LIVE: ಗದ್ದುಗೆಗೇರಿದ ಕುಮಾರಸ್ವಾಮಿ; ಸಧ್ಯಕ್ಕೆ ಸಮ್ಮಿಶ್ರ ಸರಕಾರ ನಿರಾತಂಕ
LIVE
live

LIVE: ಗದ್ದುಗೆಗೇರಿದ ಕುಮಾರಸ್ವಾಮಿ; ಸಧ್ಯಕ್ಕೆ ಸಮ್ಮಿಶ್ರ ಸರಕಾರ ನಿರಾತಂಕ

ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಕರ್ನಾಟಕ ರಾಜ್ಯ ರಾಜಕಾರಣ ಹಲವಾರು ಏಳುಬೀಳುಗಳನ್ನು ಕಂಡಿದೆ. ಸಿಎಂ ಆಗಿ ಅಧಿಕಾರ ಹಿಡಿದಿರುವ ಕುಮಾರಸ್ವಾಮಿ ಇಂದು ಬಹುಮತ ಸಾಬೀತು ಪಡಿಸಲಿದ್ದಾರೆ. ಬಹುಮತದ ಲೈವ್ ಮಾಹಿತಿಯನ್ನು ಸಮಾಚಾರ ನಿಮ್ಮ ಮುಂದಿಡಲಿದೆ.

ಸಧ್ಯಕ್ಕೆ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರಕಾರ ನಿರಾತಂಕ:

ಸದನದಲ್ಲಿ ಕುಮಾರಸ್ವಾಮಿ ವಿಶ್ವಾಸ ಮತವನ್ನು ಸಾಬೀತು ಪಡಿಸಿದ್ದಾರೆ. ಈ ಸಧ್ಯಕ್ಕಂತೂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ನಿರಾತಂಕವಾಗಿದೆ. ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ನಿಶ್ಚಿತಗೊಂಡಿದೆ.

ಈ ಕುರಿತ ವರದಿ ಮತ್ತು ವಿಶ್ಲೇಷಣೆಗಳಿಗಾಗಿ ನಿರೀಕ್ಷಿಸಿ. ಇದುವರೆಗೂ ‘ಸಮಾಚಾರ’ ಲೈವ್‌ ಬ್ಲಾಗ್‌ ಮೂಲಕ ಮಾಹಿತಿ ಪಡೆದಿದ್ದಕ್ಕಾಗಿ ಧನ್ಯವಾದಗಳು.

Last updated

ವಿಶ್ವಾಸ ಮತ ಸಾಬೀತು ಪಡಿಸಿದ ಕುಮಾರಸ್ವಾಮಿ:

ಬಿಜೆಪಿ ಸದಸ್ಯರ ಸಭಾ ತ್ಯಾಗದ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಪಡಿಸಿದ್ದಾರೆ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ನಡೆಯುವುದಕ್ಕೆ ದಾರಿ ಸುಗಮವಾಗಿದೆ. ವಿಪಕ್ಷದ ಅನುಪಸ್ಥಿತಿಯಲ್ಲಿ ಕುಮಾರಸ್ವಾಮಿ ಗದ್ದುಗೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Last updated

‘ಐಟಿ, ಇಡಿ ಮೂಲಕ ಬೆದರಿಕೆ’:

ಯಡಿಯೂರಪ್ಪ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, “ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯದ (ಇಡಿ) ಮೂಲಕ ಹೆದರಿಸಿ ಕೇಂದ್ರ ಬಿಜೆಪಿ ಸರಕಾರ ರಾಜಕಾರಣ ಮಾಡುತ್ತಿದೆ” ಎಂದು ಟೀಕಿಸಿದ್ದಾರೆ.

Last updated

ಬಿಜೆಪಿ ಸದಸ್ಯರಿಂದ ಸಭಾತ್ಯಾಗ:

ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಮ್ಮ ಭಾಷಣ ಮುಗಿಸಿದ ಬಳಿಕ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

Last updated

ಸೋಮವಾರ ರಾಜ್ಯ ಬಂದ್?:

“ಜೆಡಿಎಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಾಲಮನ್ನಾ ಮಾಡದಿದ್ದರೆ ಸೋಮವಾರ ರಾಜ್ಯ ಬಂದ್” – ಬಿ.ಎಸ್. ಯಡಿಯೂರಪ್ಪ

Last updated

‘ಕಾಂಗ್ರೆಸ್‌ನವರೆ ಇದು ನಿಮ್ಮ ಹಣೆಬರಹ’:

“ಕುಮಾರಸ್ವಾಮಿಯಂಥವರ ಜತೆಗೆ ಹೆಣಗುವ ಹಣೆಬರಹ ನಿಮ್ಮದು ಕಾಂಗ್ರೆಸ್ನವರೆ. ನಾನ್ಯಾರು ಅದನ್ನು ತಡೆಯುವುದಕ್ಕೆ?” – ಬಿ.ಎಸ್. ಯಡಿಯೂರಪ್ಪ

Last updated

‘ದಿನಗೂಲಿ ಸರ್ಕಾರ’:

“ಕುಮಾರಸ್ವಾಮಿ ನೇತೃತ್ವದ ಈ ಸರಕಾರಕ್ಕೆ ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ. ಇದು ದಿನಗೂಲಿ ಸರಕಾರ. ಈ ಸರಕಾರವನ್ನು ನೋಡಿದರೆ ಕವಿ ಗೋಪಾಲಕೃಷ್ಣ ಅಡಿಗರ, ‘ಹೆಳವನ ಹೆಗಲ ಮೇಲೆ ಕುರುಡ ಕುಂತಿದ್ದಾನೆ, ದಾರಿ ಸಾಗುವುದೆಂತೋ ನೋಡಬೇಕು’ ಎಂಬ ಸಾಲುಗಳು ನೆನಪಾಗುತ್ತವೆ” – ಬಿ.ಎಸ್. ಯಡಿಯೂರಪ್ಪ

Last updated

‘ಕುಮಾರಸ್ವಾಮಿ ಮನೆದೇವರು ದುರ್ಯೋಧನ’:

“ದುರ್ಯೋಧನ ಕುಮಾರಸ್ವಾಮಿ ಅವರ ಮನೆದೇವರಾಗಿರಬೇಕು. ವಿನಾಶಕೋರನ ಬಾಯಲ್ಲಿ ವಿಕಾಸದ ಮಾತು ಕೇಳಬೇಕಾದ ಪರಿಸ್ಥಿತಿ ಬಂದಿದೆ” – ಬಿ.ಎಸ್. ಯಡಿಯೂರಪ್ಪ

Last updated

‘ಅಪ್ಪ ಮಕ್ಕಳ ವಿರುದ್ಧ ಹೋರಾಟ’:

“ನಮ್ಮ ಹೋರಾಟ ಅಧಿಕಾರಕ್ಕಾಗಿ ಕುಣಿದು ಕುಪ್ಪಳಿಸುತ್ತಿರುವ ಅಪ್ಪ ಮಕ್ಕಳ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧ ಅಲ್ಲ” – ಬಿ.ಎಸ್. ಯಡಿಯೂರಪ್ಪ

Last updated

‘ಕುಮಾರಸ್ವಾಮಿ ಮುಳುಗುವ ದೋಣಿ’:

“ಕುಮಾರಸ್ವಾಮಿ ಅವರ ಮುಳುಗೋ ದೋಣಿಯಲ್ಲಿ ನೀವೂ ಮುಳಗಬೇಕು ಎಂಬ ಆಸೆ ಡಿ.ಕೆ. ಶಿವಕುಮಾರ್ ಅವರೇ ನಿಮಗಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ. ನಿಮ್ಮೆಲ್ಲರಿಗಿಂತ ಚೆನ್ನಾಗಿ ಕುಮಾರಸ್ವಾಮಿ ಅವರ ಬಗ್ಗೆ ನನಗೆ ಗೊತ್ತಿದೆ” – ಬಿ.ಎಸ್. ಯಡಿಯೂರಪ್ಪ

Last updated

‘ನಿಮ್ಮನ್ನು ನಂಬಿದವರಿಗೆಲ್ಲಾ ಕೈ ಕೊಟ್ಟಿರಿ’:

“ಕುಮಾರಸ್ವಾಮಿ ನೀವು ಜಮೀರ್ ಅಹಮದ್ಗೆ ಕೈ ಕೊಟ್ಟಿರಿ, ಬಾಲಕೃಷ್ಣಗೆ ಕೈ ಕೊಟ್ಟಿರಿ, ಚೆಲುವರಾಯಸ್ವಾಮಿಗೆ ಕೈ ಕೊಟ್ಟಿರಿ. ನಿಮ್ಮನ್ನು ನಂಬಿದವರಿಗೆಲ್ಲಾ ಕೈ ಕೊಟ್ಟಿರಿ. ಇಂಥವರನ್ನು ಮುಖ್ಯಮಂತ್ರಿ ಮಾಡಿ, ಡಿ.ಕೆ. ಶಿವಕುಮಾರ್ ಅವರೇ ಈಗ ನೀವು ಅಕ್ಷಮ್ಯ ಅಪರಾಧ ಮಾಡಿದ್ದೀರಿ” – ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ

Last updated

‘ಅಕ್ಷಮ್ಯ ಅಪರಾಧ’:

“ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಕಾಲ ನಾನು ಒಂದು ಪ್ರಶ್ನೆಯನ್ನೂ ಮಾಡಲಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಬಂದೆ. 20 ತಿಂಗಳ ಬಳಿಕ ಅಧಿಕಾರ ಹಸ್ತಾಂತರಿಸಬೇಕಾದಾಗ ಹೊಸ ಷರತ್ತುಗಳನ್ನು ಹಾಕಿದರು. 20 ತಿಂಗಳ ಕಾಲ ಕುಮಾರಸ್ವಾಮಿ ಅವರ ಜೊತೆ ಅಧಿಕಾರ ಹಂಚಿಕೊಂಡಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಅಕ್ಷಮ್ಯ ಅಪರಾಧ” – ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ

Last updated

‘ಅಧಿಕಾರ ಸದ್ಬಳಕೆ ಯಾಕೆ ಆಗಲಿಲ್ಲ’:

“2008ರಲ್ಲಿ ಅಧಿಕಾರ ಸಿಕ್ಕಾಗ ಬಿಜೆಪಿಯವರು ಏನು ಮಾಡಿದಿರಿ? ಪರ್ಸೆಂಟೇಜ್ ಲೆಕ್ಕಾಚಾರ ಶುರುವಾಗಿದ್ದು ಎಲ್ಲಿಂದ? ಆಪರೇಷನ್ ಕಮಲದ ಮೂಲಕ ಬಹುಮತ ಸಾಬೀತು ಪಡಿಸಿಕೊಂಡಿರಿ. 5 ವರ್ಷದ ಅಧಿಕಾರವನ್ನು ನೀವು ಯಾಕೆ ಸದ್ಬಳಕೆ ಮಾಡಿಕೊಳ್ಳಲಿಲ್ಲ?” -ಕುಮಾರಸ್ವಾಮಿ

Last updated

‘ಪ್ರಾಣ ಕಳೆದುಕೊಳ್ಳುತ್ತೇನೆ ಎಂದಿಲ್ಲ’:

“ಅಧಿಕಾರ ಸಿಗದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಾನು ಹೇಳಿಲ್ಲ. ನಾನೂ ಈ ನಾಡಿನ ಜನರ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ.” -ಕುಮಾರಸ್ವಾಮಿ

Last updated

‘ಅವಸರದ ತೀರ್ಮಾನ ಸಾಧ್ಯವಿಲ್ಲ’:

“ಎರಡೂ ಪಕ್ಷಗಳ ಪ್ರಣಾಳಿಕೆಯ ಕಾರ್ಯಕ್ರಮಗಳನ್ನು ಜಾರಿಗೆ ತರಲು ಎರಡೂ ಪಕ್ಷಗಳ ಜನಪ್ರತಿನಿಧಿಗಳು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಅವಸರದಲ್ಲಿ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಸಾಲ ಮನ್ನಾ ವಿಚಾರದ ಬಗ್ಗೆ ಕಾಂಗ್ರೆಸ್ ಜತೆಗೆ ಚರ್ಚೆ ನಡೆಸುತ್ತೇನೆ” -ಕುಮಾರಸ್ವಾಮಿ

Last updated

‘ರಾಜ್ಯವನ್ನು ವಿಂಗಡಣೆ ಮಾಡಬೇಡಿ’:

“ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ರಾಜ್ಯವನ್ನು ವಿಂಗಡಣೆ ಮಾಡಬೇಡಿ. ಅಖಂಡ ಕರ್ನಾಟಕವಾಗಿ ನಮ್ಮ ನಾಡನ್ನು ನೋಡಿ. ರಾಜ್ಯದ ಎಲ್ಲಾ ಭಾಗದ ಜನರಿಗಾಗಿ ಕೆಲಸ ಮಾಡಲು ನಾವು ಅಧಿಕಾರಕ್ಕೆ ಬಂದಿದ್ದೇವೆ. 5 ವರ್ಷ ಸುಭದ್ರವಾಗಿ ಜನರಿಗಾಗಿ ಸಮ್ಮಿಶ್ರ ಸರಕಾರ ಕೆಲಸ ಮಾಡಲಿದೆ” -ಕುಮಾರಸ್ವಾಮಿ

Last updated

‘ಸಾಲಮನ್ನಾ ವಿಚಾರ ಬಿಜೆಪಿಯಿಂದ ಕಲಿಯಬೇಕಿಲ್ಲ’:

“ರೈತರ ಸಂಕಷ್ಟಗಳ ಬಗ್ಗೆ ಬಿಜೆಪಿಯಿಂದ ಕಲಿಯಬೇಕಿಲ್ಲ. ರೈತರ ಸಾಲಮನ್ನಾ ವಿಚಾರವನ್ನು ನಿಮ್ಮಿಂದ ಕಲಿಯುವ ಅಗತ್ಯವಿಲ್ಲ. ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ, ಅದನ್ನೇ ಮುಂದೆ ಮಾಡಿಕೊಂಡು ಟೀಕೆ ಮಾಡುವುದು ಸರಿಯಲ್ಲ. ನಮಗೆ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಜನ ನನ್ನನ್ನು ತಿರಸ್ಕರಿಸಿದ್ದಾರೆ” - ಕುಮಾರಸ್ವಾಮಿ.

Last updated

‘ಹಿಂದೆಯೂ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ’:

“2008ರಲ್ಲೂ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್‌ನ ಕೆಲ ಬಂಡಾಯ ಶಾಸಕರ ಬೆಂಬಲ ಸಿಕ್ಕಿತ್ತು. ಅಂದು ಸಮ್ಮಿಶ್ರ ಸರಕಾರಕ್ಕೆ ಸೋನಿಯಾ ಗಾಂಧಿ ಸಮ್ಮತಿ ಕೊಟ್ಟಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿರಲಿಲ್ಲ. ಕಾಂಗ್ರೆಸ್ನವರೇ ಆಗ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ಕೊಟ್ಟಿದ್ದರು” - ಕುಮಾರಸ್ವಾಮಿ

Last updated

‘ಆಗ ನನ್ನ ಪಕ್ಷ ಉಳಿಸಿಕೊಳ್ಳಬೇಕಿತ್ತು’:

“ಹಿಂದೆ ನಾನು ನನ್ನ ಪಕ್ಷ, ನನ್ನ ಶಾಸಕರನ್ನು ಉಳಿಸಿಕೊಳ್ಳಬೇಕಿತ್ತು. ಹೀಗಾಗಿ 2006ರಲ್ಲಿ ಬಿಜೆಪಿ ಜತೆ ಕೈ ಜೋಡಿ ಸಮ್ಮಿಶ್ರ ಸರಕಾರ ರಚಿಸಬೇಕಾದ ಸಂದರ್ಭ ಬಂದಿತ್ತು. ಈಗ ನನ್ನ ತಂದೆಗೆ ಇದ್ದ ಕಪ್ಪು ಚುಕ್ಕೆ ಅಳಿಸಲು ಅವಕಾಶ ವಿಧಿ, ದೇವರ ಆಶೀರ್ವಾದದ ಮೂಲಕ ಸಿಕ್ಕಿದೆ. ಆದರೆ, ನಾಡಿನ ಜನತೆ ನನ್ನ ಮೇಲೆ ವಿಶ್ವಾಸ ತೋರಿಲ್ಲ. ನಮಗೆ ಬಹುಮತವನ್ನು ನಾಡಿನ ಜನ ಕೊಟ್ಟಿಲ್ಲ” - ಕುಮಾರಸ್ವಾಮಿ

Last updated

‘ನನ್ನನ್ನು ಕತ್ತಲೆಯಲ್ಲಿಟ್ಟಿದ್ದರು’:

“ನಾನು ಬಿಜೆಪಿಗೆ ಅಧಿಕಾರ ಬಿಟ್ಟುಕೊಡದ ವಚನ ಭ್ರಷ್ಟ ಎಂಬ ಕೆಟ್ಟ ಹೆಸರು ನನ್ನ ಮೇಲೆ ಬಂದಿದೆ. ಆದರೆ, ನಾವು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಿದ್ದೆ. ಬಿಜೆಪಿ ರಾಷ್ಟ್ರೀಯ ನಾಯಕರು ಯಾರೂ ನನ್ನನ್ನು ಭೇಟಿ ಮಾಡಲಿಲ್ಲ. ಬಿಜೆಪಿ ರಾಷ್ಟ್ರೀಯ ನಾಯಕರು ದೇವೇಗೌಡರನ್ನು ಭೇಟಿ ಮಾಡಿ ಅಗ್ರಿಮೆಂಟ್ ಎಂದು ಏನೋ ಮಾಡಿಕೊಂಡರು. ನನ್ನನ್ನು ಅಂದು ಕತ್ತಲೆಯಲ್ಲಿ ಇಡಲಾಗಿತ್ತು” - ಕುಮಾರಸ್ವಾಮಿ

Last updated

'ಅಧಿಕಾರಕ್ಕೆ ದುಂಬಾಲು ಬಿದ್ದವರಲ್ಲ':

'ಅಧಿಕಾರಕ್ಕೆ ದುಂಬಾಲು ಬಿದ್ದವರಲ್ಲ': “ನಾವು ಅಧಿಕಾರಕ್ಕಾಗಿ ದುಂಬಾಲು ಬಿದ್ದವರಲ್ಲ. ದೇವೇಗೌಡರೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ನಾವು ಎಂದೂ ಅಧಿಕಾರ ಬಯಸಿ ಹೋದವರಲ್ಲ. ಮುಖ್ಯಮಂತ್ರಿಯಾಗುತ್ತೇನೆ ಎಂದು ಓಡಿ ಬಂದಿದ್ದೇನೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ" - ಕುಮಾರಸ್ವಾಮಿ

Last updated

ವಿಶ್ವಾಸ ಮತ ಯಾಚನೆ ಪ್ರಸ್ತಾಪ ಮಂಡಿಸಿದ ಕುಮಾರಸ್ವಾಮಿ:

ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಆರಂಭಗೊಂಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ. ಈ ಸ್ಥಿತಿಗೆ ರಾಜಕೀಯ ಅಸ್ಥಿರತೆಯೇ ಕಾರಣ ಎಂದಿರುವ ಕುಮಾರಸ್ವಾಮಿ, ಯಾವ ಪಕ್ಷಕ್ಕೂ ಬಹುಮತ ದೊರೆಯದಿರುವುದರಿಂದ ಈ ಸ್ಥಿತಿ ಉಂಟಾಗಿದೆ ಎಂದಿದ್ದಾರೆ. ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್‌ ವರಿಷ್ಟರಿಗೆ ಗುಲಾಂನಬಿ ಆಜಾದ್‌ರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಫಲಿತಾಂಶ ಹೊರಬಿದ್ದಾಗ ಮೊದಲು ಪರಮೇಶ್ವರ್‌ ಫೋನ್‌ ಮಾಡಿ ಮೈತ್ರಿ ಸರಕಾರದ ಕುರಿತು ಮಾತನಾಡಿದ್ದರು. ಗುಲಾಂನಬಿ ಆಜಾದ್‌ ಸರಕಾರ ರಚನೆ ಮಾಡುವಂತೆ ಸೂಚಿಸಿದ್ದರು. ನಾನು ಅವರ ಸೂಚನೆಯನ್ನು ಒಪ್ಪಿಕೊಂಡಿದ್ದೇನೆ. ಆದರೆ ಈ ನಿರ್ಧಾರ ನನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗಲ್ಲ ಎಮದು ಕುಮಾರಸ್ವಾಮಿ ತಿಳಿಸಿದ್ದಾರೆ. ನಾನು ಕುಟುಂಬ ರಾಜಕಾರಣಕ್ಕೆ ನಿಂತಿಲ್ಲ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಓಡಿ ಬಂದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ.

Last updated

ಸದನಕ್ಕೆ ಅಭಿನಂದನೆ ಸೂಚಿಸಿದ ಸ್ಪೀಕರ್‌:

ನೂತನವಾಗಿ ಸಭಾಧ್ಯಕ್ಷರ ಸ್ಥಾನವನ್ನು ವಹಿಸಿಕೊಂಡಿರುವ ಕೆ.ಆರ್‌.ರಮೇಶ್‌ ಕುಮಾರ್‌ ಎಲ್ಲರನ್ನು ಅಭಿನಂದಿಸಿದ್ದಾರೆ. ನಿಮ್ಮ ನಂಬಿಕೆಗೆ ನಾನೆಷ್ಟು ಅರ್ಹ ಎನ್ನುವುದು ತಿಳಿದಿಲ್ಲ, ಆದರೆ ನಿಮ್ಮ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

ತಮ್ಮ ಮಾತುಗಳ ಮಧ್ಯೆ ಯಡಿಯೂರಪ್ಪ, ಇಂದಿರಾ ಗಾಂಧಿ, ವಾಟಾಳ್‌ ನಾಗರಾಜ್‌, ದೇವೇಗೌಡ ಮತ್ತಿತರರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ.

Last updated

'ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿ':

“ವಿಧಾನಸಭೆಯಲ್ಲಿ ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ನಾಡಿನ ಜನರ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಲು ಅವಕಾಶ ಸಿಗಬೇಕು” - ಸಿದ್ದರಾಮಯ್ಯ

Last updated

ಅಭಿನಂದನೆ ಸೂಚಿಸಿದ ಸಿದ್ಧರಾಮಯ್ಯ:

ಸಭಾಧ್ಯಕ್ಷರು ಎನ್ನುವುದು ಅತ್ಯಂತ ಮಹತ್ತರವಾದ ಸ್ಥಾನ. ಅದಕ್ಕೆ ಸೂಕ್ತವೆನಿಸುವ ವ್ಯಕ್ತಿ ನೀವು ಎಂದಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ನೂತನ ಸ್ಪೀಕರ್‌ ರಮೆಶ್‌ ಕುಮಾರ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Last updated

ಅಭಿನಂದನೆ ಸಲ್ಲಿಸಿದ ಡಿಸಿಎಂ:

ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ರಮೇಶ್‌ ಕುಮಾರ್‌ರವರಿಗೆ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನಾನು ನಾಮಪತ್ರ ಹಿಂಪಡೆಯುವಂತೆ ಬಿಜೆಪಿಯವರಲ್ಲಿ ಮನವಿ ಮಾಡಿದ್ದೆ, ನಾಮಪತ್ರ ಹಿಂಪಡೆದಿದ್ದಕ್ಕಾಗಿ ಧನ್ಯವಾದಗಳು ಎಂದು ಬಿಜೆಪಿ ಪಾಳಯಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

Last updated

ನಿಮ್ಮ ಮೇಲಿರುವ ಗೌರವಕ್ಕೆ ನಾಮಪತ್ರ ವಾಪಸ್‌:

ಕಲಾಪದಲ್ಲಿ ನೂತನ ಸ್ಪೀಕರ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ ಯಡಿಯೂರಪ್ಪ, ರಮೇಶ್‌ ಕುಮಾರ್‌ ಮೇಲಿರುವ ಗೌರವದಿಂದಾಗಿ ನಾಮಪತ್ರವನ್ನು ಹಿಂದಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

Last updated

ಸ್ಪೀಕರ್‌ರನ್ನು ಹಾಡಿ ಹೊಗಳಿದ ಸಿಎಂ:

ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ರಮೇಶ್‌ ಕುಮಾರ್‌ರನ್ನು ಸಿಎಂ ಕುಮಾರಸ್ವಾಮಿ ಹಾಡಿಹೊಗಳಿದ್ದಾರೆ. ಎರಡನೇ ಬಾರಿ ಸ್ಪೀಕರ್‌ ಆಗಿರುವ ನೀವು, ಮೊದಲಿಗೆ 1994ರಲ್ಲಿ ಸಭಾಧ್ಯಕ್ಷರ ಸ್ಥಾನ ಏರಿದ್ದಾಗ ಮಾದರಿ ಸ್ಪೀಕರ್‌ ಆಗಿ ಕಾಣಿಸಿಕೊಂಡಿದ್ದಿರಿ. ನಿಮ್ಮ ಅನುಭವಗಳನ್ನು ಎಲ್ಲಾ ಶಾಸಕರಿಗೆ ಧಾರೆ ಎರೆಯಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

Last updated

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಭಾಷಣ:

ನಿಮ್ಮೆಲ್ಲರೊಂದಿಗೆ ಇರುವುದು ನಮ್ಮ ಸೌಭಾಗ್ಯ ಎಂದ ಕುಮಾರಸ್ವಾಮಿ ಹೊಸ ಸ್ಪೀಕರ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮೈಸೂರು ರಾಜರ ಆಳ್ವಿಕೆ ಬಗ್ಗೆ ಕಲಾಪದಲ್ಲಿ ಪ್ರಸ್ತಾಪಿಸಿದ್ದು, ಮೈಸೂರು ದೊರೆಗಳ ಆಳ್ವಿಕೆ ಬಗ್ಗೆ ಇಡೀ ದೇಶದಲ್ಲಿ ಒಳ್ಳೆಯ ಹೆಸರಿದೆ ಎಂದಿದ್ದಾರೆ. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಈ ಗಳಿಗೆಯ ಕುರಿತು ಕುಮಾರಸ್ವಾಮಿ ಅಭಿಪ್ರಾಯಿಸಿದ್ದಾರೆ.

Last updated

ಅವಿರೋಧ ಆಯ್ಕೆ:

ಯಾವ ಪ್ರತಿಸ್ಪರ್ಧಿಗಳು ಇಲ್ಲದೇ ಶಾಸಕ ರಮೇಶ್‌ ಕುಮಾರ್‌ ನೂತನ ಸ್ಪೀಕರ್‌ ಆಗಿ ಆಯ್ಕೆಗೊಂಡಿದ್ದಾರೆ. ಎರಡನೇ ಬಾರಿಗೆ ರಮೇಶ್‌ ಕುಮಾರ್‌ ಸಭಾಧ್ಯಕ್ಷರಾಗಿದ್ದಾರೆ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನೂತನ ಸ್ಪೀಕರ್‌ರವರ ಕೈಕುಲುಕಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

Last updated

ಆರಂಭಗೊಂಡ ಕಲಾಪ:

ರಾಜ್ಯದ ಎಲ್ಲಾ ಶಾಸಕರು ವಿಧಾನಸೌಧದಲ್ಲಿದದ್ದು, ಇದೀಗ ಕಲಾಪ ಆರಂಭಗೊಂಡಿದೆ. ವಂದೇ ಮಾತರಂ ಗೀತೆಯ ಮೂಲಕ ವಿಶ್ವಾಸಮತ ಯಾಚನೆ ಕಲಾಪವನ್ನು ಆರಂಭಿಸಲಾಗಿದೆ.

Last updated

ಕೆಲವೇ ನಿಮಿಷಗಳಲ್ಲಿ ಸದನ ಆರಂಭ:

ಸದನದ ಆರಂಭಕ್ಕೆ ನಿಗದಿಪಡಿಸಲಾಗಿದ್ದ ಸಮಯ ಹತ್ತಿರವಾಗಿದೆ. ಈಗಾಗಲೇ ಕಾಂಗ್ರೆಸ್‌ ಜಿಡಿಎಸ್‌ ಮತ್ತು ಬಿಜೆಪಿ ಪಕ್ಷಗಳ ಶಾಸಕರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಸದನ ಆರಂಭಗೊಳ್ಳಲಿದೆ.

Last updated

ಸುರೇಶ್‌ ಕುಮಾರ್‌ರಿಂದ ನಾಮಪತ್ರ ವಾಪಸ್‌:

ಸ್ಪೀಕರ್‌ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಹಿರಿಯ ಶಾಸಕ ಸುರೇಶ್‌ ಕುಮಾರ್‌ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಮೂಲಕ ಸ್ವೀಕರ್‌ ಸ್ಥಾನಕ್ಕೆ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಪಕ್ಷದ ರಮೇಶ್‌ ಕುಮಾರ್‌ಗೆ ಪ್ರತಿಸ್ಪರ್ಧಿಗಳಿಲ್ಲ. ಹೀಗಾಗಿ ರಮೇಶ್‌ ಕುಮಾರ್‌ರವರೇ ನೂತನ ಸ್ಪೀಕರ್‌ ಆಗಲಿದ್ದಾರೆ.

ನಾಮಪತ್ರ ಹಿಂಪಡೆದಿರುವ ಕುರಿತು ಸುರೇಶ್‌ ಕುಮಾರ್‌ ಟ್ವೀಟ್:

Last updated

ರಾಹುಕಾಲದ ಭೀತಿಯಲ್ಲಿ ಶಾಸಕರು:

ಬೆಳಗ್ಗೆ 10:30ರಿಂದ 12 ಗಂಟೆಯವೆರೆಗೆ ರಾಹುಕಾಲ ಇರುವುದರಿಂದ 12 ಗಂಟೆಯ ನಂತರ ಸದನಕ್ಕೆ ತೆರಳಲು ಜೆಡಿಎಸ್‌ ಶಾಸಕರು ನಿರ್ಧರಿಸಿದ್ದಾರೆ. ಇದೀಗ ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಜಿಜೆಪಿ ಶಾಸಕರು ಕೂಡ ವಿಧಾನ ಸೌಧದ ಆವರಣದಲ್ಲಿದ್ದಾರೆ. ಮುಂಚೆಯೇ ಬಂದಿರುವ ಕಾಂಗ್ರೆಸ್‌ ಶಾಸಕರು ಸಿದ್ಧರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಸಭೆಯನ್ನು ನಡೆಸಿದ್ದಾರೆ.

Last updated

ಮೈತ್ರಿ ಸರಕಾರದ ವಿಶ್ವಾಸ ಮತ ಸಾಬೀತು:

‘ಸಮಾಚಾರ’ ಲೈವ್‌ಬ್ಲಾಗ್‌ಗೆ ಸ್ವಾಗತ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಪದ ಗ್ರಹಣ ಮಾಡಿರುವ ಕುಮಾರಸ್ವಾಮಿ ಇಂದು ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ಮ‍ಧ್ಯಾಹ್ನ 12 ಗಂಟೆಯಿಂದ ಸದನ ಆರಂಭಗೊಳ್ಳಲಿದೆ. ಬೆಳಗ್ಗೆ 10:30ರಿಂದ 12 ಗಂಟೆಯವರೆಗೆ ರಾಹುಕಾಲವಿರುವ ಕಾರಣ 12:15ರಿಂದ ಸದನ ಆರಂಭಿಸಲು ತೀರ್ಮಾನಿಸಲಾಗಿದೆ.

ಸಧ್ಯಕ್ಕೆ ಕಾಂಗ್ರೆಸ್‌ನ 78, ಜೆಡಿಎಸ್‌ನ 37 ಹಾಗೂ ಇಬ್ಬರು ಪಕ್ಷೇತರ ಶಾಸಕರ ಬೆಂಬಲ ಕುಮಾರಸ್ವಾಮಿ ಬೆನ್ನಿಗಿದೆ. ಬಹುಮತ ಸಾಬೀತಿಗೆ 111 ಶಾಸಕರ ಬೆಂಬಲ ಅಗತ್ಯವಿದ್ದು, ಈ ಸಂಖ್ಯೆಗಿಂತಲೂ ಹೆಚ್ಚಿನ ಬಲ ಹೊಂದಿರುವ ಕುಮಾರಸ್ವಾಮಿ ನಿಶ್ಚಿತವಾಗಿ ಬಹುಮತ ಗಳಿಸುವ ನಂಬಿಕೆಯಲ್ಲಿದ್ದಾರೆ.

ಕುಮಾರಸ್ವಾಮಿಗೆ ಒಟ್ಟು 117 ಶಾಸಕರ ಬೆಂಬಲವಿರುವಂತೆ ಮೇಲ್ನೋಟಕ್ಕೆ ಕಂಡರೂ ಈಗಲೇ ನಿಟ್ಟುಸಿರು ಬಿಡುವಂತಿಲ್ಲ. ಸದನದಲ್ಲಿ ಯಾವ ಶಾಸಕರು ಯಾರ ಕಡೆಬೇಕಾದರೂ ತಿರುಗಿಕೊಳ್ಳುವ ಸಾಧ್ಯತೆಗಳಿವೆ. ಬಹುಮತ ಸಾಬೀತು ಪಡಿಸಿದ ನಂತರವಷ್ಟೇ ಕುಮಾರಸ್ವಾಮಿ ನಿರಾಳರಾಗಬಹುದು.

ಹಲವಾರು ಏಳುಬೀಳು ಮಧ್ಯೆ ಸಾಗುತ್ತಿರುವ ಕರ್ನಾಟ ರಾಜ್ಯ ರಾಜಕಾರಣದಲ್ಲಿ ಇಂದು ನಡೆಯಲಿರುವ ವಿಶ್ವಾಸಮತ ಸಾಬೀತು ಪ್ರಮುಖ ಪಾತ್ರವನ್ನು ವಹಿಸಲಿದೆ. ಕುಮಾರಸ್ವಾಮಿಯವರ ಮುಖ್ಯಮಂತ್ರಿ ಪಟ್ಟ ಎಷ್ಟರ ಮಟ್ಟಿಗೆ ಗಟ್ಟಿ ಎಂದು ನಿರ್ಧರಿಸಲಿರುವ ಇಂದಿನ ಸದನದಲ್ಲಿ ಏನೇನು ಜರುಗಲಿದೆ ಎಂಬ ಕ್ಷಣ ಕ್ಷಣದ ಮಾಹಿತಿಯನ್ನು ‘ಸಮಾಚಾರ’ ಪ್ರಸ್ತುತ ಪಡಿಸಲಿದೆ.

Last updated

ಕರ್ನಾಟಕಕ್ಕೆ ಹೊಸ ಸ್ಪೀಕರ್‌:

ವಿಶ್ವಾಸ ಮತ ಸಾಬೀತಿಗೂ ಮುಂಚೆ ಹೊಸ ಸ್ಪೀಕರ್‌ ಆಯ್ಕೆಗೆ ಸಂಬಂಧಿಸಿದಂತೆ ಚುನಾವಣೆ ನಡೆಯಲಿದೆ. ಹಂಗಾಮಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಸ್ಪೀಕರ್‌ ಚುನಾವಣೆಯ ಘೋಷಣೆ ಮಾಡಲಿದ್ದಾರೆ. ಸದನದಲ್ಲಿರಲಿರುವ ಒಟ್ಟು 222 ಶಾಸಕರು ಸ್ಪೀಕರ್‌ ಅಭ್ಯರ್ಥಿಗಳಿಗೆ ತಮ್ಮ ಮತಗಳನ್ನು ಚಲಾಯಿಸಲಿದ್ದಾರೆ. ಹೆಚ್ಚು ಮತಗಳನ್ನು ಗಳಿಸಿ ಗೆದ್ದವರನ್ನು ಹೊಸ ಸ್ಪೀಕರ್‌ ಎಂದು ಘೋಷಿಸಲಾಗುತ್ತದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಒಮ್ಮತದಿಂದ ಶ್ರೀನಿವಾಸ ಪುರದ ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಸಹ ಪಕ್ಷ ಹಿರಿಯ ನಾಯಕ ಸುರೇಶ್‌ ಕುಮಾರ್‌ರನ್ನು ಕಣಕ್ಕಿಳಿಸಿವೆ. ಅಡ್ಡಮತದಾನಗಳು ನಡೆಯುವುದನ್ನು ತಡೆಗಟ್ಟಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

Last updated