ಪತ್ರಕರ್ತರಿಗೆ ರಾಜಧಾನಿಯಲ್ಲಿ ಹೊಡೆತ ಬಿದ್ರೆ ಮಾತ್ರ ಅನ್ಯಾಯನಾ ರಂಗಣ್ಣ?
ಮೀಡಿಯಾ 2.0

ಪತ್ರಕರ್ತರಿಗೆ ರಾಜಧಾನಿಯಲ್ಲಿ ಹೊಡೆತ ಬಿದ್ರೆ ಮಾತ್ರ ಅನ್ಯಾಯನಾ ರಂಗಣ್ಣ?

ಹಾಸನದ ಸಿಗರೇನಹಳ್ಳಿ ಊರ ಜಾತ್ರೆಯಲ್ಲಿ ಎರಡು ಪ್ರಮುಖ ಪತ್ರಿಕೆಗಳ ವರದಿಗಾರರ ಮೇಲೆ ಗಂಭೀರ ಪ್ರಮಾಣದ ಹಲ್ಲೆಗೆ ಸಿಗದ ಪ್ರಾಮುಖ್ಯತೆ

Summary

ಮಾಧ್ಯಮಗಳ ಜತೆ ಸಂಬಂಧ ಹಳಸಿದರೆ ಏನಾಗಬಹುದು ಎಂಬುದರ ಹೊಸ ಸ್ಯಾಂಪಲ್ ಒಂದು ಶುಕ್ರವಾರ ರಾತ್ರಿ ಕರ್ನಾಟಕದ ಜನರಿಗೆ ಪರಿಚಯಿಸಲಾಯಿತು. ಈ ಬಾರಿ ಸುದ್ದಿಕೇಂದ್ರದಲ್ಲಿ ಇರುವವರು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್. ರಂಗನಾಥ್ ಹಾಗೂ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ.

ರಂಗಣ್ಣ ನೇತೃತ್ವದ ಪಬ್ಲಿಕ್ ಟಿವಿ ಮತ್ತು ರಾಘವೇಶ್ವರ ಸ್ವಾಮಿ ನಡುವೆ ಎರಡು ವರ್ಷಗಳಿಂದ ನಡೆಯುತ್ತಿದ್ದ ಶೀತಲ ಸಮರ ತಾರಕ್ಕೇರಿದೆ. ಇದಕ್ಕೆ ಕಾರಣ ಗುರುವಾರ ಸೆಷನ್ಸ್ ಕೋರ್ಟ್ ರಾಘವೇಶ್ವರ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನೀಡಿದ ಆದೇಶ. ಸ್ವಾಮಿ ವಿರುದ್ಧ ಕೇಸು ದಾಖಲಿಸಿದ್ದ ಪ್ರೇಮಲತಾ ಅವರ ಆರೋಪಗಳನ್ನು ಕೈಬಿಟ್ಟ ನ್ಯಾಯಾಲಯ ಮಠದ ಭಕ್ತರಿಗೆ ಒಂದು ಹಂತದಲ್ಲಿ ನಿರಾಳತೆ ಮೂಡಿಸುವ ಆದೇಶವನ್ನು ನೀಡಿತು. ಈ ಹಿನ್ನೆಲೆಯಲ್ಲಿ ವರದಿ ಮಾಡುವ ಸಲುವಾಗಿ ಬೆಂಗಳೂರಿನ ಗಿರಿನಗರದಲ್ಲಿರುವ ರಾಘವೇಶ್ವರ ಮಠಕ್ಕೆ ತೆರಳಿದ 'ಪಬ್ಲಿಕ್ ಟಿವಿ' ತಂಡ ಮಠದ ಭಕ್ತರ ಕೋಪಕ್ಕೆ ಗುರಿಯಾಗಿದ್ದಾರೆ.

ಈ ಸಮಯದಲ್ಲಿ "ತಪ್ಪಾಯ್ತು, ಕ್ಷಮಿಸಿ..." ಎಂದ ಟಿವಿ ವಾಹಿನಿಯ ತಂಡ ಅಲ್ಲಿಂದ ವಾಪಾಸಾಗಿದೆ.ಈ ಬೆಳವಣಿಗೆ ಸಹಜವಾಗಿಯೇ 'ಪಬ್ಲಿಕ್ ಟಿವಿ'ಯಲ್ಲಿ ಕಂಪನ ಮೂಡಿಸಿತು. ಕೊನೆಗೆ, ಸೆಷನ್ಸ್ ನ್ಯಾಯಾಲಯದ ಸದರಿ ಆದೇಶವನ್ನು ಕೂಲಂಕಷ ಅಧ್ಯಯನ ನಡೆಸಿ ಹಿರಿಯ ವಕೀಲ ಎಂ. ಟಿ. ನಾಣಯ್ಯ ನೀಡಿದ ಮಾಹಿತಿ ಮೇರೆಗೆ 'ಪಬ್ಲಿಕ್ ಟಿವಿ' ಇಡೀ ಪ್ರಕರಣಕ್ಕೆ ಹೊಸದೊಂದು 'ಟ್ವಿಸ್ಟ್' ನೀಡಿತು. ಬಹುಶಃ 'ರಾಘವೇಶ್ವರ ಸ್ವಾಮಿಜಿಗೆ ಬಿಗ್ ರಿಲೀಫ್' ಎಂದು ಕೊನೆಗೊಳ್ಳಬಹುದಾದ ಸುದ್ದಿಯೊಂದು ಹೊಸ ಆಯಾಮ ಪಡೆದುಕೊಂಡು ಜನರ ಮುಂದೆ ಭಿತ್ತರವಾಗಲು ಇದು ಕಾರಣವಾಗಿದೆ. ಮಾಧ್ಯಮಗಳ ಜತೆ ಸಂಬಂಧ ಹಳಸದಂತೆ ನೋಡಿಕೊಳ್ಳುವ ಅನಿವಾರ್ಯ ಪಾಠ ಮತ್ತೊಮ್ಮೆ ಜನರ ಸಮ್ಮುಖದಲ್ಲಿ ಹೇಳಲಾಯಿತು.

ಚಿಕ್ಕದೊಂದು ರಿಕ್ಯಾಪ್:

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿ ವಿರುದ್ಧ2014ರ ಮಧ್ಯಭಾಗದಲ್ಲಿ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಸೆಷನ್ಸ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಸ್ವಾಮಿ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ಟಿವಿಯಲ್ಲಿ ಚರ್ಚೆ ನಡೆಸುತ್ತಿದ್ದ 'ಪಬ್ಲಿಕ್ ಟಿವಿ' ಸಂಪಾದಕ ಎಚ್ ಆರ್ ರಂಗನಾಥ್, "ಸ್ವಾಮೀಜಿಗಳು ತಪ್ಪು ಮಾಡಿಲ್ಲವೆಂದಾದರೆ ಹೆದರುವ ಅಗತ್ಯವೇಕೆ?" ಎಂದಿದ್ದರು.

ಅಷ್ಟೇ ಅಲ್ಲ, ರಾಮಚಂದ್ರಾಪುರ ಮಠದ ಬಗೆಗಿನ ಎಲ್ಲಾ ವರದಿಗಳನ್ನೂ ಸವಿವರವಾಗಿ ಪ್ರಸಾರ ಮಾಡುತ್ತಾ, ವಿಶ್ಲೇಷಣೆಗಳನ್ನು ನಡೆಸುತ್ತಾ ಬಂದಿದ್ದರು. ಹೀಗಾಗಿ, ರಂಗಣ್ಣ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಠದ ಭಕ್ತರು ತಿರುಗಿ ಬಿದ್ದಿದ್ದರು. ಅವಾಚ್ಯ ಶಬ್ದಗಳಲ್ಲಿ ನಿಂದಿಸುವ ಸಂಸ್ಕೃತಿಯನ್ನು ಅನುಸರಿಸಲು ಶುರುಮಾಡಿದ್ದರು. ಈ ಕುರಿತು 'ಪಬ್ಲಿಕ್ ಟಿವಿ' ಕೇಸನ್ನೂ ದಾಖಲಿಸಿತ್ತು. ಅದು ರಾಮಚಂದ್ರಾಪುರ ಮಠ ಮತ್ತು 'ಪಬ್ಲಿಕ್ ಟಿವಿ' ನಡುವೆ ಶೀತಲ ಸಮರಕ್ಕೆ ಮುನ್ನುಡಿ ಬರೆದಿತ್ತು.

ಹೊಸ ಬೆಳವಣಿಗೆ:

ಹೀಗಿದ್ದೂ, ಮಠದ ಪರವಾಗಿರುವವರಿಗೂ 'ಪಬ್ಲಿಕ್ ಟಿವಿ' ತನ್ನ ಪ್ಯಾನಲ್ ಚರ್ಚೆಯಲ್ಲಿ ಅವಕಾಶ ನೀಡುತ್ತ ಬಂದಿತ್ತು. ಹೀಗಿದ್ದಾಗ, ಗುರುವಾರ ಸೆಷನ್ಸ್ ನ್ಯಾಯಾಲಯ ಸಾಕ್ಷಿಗಳ ಕೊರತೆಯಿಂದ ರಾಘವೇಶ್ವರ ವಿರುದ್ಧದ ಪ್ರಕರಣದಲ್ಲಿ ಸ್ವಾಮೀಜಿಯನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿತು. ಇದನ್ನು ಎಲ್ಲಾ ಮಾಧ್ಯಮಗಳು 'ಶ್ರೀಗಳ ಖುಲಾಸೆ' ಎಂದು ವರದಿ ಪ್ರಕಟಿಸುತ್ತಿದ್ದವು. ಆದರೆ 'ಪಬ್ಲಿಕ್ ಟಿವಿ' ಅತ್ಯಾಚಾರ ಆರೋಪವನ್ನು ಮಾಡಿದ್ದ ಪ್ರೇಮಲತಾ ದಿವಾಕರ್ ಅವರ ಮಾತುಗಳಿಗೂ ವೇದಿಕೆ ಕಲ್ಪಿಸಿಕೊಟ್ಟಿತು.

ಇದು ಸಹಜವಾಗಿಯೇ ವಿಜಯೋತ್ಸವದಲ್ಲಿದ್ದ ಮಠದ ಭಕ್ತರಿಗೆ ನೋವು ಉಂಟುಮಾಡಿತು.ಶುಕ್ರವಾರ ಮಧ್ಯಾಹ್ನ 1: 15ಕ್ಕೆ ರಾಘವೇಶ್ವರರು ಸಂದರ್ಶಿಸಲು 'ಪಬ್ಲಿಕ್ ಟಿವಿ' ತಂಡ ಗಿರಿನಗರದ ಶಾಖಾ ಮಠಕ್ಕೆ ತೆರಳಿತ್ತು. ಇದಕ್ಕಾಗಿ ಮೊದಲೇ ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣ ಪ್ರಸಾದ್ ರನ್ನು ಕೇಳಿ ಅನುಮತಿಯನ್ನೂ ಪಡೆದುಕೊಂಡಿತ್ತು. ಅದರಂತೆ ಸಂದರ್ಶನಕ್ಕಾಗಿ ಸುದ್ದಿ ನಿರೂಪಕ ಅರುಣ್ ಬಡಿಗೇರ್ ತಂಡದೊಂದಿಗೆ ಮಠಕ್ಕೆ ತೆರಳಿದ್ದರು.

ಈ ಸಂದರ್ಭ ಮಠದ ಒಳಗೆ ಕ್ಯಾಮೆರಾಮನ್ ಜತೆ ಅರುಣ್ ತೆರಳುತ್ತಿದ್ದಂತೆ  ಅಲ್ಲಿದ್ದ ಭಕ್ತರು 'ಪಬ್ಲಿಕ್ ಟಿವಿ' ಸಂಪಾದಕರಾದ ರಂಗನಾಥ್ ರನ್ನು ಏಕವಚನದಲ್ಲಿ ಹೀಯಾಳಿಸಿದ್ದಾರೆ ಎನ್ನಲಾಗಿದೆ. ಇದು ವಾಗ್ವಾದಕ್ಕೆ ಕಾರಣವಾಗಿದೆ. ಮಹಿಳಾ ಭಕ್ತರು ಸೇರಿ ಒಂದಷ್ಟು ಜನ ‘ಕ್ಯಾಮೆರಾ ಆಫ್ ಮಾಡೋ ಮೊದ್ಲು’, ‘ಮಾತಾಡೋದೇನು? ಹೋಗ್ತಾ ಇರು ಹೋಗ್ತಾ ಇರು’ ಎಂದು ಉದ್ರೇಕಗೊಂಡಿದ್ದಾರೆ. ಕೊನೆಗೆ 'ಪಬ್ಲಿಕ್ ಟಿವಿ' ಕ್ಷಮಾಪಣೆ ಕೇಳಿ ವಾಪಾಸಾಗಿದೆ.

ಟಿವಿ ಪರದೆ ಮೇಲೆ:

ಬಂದವರೇ ಈ ವಿಚಾರವಾಗಿ ಚರ್ಚೆ ಆರಂಭಿಸಿದ್ದಾರೆ. ಜಗಳಕ್ಕೆ ಬಂದ ರಾಮಚಂದ್ರಾಪುರ ಮಠದ ಭಕ್ತರನ್ನು ಟಿವಿ ಪರದೆ ಮೇಲೆ 'ಗೂಂಡಾ ಭಕ್ತ 1', 'ಭಕ್ತ 2' ಎಂಬುದಾಗಿ ಕೆಂಪು ವೃತ್ತ ಎಳೆದು ತೋರಿಸಲು ಆರಂಭಿಸಿದ್ದಾರೆ. ಜೊತೆಗೆ ಕರೆದು ಅವಮಾನಿಸಿದ ರಾಮಚಂದ್ರಾಪುರ ಮಠ ಎಂಬುದಾಗಿಯೂ ಉಲ್ಲೇಖಿಸಿದ್ದಾರೆ (ಇನ್ನೊಂದು ಕಡೆ ಚಾನಲ್ ನಲ್ಲೇ ಪ್ರಸಾರವಾದ ವರದಿಯ ಪ್ರಕಾರ- ಮಠದಿಂದ ಆಮಂತ್ರಣ ಬಂದಿಲ್ಲ).

ಆಗ ಪ್ರತಿಕ್ರಿಯೆ ನೀಡಿದ ಮಠದ ಪಿಆರ್ ಒ ಕೃಷ್ಣ ಪ್ರಸಾದ್, ‘ರಾಘವೇಶ್ವರ ಶ್ರೀಗಳನ್ನು ವ್ಯಂಗ್ಯ ಮಾಡಿದ್ದೇ ಘಟನೆಗೆ ಕಾರಣ. ಅಲ್ಲಿ ಯಾವುದೇ ರೌಡಿಸಂ ನಡೆದಿಲ್ಲ. ಕೇವಲ ವಾಗ್ವಾದವಾಗಿದೆ’ ಎಂದು ಸಮರ್ಥಿಸಿಕೊಂಡರು.

ಈ ವಿಚಾರವಾಗಿ ಸ್ಪಷ್ಟನೆ ನೀಡಿದ ರಂಗನಾಥ್ “ಇವತ್ತು ದಿನ ಏನೋ ನಮ್ಮ ಅರುಣ್ ಬಡಿಗೇರನ್ನು ಕರೆಸಿ ಅವಮಾನ ಮಾಡಿದ್ರಂತೆ, ಯಾಕ್ರೀ ಅವಮಾನ ಅಂತ ಪರಿಗಣಿಸ್ತೀರಿ ಇದನ್ನಾ? ಪತ್ರಿಕೋದ್ಯದಲ್ಲಿ ಇಂಥ ಅವಮಾನಗಳು, ಇಂಥಹ ಹಲ್ಲೆಗಳು, ಕುಹಕಗಳು ಇವನ್ನೆಲ್ಲಾ ನೋಡಿಯೇ ಅನುಭವಿಸಬೇಕು. ಇದು ನಮ್ಮ ಕರ್ಮ. ನಾವು ಇದನ್ನು ದ್ವೇಷ ಅಂತನೂ, ನಮ್ಮ ಮೇಲೆ ನಡೆದ ದಾಳಿ ಎಂದೂ ಪರಿಗಣಿಸಲ್ಲ, ಅವಮಾನ ಎಂದೂ ಪರಿಗಣಿಸುವುದಿಲ್ಲ. 'ಪಬ್ಲಿಕ್ ಟಿವಿ' ರಾಮಚಂದ್ರಾಪುರ ಮಠದ ಆಸ್ತಿಯೂ ಅಲ್ಲ, ಪ್ರೇಮಲತಾ ಆಸ್ತಿಯೂ ಅಲ್ಲ. ಇದನ್ನು ನೆನಪಿಟ್ಟುಕೊಳ್ಳಿ. ಸುದ್ದಿಯನ್ನು ಸುದ್ದಿಯಾಗಿ ಕೊಡ್ತೇವೆ,” ಎಂದು ಪ್ರತಿಕ್ರಿಯಿಸಿದ್ದಾರೆ.

ರಂಗಣ್ಣ ಮರೆತದ್ದು ಏನು?

ಇತ್ತೀಚೆಗೆ ಹಾಸನದಲ್ಲಿ ‘ವಿಶ್ವವಾಣಿ’ಯ ವರದಿಗಾರ ವಸಂತಯ್ಯ ಮತ್ತು ‘ವಿಜಯವಾಣಿ’ಯ ಕೃಷ್ಣ ಅವರ ಮೇಲೆ ಏಕಾಏಕಿ ಆಕ್ರಮಣ ನಡೆಸಿದ ಮಹಿಳೆಯರು ಮತ್ತು ಪುರುಷರಿದ್ದ ತಂಡ ದೊಣ್ಣೆ, ಇಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಯಿತು.

ಕಾಕತಾಳೀಯ ಎಂಬಂತೆ ಶುಕ್ರವಾರ ಮಧ್ಯಾಹ್ನ 1:30ಕ್ಕೆ ಹಾಸನದ ಸಿಗರೇನಹಳ್ಳಿ ಊರ ಜಾತ್ರೆಯಲ್ಲಿ ಎರಡು ಪ್ರಮುಖ ಪತ್ರಿಕೆಗಳ ವರದಿಗಾರರ ಮೇಲೆ ಗಂಭೀರ ಪ್ರಮಾಣದ ಹಲ್ಲೆಯಾಗಿದೆ. ಜಾತ್ರೆ ವೇಳೆ, ದಲಿತರು ಪಾಲ್ಗೊಳ್ಳದಂತೆ ಮತ್ತು ದೇವಸ್ಥಾನ ಪ್ರವೇಶಕ್ಕೆ ದಲಿತರಿಗೆ ನಿಷೇಧ ಹೇರಲಾಗಿದೆ ಎಂಬ ಸುದ್ದಿ ಬಂದಿದೆ. ಇದನ್ನು ವರದಿ ಮಾಡಲು 'ವಿಶ್ವವಾಣಿ'ಯ ವರದಿಗಾರ ವಸಂತಯ್ಯ ಮತ್ತು 'ವಿಜಯವಾಣಿ'ಯ ಕೃಷ್ಣ ಹೋಗಿದ್ದರು. ಈ ವೇಳೆ, ಏಕಾಏಕಿ ಆಕ್ರಮಣ ನಡೆಸಿದ ಮಹಿಳೆಯರು ಮತ್ತು ಪುರುಷರಿದ್ದ ತಂಡ ದೊಣ್ಣೆ, ಇಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ.

ಕೃಷ್ಣ ಧರಿಸಿದ್ದ ಹೆಲ್ಮೆಟ್ ಎರಡು ಹೋಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕೊನೆಗೆ, ಹಲ್ಲೆ ನಡೆಸಿದ ಗುಂಪಿನಿಂದ ತಪ್ಪಿಸಿಕೊಂಡ ಪತ್ರಕರ್ತರು ಹೊಳೆನರಸೀಪುರ ಆಸ್ಪತ್ರೆ ಸೇರಿದ್ದಾರೆ. ಘಟನೆಯಲ್ಲಿ ವರದಿಗಾರ ಕೃಷ್ಣ ಅವರ ಬೈಕ್ ಗೆ ಬೆಂಕಿ ಹಚ್ಚಲಾಗಿದೆ. 25 ಸಾವಿರ ಮೌಲ್ಯದ ಕ್ಯಾಮೆರಾ ಆಕ್ರಮಣಕಾರರ ಆಕ್ರೋಶಕ್ಕೆ ತುತ್ತಾಗಿದೆ. ಘಟನೆಯಲ್ಲಿ ಐವರು ಪೊಲೀಸರೂ ಗಾಯಗೊಂಡಿದ್ದಾರೆ. ಇದು 'ಸುವರ್ಣ ನ್ಯೂಸ್' ಹೊರತು ಪಡಿಸಿದರೆ, 'ಪಬ್ಲಿಕ್ ಟಿವಿ' ಸೇರಿದಂತೆ ಯಾವ ಸುದ್ದಿ ವಾಹಿನಿಗಳಲ್ಲೂ ಪ್ರಮುಖ ವಿಚಾರವಾಗಿ ಭಿತ್ತರವಾಗಲೇ ಇಲ್ಲ.

ನಿಜ, ರಂಗಣ್ಣ ಹೇಳಿದಂತೆ ಇದು ಪತ್ರಕರ್ತರ ಕರ್ಮವೇ. ಹಲ್ಲೆ, ಕುಹುಕಗಳನ್ನು ಅನುಭವಿಸಿಯೇ ವೃತ್ತಿಯನ್ನು ಮುಂದುವರಿಸಬೇಕು. ಆದರೆ, ರಾಜಧಾನಿಯಲ್ಲಿ ಆದ ಹಲ್ಲೆಯಷ್ಟೆ ಪ್ರಾಮುಖ್ಯತೆ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಹಲ್ಲೆಗಳಿಗೂ ಪ್ರಾಮುಖ್ಯತೆ ಟಿವಿ ಪರದೆಯಲ್ಲಿ ಸಿಗಬೇಕು... ನ್ಯಾಯ ಅಲ್ವಾ ರಂಗಣ್ಣ?