samachara
www.samachara.com
ದಲಿತ, ಮುಸ್ಲಿಂ, ಹಿಂದುಳಿದ ವರ್ಗಗಳ ಮಹಿಳೆಯರು #ಮೀಟೂ ಅಡಿಯಲ್ಲಿ ಬರಲು ಅರ್ಹರಿದ್ದಾರೆಯೇ? 
ವಿಚಾರ

ದಲಿತ, ಮುಸ್ಲಿಂ, ಹಿಂದುಳಿದ ವರ್ಗಗಳ ಮಹಿಳೆಯರು #ಮೀಟೂ ಅಡಿಯಲ್ಲಿ ಬರಲು ಅರ್ಹರಿದ್ದಾರೆಯೇ? 

ಇಷ್ಟಾಗಿಯೂ ಮೀಟೂ ಎಂಬ ಈ ಆಂದೋಲನ ಜಾತಿ-ಧರ್ಮ-ವರ್ಗ-ವರ್ಣಗಳನ್ನು ದಾಟಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವುದಾದರೆ ಬೆಂಬಲಿಸದೇ ಇರಲು ಸಾಧ್ಯವೆ!?

ಸಾಮೂಹಿಕ ಮಾಧ್ಯಮದಲ್ಲಿ ದಿನದಿನಕ್ಕೂ ಆಂದೋಲನದ ರೂಪ ಪಡೆದುಕೊಳ್ಳುವತ್ತ ಸಾಗಿರುವ #MeTooವಿನ 'ತಾಯಿ’ ತರಾನ ಬುರ್ಕೆ ಎಂಬ ಆಫ್ರೊ-ಅಮೆರಿಕನ್ ಮಹಿಳೆಯೆಂಬುದು ಎಷ್ಟು ಮಂದಿಗೆ ತಿಳಿದಿದೆ!?

ಫೇಸ್ಬುಕ್ ಟ್ವಿಟರ್ ವಾಟ್ಸಾಪ್ ಗಳಂತಹ ಮಾಧ್ಯಮಗಳೇ ಇಲ್ಲದ ಕಾಲಕ್ಕೆ ಅಂದರೆ ಸುಮಾರು ಒಂದು ದಶಕದ ಹಿಂದೆ, ಅತ್ಯಂತ ಹಿಂದುಳಿದ ಸಮುದಾಯಗಳ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಸಹಾಯಕ್ಕಾಗಿ ಬೇರು ಮಟ್ಟದಲ್ಲಿ ಮೀಟೂ ಹೋರಾಟ ಕಟ್ಟಿದ ಗಟ್ಟಿಗಿತ್ತಿ ಕಪ್ಪು ಮಹಿಳೆ ಈಕೆ. ಅತ್ಯಾಚಾರ ನಿಗ್ರಹ ದಳದ ಸಿಬ್ಬಂದಿಗಳೂ ತಲುಪಲಾಗದ, ಯಾವುದೇ ನಾಗರೀಕ ಸೌಲಭ್ಯಗಳನ್ನು ಪಡೆಯಲಾಗದ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮೇಲಾದ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಕೊಡಿಸಿ ಸಂತ್ರಸ್ತರಿಗೆ ಸಾಂತ್ವನ ನೀಡುವುದು ಆಕೆಯ ಉದ್ದೇಶವಾಗಿತ್ತು.

ಇಂದಿನ ಹೈಫೈ ಯುಗದವರಿಗೆ ಸಿಕ್ಕಿರುವ ಸುಲಭ ಮಾಧ್ಯಮಗಳೇ ಇಲ್ಲದ ದಶಕದಲ್ಲಿ 'ದೌರ್ಜನ್ಯಕ್ಕೊಳಗಾದವರು ಒಬ್ಬಂಟಿಗರಲ್ಲ, ದೌರ್ಜನ್ಯವೆಸಗಿದವರನ್ನು ಶಿಕ್ಷೆಗೊಳಪಡಿಸಿ. ಸಂತ್ರಸ್ತರ ಮನದಾಳದ ನೋವಿಗೆ ಮದ್ದಾಗಿ ಪರಿಣಮಿಸುವ ಚಳುವಳಿಯೊಂದು ನಿಮ್ಮ ಭಾಗಿದಾರಿಕೆಯಲ್ಲಿ ರೂಪುಗೊಳ್ಳುತ್ತಿದೆ’ ಎಂದು ಧೈರ್ಯ ಹೇಳುವ ಸಲುವಾಗಿ, ಒಬ್ಬ ಸಂತ್ರಸ್ತೆಯಿಂದ ಮತ್ತೊಬ್ಬ ಸಂತ್ರಸ್ತೆಯ ಮೂಲಕ 'ಜನಪದ'ದಂತೆ ಹರಡಿ ಕಟ್ಟಿದ ಹೋರಾಟವಾಗಿತ್ತು. 'ಸಹಾನುಭೂತಿಯ ಮೂಲಕ ಸಬಲೀಕರಣ' ಎಂಬುದು ಆಕೆ ಹುಟ್ಟು ಹಾಕಿದ ಚಳುವಳಿಯ ಧ್ಯೇಯ ವಾಕ್ಯವಾಗಿತ್ತು. ಆದರೆ ನ್ಯೂಯಾರ್ಕ್ ನಗರ ಪ್ರದೇಶದ 'ಹರ್ಲೆಮ್' ನಿವಾಸಿ ಕಪ್ಪು ಮಹಿಳೆಯಾದ ಕಾರಣ ಆಕೆ ಹುಟ್ಟು ಹಾಕಿದ ಈ ಚಳುವಳಿಯನ್ನು ಒಂದಿಡೀ ದಶಕದ ಕಾಲ ಯಾರೂ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.

ಇದಾಗಿ, ಕಳೆದ ಅಕ್ಟೋಬರ್ 2017ರಲ್ಲಿ ರೋಸ್ ಮ್ಯಾಕ್ಗೌನ್ ಎಂಬ ಬಿಳಿಯ ಅಮೆರಿಕನ್ ನಟಿ, ಹಾಲಿವುಡ್ಡಿನ ಚಿತ್ರ ನಿರ್ಮಾಪಕ ಹಾರ್ವೆ ವೀನ್ ಸ್ಟೀನ್ ನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಾಕಿದಳು. ಇದು ಅಮೆರಿಕೆಯಲ್ಲಿ ಸಂಭವಿಸಿದ ಮೊತ್ತ ಮೊದಲ ಲೈಂಗಿಕ ದೌರ್ಜನ್ಯ ಘಟನೆಯೇನೋ ಎಂಬುವಷ್ಟರ ಮಟ್ಟಿಗೆ ಸಂಚಲನವೇರ್ಪಟ್ಟಿತು. ಒಂದಾದ ಮೇಲೊಂದು ಪೋಸ್ಟೆಂಬಂತೆ ತನಗಾದ ದೌರ್ಜನ್ಯದ ಚಿತ್ರಣವನ್ನು ರೋಸ್ ಕೊಡುತ್ತಲೇ ನಿಮ್ಮಲ್ಯಾರಿಗಾದರೂ ನನ್ನಂಥದೇ ದೌರ್ಜನ್ಯವಾಗಿದರೆ ಮೀಟೂ ಎಂಬ ಹ್ಯಾಷ್‌ಟ್ಯಾಗ್ ನೊಂದಿಗೆ ದೌರ್ಜನ್ಯವೆಷಗಿದವರು ಅದೆಷ್ಟೇ ದೊಡ್ಡವರಿರಲಿ ಮುಖವಾಡ ಕಳಚಿ ಬೀದಿಗೆಳೆಯಿರಿ ಎಂದು ಹುರಿದುಂಬಿಸಿದಳು. ಪರಿಣಾಮಮೀಟೂ ಚಳುವಳಿ ಕಾಳ್ಗಿಚ್ಚಿನಂತೆ ಅಮೆರಿಕಾದ್ಯಂತ ಹರಡಿ, ಒಂದು ವರ್ಷ ಕಳೆಯುವುದರೊಳಗೆ ಅಮೇರಿಕೆಯ ಗಡಿ ದಾಟಿ ವಿಶ್ವದುದ್ದಗಲಕ್ಕೂ ಹಬ್ಬಿಕೊಂಡು, ಈಗ ಮೀಟೂಇಂಡಿಯಾ ಆಗಿದೆ. ಎಂ.ಜೆ.ಅಕ್ಬರ್, ಅಲೋಕ್ ನಾಥ್, ಸೋಲಿ ಸೋರಬ್ ಜೀ ಯಿಂದ ಹಿಡಿದು ಅಮಿತಾಬ್ ಬಚ್ಟನ್ ರಂತಹ ಖ್ಯಾತನಾಮರ 'ಲೈಂಗಿಕ್ಯಾತೆ'ಯನ್ನು ಬಯಲಿಗೆಳೆಯುತ್ತಿದೆ.

ಅಮೆರಿಕಾ ಮತ್ತು ರಷ್ಯಾದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಇದೊಂದು 'ಮಾಧ್ಯಮ ಕಲ್ಪಿತ ಷಡ್ಯಂತ್ರ' ವೆಂದರೆ ಆಯಾ ದೇಶದ 'ಷಡ್ಯಂತ್ರ ಸಿದ್ಧಾಂತಿ'ಗಳು ಇದು ಸರ್ಕಾರವನ್ನುರುಳಿಸಲು ಯಾರೋ ಹೊರಗಿನವರು ನಡೆಸುತ್ತಿರುವ ಕುತಂತ್ರವೆನ್ನುತ್ತಿದ್ದಾರೆ.

ಆದರೆ, ದೇಶ ಕಾಲಕ್ಕೂ ಮೀರಿ ಈ ಬಿಳಿಯ ವರ್ಣೆಯರೇ ಮುನ್ನಡೆಸಿದ ಚಳುವಳಿಯ ಉದ್ದಕ್ಕೂ ಗಮನಿಸ ಬೇಕಾದ ಪ್ರಮುಖ ಅಂಶವೊಂದಿದೆ. ಅತ್ಯಾಚಾರ ಸಂತ್ರಸ್ತರ ಸಾಂತ್ವನ ಮತ್ತು ನ್ಯಾಯಕ್ಕಾಗಿಯ ಈ ಹೋರಾಟವನ್ನು ತೊಡಗಿದ ಕಪ್ಪು ಮಹಿಳೆ ತರಾನಾ ಬುರ್ಕೆಯನ್ನು ನೆನಪಿಸಿಕೊಳ್ಳುವುದಿರಲಿ ಈ ಆಂದೋಲನವು ಕಪ್ಪು ಮಹಿಳೆಯರನ್ನೊಳಗೊಳ್ಳಲೇ ಇಲ್ಲ. ಮೊನಿಕಾ ಲಿವಿಂಸ್ಕಿಯೊಂದಿಗಿನ 'ಅನೈತಿಕ' ಸಂಬಂಧದ ಕಾರಣಕ್ಕೆ ತಮ್ಮ ಅಧ್ಯಕ್ಷ ಬಿಲ್ ಕ್ಲಿಂಟನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಪರಮ ನೈತಿಕ(?)ವಾದಿಗಳ ಅಮೆರಿಕೆಯಲ್ಲೇ ಕಪ್ಪು ಮಹಿಳೆಯರನ್ನು ಮೀಟು ಎಂಬ ಚಳುವಳಿ ಒಳಗೊಳ್ಳಲಿಲ್ಲವೆಂದರೆ ಅನಾದಿ ಕಾಲದಿಂದಲೂ ಜಾತಿ-ಧರ್ಮದ ಕಾರಣಕ್ಕಾಗಿಯೇ ಬರ್ಭರವಾದ ಲೈಂಗಿಕ ಹಾಗೂ ದೈಹಿಕವಲ್ಲದೆ ಎಲ್ಲಾ ಬಗೆಯ ದೌರ್ಜನ್ಯಕ್ಕೊಳಗಾಗುವ ದಲಿತ, ಮುಸ್ಲಿಂ ಹಾಗೂ ಬಡ ಹಿಂದುಳಿದ ಜಾತಿಗಳ ನಮ್ಮ ಹೆಣ್ಣುಮಕ್ಕಳು ಇಲ್ಲಿಯ ಮೀಟೂಇಂಡಿಯಾದ ವ್ಯಾಪ್ತಿಯೊಳಗೆ ಸೇರಲು ಅರ್ಹರಾದಾರೆಯೆ!?

ಮೇಲ್ಮಧ್ಯಮ ವರ್ಗದ ಥಳಕು-ಬಳುಕಿನ ಎಲೈಟ್ ಹೆಣ್ಣುಗಳ 'ಮೀಟೂನಾದ'ಕ್ಕೆ ಕಿವಿ ಮತ್ತು ಕಣ್ಣು ಮಾತ್ರವಲ್ಲ ಇಡೀ ದೇಹವನ್ನೇ ಯುದ್ಧ ಸನ್ನದ್ಧವಾಗಿಸಿಕೊಂಡು ಕಾದಿರುವವರು ದಲಿತ, ಮುಸ್ಲಿಂ ಮತ್ತು ಅತ್ಯಂತ ಹಿಂದುಳಿದ ಜಾತಿಗಳ ಹೆಣ್ಣುಮಕ್ಕಳ ಈ ಪರಂಪರಾಗತ ನೋವಿಗೆ ಧ್ವನಿಯಾಗಿ, ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವರ ಸಭ್ಯತೆಯ ಮುಖವಾಡ ಕಿತ್ತೆಸೆದು ನ್ಯಾಯ ದೊರಕಿಸಬಲ್ಲರೆ?

ಇಷ್ಟಾಗಿಯೂ ಮೀಟೂ ಎಂಬ ಈ ಆಂದೋಲನ ಜಾತಿ-ಧರ್ಮ-ವರ್ಗ-ವರ್ಣಗಳನ್ನು ದಾಟಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವುದರೊಂದಿಗೆ ಹೆಣ್ಣುಮಕ್ಕಳ ಬದುಕಿನ ಅನಿವಾರ್ಯತೆಗಳನ್ನು ತಮ್ಮ ಕಾಲ ಸಂದಿಗೆ ಇರುಕಿಸಿ ವಿಕೃತ ಸುಖ ಕಾಣುವ ದುರುಳರ ಸಭ್ಯತೆಯ ಮುಖವಾಡ ಕಿತ್ತೆಸೆಯುವುದಾದರೆ ಮೀಟೂಇಂಡಿಯಾ ಚಳುವಳಿಯನ್ನು ಬೆಂಬಲಿಸದೇ ಇರಲು ಸಾಧ್ಯವೆ!?

ಲೈಂಗಿಕ ದೌರ್ಜನ್ಯದ ವಿರುದ್ಧ ತರಾನಾ ಬುರ್ಕೆ ಹಚ್ಚಿದ ಪ್ರತಿರೋಧದ ದೀಪ ಒಂದು ದಶಕದ ನಂತರ ಬಿಳಿಯ ಬಣ್ಣದ ಸೆಲೆಬ್ರಿಟಿಗಳು ಹಾಗೂ ಸಾಮೂಹಿಕ ಮಾಧ್ಯಮಗಳ ಮೂಲಕ ಜ್ವಾಜಲ್ಯಮಾನವಾಗಿ ಉರಿಯುತ್ತಿರುವಾಗ ಆಕೆಯ ಕೊಡುಗೆಯನ್ನು ನೆನಪಿಸಿಕೊಳ್ಳಲಾಗದ ಇಂದಿನವರ ಕೃತಘ್ನತೆಯ ಕುರಿತು ಕೇಳಿದಾಗ, ಆಕೆ ಆಡಿದ್ದು 'ಈಗ ಆಗುತ್ತಿರುವುದು ಅತ್ಯಂತ ಶಕ್ತವಾದದ್ದು ಮತ್ತು ಇದಕ್ಕೆ ಕಾರಣರಾದ ಮಹಿಳೆಯರಿಗೆ ನಾನು ಹೃತ್ಪೂರ್ವಕವಾಗಿ ನಮಿಸುತ್ತೇನೆ. ಅದೇ ಸಮಯ ಈಗಿನ ಆಂದೋಲನ 'ವರ್ಣ'ದ ಕಾರಣಕ್ಕೆ ಧ್ವನಿಯಡಗಿಸಲ್ಪಡುವ ಕಪ್ಪು ಮಹಿಳೆಯರನ್ನೂ ಒಳಗೊಂಡು ಮತ್ತಷ್ಟು ಪ್ರಬಲವಾಗಿ ಬೆಳೆಯಲಿ’ ಎಂಬ ತಾಯ್ತನದ ಮಾತುಗಳು. ಆಕೆಯ ಮಾತುಗಳು ನಮ್ಮ ನೆಲದ ಧ್ವನಿಯಡಗಿಸಲ್ಪಟ್ಟ ಎಲ್ಲಾ ಶೋಷಿತ ಸಮುದಾಯಗಳ ತಾಯಂದಿರು ಹಾಗೂ ಆ ತಾಯಂದಿರ ಕ್ಷೇಮ ಬಯಸುವವರ ಮಾತುಗಳು ಕೂಡ.

Also read: ‘ಸಹಾನುಭೂತಿ- ಸಬಲೀಕರಣ’: ತರಾನ ಬುರ್ಕೆ ದಶಕದ ಹಿಂದೆ ಹುಟ್ಟುಹಾಕಿದ್ದು ‘#MeToo ಅಭಿಯಾನ’!