samachara
www.samachara.com
ಮೊಸರಲ್ಲಿ ಕಲ್ಲು ಹುಡುಕುತ್ತಿದ್ದವರು ವಾಲಾ: ಕೆಪಿಎಸ್ಸಿ ಶಿಫಾರಸ್ಸಿಗೆ ಅಂಕಿತ ಹಾಕ್ತಾರಾ?
KPSC NEWS

ಮೊಸರಲ್ಲಿ ಕಲ್ಲು ಹುಡುಕುತ್ತಿದ್ದವರು ವಾಲಾ: ಕೆಪಿಎಸ್ಸಿ ಶಿಫಾರಸ್ಸಿಗೆ ಅಂಕಿತ ಹಾಕ್ತಾರಾ?

ಕರ್ನಾಟಕ

ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷರ ಶಿಫಾರಸು ಚೆಂಡು ಈಗ ರಾಜಭವನದ ಅಂಗಳಕ್ಕೆ ಬಂದು ಬಿದ್ದಿದೆ.

ಆರಂಭದಿಂದಲೂ ರಾಜ್ಯ ಸರಕಾರದ ಶಿಫಾರಸ್ಸುಗಳಿಗೆ ಅಂಕಿತ ಹಾಕುವಲ್ಲಿ ತಕರಾರು ತೆಗೆಯುತ್ತಲೇ ಬಂದಿದ್ದ ರಾಜ್ಯಪಾಲ ವಾಜುಭಾಯಿ ವಾಲಾ, ಈ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಒಂದು ವೇಳೆ ಕಳಂಕಿತ ಅಧಿಕಾರಿ ಶಾಮ್ ಭಟ್ ಅವರ ಹೆಸರನ್ನು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಸರಕಾರ ಮಾಡಿರುವ ಶಿಫಾರಸಿಗೆ ಅಂಕಿತ ಹಾಕಿದ್ದೇ ಆದರೆ, ರಾಜ್ಯಪಾಲರ ನಡೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಮಾಡಿರುವ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗುತ್ತದೆ.

ಶಿಫಾರಸುಗಳ ಹಿನ್ನೆಲೆ:

ರಾಜ್ಯಪಾಲರ ನಡೆಗಳ ಕುರಿತು ಅನುಮಾನ ಮೂಡಲು ಸರಕಾರ ಕೆಪಿಎಸ್ಸಿಗೆ ಹಿಂದೆ ಮಾಡಿದ ಶಿಫಾರಸುಗಳನ್ನು ಅವರು ಅಂಗೀಕರಿಸದಿರುವ ಕಾರಣಗಳದ್ದೇ ಬಲವಾದ ಹಿನ್ನೆಲೆ ಇದೆ.

ಈ ಹಿಂದೆ, ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹಿರಿಯ ಮುಖಂಡ ವಿ.ಆರ್. ಸುದರ್ಶನ್ ಹಾಗೂ ಸದಸ್ಯರಾಗಿ ಐಪಿಎಸ್ ಅಧಿಕಾರಿ ಸೈಯದ್ ಉಲ್ಫತ್ ಹುಸೇನ್, ಪ್ರಗತಿಪರ ಚಿಂತಕ ಪ್ರೊ. ಗೋವಿಂದಯ್ಯ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಘುನಂದನ್ ರಾಮಣ್ಣ, ಕೆ.ಸಿ. ಜನರಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ರವಿಕುಮಾರ್, ಕಲಬುರ್ಗಿ ವಿ.ವಿ. ಪ್ರಾಧ್ಯಾಪಕಿ ನಾಗಾಬಾಯಿ ಬುಳ್ಳಾ ಮತ್ತು ಐಎಫ್‌ಎಸ್ ಅಧಿಕಾರಿ ಮೈಕಲ್ ಸೈಮನ್ ಬರೆಟ್ಟೊ ಅವರುಗಳ ಹೆಸರುಗಳನ್ನು ಶಿಫಾರಸು ಮಾಡಿ ರಾಜಭವನಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಸುದರ್ಶನ್, ಸೈಯದ್ ಉಲ್ಫತ್ ಹುಸೇನ್ ಮತ್ತು ರವಿಕುಮಾರ್ ಹೊರತುಪಡಿಸಿ ಉಳಿದವರ ನೇಮಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಸುದರ್ಶನ್ ಮೇಲೆ ಆರೋಪಗಳಿರುವ ಹಿನ್ನೆಲೆಯಲ್ಲಿ ಅಂಕಿತ ಹಾಕಲು ರಾಜ್ಯಪಾಲರು ತಕರಾರು ಎತ್ತಿದ್ದರು. ಈ ವಿಚಾರದಲ್ಲಿ ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ಭಾರಿ ಹಂಗಾಮ ನಡೆಸಿದ್ದವು.

ಇದೀಗ, ಬಿಡಿಎ ಆಯುಕ್ತರಾಗಿರುವ, ಡಿಸೆಂಬರ್ ವೇಳೆಗೆ ನಿವೃತ್ತರಾಗಲಿರುವ ಅಧಿಕಾರಿ ಶಾಮ್ ಭಟ್ ಹೆಸರನ್ನು ಶಿಫಾರಸು ಮಾಡಲಾಗಿದೆ. ಶಾಮ್ ಭಟ್ ಮೇಲೆ ಲೋಕಾಯುಕ್ತದಲ್ಲಿ ಗುರುತರ ಆರೋಪಗಳಿವೆ. ಪ್ರಮುಖ ಮೂರು ಪಕ್ಷಗಳ ಜತೆಗೆ ಅವರು ನಿಕಟ ಸಂಬಂಧಗಳನ್ನು ಹೊಂದಿದ್ದಾರೆ ಎಂಬ ದೂರುಗಳಿವೆ. ಹೀಗಿರುವಾಗ ರಾಜ್ಯಪಾಲರು ತಕರಾರು ತೆಗೆಯದೇ ಸರಕಾರದ ಹೊಸ ಶಿಫಾರಸಿಗೆ ಅಂಕಿತ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಜತೆಗೆ, ಸುದರ್ಶನ್ ನೇಮಕಾತಿ ಸಮಯದಲ್ಲಿ ಭಾರಿ ಸದ್ದು ಮಾಡಿ, ಕೆಪಿಎಸ್ಸಿ ಉಳಿಸುವ ಉತ್ಸಾಹ ತೋರಿಸಿದ್ದ ಕೆಲವು ಸುದ್ದಿ ವಾಹಿನಿಗಳು ಶಾಮ್ ಭಟ್ ವಿಚಾರದಲ್ಲಿ ಮೌನ ಮುರಿಯಬಹುದಾ ಎಂಬುದನ್ನೂ ಜನ ನಿರೀಕ್ಷಿಸುತ್ತಿದ್ದಾರೆ.

ಸ್ವಾಮಿ ಕೃಪೆ:

ಮೂಲಗಳ ಮಾಹಿತಿ ಪ್ರಕಾರ, ಉಡುಪಿ ಮೂಲದ ಸ್ವಾಮಿ ಒಬ್ಬರ ಕೃಪಾಕಟಾಕ್ಷ ಶಾಮ್ ಭಟ್ ಮೇಲಿದೆ ಎಂಬ ಸುದ್ದಿಗಳಿವೆ. ಅವರು ರಾಜ್ಯಪಾಲ ವಾಜುಭಾಯಿ ವಾಲಾ ಸೇರಿದಂತೆ ಬಿಜೆಪಿ ಹಿರಿಯ ನಾಯಕರ ಜತೆ ಸಲುಗೆಯಿಂದ ಇದ್ದಾರೆ. ಅವರ ಮೂಲಕ ಶಾಮ್ ಭಟ್ ಶಿಫಾರಸಿಗೆ ಅಂಕಿತ ಬೀಳುವ ಸಾಧ್ಯತೆಗಳಿವೆ ಎಂಬ ಗಾಳಿ ಸುದ್ದಿಗಳಿವೆ.

ಇದೇ ವೇಳೆ, 'ರಿಯಲ್ ಎಸ್ಟೇಟ್ ಎಕ್ಸ್ಪೋ'ಗಳನ್ನುಆಯೋಜಿಸುವ ಸುದ್ದಿ ವಾಹಿನಿಗಳಿಗೆ ಬೆನ್ನೆಲುಬಾಗಿ ನಿಂತಿರುವವರು ಬಿಡಿಎ ಆಯುಕ್ತ ಸ್ಥಾನದಲ್ಲಿರುವ ಶಾಮ್ ಭಟ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕಾರಣಕ್ಕೆ ಕೆಲವು ವಾಹಿನಿಗಳನ್ನು ಹೊರತು ಪಡಿಸಿದರೆ, ಬಹುತೇಕ ಸುದ್ದಿ ವಾಹಿನಿಗಳು ಶಾಮ್ ಭಟ್ ವಿಚಾರದಲ್ಲಿ ಮೌನಕ್ಕೆ ಶರಣಾಗಿವೆ ಎಂಬ ಮಾತುಗಳು ಮಾಧ್ಯಮ ವಲಯದಲ್ಲಿದೆ.

ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಕವಾಗಿದ್ದ ಗೋನಾಳ್ ಭೀಮಪ್ಪ ಅವರ ಅವಧಿ 2013ರ ಮೇ ತಿಂಗಳಿನಲ್ಲಿ ಮುಕ್ತಾಯಗೊಂಡಿತ್ತು. ಅಲ್ಲಿಂದ ಈವರೆಗೆ ಅಧ್ಯಕ್ಷ ಸ್ಥಾನ ಖಾಲಿ ಇದೆ.

2011 ರ ಗೆಜೆಟೆಡ್‌ ಪ್ರೊಬೆಷನರಿ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಐಡಿ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿದ್ದವರ ಪೈಕಿ ಅಧ್ಯಕ್ಷ ಗೋನಾಳ್‌ ಭೀಮಪ್ಪ ಮತ್ತು ಸದಸ್ಯರಾದ ಎಸ್.ಆರ್. ರಂಗಮೂರ್ತಿ, ರಾಮಕೃಷ್ಣ, ಕನಿರಾಮ್‌ ಈ ನಾಲ್ವರೂ ನಿವೃತ್ತರಾಗಿದ್ದಾರೆ.

ಡಾ. ಎಂ. ಮಹದೇವ, ಡಾ.ಎಚ್‌.ವಿ. ಪಾರ್ಶ್ವನಾಥ್‌, ಎಸ್‌. ದಯಾಶಂಕರ್‌, ಡಾ.ಎಚ್‌.ಡಿ. ಪಾಟೀಲ್‌ ಮತ್ತು ಅಮಾನತುಗೊಂಡು ತಡೆಯಾಜ್ಞೆ ತಂದಿರುವ ಮಂಗಳಾ ಶ್ರೀಧರ್‌ ಇನ್ನೂ ಸದಸ್ಯರಾಗಿದ್ದಾರೆ. ಈ ಸಾಲಿಗೆ ಹೊಸದಾಗಿ ಇಬ್ಬರು ಸದಸ್ಯರನ್ನು ಹಾಗೂ ಅಧ್ಯಕ್ಷರನ್ನು ಸರಕಾರ ಮೇ. 18ರಂದು ಶಿಫಾರಸು ಮಾಡಿದೆ.