‘ಕೆಎಟಿ’ಯಿಂದ 'ಕೆಪಿಎಸ್‌ಸಿ' ನೇಮಕಾತಿ ರದ್ದು ಆದೇಶ ವಜಾ; 362 ಜನ ಅಭ್ಯರ್ಥಿಗಳಿಗೆ ಎರಡು ತಿಂಗಳಲ್ಲೇ ಉದ್ಯೋಗ!
KPSC NEWS

‘ಕೆಎಟಿ’ಯಿಂದ 'ಕೆಪಿಎಸ್‌ಸಿ' ನೇಮಕಾತಿ ರದ್ದು ಆದೇಶ ವಜಾ; 362 ಜನ ಅಭ್ಯರ್ಥಿಗಳಿಗೆ ಎರಡು ತಿಂಗಳಲ್ಲೇ ಉದ್ಯೋಗ!

362 ಗೆಜೆಟೆಡ್‌ ಪ್ರೊಬೇಷ­ನರಿ ಹುದ್ದೆಗಳ ಭರ್ತಿಗಾಗಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರಾಜ್ಯ ಸರ್ಕಾರ 2014ರಲ್ಲಿ ರದ್ದುಗಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಇದೀಗ ವಜಾಗೊಳಿಸಿದ್ದು, 362 ಉದ್ಯೋಗಾರ್ಥಿಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸಿದ ಗೆಜೆಟೆಡ್‌ ಪ್ರೊಬೇಷ­ನರಿ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ 2011ರಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡು­ವಂತೆ ಸರಕಾರ ಹೊರಡಿಸಿದ್ದ 4 ಅಧಿಸೂಚನೆಗಳನ್ನೂ 2014ರಲ್ಲಿ ಸರ್ಕಾರವೇ ಹಿಂಪಡೆದಿತ್ತು.

ಸರಕಾರದ ನಿರ್ಧಾರದ ಈ ನಿರ್ಧಾರದ ವಿರುದ್ಧ ಅಭ್ಯರ್ಥಿಗಳು ಭಾರಿ ಪ್ರತಿಭಟನೆ ನಡೆಸಿದ್ದರು. “ಯಾರೋ ಕೆಲವರು ಮಾಡಿದ ತಪ್ಪಿಗಾಗಿ ಸರ್ಕಾರ ಪೂರ್ತಿ ಅಧಿಸೂಚನೆಯನ್ನು ರದ್ದು ಮಾಡಿ ನಮಗೆ ಅನ್ಯಾಯ ಮಾಡಿದೆ,” ಎಂದು ಅಭ್ಯರ್ಥಿಗಳು ತೀವ್ರ ಹೋರಾಟವನ್ನೇ ಮಾಡಿದ್ದರು. ಮಾತ್ರವಲ್ಲ ಉದ್ಯೋಗಾರ್ಥಿಗಳು ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ‘ಕೆಎಟಿ’ ಮೊರೆ ಹೋಗಿದ್ದರು.

ಇದೀಗ ಉದ್ಯೋಗಾರ್ಥಿಗಳ ಅರ್ಜಿ ಪುರಸ್ಕರಿಸಿದ ಕೆಎಟಿ, 2014ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ವಜಾ ಮಾಡಿದೆ. ಅಷ್ಟೇ ಅಲ್ಲದೆ 362 ಉದ್ಯೋಗಾರ್ಥಿಗಳನ್ನು 2 ತಿಂಗಳಲ್ಲಿಯೇ ನೇಮಕಾತಿ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.