INVESTIGATION

ಧರ್ಮಸ್ಥಳದ ‘ಮೀಟರ್ ಬಡ್ಡಿ ಬೆಟ್ಟ’ ಮತ್ತು 30 ಸಾವಿರ ಕೋಟಿ ವ್ಯವಹಾರದ ಒಡಲಾಳದ ಕತೆ!

ಸಾಲ ಕಟ್ಟಲಾಗಾದೆ ತಾಳಿ ಸರ ಮಾರಿದವರು, ಅವಮಾನದಿಂದ ನೇಣಿಗೆ ಕೊರಳೊಡ್ಡಿದವರು, ಸಾಲ ಕಟ್ಟದ್ದಕ್ಕೆ ಹಾಕಿದ ಧಮಕಿಗಳು, ಮನೆಯ ಸೂರಿನ ಹಂಚು ಎಳೆದ ನೂರಾರು ಕತೆಗಳನ್ನು ಜನ ಇವತ್ತಿಗೂ ಹಂಚಿಕೊಳ್ಳುತ್ತಾರೆ.

ಭಾಗ: 1

ಆಕೆಯ ಹೆಸರು ಲತಾ; ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಅಳಗುಂಡಿಯಲ್ಲಿ ಇವರದ್ದೊಂದು ಸಣ್ಣ ಮಣ್ಣಿನ ಇಟ್ಟಿಗೆಯ ಮನೆ. ದಲಿತರಾದ ಇವರಿಗೆ ಕೂಲಿ ಕೆಲಸ ಬಿಟ್ಟು ಬೇರೆ ಜೀವನಾಧಾರವಿಲ್ಲ. ದೈನಂದಿನ ಬದುಕಿನ ಅಗತ್ಯಗಳಿಗೆ ಸಹಾಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಆಕೆ ಎಸ್.ಕೆ.ಡಿ.ಆರ್.ಡಿ.ಪಿ (ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ಸರಕಾರೇತರ ಸಂಸ್ಥೆ) ನಡೆಸುವ ಸ್ವಸಹಾಯ ಸಂಘ ಸೇರಿದರು.

ಯಾವುದೋ ಸಂದರ್ಭ, ಹಣ ತುರ್ತಾಗಿ ಬೇಕಾಗಿತ್ತು. ಲತಾ ನೇರವಾಗಿ ಸ್ವಸಹಾಯ ಸಂಘದಿಂದ 25 ಸಾವಿರ ರೂಪಾಯಿ ಸಾಲ ಪಡೆದುಕೊಂಡರು. ತಮ್ಮ ಕೂಲಿ ಕೆಲಸದ ಗಳಿಕೆಯಲ್ಲಿ ವಾರ ವಾರ ಸಾಲ ಕಟ್ಟಿದರೆ ಮುಗಿಯುತ್ತೆ ಅಂದುಕೊಂಡಿದ್ದರು. ಒಂದಷ್ಟು ದಿನ ಸಾಲ ಕಟ್ಟಿದರು ಕೂಡಾ. ಆದರೆ ಮಿತಿಮೀರಿದ ಬಡ್ಡಿಯಿಂದ ಆಕೆಗೆ ಸಾಲದ ಬೆಟ್ಟ ಹತ್ತಿ ಇಳಿಯಲಾಗಲಿಲ್ಲ. ಆರ್ಥಿಕ ಅಡಚಣೆಗಳಿಂದ 10 ಸಾವಿರ ರೂಪಾಯಿ ಸಾಲ ಬಾಕಿ ಉಳಿಯಿತು.

ಏನನ್ನಾದರೂ ಮಾರಿ ಕಟ್ಟೋಣ ಎಂದರೆ ತಲೆ ಮೇಲಿನ ಸೂರು, ಕಾಲಡಿಯ ನಾಲ್ಕಡಿ ಜಾಗ ಬಿಟ್ಟು ಇವರಿಗೆ ಬೇರೇನೂ ಇರಲಿಲ್ಲ. ಹೀಗಿದ್ದಾಗ ಯೋಜನೆಯ ಅಧಿಕಾರಿಗಳು ಸಾಲ ಕಟ್ಟುವಂತೆ ಎಚ್ಚರಿಕೆ ನೀಡಿದರು; ಪೀಡಿಸತೊಡಗಿದರು. ಆದರೆ ಲತಾ ಬಳಿಯಲ್ಲಿ ಹಣವಿಲ್ಲ.

ಕೊನೆಗೆ ಅವಮಾನ ತಾಳಲಾರದೆ ಸಂಬಂಧಿಕರ ಮನೆಗೆ ಹೋಗಿ ಒಂದಷ್ಟು ದಿನ ತಲೆ ಮರೆಸಿಕೊಂಡರು. ಕಾಲ ಕಳೆಯಿತು. ಆಕೆಯ ಪಾಲಿಗೆ ತಲೆಯ ಮೇಲೆ ಬೆಟ್ಟವನ್ನೇ ಎಳೆದಿದ್ದ ಹತ್ತು ಸಾವಿರಕ್ಕಾಗಿ, ವಾರ್ಷಿಕ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವ ಯೋಜನೆಯ ಅಧಿಕಾರಿಗಳು ಆಕೆಯ ಮನೆ ಜಪ್ತಿ ಮಾಡಲು ಮುಂದಾದರು.

ಆದರೆ ಮುರುಕಲು ಮನೆಯಲ್ಲಿ ಪಾತ್ರೆ ಪಗಡೆ ಬಿಟ್ಟರೆ ಬೇರೇನೂ ಇರಲಿಲ್ಲ. ಕೊನೆಗೆ ವಾಸವಿದ್ದ ಮನೆಯ ಜಾಗದಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳು ಕಣ್ಣಿಗೆ ಬಿದ್ದವು. ಅವುಗಳನ್ನು ಕತ್ತರಿಸಿ ಕೊಂಡೊಯ್ದರು. ಅಸಲಿಗೆ ಅದು ಆಕೆಯ ಜಮೀನೂ ಆಗಿರಲಿಲ್ಲ. ಆಕೆಯ ಮಾವನ ಪಟ್ಟಾ ಜಮೀನಾಗಿತ್ತು.

“ಮರಕಡಿಯಲು ಅವರ್ಯಾರೂ (ಯೋಜನೆ ಮುನ್ನಡೆಸುತ್ತಿರುವ ಟ್ರಸ್ಟ್) ಅರಣ್ಯ ಇಲಾಖೆಯಿಂದ ಅನುಮತಿಯನ್ನೂ ಪಡೆದಿರಲಿಲ್ಲ. ನೇರವಾಗಿ ಬಂದು ಅವಿದ್ಯಾವಂತ ಕುಟುಂಬದಿಂದ ಬಲವಂತದಿಂದ ಸಹಿ ಹಾಕಿಸಿಕೊಂಡು ಮರ ಕಡಿದುಕೊಂಡು ಹೋಗಿದ್ದರು,” ಎನ್ನುತ್ತಾರೆ ಈ ವಿಚಾರವಾಗಿ 2013ರಲ್ಲಿ ಹೋರಾಟ ನಡೆಸಿದ್ದ ಕಾರ್ಕಳ ದಲಿತ ಸಂಘರ್ಷ ಸಮಿತಿಯ ಆನಂದ ಮಾಸ್ಟರ್.

ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಅಳಗುಂಡಿ ಲತಾ ಕುಟುಂಬ. 

ಹೀಗೆ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎರಡು ತೇಗ, ಹಲಸು ಮತ್ತು ಅಕೇಶಿಯಾ ಮರಗಳು ಸಾಲದ ಬಾಬ್ತು ಅಕ್ರಮ ಮಾರಾಟಗೊಂಡವು.ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 28/10/2013ರ ಸಂಜೆ 7 ಜನರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಮಾರಾಟ ಮಾಡಲಾದ ಮರಗಳನ್ನು ಮೂಡುಬಿದಿರೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ವಶಕ್ಕೂ ಪಡೆದಿದ್ದರು.

ಇದು ಎಸ್.ಕೆ.ಡಿ.ಆರ್.ಡಿ.ಪಿ ಎಂಬ ಟ್ರಸ್ಟ್ ನಡೆಸುತ್ತಿರುವ ಮೈಕ್ರೋಫೈನಾನ್ಸ್ ವ್ಯವಹಾರದ ಶೋಷಣೆಯ ಕತೆಗಳು ಒಂದ ಸಣ್ಣ ಜಿಸ್ಟ್ ಅಷ್ಟೆ.

ಅಂದ ಹಾಗೆ ಈ ಟ್ರಸ್ಟಿನ ಅಧ್ಯಕ್ಷರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ. ಅವರ ಶ್ರೀಮತಿ ಹೇಮಾವತಿ ಹೆಗ್ಗಡೆ ಮತ್ತು ತಮ್ಮ ಸುರೇಂದ್ರ ಕುಮಾರ್ ಇದರಲ್ಲೇ ಟ್ರಸ್ಟಿಗಳಾಗಿದ್ದಾರೆ.

ಇದೇ ರೀತಿ ಸಾಲ ಕಟ್ಟಲಾಗಾದೆ ತಾಳಿ ಸರ ಮಾರಿದವರು, ಅವಮಾನದಿಂದ ನೇಣಿಗೆ ಕೊರಳೊಡ್ಡಿದವರು, ಸಾಲ ಕಟ್ಟದ್ದಕ್ಕೆ ಹಾಕಿದ ಧಮಕಿಗಳು, ಮನೆಯ ಸೂರಿನ ಹಂಚು ಎಳೆದ ನೂರಾರು ವಾಸ್ತವ ಕತೆಗಳನ್ನು ಧರ್ಮಸ್ಥಳ ಸುತ್ತಮುತ್ತಲಿನ ಹಾಗೂ ಕರಾವಳಿ ಜಿಲ್ಲೆಗಳ ಜನ ಇವತ್ತಿಗೂ ಹಂಚಿಕೊಳ್ಳುತ್ತಾರೆ. ಗ್ರಾಮ ಭಾರತದ ಅಭಿವೃದ್ಧಿಯ ಸೋಗಿನಲ್ಲಿ ನಡೆಯುತ್ತಿರುವ ದಂಧೆಯ ಕರಾಳ ಚಿತ್ರಗಳಿವು.

ಟ್ರಸ್ಟಿಗಳಾದ ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್ ಮತ್ತು ನಿರ್ದೇಶಕ ಎಲ್.ಎಚ್ ಮಂಜುನಾಥ್

ಇದು 30,000 ಕೋಟಿ ಸಾಮ್ರಾಜ್ಯ:

ಇವತ್ತು ದೇಶದ ಮೈಕ್ರೋ ಫೈನಾನ್ಸ್ ಗಳಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ. ಮೂರನೇ ಸ್ಥಾನದಲ್ಲಿದೆ ಎಂದು ‘ಸಾ-ಧನ್’ ವರದಿ ಹೇಳುತ್ತದೆ. ವೈಚಿತ್ರ್ಯದ ಸಂಗತಿ ಎಂದರೆ ದೇಶದ ಟಾಪ್ 10 ಸಂಸ್ಥೆಗಳಲ್ಲಿ 9 ಪ್ರೈವೇಟ್ ಲಿಮಿಟೆಡ್‌ಗಳಾದರೆ ಎಸ್.ಕೆ.ಡಿ.ಆರ್.ಡಿ.ಪಿ ಮಾತ್ರ ‘ಟ್ರಸ್ಟ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ವ್ಯವಹಾರದ ವಿಚಾರಲ್ಲಿ ದೇಶದ ಬೃಹತ್ ‘ಸರಕಾರೇತರ ಸಂಸ್ಥೆ’ಗಳಲ್ಲಿ ಎಸ್.ಕೆ.ಡಿ.ಆರ್.ಡಿ.ಪಿಯೂ ಒಂದು. ಹುಟ್ಟಿದ್ದು 1982ರಲ್ಲಿ; ಮುಂದೆ ಎಸ್.ಕೆ.ಡಿ.ಆರ್.ಡಿ.ಪಿ ‘ಟ್ರಸ್ಟ್’ ಹೆಸರಿನಲ್ಲಿ 18 ಮಾರ್ಚ್ 1991ರಲ್ಲಿ ಸಬ್ ರೆಜಿಸ್ಟಾರ್ ಕಚೇರಿ ಬೆಳ್ತಂಗಡಿಯಲ್ಲಿ ಘೋಷಣೆಯಾಗುತ್ತದೆ. ಇದರ ಟ್ರಸ್ಟ್ ಡೀಡ್ ‘ಸಮಾಚಾರ’ದ ಬಳಿಯಲ್ಲಿದೆ.

ಎಸ್‌ಕೆಡಿಆರ್‌ಡಿಪಿ ಟ್ರಸ್ಟ್‌ ಡೀಡ್‌. 

ಮುಂದೆ ಇದೇ ಟ್ರಸ್ಟ್ 15-20 ಜನರ ಸ್ವಸಹಾಯ ಸಂಘಗಳನ್ನು 1991ರಲ್ಲಿ ಆರಂಭಿಸಿತು. ಈ ಸ್ವಸಹಾಯ ಸಂಘಗಳಿಗೆ 1996ರಲ್ಲಿ ಮೊದಲ ಬಾರಿಗೆ ಸಾಲ ದೊರಕಿಸಲಾಯಿತು ಎಂದು ‘ಸಮಾಚಾರ’ ಕಳುಹಿಸಿದ್ದ ‘ಇ- ಮೇಲ್’ಗೆ ಸಂಸ್ಥೆಯ ನಿರ್ದೇಶಕರಾದ ಎಲ್.ಎಚ್.ಮಂಜುನಾಥ್ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಒಟ್ಟು ಮೂರು ರೀತಿಯ ಸ್ವಸಹಾಯ ಸಂಘಗಳು ಎಸ್.ಕೆ.ಡಿ.ಆರ್.ಡಿ.ಪಿಯಲ್ಲಿವೆ. ಅವುಗಳಲ್ಲಿ ಗರಿಷ್ಟ ಎಂಟು ಜನ ಗಂಡಸರಿರುವ ಪ್ರಗತಿ ಬಂಧು ಗುಂಪು, 30-50 ಮಹಿಳೆಯರ ಜನ ವಿಕಾಸ ಕೇಂದ್ರ, 10-20 ಜನರ ಮಹಿಳಾ ಸ್ವಸಹಾಯ ಸಂಘಗಳು ಇದರಲ್ಲಿ ಸೇರಿವೆ.

ಇವತ್ತು ಕರ್ನಾಟಕದ ಮೂಲೆ ಮೂಲೆ ಹಾಗೂ ಕೇರಳದ ಕೆಲವು ಭಾಗಗಳಿಗೆ ಈ ಸ್ವಸಹಾಯ ಸಂಘಗಳ ಜಾಲ ಹಬ್ಬಿಕೊಂಡಿದೆ. 2013ರ ಸೆಪ್ಟೆಂಬರ್ 30ರ ಅಂತ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಈ ಮೈಕ್ರೋ ಫೈನಾನ್ಸ್ 125 ಶಾಖೆಗಳ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತಿರುತ್ತದೆ.

ಅವತ್ತಿಗೆ ತಳಮಟ್ಟದ ಪ್ರತಿನಿಧಿಗಳು ಹೊರತಾಗಿಯೂ ಇದರಲ್ಲಿ ಒಟ್ಟು 5,572 ಜನ ಕೆಲಸ ಮಾಡುತ್ತಿರುತ್ತಿರುತ್ತಾರೆ. ಇಲ್ಲೀವರೆಗೆ 3.6 ಲಕ್ಷ ಸಂಘಗಳಲ್ಲಿ 37 ಲಕ್ಷ ಸದಸ್ಯರಿದ್ದಾರೆ. ಇವರಲ್ಲಿ ಶೇಕಡಾ 80ರಷ್ಟು ಸದಸ್ಯರು ಸಾಲ ಪಡೆದುಕೊಂಡಿದ್ದಾರೆ ಎನ್ನುತ್ತಾರೆ ಮಂಜುನಾಥ್. ಇದರಲ್ಲಿ ಮಹಿಳಾ ಸದಸ್ಯರ ಸಂಖ್ಯೆಯೇ ಹೆಚ್ಚಿದ್ದು ಶೇಕಡಾ 76.13ರಷ್ಟಿದ್ದಾರೆ.

2015-16ನೇ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 30,000 ಕೋಟಿಗೂ ಹೆಚ್ಚು ವ್ಯವಹಾರ ಮಾಡಿದ್ದು ಸದ್ಯ 5,400 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ ಎನ್ನುತ್ತಾರೆ ಮಂಜುನಾಥ್.

ಮೀಟರ್ ಬಡ್ಡಿ ವ್ಯವಹಾರ:

ಇದರಲ್ಲಿ ಭತ್ತಕ್ಕೆ ಬೆಳೆಸಾಲ ಮತ್ತು ಮನೆಗೆ ಸಂಬಂಧಿಸಿದ ಸಾಲಗಳನ್ನು ಕ್ರಮವಾಗಿ 9 ಮತ್ತು 12.5ರ ಬಡ್ಡಿದರದಲ್ಲಿ ನೀಡಲಾಗಿದೆ ಎನ್ನುತ್ತವೆ ಎಸ್.ಕೆ.ಡಿ.ಆರ್.ಡಿ.ಪಿಯ ಮಾಹಿತಿಗಳು. ಇನ್ನುಳಿದ ಸಾಲಗಳಿಗೆ ಈ ‘ಸೇವಾ ಸಂಸ್ಥೆ’ ವಿಧಿಸುತ್ತಿರುವ ಬಡ್ಡಿದರ ಶೇಕಡಾ 18; ಇದನ್ನು ಸ್ವತಃ ಸಂಸ್ಥೆಯ ನಿರ್ದೇಶಕ ಎಲ್.ಎಚ್ ಮಂಜುನಾಥ್ ಸಂದರ್ಶನವೊಂದರಲ್ಲಿ ಹಾಗೂ ಅಧ್ಯಕ್ಷರಾದ ವೀರೇಂದ್ರ ಹೆಗ್ಗಡೆಯವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಆದರೆ ನಾವು ಬ್ಯಾಂಕುಗಳಿಂದ ಶೇಕಡಾ 7-11 ಬಡ್ಡಿ ದರದಲ್ಲಿ ಸಾಲ ಪಡೆಯುತ್ತೇವೆ ಎಂದು ನಿರ್ದೇಶಕರೇ ಹೇಳಿದ್ದಾರೆ. ಹೀಗಿದ್ದೂ ಕನಿಷ್ಠ ಆರರಿಂದ ಶೇಕಡಾ 9ರವರೆಗೆ ಹೆಚ್ಚಿನ ಬಡ್ಡಿದರವನ್ನು ‘ಸೇವಾ ಸಂಸ್ಥೆ’ ವಸೂಲಿ ಮಾಡುತ್ತಿದೆ.

ಆದರೆ ಈಗ ಸ್ವಸಹಾಯ ಸಂಘಗಳು ಸದಸ್ಯರಿಗೆ ಶೇಕಡಾ 16 ಬಡ್ಡಿಯಲ್ಲಿ ಸಾಲ ನೀಡುತ್ತಿವೆ ನಿರ್ದೇಶಕರು ಉತ್ತರಿಸಿದ್ದಾರೆ.ಇದಲ್ಲದೇ ಪ್ರತೀ ವಾರ 10-20 ರೂಪಾಯಿಗಳನ್ನು ಸದಸ್ಯರಿಂದ ಠೇವಣಿ ರೂಪದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಸಂಗ್ರಹಿಸುತ್ತದೆ. 2013ರ ಸೆಪ್ಟೆಂಬರ್ ವೇಳೆಗೆ 271.59 ಕೋಟಿ ರೂಪಾಯಿಗಳ್ನು ಸಂಸ್ಥೆ ಹೀಗೆಯೇ ಸಂಗ್ರಹಿಸಿ ಬ್ಯಾಂಕಿನಲ್ಲಿ ಜಮೆ ಮಾಡಿತ್ತು. ಈ ಹಣಕ್ಕೆ ಸದಸ್ಯರಿಗೆ ಸಂಸ್ಥೆಯು ವಾರ್ಷಿಕವಾಗಿ ನೀಡುವ ಬಡ್ಡಿ ದರ ಶೇಕಡಾ 7. ಈ ಮಾಹಿತಿಗಳು ಜಾಗತಿಕ ಕಂಪೆನಿಗಳಿಗೆ ರೇಟಿಂಗ್ ನೀಡುವ ‘ಕ್ರಿಸಿಲ್ (CRISIL) ರೇಟಿಂಗ್ಸ್’ನ 2014ರ ವರದಿಯಲ್ಲಿ ಉಲ್ಲೇಖವಾಗಿದೆ.

ಭರಪೂರ ಲಾಭ:

ಒಟ್ಟಾರೆ 2014-15ನೇ ಆರ್ಥಿಕ ವರ್ಷದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ 586.59 ಕೋಟಿಗಳ ಆದಾಯವನ್ನು ಪಡೆದಿದ್ದರೆ, ಇದರಲ್ಲಿ 95.5 ಕೋಟಿ ಆದಾಯ ‘ಪ್ರಗತಿ ಬಂಧು’ (ಮೈಕ್ರೋ ಫೈನಾನ್ಸ್) ವಿನಿಂದಲೇ ಬಂದಿದೆ. ಅದೇ ಆರ್ಥಿಕ ವರ್ಷದಲ್ಲಿ ಸಂಸ್ಥೆ ಗಳಿಸಿದ ನಿವ್ವಳ ಆದಾಯ ಬರೋಬ್ಬರಿ 52.91 ಕೋಟಿ ರೂಪಾಯಿ; ಇದನ್ನು ಸಂಸ್ಥೆಯ ಬ್ಯಾಲೆನ್ಸ್ ಶೀಟಿನಲ್ಲಿ ನೋಡಬಹುದು. ಅಷ್ಟಕ್ಕೂ ಇದೊಂದು ಟ್ರಸ್ಟ್ ಎಂಬುದನ್ನು ಇಲ್ಲಿ ಗಮನಿಸಬೇಕಿದೆ.

ಮೇಲ್ನೋಟಕ್ಕೆ ಸೇವೆ ಮಾಡುತ್ತಾ ವಾಸ್ತವದಲ್ಲಿ ವರ್ಷಕ್ಕೆ 52 ಕೋಟಿ ರೂಪಾಯಿಗೂ ಜಾಸ್ತಿ ಹಣವನ್ನು ಈ ಸಂಸ್ಥೆ ತನ್ನ ಜೇಬಿಗಿಳಿಸಿಕೊಳ್ಳುತ್ತದೆ.

ಸಂಸ್ಥೆಯ 2015ರ ಬ್ಯಾಲೆನ್ಸ್ ಶೀಟ್ ('000ರೂಗಳಲ್ಲಿ)
ಇವೆಲ್ಲದರ ಹಿಂದೆ ದೊಡ್ಡ ಮಟ್ಟದ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬರುತ್ತಿವೆ. ಎಸ್.ಕೆ.ಡಿ.ಆರ್.ಡಿ.ಪಿ ವಿರುದ್ಧ ಕೇಳಿ ಬರುತ್ತಿರುವ ದೂರುಗಳೇನು? ದಾಖಲೆಗಳನ್ನು ಏನು ಹೇಳುತ್ತವೆ ಎನ್ನುವುದನ್ನು ನಿಮ್ಮ ಮುಂದಿಡುತ್ತಿದ್ದೇವೆ, ಮುಂದಿನ ಭಾಗದಲ್ಲಿ. 

Also read: