samachara
www.samachara.com
‘ದಿ ರೈಸ್ ಅಂಡ್ ಫಾಲ್’ ಆಫ್ ಅರ್ನಾಬ್ ಗೋಸ್ವಾಮಿ!
ಮೀಡಿಯಾ 2.0

‘ದಿ ರೈಸ್ ಅಂಡ್ ಫಾಲ್’ ಆಫ್ ಅರ್ನಾಬ್ ಗೋಸ್ವಾಮಿ!

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

ಅದು 1990ರ ದಶಕ...

ಭಾರತದಲ್ಲಿ ಇನ್ನೂ 24/7 ಸುದ್ದಿ ವಾಹಿನಿಗಳ ಮೊಗ್ಗು ಬಿಡುತ್ತಿದ್ದ ಕಾಲ. ಅದು ರಾಜದೀಪ್ ಸರ್ದೇಸಾಯಿ ಎಂಬ 'ಟೈಮ್ಸ್ ಆಫ್ ಇಂಡಿಯಾ'ದ ಪತ್ರಕರ್ತ ಟಿವಿ ಮಾಧ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಸಮಯ ಕೂಡ. ಅದಾಗಲೇ, ಆರಂಭವಾಗಿ ಎರಡು ವರ್ಷವಾಗಿದ್ದ ನ್ಯೂಡೆಲ್ಲಿ ಟೆಲಿವಿಷನ್ (NDTV)ಗೆ ಕಾಲಿಟ್ಟಿದ್ದರು ರಾಜದೀಪ್. ಇಸವಿ 1994; ಆಗ ರಾಜದೀಪ್ ಮನೆಗೆ ಜೋಬರ್ ಅಂತ ಅನ್ನಿಸುವ, ಉದ್ದ ಕೂದಲಿನ ಹುಡುಗನೊಬ್ಬ ಬರುತ್ತಿದ್ದ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಮಾನವಿಕ ಶಾಸ್ತ್ರ ವಿಭಾಗದಲ್ಲಿ ಆತ ಉನ್ನತ ವ್ಯಾಸಾಂಗ ಮಾಡಿದ್ದ. ಮೂಗಿನ ತುದಿಯಲ್ಲಿ ಕನ್ನಡಕ ಧರಿಸುತ್ತಿದ್ದ ಈ ಹುಡುಗನಿಗೆ ಟಿವಿ ಜರ್ನಲಿಸಂ ಮೇಲೆ ಅದೇನೋ ಹುಚ್ಚು. ಅವಕಾಶ ಕೊಡಿ ಎಂದು ಕೇಳಲು ರಾಜ್ದೀಪ್ ಸರ್ದೇಸಾಯಿ ಮನೆ ಬಾಗಿಲು ಬಡಿಯುತ್ತಿದ್ದ. ಹಾಗೆ ರಾಜದೀಪ್ ಮನೆಗೆ ಬಂದಿದ್ದ ಆ 20ರ ಆಸುಪಾಸಿನ ಯುವಕ ಮತ್ಯಾರೂ ಅಲ್ಲ. ಇವತ್ತು ಭಾರತದ ಟಿವಿ ಜರ್ನಲಿಸಂನ ಪ್ರಖ್ಯಾತ ಹೆಸರು ಅರ್ನಾಬ್ ಗೋಸ್ವಾಮಿ. ಅವತ್ತಿನಿಂದ ಇವತ್ತಿನ ನಂಬರ್ 1 ನ್ಯೂಸ್ ಆಂಕರ್ ಕಮ್ ಎಡಿಟರ್ ಆಗುವವರೆಗೆ ಅರ್ನಾಬ್ ಗೋಸ್ವಾಮಿ ಬೆಳೆದು ಬಂದಿದ್ದೇ ಭಾರತದ ಹೊಸ ಪತ್ರಿಕೋದ್ಯಮದ ಒಂದು ಪ್ರಮುಖ ಅಧ್ಯಾಯ.

ಮನೆಗೆ ಬರುತ್ತಿದ್ದ ಎಳೆಯ ಹುಡುಗ ಅರ್ನಾಬ್ ಗೆ ಮುಂದೆ ರಾಜದೀಪ್ ಗುರುವಾದರು. ಮುಂದಿನ ಒಂದು ದಶಕಗಳ ಕಾಲ ಗುರು ಶಿಷ್ಯ ಸಂಬಂಧ ಅನ್ಯೂನ್ಯವಾಗಿತ್ತು. ಆಂಕರಿಂಗ್ ಸೀಟ್ ಹಂಚಿಕೊಂಡರು. ಎನ್ ಡಿ ಟಿವಿ 24x7ನಲ್ಲಿ ಇದ್ದಾಗಲೇ ಅರ್ನಾಬ್ 'ನ್ಯೂಸ್ ಅವರ್' ಎಂಬ ಕಾಯಕ್ರಮ ಆರಂಭಿಸಿದ್ದ. ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ  ಕಾರ್ಯಕ್ರಮ ಭಾರೀ ಜನಪ್ರಿಯತೆ ಗಳಿಸಿತು. ರಾಜದೀಪ್ ಗರಡಿಯಲ್ಲಿ ಅರ್ನಾಬ್ ಉತ್ತಮ ಪತ್ರಕರ್ತನಾಗಿ ಪಳಗುತ್ತಿದ್ದ. ಆದರೆ ಟಿವಿ ಮಾಧ್ಯಮದ ಮಾಯೆಗೆ ಮರುಳಾಗದವರಿಲ್ಲ ಎನ್ನುವುದಕ್ಕೆ ಅರ್ನಾಬ್ ನೇ ಸಾಕ್ಷಿ. ಕೊನೆಗೊಂದು ದಿನ ಅರ್ನಾಬ್ ರಾಜದೀಪ್ ಸಂಬಂಧ ಕೊನೆಯಾಯ್ತು. ಅರ್ನಾಬ್ ದಿಲ್ಲಿ ಬಿಟ್ಟು, ಪತ್ರಿಕೋದ್ಯಮದ ಸಹವಾಸವೇ ಸಾಕು ಎಂದು ಮುಂಬೈಗೆ ಬಂದ."ಮುಂಬೈನ ಸಮಯದ್ರ ತೀರದಲ್ಲಿ ಓಡಾಡುತ್ತಿದ್ದಾಗ, ಅದರ ಗಾಳಿ ನನ್ನೊಳಗೆ ಹೊಸ ಚೈತನ್ಯವನ್ನು ಹುಟ್ಟು ಹಾಕಿತು,'' ಎಂದು ಮುಂದೆ ಸ್ವತಃ ಅರ್ನಾಬ್ ತನ್ನ ಅಂದಿನ ಮನಸ್ಥಿತಿಯನ್ನು ಹೇಳಿಕೊಂಡ. ಅದೇ ಸಮಯದಲ್ಲಿ 'ಟೈಮ್ಸ್ ಆಫ್ ಇಂಡಿಯಾ'ದ ಮಾತೃ ಸಂಸ್ಥೆ 'ಬೆನೆಟ್ ಅಂಡ್ ಕೋಲ್ಮನ್ ಕಂಪನಿ' ಇಂಗ್ಲಿಷ್ ವಾಹಿನಿಯೊಂದನ್ನು ಆರಂಭಿಸುವ ಯೋಜನೆಯಲ್ಲಿತ್ತು.

ಅದು, 2006ರ ಇಸವಿ. ಮೊದಲ ಬಾರಿಗೆ ರಾಷ್ಟ್ರೀಯ ವಾಹಿನಿಗಳ ಅಡ್ಡ ಎಂದೇ ಗುರುತಿಸುವ ದಿಲ್ಲಿಯ ನೋಯಿಡಾ ಬಿಟ್ಟು, ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ 'ಟೌಮ್ಸ್ ನೌ' ಕಾರ್ಯಾರಂಭ ಮಾಡಿತು. ಆರಂಭದಲ್ಲಿ ಹಲವು ದೇಶಗಳ ಪತ್ರಕರ್ತರು 'ಟೌಮ್ಸ್ ನೌ' ಕಟ್ಟುವ ತಂಡದಲ್ಲಿದ್ದರು. ಕೊನೆಗೆ, ಚಾನಲ್ ಲಾಂಚ್ ಆದಾಗ ಸಂಸ್ಥಾಪಕರಲ್ಲಿ ಅನೇಕರು ಹೊರಬಿದ್ದಿದ್ದರು. ಉಳಿದದ್ದು, ಅರ್ನಾಬ್ ಮಾತ್ರ. ಸಹಜವಾಗಿಯೇ ಇಲ್ಲಿ ಪ್ರಧಾನ ಸಂಪಾದಕರಾಗಿ ಬಡ್ತಿ ಪಡೆದರು ಅರ್ನಾಬ್ ಗೋಸ್ವಾಮಿ. ಮುಂದೆ ನಡೆದದ್ದೆಲ್ಲಾ ಈಗ ಇತಿಹಾಸ.

ಅವತ್ತು ಮೊದಲ ಬಾರಿಗೆ ಪ್ರೈಮ್ ಟೈಂ ಚರ್ಚೆಗೆ ಬಂದು ಕೂತಿದ್ದು ಅರ್ನಾಬ್. ಅತ್ತ ಎನ್ ಡಿಟಿವಿಯಲ್ಲಿ ಪ್ರಣವ್ ರಾಯ್, ಇತ್ತ ಸಿಎನ್ ಎನ್-ಐಬಿಎನ್ ನಲ್ಲಿ ರಾಜದೀಪ್ ಸರ್ದೇಸಾಯಿ ಅದೇ ರೀತಿಯ ಚರ್ಚೆ ನಡೆಸಿಕೊಡುತ್ತಿದ್ದರು. ಒಬ್ಬರು ಅರ್ನಾಬ್ ನ ಗುರು. ಮತ್ತೊಬ್ಬರು ಹಿರಿಯ ಪತ್ರಕರ್ತರು. ಇಬ್ಬರೂ ಘಟಾನುಘಟಿಗಳೇ. ಇಂಗ್ಲೀಷ್ ಮಾಧ್ಯಮ ವೀಕ್ಷಕರಿಗಂತೂ ಪರಿಚಿತ ಮುಖಗಳು ಬೇರೆ. ಸಣ್ಣ ಅಳುಕಿನಿಂದಲೇ ಕ್ಯಾಮೆರಾ ಎದುರಿಸಿದ ಅರ್ನಾಬ್. ಹೇಳಿ ಕೇಳಿ 'ಟೈಮ್ಸ್ ಗ್ರೂಪ್'ನ ವಾಹಿನಿಯಾದ್ದರಿಂದ ಹೊರಗಡೆ ಪ್ರಚಾರವೂ ಜೋರಾಗಿತ್ತು. ಅಷ್ಟೇ ಜೋರಾಗಿ ಅರ್ನಾಬ್ ಸ್ಟುಡಿಯೋದಲ್ಲಿ ಕಿರುಚಾಡಲೂ ಆರಂಭಿಸಿದ. ನೋಡ ನೋಡುತ್ತಲೇ ಎಲ್ಲ ಬದಲಾಯ್ತು. ಗುರುವಿಗೇ ತಿರು ಮಂತ್ರ ಹಾಕಿದ ಅರ್ನಾಬ್ ರಾಜದೀಪ್ ಹಿಂದಿಕ್ಕಿ ಟಿಆರ್ಪಿ ರೇಸ್ನಲ್ಲೂ ಗೆದ್ದು ಬಿಟ್ಟ.ಅರ್ನಾಬ್ನ ಶೋ 'ನ್ಯೂಸ್ ಅವರ್' ಜನಪ್ರಿಯವಾಯ್ತು. ಒಂದಾದ ಮೇಲೊಂದು ಮೆಟ್ಟಿಲನ್ನು ಬಲು ಬೇಗ ಏರುತ್ತಾ ಸಾಗಿದ 'ಟೈಮ್ಸ್ ನೌ', ಇಂಗ್ಲೀಷ್ ಸುದ್ದಿ ಮಾಧ್ಯಮಗಳಲ್ಲಿ ಮೊದಲ ಸ್ಥಾನಕ್ಕೆ ಏರಿತು. ಈ ಸಾಧನೆಯ ಹಿಂದೆ ಅರ್ನಾಬ್ ಹಾಕುತ್ತಿದ್ದ ಬೊಬ್ಬೆ, ವಿಷಯದ ಮೇಲೆ ಸಾಧಿಸಿಕೊಳ್ಳುತ್ತಿದ್ದ ಹಿಡಿತದ ಕೊಡುಗೆಯೂ ಇತ್ತು. ಅದುವರೆಗೆ ಇಂಗ್ಲೀಷ್ ಸುದ್ದಿ ವಾಹಿನಿಗಳಲ್ಲಿ ಛಾಪು ಮೂಡಿಸಿದ್ದ ಎನ್ ಡಿಟಿವಿ ಮತ್ತು ಸಿಎನ್ ಎನ್ ಐಬಿಎನ್ ವಾಹಿನಿಗಳು ಬದಿಗೆ ಸರಿದು ಬಿಟ್ಟವು. ಯಾವ ಪರಿ ಅರ್ನಾಬ್ ಶೋ ಜನಪ್ರಿಯವಾಯ್ತು ಅಂದರೆ ತನ್ನ ಒಂದು ಕಾಲದ ಗುರು ರಾಜ್ ದೀಪ್ ಶೋ ನೋಡುವವರೆ ಇಲ್ಲವಾದರು. ಇದಕ್ಕೆ ಸರಿಯಾಗಿ 2002ರ ಗೋಧ್ರಾ ಗಲಭೆಯ ನಂತರದ ವರ್ಷಗಳಲ್ಲಿ ಸರ್ದೇಸಾಯಿ ಮೋದಿ ವಿರೋಧಿ ನಿಲುವಿನಿಂದ ಗುರುತಿಸಿಕೊಂಡಿದ್ದು ಬಲಪಂಥೀಯ ಧೋರಣೆ ಉಳ್ಳವರಿಗೆ ಆತ ಸಹ್ಯವಾಗಲಿಲ್ಲ. ಬದಲಿಗೆ ರಾಷ್ಟ್ರೀಯತೆಯನ್ನು ಮುಂದಿಡುತ್ತಿದ್ದ ಅರ್ನಾಬ್ ನೇ ರುಚಿಸತೊಡಗಿದ. ಅದಕ್ಕೆ ಸರಿಯಾಗಿ 2013ರ ವೇಳೆಗೆ ದೇಶಾದ್ಯಂತ ಬಲಪಂಥದ ಗಾಳಿ ಬೀಸಲಾರಂಭಿಸಿತು. ಎಲ್ಲವೂ ಅರ್ನಾಬ್ ಗೆ ಪೂರಕವಾಗಿದ್ದವು. ದಿನದಿಂದ ದಿನಕ್ಕೆ ಅರ್ನಾಬ್ ಶೋ ಭಾರೀ ಜನಪ್ರಿಯವಾಯ್ತು.

ಅರ್ನಾಬ್ ಗೆ ವೀಕ್ಷಕರಿಗೆ ಏನು ಬೇಕು ಎಂಬುದೆಲ್ಲಾ ಅರ್ಥವಾಗಿತ್ತು. ಅದು ದೀರ್ಘ ಬಾಳಿಕೆಯದ್ದೋ? ತಾತ್ಕಾಲಿಕವೋ? ಆತ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಅಗ್ರೆಸ್ಸಿವ್ ನಿರೂಪಣೆ ರೇಟಿಂಗ್ ತಂದುಕೊಡುತ್ತಿತ್ತು. ರಾಷ್ಟ್ರೀಯ ವಿಚಾರಗಳು ಬಂದಾಗ ಆಕ್ರಮಣಕಾರಿ ವರ್ತನೆಗಳು ವೀಕ್ಷಕರನ್ನು ಗಿಟ್ಟಿಸಬಲ್ಲದು ಎಂಬುದನ್ನು ಆತ ಕಂಡುಕೊಂಡ. ಇದೇ ಅರ್ನಾಬ್ ಬಂಡವಾಳವಾಯಿತು. ಅದರಲ್ಲೂ ನರೇಂದ್ರ ಮೋದಿ ಲೋಕ ಸಭೆಗೆ ತಯಾರಿ ಆರಂಭಿಸಿದ ನಂತರವಂತೂ ಅರ್ನಾಬ್ ಹಿಂದೆಂದೂ ಇಲ್ಲದ ಎನರ್ಜಿ ಪ್ರದರ್ಶಿಸತೊಡಗಿದ. ‘ಇಂಡಿಯಾ ವಾಂಟ್ಸ್ ಟು ನೋ’ ಎಂಬುದು ಆತನ ಘೋಷವಾಕ್ಯದಂತೆ ಮೊಳಗತೊಡಗಿತು. ಯಾವ ಪರಿ ಟಿವಿ ಮಾಧ್ಯಮವನ್ನು ಅರ್ನಾಬ್ ಆವರಿಸಿಕೊಂಡು ಬಿಟ್ಟ ಅಂದ್ರೆ, ಒಟ್ಟು ಇಂಗ್ಲೀಷ್ ಮಾಧ್ಯಮಗಳ ಪೈಕಿ ಆತನ ಶೋವನ್ನು ವೀಕ್ಷಿಸುವವರ ಸಂಖ್ಯೆ ಶೇಕಡಾ 70ರಷ್ಟಿತ್ತು. ಎರಡನೇ ಸ್ಥಾನದಲ್ಲಿದ್ದ ರಾಜದೀಪ್ ಶೋ ನೋಡುವವರ ಸಂಖ್ಯೆ ಕೇವಲ ಶೇಕಡಾ 10ರಷ್ಟಿತ್ತು. ಅರ್ನಾಬ್ ಗೆ ಸವಾಲೆಸೆಯುವವರೆ ಇರಲಿಲ್ಲ. ತನ್ನದೇ ಏಕ ಚಕ್ರಾಧಿಪತ್ಯ ಎಂದು ಅರ್ನಾಬ್ ಮೆರೆಯುತ್ತಿದ್ದ. ಆತನ ಹಾವ ಭಾವ, ಮಾತಿನ ದಾಟಿ ಇದ್ನು ಸ್ಪಷ್ಟವಾಗಿ ತೋರುತ್ತಿತ್ತು. ಪ್ರಾದೇಶಿಕ ಭಾಷೆಯ ನ್ಯೂಸ್ ಚಾನಲ್ಗಳಲ್ಲಿ ಆತನ ತದ್ರೂಪಗಳು ಸೃಷ್ಟಿಯಾದವು. ತಿಂಗಳಿಗೆ ಒಂದು ಕೋಟಿಗೂ ಅಧಿಕ ಸಂಬಳ ಪಡೆಯುವ ಅರ್ನಾಬ್ ನ ಪರಿಸ್ಥಿತಿ ಮೊನ್ನೆ ಮೊನ್ನೆವರೆಗೂ ಹೀಗೇ ಇತ್ತು.

ರಾತ್ರಿ ಕಳೆದು ಬೆಳಗಾಗುವುದರೊಳಗೆ ತನ್ನ ಕಥೆಯನ್ನು ಎಲ್ಲರೂ ಸೇರಿ ಮುಗಿಸಿ ಹಾಕುತ್ತಾರೆ ಎಂದು ಅರ್ನಾಬ್ ಅಂದುಕೊಂಡಿರಲಿಲ್ಲ. ಉಳಿದವರು ಆತ ಬೇಟೆಗಾಗಿ ಹೊಂಚು ಹಾಕಿ ಕಾಯುತ್ತಿದ್ದರು. ಈ ಮಿಕ ಮಾತ್ರ ಪ್ರತಿ ಬಾರಿ ತಪ್ಪಿಸಿಕೊಳ್ಳುತ್ತಲೇ ಇತ್ತು. ಈ ಬಾರಿ ಹಾಗಾಗಲಿಲ್ಲ. ತನ್ನದೇ ತಪ್ಪಿಗೆ ಅರ್ನಾಬ್ ಭಾರೀ ಬೆಲೆ ತೆರಬೇಕಾಯ್ತು.ಜೆಎನ್ ಯು ವಿಚಾರದಲ್ಲಿ ಅರ್ನಾಬ್ ಕನ್ಹಯಾ ಕುಮಾರ್ ಬಂಧನ ಸಮರ್ಥಿಸಿ ಉದ್ದುದ್ದ ಭಾಷಣ ಮಾಡಿದ. ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕನಿಗೆ ಬೈದ ವಿಡಿಯೋವಂತೂ ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ವೈರಲ್ ಆಗಿತ್ತು. ಎಲ್ಲರೂ ಅರ್ನಾಬ್ ನ ರಾಷ್ಟ್ರ ಭಕ್ತಿಗೆ ತಲೆದೂಗುವವರೆ. ಆದರೆ ಮರು ದಿನ ವಕೀಲರು ಪಟಿಯಾಲಾ ಕೋರ್ಟ್ ಆವರಣದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದಾಗ, ಉಳಿದ ಮಾಧ್ಯಮಗಳು ಅದನ್ನೇ ಕೈಗೆತ್ತಿಕೊಂಡವು. ಆದರೆ ಅರ್ನಾಬ್ ಅದನ್ನು ಬಿಟ್ಟು ಬಿಡುವುದರ ಮೂಲಕ ಮೊದಲ ತಪ್ಪೆಸಗಿದ್ದ. ರಾಜದೀಪ್, ಎನ್ ಡಿಟಿವಿಯ ರವೀಶ್ ಕುಮಾರ್ ಎಲ್ಲರೂ ಮರು ದಿನ ವಕೀಲರ ಗೂಂಡಾಗಿರಿಯ ವಿರದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಆದರೆ ದೂರದ ಮುಂಬೈನಲ್ಲಿ ಕೂತಿದ್ದ ಅರ್ನಾಬ್ಗೆ ಇದರ ತೀವ್ರತೆ ಅರ್ಥವಾಗಲಿಲ್ಲ. ಉಳಿದ ಅಷ್ಟೂ ದೆಹಲಿ ಕೇಂದ್ರಿತ ಮಾಧ್ಯಮಗಳು ಒಂದು ದಿಕ್ಕಿನಲ್ಲಿದ್ದರೆ ಅರ್ನಾಬ್ ಇನ್ನೊಂದು ದಿಕ್ಕಿನಲ್ಲಿದ್ದ.

ಯಾವಾಗ ಕನ್ಹಯ್ಯಾ ಕುಮಾರ್ ವೀಡಿಯೋ ನಕಲಿ ಎಂದು ಗೊತ್ತಾಯ್ತೋ, 'ಇಂಡಿಯಾ ಟುಡೆ' ವಾಹಿನಿ ಹಿಂದೆಂದಿಗಿಂತಲೂ ಹೆಚ್ಚು ಕ್ರೀಯಾಶೀಲವಾಗಿ ಜನರ ಮುಂದಿಟ್ಟಿತು. ಅಲ್ಲಿಗೆ ಅರ್ನಾಬ್ ನಿಗೆ ಮೊದಲ ಹೊಡೆತ ಬಿದ್ದಿತ್ತು. ಅರ್ನಾಬ್ ನ ತಪ್ಪನ್ನೇ ಕಾಯುತ್ತಿದ್ದ ಉಳಿದವರು ಹಸಿದ ತೋಳಗಳಂತೆ ಮುಗಿ ಬಿದ್ದರು. ತಮ್ಮದೂ ಒಂದಿರಲಿ ಅಂತ ಒಬ್ಬೊಬ್ಬರೇ ಹೊಡೆತ ಕೊಡುತ್ತಲೇ ಹೋದರು. ಒಂದಾದ ಮೇಲೊಂದು ಹೊಡೆತಗಳು ಬೀಳುತ್ತವೇ ಹೋದವು. ಅವರಿಗೆಲ್ಲಾ ಅರ್ನಾಬ್ ಮೇಲೆ ಸಿಟ್ಟುತ್ತು. ಈ ಮನುಷ್ಯ 10 ವರ್ಷಗಳಿಂದ ತಮ್ಮನ್ನು ಬದುಕಲು ಬಿಡುತ್ತಿಲ್ಲ ಎಂಬ ಹತಾಶೆ ಇತ್ತು. ಅದಕ್ಕಿಂತ ಹೆಚ್ಚಾಗಿ ಅರ್ನಾಬ್ ಗೆಲ್ಲುತ್ತಿದ್ದದ್ದು ಗಿಮಿಕ್ಗಳಿಂದ. ಆತ ಟಿಆರ್ ಪಿಗಾಗಿ ಕಿರುಚ್ಚುತ್ತಿದ್ದ. ಮನಬಂದಂತೆ ಯಾರನ್ನಾದರೂ ಬೈಯುತ್ತಿದ್ದ. ತನ್ನ ಶೋ ಸಮಯವನ್ನೇ ಪ್ರೈಮ್ ಟೈಮ್, ಸೂಪರ್ ಪ್ರೈಮ್ ಟೈಮ್ ಎಂದೆಲ್ಲಾ ಹೇಳಿ ಜನರನ್ನು ಹುಚ್ಚೆಬ್ಬಿಸುತ್ತಿದ್ದ. ಸ್ಕ್ರೀನ್ ಗೆ ಬೆಂಕಿ ಹಾಕುತ್ತಿದ್ದ. ಹೀಗೆ ಜನರಲ್ಲಿ ಕಿಚ್ಚೆಬ್ಬಿಸಲು ಬೇಕಾದ ಎಲ್ಲವನ್ನೂ ಆತ ಮಾಡುತ್ತಿದ್ದ. ಇವುಗಳ ಬಗ್ಗೆ ವೃತ್ತಿಪರ ಪತ್ರಕರ್ತರಾಗಿ ತೊಡಗಿಸಿಕೊಂಡವರಿಗೆಲ್ಲಾ ಅಸಹನೆ ಇತ್ತು. ಆದರೆ, ಜೆಎನ್ಯು ವಿಚಾರದಲ್ಲಿ ಅರ್ನಾಬ್ ಮೊದಲ ತಪ್ಪು ಹೆಜ್ಜೆ ಇಡುವ ಮೂಲಕ, ಮೊದಲ ಬಾರಿಗೆ ಆತನ ಮನಸ್ಥಿತಿಯ ಅನಾವರಣ ಆಗಿ ಹೋಯಿತು.

ನೋಡ ನೋಡುತ್ತಲೇ ಅರ್ನಾಬ್ ರಾತೋ ರಾತ್ರಿ ಕುಸಿದು ಹೋದ. ಆತನ ಸೋಲಿನಲ್ಲಿ ಎನ್ ಡಿಟಿವಿಯ ರವೀಶ್ ಕುಮಾರ್ ಪಾಲಿತ್ತು. ರಾಜದೀಪ್ ಸುದೀರ್ಘ ಹೋರಾಟವಿತ್ತು. ಉಳಿದ ಮಾಧ್ಯಮಗಳ ಅಸೂಯೆಯಿತ್ತು. ಎಲ್ಲರೂ ಸೇರಿ ಅರ್ನಾಬ್ ಕಥೆ ಮುಗಿಸಿ ಬಿಟ್ಟರು. 'ರಾಷ್ಟ್ರಭಕ್ತಿ'ಯ ನಾಣ್ಯ ಸವಕಲಾಗಿದೆ ಎಂಬುದನ್ನು ಎತ್ತಿ ತೋರಿಸಿದರು. ರವೀಶ್ ಕುಮಾರ್ ಅಂತೂ ಹೆಸರು ಪ್ರಸ್ತಾಪಿಸದೆ ಹಿನ್ನಲೆಯಲ್ಲಿ ಅರ್ನಾಬ್ ವಾಯ್ಸ್ ಬಿಟ್ಟು ಮಾಧ್ಯಮಗಳ ಹೊಣೆಗೇಡಿತನಕ್ಕೆ ರನ್ನಿಂಗ್ ಕಾಮೆಂಟರಿ ಕೊಟ್ಟರು. ಸಿ ಎನ್ಎನ್ ಐಬಿಎನ್ ನವರು ಡಮ್ಮಿ ಅರ್ನಾಬ್ ನನ್ನು ಸ್ಟುಡಿಯೋದಲ್ಲಿ ಕೂರಿಸಿ ಆತನಿಗೆ ಕಾರ್ಟೂನ್ ಕ್ಯಾರೆಕ್ಷರ್ ನ ಟ್ರೀಟ್ ಮೆಂಟ್ ನೀಡಿದ್ರು.ಇವೆಲ್ಲದರ ಪರಿಣಾಮ, ಪ್ರೈಮ್ ಟೈಮ್ ರೇಟಿಂಗ್ನಲ್ಲಿ ದಶಕಗಳ ನಂತರ ಮೊದಲ ಬಾರಿಗೆ 'ನ್ಯೂಸ್ ಅವರ್' ಮುಗ್ಗರಿಸಿತು . 10 ವರ್ಷಗಳಿಂದ ನಂಬರ್ 1 ಶೋ ಆಗಿ ಹೊರಹೊಮ್ಮಿದ್ದ 'ಟೈಮ್ಸ್ ನೌ' ವಾಹಿನಿಯ 'ನ್ಯೂಸ್ ಅವರ್' ಮೊದಲ ಬಾರಿಗೆ ವೀಕ್ಷಕರ ಅಭಾವ ಅನುಭವಿಸಿತು. ಅರ್ನಾಬ್ ಲೆಕ್ಕಾಚಾರವೆಲ್ಲಾ ತಲೆಕೆಳಗಾಯ್ತು. 'ಇಂಡಿಯಾ ಟುಡೇ'ಯ ರಾಜ್ ದೀಪ್, ಕರಣ್ ಥಾಪರ್ ಮತ್ತು ರಾಹುಲ್ ಕನ್ವಾಲ್ ಎಂಬ ಘಟಾನುಘಟಿಗಳ ಸಂಘಟಿತ ಹೋರಾಟದಿಂದಾಗಿ 'ನ್ಯೂಸ್ ಅವರ್' ರೇಟಿಂಗ್ ಪಟ್ಟಿಯಲ್ಲಿ ಕುಸಿದು ಹೋಯಿತು. ಜೆಎನ್ಯು ವಿಷಯದ ಚರ್ಚೆ ನಡೆಯುತ್ತಿದ್ದಾಗ ಇಂಡಿಯಾ ಟುಡೇ ಪ್ರೈಮ್ ಟೈಮ್ (ರಾತ್ರಿ 9-11 ಗಂಟೆ) ಸಮಯದಲ್ಲಿ ಶೇಕಡಾ 28.9 ವೀಕ್ಷಕರೊಂದಿಗೆ ಅಗ್ರಸ್ಥಾನದಲ್ಲಿ ಹೊರಹೊಮ್ಮಿತು. ಮೊದಲ ಸ್ಥಾನದಲ್ಲಿದ್ದ 'ಟೈಮ್ಸ್ ನೌ' 23.8 ಶೇಕಡಾ ವೀಕ್ಷಕರೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಿತು.ಇವತ್ತು 'ಟೈಮ್ಸ್ ನೌ' ಒಟ್ಟಾರೆ ರೇಟಿಂಗ್ ವಿಚಾರದಲ್ಲಿ ಮೊದಲ ಸ್ಥಾನದಲ್ಲೇ ಇದೆ. ಆದರೆ ಹಿಂದೆ ಇದ್ದ ನಂಬಿಕೆ, ವೃತ್ತಿಪರತೆಗಳು ಕಳೆದು ಹೋಗಿವೆ. ಬಹುಶಃ ಇದು ಅರ್ನಾಬ್ ಬೆಳವಣಿಗೆಯ ನಡುವೆ ಒಂದು ಕ್ಷಣ ನಿಂತು ಪರಿಸ್ಥಿತಿಯನ್ನು ಗಮನಿಸಬೇಕಾದ ಕಾಲ. ಜತೆಗೆ, ಆತನ ತದ್ರೂಪಗಳಂತೆ ಆಡುವವರಿಗೆ ಒಂದು ಪಾಠ. ಎಲ್ಲಾ ವಿಚಾರಗಳು, ಎಲ್ಲಾ ಕಾಲಕ್ಕೂ ಪತ್ರಿಕೋದ್ಯಮದಲ್ಲಿ ಫಸಲು ನೀಡುವುದಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ.