samachara
www.samachara.com
LIVE: ಕರ್ನಾಟಕ ವಿಧಾನಸಭಾ ಚುನಾವಣೆ-2018; ಒಟ್ಟು ಶೇ.72.13ರಷ್ಟು ಮತದಾನ
LIVE

LIVE: ಕರ್ನಾಟಕ ವಿಧಾನಸಭಾ ಚುನಾವಣೆ-2018; ಒಟ್ಟು ಶೇ.72.13ರಷ್ಟು ಮತದಾನ

ಮುಂದಿನ ಲೋಕ ಸಭಾ ಚುನಾವಣೆಯ ದಿಕ್ಸೂಚಿ ಎಂದೇ ಕರೆಸಿಕೊಂಡಿರುವ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಕ್ಷಣ ಕ್ಷಣದ ಲೈವ್‌ ಮಾಹಿತಿ ಇಲ್ಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯ:

ರಾಷ್ಟ್ರವ್ಯಾಪಿ ಗಮನ ಸೆಳದಿರುವ ಕರ್ನಾಟಕದ ವಿಧಾನ ಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಜಯನಗರ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 222 ಕ್ಷೇತ್ರಗಳಲ್ಲಿ ಮತದಾರರು ಮತ ಚಲಾಯಿಸಿದ್ದಾರೆ. ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲನಹಳ್ಳಿಯಲ್ಲಿ ಮತಯಂತ್ರದ ದೋಷದ ಕಾರಣಕ್ಕಾಗಿ ಮರು ಮತದಾನ ನಡೆಯಲಿದ್ದು, ದಿನಾಂಕ ಘೋಷಣೆಯಾಗಬೇಕಿದೆ. ಒಟ್ಟಾರೆ ಜಿದ್ದಾಜಿದ್ದಿನ ಕಣವಾಗಿದ್ದ ಕರ್ನಾಟಕದ ಚುನಾವಣೆಯ ಬಹುಮುಖ್ಯ ಬಾಗಕ್ಕೆ ತರೆ ಬಿದ್ದಿದೆ.

ಇಲ್ಲಿಯವರೆಗೂ ‘ಸಮಾಚಾರ’ದ ಲೈವ್ ಮಾಹಿತಿಯನ್ನು ವೀಕ್ಷಿಸಿದ ಎಲ್ಲರಿಗೂ ಧನ್ಯವಾದಗಳು. ಸಮೀಕ್ಷಾ ವರದಿ ಹಾಗೂ ವಿಶ್ಲೇಷಣೆಗಳಿಗಾಗಿ ನಿರೀಕ್ಷಿಸಿ.

Last updated

ಶೇ.87ರಷ್ಟು ಮತದಾನ ಕಂಡ ರಾಮನಗರ; ಬೆಂಗಳೂರೇ ಕಡಿಮೆ:

ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಮತದಾನ ಪ್ರಕ್ರಿಯೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಕೊನೆಗೊಳ್ಳಲಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.64.5ರಷ್ಟು ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಶೇಕಡವಾರು ಮತದಾನದ ಪೈಕಿ ರಾಮನಗರ ಜಿಲ್ಲೆ ಮೊದಲನೇ ಸ್ಥಾನದಲ್ಲಿದ್ದು, ಶೇ.87ರಷ್ಟು ಮತದಾರರು ಮತ ನೀಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಶೇ.84ರಷ್ಟು ಮತದಾನ ನಡೆದಿದೆ. ಹಾಸನದ ಶೇ.80ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಬೆಂಗಳೂರು ಉತ್ತರದಲ್ಲಿ ಅತೀ ಕಡಿಮೆ ಮತದಾನ ದಾಖಲಾಗಿದ್ದು, ಶೇ.39ರದಷ್ಟು ಜನ ಮತದಾನ ಮಾಡಿದ್ದಾರೆ.

Last updated

6 ಗಂಟೆಯವರೆಗಷ್ಟೇ ಮತದಾನ:

6 ಗಂಟೆಯವರೆಗೆ ಮಾತ್ರವೇ ಮತದಾನ ಪ್ರಕ್ರಿಯೆ ನಡೆಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಮತದಾನದ ಸಮಯವನ್ನು ಆಯೋಗ ವಿಸ್ತರಿಸಿಲ್ಲ. 6 ಗಂಟೆಗೆ ರಾಜ್ಯದ ಎಲ್ಲಾ ಮತಕೇಂದ್ರಗಳು ತಮ್ಮ ಕಾರ್ಯ ನಿಲ್ಲಿಸಲಿವೆ.

Last updated

2013ರ ಚುನಾವಣೆಯಲ್ಲಿ ಶೇ.70.23ರಷ್ಟು ಮತದಾನ ನಡೆದಿತ್ತು :

ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.70.23ರಷ್ಟು ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದರು. ಆದರೆ ಈ ಬಾರಿ ಮತದಾನದ ಅವಧಿ ಮಗಿಯುತ್ತಾ ಬಂದರೂ ಕೂಡ 64.5ರಷ್ಟು ಜನ ಮತ ನೀಡಿದ್ದಾರೆ. ಈ ಬಾರಿಯ ಮತದಾನ ಕಳೆದ ಬಾರಿಯ ಅಂಕಿ ಅಂಶಗಳನ್ನು ಸರಿಗಟ್ಟುವ ಸಾಧ್ಯತೆಗಳು ವಿರಳವಾಗಿವೆ.

Last updated

ಲೊಟ್ಟೆಗೊಲ್ಲನ ಹಳ್ಳಿಯಲ್ಲಿ ಮರು ಮತದಾನ:

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲನ ಹಳ್ಳಿಯಲ್ಲಿದ್ದ 158ನೇ ಮತಗಟ್ಟೆಯಲ್ಲಿ ಬೆಳಗ್ಗೆಯಿಂದ ಮತಯಂತ್ರ ಕೈಕೊಟ್ಟಿತ್ತು. ಆದ ಕಾರಣ ಈ ಬೂತ್‌ನಲ್ಲಿ ಮೇ.14ರಂದು ಮರು ಮತದಾನ ನಡೆಸುವ ಸಾಧ್ಯತೆ ಇದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ. ಈ ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೂ ಕೂಡ ಕೇವಲ 44 ಓಟುಗಳನ್ನಷ್ಟೇ ಹಾಕಲು ಸಾಧ್ಯವಾಗಿದ್ದು, 4000ಕ್ಕೂ ಹೆಚ್ಚು ಮತದಾರರು ತಮ್ಮ ಮತಗಳನ್ನು ಚಲಾಯಿಸಿಲ್ಲ.

Last updated

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆರಂಭಗೊಂಡ ಮಳೆ:

ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅದಾಗಲೇ ಧಾರಾಕಾರ ಮಳೆ. ಗದಗ, ರಾಯಚೂರು ಹುಬ್ಬಳ್ಳಿಗಳಲ್ಲಿ ಮತದಾರರ ಪರದಾಟ.

Last updated

ಶೇ.61.53ರಷ್ಟು ಮತದಾನ; ಬಾಕಿ ಉಳಿದಿರುವುದು ಇನ್ನು ಒಂದೇ ಗಂಟೆ

ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿರುವ ಮತದಾನ ಪ್ರಕ್ರಿಯೆಯಲ್ಲಿ ಈವರೆಗೂ ಶೇ.61.53ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಇನ್ನೂ ಶೇ.38.47ರಷ್ಟು ಮತದಾರರು ಮತ ಚಲಾಯಿಸಬೇಕಿದೆ. ಆದರೆ ಈಗ ಮತದಾನಕ್ಕೆ ಬಾಕಿ ಉಳಿದಿರುವುದು ಇನ್ನು ಒಂದೇ ಗಂಟೆ.

Last updated

ಮತದಾನ ಮಾಡಿದ ಅಂಬರೀಷ್‌ :

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಅಂಬರೀಷ್‌ ತಮ್ಮ ಮತವನ್ನು ಚಲಾಯಿಸಿದ್ದಾರೆ.

Last updated

ಹುಬ್ಬಳ್ಳಿಗೆ ಕಾಲಿಟ್ಟ ಮಳೆರಾಯ; ತಂಗುದಾಣವಾಗಿ ಮಾರ್ಪಟ್ಟ ಮತಗಟ್ಟೆ:

Last updated

ಮತದಾನವನ್ನು ಬಹಿಷ್ಕರಿಸಿದ ತರ್ಕಾಸ್‌ಪೇಟೆ ಹಳ್ಳಿಯ ಜನ:

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ತರ್ಕಾಸ್‌ಪೇಟೆ ಎಂಬ ಹಳ್ಳಿಯ ಸುಮಾರು 3,500 ಮತದಾರು ಮತದಾನವನ್ನು ಬಹಿಷ್ಕರಿಸಿದ್ದಾರೆ. ತಮ್ಮ ಹಳ್ಳಿಗೆ ಗ್ರಾಮಪಂಚಾಯಿತಿ ಕಾರ್ಯಾಲಯ ಬೇಕು ಎಂಬ ಹಳ್ಳಿಗರ ಬಹುದಿನದ ಬೇಡಿಕೆಗೆ ರಾಜಕಾರಣಿಗಳು ಸ್ಪಂದಿಸದ ಕಾರಣ ಜನ ಮತದಾನವನ್ನು ಬಹಿಷ್ಕರಿಸಿದ್ದಾರೆ.

Last updated

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತ ಚಲಾಯಿಸಿದವರು ಕೇವಲ ಶೇ.24ರಷ್ಟು ಮಂದಿಯಷ್ಟೇ:

ಮತದಾನದ ಅವಧಿ ಮುಗಿಯುತ್ತಾ ಬಂದರೂ ಕೂಡ ಬೆಂಗಳೂರು ಗ್ರಾಮಾಂತರದ ಶೇ.24ರಷ್ಟು ಮಂದಿಯಷ್ಟೇ ಮತ ಚಲಾಯಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಶೇ.58, ರಾಮನಗರದಲ್ಲಿ ಶೇ.39,ಚಿತ್ರದುರ್ಗದಲ್ಲಿ ಶೇ.58, ಹಾಸನದಲ್ಲಿ ಶೇ.43, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.56, ಯಾದಗಿರಿಯಲ್ಲಿ ಶೇ.47 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಶೇ.52ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

Last updated

ಹಾವೇರಿಯಲ್ಲಿ ಶೇ.69ರಷ್ಟು ಮತದಾನ:

ರಾಜ್ಯದ ಶೇ.56ರಷ್ಟು ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಹಾವೇರಿ ಜಿಲ್ಲೆಯೊಂದರಲ್ಲಿ ಶೇ.69, ಧಾರವಾಡ ಜಿಲ್ಲೆಯಲ್ಲಿ ಶೇ.46 ಹಾಗೂ ಮೈಸೂರು ಜಿಲ್ಲೆಯ ಶೇ.40 ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ.

Last updated

ಖಾಲಿ ಹೊಡೆಯುತ್ತಿರುವ ಕಲಬುರ್ಗಿ ಜಿಲ್ಲೆಯ ಮತಗಟ್ಟೆಗಳು :

ಬೆಳಗ್ಗೆ 7 ಗಂಟೆಯಿಂದಲೇ ಕಲಬುರ್ಗಿಯ ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲು ಹಿಡಿದು ನಿಂತಿದ್ದರು. ಆದರೆ ಬಿಸಿಲೇರುತ್ತಿದ್ದಂತೆ ಸಾಲಿನ ಉದ್ದ ಕಡಿಮೆಯಾಗುತ್ತ ಸಾಗಿತ್ತು. ಈಗ ಮತಗಟ್ಟೆಗಳ ಮುಂದೆ ಜನರೇ ಇಲ್ಲ. ಕಾರಣ 43 ಡಿಗ್ರಿ ಸೆಲ್ಸಿಯಸ್‌ನಷ್ಟಿರುವ ಉರಿ ಬಿಸಿಲು.

Last updated

ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.56ರಷ್ಟು ಮತದಾನ ಕಂಡ ಕರ್ನಾಟಕ; ಎಎನ್‌ಐ ಟ್ವೀಟ್:

Last updated

400 ಮತದಾರರ ಹೆಸರು ನಾಪತ್ತೆ:

ಕೆ.ಆರ್.ಪುರಂನ ಬಸವನ ಪುರ ವಾರ್ಡ್‌ನಲ್ಲಿರುವ ಮತಗಟ್ಟೆಯಲ್ಲಿ 400 ಜನ ಮತದಾರರ ಹೆಸರುಗಳೇ ನಾಪತ್ತೆಯಾಗಿವೆ. ಮತದಾರರ ಬಳಿ ಗುರುತಿನ ಚೀಟಿ ಇದ್ದರೂ ಕೂಡ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಮತದಾನ ಮಾಡಲೆಂದು ಬಂದವರು ಈಗ ಚುನಾವಣಾ ಸಿಬ್ಬಂದಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.

Last updated

'ಅಮಿತ್‌ ಶಾ ಕಾಮಿಡಿ ಶೋಗಳು ಮತದಾರರ ಮನಸ್ಸನ್ನು ಒಲಿಸಿಲ್ಲ'

ಅಮಿತ್‌ ಶಾರ ಕಾಮಿಡಿ ಶೋ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ಭಾಷಣಗಳು ಕರ್ನಾಟಕದ ಮತದಾರರ ಮನಸ್ಸುಗಳ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ. ಆದ್ದರಿಂದ ನಾವು ಚಿಂತಿರರಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Last updated

ಪಿಂಕ್‌ ಮತಗಟ್ಟೆಗಳ ಮುಂದೆ ಮತದಾನ ಮಾಡಲು ಕಾದು ನಿಂತ ಮಹಿಳೆಯರು:

LIVE: ಕರ್ನಾಟಕ ವಿಧಾನಸಭಾ ಚುನಾವಣೆ-2018; ಒಟ್ಟು ಶೇ.72.13ರಷ್ಟು ಮತದಾನ

Last updated

ಮತ ಚಲಾಯಿಸಿದ ಮಾಜಿ ಮುಖ್ಯಮಂತ್ರಿ:

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

Last updated

ಮದುವೆ ಮುಗಿಸಿಕೊಂಡು ಮತದಾನ ಮಾಡಿದ ವಧು ವರರು:

Last updated

ಮಧ್ಯಾಹ್ನದ ಹೊತ್ತಿಗೆ 37% ಮತದಾನ:

ಮಧ್ಯಾಹ್ನದ ಹೊತ್ತಿಗೆ ಮತದಾನ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ರಾಜ್ಯದಲ್ಲಿ ಒಟ್ಟಾರೆ 37% ಮತದಾನವಾಗಿದೆ.

Last updated

ಮತದಾನದಲ್ಲಿ ಮುಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರ:

ಚುನಾವಣೆಯನ್ನು ಹೆದುರಿಸುತ್ತಿರುವ 222 ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರ ಮುಂದಿದೆ. ಮಧ್ಯಾಹ್ನ 2 ಗಂಟೆಯ ಒಳಗೆ ಬಂಟ್ವಾಳದಲ್ಲಿ ಶೇ.60ರಷ್ಟು ಮತದಾನ ದಾಖಲಾಗಿದೆ.

Last updated

ಮತದಾನ; ದಕ್ಷಿಣ ಕನ್ನಡ ಜಿಲ್ಲೆಯೇ ಮುಂದೆ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.47ರಷ್ಟು ಮತದಾನವಾಗಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಕೊನೆ ಸ್ಥಾನದಲ್ಲಿರುವುದು ಬೆಂಗಳೂರು ನಗರ ಜಿಲ್ಲೆ. ಖೇವಲ ಶೇ.28ರಷ್ಟು ಬೆಂಗಳೂರಿಗರು ತಮ್ಮ ಮತವನ್ನು ಚಲಾಯಿಸಿದ್ದಾರೆ.

Last updated

‘ಜೆಡಿಎಸ್‌ನಿಂದ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆ’ :

“ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಿದೆ. ಸೊಸೈಟಿ ಕಾರ್ಯದರ್ಶಿ ಎಂದು ಹೇಳಿಕೊಳ್ಳುವ ಜೆಡಿಎಸ್ ಅಭ್ಯರ್ಥಿಗೆ ಅಷ್ಟೊಂದು ಹಣ ಹೇಗೆ ಬಂತು? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಿಜೆಪಿ ಬಹಿರಂಗವಾಗಿ ಬೆಂಬಲ ನೀಡಿದೆ” ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Last updated

ಶೇ.37ನ್ನು ತಲುಪಿದ ಮತದಾನ:

ಬಿಸಿಲಿನ ಮಧ್ಯೆಯೇ ಕರ್ನಾಟಕದ ಮತದಾರರು ಹುಮ್ಮಸ್ಸಿನಿಂದ ಮತ ಚಲಾಯಿಸುತ್ತಿದ್ದಾರೆ. ಇದುವರೆಗೂ ರಾಜ್ಯದ ಒಟ್ಟು ಮತದಾನ ಶೇ.37ನ್ನು ತಲುಪಿದೆ.

Last updated

ಚಿಂತಾಮಣಿಯಲ್ಲಿ ಅಕ್ರಮ ಮತದಾನ?:

ಚಿಂತಾಮಣಿಯ ದೊಡ್ಡ ಹಳ್ಳಿ ಮತಕೇಂದ್ರದಲ್ಲಿ ಆಪ್ರಾಪ್ತ ಬಾಲಕನನ್ನು ಕರೆತಂದು ಮತದಾನ ಮಾಡಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಒಬ್ಬ ಹುಡುಗ ತಾನೇ ಜನರನ್ನು ಕರೆದುಕೊಂಡು ಹೋಗಿ ಮತ ಹಾಕಸುತ್ತಿರುವ ದೃಷ್ಯ ವಿಡಿಯೋದಲ್ಲಿದೆ ಎನ್ನಲಾಗಿದೆ. ಇದು ನಿಜವಾದಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ.

Last updated

ಮತದಾನ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ:

ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸ್ವಗ್ರಾಮವಾದ ಮೈಸೂರಿನ ಸಿದ್ಧರಾಮನ ಹುಂಡಿಯಲ್ಲಿ ತಮ್ಮ ಮತ ಹಾಕಿದ್ದಾರೆ. ಅವರ ಜತೆ ಅವರ ಪುತ್ರ ಡಾ.ಯತೀಂದ್ರ ಕೂಡ ಜತೆಗಿದ್ದರು.

LIVE: ಕರ್ನಾಟಕ ವಿಧಾನಸಭಾ ಚುನಾವಣೆ-2018; ಒಟ್ಟು ಶೇ.72.13ರಷ್ಟು ಮತದಾನ

Last updated

100ಕ್ಕೂ ಹೆಚ್ಚು ಜನರಿಗೆ ಉಚಿತ ಸೇವೆ ನೀಡಿದ ಆಟೋ ಚಾಲಕ :

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ನಿವಾಸಿ ಆಟೋ ಚಾಲಕರೊಬ್ಬರು ಬೆಳಗ್ಗೆಯಿಂದ ನೂರಕ್ಕೂ ಹೆಚ್ಚು ಮತದಾರರಿಗೆ ಉಚಿತ ಆಟೋ ಸೇವೆ ಒದಗಿಸುತ್ತಿದ್ದಾರೆ. ಹಿರಿಯರಿಗೆ, ವಿಕಲ ಚೇತನರಿಗೆ ಉಚಿತ ಸೇವೆಯನ್ನು ನೀಡುತ್ತಿದ್ದಾರೆ.

Last updated

"ಯಡಿಯೂರಪ್ಪ ಮಾನಸಿಕವಾಗಿ ಅಸ್ವಸ್ಥರಾಗಿದ್ಧಾರೆ"- ಸಿದ್ಧರಾಮಯ್ಯ:

ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಸಿದ್ಧರಾಮಯ್ಯ, “ ಯುಡಿಯೂರಪ್ಪ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ,” ಎಂದಿದ್ದಾರೆ. ಕಾಂಗ್ರೆಸ್‌ 120 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Last updated

ಮತ ಚಲಾಯಿಸಿದ ಶ್ರೀರಾಮುಲು:

ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಕಣಕ್ಕಿಳಿದಿರುವ ಬಿಜೆಪಿ ನಾಯಕ ಶ್ರೀರಾಮುಲು ಬಳ್ಳಾರಿಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

Last updated

ಬೆಳಗಾವಿಯಲ್ಲಿ 26.60 % ಮತದಾನ:

ಮಧ್ಯಾಹ್ನ 12.20ರ ವೇಳೆಗೆ ಬೆಳಗಾವಿ ಜಿಲ್ಲೆಯಲ್ಲಿ ಶೇಕಡ 26.60ರಷ್ಟು ಮತದಾನ ನಡೆದಿದೆ. ಬೆಂಗಳೂರು ಕೇಂದ್ರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅತಿ ಕಡಿಮೆಯ ಶೇಕಡ 8ರಷ್ಟು ಮತದಾನವಾಗಿದೆ.

Last updated

ಚುನಾವಣಾ ಸಿಬ್ಬಂದಿಗಳಿಗೆ ಇಂದಿರಾ ಕ್ಯಾಂಟೀನ್ ಊಟ:

ಮತದಾನದ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚುನಾವಣಾ ಸಿಬ್ಬಂದಿಗಳಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಗ್ಗೆ ಇಡ್ಲಿ, ವಡೆ ಇತ್ಯಾದಿ ತಿಂಡಿಗಳನ್ನು ನೀಡಿರುವ ಇಂದಿರಾ ಕ್ಯಾಂಟೀನ್ ಮಧ್ಯಾಹ್ನಕ್ಕೆ ಅನ್ನ ಸಾಂಬರ್ ನೀಡಲು ಸಿದ್ಧವಾಗಿದೆ.

Last updated

ತಣ್ಣಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರ:

ತಣ್ಣಗಿರುವ ರಾಜರಾಜೇಶ್ವರಿನಗರ ಚುನಾವಣಾ ಅಕ್ರಮದ ಕಾರಣದಿಂದ ಮತದಾನ ಮುಂದೂಡಿಕೆಯಾಗಿರುವ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಡಾವಣೆಗಳು ಚುನಾವಣಾ ಗದ್ದಲವಿಲ್ಲದೆ ತಣ್ಣಗಿವೆ. ಚುನಾವಣೆ ಮುಂದೂಡಿಕೆಯಾಗಿರುವ ವಿಷಯ ಗೊತ್ತಿಲ್ಲದ ಮತದಾರರು ಮತಕೇಂದ್ರಗಳಿಗೆ ಬಂದು ವಾಪಸ್ ಹೋಗುತ್ತಿದ್ದಾರೆ.

Last updated

ಚಾಮುಂಡೇಶ್ವರಿಯಲ್ಲಿ ಪೌರ ಕಾರ್ಮಿಕರಿಗೆ ಧಮ್ಕಿ:

ನಗರಪಾಲಿಕೆ ಸದಸ್ಯ ಜಗಧೀಶ್‌ ಪೌರ ಕಾರ್ಮಿಕರಿಗೆ ಕಾಂಗ್ರೆಸ್‌ ಪಕ್ಷಕ್ಕೇ ಓಟು ನೀಡಬೇಕು ಎಂದು ಧಮ್ಕಿ ಹಾಕಿರುವುದಾಗಿ ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಕುರಿತು ಚಾಮುಂಡೇಶ್ವರಿ ಕ್ಷೇತ್ರದ ವಸಂತನಗರದಲ್ಲಿರುವ ಮತಗಟ್ಟೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

Last updated

"ಮೂರೂ ಪಕ್ಷಗಳಲ್ಲಿ ಭ್ರಷ್ಟಾಚಾರ":

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳೂ ಕೂಡ ಭ್ರಷ್ಟಾಚಾರ ನಡೆಸಿವೆ ಎಂದು ಹೇಳಿಕೆ ನೀಡಿದ್ದಾರೆ. ಲೋಕಾಯುಕ್ತವನ್ನು ತೆಗೆದ ಸರಕಾರಕ್ಕೆ ಜನರೇ ಉತ್ತರ ಕೊಡಲಿದ್ದಾರೆ ಎಂದು ಸಂತೋಷ್‌ ಹೆಗಡೆ ತಿಳಿಸಿದ್ದಾರೆ.

Last updated

ಕೈಕೊಟ್ಟ ವಿವಿಪ್ಯಾಟ್‌:

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮತಗಟ್ಟೆ ಸಂಖ್ಯೆ 162ಯಲ್ಲಿ ವಿವಿಪ್ಯಾಟ್‌ ಕೈಕೊಟ್ಟಿದೆ. ಒಂದು ಗಂಟೆ ಅವಧಿಯಿಂದ ಮತಗಟ್ಟೆಯಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆಯೂ ಕೂಡ ಇದೇ ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಕೈಕೊಟ್ಟಿತ್ತು. ಮತದಾನ ಮಾಡಲು ಕಾಯುತ್ತಿರುವ ಮತದಾರರು ವಿವಿಪ್ಯಾಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ದೋಷದ ಕಾರಣಕ್ಕಾಗಿ ಚುನಾವಣಾ ಅಧಿಕಾರಿಗಳ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

Last updated

ಮತದಾರನ ಮೇಲೆ ಪೊಲೀಸ್‌ ದೌರ್ಜನ್ಯ :

ಯಾದಗಿರಿಯ ವಡೇಗೆರ ತಾಲೂಕಿನ ಖಾನಾಪುರದಲ್ಲಿ ಮತ ಚಲಾಯಿಸಲು ಬಂದ ವ್ಯಕ್ತಿಯ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮತದಾರ ಗಾಯಗೊಂಡ ನೆಲಕ್ಕುರುಳಿದ್ದಾರೆ. ಪೊಲೀಸರ ವರ್ತನೆಯನ್ನು ಖಂಡಿಸಿರುವ ಗ್ರಾಮಸ್ಥರು ರಸ್ತೆ ತಡೆ ನಡೆಸಿದ್ದಾರೆ.

Last updated

ಮತದಾನದ ಎಫೆಕ್ಟ್‌; ಬಸ್‌ ಇಲ್ಲದೇ ಪರದಾಡುತ್ತಿರುವ ಬೆಂಗಳೂರಿನ ಮಂದಿ :

LIVE: ಕರ್ನಾಟಕ ವಿಧಾನಸಭಾ ಚುನಾವಣೆ-2018; ಒಟ್ಟು ಶೇ.72.13ರಷ್ಟು ಮತದಾನ

Last updated

ಓಟು ಹಾಕಿದ ಯುವಜನರಿಗೆ ಫ್ರೀ ಕಾಫಿ:

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್‌ ಹೋಟೆಲ್‌ ಮತ ಚಲಾಯಿಸಿದ ಯುವ ಮತದಾರರಿಗೆ ಉಚಿತವಾಗಿ ಬಿಸಿ ಬಿಸಿ ಕಾಫಿಯನ್ನು ನೀಡುತ್ತಿದೆ. ಯುವಜನರನ್ನು ಮತದಾನ ಮಾಡಲು ಪ್ರೇರೇಪಿಸುವ ಉದ್ದೇಶದಿಂದ ಉಚಿತವಾಗಿ ಕಾಫಿ ನೀಡಲಾಗುತ್ತಿದೆ ಎಂದು ಹೋಟೆಲ್‌ ಮಾಲೀಕ ಕೃಷ್ಣರಾಜ್‌ ತಿಳಿಸಿದ್ದಾರೆ.

Last updated

ಶೇ.30 ತಲುಪಿದ ಸುಳ್ಯ ಮತದಾನ:

ಬೆಳಗ್ಗೆ 11 ಗಂಟೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಶೇ.30ರಷ್ಟು ಮತದಾನವನ್ನು ಕಂಡಿದೆ. ಸಾಮಾನ್ಯವಾಗಿ ಎಲ್ಲಾ ಚುನಾವಣೆಗಳಲ್ಲೂ ಕೂಡ ಸುಳ್ಯದ ಶೇ.80ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

Last updated

ಚುರುಕಾದ ಮತದಾನ; ಹಾವೇರಿಯಲ್ಲಿ ಶೇ.26ರಷ್ಟು ಮತ ಚಲಾವಣೆ :

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮತದಾನ ಚುರುಕುಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.23ರಷ್ಟು ಮತದಾನ ನಡೆದಿದೆ. ತುಮಕೂರಿನಲ್ಲಿ ಶೇ.19, ಬಾದಾಮಿಯಲ್ಲಿ ಶೇ.18.5, ಹಾವೇರಿಯಲ್ಲಿ ಶೇ.26 ಬೀದರಲ್‌ನಲ್ಲಿ ಶೇ.17, ಧಾರವಾಡದಲ್ಲಿ ಶೇ.14, ಯಾದಗಿರಿಯಲ್ಲಿ ಶೇ.24 ಹಾಗೂ ಮಂಡ್ಯ ಜಿಲ್ಲೆಯಲ್ಲಿ ಶೇ.16ರಷ್ಟು ಮತದಾನ ನಡೆದಿದೆ.

Last updated

ಹಣ ಹಂಚುತ್ತಿರುವ ಕಾಂಗ್ರೆಸ್‌ ಕಾರ್ಯಕರ್ತರು:

ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಅನ್ಸಾರಿ ಬೆಂಬಲಿಗರು ಒಂದು ಓಟಿಗೆ 1000 ರೂಪಾಯಿ ನೀಡುತ್ತೇವೆಂದು ಆಮಿಷ ಒಡ್ಡುತ್ತಿರುವುದಾಗಿ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಲಂಬಾಣಿ ತಾಂಡದಲ್ಲಿ ಹಣ ಹಂಚುತ್ತಿದ್ದರು ಎನ್ನಲಾಗಿದೆ. ಈ ಕುರಿತು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ.

Last updated

ಧಾರವಾಡದಲ್ಲಿ ಮತದಾರರಿಂದ ಪ್ರತಿಭಟನೆ:

ಧಾರವಾಡದ ಕರಡಿ ಗುಡ್ಡದಲ್ಲಿ ಮತದಾರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಮತಗಟ್ಟೆ ಸಂಖ್ಯೆ 58ರಲ್ಲಿದ್ದ ಚುನಾವಣಾ ಮಹಿಳಾ ಸಿಬ್ಬಂದಿಯೊಬ್ಬರು ಕ್ರಮ ಸಂಖ್ಯೆ 3ಕ್ಕೆ ಮತ ನೀಡುವಂತೆ ಒತ್ತಾಯಿಸಿದ ಆರೋಪದ ಮೇಲೆ ಮತದಾರರು ಪ್ರತಿಭಟನೆ ಕೈಗೊಂಡಿದ್ದಾರೆ. ಕ್ರಮ ಸಂಖ್ಯೆ 3 ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿಯವರದ್ದು.

Last updated

ಬೆಳ್ತಂಗಡಿ ತಾಲೂಕಿನಲ್ಲಿ ವಿಶೇಷ ವ್ಯವಸ್ಥೆಗಳು:

ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ಮತಕೇಂದ್ರಗಳಿಗೆ ಬಂದು ಮತದಾನ ಮಾಡುವುದಕ್ಕೆ ಅನುಕೂಲವಾಗಲು ಚುನಾವಣಾ ಆಯೋಗ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂಡಬೆಟ್ಟು ಗ್ರಾಮದಲ್ಲಿ ಈ ವ್ಯವಸ್ಥೆಯನ್ನು ನೀಡಲಾಗಿದೆ. ಜಿಲ್ಲೆಯ ಹಲವಾರು ಮತಗಟ್ಟೆಗಳ ಬಳಿ 410 ವೀಲ್‌ ಚೇರ್‌ಗಳನ್ನು ತಂದಿಡಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳು ತಮ್ಮ ಮತ ಚಲಾಯಿಸುತ್ತಿದ್ದಾರೆ.

Last updated

ಶೇ.24ನ್ನು ತಲುಪಿದ ಮತದಾನ:

ರಾಜ್ಯದ ಚುನಾವಣಾ ಪ್ರಚಾರ ಎಷ್ಟು ಬಿರುಸಾಗಿತ್ತೋ ಅಷ್ಟೇ ಬಿರುಸನ್ನು ಮತದಾನವೂ ಪಡೆದುಕೊಂಡಿದೆ. ಬೆಳಗ್ಗೆ 11 ಗಂಟೆಯ ವೇಳೆ ರಾಜ್ಯದ ಒಟ್ಟು ಮತದಾನ ಶೇ.24ನ್ನು ತಲುಪಿದೆ.

Last updated

ವಿಕಲ ಚೇತನರಿಂದ ಮತದಾನ:

ಬಾದಾಮಿ ಕ್ಷೇತ್ರದ ಮತಗಟ್ಟೆಯಲ್ಲಿ ವಿಕಲ ಚೇತನರೊಬ್ಬರು ಮತದಾನ ಮಾಡಿದ್ದಾರೆ.

Last updated

ಬೆಂಗಳೂರಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ:

ಬೆಂಗಳೂರಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಸಂಭವಿಸಿದ್ದು, ನಾಲ್ಕು ಜನ ಗಾಯಗೊಂಡಿದ್ದಾರೆ. ವಿಯಜನಗರದಲ್ಲಿನ ಹಂಪಿ ನಗರದ ಈಜುಕೊಳದ ಬಳಿ ಈ ಘಟನೆ ನಡೆದಿದ್ದು, ಬಿಜೆಪಿ ಕಾರ್ಪೊರೇಟರ್‌ ಆನಂದ್‌ ಬೆಂಬಲಿಗರಿಂದ ಈ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Last updated

ಕೆಲವು ಜಿಲ್ಲೆಗಳಲ್ಲಿ ಶೇ.16ನ್ನು ತಲುಪಿದ ಮತದಾನ:

ರಾಜ್ಯಾದ್ಯಂತ ಇದುವರೆಗೂ ನಡೆದಿರುವ ಮತದಾನ ಶೇ.10ನ್ನು ದಾಟಿದೆ. ಉತ್ತರ ಕನ್ನಡ ಜಿಲ್ಲೆಯ ಶೇ.12ರಷ್ಟು ಮತದಾನ ಮಾಡಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶೆ.16ರಷ್ಟು ಮತದಾನವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೂ ಶೇ.8ರಷ್ಟು ಮಾತ್ರ ಮತದಾನವಾಗಿದೆ.

Last updated

ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಪಕ್ಷಗಳ ಪಟ್ಟಿ ಇಲ್ಲಿದೆ:

 • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(INC)
 • ಭಾರತೀಯ ಜನತಾ ಪಕ್ಷ(BJP)
 • ಜಾತ್ಯಾತೀತ ಜನತಾ ದಳ(JDS)
 • ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(CPI)
 • ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ವಾದಿ)(CPIM)
 • ರಾಷ್ಟ್ರೀಯವಾದಿ ಕಾಂಗ್ರೆಸ್‌(NCP)
 • ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ(KPJP)
 • ಭಾರತೀಯ ಜನಶಕ್ತಿ ಕಾಂಗ್ರೆಸ್(BJC)
 • ಕರ್ನಾಟಕ ರಾಜ್ಯ ರೈತ ಸಂಘ(KRRS)
 • ಆಮ್‌ ಆದ್ಮಿ ಪಕ್ಷ(AAP)
 • ಆಲ್‌ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ(AIMEP)
 • ಸಂಯುಕ್ತ ಜನತಾದಳ(JDU)
 • ಸ್ವರಾಜ್‌ ಇಂಡಿಯಾ ಪಕ್ಷ(SR)
 • ಭಾರತೀಯ ಯೂನಿಯನ್‌ ಮುಸ್ಲಿಂ ಲೀಗ್‌(IUML)
 • ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ADMK)

ಇವಲ್ಲದೆ ಇನ್ನೂ ಕೆಲವು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಪಕ್ಷಗಳಲ್ಲದೇ ಹಲವಾರು ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Last updated

ಮನೆ ಬಾಗಿಲಿಗೆ ಹಣದ ಕವರ್:

ಮಂಡ್ಯ ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ಹಣದ ಆಮಿಷ ಒಡ್ಡಲಾಗುತ್ತಿದೆ. ದುಡ್ಡು ಪಡೆಯದವರ ಮನೆ ಬಾಗಿಲ ಮುಂದೆ ಮಂಜುನಾಥ ಸ್ವಾಮಿಯ ಫೋಟೊ ಇರುವ ಕವರ್‌ಗಳಲ್ಲಿ ದುಡ್ಡಿಟ್ಟು ಬರಲಾಗುತ್ತಿದೆ.

Last updated

ಮತದಾನದ ವೇಳೆ ವೃದ್ಧ ಸಾವು:

ಬೆಳ್ತಂಗಡಿ ತಾಲೂಕಿನ ಆಂಡಿಂಜೆ ಗ್ರಾಮದ ವಯೋವೃದ್ಧ ಅಣ್ಣಿ ಆಚಾರ್ಯ ಮತದಾನ ಮಾಡಲೆಂದು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

Last updated

ಯಾವ ಬಟನ್‌ ಒತ್ತಿದರೂ ಕಮಲಕ್ಕೆ ಓಟು:

ಇಂತಹದ್ದೊಂದು ಆರೋಪವನ್ನು ಕಾಂಗ್ರೆಸ್‌ ವಕ್ತಾರ ಬ್ರಿಜೇಶ್‌ ಕಾಳಪ್ಪ ಮಾಡಿದ್ದಾರೆ. ತಮ್ಮ ಟ್ವಿಟ್ಟರ್‌ ಖಾತೆಯ ಮೂಲಕ ಈ ಮಾಹಿತಿಯನ್ನು ಹೊರಹಾಕಿರುವ ಬ್ರಿಜೇಶ್ ಕಾಳಪ್ಪ, ಆರ್‌ಎಂವಿ 2ನೇ ಹಂತದ 2ನೇ ಮತಗಟ್ಟೆಯಲ್ಲಿ ಈ ದೋಷ ಕಂಡು ಬಂದಿದೆ ಎಂದಿದ್ದಾರೆ.

Last updated

ಮತ ಚಲಾಯಿಸಿದ ಮಠಾದೀಶ:

ಹುಬ್ಬಳ್ಳಿಯ ಮೂರು ಸಾವಿರ ಮಠದ ಫೀಠಾಧಿಪತಿ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ತಮ್ಮ ಮತ ಚಲಾಯಿಸಿ, ಕರ್ತವ್ಯ ನಿರ್ವಹಿಸಿದ್ದಾರೆ.

Last updated

ಮತ ಚಲಾಯಿಸಿದ ಕ್ರಿಕೆಟಿಗ ಅನಿಲ್ ಕುಂಬ್ಳೆ:

ಕ್ರಿಕೆಟಿಗ ಅನಿಲ್‌ ಕುಂಬ್ಳೆ ಬೆಂಗಳೂರಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದು, ಟ್ವಿಟ್ಟರ್‌ನ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

LIVE: ಕರ್ನಾಟಕ ವಿಧಾನಸಭಾ ಚುನಾವಣೆ-2018; ಒಟ್ಟು ಶೇ.72.13ರಷ್ಟು ಮತದಾನ

Last updated

ಗಿಡ ನೆಟ್ಟು ಮತದಾನದ ನೆನಪು ಉಳಿಸಿಕೊಂಡ ಮತದಾರ:

ಮುನವ್ವರ್ ಮುನ್ನ ಜೋಗಿಬೆಟ್ಟು ಎಂಬ ಮತದಾರರೊಬ್ಬರು ತಮ್ಮ ಮತಚಲಾಯಿಸಿದ್ದಾರೆ. ಮತ ಚಲಾಯಿಸಿದ ನೆನಪಿಗಾಗಿ ಎರಡು ಗಿಡಗಳನ್ನು ನೆಟ್ಟು, ಫೇಸ್‌ಬುಕ್‌ ಖಾತೆಯಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

Last updated

ಹಿರಿಯ ನಟಿ ಲೀಲಾವತಿಯಿಂದ ಮತದಾನ:

ಕನ್ನಡ ಚಿತ್ರ ರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್‌ ಬೆಂಗಳೂರಿನ ನೆಲಮಂಗಲದ ಮತಗಟ್ಟೆಯಲ್ಲಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ.

ಚಿತ್ರ: ಟೈಮ್ಸ್ ಆಫ್ ಇಂಡಿಯಾ
ಚಿತ್ರ: ಟೈಮ್ಸ್ ಆಫ್ ಇಂಡಿಯಾ

Last updated

ಶೇ.10.51ರಷ್ಟು ಮತದಾನ:

ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದೆ. ಬೆಳಗ್ಗೆ 9.15ರವರೆಗೆ ಶೇ.10.51ರಷ್ಟು ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. 222 ಕ್ಷೇತ್ರಗಳಲ್ಲೂ ಕೂಡ ಮತದಾನದ ಪ್ರಕ್ರಿಯೆ ಚುರುಕುಗೊಂಡಿದೆ.

Last updated

'ಸಖಿ' ಮತಗಟ್ಟೆಗಳು:

ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಮಹಿಳೆಯರಿಗೆಂದು ಪ್ರತ್ಯೇಕ ಮತಗಟ್ಟೆಗಳನ್ನು ತೆರೆಯಲಾಗಿದೆ. ಪಿಂಕ್‌ ಬಣ್ಣದ ಈ ಮತಗಟ್ಟೆಗಳಿಗೆ ‘ಸಖಿ’ ಎಂದು ಹೆಸರಿಟ್ಟಿದ್ದು, ಗ್ರಾಮೀಣ ಭಾಗಗಳಲ್ಲಿ ಈ ಮತಗಟ್ಟೆಗಳು ಕಾರ್ಯ ನಿರ್ವಹಿಸುತ್ತಿವೆ. ನಗರ ಭಾಗದಲ್ಲಿ ಪ್ರತಿ 5 ಮತಗಟ್ಟೆಗಳಲ್ಲಿ ಒಮದು ಮತಗಟ್ಟೆ ಮಹಿಳೆಯರಿಗೆ ಸೀಮಿತವಾಗಿದ್ದು, ಒಟ್ಟು 600 ‘ಸಖಿ’ಮತಗಟ್ಟೆಗಳು ಕಾರ್ಯ ನಿರ್ವಹಿಸುತ್ತಿವೆ.

LIVE: ಕರ್ನಾಟಕ ವಿಧಾನಸಭಾ ಚುನಾವಣೆ-2018; ಒಟ್ಟು ಶೇ.72.13ರಷ್ಟು ಮತದಾನ

Last updated

ಮತ ಚಲಾಯಿಸಿದ ಮಾಜಿ ಪ್ರಧಾನಿ:

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ.

Last updated

2 ಗಂಟೆ ಕಳೆದರೂ ಆರಂಭವಾಗದ ಮತದಾನ:

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬುದ್ನಿ ಗ್ರಾಮದಲ್ಲಿ 9 ಗಂಟೆಯಾದರೂ ಇನ್ನು ಮತದಾನ ಆರಂಭವಾಗಿಲ್ಲ. ಮತಯಂತ್ರ ಕೈಕೊಟ್ಟಿದ್ದು, ಮಾಹಿತಿ ತಿಳಿಸಿದರೂ ಕೂಡ ಅಧಿಕಾರಿಗಳ ಸ್ಥಕ್ಕೆ ಆಗಮಿಸಿಲ್ಲ. ಕಾದು ನಿಂತಿರುವ ಮತದಾರರು ಈಗ ಆಕ್ರೋಶ ವ್ಯಕ್ತ ಪಡಿಸಲು ಆರಂಭಿಸಿದ್ದಾರೆ.

Last updated

ಶ್ರೀಮಂತ ಅಭ್ಯರ್ಥಿಗಳು:

ಏಡಿಆರ್‌ ಸಂಸ್ಥೆಯ ವರದಿ ಹೇಳುವಂತೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಮೊದಲ 5 ಶ್ರೀಮಂತ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದವರು. ಗೋವಿಂದರಾಜ ನಗರದ ಅಭ್ಯರ್ಥಿ ಪ್ರಿಯಾಕೃಷ್ಣ 910 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು ಮೊದಲನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನವನ್ನು ಹೊಸಕೋಟೆಯ ಕಾಂಗ್ರೆಸ್ ಅಭ್ಯರ್ಥಿ ನಾಗರಾಜು ತುಂಬಿದ್ದು, 470 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇವರ ಬಳಿಯಿದೆ.

Last updated

ದರ್ಶನ್ ಪುಟ್ಟಣ್ಣಯ್ಯರಿಂದ ಮತದಾನ:

ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದರ್ಶನ್‌ ಪುಟ್ಟಣ್ಣಯ್ಯ ತಮ್ಮ ಮತವನ್ನು ಚಲಾಯಿಸಿದ್ದಾರೆ

LIVE: ಕರ್ನಾಟಕ ವಿಧಾನಸಭಾ ಚುನಾವಣೆ-2018; ಒಟ್ಟು ಶೇ.72.13ರಷ್ಟು ಮತದಾನ

ಚಿತ್ರ: ಫರ್ಸ್ಟ್‌ ಪೋಸ್ಟ್‌

Last updated

222 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ:

ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಬೆಂಗಳೂರಿನ ಜಯನಗರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ದಿನಾಂಕವನ್ನು ಮುಂದೂಡಲಾಗಿದೆ.

ಜಯನಗರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್‌ ಕುಮಾರ್‌ ಚುನಾವಣಾ ಪ್ರಚಾರದ ವೇಳೆ ಮೃತರಾಗಿದ್ದರು. ಆದ ಕಾರಣ ಜಯನಗರದ ಚುನಾವಣೆಯನ್ನು ಮುಂದೂಡಲಾಗಿದೆ.

ರಾಜರಾಜೇಶ್ವರಿನಗರದಲ್ಲಿ ಸರಿ ಸುಮಾರು 10,000ದಷ್ಟು ನಕಲಿ ವೋಟರ್‌ ಕಾರ್ಟ್‌ಗಳು ಪತ್ತೆಯಾಗಿದ್ದ ಕಾರಣ ಅಲ್ಲಿಯೂ ಕೂಡ ಚುನಾವಣೆ ಮುಂದೂಡಲ್ಪಟ್ಟಿದೆ. ಇನ್ನುಳಿದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕೂಡ ಮತದಾನ ಬಿರುಸಿನಿಂದ ಸಾಗುತ್ತಿದೆ.

Last updated

ಮೋದಿ ಮನವಿ:

ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ ಮೂಲಕ ಕರ್ನಾಟಕದ ಮತದಾರರಿಗೆ ಮತದಾನ ಮಾಡುವಂತೆ ಕೋರಿದ್ದಾರೆ.

Last updated

ಮತದಾನಕ್ಕೆ ತೆರಳುವ ಮುಂಚೆ ಗೋಪೂಜೆ ನೆರವೇರಿಸಿದ ಶ್ರೀರಾಮುಲು

Last updated

ಮತದಾನ ಹೆಚ್ಚಿಸಲು ಫೇಸ್‍ಬುಕ್ ಸಹಯೋಗ

ಕರ್ನಾಟಕದ ಸಾರ್ವತ್ರಿಕ ಚುನಾವಣೆಗಳ ಕುರಿತಂತೆ ಹೆಚ್ಚು ಸಕ್ರಿಯತೆ ಮತ್ತು ಭಾಗವಹಿಸುವಿಕೆಯ ಸಹಯೋಗವನ್ನು ಫೇಸ್‍ಬುಕ್ ಮತ್ತು ಮುಖ್ಯ ಚುನಾವಣಾಧಿಕಾರಿಗಳು ಶುಕ್ರವಾರ ಪ್ರಕಟಿಸಿದ್ದಾರೆ. ಈ ಸಹಯೋಗದ ಭಾಗವಾಗಿ ಫೇಸ್‍ಬುಕ್ ಮೇ 12ರಂದು ಜನರಿಗೆ ನ್ಯೂಸ್‍ಫೀಡ್‍ನಲ್ಲಿ ಜ್ಞಾಪನ(ರಿಮೈಂಡರ್)ಗಳನ್ನು ಕಳುಹಿಸುವ ಮೂಲಕ ಮತದಾನ ಉತ್ತೇಜಿಸುತ್ತದೆ. ಈ ಮತದಾನದ ದಿನ 18 ಮತ್ತು ಮೇಲ್ಪಟ್ಟ ವಯಸ್ಸಿನ ಬಳಕೆದಾರರ ನ್ಯೂಸ್‍ಫೀಡ್‍ನ ಮೇಲ್ಭಾಗದಲ್ಲಿ ರಿಮೈಂಡರ್ ಕಾಣಿಸಿಕೊಳ್ಳುತ್ತದೆ. ಈ ರಿಮೈಂಡರ್ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್ (http://kgis.ksrsac.in/election) ಸಂಪರ್ಕ ಹೊಂದಿದ್ದು ಅದರಲ್ಲಿ ಜನರು ತಮ್ಮ ಮತಗಟ್ಟೆಯ ಹಾಗೂ ಇತರೆ ಮತಗಟ್ಟೆಗಳ ವಿವರಗಳನ್ನು ಕಾಣಬಹುದು.

ಈ ರಿಮೈಂಡರ್ ಇಂಗ್ಲೆಂಡ್‍ನ ಸ್ಥಳೀಯ ಚುನಾವಣೆಗಳಲ್ಲಿ ಇತ್ತೀಚೆಗೆ ಬಳಕೆಯಾದ ಮಾದರಿಯನ್ನು ಅನುಸರಿಸುತ್ತಿದ್ದು ಇದು ಕರ್ನಾಟಕದ ವಿಧಾನಸಭಾ ಚುನಾವಣೆಗಳಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಜನರನ್ನು ಮತದಾನಕ್ಕೆ ಉತ್ತೇಜಿಸುವ ಮುಖ್ಯ ಚುನಾವಣಾಧಿಕಾರಿಗಳ ಅಭಿಯಾನದ ಜೊತೆ ಜೊತೆಯಲ್ಲಿಯೇ ನಡೆಯುತ್ತದೆ. ಈ ಕುರಿತು ಮುಖ್ಯ ಚುನಾವಣಾಧಿಕಾರಿ ಶ್ರೀ ಸಂಜೀವ್ ಕುಮಾರ್, `ಈ ಉಪಕ್ರಮ ನಮಗೆ ಹೆಚ್ಚಿನ ಮತದಾರರು ಹೊರಬಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಲು ಉತ್ತೇಜಿಸಲು ನಮಗೆ ನೆರವಾಗುತ್ತದೆ' ಎಂದರು.

Last updated

ಕೆಲಸ ನಿರ್ವಹಿಸದ ಮತ ಯಂತ್ರಗಳು;

ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈಕೊಟ್ಟಿದ್ದರೆ ಇನ್ನೂ ಕೆಲವೆಡೆ ವಿವಿಪ್ಯಾಡ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಾದು ಕಾದು ಸಾಕಾದ ಮತದಾರರು ಹಿಂತಿರುಗುತ್ತಿದ್ದಾರೆ. ಮತದಾನ ಮಾಡದೇ ತೆರಳುತ್ತಿರುವ ಮತದಾರರನ್ನು ನಿಲ್ಲಿಸಲು ಅಧಿಕಾರಿಗಳು ಹರ ಸಾಹಸ ಪಡುತ್ತಿದ್ದಾರೆ.

Last updated

4.96 ಕೋಟಿ ಮತದಾರರು :

ರಾಜ್ಯದೆಲ್ಲೆಡೆ ಇಂದು 4.96 ಕೋಟಿ ಮತದಾರರು ತಮ್ಮ ಮತಗಳನ್ನು ಚಲಾಯಿಸಲಿದ್ದಾರೆ. ಈ ಮತದಾರರಲ್ಲಿ ಸರಿಸುಮಾರು 2.52 ಕೋಟಿ ಮತದಾರರು ಪುರುಷರು ಮತ್ತು 2.44 ಕೋಟಿ ಮತದಾರರು ಮಹಿಳೆಯರು. 4552 ಮತದಾರರು ತೃತೀಯ ಲಿಂಗಿಗಳಾಗಿದ್ದಾರೆ. 2600ರಷ್ಟು ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ಬರೆಯಲಿದ್ದಾರೆ.

Last updated

58,000 ಮತಗಟ್ಟೆಗಳು:

ರಾಜ್ಯಾದ್ಯಂತ ಒಟ್ಟು 58,000 ಸಾವಿರ ಮತಗಟ್ಟೆಗಳು ತೆರೆದಿದ್ದು, 3,00,000 ಸಿಬ್ಬಂದಿಗಳು ಕಾರ್ಯನಿರತರಾಗಿದ್ದಾರೆ. ದೇಶದ ಹಿರಿಯ ಐಎಎಸ್ ಹಾಗೂ ಐಪಿಎಸ್‌ ಅಧಿಕಾರಿಗಳ ಕಣ್ಗಾವಲಿನಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

Last updated

ಆರ್.ಆರ್.ನಗರದ ಚುನಾವಣೆ ಕ್ಯಾನ್ಸಲ್:

ಶುಕ್ರವಾರ ರಾತ್ರಿಯೇ ರಾಜರಾಜೇಶ್ವರಿ ನಗರದ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ ವಿಷಯ ತಿಳಿಯದ ಮತದಾರರು ಮತಗಟ್ಟೆಗಳ ಬಳಿಗೆ ಬಂದಿದ್ದಾರೆ. ಮುಂದೂಡಿರುವ ವಿಷಯ ತಿಳಿದು ವಾಪಸ್‌ ತೆರಳುತ್ತಿದ್ದಾರೆ.

Also read: ಆರ್‌ಆರ್‌ ನಗರ ಮತದಾನ ಮೇ 28ಕ್ಕೆ ಮುಂದೂಡಿಕೆ; ಬದಲಾಗಲಿದೆಯೇ ಕ್ಷೇತ್ರದ ಚಿತ್ರಣ!

Last updated

ಹೆಬ್ಬಾಳದಲ್ಲಿ ಮತದಾರನ ಮೇಲೆ ಆವಾಜ್‌ ಹಾಕಿದ ಬಿಜೆಪಿ ಕಾರ್ಯಕರ್ತ, ಅಡ್ಡಿಪಡಿಸಿದ ಕಾರ್ಯಕರ್ತನ ಬಂಧನ.

Last updated

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ರಾಜ್ಯದುದ್ದಗಲಕ್ಕೂ ಆರಂಭಗೊಂಡಿದೆ. ಪ್ರತಿಷ್ಟೆಯ ಕಣವಾಗಿರುವ ಕರ್ನಾಟಕದಲ್ಲಿ ಕಾಂಗ್ರೆಸ್‌ಅನ್ನು ಇಲ್ಲವಾಗಿಸುವ ಪ್ರಯತ್ನದಲ್ಲಿ ಬಿಜೆಪಿ ನಿರತವಾಗಿದ್ದರೆ, ಮತ್ತೆ 5 ವರ್ಷಗಳ ಅಧಿಕಾರ ಹಿಡಿಯುವ ಭರವಸೆಯಲ್ಲಿ ಕಾಂಗ್ರೆಸ್‌ ಪಕ್ಷವಿದೆ. ತಾವೇ ಗೆಲ್ಲುತ್ತೇವೆ ಎಂಬ ಭರವಸೆಯಲ್ಲಿ ಜೆಡಿಎಸ್‌ ಕೂಡ ಹಿಂದೆ ಬಿದ್ದಿಲ್ಲ. ಈ ಮೂರು ಪಕ್ಷಗಳು ಮತ್ತು ಇತರರ ಪೈಕಿ ಮತದಾರ ತನ್ನ ನಾಯಕ ಯಾರಾಗಬೇಕು ಎಂದು ನಿರ್ಧರಿಸಲಿದ್ದಾನೆ. ಈ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಲ್ಲಿನ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ವಿವಿಧ ರಾಜಕೀಯ ನಾಯಕರು, ಪ್ರಮುಖ ವ್ಯಕ್ತಿಗಳಿಂದ ಮತದಾನ ಪ್ರಾರಂಭಗೊಂಡಿದೆ.

ಚಿಕ್ಕೋಡಿ ಸುತ್ತಮುತ್ತದ ಪ್ರದೇಶಗಳಲ್ಲಿ ಜಿಟಿಜಿಟಿ ಮಳೆ ಪ್ರಾರಂಭವಾಗಿದೆ. ಮತದಾನಕ್ಕೂ ಮುಂಚೆಯೇ ಆಗಮಿಸಿರುವ ಮಳೆರಾಯ ಮತದಾನ ಪ್ರಕ್ರಿಯೆಗೆ ಅಡ್ಡಿ ಪಡಿಸುತ್ತಾನೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.

ಶಿಕಾರಿಪುರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿರುವ ಬಿಜೆಪಿ ಮಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಮತದಾನ ಕೇಂದ್ರಕ್ಕೆ ತರಳಿದ್ದಾರೆ.

ರಾಜಾಜಿನಗರದ ಮತಗಟ್ಟೆಯಲ್ಲಿ ವಿದ್ಯುತ್‌ ಕೈಕೊಟ್ಟಿದೆ. ಕ್ಯಾಂಡಲ್‌ ಬೆಳಕಿನಲ್ಲಿಯೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಕೆ.ಆರ್.ಪುರಂನ ಮತಗಟ್ಟೆಯಲ್ಲಿ ಮತದಾನ ಮಾಡಿದ ಬೈರತಿ ಬಸವರಾಜ್.

Last updated