುರುಸು ಮಾಡಿತ್ತು. ಅವತ್ತು ಆ ದಾಖಲೆಗಳನ್ನು 'ಲಂಕೇಶ್ ಪತ್ರಿಕೆ'ಗೆ ತಲುಪಿಸಿದವರು ವೈ. ಎಸ್. ವಿ. ದತ್ತಾ ಎಂಬ ಜನಪ್ರಿಯ ಗಾಳಿ ಸುದ್ದಿ ಇದೆ.

ಇದನ್ನು ಪಕ್ಕಕ್ಕಿಟ್ಟು ನೋಡಿದರೂ, ಅವತ್ತಿಗೆ ಕರ್ನಾಟಕದ ಬಹುದೊಡ್ಡ ತನಿಖಾ ವರದಿ 'ಬಾಟ್ಲಿಂಗ್ ಹಗರಣ'ವನ್ನು ಬಯಲಿಗೆಳೆಯಿತು. ಇದೇ ರೀತಿ, 1970ರ ಸುಮಾರಿಗೆ ಅಮೆರಿಕಾದ ನೌಕಾದಳದಲ್ಲಿ ಅಧಿಕಾರಿಯಾಗಿದ್ದ ಡೇನಿಯಲ್ ಎಲ್ಸ್ಬರ್ಗ್ ವಿಯಟ್ನಾಂ ಯುದ್ಧಕ್ಕೆ ಸಂಬಂಧಿಸಿದ ಸುಮಾರು 7 ಸಾವಿರ ದಾಖಲೆಗಳನ್ನು 'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಗೆ ತಲುಪಿಸಿದ್ದ. ಆ ಸುದ್ದಿ ಹೊರಬಿದ್ದ ನಂತರ 'ಪೆಂಟಗಾನ್ ಪೇಪರ್ಸ್' ಎಂದೇ ಪ್ರಸಿದ್ಧವಾಗಿದ್ದವು.

ಮುಂದೆ, ಡೇನಿಯಲ್ ವಿರುದ್ಧ ಗಂಭೀರ ಆರೋಪ ಹೊರಿಸಲಾಯಿತಾದರೂ, ಮುಂದಿನ ದಿನಗಳಲ್ಲಿ ವಿಚಾರಣೆ ಹಂತದಲ್ಲಿ ಆರೋಪಗಳನ್ನು ಕೈ ಬಿಡಲಾಯಿತು.ಇದಾದ ನಂತರ, ದೊಡ್ಡ ಪ್ರಮಾಣದ ದಾಖಲೆಗಳನ್ನು ಇಟ್ಟುಕೊಂಡು ಪತ್ರಿಕೋದ್ಯಮದ ಸರಣಿ ವರದಿಗಳು ಹೊರಬಂದಿದ್ದು 2010ರ ಸುಮಾರಿಗೆ. ಜ್ಯೂಲಿಯನ್ ಅಸಾಂಜೆ ಸ್ಥಾಪಿಸಿದ 'ವಿಕಿಲೀಕ್ಸ್' ಸಂಸ್ಥೆ ಕೆಲವು ಪ್ರಮುಖ ಪತ್ರಿಕೆಗಳ ಸಹಯೋಗದೊಂದಿಗೆ, ಜುಲೈ ತಿಂಗಳಿನಲ್ಲಿ 'ಅಫ್ಘಾನ್ ವಾರ್ ಫೈಲ್ಸ್' ಬಿಡುಗಡೆ ಮಾಡಿತು. ಇದರ ಬೆನ್ನಲ್ಲೇ, ಮೂರು ತಿಂಗಳ ಅಂತರದಲ್ಲಿ, 'ಇರಾನ್ ವಾರ್ ಲಾಗ್ಸ್' ಬಿಡುಗಡೆ ಮಾಡಿತು ವಿಕಿಲೀಕ್ಸ್. ಇದು ಮುಂದೆ ಅರಬ್ ದೇಶಗಳಲ್ಲಿ ಯುವಕರ ಜಾಗೃತಿಗೆ ಕಾರಣವಾಯಿತು.

ಟ್ಯುನೇಷಿಯಾದಿಂದ ಆರಂಭವಾದ ಬದಲಾವಣೆಯ ಬಿರುಗಾಳಿ ಇವತ್ತು 'ಅರಬ್ ಸ್ಪ್ರಿಂಗ್' ಹೆಸರಿನಲ್ಲಿ ಇತಿಹಾಸದಲ್ಲಿ ದಾಖಲಾಗಿ ಹೋಗಿದೆ. ಇದಾದ ಮೇಲೆ ಹೊರಬಂದಿದ್ದು ಎಡ್ವರ್ಡ್ ಸ್ನೋಡೆನ್ ಬಹಿರಂಗ ಪಡಿಸಿದ ದಾಖಲೆಗಳು. ಹಲವು ದೇಶಗಳ ನಾಯಕರೂ ಸೇರಿದಂತೆ, ತನ್ನದೇ ಜನರ ಮೇಲೆ ಗೂಢಚರ್ಯೆ ಮಾಡಲು ಅಮೆರಿಕಾ ಕೈಗೊಂಡಿದ್ದ ರಹಸ್ಯ ಯೋಜನೆಯನ್ನು ಈ ದಾಖಲೆಗಳು ಜಗತ್ತಿನ ಮುಂದೆ ಅನಾವಣಗೊಳಿದ್ದವು. ಇಲ್ಲಿ ಗಮನಿಸಬೇಕಿರುವ ಎರಡು ಪ್ರಮುಖ ಅಂಶಗಳಿವೆ.

ಒಂದು; ಸರಕಾರದ ಬಹುಮುಖ್ಯ ದಾಖಲೆಗಳನ್ನು ಅದರೊಳಗೇ ಇರುವವರು ಅಥವಾ ತಂತ್ರಜ್ಞಾನ ಬಳಸಿ ಸೋರಿಕೆ ಆದಾಗ, ಅದನ್ನು ಸುದ್ದಿ ಕೇಂದ್ರಕ್ಕೆ ತಂದು ನಿಲ್ಲಿಸುವ ಸಾಧ್ಯತೆಗಳು. ಈ ನಿಟ್ಟಿನಲ್ಲಿ, ವಿಕಿಲೀಕ್ಸ್ ತನಗೆ ಸಿಕ್ಕಿದ ದಾಖಲೆಗಳನ್ನು ಸಾರ್ವಜನಿಕಗೊಳಿಸುವ ಮುನ್ನ ದೊಡ್ಡ ಪತ್ರಿಕೆಗಳ ಜತೆ ಒಡಂಬಡಿಕೆಯೊಂದನ್ನು ಮಾಡಿಕೊಂಡಿತು. ಅಸೂಯೆಯಿಂದ, ಲಾಭಬಡುಕತನದಲ್ಲಿ ಬಿದ್ದು ನರಳುತ್ತಿದ್ದ ಪತ್ರಿಕೋದ್ಯಮದಲ್ಲಿ ಇದು ಅಪರೂಪದ ಬೆಳವಣಿಗೆಯಾಗಿತ್ತು. ಎರಡು; ದಾಖಲೆಗಳನ್ನು ಸಂಗ್ರಹಿಸುವ ಸಾಧ್ಯತೆಗಳು. ತಂತ್ರಜ್ಞಾನ ಬೆಳೆದು ನಿಂತಿದೆ. ಇವತ್ತು ಪತ್ರಕರ್ತನೊಬ್ಬ ಮಾಡಲು ಸಾಧ್ಯವಾಗದ ಕೆಲಸವನ್ನು ಸಾಮಾನ್ಯ ತಂತ್ರಜ್ಞನೊಬ್ಬ ಜಾರಿಗೊಳಿಸುವಷ್ಟು ಸಶಕ್ತನಾಗಿದ್ದಾನೆ. ಒಬ್ಬ ಹ್ಯಾಕರ್ ಮನಸ್ಸು ಮಾಡಿದರೆ, ಸಾರ್ವಜನಿಕ ಹಿತಾಸಕ್ತಿಯ ಲಕ್ಷಾಂತರ ದಾಖಲೆಗಳು ಹೊರಬರುತ್ತವೆ ಎಂಬುವುದಕ್ಕೆ ಇವತ್ತಿನ 'ಪನಾಮ ಪೇಪರ್ಸ್' ಸೇರಿದಂತೆ ಮೇಲಿನ ಅಷ್ಟೂ ಪ್ರಕರಣಗಳು ಸಾಕ್ಷಿ.ಈ ಹಿನ್ನೆಲೆಯಲ್ಲಿ 'ಪನಾಮ ಪೇಪರ್ಸ್' ಬೆಳವಣಿಗೆಯನ್ನು ಗಮನಿಸಬೇಕಿದೆ.

ಜರ್ಮನಿಯ ಪತ್ರಿಕೆ, 'ಝದ್ತಾಷ್ ಸಯ್ಥಾಂಗ್'ಗೆ ಮೊದಲ ಬಾರಿಗೆ ಪನಾಮದಲ್ಲಿ ಕೇಂದ್ರ ಕಚೇರಿ ಹೊಂದಿದ್ದ 'ಮೊಸೆಕ್ ಫೋನ್ಸೆಕಾ'ದ ದಾಖಲೆಗಳನ್ನು ಅನಾಮದೇಯನೊಬ್ಬ ತಲುಪಿಸಿದ್ದ ಎನ್ನಲಾಗುತ್ತಿದೆ. ಕಂಪ್ಯೂಟರ್ ಭಾಷೆಯಲ್ಲಿ ಹೇಳುವುದಾದರೆ, ಅದು ಸುಮಾರು 2.6 ಟಿಬಿ ಅಷ್ಟು; 11. 5 ಮಿಲಿಯನ್ ದಾಖಲೆಗಳು. ದಾಖಲೆಗಳಲ್ಲಿರುವ 'ಸ್ಟೋರಿ'ಗಳು ತನ್ನ ಸಾಮರ್ಥ್ಯ ಮೀರಿದ್ದು ಎಂಬುದು 'ಪತ್ರಿಕೆ'ಗೆ ಅರಿವಾಗುತ್ತಿದ್ದಂತೆ, ಅಮೆರಿಕಾ ಮೂಲದ 'ಇಂಟರ್ನ್ಯಾಷನಲ್ ಕಂನ್ಷಾರ್ಷಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್'(ಐಸಿಐಜೆ) ಗೆ ಸದರಿ ದಾಖಲೆಗಳನ್ನು ತಲುಪಿಸಿತು. ಐಸಿಐಜೆ, 76 ದೇಶಗಳ, 109 ಪತ್ರಿಕೆಗಳಿಂದ 376 ಪತ್ರಕರ್ತರನ್ನು ಕಲೆ ಹಾಕಿ ಈ ದಾಖಲೆಗಳನ್ನು ತನಿಖೆ ಮಾಡಲು 'ವರ್ಚುವಲ್' ಆಗಿರುವ ನ್ಯೂಸ್ ರೂಂ ಒಂದನ್ನು ಸೃಷ್ಟಿಸಿತು.

ಸುಮಾರು 14 ತಿಂಗಳ ಕಾರ್ಯಾಚರಣೆ ಅದು.'ಪನಾಮ ಪೇಪರ್ಸ್' ಹೆಸರಿನಲ್ಲಿ ಸುದ್ದಿ ಸ್ಫೋಟ ಮಾಡಲು ಏ. 3ರ ಮಧ್ಯಾಹ್ನ 2 ಗಂಟೆ (ಅಮೆರಿಕಾ ಕಾಲಮಾನ)ಯ ಮುಹೂರ್ತವನ್ನು ನಿಗದಿ ಮಾಡಲಾಗಿತ್ತು. ಆದರೆ, ಅದರೊಳಗೆ ಕೆಲಸ ಮಾಡಿದ ಸುದ್ದಿ ಸಂಸ್ಥೆಗಳ ಒಳಗಿನ ತೀವ್ರತೆ ಎಷ್ಟಿತ್ತು ಎಂದರೆ, ಏ. 3ರ ಬೆಳಗ್ಗೆಯೇ ಕೆಲವು ಮಾಧ್ಯಮಗಳು ಸುದ್ದಿ ಬಹಿರಂಗಪಡಿಸಿದವು. ಮುಂದಿನ 48 ಗಂಟೆಯೊಳಗೆ ಐಸ್ ಲ್ಯಾಂಡ್ ದೇಶದ ಪ್ರಧಾನಿ ರಾಜೀನಾಮೆ ಕೊಡಬೇಕಾಯಿತು.

ರಷ್ಯಾ ಪ್ರಧಾನಿ ಪುಟಿನ್, ಉತ್ತರ ಕೋರಿಯಾದ ಕಿಮ್ ಕುಟುಂಬ ಸೇರಿದಂತೆ ಹಲವರ ಹೆಸರುಗಳನ್ನು ಜಗತ್ತಿನ ಪ್ರತಿ ಮನೆಗಳಿಗೆ ತಲುಪಿಸುವ ಕೆಲಸ ನಡೆಯಿತು.ಈ ಸಮಯದಲ್ಲಿ ಗಮನಿಸಬೇಕಿರುವ ಕೆಲವು ವಿಚಾರಗಳನ್ನು ವಿಕಿಲೀಕ್ಸ್ ಈಗ ಪ್ರಸ್ತಾಪಿಸಿದೆ. ಸದ್ಯ ಲಂಡನ್ನಲ್ಲಿರುವ ಈಕ್ವೆಡಾರ್ ಎಂಬೆಸಿಯಲ್ಲಿ ಹೆಚ್ಚು ಕಡಿಮೆ ಗೃಹಬಂಧನದಲ್ಲಿರುವ ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸಾಂಜೆ ಈ ಬಗ್ಗೆ 'ಲಿಸ್ನಿಂಗ್ ಪೋಸ್ಟ್'ಗೆ ನೀಡಿರುವ ವಿಶೇಷ ಸಂದರ್ಶನ ಸುದ್ದಿಯಾಗದೇ ಉಳಿದ 'ಪನಾಮ ಪೇಪರ್ಸ್'ಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಇದರಲ್ಲಿ ಪ್ರಮುಖವಾದುದು, ತೆರಿಗೆ ತಪ್ಪಿಸಿಲು ಕಾರ್ಪೋರೇಟ್ ಸಂಸ್ಥೆಗಳು ಪನಾಮ ಮೂಲದ 'ಮೊಸೆಕ್ ಫೋನ್ಸೆಕಾ' ಕಂಪನಿ ಜತೆ ಮಾಡಿಕೊಂಡ ಒಪ್ಪಂದಗಳು ಯಾಕೆ ಬಹಿರಂಗವಾಗಲಿಲ್ಲ ಎಂಬ ವಿಚಾರ. ಮಾಧ್ಯಮ ದೊರೆ ರೂಪರ್ಟ್ ಮುರ್ಡೋಕ್ ಗೆ ಸಂಬಂಧ ಪಟ್ಟ ಸುದ್ದಿ ಯಾಕೆ ಬಹಿರಂಗವಾಗಲಿಲ್ಲ ಎಂಬ ಅಂಶ. ಹೀಗೆ, ನಾವು ನೋಡಿದ, ಕೇಳಿದ 'ಪನಾಮ ಪೇಪರ್ಸ್'ಗಳ ಆಚೆಗೂ ಇರುವ ಸತ್ಯಗಳ ವಿಶ್ಲೇಷಣೆ ಈಗ ಆರಂಭವಾಗಿದೆ.

ಜಗತ್ತಿನಾದ್ಯಂತ ಮಾಧ್ಯಮ ಸಂಸ್ಥೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಮಯವಿದು. ಸಣ್ಣ ಪುಟ್ಟ ಮಾಧ್ಯಮ ಸಂಸ್ಥೆಗಳನ್ನು ಕೊಳ್ಳುವ ಅಥವಾ ಮುಗಿಸುವ ವಿದ್ಯಮಾನ ಎಲ್ಲಾ ದೇಶಗಳ ಮಾಧ್ಯಮ ಕ್ಷೇತ್ರಗಳಲ್ಲಿ ಕಂಡು ಬರುತ್ತಿವೆ. ಕಾರ್ಪೋರೇಟ್ ಹಣ ಮಾಧ್ಯಮಗಳಿಗೆ ಹಿಂದೆಂದಿಗಿಂತೂ ಹೆಚ್ಚು ಹರಿದು ಬಂದಿದೆ. ಹೀಗಿರುವಾಗ, ಶತಮಾನದ ತನಿಖಾ ವರದಿಯೇ ಹೊರಬಂದರೂ, ಅದು ತನ್ನ ಬಂಡವಾಳದಾರರನ್ನು ರಕ್ಷಿಸಬಾರದು ಎಂದು ನಿರೀಕ್ಷಿಸುವುದು ಕಷ್ಟ.

ಇಂತಹ ನಿರಾಶಾದಾಯಕ ಸ್ಥಿತಿಯ ನಡುವೆಯೇ ಕೆಲವೊಂದಿಷ್ಟು ಆಶಯಾತ್ಮಕ ಅಂಶಗಳನ್ನು ಈ ಬೆಳವಣಿಗೆ ಮುಂದಿಡುತ್ತಿದೆ ಎಂಬುದನ್ನೂ ಗಮನಿಸಬೇಕಿದೆ. ಅಸಾಂಜೆ ಹೇಳುವಂತೆ, "ಬಹುಶಃ ಜರ್ಮನ್ ಪತ್ರಿಕೆಗೆ ಪನಾಮ ಮೂಲದ ಸಂಸ್ಥೆಯ ದಾಖಲೆಗಳನ್ನು ತಲುಪಿಸಿದ್ದು ತಂತ್ರಜ್ಞ. ಜರ್ಮನಿಯಲ್ಲಿ ಇವತ್ತು ತಂತ್ರಜ್ಞಾನ ಆಧಾರಿತ ಪತ್ರಿಕೋದ್ಯಮ ಬೆಳೆಯುತ್ತಿದೆ. ಅದೇ ವೇಳೆ, ರಾಜಕೀಯವಾಗಿ ಜಾಗೃತ ತಂತ್ರಜ್ಞರ ವರ್ಗವೂ ಬೆಳೆಯುತ್ತಿದೆ. ಇವರಿಬ್ಬರ ಹೊಂದಾಣಿಕೆ ಪತ್ರಿಕೋದ್ಯಮದ ಬಹುದೊಡ್ಡ ಸಾಧ್ಯತೆಯನ್ನು ನಮ್ಮೆದುರಿಗೆ ಇಟ್ಟಿದೆ.''ನಿಜ, ನಮ್ಮ ಮಟ್ಟಿಗಂತೂ ತಂತ್ರಜ್ಞರು ಹಾಗೂ ಪತ್ರಕರ್ತರು ಜಂಟಿ ಕಾರ್ಯಾಚರಣೆಗೆ ಇಳಿಯಬೇಕಿರುವ ಕಾಲಘಟ್ಟಇದು.