samachara
www.samachara.com
6 ಸಾವಿರ ಹುದ್ದೆ ನೇಮಕಾತಿ ಸಮಯದಲ್ಲಿ KPSCಗೆ ಕಳಂಕಿತ ಅಧ್ಯಕ್ಷರು ಬೇಡ: ರಾಜ್ಯಪಾಲರಿಗೆ ನೀಡಿದ ದೂರಿನ 5 ಪ್ರಮುಖ ಅಂಶಗಳು
KPSC NEWS

6 ಸಾವಿರ ಹುದ್ದೆ ನೇಮಕಾತಿ ಸಮಯದಲ್ಲಿ KPSCಗೆ ಕಳಂಕಿತ ಅಧ್ಯಕ್ಷರು ಬೇಡ: ರಾಜ್ಯಪಾಲರಿಗೆ ನೀಡಿದ ದೂರಿನ 5 ಪ್ರಮುಖ ಅಂಶಗಳು

ಕರ್ನಾಟಕ

ಲೋಕಸೇವಾ ಆಯೋಗ (ಕೆಪಿಎಸ್ಸಿ)ಕ್ಕೆ ಅಧ್ಯಕ್ಷರನ್ನಾಗಿ ಸರಕಾರ ಶಿಫಾರಸು ಮಾಡಿರುವ ಅಧಿಕಾರಿ ಶಾಮ್ ಭಟ್ ಹೆಸರನ್ನು ಅಂಗೀಕರಿಸಬಾರದು ಎಂದು ಬೆಂಗಳೂರು ಮೂಲದ ವಕೀಲರೊಬ್ಬರು ಗುರುವಾರ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ನಟರಾಜ್ ಶರ್ಮಾ ಎಂಬ ವಕೀಲರು ಸುಪ್ರಿಂ ಕೋರ್ಟ್ ಆದೇಶ, ಪತ್ರಿಕೆಗಳಲ್ಲಿ ಬಿಡಿಎ ಆಯುಕ್ತರಾಗಿರುವ ಅಧಿಕಾರಿ ಶಾಮ್ ಭಟ್ ಬಗ್ಗೆ ಬಂದಿರುವ ಪತ್ರಿಕಾ ಪ್ರಕಟಣೆಗಳ ಅಡಕವನ್ನು ಹೊಂದಿರುವ ದೂರನ್ನು ರಾಜಭವನದಲ್ಲಿ ದಾಖಲಿಸಿದ್ದಾರೆ. ಅದರ ಪ್ರಮುಖಾಂಶಗಳು ಇಲ್ಲಿವೆ.

  1. ಈ ರಾಜ್ಯದ ಜವಾಬ್ದಾರಿಯುತ ಪ್ರಜೆಯಾಗಿ ಕೆಪಿಎಸ್ಸಿಗೆ ಬಿಡಿಎ ಆಯುಕ್ತರಾಗಿರುವ ಶಾಮ್ ಭಟ್ ಅವರ ಹೆಸರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿರುವ ಸರಕಾರದ ನಿರ್ಧಾರದಿಂದ ಆತಂಕಗೊಂಡಿದ್ದೇನೆ. ಅವರ ಮೇಲೆ ಗಂಭೀರವಾದ ಹಲವು ಆರೋಪಗಳಿವೆ. ರಾಜ್ಯದ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ದಿನನಿತ್ಯ ಆರೋಪ, ಕರ್ತವ್ಯಲೋಪ ಮತ್ತಿತರ ಕಾರಣಗಳಿಗಾಗಿ ಶಾಮ್ ಭಟ್ ಸುದ್ದಿಯಾಗುತ್ತಲೇ ಇದ್ದಾರೆ ಎಂಬ ಟಿಪ್ಪಣಿಗಳ ಮೂಲಕ ಶರ್ಮಾ ನೀಡಿರುವ ದೂರು ಶುರುವಾಗುತ್ತದೆ. ಜತೆಗೆ, ಶಾಮ್ ಭಟ್ ಬಗ್ಗೆ ಬಂದಿರುವ ಪತ್ರಿಕಾ ವರದಿಗಳ ಅಡಕದ ಉಲ್ಲೇಖವನ್ನು ಇಲ್ಲಿ ಮಾಡಲಾಗಿದೆ.


  2. ಡಿಸೆಂಬರ್, 2016ಕ್ಕೆ ಶಾಮ್ ಭಟ್ ನಿವೃತ್ತಿಯಾಗಲಿದ್ದಾರೆ. ನಂತರ ತನಿಖಾ ಸಂಸ್ಥೆಗಳು ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದರೆ ಸರಕಾರಕ್ಕೆ ತೊಂದರೆಯಾಗುತ್ತದೆ. ಇದರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಅರಿವು ಇರುವ ಸಿಎಂ ಸಿದ್ದರಾಮಯ್ಯ ಶಾಮ್ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಮೂಲಕ ಮುಂದಿನ 6 ವರ್ಷಗಳ ಕಾಲ ಅವರನ್ನು ಅಧಿಕಾರದ ಪರಿಧಿಯೊಳಗೆ ಉಳಿಸಲು, ಆ ಮೂಲಕ ಕಾನೂನಿನಿಂದ ರಕ್ಷಿಸಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ.


  3. ಮುಂದಿನ ದಿನಗಳಲ್ಲಿ ಸುಮಾರು 6 ಸಾವಿರ ಸರಕಾರಿ ಉದ್ಯೋಗಗಳನ್ನು ಕೆಪಿಎಸ್ಸಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ನಡೆಯಲಿದೆ. ಈ ಸಮಯದಲ್ಲಿ ಶಾಮ್ ಭಟ್ ಅವರನ್ನು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ತರುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಉದ್ದೇಶ ಸ್ಪಷ್ಟವಾಗಿ ಅವರಿಗೇ ಗೊತ್ತಿದೆ.


  4. ಸರಕಾರೇತರ ಸಂಸ್ಥೆಗಳು, ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ವಕೀಲರು ಶಾಮ್ ಭಟ್ ವಿರುದ್ಧ ಹಲವು ದೂರುಗಳನ್ನು ದಾಖಲಿಸಿದ್ದಾರೆ. ಬಿಡಿಎನಲ್ಲಿ ನಡೆದಿರುವ ಅರ್ಕಾವತಿ ಡಿ- ನೋಟಿಫಿಕೇಶನ್ ಹಗರಣ ದೇಶದಲ್ಲಿ ನಡೆದ ಅತೀ ದೊಡ್ಡ ಭೂ ಹಗರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸರಕಾರ ನ್ಯಾ. ಕೆಂಪಣ್ಣ ಅವರ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಿದೆ. ಆಯೋಗದ ತನಿಖೆಯಲ್ಲಿ ಶಾಮ್ ಭಟ್ ಹಗರಣದ ಪ್ರಮುಖ ಸಾಕ್ಷಿಯಾಗಿದ್ದಾರೆ. ಆಯೋಗದ ವರದಿ ಶೀಘ್ರದಲ್ಲಿಯೇ ಸಲ್ಲಿಕೆಯಾಗಲಿದೆ.


  5.  ಲೋಕಾಯುಕ್ತದಲ್ಲಿ ಹಾಗೂ ಹೊಸತಾಗಿ ರಚನೆಗೊಂಡಿರುವ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಶಾಮ್ ಭಟ್ ವಿರುದ್ಧ ದೂರುಗಳು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.  ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಸಾಮಾಜಿಕ ಕಾರ್ಯಕರ್ತ ಎಸ್. ಆರ್. ಹಿರೇಮಠ್ ಶಾಮ್ ಭಟ್ ವಿರುದ್ಧ ಆರೋಪ ಮಾಡಿದ್ದಾರೆ. ಕೆಐಎಡಿಸಿಯಲ್ಲಿ ಶಾಮ್ ಭಟ್ ಇದ್ದ ಸಮಯದಲ್ಲಿ ನಡೆದ ಹಗರಣದ ಕುರಿತು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.


    ಇವು, ರಾಜ್ಯಪಾಲರಿಗೆ ವಕೀಲ ನಟರಾಜ್ ಶರ್ಮಾ ನೀಡಿರುವ ದೂರಿನಲ್ಲಿ ದಾಖಲಾಗಿರುವ ಅಂಶಗಳು. ಇದರ ಜತೆಗೆ ಲೋಕ ಸೇವಾ ಆಯೋಗದ ಕುರಿತು ಸುಪ್ರಿಂ ಕೋರ್ಟ್ ನೀಡಿದ ಆದೇಶ ಹಾಗೂ ಆಯೋಗದ ಅಧ್ಯಕ್ಷರ ಕರ್ತವ್ಯಗಳನ್ನು ದೂರಿನಲ್ಲಿ ಪಟ್ಟಿ ಮಾಡಲಾಗಿದೆ.

ಕೆಪಿಎಸ್ಸಿಗೆ ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಮೇ. 19ರಂದು ಬಿಡಿಎ ಆಯುಕ್ತ ಶಾಮ್ ಭಟ್ ಅವರ ಹೆಸರನ್ನು ಶಿಫಾರಸು ಮಾಡುವ ಮೂಲಕ ಸರಕಾರ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಶಿಫಾರಸನ್ನು ಅಂಗೀಕರಿಸುವ ಅಥವಾ ವಾಪಾಸು ಕಳಿಸುವ ಅಧಿಕಾರ ರಾಜ್ಯಪಾಲರ ಮುಂದಿದೆ. ಹೀಗಾಗಿ ರಾಜಭವನದ ಮುಂದಿನ ನಡೆ ಕುರಿತು ಕುತೂಹಲ ಮೂಡಿದೆ.