samachara
www.samachara.com
LIVE: ಕರ್ನಾಟಕ ರಾಜ್ಯ ರಾಜಕಾರಣದ ಬೆಳವಣಿಗೆಗಳ ಒಳನೋಟ 
LIVE
live

LIVE: ಕರ್ನಾಟಕ ರಾಜ್ಯ ರಾಜಕಾರಣದ ಬೆಳವಣಿಗೆಗಳ ಒಳನೋಟ 

ಎಲ್ಲಾ ಮಾಧ್ಯಮಗಳು ರಾಜ್ಯ ರಾಜಕಾರಣದ ಸುದ್ದಿಯನ್ನು ರಸವತ್ತಾಗಿ ಮುಂದಿಡುತ್ತಿವೆ.  ಕ್ಷಣ ಕ್ಷಣದ ಮಾಹಿತಿಗಳು ಜನರನ್ನು ತಲುಪುತ್ತಿವೆ. ಇದೆಲ್ಲವನ್ನು ಹೊರತುಪಡಿಸಿದ ಕೆಲವು ಸುದ್ದಿ ಹಾಗೂ ಒಳನೋಟಗಳನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ.

ರಾಜಭವನಕ್ಕೆ ಬಂದಿರುವ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌:

ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಾಗಿರುವ ಸಂಜೀವ್‌ ಕುಮಾರ್‌ ಈಗ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಯಾವ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬಂದಿದೆ ಎಂಬ ಚುನಾವಣಾ ಫಲಿತಾಂಶವನ್ನು ರಾಜ್ಯಪಾಲ ವಜೂಭಾಯ್ ವಾಲಾರಿಗೆ ಸಲ್ಲಿಸಿದ್ದಾರೆ.

Last updated

ಇನ್ನೇನು ಕೆಲವೇ ಗಂಟೆಗಳಲ್ಲಿ ಅರಂಭಗೊಳ್ಳಲಿರುವ ರೆಸಾರ್ಟ್ ರಾಜಕಾರಣ!:

ಕಾಂಗ್ರೆಸ್ ಜೆಡಿಎಸ್ ಮತ್ತು ಬಿಜೆಪಿ ಮೂರೂ ಪಕ್ಷಗಳೂ ಕೂಡ ತಮ್ಮ ಶಾಸಕರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಇದರ ಮೊದಲ ಭಾಗವಾಗಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ಬಸ್‌ಗಳಲ್ಲಿ ಹತ್ತಿಸಿ ಈಗಲ್‌ಟನ್‌ ರೆಸಾರ್ಟ್‌ಗೆ ಕರೆದೊಯ್ಯಲಿದೆ.

Last updated

ರಾಜ್ಯಪಾಲರನ್ನು ಭೇಟಿ ಮಾಡಲಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್:

ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಪತ್ರ ನೀಡಿ ಬಂದ ನಂತರದಲ್ಲಿ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಉಭಯ ಪಕ್ಷಗಳು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲರನ್ನು ಬೇಟಿ ಮಾಡಲು ಸಮಯ ನಗಧಿ ಮಾಡಲಾಗಿದೆ. ನಮಗೇ ಸರಕಾರ ರಚಿಸಲು ಅವಕಾಶ ಕೊಡಿ ಎಂದು ಈ ಪಕ್ಷಗಳು ಪತ್ರ ಸಲ್ಲಿಸಲಿವೆ ಎನ್ನಲಾಗಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಕುಮಾರಸ್ವಾಮಿ ಪರವಾಗಿ ಸಹಿ ಹಾಕಿರುವ ದಾಖಲೆಯನ್ನು ರಾಜ್ಯಪಾಲರ ಮುಂದಿಡಲು ನಾಯಕರು ತೀರ್ಮಾನಿಸಿದ್ದಾರೆ.

Last updated

'ಆಪರೇಷನ್‌ ಕಮಲ':

“ಬಿಜೆಪಿ ನಾಯಕರು ತನಗೆ ಫೋನ್‌ ಮಾಡುತ್ತಲೇ ಇದ್ದಾರೆ. ಆದರೆ ನಾನು ಪದೇ ಪದೇ ಫೋನ್‌ ಮಾಡಬೇಡಿ ಎಂದಿದ್ದೇನೆ. ನಾನೊಬ್ಬ ಕಮಿಟೆಡ್‌ ಕಾಂಗ್ರೆಸ್‌ ನಾಯಕ,” ಎಂದಿದ್ದಾರೆ ಕಾಂಗ್ರೆಸ್‌ ಎಂಎಲ್‌ಎ ರಾಜೇಗೌಡ.

Last updated

ಸಿದ್ಧರಾಮಯ್ಯ ಟ್ರೋಲ್:

ಹಿಂದೊಮ್ಮೆ ತೋಳು ತಟ್ಟಿ ಸವಾಲು ಹಾಕಿದ್ದ ಸಿದ್ಧರಾಮಯ್ಯ ಈಗ ಜೆಡಿಎಸ್‌ಗೆ ಸಂಪೂರ್ಣ ಬೆಂಬಲವನ್ನು ನೀಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿದೆ.

LIVE: ಕರ್ನಾಟಕ ರಾಜ್ಯ ರಾಜಕಾರಣದ ಬೆಳವಣಿಗೆಗಳ ಒಳನೋಟ 

Last updated

‘ಬಿಜೆಪಿಯ ಅಶ್ವಮೇಧದ ಕುದುರೆಗಳನ್ನು ತಡೆದಿದ್ದೇವೆ’:

ಉತ್ತರ ಭಾರತವನ್ನು ಗೆದ್ದ ಬಿಜೆಪಿ ಅಶ್ವಮೇಧದ ಕುದುರೆ ಇಲ್ಲಿಗೂ ಬಂದಿದೆ. ಕರ್ನಾಟಕದಲ್ಲಿ ಆ ಕುದುರೆಯನ್ನು ನಾವು ತಡೆದಿದ್ದೇವೆ ಎಂದು ಕುಮಾರಸ್ವಾಮಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Last updated

ಕಾಂಗ್ರೆಸ್‌ಗೆ ಜೈ ಎಂದ ಕುಮಾರಸ್ವಾಮಿ:

ಹಿಂದಿನ ಚುನಾವಣೆಗಳಲ್ಲಿ ತಂದೆಯ ಮಾತು ಕೇಳದೆ ಬಿಜೆಪಿ ಜತೆ ಕೈಜೋಡಿಸಿ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಬಳಿದುಕೊಂಡಿತ್ತು. ಈಗ ಅದನ್ನು ಹೋಗಿಸುವ ಕಾಲ ಬಂದಿದೆ. ನಾನು ಕಾಂಗ್ರೆಸ್ ಜತೆ ಕೈಜೋಡಿಸಿದ್ದೇನೆ ಎಂದು ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Last updated

ಸಂವಿಧಾನ ಬದಲಿಸುತ್ತೇವೆ ಎಂದವರು ಈಗ ಸಂವಿಧಾನದ ಕಾಲಡಿಗೆ:

ಕೆಲವು ತಿಂಗಳುಗಳ ಹಿಂದೆ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್‌ ಹೆಗಡೆ ಸಂವಿಧಾವನ್ನು ಬದಲಾಯಿಸುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ಬಾರೀ ವಿವಾದವನ್ನು ಹುಟ್ಟು ಹಾಕಿತ್ತು. ಇಡೀ ದೇಶ ಈ ಹೇಳಿಕೆಯ ಕುರಿತು ಮಾತನಾಡಿತ್ತು.

ಈಗ ಅದೇ ಬಿಜೆಪಿ ಪಕ್ಷ ಸಾಂವಿಧಾನಿಕವಾಗಿ ನಮಗೇ ಅಧಿಕಾರ ರಚಿಸುವ ಅವಕಾಶ ನೀಡಿ ಎಂದು ರಾಜ್ಯಪಾಲರ ಮೊರೆ ಹೋಗಿದ್ದಾರೆ. ಬಿಜೆಪಿ ನಾಯಕರ ಈ ದ್ವಿಬಗೆ ನೀತಿ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ತುತ್ತಾಗುತ್ತಿದೆ.

Last updated

ಮರಳಿ ಸ್ವಪಕ್ಷಕ್ಕೆ ಹಾರಲಿವೆಯೇ ಬಿಜೆಪಿ ಹಕ್ಕಿಗಳು?:

ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ನಿಂದ ಚುನಾವಣಾ ಕಣಕ್ಕಿಳಿದಿದ್ದ ಉತ್ತರ ಕರ್ನಾಟಕ ಭಾಗದ ಆನಂದ್‌ ಸಿಂಗ್, ನಾಗೇಂದ್ರ, ಎಮ್.ವೈ.ಪಾಟೀಲ್‌ ಹಾಗೂ ರಾಜಶೇಖರ್‌ ಪಾಟೀಲ್‌ ಕಾಂಗ್ರೆಸ್‌ ನಾಯಕರ ಕೈಗೆ ಸಿಗುತ್ತಿಲ್ಲ ಎನ್ನಲಾಗಿದೆ. ಮತ್ತೆ ಮರಳಿ ಬಿಜೆಪಿಯತ್ತ ಹಾರಲಿದ್ದಾರೆಯೇ ಈ ಶಾಸಕರು ಎಂಬ ಭಯ ಕಾಂಗ್ರೆಸ್‌ನಲ್ಲಿ ಮನೆ ಮಾಡಿದೆ.

Last updated

ಜನತಾದಳ ಲೆಜಿಸ್ಲೇಟಿವ್‌ ಪಾರ್ಟಿಯ ನಾಯಕನಾಗಿ ಕುಮಾರಸ್ವಾಮಿ ಆಯ್ಕೆ:

ಜಾತ್ಯಾತೀತ ಜನತಾದಳದ ಶಾಸಕರು ಕುಮಾರಸ್ವಾಮಿಯನ್ನು ಅಧಿಕೃತವಾಗಿ ತಮ್ಮ ನಾಯಕನೆಂದು ಘೋಷಿಸಿಕೊಂಡಿದ್ದಾರೆ.

Last updated

ಯಡಿಯೂರಪ್ಪ ಮುಖ್ಯಮಂತ್ರಿ; ರಾಜ್ಯಪಾಲರ ಅನುಮತಿಯೊಂದೇ ಅಡ್ಡಿ:

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಿಜೆಪಿ ನಾಯಕರು ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದಾರೆ. ನಂತರದಲ್ಲಿ ಮಾತನಾಡಿರುವ ಬಿ.ಎಸ್.ಯಡಿಯೂರಪ್ಪ, “ಬಿಜೆಪಿ ಶಾಸಕಾಂಗ ಪಕ್ಷ ನನ್ನನ್ನು ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಸರಕಾರ ರಚಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಲಾಗಿದೆ. ಅವರಿಂದ ಉತ್ತರ ದೊರೆಯುವ ನಿರೀಕ್ಷೆಯಲ್ಲಿದ್ದೇವೆ,” ಎಂದಿದ್ದಾರೆ.

ಈಗ ಯಡಿಯೂರಪ್ಪ ಅಧಿಕಾರ ರಚಿಸಲು ರಾಜ್ಯಪಾಲರ ಅನುಮತಿ ಮಾತ್ರವೇ ಅಡ್ಡಿಯಾಗಿದೆ. ರಾಜ್ಯಪಾಲರು ಒಂದು ವೇಳೆ ಒಪ್ಪಿಗೆ ಸೂಚಿಸಿದ್ದೇ ಆದಲ್ಲಿ, 104 ಶಾಸಕರ ಬೆಂಬಲವನ್ನಷ್ಟೇ ಪಡೆದಿರುವ ಬಿಜೆಪಿ ಸರಕಾರ ರಚನೆಗೆ ಮುಂದಾಗಲಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ನಡೆಸುತ್ತಿರುವ ತಂತ್ರಗಾರಿಕೆಯೆಲ್ಲವೂ ಮಣ್ಣು ಮುಕ್ಕಲಿದೆ.

Last updated

ಸೋತ ಸಿದ್ಧರಾಮಯ್ಯ ಮತ್ತು ಗೆದ್ದ ಜಿ.ಟಿ.ದೇವೇಗೌಡ ಒಂದೇ ಸರಕಾರದಲ್ಲಿ?:

ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌ನಿಂದ ಚುನಾವಣಾ ಅಭ್ಯರ್ಥಿಯಾಗಿ ನಿಂತಿದ್ದ ಸಿದ್ಧರಾಮಯ್ಯರನ್ನು ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡಬ ಹೀನಾಯವಾಗಿ ಸೋಲಿಸಿದ್ದರು. ಮತದಾನಕ್ಕೂ ಮುಂಚೆ ಸಿದ್ಧರಾಮಯ್ಯ ಜೆಡಿಎಸ್ ವಿರುದ್ಧ ಬಿರುಸಿನ ಪ್ರಚಾರ ನಡೆಸಿದ್ದರು. ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳೇ ಸರಕಾರ ರಚನೆಗೆ ಮುಂದಾಗಿರುವುದು ಸಾಮಾನ್ಯ ಜನರಲ್ಲಿ ಕುತೂಲಹಕ್ಕೆ ಮತ್ತು ಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ.

Last updated

'ಬಿಜೆಪಿಯದು ಕೆಟ್ಟ ರಾಜಕಾರಣ':

ನಾವು ಜನಾದೇಶವನ್ನು ಪಾಲಿಸಬೇಕು ಎಂದಿರುವ ಕಾಂಗ್ರೆಸ್‌ ಶಾಸಕ ಎನ್‌ಎ ಹ್ಯಾರಿಸ್‌ 118 ಶಾಸಕರ ಬೆಂಬಲ ನಮಗಿದೆ ಎಂದು ತಿಳಿಸಿದ್ದಾರೆ. ಕೆಟ್ಟ ರಾಜಕಾರಣ ನಡೆಸುತ್ತಿರುವ ಬಿಜೆಪಿಗೆ ಬೆಂಬಲವಿಲ್ಲ ಎಂದೂ ಕೂಡ ತಿಳಿಸಿದ್ದಾರೆ.

Last updated

'ಕೈ'ಯಿಂದ 'ಕುದುರೆ ವ್ಯಾಪಾರ':

ಇದುವರೆಗೂ ಆಪರೇಷನ್‌ ಕಮಲ ಕೇಳಿಬರುತ್ತಿತ್ತು. ಈಗ ಆಪರೇಷನ್‌ ಕೈ ಕೂಡ ನಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ. ಬಿಜೆಪಿಯ 9 ಜನ ಶಾಸಕರನ್ನು ಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್‌ ಯೋಚಿಸುತ್ತಿದೆ ಎನ್ನುವ ಮಾಹಿತಿಗಳಿವೆ.

Last updated

ಹಾಸ್ಯಾಸ್ಪದಗೊಂಡ ರಾಜ್ಯ ರಾಜಕಾರಣ:

ಯಾವ ಪಕ್ಷ ದೊಂದಿಗೆ ಜೆಡಿಎಸ್‌ ಮೈತ್ರಿಗೆ ಮುಂದಾಗುತ್ತದೆ ಎಂಬ ಸ್ಪಷ್ಟತೆ ದೊರೆಯದೇ ತೊಳಲಾಡುತ್ತಿರುವ ರಾಜಕಾರಣ ಸಾಮಾನ್ಯ ಜನರ ಕಣ್ಣಿಗೆ ಹಾಸ್ಯಾಸ್ಪದವಾಗಿ ಕಾಣಿಸತೊಡಗಿದೆ. ಅಭಿಲಾಶ್‌ ಜಿಗಣಿ ಎನ್ನುವವರ ಫೇಸ್‌ಬುಕ್‌ ಖಾತೆಯಲ್ಲಿನ ಪೋಸ್ಟ್ ಇಲ್ಲಿದೆ.

Last updated

ಜೆಡಿಎಸ್‌ ಮತ್ತ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಮತ್ತು ಬಿಜೆಪಿ?:

ಇದುವರೆಗೂ ಕೂಡ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈಗ ಉಲ್ಟಾ ಆಗುವ ಲಕ್ಷಣಗಳು ರಾಜಕಾರಣದಲ್ಲಿ ಕಾಣಿಸುತ್ತಿವೆ. ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರ ಜತೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ನಾಯಕರಿಗೆ ಮೈತ್ರಿಯ ಸಂಬಂಧ ದೇವೇಗೌಡರ ಜತೆ ಮಾತನಾಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಈಗ ದೇವೇಗೌಡರ ನಿರ್ಧಾರ ಎನಿರುತ್ತೆ ಎನ್ನುವುದರ ಮೇಲೆ ರಾಜ್ಯ ರಾಜಕಾರಣ ರೂಪ ಪಡೆಯುತ್ತದೆ.

Last updated

ಅತಂತ್ರ ತೀರ್ಪು:

‘ಸಮಾಚಾರ’ದ ಲೈವ್‌ ಬ್ಲಾಗ್‌ಗೆ ಸ್ವಾಗತ.

ಕರ್ನಾಟಕದ ಮತದಾರ ನೀಡಿರುವ ತೀರ್ಪು ಅತಂತ್ರ ಸ್ಥಿತಿಯನ್ನು ಸೃಷ್ಟಿಸಿದ್ದು, ರಾಜ್ಯ ರಾಜಕಾರಣದಲ್ಲಿ ಊಹಿಸಲಾಗದ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ. ಕಾಂಗ್ರೆಸ್‌ ಪಕ್ಷ ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ನೀಡಿದೆ. ಕಾಂಗ್ರೆಸ್‌ ಬೆಂಬಲದ ಬಲದಿಂದ ಜೆಡಿಎಸ್‌ ಸರಕಾರ ರಚಿಸುವ ಭರವಸೆಯಲ್ಲಿದೆ. 104 ಕ್ಷೇತ್ರಗಳಲ್ಲಿ ಗೆದ್ದ ಬಿಜೆಪಿ ಹೇಗಾದರೂ ಮಾಡಿ ಸರಕಾರ ರಚಿಸಲೇಬೇಕೆಂಬ ಪಣದಲ್ಲಿ ಬಿದ್ದಿದೆ. ಆಪರೇಷನ್‌ ಕಮಲಕ್ಕೆ ಅಗತ್ಯವಿರುವ ತಂತ್ರಗಾರಿಕೆಯನ್ನು ಸಿದ್ಧಪಡಿಸುತ್ತಿದೆ. ಈ ಬೆನ್ನಲ್ಲೇ ರೆಸಾರ್ಟ್‌ ರಾಜಕಾರಣವೂ ಪ್ರಾರಂಭಗೊಂಡಿದೆ.

ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಒಳನೋಟಗಳನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ.

Last updated