samachara
www.samachara.com
ಫೇಸ್ ಬುಕ್ ನೇರ ಪ್ರಸಾರ: ಯಾರಿಗೆಷ್ಟು ಲಾಭ?
ಮೀಡಿಯಾ 2.0

ಫೇಸ್ ಬುಕ್ ನೇರ ಪ್ರಸಾರ: ಯಾರಿಗೆಷ್ಟು ಲಾಭ?

ತಂತ್ರಜ್ಞಾನದ ಏಣಿ ಹತ್ತಿ ಮಾಧ್ಯಮಗಳು ಯಶಸ್ಸಿನ ಬೆನ್ನೇರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ.

ಹೇಳಿ ಕೇಳಿ ತಂತ್ರಜ್ಞಾನ ಮಾಧ್ಯಮಗಳ ಬೆನ್ನೆಲುಬು. ತಂತ್ರಜ್ಞಾನದ ಸಹಾಯವಿಲ್ಲದೇ ಮಾಧ್ಯಮಗಳನ್ನು ನಡೆಸುವುದು ಅಸಾಧ್ಯದ ಮಾತು. ಇನ್ನೊಂದು ಕಡೆ ತಂತ್ರಜ್ಞಾನಕ್ಕೆ ಮಾಧ್ಯಮ ರಂಗದ ದಿಕ್ಕನ್ನೇ ಬದಲಿಸಿ ಹಾಕುವ ತಾಕತ್ತಿದೆ. ಕೆಲವು ವರ್ಷಗಳ ಹಿಂದೆ ಆನ್ ಲೈನ್ ಜರ್ನಲಿಸಂನ ಕಲ್ಪನೆಯೇ ಇರಲಿಲ್ಲ. ಇಂಟರ್ನೆಟ್ ನಲ್ಲಿ ಟಿವಿ ಬರುತ್ತೆ ಅಂತ ಯಾರೂ ಅಂದುಕೊಂಡಿರಲೇ ಇಲ್ಲ. ಆದ್ರೆ ಇವತ್ತು ಯೂಟ್ಯೂಬ್, ಹಾಟ್ ಸ್ಟಾರ್ ನಂಥ ಸೈಟ್ ಗಳಲ್ಲಿ ಲೈವ್ ಟಿವಿಗಳು ಬರುತ್ತವೆ. ಯೂಟ್ಯೂಬ್ ನಲ್ಲೇ ಚಾನಲ್ ನಡೆಸುವ ಮಂದಿ ಇದ್ದಾರೆ. ಇದನ್ನೇ ವೀಕ್ಷಿಸುವ ಒಂದು ದೊಡ್ಡ ವರ್ಗವೇ ನಮ್ಮ ಮಧ್ಯೆ ಇದೆ. ಆನ್ ಲೈನ್ ಟಿವಿ ಚಾನಲ್ ಸಾಂಪ್ರದಾಯಿಕ ಚಾನಲ್ ಗಳಿಗೆ ಹೋಲಿಸಿದ್ರೆ ತುಂಬಾ ಸುಲಭ. ಇಲ್ಲಿ ಕೇಬಲ್ ಗಳ ಕಾಟವಿಲ್ಲ. ಡಿಟಿಎಚ್ ನವರ ನಿಯಂತ್ರಣ ನಿಬಂಧನೆಗಳೂ ಇಲ್ಲ. ಹೀಗಾಗಿ ಆನ್ ಲೈನ್ ಚಾನಲ್ಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ ಮತ್ತು ವಿಫುಲ ಅವಕಾಶಗಳಿವೆ.

ಸದ್ಯ ಈ ಬೆಳವಣಿಗೆಗಳಿಗೆ ತುಪ್ಪ ಸುರಿದಿದೆ ಫೇಸ್ ಬುಕ್. ಇಂದಿನವರೆಗೆ ವಿಡಿಯೋ ಅಪ್ ಲೋಡ್ ಮಾಡಲು ಮಾತ್ರ ತೆರೆದುಕೊಂಡಿದ್ದ ಫೇಸ್ ಬುಕ್, ಕಳೆದ ವಾರದಿಂದ ತನ್ನ ಸೈಟ್ ನಲ್ಲಿ ವೀಡಿಯೋ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಿದೆ. ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಜರ್ಮನಿಯ ಬರ್ಲಿನ್ ನಲ್ಲಿ ನಡೆಸುತ್ತಿದ್ದ ಸಂವಾದವನ್ನು ಫೇಸ್ಬುಕ್ ನಲ್ಲಿ ನೇರ ಪ್ರಸಾರ ಮಾಡಲಾಯಿತು. ಇದನ್ನು ವಿಶ್ವದಾದ್ಯಂತ 3 ಲಕ್ಷಕ್ಕೂ ಅಧಿಕ ಜನ ಏಕಕಾಲದಲ್ಲಿ ವೀಕ್ಷಿಸಿದರು. ಜತೆಗೆ, ನೇರ ಪ್ರಸಾರ ಆರಂಭವಾದ ಕೆಲವೇ ಹೊತ್ತಿನಲ್ಲಿ ಕಾಮೆಂಟ್ಗಳ ಸುರಿಮಳೆ ಶುರುವಾಯಿತು. ಅದರಿಂದ ಕಾಮೆಂಟ್ ಸೆಕ್ಷನ್ ತೆಗೆದುಹಾಕುವ ಸವಾಲು ಎದುರಾಯಿತು. ಹೀಗೆ, ಫೇಸ್ ಬುಕ್ ತನ್ನ ಹೊಸ ಸಾಧ್ಯತೆಯೊಂದನ್ನು ಜನರಿಗೆ ಮುಟ್ಟಿಸಿತು.

ಉಳಿದ ಎಲ್ಲಾ ಸೈಟ್ ಗಳಲ್ಲಿ ನೇರ ಪ್ರಸಾರ ಮಾಡುವುದಕ್ಕಿಂತ ಫೇಸ್ ಬುಕ್ ನಲ್ಲಿ ಮಾಡುವುದು ಹೆಚ್ಚು ಸುಲಭ. ಜೊತೆಗೆ ಲಾಭವೂ ಜಾಸ್ತಿ. ಕಾರಣ ಇಷ್ಟೆ...

  • ಫೇಸ್ ಬುಕ್ ನಲ್ಲಿ ನೇರ ಪ್ರಸಾರ ಆರಂಭಿಸುವುದು ತುಂಬಾ ಸರಳ. ಇದಕ್ಕಾಗಿ apps.facebook.com/livestream ಗೆ ಹೋದರೆ ಅಲ್ಲಿ ಆಪ್ ಲಭ್ಯವಿದೆ. ಪ್ರತೀ ಬಳಕೆದಾರನೂ ಈ ಆಪ್ ಡೌನ್ ಲೋಡ್ ಮಾಡಿಕೊಂಡು ತಮ್ಮ ನೇರ ಪ್ರಸಾರ ಆರಂಭಿಸಿಬಹುದು.
  • ಯೂಟ್ಯೂಬ್ ನಂಥ ಸೈಟ್ ಗಳಲ್ಲಿ ವೀಕ್ಷಕರನ್ನು ಸೆಳೆಯಲು ಸಾಧ್ಯವಿಲ್ಲ. ಆದರೆ ಫೇಸ್ಬುಕ್ ನಲ್ಲಿ ಇದು ಸಾಧ್ಯ. ನೀವು ನೇರ ಪ್ರಸಾರ ಆರಂಭಿಸ್ತಿದ್ದಂತೆ ನಿಮ್ಮ ಫ್ರೆಂಡ್ ಲಿಸ್ಟ್ ನಲ್ಲಿ ಇರುವ ಎಲ್ಲರಿಗೂ ನೋಟಿಫಿಕೇಷನ್ ತಲುಪುತ್ತೆ.
  • ನಿಮ್ಮ ನೇರ ಪ್ರಸಾರವನ್ನು ಯಾರೆಲ್ಲಾ ನೋಡುತ್ತಿದ್ದಾರೆ ಎಂಬುದನ್ನು ನೀವು ನೋಡಬಹುದು. ಯಾರ ಮೇಲಾದರು ನಿಮಗೆ ಸಿಟ್ಟಿದೆಯಾ? ಅವರನ್ನು ನೋಡದಂತೆ ಬ್ಲಾಕ್ ಮಾಡುವ ಅವಕಾಶವೂ ಇದೆ.
  • ನೇರ ಪ್ರಸಾರ ಆರಂಭಿಸುವ ಹ್ಯಾಷ್ ಟ್ಯಾಗ್ ಮೂಲಕ ಮುನ್ನವೇ ನಿಮ್ಮ ಸ್ನೇಹಿತರಿಗೆ ಲಿಂಕ್ ನೀಡಬಹುದು.
  • ಒಮ್ಮೆ ವೀಕ್ಷಕರು ಸಬ್ ಸ್ಕ್ರೈಬ್ ಆದರೆ, ನೀವು ನೇರ ಪ್ರಸಾರ ಆರಂಭಿಸಿದಾಗಲೆಲ್ಲಾ ನಿಮ್ಮ ಸ್ನೇಹಿತರಿಗೆ ಸಂದೇಶ ತಲುಪುತ್ತದೆ.
  • ನೇರ ಪ್ರಸಾರದಲ್ಲಿ ಇದ್ದಾಗಲೇ ವೀಕ್ಷಕರ ಪ್ರಶ್ನೆಗೆ ಉತ್ತರಿಸುವ ಸಂವಾದ ಮಾಡುವ ಅವಕಾಶಗಳೂ ಇಲ್ಲಿವೆ.
  • ಇನ್ನು ನಿಮ್ಮ ವೀಡಿಯೋ 30 ನಿಮಿಷಕ್ಕಿಂತ ಕಡಿಮೆ ಇದ್ದರೆ ಅದು ನಿಮ್ಮ ಟೈಮ್ ಲೈನ್ ನಲ್ಲಿ ಸೇವ್ ಕೂಡಾ ಆಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಸಾಧ್ಯತೆ ಮಹುಮಾಧ್ಯಮದ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮುಂದೊಂದು ದಿನ ನೀವು ನೋಡುವ ನ್ಯೂಸ್ ಚಾನಲ್ಗಳು ನಿಮ್ಮದೇ ಗೋಡೆ ಮೇಲೆ ಕಂಡರೂ ಅಚ್ಚರಿ ಇಲ್ಲ. ಫೇಸ್ ಬುಕ್ ಗಾಗಿಯೇ ಒಂದಷ್ಟು ಹೊಸ ಚಾನಲ್ಗಳು ಹುಟ್ಟಿಕೊಳ್ಳಬಹುದು. ತಂತ್ರಜ್ಞಾನ ಬೆಳೆದಂತೆ ಮಾಧ್ಯಮಗಳ ಸ್ವರೂಪ ಬದಲಾವಣೆ ಈ ಕಾಲದ ಅನಿವಾರ್ಯತೆ ಮತ್ತು ಅವಕಾಶ.