ಐವರು ಕಳಂಕಿತರಿಂದ ಕೆಪಿಎಸ್ಸಿ ಸಂದರ್ಶನ: ಶುರುವಾಗಲಿದೆ ಮತ್ತೊಂದು ಸುತ್ತಿನ ಅದ್ವಾನ!
KPSC NEWS

ಐವರು ಕಳಂಕಿತರಿಂದ ಕೆಪಿಎಸ್ಸಿ ಸಂದರ್ಶನ: ಶುರುವಾಗಲಿದೆ ಮತ್ತೊಂದು ಸುತ್ತಿನ ಅದ್ವಾನ!

ರಾಜ್ಯದಲ್ಲಿ

ಮತ್ತೊಮ್ಮೆ ಕೆಪಿಎಸ್ಸಿ ನೇಮಕಾತಿಯಲ್ಲಿ ಅದ್ವಾನಗಳು ಮರುಕಳಿಸುವ ಸಾಧ್ಯತೆಗಳು ಕಾಣಿಸುತ್ತಿವೆ.

ಗೆಜೆಟೆಡ್ ಪ್ರೊಬೇಷನರ್ಸ್ 464 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದ್ದು, ಅಧ್ಯಕ್ಷರು ಹಾಗೂ ಪೂರ್ಣ ಪ್ರಮಾಣದ ಸದಸ್ಯರಿಲ್ಲದ ಕೆಪಿಎಸ್ಸಿ, ನೇಮಕಾತಿ ಪೂರ್ವ ಸಂದರ್ಶನ ನಡೆಸಲು ಮುಂದಾಗಿದೆ. ಈವರೆಗೆ ಸುಮಾರು 1389 ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೇ. 16ರಂದು ಸಂದರ್ಶನಕ್ಕೆ ಆಯ್ಕೆಯಾದವರ ದಾಖಲಾತಿಗಳ ಪರಿಶೀಲನೆ ನಡೆಯಲಿದೆ. ಸಂದರ್ಶನ ದಿನಾಂಕವನ್ನು ಕೆಪಿಎಸ್ಸಿ ಇನ್ನೂ ಪ್ರಕಟಿಸಬೇಕಿದೆ.

ಆರೋಪಿಗಳಿಂದ ಸಂದರ್ಶನ:

2011, 2014ರ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಎಸ್‍ಸಿಯ ಐವರು ಸದಸ್ಯರ ಮೇಲೆ ಆರೋಪಗಳು ಕೇಳಿಬಂದಿದ್ದರು. ಈಗ ಇದೇ ಸದಸ್ಯರು ಸಂದರ್ಶನ ಪ್ಯಾನಲ್ ಮುನ್ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳಂಕಿತರು ಸಂದರ್ಶನ ನಡೆಸಬಾರದು ಅಂತಾ ಯೋಧರೊಬ್ಬರು ಈಗಾಗಲೇ ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ. 2011ರ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ಅಕ್ರಮ ನಡೆದಿತ್ತು. ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿ ಒಟ್ಟು 9 ಸದಸ್ಯರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.

ಕೆಪಿಎಸ್‍ಸಿ ಸದಸ್ಯರುಗಳ ಮೇಲೆ ಸಿಐಡಿ ತನಿಖಾ ವರದಿಯಲ್ಲಿ ಅಕ್ರಮ ಸಾಬೀತಾಗಿತ್ತು. ಈ ಎಲ್ಲರ ವಿರುದ್ಧ ತನಿಖೆ ನಡೆಸಲು ಸಿಐಡಿ ಅನುಮತಿ ಕೋರಿತ್ತು. ಆ ಪೈಕಿ ನಿವೃತ್ತರಾದವರ ಮೇಲೆ ವಿಚಾರಣೆ ಅಗತ್ಯವಿಲ್ಲ, ಸಿಐಡಿ ನೇರವಾಗಿ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ಕೈಗೊಳ್ಳಬಹುದು ಅಂತಾ ಸರ್ಕಾರ ಹೇಳಿತ್ತು.

ಹಾಲಿ ಸದಸ್ಯರಾಗಿರುವ 5 ಮಂದಿ ಸದಸ್ಯರ ಮೇಲಿನ ವಿಚಾರಣೆಗೆ 17/04/2015ರ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಂದ ಅನುಮತಿ ಪಡೆಯಲು ಒಪ್ಪಿಗೆ ನೀಡಿತು. ಬಳಿಕ ರಾಜ್ಯಪಾಲರು ಸರ್ಕಾರದ ಶಿಫಾರಸ್ಸು ಒಪ್ಪಿ ರಾಷ್ಟ್ರಪತಿಗಳ ಅಂಗಳಕ್ಕೆ ಕಳುಹಿಸಿದ್ದಾರೆ, ಆದರೆ ರಾಷ್ಟ್ರಪತಿಗಳಿಂದ ಅನುಮೋದನೆ ಇನ್ನೂ ಬಾಕಿ ಉಳಿದಿದೆ.

ಯಾರು ಕಳಂಕಿತರು?:

ಕೆಪಿಎಸ್‍ಸಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರು ನಿವೃತ್ತರಾಗಿದ್ದಾರೆ. ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ಸದಸ್ಯರಾದ ರಂಗರಾಜು, ರಾಮಕೃಷ್ಣ, ಕನಿರಾಮ್ ನಿವೃತ್ತರಾಗಿದ್ದರೆ, ಡಾ. ಎಂ ಮಹದೇವ, ಡಾ. ಹೆಚ್‍. ವಿ ಪಾರ್ಶ್ವನಾಥ್, ಎಸ್. ದಯಾಶಂಕರ್, ಡಾ.ಹೆಚ್‍. ಡಿ ಪಾಟೀಲ್, ಅಮಾನತ್ತುಗೊಂಡು ತಡೆಯಾಜ್ಞೆ ತಂದಿರುವ ಮಂಗಳಾ ಶ್ರೀಧರ್ ಇನ್ನೂ ಸದ್ಯರಾಗಿದ್ದಾರೆ.

ಹಾಗಾಗಿ ಈ 5 ಮಂದಿ ಆರೋಪಿಗಳು ಸಂದರ್ಶನ ನಡೆಸಬಾರದು ಎಂಬ ಕೂಗು ಕೇಳಿಬಂದಿದೆ.

ಕಣ್ಣು ತೆರೆಯಲಿ:

ಕೆಪಿಎಸ್ಸಿ ಅಕ್ರಮಗಳು ಬೆಳಕಿಗೆ ಬಂದು ಪ್ರತಿಭಟನೆಗಳು ಆರಂಭವಾದಾಗ ಸಿಎಂ ಸಿದ್ದರಾಮಯ್ಯ, ಕೆಪಿಎಸ್ಸಿಗೆ ಕಾಯಕಲ್ಪ ನೀಡುವ ಮಾತುಗಳನ್ನು ಆಡಿದ್ದರು. ಅಕ್ರಮ ನಡೆಸಿದವರನ್ನು ಶಿಕ್ಷೆಗೆ ಗುರಿಪಡಿಸುವುದಾಗಿ ಅವರು ಭರವಸೆ ನೀಡಿದ್ದರು. ಈ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ನಡುವೆ ವಾಕ್ಸಮರವೂ ನಡೆದಿತ್ತು.

ಇದೀಗ, ಮತ್ತೆ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಗಳು ಶುರುವಾಗಿವೆ. ಆದರೆ, ಮುಖ್ಯಮಂತ್ರಿ ನೀಡಿದ್ದ ಭರವಸೆಗಳು ಬರೀ ಬಾಯಿ ಮಾತಿನಲ್ಲಿಯೇ ಉಳಿದಿವೆ. ಮತ್ತೊಮ್ಮೆ ನೇಮಕಾತಿ ಅದ್ವಾನ ನಡೆದು, ಕೆಪಿಎಸ್ಸಿ ಬೀದಿಗೆ ಬರುವ ಮುನ್ನ ಸಿಎಂ ಕಣ್ಣು ತೆರೆಯಲಿ ಎಂಬ ಬೇಡಿಕೆ ಜನರಿಂದ ಕೇಳಿ ಬರುತ್ತಿದೆ.