KPSCಗೆ ಕಳಂಕಿತ ಶಾಮ್ ಭಟ್ ಹೆಸರು ಶಿಫಾರಸ್ಸು: ಶವ ಪೆಟ್ಟಿಗೆಗೆ ಸರಕಾರದ ಕೊನೆಯ ಮೊಳೆ!
KPSC NEWS

KPSCಗೆ ಕಳಂಕಿತ ಶಾಮ್ ಭಟ್ ಹೆಸರು ಶಿಫಾರಸ್ಸು: ಶವ ಪೆಟ್ಟಿಗೆಗೆ ಸರಕಾರದ ಕೊನೆಯ ಮೊಳೆ!

ನಿರೀಕ್ಷೆಯಂತೆಯೇ

ಸಿಎಂ ಸಿದ್ದರಾಮಯ್ಯ ಸರಕಾರ ಆಡಳಿತಾತ್ಮಕ ವಿಚಾರದಲ್ಲಿ ಮತ್ತೊಂದು ಆಘಾತಕಾರಿ ಹೆಜ್ಜೆಯನ್ನು ಇಡಲು ಮುಂದಾಗಿದೆ.

ಬಿಡಿಎ ಆಯುಕ್ತರಾಗಿರುವ, ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿ ಶಾಮ್ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಈ ಕುರಿತು ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, "ಊರಿಗೆ ಬಂದವರು ನೀರಿಗೆ ಬರಲ್ವಾ? ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಾಮ್ ಭಟ್ ಹೆಸರು ಇನ್ನೂ ನೇಮಕ ಆಗಿಲ್ಲ. ಒಂದು ವೇಳೆ ಮಾಡಿದರೆ ನಿಮಗೆ ಗೊತ್ತಾಗದೇ ಇರುತ್ತದಾ?,'' ಎಂದು ಅಡ್ಡ ಗೋಡೆ ಮೇಲೆ ದೀಪ ಇಡುವಂತೆ ಮಾತನಾಡಿದ್ದಾರೆ.

ಕೆಲವು ಬಲ್ಲ ಮೂಲಗಳ ಪ್ರಕಾರ ಶಾಮ್ ಭಟ್ ಹೆಸರನ್ನು ಈಗಾಗಲೇ ಸರಕಾರ ಅಂತಿಮಗೊಳಿಸಿ ರಾಜಭವನಕ್ಕೆ ಕಳುಹಿಸಿದೆ. ಜತೆಗೆ, "ರಾಜ್ಯಪಾಲರು ಹೆಸರನ್ನು ಅಂಗೀಕರಿಸುವಂತೆ ಮಾಡುವ ಹೊಣೆಗಾರಿಕೆಯನ್ನು ಶಾಮ್ ಭಟ್ ಅವರಿಗೇ ನೀಡಲಾಗಿದೆ,'' ಎನ್ನಲಾಗುತ್ತಿದೆ.

ಒಂದು ವೇಳೆ, ರಾಜ್ಯಪಾಲ ವಾಜೂಬಾಯಿ ವಾಲಾ ಶಾಮ್ ಭಟ್ ಹೆಸರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಿದರೆ, ಈಗಾಗಲೇ ಹದಗೆಟ್ಟಿರುವ ವ್ಯವಸ್ಥೆಯೊಂದು ಅಕಾಲಿಕ ಮರಣಕ್ಕೆ ಈಡಾಗುವುದು ನಿಚ್ಚಳವಾದಂತಾಗುತ್ತದೆ.

ಯಾಕೀ ವಿರೋಧ?:

ಕೆಪಿಎಸ್ಸಿಗೆ ಕಾಯಕಲ್ಪ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ಭರವಸೆ ನೀಡಿದ್ದರು. ಆದರೆ, ಮೂರು ವರ್ಷಗಳ ಅಂತರದಲ್ಲಿ ಕೆಪಿಎಸ್ಸಿಯಿಂದ ಕಳಂಕಿತರನ್ನು ಹೊರಹಾಕುವ ಇಚ್ಚಾಶಕ್ತಿಯನ್ನು ಅವರು ತೋರ್ಪಡಿಸಲೇ ಇಲ್ಲ. ಹೀಗಿರುವಾಗ, ಗಟ್ಟಿತನ ಇರುವವರನ್ನು ಕೆಪಿಎಸ್ಸಿಗೆ ನೇಮಕ ಮಾಡುವುದನ್ನು ನಿರೀಕ್ಷಿಸುವುದು ದೂರದ ಮಾತಾಗಿಯೇ ಉಳಿದಿತ್ತು.

ಈ ಸಮಯದಲ್ಲಿ ಸದ್ಯ ಬಿಡಿಎನಲ್ಲಿ ಅತೀ ದೀರ್ಘ ಅವಧಿಗೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಶಾಮ್ ಭಟ್ ಅವರನ್ನು ತಂದು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ನಡೆಸಿರುವ ಪ್ರಯತ್ನ ಶವ ಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಂತೆ ಭಾಸ ವಾಗುತ್ತಿದೆ. ಇದಕ್ಕೆ ಕಾರಣ, ಶಾಮ್ ಭಟ್ ಅವರ ಹಿನ್ನೆಲೆ.

2002ರಲ್ಲಿ ಸಾರಿಗೆ ಇಲಾಖೆಯಲ್ಲಿ ಅಂಡರ್ ಸೆಕ್ರೆಟರಿಯಾಗಿ ಶಾಮ್ ಭಟ್ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಶುರುಮಾಡಿದರು. ಅಲ್ಲಿಂದ ಮುಂದೆ, ಪಂಚಾಯತ್ ರಾಜ್ ಇಲಾಖೆ, ಮುಜರಾಯಿ ಇಲಾಖೆಗಳಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಕೆಐಎಡಿಬಿಯಲ್ಲಿ ಜಂಟಿ ಆಯುಕ್ತರಾಗಿದ್ದವರು. ಸಾರಿಗೆ ಇಲಾಖೆಗೆ ಆಯುಕ್ತರಾಗಿ 2011ರಲ್ಲಿ ನೇಮಕಗೊಂಡವರು. 2012ರಲ್ಲಿ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಶಾಮ್ ಭಟ್ ಅವರನ್ನು ಬಿಡಿಎ ಕಮಿಷನರ್ ಆಗಿ ನೇಮಕ ಮಾಡಿದರು. ಅಲ್ಲಿಂದೀಚೆಗೆ ಶಾಮ್ ಭಟ್ ಕುಮಾರ ಕೃಪಾ ಪಶ್ಚಿಮಕ್ಕಿರುವ ಬಿಡಿಎ ಕಚೇರಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಳಂಕಿತ ಅಧಿಕಾರಿ: 

ಶಾಮ್ ಭಟ್ ಅನ್ನುತ್ತಿದ್ದಂತೆಯೇ ಪಕ್ಷಾತೀತವಾಗಿ ರಾಜಕಾರಣಿಗಳಿಗೆ ಆಪ್ತರು ಎಂಬ ಮಾತು ಚಾಲ್ತಿಯಲ್ಲಿದೆ. ಅದು ಬಿಜೆಪಿ ಇರಲಿ, ಜೆಡಿಎಸ್ ಇರಲಿ ಅಥವಾ ಕಾಂಗ್ರೆಸ್ ಸರಕಾರವೇ ಇರಲಿ, ಶಾಮ್ ಭಟ್ ಎಲ್ಲರನ್ನೂ ಎಲ್ಲಾ ಕಾಲಕ್ಕೂ 'ಚೆನ್ನಾಗಿಯೇ' ನೋಡಿಕೊಂಡವರು ಎಂದು ಆಡಿಕೊಳ್ಳಲಾಗುತ್ತದೆ. ಅವರ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣಗಳು ದಾಖಲಾಗಿವೆ. ಲೋಕಾಯುಕ್ತ ಭಾಸ್ಕರ್ ರಾವ್ ಪುತ್ರ ಅಶ್ವಿನ್ ಲಂಚ ಬೇಡಿಕೆ ಪ್ರಕರಣದಲ್ಲಿ ಶಾಮ್ ಭಟ್ ಹೆಸರು ಕೇಳಿಬಂದಿತ್ತು. ಈ ಸಮಯದಲ್ಲಿ ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ್ ಶಾಮ್ ಭಟ್ ವಿರುದ್ಧ ಬಹಿರಂಗ ಆರೋಪವನ್ನು ಮಾಡಿದ್ದರು.

ಗಂಭೀರ ಆರೋಪಗಳು ಕೇಳಿಬಂದರೂ, ಶಾಮ್ ಭಟ್ ಆಯಕಟ್ಟಿನ ಜಾಗಗಳಲ್ಲಿಯೇ ಮುಂದುವರಿಯಲು ಪಕ್ಷಾತೀತವಾಗಿ ಹಬ್ಬಿರುವ ಅವರ ಬಾಹುಗಳೇ ಕಾರಣ ಎಂಬ ಆರೋಪಗಳಿವೆ. ಅದು ರಾಜಭವನದ ವ್ಯಾಪ್ತಿಯನ್ನೂ ಚಾಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಿಂದೆ ವಿ. ಆರ್. ಸುದರ್ಶನ್ ಅವರನ್ನು ಇದೇ ಸ್ಥಾನಕ್ಕೆ ಶಿಫಾರಸು ಮಾಡಲು ಒಪ್ಪದ ರಾಜ್ಯಪಾಲರು ಶಾಮ್ ಭಟ್ ಅವರ ಹೆಸರಿಗೆ ಮನ್ನಣೆ ನೀಡುತ್ತಾರಾ ಎಂಬ ಕುತೂಹಲ ಈ ಕಾರಣಕ್ಕೆ ಮೂಡಿದೆ.

ಇನ್ನೊಂದು ಲೋಕಾಯುಕ್ತ:

KPSCಗೆ ಕಳಂಕಿತ ಶಾಮ್ ಭಟ್ ಹೆಸರು ಶಿಫಾರಸ್ಸು: ಶವ ಪೆಟ್ಟಿಗೆಗೆ ಸರಕಾರದ ಕೊನೆಯ ಮೊಳೆ!

ಇವೆಲ್ಲವನ್ನೂ ಪಕ್ಕಿಕ್ಕಿಟ್ಟು ನೋಡಿದರೆ, ರಾಜ್ಯಾಡಳಿತಕ್ಕೆ ಯುವ ರಕ್ತವನ್ನು ಕರೆತರುವ ಗುರುತರ ಹೊಣೆಗಾರಿಕೆ ಹೊತ್ತುಕೊಂಡಿರುವ ಕೆಪಿಎಸ್ಸಿ, ಕಳಂಕಿತರಿಂದಾಗಿ ತನ್ನ ವರ್ಚಸ್ಸು ಕಳೆದುಕೊಂಡಿದೆ. ಕೆಎಎಸ್ ನೇಮಕಾತಿಯಿಂದ ಶುರುವಾಗಿ FDA, SDA ಪರೀಕ್ಷೆಗಳಲ್ಲೂ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಮೊನ್ನೆಯಷ್ಟೆ FDA ಅಭ್ಯರ್ಥಿಗಳು ಮರು ಪರೀಕ್ಷೆಗೆ ಆಗ್ರಹಿಸಿ ಕೆಪಿಎಸ್ಸಿ ಮುಂಭಾಗವೇ ಪ್ರತಿಭಟನೆ ನಡೆಸಿದ್ದಾರೆ.

ತಳಮಟ್ಟದ ಪರಿಸ್ಥಿತಿ ಹೀಗಿರುವಾಗ ಕಳಂಕಿತ ಅಧಿಕಾರಿಯನ್ನು ತಂದು ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಪ್ರಕ್ರಿಯೆಗಳು ನಡೆಯುತ್ತಿರುವುದು ಸಹಜವಾಗಿಯೇ ಆಘಾತಕಾರಿಯಾಗಿದೆ. ಇದು, "ಸಿದ್ದರಾಮಯ್ಯ ಸರಕಾರದ ವಿಶ್ವಾಸಘಾತಕತನದ ಮುಂದುವರಿದ ಭಾಗ,'' ಎನ್ನುತ್ತಾರೆ ಎಎಪಿಯ ರಾಜ್ಯ ಸಹ ಸಂಚಾಲಕ ರವಿಕೃಷ್ಣಾ ರೆಡ್ಡಿ.