samachara
www.samachara.com
LIVE: ವಿಶ್ವಾಸಮತ ಯಾಚನೆ ಮಾಡದೇ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪ
LIVE

LIVE: ವಿಶ್ವಾಸಮತ ಯಾಚನೆ ಮಾಡದೇ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪ

ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕಕ್ಕೆ ಇಂದು ಸಂಜೆ 4 ಗಂಟೆಗೆ ನಡೆಯಲಿರುವ ವಿಶ್ವಾಸ ಮತ ಯಾಚನೆಯ ಮೂಲಕ ತೆರೆ ಬೀಳುವ ಸಾಧ್ಯತೆಗಳು ದಟ್ಟವಾಗಿವೆ. ಇಂದಿನ ಕ್ಷಣ ಕ್ಷಣದ ಲೈವ್ ಮಾಹಿತಿಯನ್ನು ‘ಸಮಾಚಾರ’ ನಿಮ್ಮ ಮುಂದಿಡಲಿದೆ.

ಮತ್ತೆ ರೆಸಾರ್ಟ್‌ಗೆ ತೆರಳಿದ ಕಾಂಗ್ರೆಸ್‌-ಜೆಡಿಎಸ್‌ ನಾಯಕರು:

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಿಶ್ವಾಸ ಮತ ಯಾಚನೆ ಹಾಗೂ ಸರಕಾರ ರಚನೆ ಕುರಿತ ಸಮಾಲೋಚನೆಗಾಗಿ ಎರಡೂ ಪಕ್ಷಗಳ ಶಾಸಕರು ಒಂದೇ ರೆಸಾರ್ಟ್‌ನಲ್ಲಿ ಸೇರಿದ್ದಾರೆ.

ಕರ್ನಾಟಕ ರಾಜ್ಯ ರಾಜಕಾರಣದ ಮುಂದಿನ ಸುದ್ದಿಗಳು ಮತ್ತು ವಿಶ್ಲೇಷಣೆಗಳಿಗಾಗಿ ನಿರೀಕ್ಷಿಸಿ. ಇದುವೆರೆಗೂ ‘ಸಮಾಚಾರ’ ಲೈವ್‌ ಮಾಹಿತಿಯನ್ನು ಪಡೆದಿದ್ದಕ್ಕಾಗಿ ಧನ್ಯವಾದಗಳು.

Last updated

ಹೃದಯ ಗೆದ್ದ ಯಡಿಯೂರಪ್ಪ:

ಯಡಿಯೂರಪ್ಪ ಬಹುಮತ ಗಳಿಸಲು ಸಾಧ್ಯವಾಗದೆ ಶಸ್ತ್ರಾಸ್ತ್ರ ತ್ಯಾಗ ಮಾಡಿದರೂ ಕೂಡ ತಮ್ಮ ಭಾಷಣದಿಂದ ಹಲವಾರು ಜನರ ಮನಸ್ಸನ್ನು ಗೆದ್ದಿದ್ದಾರೆ. ಯಡಿಯೂರಪ್ಪ ಅಭಿಮಾನಿಗಳು ಈಗ ಸೋತರೂ ಕೂಡ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸುತ್ತೇವೆ ಎಂಬ ಭರವಸೆಯನ್ನು ತೋರಿಸಿದ್ದಾರೆ.

Last updated

ಸಾಮಾಜಿಕ ಜಾಲತಾಣಗಳಲ್ಲೂ ಸಂಭ್ರಮ:

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಟ್ರೋಲ್‌ ಆಗುತ್ತಿದೆ. ಹಲವಾರು ಜನ ಹಾಸ್ಯಾಸ್ಪದ ವೀಡಿಯೋಗಳನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ.

Last updated

ಸಂಭ್ರಮಿಸಿದ ಕಾಂಗ್ರೆಸಿಗರು:

ಬಿ.ಎಸ್.ಯಡಿಯೂರಪ್ಪ ಭಾಷಣವನ್ನು ಮಾಡಿ ರಾಜೀನಾಮೆ ಘೋಷಿಸುತ್ತಿದ್ದಂತೆ ದೂರದ ಡೆಹರಾಡೂನ್‌ನಲ್ಲೂ ಕೂಡ ಕಾಂಗ್ರೆಸಿಗರು ಸಂಭ್ರಮಿಸಿದ್ದಾರೆ. ಸಿಹಿ ಹಂಚುವುದರ ಮೂಲಕ ತಮ್ಮ ಸಂಭ್ರಮವನ್ನು ಹೊರಗೆಡವಿದ್ದಾರೆ.

Last updated

ಕಾಂಗ್ರೆಸ್‌ ಜೆಡಿಎಸ್ ಮೈತ್ರಿ ಸರಕಾರದ ಸಂಭಾವ್ಯ ಸಿಚಿವರ ಪಟ್ಟಿ ಸಿದ್ಧ:

ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಹೆಚ್.ಡಿ.ಕುಮಾರಸ್ವಾಮಿ, ಆಡಳಿತ ಪಕ್ಷದ ನಾಯಕರಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಯಾಗಿ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವರಾಗಿ ಎಚ್.ಡಿ. ರೇವಣ್ಣ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವರಾಗಿ ಹೆಚ್.ಕೆ.ಪಾಟೀಲ್, ಇಂಧನ ಸಚಿವರಾಗಿ ಡಿ.ಕೆ.ಶಿವಕುಮಾರ್‌, ಸಾರಿಗೆ ಸಚಿವರಾಗಿ ರಾಮಲಿಂಗಾರೆಡ್ಡಿ , ಬೃಹತ್‌ ಕೈಗಾರಿಕಾ ಸಚಿವರಾಗಿ ಎ.ಟಿ. ರಾಮಸ್ವಾಮಿ ಇರಬಹುದು ಎಂಬ ಸಂಭ್ಯಾವ್ಯ ಪಟ್ಟಿ ಈಗಾಗಲೇ ಸಿದ್ಧವಾಗಿದೆ.

Last updated

‘ಇದು ಪ್ರಜಾಪ್ರಭುತ್ವದ ಜಯ’:

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವರದಿಗಾರೊಂದಿಗೆ ಮಾತನಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

“ಕಾಂಗ್ರೆಸ್‌ ನಾಯಕರ ಮನೆಗಳನ್ನಷ್ಟೇ ಕೇಂದ್ರ ಸರಕಾರ ರೈಡ್‌ ಮಾಡಿತ್ತು. ಕಾಂಗ್ರೆಸಿಗರ ಮನದಲ್ಲಿ ಭಯ ಮೂಡುವಂತೆ ಮಾಡಿತ್ತು. ವಾಮಮಾರ್ಗವನ್ನು ಹಿಡಿದು ಸರಕಾರ ರಚಿಸುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಆದರೆ ಸರಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಜನ ಯಾವುದೇ ಪಕ್ಷಕ್ಕೆ ಬಹುಮತ ನೀಡದಿರಬಹುದು. ಆದರೆ ಬಿಜೆಪಿಗೆ ಸರಕಾರ ರಚಿಸುಲು ಅವಕಾಶ ನೀಡಿಲ್ಲ,” ಎಂದು ಸಿದ್ಧರಾಮಯ್ಯ ಸುದ್ದಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Last updated

ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿಎಸ್‌ವೈ:

ಕೆಲವು ನಿಮಿಷಗಳ ಹಿಂದೆ ಕಲಾಪದಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ ಯಡಿಯೂರಪ್ಪ ಈಗ ರಾಜಭವನವನ್ನು ತಲುಪಿದ್ದಾರೆ. ರಾಜ್ಯಪಾಲ ವಜೂಬಾಯಿ ವಾಲಾರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಮೂಲಕ ಮೂರು ದಿನಗಳಿಗೆ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ರಾಜೀನಾಮೆ ನೀಡುವ ಮೂಲಕ ಹೊಸ ಸರಕಾರದ ರಚನೆಗೆ ಅವಕಾಶ ಕಲ್ಪಿಸಿದ್ದಾರೆ.

Last updated

ಯಡಿಯೂರಪ್ಪ ರಾಜೀನಾಮೆ:

ವಿಶ್ವಾಸ ಮತವನ್ನು ಯಾಚಿಸದೆಯೇ ರಾಜೀನಾಮೆ ನೀಡಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ. ಕೇವಲ 55 ಗಂಟೆಗಳ ಅಧಿಕಾರವನ್ನಷ್ಟೇ ನಡೆಸಿದ ಯಡಿಯೂರಪ್ಪ ರಾಜೀನಾಮೆ ನೀಡಿ, ಕಲಾಪದಿಂದ ಹೊರನಡೆದಿದ್ದಾರೆ.

Last updated

ಮುಖ್ಯಮಂತ್ರಿ ಯಡಿಯೂರಪ್ಪ ಭಾಷಣದ ಹೈಲೆಟ್ಸ್ ಇಲ್ಲಿವೆ:

 • 2014ರ ಏಪ್ರಿಲ್ 14, ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನದಂದು ಮೋದಿ ಹಾಗೂ ಅಮಿತ್‌ ಶಾ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿ ಸಿಎಂ ಎಂದು ಘೋಷಿಸಿದ್ದರು.
 • ಚುನಾವಣೆಯ ವೇಳೆಯಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ನಿಮ್ಮಪ್ಪನಾಣೆ ನೀನು ಗೆಲ್ಲಲ್ಲ ಎಂದು ಕುಮಾರಸ್ವಾಮಿಗೆ ಹೇಳಲಾಗಿತ್ತು.
 • ನಿರಂತರ 1 ವರ್ಷದ ರಾಜ್ಯ ಪ್ರವಾಸದಿಂದ ಜನ ನಮ್ಮನ್ನು ಬೆಂಬಲಿಸಿದ್ದರು. ಅತ್ಯಂತ ಪ್ರೀತಿಯಿಂದ ನಮ್ಮನ್ನು ಹರಸಿದ್ದರು.
 • ರಾಜ್ಯದ್ಯಾಂತ ಪ್ರವಾಸ ಮಾಡಿ ಜನರ ಸಮಸ್ಯೆಯನ್ನು ಅರಿತಿದ್ದೇನೆ. ಜನ ನನ್ನ ಹೋರಾಟವನ್ನು ಮೆಚ್ಚಿದ್ದಾರೆ. ಕಳೆದ ಬಾರಿ ಕೇವಲ 4 ಶಾಸಕರಿದ್ದೆವು. ಈ ಬಾರಿ 104 ಜನರಿದ್ದೇವೆ.
 • ರಾಜ್ಯದಲ್ಲಿ ಕುಡಿಯಲು ನೀರಲ್ಲ. ಕೃಷಿಗೆ ನೀರಿಲ್ಲ. ಕೆರೆ ಕಾಲುವೆಗಳನ್ನು ಕಟ್ಟಿಸಿ ನೀರು ಒದಗಿಸಲು ನಮ್ಮಿಂದ ಆಗುತ್ತಿಲ್ಲ.
 • ಏಕಾಂಗಿಯಾಗಿ ನಿಂತು ರೈತರ ಪರ ಹೋರಾಡಿದ್ದೇನೆ. ಅದನ್ನೆಲ್ಲಾ ಮರೆಯಲು ಸಾಧ್ಯವಿಲ್ಲ. ನೊಂದು ಬೆಂದ ರಾಜ್ಯದ ರೈತರಿಗೆ ಸಮಾಧಾನ ನೀಡಬೇಕಿದೆ.
 • ಜನರ ಆಕ್ರೋಶ ಎಷ್ಟಿದೆ ಎನ್ನುವುದನ್ನು ಕಂಡಿದ್ದೇನೆ. ಅವರಿಗೆ ಸ್ಪಂದಿಸಿದ್ದೇನೆ. ಮುಂದೆಯೂ ಕೂಡ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ.
 • ನೀರಾವರಿಗೆ ಆದ್ಯತೆ ಕೊಡಬೇಕು. ಜಲಾಶಯದ ನೀರನ್ನು ಕೆರೆ ಕಟ್ಟೆಗಳಿಗೆ ಹರಿಸಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡಬೇಕು. ರೈತರ ಸಾಲ, ನೇಕಾರರ ಸಾಲ ಮನ್ನಾ ಮಾಡಬೇಕು ಎನ್ನುವುದು ನನ್ನ ಆಶಯ. ನನ್ನ ಸರಕಾರದ ಚಿಂತನೆಯೂ ಇದೇ ಆಗಿದೆ.
 • ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ.
 • ಅಧಿಕಾರದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ, ಜೀವನ ಪರ್ಯಂತ ಹೋರಾಟ ನಡೆಸುತ್ತೇನೆ. ಜನರಿಗಾಗಿ ಪ್ರಾಣ ಕೊಡುತ್ತೇನೆ.
 • ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ. ಗೌರವಾನ್ವಿತ ಸಭಾಧ್ಯಕ್ಷರಿಗೆ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಮನವಿ ಮಾಡುತ್ತೇನೆ.

Last updated

ಪ್ರಸ್ತಾವನಾ ಭಾಷಣವನ್ನು ಆರಂಭಿಸಿದ ಬಿ.ಎಸ್.ಯಡಿಯೂರಪ್ಪ:

ವಿಧಾನ ಸಭೆ ಕಲಾಪಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಕೆಲವೇ ಮಾತುಗಳಲ್ಲಿ ಪ್ರಸ್ತಾವನೆಯನ್ನು ಮುಗಿಸಿ, ಭಾಷಣಕ್ಕೆ ಜಾರಿದ್ದಾರೆ.

Last updated

ವಿಧಾನ ಸೌಧಕ್ಕೆ ಆಗಮಿಸಿದ ಮಿಸ್ಸಿಂಗ್‌ ಶಾಸಕರು:

ಮಿಸ್ ಆಗಿದ್ದ ಕಾಂಗ್ರೆಸ್‌ನ ಇಬ್ಬರ ಶಾಸಕರೂ ಕೂಡ ಈಗ ವಿಧಾನಸೌಧದಲ್ಲಿ ಹಾಜಾರಿದ್ದಾರೆ. ಮಸ್ಕಿಯ ಶಾಸಕ ಪ್ರತಾಪ್‌ ಗೌಡ ಪಾಟೀಲ್‌ ಕಾಂಗ್ರೆಸ್‌ ನಾಯಕರ ಜತೆ ಕುಳಿತಿದ್ದು, ವಿಜಯ ನಗರದ ಶಾಸಕ ಆನಂದ್ ಸಿಂಗ್‌ ಬಿಜೆಪಿ ನಾಯಕ ಡಿ.ಕೆ.ಶಿವಕುಮಾರ್‌ ಜತೆ ಆಸೀನರಾಗಿದ್ದಾರೆ.

Last updated

ಇನ್ನೇನು ಕೆಲವೇ ಕ್ಷಣಗಳಲ್ಲಿ ಮತ್ತೆ ಶುರುವಾಗಲಿರುವ ಕಲಾಪ:

ಊಟದ ಬಿಡುವಿನ ನಂತರ ವಿಧಾನಸಭೆ ಕಲಾಪ ಈಗ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪ ಸೇರಿದಂತೆ ಹಲವಾರು ನಾಯಕರು ಕಲಾಪದ ಅಂಗಣಕ್ಕೆ ಮರಳಿದ್ದಾರೆ. ಬೆಳಗ್ಗೆಯ ಅವಧಿಯಲ್ಲಿ 210 ಜನ ಶಾಸಕರು ಪ್ರಮಾಣ ವಚನವನ್ನು ಸ್ವೀಕರಿಸಿದ್ದು, ಇನ್ನೂ 10 ಜನ ಶಾಸಕರ ಪ್ರಮಾಣ ವಚನ ಪ್ರಕ್ರಿಯೆ ಬಾಕಿ ಉಳಿದಿದೆ.

Last updated

ವಿಶ್ವಾಸ ಮತ ಯಾಚಿಸದಿರಲು ಯಡಿಯೂರಪ್ಪ ನಿರ್ಧಾರ?:

ಸುಪ್ರಿಂ ಕೋರ್ಟ್‌ ವಿಶ್ವಾಸಮತ ಯಾಚನೆಗೆ ನಿಗಧಿ ಪಡಿಸಿದ್ದ ಸಮಯ ಹತ್ತಿರವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ನಿರಾಸೆಯೂ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಆಪರೇಷನ್‌ ಕಮಲಕ್ಕೆ ಯಾವ ಕಾಂಗ್ರೆಸ್‌ ಶಾಸಕರೂ ಒಲಿಯದ ಕಾರಣ ಸಿಎಂ ಯಡಿಯೂರಪ್ಪ ವಿಶ್ವಾಸಮತವನ್ನು ಯಾಚಿಸದಿರಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿಯಿದೆ.

ವಿಶ್ವಾಸ ಮತ ಯಾಚನೆಯ ಬದಲು ದೀರ್ಘವಾದ ಭಾಷಣವನ್ನು ಮಾಡಿ ರಾಜೀನಾಮೆ ನೀಡಲು ಬಿಎಸ್‌ವೈ ಸಿದ್ಧರಾಗುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಬಿಎಸ್‌ವೈ ಭಾಷಣವನ್ನು ಕೆಡಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ತಂತ್ರಗಳನ್ನು ಹಣೆಯುತ್ತಿವೆ ಎಂಬ ಸುದ್ದಿಯೂ ಕೂಡ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Last updated

ವಿಧಾನ ಸೌಧ ಸಿಬ್ಬಂದಿಗಳ ಮೇಲೆ ಗರಂ ಆದ ಕೆ.ಸಿ.ವೇಣುಗೋಪಾಲ್‌:

ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ವಿಧಾನಸೌಧದ ಒಳಗೆ ಪ್ರವೇಶಿಸಲು ಹೊರಟಾಗ ವಿಧಾನಸೌಧದ ಸಿಬ್ಬಂದಿಗಳು ಅವರನ್ನು ಒಳಹೋಗದಂತೆ ತಡೆದಿದ್ದಾರೆ. ಇದರಿಂದ ಗರಂ ಆಗಿರುವ ಕೆ.ಸಿ.ವೇಣುಗೋಪಾಲ್‌ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಮುರುಳಿಧರ್‌ ರಾವ್‌ರನ್ನು ಒಳಬಿಟ್ಟ ಮೇಲೆ ನನ್ನನ್ನೂ ಒಳಗೆ ಬಿಡಬೇಕು ಎಂದಿರುವ ವೇಣುಗೋಪಾಲ್‌, ಒಂದೊಂದು ಪಕ್ಷಕ್ಕೆ ಒಂದು ರೀತಿಯ ಪ್ರಾಮುಖ್ಯತೆಯೇಕೆ ಎಂದು ಪ್ರಶ್ನಿಸಿದ್ದಾರೆ.

Last updated

ಕಲಾಪ ಮುಂದೂಡಿದ ಕೆ.ಜಿ.ಬೋಪಯ್ಯ:

ಬೆಳಗ್ಗೆಯಿಂದ ನಡೆಯುತ್ತಿದ್ದ ಕಲಾಪವನ್ನು ಹಂಗಾಮಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಮಧ್ಯಾಹ್ನ 3:30ಕ್ಕೆ ಮುಂದೂಡಿದ್ದಾರೆ. ಶಾಸಕರಿಗೆ 2 ಗಂಟೆಗಳ ಬಿಡುವು ನೀಡಿದ್ದಾರೆ. ಮಧ್ಯಾಹ್ನ ಕಲಾಪ ಆರಂಭಗೊಂಡ ನಂತರದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭಗೊಳ್ಳಲಿದೆ.

Last updated

ಕಾಂಗ್ರೆಸ್‌ ಶಾಸಕ ಬಿ.ಸಿ.ಪಾಟೀಲ್‌ಗೆ ಬಲೆ ಬೀಸಿದ ಯಡಿಯೂರಪ್ಪ:

ವಿಶ್ವಾಸಮತ ಯಾಚನೆ ವೇಳೆ ಬಹುಮತವನ್ನು ಸಾಬೀತು ಪಡಿಸುವ ಸಲುವಾಗಿ ಬಿಜೆಪಿಯ ಹಲವಾರು ನಾಯಕರು ಕಾಂಗ್ರೆಸ್‌ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಭಾಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವತಃ ತಾವೇ ಹಿರೇಕೆರೂರು ಕಾಂಗ್ರೆಸ್‌ ಶಾಸಕ ಬಿ.ಸಿ.ಪಾಟೀಲ್‌ರಿಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಮತ್ತು ಬಿ.ಸಿ.ಪಾಟೀಲ್‌ ನಡುವಿನ ಫೋನ್‌ ಮಾತುಕತೆಯ ಆಡಿಯೋ ಇಲ್ಲಿದೆ.

Last updated

‘ವೀರಪ್ಪನ್‌ ಸತ್ತಾಗಲೊಮ್ಮೆ ಹೀಗಾಗಿತ್ತು’:

ಇಂದು ಕರ್ನಾಟಕದ ರಾಜ್ಯ ರಾಜಕಾರಣ ಪಡೆದುಕೊಳ್ಳುತ್ತಿರುವ ತಿರುವುಗಳು ಗಂಭೀರತೆಯನ್ನು ಕಳೆದುಕೊಂಡು ಹಾಸ್ಯಾಸ್ಪದ ಎನಿಸಿಕೊಳ್ಳುತ್ತಿವೆ. ದಂತಚೋರ ವೀರಪ್ಪನ್‌ನ ಸಾವಿನ ಸುದ್ಧಿಯನ್ನು ದೆಹಲಿಯ ಪತ್ರಿಕೆಗಳೆಲ್ಲವೂ ಮುಖಪುಟದಲ್ಲಿ ವರದಿ ಮಾಡಿದ್ದವು. ಅದಾದ ನಂತರ ಮತ್ತೆ ಕರ್ನಾಟಕ ಇದೇ ಮೊದಲ ಬಾರಿಗೆ ಕರ್ನಾಟಕದ ಹೆಸರು ದೆಹಲಿ ಪತ್ರಿಕೆಗಳ ಮುಖಪುಟದಲ್ಲಿ ರಾಜಾಜಿಸುತ್ತಿದೆ ಎಂದು ಪುರುಷೋತ್ತಮ್ ಬಿಳಿಮಲೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Last updated

ಹಾಸ್ಯಾಸ್ಪದ ಎನಿಸಿದ ಆಪರೇಷನ್‌ ಕಮಲ:

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹೈಡ್ರಾಮಾ ರಾಜ್ಯದ ಜನರಲ್ಲಿ ಕುತೂಹಲದಷ್ಟೇ ಹೆಚ್ಚಾಗಿ ಹಾಸ್ಯವನ್ನೂ ಕೂಡ ಉತ್ಪಾದಿಸತೊಡಗಿದೆ. ಆಪರೇಷನ್ ಕಮಲದ ಕುರಿತು ಟ್ವಿಟ್ಟಿಗರೊಬ್ಬರು ಹಂಚಿಕೊಂಡಿರುವ ವೀಡಿಯೋ ಇಲ್ಲಿದೆ.

Last updated

‘ಏಳು ಜನ ಸಿಎಂಗಳನ್ನು ನೋಡಿದ್ದೇನೆ, ಯಾರೂ ಕೂಡ ಸಂಬಳ ಹೆಚ್ಚಿಸಲಿಲ್ಲ’

ಟ್ವಿಟ್ಟಿಗರೊಬ್ಬರು ಈ ಫೋಟೊವನ್ನು ಹಂಚಿಕೊಂಡಿದ್ದಾರೆ. ಜಯಮ್ಮ ಎಂಬ ಹೆಸರಿನ ಇಳಿವಯಸ್ಸಿನ ಮಹಿಳೆ ಹಲವಾರು ವರ್ಷಗಳಿಂದ ವಿಧಾನ ಸೌಧವನ್ನು ಸ್ಚಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಅವಧಿಯಲ್ಲಿ 7 ಜನ ಮುಖ್ಯಮಂತ್ರಿಗಳನ್ನು ಜಯಮ್ಮ ಕಂಡಿದ್ದಾರೆ. ಆದರೆ ಯಾರೂ ಕೂಡ ತಮ್ಮ ಸಂಬಳವನ್ನು ಹೆಚ್ಚಿಸುವ ಮನಸು ಮಾಡಲಿಲ್ಲ ಎನ್ನುವುದು ಜಯಮ್ಮನವರ ಅಳಲು.

Last updated

ಬಿಜೆಪಿಗೆ ವಿಶ್ವೇಶ್ವರ ಭಟ್‌ರ ಸಲಹೆ:

ಹೀಗೊಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಪಿಗೆ ಬಹುಮತವನ್ನು ಸಾಧಿಸಲು ಹೆಚ್ಚಿನ ಸಮಯದ ಅಗತ್ಯವಿದ್ದರೆ ಹೀಗೆ ಮಾಡಬಹುದು ಎಂಬ ಸಲಹೆಯನ್ನು ವಿಶ್ವೇಶ್ವರ ಭಟ್‌ ನೀಡಿದ್ದಾರೆ ಎನ್ನಲಾಗುತ್ತಿದೆ.

LIVE: ವಿಶ್ವಾಸಮತ ಯಾಚನೆ ಮಾಡದೇ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪ

Last updated

ಇದುವರೆಗೂ 101 ಶಾಸಕರಿಂದ ಪ್ರಮಾಣ ವಚನ ಸ್ವೀಕಾರ:

ಹೊರಗೆ ಕುದುರೆ ವ್ಯಾಪಾರ, ಆಡಿಯೋ ಬಿಡುಗಡೆ ಇತ್ಯಾದಿಗಳ ಗದ್ದಲವಿದ್ದರೆ, ವಿಧಾನ ಸಭೆಯಲ್ಲಿ ಶಾಸಕರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ತನ್ನ ಪಾಡಿಗೆ ತಾನು ನೆರವೇರುತ್ತಿದೆ. ಇದುವರೆಗೂ 101 ಜನ ಶಾಸಕರು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಗೈರು ಹಾಜಾರಾಗಿರುವ ಕಾಂಗ್ರೆಸ್‌ ಶಾಸಕರಾದ ಆನಂದ್ ಸಿಂಗ್‌ ಹಾಗೂ ಪ್ರತಾಪ್‌ ಗೌಡ ಪಾಟೀಲ್‌ರ ಹೆಸರುಗಳನ್ನು ಕೂಡ ಕರೆದಿದ್ದು, ಅವರಿಬ್ಬರ ಅನುಪಸ್ಥಿತಿಯ ಕಾರಣದಿಂದ ಉಳಿದವರು ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಮುಂದುವರೆಸಿದ್ದಾರೆ.

Last updated

ಬಹುಮತ ಸಾಬೀತಿನ ಕುರಿತು ಕ್ರಿಕೆಟಿಗ ರವೀಂದ್ರ ಜಡೇಜಾ ಮಾಡಿರುವ ಟ್ವೀಟ್‌ ಇದು:

Last updated

ಆಪರೇಷನ್‌ ಕಮಲದ ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ ವಿ.ಎಸ್.ಉಗ್ರಪ್ಪ:

ವಿ.ಎಸ್.ಉಗ್ರಪ್ಪ ಆಪರೇಷನ್‌ ಕಮಲದ ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್‌ ಶಾಸಕರೊಬ್ಬರ ಪತ್ನಿಗೆ ಬಿಜೆಪಿ ನಾಯಕರಾದ ಪುಟ್ಟಸ್ವಾಮಿ ಕರೆಮಾಡಿದ್ದು, 15 ಕೋಟಿ ರೂಪಾಯಿಗಳ ಆಮಿಷವನ್ನು ಒಡ್ಡಿದ್ದಾರೆ ಎಂದು ವಿಎಸ್‌ ಉಗ್ರಪ್ಪ ಆರೋಪಿಸಿದ್ದಾರೆ.

ಸಚಿವ ಸ್ಥಾನ ಬೇಕೆಂದರೆ 5 ಕೋಟಿ, ಬೇಡವೆಂದರೆ 15 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಆಸೆ ತೋರಿಸಿ, ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎಂದಿರುವ ಉಗ್ರಪ್ಪ, ಈ ಕುರಿತು ಆಡಿಯೋವನ್ನೂ ಕೂಡ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Last updated

ತಾಜ್‌ ವೆಸ್ಟೆಂಡ್‌ನಲ್ಲಿ ಮಿಸ್ಸಿಂಗ್‌ ಶಾಸಕರು?:

ಗೈರು ಹಾಜಾರಾಗಿರುವ ಕಾಂಗ್ರೆಸ್‌ನ ಇಬ್ಬರು ಶಾಸಕರು ಬೆಂಗಳೂರಿಗ ತಾಜ್‌ ವೆಸ್ಟೆಂಡ್‌ ಹೋಟೆಲ್‌ಗೆ ಬಂದಿದ್ದಾರೆ ಎನ್ನುವ ಮಾಹಿತಿಗಳಿವೆ. ಕಾಂಗ್ರೆಸ್‌ ಶಾಸಕ ಎಂಬಿ ಪಾಟೀಲ್‌ ಅವರೀರ್ವರನ್ನು ವಿಧಾನಸಭಾ ಕಲಾಪಕ್ಕೆ ಕರೆತರಲಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನದ ವೇಳೆಗೆ ಇಬ್ಬರೂ ಶಾಸಕರು ಕಲಾಪದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ.

Last updated

ಶುಭ ಮೂಹೂರ್ತಕ್ಕಾಗಿ ಕಾದು ಈಗ ತಾನೇ ಬರಿಗಾಲಲ್ಲಿ ಆಗಮಿಸಿದ ಎಚ್.ಡಿ.ರೇವಣ್ಣ:

ದೇವೇಗೌಡರ ಮನೆಯಲ್ಲಿ ಪೂಜೆಯಲ್ಲಿ ನಿರತರಾಗಿದ್ದ ಎಚ್.ಡಿ.ರೇವಣ್ಣ ಈಗ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ವಿಧಾನಸಭೆ ಆವರಣಕ್ಕೂ ಕೂಡ ಶುಭ ಸಮಯವನ್ನೇ ನೋಡಿ ಬರಿಗಾಲಲ್ಲಿ ಒಳಗೆ ಆಗಮಿಸಿದ್ದಾರೆ.

Last updated

ಕಾಂಗ್ರೆಸ್‌ನ ಇಬ್ಬರು ಶಾಸಕರು ಗೈರು:

ವಿಧಾನಸೌಧದಲ್ಲಿ ಹಂಗಾಮಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಶಾಸಕರ ಪ್ರಮಾಣ ವಚನ ಬೋಧನೆಯನ್ನು ಆರಂಭಿಸಿದ್ದಾರೆ. ಆದರೆ ಕಾಂಗ್ರೆಸ್‌ನ ಇಬ್ಬರು ಶಾಸಕರು ವಿಧಾನಸಭೆಯಲ್ಲಿ ಕಾಣಿಸುತ್ತಿಲ್ಲ. ವಿಜಯನಗರದ ಶಾಸಕ ಆನಂದ್ ಸಿಂಗ್‌ ಹಾಗೂ ಮಸ್ಕಿಯ ಶಾಸಕ ಪ್ರತಾಪ್‌ ಗೌಡ ಪಾಟೀಲ್‌ ಇನ್ನೂ ಹಾಜಾರಾಗದ ಶಾಸಕರು. ಉಳಿದೆಲ್ಲಾ ಶಾಸಕರು ಭಾಗಿಯಾಗಿದ್ದಾರೆ.

Last updated

ಪ್ರಮಾಣ ವಚನ ಬೋಧನೆ ಆರಂಭ:

ವಿಧಾನಸೌಧದಲ್ಲಿ ಶಾಸಕರ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದೆ. ಹಂಗಾಮಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಪ್ರಮಾಣ ವಚನ ಬೋಧನೆಯನ್ನು ಆರಂಭಿಸಿದ್ದಾರೆ. ಮೊದಲ ಭಾಗವಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದಾರೆ.

Last updated

ಯಾರಾಗಲಿದ್ದಾರೆ ಕರ್ನಾಟಕದ ಸಿಎಂ?:

‘ಸಮಾಚಾರ’ ಲೈವ್‌ ಬ್ಲಾಗ್‌ಗೆ ಸ್ವಾಗತ.

ಮೇ 15ರಂದು ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿತ್ತು. ಯಾವ ಪಕ್ಷಕ್ಕೂ ಕೂಡ ಸ್ಪಷ್ಟ ಬಹುಮತ ನೀಡದ ಕರ್ನಾಟಕದ ಮತದಾರರು ಅತಂತ್ರ ರಾಜಕೀಯ ಪರಿಸ್ಥಿತಿಯನ್ನು ನಿರ್ಮಿಸಿದ್ದರು.

ಮೈತ್ರಿಗೆ ಮುಂದಾದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಬುಹುಮತವನ್ನು ತೋರಿಸಿ ಅಧಿಕಾರ ಹಿಡಿಯಲು ಮುಂದಾಗಿದ್ದವು. ಕುಮಾರಸ್ವಾಮಿ ಇನ್ನೇನು ಕರ್ನಾಟಕ ಮುಖ್ಯಮಂತ್ರಿಯಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲ ವಜೂಬಾಯಿ ವಾಲಾ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಮಾಣ ವಚನವನ್ನು ಬೋಧಿಸಿದ್ದರು. ಬಹುಮತವನ್ನು ಸೂಚಿಸಲು 15 ದಿನಗಳ ಕಾಲಾವಕಾಶ ನೀಡಿದ್ದರು.

ರಾಜ್ಯಪಾಲರ ಈ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಸುಪ್ರಿಂ ಕೋರ್ಟ್‌ನ ಮೊರೆಹೋಗಿದ್ದರು. ವಾದ ವಿವಾದಗಳನ್ನು ಆಲಿಸಿದ ಸುಪ್ರಿಂ ಕೋರ್ಟ್ ಮೇ 19ರ ಸಂಜೆ 4 ಗಂಟೆಯೊಳಗೆ ಬಹುಮತ ಸೂಚಿಸುವಂತೆ ತಿಳಿಸಿದೆ.

ಸಂಜೆ ನಡೆಯಲಿರುವ ವಿಶ್ವಾಸ ಮತ ಯಾಚನೆಯ ಬಗ್ಗೆ ಬೆಳಗ್ಗೆಯಿಂದಲೇ ಕೂತೂಹಲ ಗರಿಗೆದರಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶ ಕರ್ನಾಟಕದ ರಾಜಕಾರಣವನ್ನು ಕುತೂಹಲಭರಿತವಾಗಿ ವೀಕ್ಷಿಸುತ್ತಿದೆ. ಇಂದಿನ ಎಲ್ಲಾ ಕ್ಷಣ ಕ್ಷಣದ ಮಾಹಿತಿಯನ್ನು ‘ಸಮಾಚಾರ’ ನಿಮ್ಮ ಮುಂದಿಡಲಿದೆ.

Last updated