samachara
www.samachara.com
ಸುದ್ದಿಗಳಿಗೆ ವಿಡಿಯೋ ಉಡುಗೆ; ಪೋಡ್ಕಾಸ್ಟ್ ಪತ್ರಿಕೋದ್ಯಮದ ಕಡೆಗೆ ಹೊಸ ನಡಿಗೆ!
ಮೀಡಿಯಾ 2.0

ಸುದ್ದಿಗಳಿಗೆ ವಿಡಿಯೋ ಉಡುಗೆ; ಪೋಡ್ಕಾಸ್ಟ್ ಪತ್ರಿಕೋದ್ಯಮದ ಕಡೆಗೆ ಹೊಸ ನಡಿಗೆ!

ಮೊಬೈಲ್

ಬಳಕೆಯ ಮಾದರಿಯನ್ನೇ ಬದಲಾಯಿಸಿದ್ದು ಸ್ಮಾರ್ಟ್ ಫೋನ್ ಗಳು. ಇವು ಮಾರುಕಟ್ಟೆಗೆ ಲಗ್ಗೆಇಟ್ಟ ಮೇಲೆ ನಿತ್ಯದ ಬದುಕೇ ಬದಲಾಗಿದೆ. ಇದರ ಪರಿಣಾಮ ಎಲ್ಲಾ ರಂಗಗಳಲ್ಲೂ ಆಗಿದೆ, ಆಗುತ್ತಿದೆ. ಇದಕ್ಕೆ ಪತ್ರಿಕೋದ್ಯಮ ಕೂಡ ಹೊರತಾಗಿಲ್ಲ.

ಅಂತರ್ಜಾಲದಿಂದಾಗಿ ಪ್ರಮುಖ ವೃತ್ತಪತ್ರಿಕೆಗಳು, ಸುದ್ದಿ ವಾಹಿನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ. ಕಳೆದುಹೋದ ಗ್ರಾಹಕರನ್ನು ಮಾಧ್ಯಮಗಳು ಆ್ಯಪ್ಗಳಲ್ಲಿ ಹುಡುಕುತ್ತಿವೆ. ಇಂದು ಮುಖ್ಯವಾಹಿನಿಯ ಮಾಧ್ಯಮಗಳು ನಿರಂತರ ಮತ್ತು ಕ್ಷಿಪ್ರವಾಗಿ ಜನರಿಗೆ ಸುದ್ದಿ ತಲುಪಿಸಲು ಆ್ಯಪ್ ಮೊರೆ ಹೋಗಿವೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಸುದ್ದಿ ನೀಡಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಈ ದಿಸೆಯಲ್ಲೇ ಮೂಡಿ ಬಂದಿರುವ ‘ನ್ಯೂಸು’ ಆ್ಯಪ್ ಹೊಸ ಪ್ರಯತ್ನ.

ಭಾರತದಲ್ಲಿ ಆ್ಯಪ್ಗಳಲ್ಲಿ ಸುದ್ದಿ ಕೊಡುವ ವಿಚಾರ ಬಂದಾಗ ಮುಖ್ಯವಾಹಿನಿಯ ಮಾಧ್ಯಮಗಳು ಬಹಳ ಬೇಗನೇ ತಮ್ಮನ್ನು ತಾವು ರೂಪಾಂತರಕ್ಕೆ ಒಗ್ಗಿಸಿಕೊಂಡವು. ಅವುಗಳಲ್ಲಿ ಎನ್ ಡಿ ಟಿವಿ, ಡೈಲಿ ಹಂಟ್ (ಹಿಂದಿನ ನ್ಯೂಸ್ ಹಂಟ್), ಇನ್ ಶಾರ್ಟ್ (ಹಿಂದೆ ನ್ಯೂಸ್ ಇನ್ ಶಾರ್ಟ್) ಪ್ರಮುಖವಾದವು. ಇವುಗಳಲ್ಲಿ ಎನ್ ಡಿ ಟಿವಿ ಮತ್ತು ಡೈಲಿ ಹಂಟ್ ಬಳಕೆದಾರರ ವಿಚಾರಕ್ಕೆ ಬಂದರೆ ಅಗ್ರ ಸ್ಥಾನದಲ್ಲಿವೆ. ಇವುಗಳು ಕೋಟಿಗೂ ಹೆಚ್ಚು ಜನರ ಮೊಬೈಲ್ಗಳಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿವೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಸುದ್ದಿ ನೀಡುವ 'ನ್ಯೂಸ್ ಹಂಟ್'ನದ್ದು ಈ ವಿಚಾರದಲ್ಲಿ ದೊಡ್ಡ ಯಶಸ್ಸೇ ಸರಿ. ಇನ್ನು 'ಇನ್ ಶಾರ್ಟ್' ತಕ್ಕ ಮಟ್ಟಿಗೆ ಜನಪ್ರಿಯತೆ ಗಳಿಸುತ್ತಿದೆ.

ಇದೇ ಹಾದಿಯಲ್ಲಿ ಹೊಸತೊಂದು ಹೆಜ್ಜೆ ಇಟ್ಟಿದೆ ‘ನ್ಯೂಸು’ ಆ್ಯಪ್. ಮಾಧ್ಯಮಗಳ ಆ್ಯಪ್ಗಳಲ್ಲಿ ಇದು ವಿಭಿನ್ನ ಪ್ರಯತ್ನ. ಈ ಆ್ಯಪ್ನಲ್ಲಿ ಒಂದು ಮಿನಿಟ್ನ ವಿಡಿಯೋ ಸುದ್ದಿಗಳನ್ನು ನೋಡಬಹುದು. ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಜೊತೆಗೆ ಹಿಂದಿ ಹಾಗೂ ಇಂಗ್ಲೀಷ್ ಸುದ್ದಿಗಳು ನಿಮಗೆ ಇಲ್ಲಿ ನೋಡಲು ಸಿಗುತ್ತವೆ. ಈ ಆ್ಯಪ್ ಹೊರ ತಂದವರು ಪಬ್ಲಿಕ್ ಟಿವಿಯ ಸಂಪಾದಕ ಎಚ್. ಆರ್. ರಂಗನಾಥ್ ಮತ್ತು 'ಇಟಿ ನೌ' ಇಂಗ್ಲಿಷ್ ಬಿಸಿನೆಸ್ ವಾಹಿನಿಯ ಮಾಜಿ ವ್ಯವಸ್ಥಾಪಕ ಸಂಪಾದಕರಾಗಿದ್ದ ಆರ್. ಶ್ರೀಧರನ್.

ಇಷ್ಟರವರೆಗೆ ಸುದ್ದಿ ವಾಹಿನಿಗಳು ತಮ್ಮ ಸುದ್ದಿಯನ್ನು ಆ್ಯಪ್ ಗಳಲ್ಲಿ ನೀಡುತ್ತಿದ್ದವು. ಆದರೆ ಆ ಮಾದರಿಯನ್ನು ಮುರಿದು ತನ್ನದೇ ಮಾದರಿಯಲ್ಲಿ ಒಂದು ನಿಮಿಷದೊಳಗೆ ಸುದ್ದಿಯನ್ನು ನೀಡಲು ಹೊರಟಿದೆ ‘ನ್ಯೂಸು’. ಈ ರೀತಿಯ ಆ್ಯಪ್ ಗಳು ಈ ಹಿಂದೆ ಬಂದಿಲ್ಲ. ಅದಕ್ಕೆ ಕಾರಣ ತಂತ್ರಜ್ಞಾನದ ಮಿತಿ. 2ಜಿ ತಂತ್ರಜ್ಞಾನವಿದ್ದ ಕಾಲದಲ್ಲಿ ವಿಡಿಯೋ ನೋಡುವುದು ಅಸಾಧ್ಯವಾಗಿತ್ತು. ಈಗ 3ಜಿ ಮತ್ತು 4ಜಿ ತಂತ್ರಜ್ಞಾನಗಳು ಬಂದಿವೆ. ಹೀಗಾಗಿ ಆರಾಮವಾಗಿ ವಿಡಿಯೋ ನೋಡಬಹುದು. ಜೊತೆಗೆ ಇಂದು ಹೆಚ್ಚಿನ ಆಫೀಸ್ ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಅಳವಡಿಸಲಾಗುತ್ತಿದೆ. ಹೀಗಾಗಿ ವಿಡಿಯೋ ನೋಡಲು ಡೇಟಾ ಇವತ್ತು ಅಡ್ಡಿಯಾಗಿ ಉಳಿದಿಲ್ಲ.

ಕೆಲವೊಮ್ಮೆ ಕಾಲಕ್ಕಿಂತ ಮುಂದೆ ಹೊರಟ ಪ್ರಯತ್ನಗಳಲ್ಲಿ ಹೊಸತನವನ್ನು ಕಾಣಬಹುದಾದರೂ ಯಶಸ್ಸಿನ ಬಗ್ಗೆ ಅನುಮಾನಗಳಿರುತ್ತವೆ. ಬಹುಶಃ ಈ 'ನ್ಯೂಸು' ಕೂಡ ಸ್ಥಳೀಯ ಭಾಷೆಯಲ್ಲಿ ವಿಡಿಯೋ ನೀಡಲು ಹೊರಟಿರುವುದು ಜನರ ಕಾಲದ ಅಗತ್ಯ ಅಥವಾ ಗ್ರಾಹಕರ ಬೇಡಿಕೆಗಿಂತ ಒಂದು ಹೆಜ್ಜೆ ಮುಂದಿದೆ. ಸ್ಥಳೀಯ ಅಂತರ್ಜಾಲ ಮಾರುಕಟ್ಟೆ ಇನ್ನೂ ತನ್ನ ಗ್ರಾಹಕರ ಮೆಚುರಿಟಿಯನ್ನು ಬೇಡುತ್ತಿದೆ. ಈ ಸಮಯದಲ್ಲಿ 'ನ್ಯೂಸು' ತನ್ನ ವಿನೂತನ ಪ್ರಯತ್ನಕ್ಕೆ ಹೊರಟಿದೆ. "ಬಿಸ್ಲೇರಿ ಕಂಪನಿ ಶುರುವಾದಾಗ ಜನ ನೀರನ್ನೂ ಕೊಂಡು ಕುಡಿಯಬಹುದು ಎಂಬ ನಿರೀಕ್ಷೆ ಕೂಡ ಇರಲಿಲ್ಲ. ಇವತ್ತು ಯಾವುದೇ ಕಂಪನಿಯ ನೀರು ಮಾರುಕಟ್ಟೆಗೆ ಬಂದರೂ, ಜನ ಕೇಳುವುದು ಬಿಸ್ಲೇರಿ ನೀರು ಕೊಡಿ ಅಂತ. ಹೀಗಾಗಿ. ಹೊಸತನಕ್ಕೆ ಗೆಲ್ಲುವ ಸಾಧ್ಯತೆ ಉಳಿದವರಿಗಿಂತ ಹೆಚ್ಚಿರುತ್ತದೆ,'' ಎನ್ನುತ್ತಾರೆ ಹಿರಿಯ ಸಂಪಾದಕರೊಬ್ಬರು.

ನಮ್ಮಲ್ಲಿನ್ನೂ ವೈ- ಫೈ ಬಳಕೆದಾರರ ಸಂಖ್ಯೆ ಕಡಿಮೆ ಇದೆ. ವಿಡಿಯೋ ಪ್ಲೇ ಮಾಡಲು ಹೆಚ್ಚು ಡೇಟಾ ಬೇಕು. ಮೊದಲೇ ಡೇಟಾ ದರಗಳು ದುಬಾರಿ. ಹೀಗಾಗಿ ‘ನ್ಯೂಸು’ ಆ್ಯಪ್ ಎಷ್ಟು ಜನರಿಂದ ನಿರಂತರ ಬಳಕೆ ಆಗಬಲ್ಲದು ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ರಂಗನಾಥ್ ಇದರ ಹಿಂದಿರುವ ಕಾರಣಕ್ಕೆ ಏನೋ, 'ಪಬ್ಲಿಕ್ ಟಿವಿ'ಯ ಸುದ್ದಿಗಳ ವಿಡಿಯೋ ಮಾತ್ರವೇ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇದು ವೈವಿಧ್ಯತೆ ಪಡೆದುಕೊಳ್ಳಬಹುದು. ಅದಕ್ಕೆ ಜನರ ಪ್ರತಿಕ್ರಿಯೆ ಏನು ಎಂಬುದು ವಿಡಿಯೋ ಪೋಡ್ಕಾಸ್ಟ್ ಕ್ಷೇತ್ರದ ಭವಿಷ್ಯವನ್ನು ನಿರ್ಧರಿಸಲಿದೆ.