samachara
www.samachara.com
FDA ಮರುಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ವಿಚಾರ: ಆಕ್ರೋಶ, ಅಭಿವ್ಯಕ್ತಿ ಹಾಗೂ ಭ್ರಮನಿರಸನ!
KPSC NEWS

FDA ಮರುಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ವಿಚಾರ: ಆಕ್ರೋಶ, ಅಭಿವ್ಯಕ್ತಿ ಹಾಗೂ ಭ್ರಮನಿರಸನ!

ಎಫ್ಡಿಎ

ಮರುಪರೀಕ್ಷೆಗೆ ಆಗ್ರಹಿಸಿ ಆರಂಭಗೊಂಡಿದ್ದ ಪ್ರತಿಭಟನೆ ತಾರ್ಕಿಕ ಅಂತ್ಯಕ್ಕೆ ಮುನ್ನವೇ ಭ್ರಮನಿರಸನವನ್ನು ಹುಟ್ಟು ಹಾಕಿದೆ.

ಸಹಜ ಆಕ್ರೋಶದ ಅಭಿವ್ಯಕ್ತಿಯ ರೂಪವಾಗಿ ಸಾಮಾಜಿಕ ಜಾಲತಾಣದಲ್ಲಿ ಮೊಳಕೆಯೊಡೆದಿದ್ದ ಪ್ರತಿಭಟನೆ ಮೂರು ಹಂತಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಕಾವನ್ನು ಕಾಯ್ದುಕೊಂಡಿತ್ತು. ಮೊದಲು 'ಕೆಪಿಎಸ್ಸಿ ಚಲೋ' ಹೆಸರಿನಲ್ಲಿ ಆರಂಭವಾದ ಪ್ರತಿಭಟನೆ, ನಂತರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನಕ್ಕೆ ಕಾಲಿಟ್ಟಿತ್ತು. ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಜೂ. 9ರಂದು ನಡೆಸಲು ಕೆಲವು ಅಭ್ಯರ್ಥಿಗಳು ಮುಂದಾಗಿದ್ದರು ಕೂಡ. ಆದರೆ, ಪ್ರತಿಭಟನೆಗೆ ಒಂದು ದಿನ ಅನುಮತಿ ನೀಡಿದ್ದ ಪೊಲೀಸರು, ಬಲವಂತದಿಂದ ಪ್ರತಿಭಟನಾಕಾರರನ್ನು ಸ್ವಾತಂತ್ರ್ಯ ಉದ್ಯಾನವನದಿಂದ ಹೊರಹಾಕಿದ್ದರು. ನಂತರ ಈ ಎರಡು ದಿನಗಳ ಅಂತರದಲ್ಲಿ ಎಫ್ಡಿಎ ಮರು ಪರೀಕ್ಷೆ ಬೇಡಿಕೆ, ಕೆಪಿಎಸ್ಸಿ ಅವ್ಯವಹಾರಗಳು, ಉದ್ಯೋಗದ ಕನಸು, ಪ್ರತಿಭಟನೆಯ ಭವಿಷ್ಯ ಹೀಗೆ ನಾನಾ ಆಯಾಮಗಳನ್ನು ಇಟ್ಟುಕೊಂಡು 'ಸಮಾಚಾರ' ಆಯೋಜಕರು, ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಹಾಗೂ ಅಭ್ಯರ್ಥಿಗಳ ಜತೆ ಅಭಿಪ್ರಾಯವನ್ನು ಸಂಗ್ರಹಿಸುವ ಪ್ರಯತ್ನವನ್ನು ನಡೆಸಿತು. ಈ ಸಮಯದಲ್ಲಿ ಕಂಡುಬಂದ ಕೆಪಿಎಸ್ಸಿ, ಭವಿಷ್ಯದ ಸರಕಾರಿ ಉದ್ಯೋಗಗಳು ಹಾಗೂ ಆಡಳಿತ ವರ್ಗದ ಬಗ್ಗೆ ಯುವ ಜನತೆ ತಳೆಯುತ್ತಿರುವ ನಿಲುವುಗಳ ಪ್ರತಿಬಿಂಬಗಳನ್ನು ಈ ವರದಿಯಲ್ಲಿ ಮುಂದಿಡಲಾಗುತ್ತಿದೆ.

ನಮ್ಮ ಪ್ರಯತ್ನ ಅಷ್ಟೆ:

"ನೋಡಿ, ನಾವು ನಮ್ಮ ಪ್ರಯತ್ನವನ್ನು ಮಾಡಿದ್ದೇವೆ. ಮುಂದೆ ಏನು ಎಂದು ಸದ್ಯಕ್ಕೆ ತೋಚುತ್ತಿಲ್ಲ. ನಾನು ಸರಕಾರಿ ಉದ್ಯೋಗ ಕನಸು ಬಿಟ್ಟು ಖಾಸಗಿ ಕೆಲಸಕ್ಕೆ ಸೇರಿಕೊಳ್ಳಬೇಕು ಅಂತಿದ್ದೇನೆ. ಎಫ್ಡಿಎ ಪರೀಕ್ಷೆ ಬರೆಯಲು ಐದಾರು ತಿಂಗಳು ಸಿದ್ಧತೆ ಮಾಡಿಕೊಳ್ಳಲು ಸಮಯ ಮೀಸಲಿಟ್ಟಿದ್ದೆ. ಈಗ ಎಲ್ಲವೂ ವ್ಯರ್ಥವಾಗಿದೆ,'' ಎಂದರು ಸಿಹಿಮೊಗೆ ಶಂಕರ್.

ಎಫ್ಡಿಎ ಮರುಪರೀಕ್ಷೆಗೆ ಆಗ್ರಹಗಳು ಕೇಳಿಬಂದಾಗ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶಂಕರ್ ಕ್ರೀಯಾಶೀಲವಾಗಿ ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಮಾಡಿದರು. 'ಸಮಾಚಾರ'ದಲ್ಲಿ ಅವರು ಎಫ್ಡಿಎ ಆಯ್ಕೆ ಪಟ್ಟಿ ಗೊಂದಲಗಳು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಅವರು ಬರೆದಿದ್ದ ಲೇಖನ, ಮುಂದಿನ ಬೆಳವಣಿಗೆಗಳಿಗೆ ಮುನ್ನುಡಿ ಬರೆದಿತ್ತು. ಇದೀಗ, ಶಂಕರ್ ತಮ್ಮ ಮಿತಿಯ ಒಳಗೆ ಸಾಧ್ಯವಿರುವುದನ್ನೆಲ್ಲಾ ಮಾಡಿ ಆಗಿದೆ. "ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಮನವಿ ಕೊಟ್ಟು ಬಂದಾಗಿದೆ. ಇನ್ನು ಯಾರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಹೇಳಿ,'' ಎನ್ನುತ್ತಾರೆ.

ಸ್ವಾತಂತ್ರ ಉದ್ಯಾನವನದಲ್ಲಿ ನಡೆದ ಪ್ರತಿಭಟನೆ, ಜೂನ್ 9ರಂದು ಪೊಲೀಸರು ಮರುದಿನ ಪ್ರತಿಭಟನೆಗೆ ಅವಕಾಶ ನೀಡದಿರುವುದರ ಕುರಿತು ಅವರಿಗೆ ಬೇಸರವಿದೆ. "ನಾವು ಪ್ರತಿಭಟನೆ ಬಿಟ್ಟು ಇನ್ನೇನು ಮಾಡಲು ಸಾಧ್ಯ. ಕಾನೂನು ಹೋರಾಟಕ್ಕೆ ದುಬಾರಿ ಶುಲ್ಕವನ್ನು ಕೇಳಿದರು. ಅಷ್ಟು ಹಣ ನಮ್ಮ ಬಳಿ ಇರಲಿಲ್ಲ. ಅಭ್ಯರ್ಥಿಗಳ ಬಳಿ ಕೇಳೋಣ ಅಂದರೆ, ಎಷ್ಟೋ ಜನರಿಗೆ ಬಸ್ ಚಾರ್ಜಿಗೂ ದುಡ್ಡಿಲ್ಲದ ಸ್ಥಿತಿ ಇದೆ,'' ಎನ್ನುತ್ತಾರೆ ಶಂಕರ್.

ಭರವಸೆ ಹುಸಿಯಾಯ್ತು:

ಇದು ಎಫ್ಡಿಎ ಹಾಗೂ ಎಸ್ಡಿಎ ಪರೀಕ್ಷೆ ಬರೆಯುವ ಬಹುತೇಕ ಅಭ್ಯರ್ಥಿಗಳ ಆರ್ಥಿಕ ಪರಿಸ್ಥಿತಿ. ಎಷ್ಟೋ ಜನ ಸರಕಾರಿ ಉದ್ಯೋಗದ ಏಕೈಕ ಕನಸು ಇಟ್ಟುಕೊಂಡು ತಿಂಗಳುಗಟ್ಟಲೆ ಪರೀಕ್ಷೆಗೆ ತಯಾರಾಗುತ್ತಾರೆ. ಆದರೆ, ಅವರು ಕಷ್ಟಪಟ್ಟು ಬರೆಯುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳೇ ಸೋರಿಕೆ ಆಗಿರುತ್ತವೆ. ಇಲ್ಲ, ಫಲಿತಾಂಶ ಬಂದಾಗ ಅವರಿಗಿಂತಲೂ ಕಡಿಮೆ ಸಾಮರ್ಥ್ಯದ ಅಭ್ಯರ್ಥಿಗಳು ಹಣ ಹಾಗೂ ಹಿನ್ನೆಲೆಯ ಕಾರಣಕ್ಕೆ ದಡ ಮುಟ್ಟಿರುತ್ತಾರೆ. "ಕಳೆದ ವರ್ಷ 2 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಪರೀಕ್ಷೆ ಕರೆದಾಗ ನಮಗೆ ಸಂತೋಷವಾಗಿತ್ತು. ಆದರೆ, ಹಿಂದೆಂದೂ ಇಲ್ಲದಷ್ಟು ಲಾಬಿ ಕೆಲಸ ಮಾಡಿತು ನೋಡ್ರಿ. ನೋಡು ನೋಡ್ತಿದ್ದ ಹಾಗೆ ಸರಕಾರಿ ಉದ್ಯೋಗಗಳು ಬಿಕರಿಯಾದವು,'' ಎನ್ನುತ್ತಾರೆ ಉತ್ತರ ಕರ್ನಾಟಕದ ಅಭ್ಯರ್ಥಿ ರಾಜು. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಕೆಪಿಎಸ್ಸಿ ವಿರುದ್ಧ ತಮ್ಮ ಸಿಟ್ಟನ್ನು ಕಾರಿಕೊಳ್ಳುತ್ತಿದ್ದಾರೆ, ಬದುಕಿನ ಭರವಸೆಯನ್ನು ಕಳೆದುಕೊಂಡವರಂತೆ ಕಾಣಿಸುತ್ತಿದ್ದಾರೆ.

ಇದು ವ್ಯವಸ್ಥೆ:

"ಇದು ವ್ಯವಸ್ಥೆ ಅಂತ ಈಗ ಅರ್ಥವಾಗುತ್ತಿದೆ. ವರ್ಷದ ಹಿಂದೆ ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದು ಹುದ್ದೆಯೊಂದನ್ನು ಗಳಿಸಿಕೊಂಡರೆ ಸಾಕು ಅಂತ ಆಲೋಚನೆ ಮಾಡುತ್ತಿದ್ದವಳು ನಾನು. ಆದರೆ, ನಮ್ಮ ಕೆಲವು ಸ್ನೇಹಿತರು ಅನ್ಯಾಯ ಆಯ್ತು ಎಂದು ಪ್ರತಿಭಟನೆಗೆ ಇಳಿದಾಗ ವ್ಯವಸ್ಥೆ ಏನು? ಹೇಗೆ ಕೆಲಸ ಮಾಡುತ್ತದೆ ಎಂಬುದು ಅರ್ಥವಾಯಿತು. ಇಲ್ಲಿ ನ್ಯಾಯ ಸಿಗಬೇಕು ಅಂದರೆ ಕಡಿಮೆ ವಿಚಾರ ಏನಲ್ಲ. ನಮ್ಮಂತವರು ಇಡೀ ಬದುಕು ಹೋರಾಟದಲ್ಲಿಯೇ ಕಳೆಯಬೇಕಾಗುತ್ತದೆ. ಹಾಳಾಗಿ ಹೋಗಲಿ ಎಂದು ಸುಮ್ಮನಿರಿ, ಮುಂದಿನ ಒಂದು ದಶಕದಲ್ಲಿ ಕರ್ನಾಟಕದ ಅಷ್ಟೂ ಸರಕಾರಿ ಹುದ್ದೆಗಳಿಗೆ ನಾಲಾಯಕ್ ಮನುಷ್ಯರು ಬಂದು ಕುಳಿತಿರುತ್ತಾರೆ. ಇದರಿಂದ ಕೊನೆಗೆ ಸಮಸ್ಯೆ ಅನುಭವಿಸುವುದು ಜನರೇ ಅಲ್ವಾ?,'' ಎಂದು ತಮ್ಮೆಲ್ಲಾ ಗೊಂದಲಗಳನ್ನು ಒಂದೇ ಏಟಿಗೆ ಹೊರಗಿಟ್ಟವರ ಹೆಸರು ರಮ್ಯಾ. ಕರಾವಳಿ ಭಾಗದ ಇವರು ಸದ್ಯ ಸರಕಾರಿ ಉದ್ಯೋಗದ ಸಹವಾಸ ಸಾಕು ಎಂದು ಕೆಲಸ ಹುಡುಕುತ್ತಿದ್ದಾರೆ.

ಹೀಗೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ಕೆಪಿಎಸ್ಸಿ, ಎಫ್ಡಿಎ ಪರೀಕ್ಷೆ ಸುತ್ತ ನಡೆಯುತ್ತಿದ್ದ ಬೆಳವಣಿಗೆಯ ಸದ್ಯದ ಚಿತ್ರಣ ಇದು. "ಮುಂದಿನ ದಿನಗಳಲ್ಲಿ ಕೆಪಿಎಸ್ಸಿ ಹಾಗೂ ಉದ್ಯೋಗ ಸೌಧದ ಮುಂದೆ ಕೌಂಟರ್ ಶುರು ಮಾಡಿಕೊಂಡು ಉದ್ಯೋಗಗಳ ಮಾರಾಟ ಶುರು ಮಾಡಿದರೂ ಅಚ್ಚರಿ ಇಲ್ಲ, ಆದರೆ ಅವತ್ತು ಪ್ರತಿಭಟನೆ ಮಾಡಲೂ ಯುವ ಜನರು ಸಿಗುವುದಿಲ್ಲ,'' ಎಂದು ಮಾತು ಮುಗಿಸಿದರು ರಮ್ಯಾ.