samachara
www.samachara.com
‘ಹಿಂದೂ - ಮುಸಲ್ಮಾನ’: ಹಿಂದ್‌ ಸ್ವರಾಜ್‌ನಲ್ಲಿ ಗಾಂಧಿ ಹೇಳಿದ್ದು...
ವಿಚಾರ

‘ಹಿಂದೂ - ಮುಸಲ್ಮಾನ’: ಹಿಂದ್‌ ಸ್ವರಾಜ್‌ನಲ್ಲಿ ಗಾಂಧಿ ಹೇಳಿದ್ದು...

ಪ್ರತಿಯೊಬ್ಬನೂ ತನ್ನ ತನ್ನ ಧರ್ಮದ ತಿರುಳನ್ನು ಅರಿತು ಅದರಂತೆ ನಡೆದರೆ, ಕಪಟ ಮತೋಪದೇಶಕರು ಹೇಳಿದಂತೆ ಕೇಳದಿದ್ದರೆ, ಜಗಳಕ್ಕೆ ಅವಕಾಶವೇ ಇರದು.

Team Samachara

  • ಮೋಹನ್‌ದಾಸ್‌ ಕರಮ್‌ಚಂದ್‌ ಗಾಂಧಿ
    ಕನ್ನಡಕ್ಕೆ: ಮಹದೇವ ದೇಸಾಯಿ

ಗಾಂಧೀಜಿ ಒಂದು ಶತಮಾನದ ಹಿಂದೆ, ಅಂದರೆ 1908ರಲ್ಲಿ ಲಂಡನ್‌ನಿಂದ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗುವಾಗ ಹಡಗಿನಲ್ಲಿ ಬರೆದ ಓದುಗ- ಸಂಪಾದಕರ ಪ್ರಶ್ನೋತ್ತರ ರೂಪದ ಬರಹ 'ಹಿಂದ್‌ ಸ್ವರಾಜ್'. ಮೂಲದಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಈ ಬರಹವನ್ನು ನಂತರ ಗಾಂಧೀಜಿಯೇ ಇಂಗ್ಲಿಷ್‌ಗೆ ಭಾಷಾಂತರಿಸಿದ್ದರು. ಗಾಂಧೀಜಿ ತಾವೇ ಸಂಪಾದಕರಾಗಿದ್ದ 'ಇಂಡಿಯನ್‌ ಒಪಿನಿಯನ್‌' ಪತ್ರಿಕೆಯಲ್ಲಿ ಮೊದಲಿಗೆ ಈ ಬರಹ ಪ್ರಕಟಿಸಿದರು. ಈ ಪ್ರಶ್ನೋತ್ತರ ಮಾಲೆಯ 'ಹಿಂದೂ - ಮುಸಲ್ಮಾನ' ಭಾಗವನ್ನು ಸಮಾಚಾರದ ಓದುಗರಿಗಾಗಿ ಗಾಂಧಿ ಜಯಂತಿ ವಿಶೇಷ ಸಂದರ್ಭದಲ್ಲಿ ಇಲ್ಲಿ ಕೊಡಲಾಗಿದೆ.

ಓದುಗ: ಹಿಂದೂ- ಮುಸಲ್ಮಾನರಲ್ಲಿ ಹಳೆಯ ಹೆಗತನವಿದ್ದೇ ಇದೆ. ನಮ್ಮ ಗಾದೆಗಳೇ ಅದನ್ನು ಹೇಳುತ್ತವೆ. ದೇವರಿಗೆ ಕೈ ಮುಗಿಯಲು ಹಿಂದೂ ಪೂರ್ವಕ್ಕೆ ತಿರುಗಿದರೆ, ಮುಸಲ್ಮಾನ ಪಶ್ಚಿಮಕ್ಕೆ ತಿರುಗುತ್ತಾನೆ. ಹಿಂದೂಗಳು ವಿಗ್ರಹಾರಾಧಕರು ಎಂದು ಮುಸಲ್ಮಾನರಿಗೆ ತಿರಸ್ಕಾರ. ಹಿಂದೂಗಳು ಗೋಪೂಜೆ ಮಾಡುತ್ತಾರೆ. ಮುಸಲ್ಮಾನರು ಗೋಹತ್ಯೆ ಮಾಡುತ್ತಾರೆ. ಹಿಂದೂಗಳು ಅಹಿಂಸಕರು, ಮುಸಲ್ಮಾನರು ಅಹಿಂಸಕರಲ್ಲ - ಹೀಗೆ ಹೆಜ್ಜೆ ಹೆಜ್ಜೆಗೂ ವಿರೋಧಗಳಿವೆ. ಇಂಥದರಲ್ಲಿ ಹಿಂದೂಸ್ಥಾನ ಒಂದು ರಾಷ್ಟ್ರವಾದೀತೆ? ಹೇಗೆ? ಮುಸಲ್ಮಾನರು ಇಲ್ಲಿಗೆ ಬಂದುದರಿಂಧ ನಮ್ಮ ರಾಷ್ಟ್ರೀಯತೆಯ ಭಂಗವಾಗಲಿಲ್ಲವೇ?

ಸಂಪಾದಕ: ಬೇರೆ ಬೇರೆ ಧರ್ಮದ ಜನರು ಇದ್ದರೆ ಹಿಂದೂಸ್ಥಾನ ಒಂದು ರಾಷ್ಟ್ರವಾಗದೇ ಹೋದೀತೇ ಬೇರೆ ದೇಶಗಳಿಂದ ಹೊಸಬರು ಬಂದರೆ ರಾಷ್ಟ್ರೀಯತೆ ನಷ್ಟವಾಗದು; ಬಂದವರು ಇವರಲ್ಲಿ ಬೆರೆತು ಹೋಗುತ್ತಾರೆ. ಆ ಸ್ಥಿತಿ ಬಂದಾಗಲೇ ಒಂದು ದೇಶ ರಾಷ್ಟ್ರವಾಗುತ್ತದೆ. ಆ ದೇಶಕ್ಕೆ ಹೊರಗಿನದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಬೇಕು. ಹಿಂದೂಸ್ಥಾನ ಯಾವಾಗಲೂ ಹೀಗೆಯೇ ಇದೆ. ನಿಜವಾಗಿ. ಎಷ್ಟು ಜನ ಮನುಷ್ಯರೋ ಅಷ್ಟು ಧರ್ಮ. ಆದರೆ, ರಾಷ್ಟ್ರೀಓಯತೆಯ ಭಾವನೆಯುಳ್ಳವರು ಪರಸ್ಪರ ಧರ್ಮದಲ್ಲಿ ಕೈಹಾಕರು. ಹಾಗಲ್ಲದಿದ್ದರೆ ಅವರು ಒಂದು ರಾಷ್ಟ್ರವಾಗಲು ಅರ್ಹರಲ್ಲ. ಹಿಂದೂಸ್ಥಾನದಲ್ಲಿ ಬರೀ ಹಿಂದೂಗಳೇ ಇರಬೇಕು ಎಂದು ಹಿಂದೂಗಳು ಕನಸು ಕಾಣುತ್ತಿದ್ದಾರೆ. ಈ ದೇಶವನ್ನು ತಮ್ಮದಾಗಿ ಮಾಡಿಕೊಂಡ ಹಿಂದೂ, ಮುಸಲ್ಮಾನ, ಈಸಾಯಿ ಎಲ್ಲರೂ ಈ ದೇಶಭ್ರಾತೃಗಳು. ತಮ್ಮ ಹಿತಕ್ಕಾಗಿಯಾದರೂ ಅವರು ಐಕಮತ್ಯದಿಂದ ಬಾಳಬೇಕು. ಒಂದೇ ಧರ್ಮವಿದ್ದರೇನೇ ಒಂದು ರಾಷ್ಟ್ರ ಎಂಬುದು ಲೋಕದಲ್ಲಿ ಎಲ್ಲಿಯೂ ಇಲ್ಲ. ಹಿಂದೂಸ್ಥಾನದಲ್ಲಿಯಂತೂ ಎಂದೂ ಹಾಗೆ ತಿಳಿದಿಲ್ಲ.

ಓದುಗ: ಆದರೆ ಹಿಂದೂ ಮುಸಲ್ಮಾನರಲ್ಲಿರುವ ಜನ್ಮವೈರಕ್ಕೆ ಏನು ಹೇಳುತ್ತೀರಿ?

ಸಂಪಾದಕ: 'ಜನ್ಮವೈರ' ಎಂಬ ಶಬ್ದವನ್ನು ಹುಟ್ಟಿಸಿದವರು ನಮ್ಮಿಬ್ಬರ ಶತ್ರುಗಳು. ಹಿಂದೂಗಳು ಮುಸಲ್ಮಾನರು ಹೊಡೆದಾಡಿದಾಗ ಹಾಗೆ ಮಾತಾಡಿಕೊಂಡರು. ಅವರು ಹೊಡೆದಾಡುವುದನ್ನು ಬಿಟ್ಟು ಎಷ್ಟೋ ದಿನವಾಯಿತು. ಈಗಿನ್ನೇನು ಜನ್ಮವೈರ? ಬ್ರಿಟಿಷರು ಬಂದು ನೆಲೆಸಿದ ಮೇಲೆಯೇ ನಮ್ಮ ಹೊಡೆದಾಟ ನಿಲ್ಲಲಿಲ್ಲ; ನೆನಪಿರಲಿ. ಮುಸ್ಲಿಮ್‌ ಸಾಮ್ರಾಟರ ಕೆಳಗೆ ಹಿಂದೂಗಳೂ, ಹಿಂದೂ ಚಕ್ರವರ್ತಿಗಳ ಕೆಳಗೆ ಮುಸಲ್ಮಾನರೂ ಏಳಿಗೆಯಾದರು. ಪರಸ್ಪರ ಕಲಹ ಆತ್ಮಘಾತಕವೆಂಬುದನ್ನು ಎರಡೂ ಪಕ್ಷದವರು ಅರಿತುಕೊಂಡರು. ಯುದ್ಧಕ್ಕೆ ಅಂಜಿ ಯಾರೂ ತಮ್ಮ ಧರ್ಮವನ್ನು ಬಿಡರು ಎಂಬುದನ್ನು ತಿಳಿದುಕೊಂಡರು. ಆದುದರಿಂದ ಇಬ್ಬರೂ ಕಲೆತು ಮಲೆತು ಶಾಂತಿಯಿಂದಿರಲು ನಿರ್ಧರಿಸಿದರು. ಇಂಗ್ಲಿಷರು ಬಂದರೋ ಇಲ್ಲವೋ ಈ ಜಗಳಗಳೂ ಮತ್ತೆ ಚಿಗುರಿದವು.

ನೀವು ಹೇಳುವ ಗಾದೆಗಳೆಲ್ಲ ಆ ಯುದ್ಧಗಳಲ್ಲಿ ಹುಟ್ಟಿದಂಥವು. ಅವನ್ನು ಈಗ ಹೇಳುವುದು ನಿಸ್ಸಂದೇಹವಾಗಿ ಹಾನಿಕಾರಕ. ಹಿಂದೂ ಮುಸಲ್ಮಾನರಲ್ಲಿ ಅನೇಕರಿಗೆ ಒಬ್ಬನೇ ಮೂಲಪುರುಷ. ಇಬ್ಬರೂ ಒಂದೇ ವಂಶದವರು. ಇಬ್ಬರೊಳಗೂ ಒಂದೇ ರಕ್ತ ಹರಿಯುತ್ತಿದೆ ಎಂಬುದನ್ನು ನಾವು ನೆನೆಯಬೇಡವೆ? ತಮ್ಮ ಧರ್ಮವನ್ನು ಬದಲಿಸಿದ ಮಾತ್ರಕ್ಕೆ ಜನ ವೈರಿಗಳಾಗುತ್ತಾರೆಯೇ? ಹಿಂದೂಗಳ ದೇವರು ಬೇರೆ, ಮುಸಲ್ಮಾನರ ದೇವರು ಬೇರೆಯೇ? ಬೇರೆ ಬೇರೆ ಧರ್ಮಗಳು ಬೇರೆ ಬೇರೆ ದಾರಿ; ಹೋಗುವುದು ಒಂದೇ ಕಡೆಗೆ. ಹೋಗುವುದು ಒಂದೇ ಕಡೆಗೆ ಎಂದ ಮೇಲೆ ಯಾವ ದಾರಿ ನಡೆದರೇನು? ಏಕೆ ಈ ಜಗಳ?

ಶೈವ- ವೈಷ್ಣವರಲ್ಲಿ ಎಂಥ ಘೋರವಾದ ಗಾದೆಗಳಿವೆ, ಗೊತ್ತೇ? ಆದರೂ ಇವರಿಬ್ಬರೂ ಬೇರೆ ಬೇರೆ ರಾಷ್ಟ್ರ ಎಂದು ಯಾರೂ ಹೇಳರು. ವೈದಿಕ ಧರ್ಮಕ್ಕೂ ಜೈನಮತಕ್ಕೂ ಬಹಳ ಅಂತರವಂತೆ. ಅದರಿಂಧ ಜೈನರೂ ಸನಾತನಿಗಳೂ ಬೇರೆ ಬೇರೆ ರಾಷ್ಟ್ರಗಳಾದರೆ? ನಿಜವಾದ ಅಂಶ ಇಷ್ಟು; ನಾವೆಲ್ಲರೂ ಗುಲಾಮರಾಗಿದ್ದೇವೆ. ಅದರಿಂದ ನಮ್ಮ ನಮ್ಮೊಳಗೇ ಕಾದಾಡುತ್ತೇವೆ. ಮೂರನೆಯವರ ಬಳಿಗೆ ತೀರ್ಪಿಗಾಗಿ ಹೋಗುತ್ತೇವೆ. ಮುಸ್ಲಿಂ ವಿಗ್ರಹ ಭೇದಕರಿದ್ದಂತೆ ಹಿಂದೂಗಳೂ ಇದ್ದಾರೆ... ನಮ್ಮೊಳಗೆ ಜ್ಞಾನ ಹೆಚ್ಚಾದಂತೆಲ್ಲ ಬೇರೆ ಧರ್ಮಗಳನ್ನು ಅನುಸರಿಸುವವರೊಡನೆ ನಾವು ಕಾದಾಡಬೇಕಾಗಿಲ್ಲ ಎಂಬುದು ನಮಗೆ ತಿಳಿಯುತ್ತದೆ.

ಓದುಗ: ಗೋರಕ್ಷಣೆಯ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಕೇಳೋಣ.

ಸಂಪಾದಕ: ನಾನು ಸ್ವಯಂ ಗೋಪೂಜಕ. ಎಂದರೆ ಹಸುವನ್ನು ಆದರಿಸುತ್ತೇನೆ. ಹಿಂದೂಸ್ಥಾನ ಕೃಷಿ ಪ್ರಧಾನ ದೇಶ. ಹಿಂದೂಸ್ಥಾನದ ರಕ್ಷಣೆಗೆ ಗೋವೇ ಆಧಾರ. ಗೋವು ನಮಗೆ ನೂರಾರು ಬಗೆಯಲ್ಲಿ ಉಪಕಾರಿ. ಮುಸಲ್ಮಾನ ಸೋದರರೂ ಇದನ್ನು ಒಪ್ಪಬೇಕು. ಆದರೆ, ಗೋಪೂಜೆ ಮಾಡುವಂತೆಯೆ ನಾನು ಮನುಷ್ಯರನ್ನೂ ಗೌರವಿಸುತ್ತೇನೆ. ಹಿಂದೂವೋ ಮುಸಲ್ಮಾನರೋ, ಮನುಷ್ಯನೂ ಗೋವಿನಂತೆ ಉಪಕಾರಿ. ಹೀಗಿರುವಾಗ ಒಂದು ಹಸುವನ್ನು ಕಾಪಾಡಲು ಒಬ್ಬ ಮುಸಲ್ಮಾನನನ್ನು ನಾನು ಕೊಲ್ಲಲೆ? ಹಾಗೆ ಮಾಡಿದರೆ ನಾನು ಮುಸಲ್ಮಾನರಿಗೂ ವೈರಿಯಾದೆ, ಗೋವಿಗೂ ಘಾತಕನಾದೆ. ಆದುದರಿಂದ ನನಗೆ ತಿಳಿದ ಮಟ್ಟಿಗೆ ಗೋರಕ್ಷಣೆಗೆ ಒಂದೇ ದಾರಿ: ದೇಶದ ಹಿತಕ್ಕಾಗಿ ಗೋವನ್ನು ರಕ್ಷಿಸುವ ಕೆಲಸದಲ್ಲಿ ನೀನೂ ನನಗೆ ಜೊತೆಯಾಗು ಎಂದು ಮುಸಲ್ಮಾನ ಸೋದರನಿಗೆ ತಿಳಿಸಿ ಹೇಳುವುದು. ಅವನು ನನ್ನ ಮಾತನ್ನು ಕೇಳದಿದ್ದರೆ, ಈ ಕೆಲಸ ನನ್ನ ಶಕ್ತಿಗೆ ಮೀರಿದ್ದು ಎಂದು ಆ ಹಸುವನ್ನು ಕೈಬಿಡಬೇಕು. ಗೋವಿನ ಬಗ್ಗೆ ನನ್ನ ಅಂತಃಕರಣ ಅತ್ಯಂತ ದಯಾಪೂರ್ಣವಾಗಿದ್ದರೆ, ಅದನ್ನು ರಕ್ಷಿಸಲು ನನ್ನ ಪ್ರಾಣವನ್ನೆ ತೆರಬೇಕೇ ವಿನಾ ಮುಸಲ್ಮಾನ ಸೋದರರ ಪ್ರಾಣವನ್ನು ತೆಗೆಯಲಾಗದು. ಇದೆ ನಮ್ಮ ಧರ್ಮ ಎಂದು ನಾ ತಿಳಿದಿದ್ದೇನೆ.

'ಹೌದು', 'ಅಲ್ಲ'ಗಳಿಗೆ ಯಾವಾಗಲೂ ಹಾಗೆಯೇ. ಮನುಷ್ಯ ಹಟವಾದಿಯಾದರೆ ಕಷ್ಟ. ನಾನೊಂದು ಹಟ ಹಿಡಿದರೆ ಮುಸಲ್ಮಾನ ಸೋದರ ಇನ್ನೊಂದಕ್ಕೆ ಹಟ ಹಿಡಿಯುತ್ತಾನೆ. ನಾನು ವಕ್ರವಾಗಿ ನಡೆದರೆ ಅವನೂ ವಕ್ರವಾಗಿಯೇ. ನಾನು ಸ್ವಲ್ಪ ತಲೆಬಾಗಿದರೆ ಅವನೂ ಪೂರಾ ತಲೆಬಾಗಿಯಾನು. ಒಂದು ವೇಳೆ ಅವನು ತಲೆ ಬಾಗದಿದ್ದರೂ ನಾನು ತಲೆಬಾಗಿದುದೇನೂ ತಪ್ಪಾಗುವುದಿಲ್ಲ. ಹಿಂದೂಗಳು ಹಟ ಹಿಡಿದ ಮೇಲೆ ಗೋಹತ್ಯೆ ಹೆಚ್ಚಿತು. ಈ ಗೋರಕ್ಷಣಾ ಸಂಘಗಳನ್ನು ಗೋಹತ್ಯಾ ಸಂಘಗಳೆಂದೇ ಹೇಳಬಹುದು. ಇಂಥಾ ಸಂಘಗಳಿರುವುದೇ ನಮಗೆ ಅವಮಾನ. ನಾವು ಗೋರಕ್ಷಣೆ ಮಾಡುವುದನ್ನು ಮರೆತಾಗಲೇ ಇಂಥ ಸಂಘಗಳು ಅಗತ್ಯವಾದುವೇನೋ!

ನನ್ನ ಸಹೋದರನೊಬ್ಬ ಗೋ ಹತ್ಯೆ ಮಾಡಲು ಸಿದ್ಧನಾದರೆ ನಾನೇನು ಮಾಡಬೇಕು? ಅವನನ್ನು ಕೊಂದುಹಾಕಲೋ, ಅವನ ಕಾಲಿಗೆ ಬಿದ್ದು ಗೋವನ್ನು ಕೊಲ್ಲಬೇಡ ಎಂದು ಬೇಡಿಕೊಳ್ಳಲೋ? ಬೇಡಿಕೊಳ್ಳವುದೇ ಸರಿ ಎಂದರೆ, ಮುಸಲ್ಮಾನ ಸೋದರನನ್ನೂ ಬೇಡಿಕೊಳ್ಳಬೇಕಲ್ಲವೆ?

ಹಿಂದೂಗಳೇ ಗೋವನ್ನು ನಿಷ್ಕರುಣೆಯಿಂದ ಪೀಡಿಸುತ್ತಾರಲ್ಲ. ಆಗ ಅದನ್ನು ರಕ್ಷಿಸುವವರು ಯಾರು? ಗೋ ಸಂತಾನವನ್ನು ನಿರ್ದಯೆಯಿಂದ ದೊಣ್ಣೆಯಿಂದ ಹೊಡೆಯುತ್ತಾರಲ್ಲ. ಆವಾಗ ಅವರಿಗೆ ಹಾಗೆ ಮಾಡಬೇಡಿ ಎಂದು ತಿಳಿಸಿ ಹೇಳುವವರು ಯಾರು? ಆದರೂ ನಾವು ಒಂದು ರಾಷ್ಟ್ರವಾಗಿರಲು ಇದು ಅಡ್ಡಿ ಬಂದಿಲ್ಲ.

ಕಡೆಗೆ, ಹಿಂದೂಗಳು ಅಹಿಂಸಕರು, ಮುಸಲ್ಮಾನರು ಅಹಿಂಸಕರಲ್ಲ ಎಂದರೆ ಅಹಿಂಸಕನ ಧರ್ಮವೇನು? ಅಹಿಂಸಾವಾದಿಯಾದವನು ಯಾಋನ್ನಾದರೂ ಕೊಲ್ಲಬಹುದು ಎಂದೇನು ಬರೆದಿಲ್ಲ. ಅವರ ದಾರಿ ನೇರಾಗಿದೆ. ಒಂದು ಜೀವವನ್ನು ಉಳಿಸಲು ಇನ್ನೊಂದು ಜೀವವನ್ನು ಅಳಿಸಲಾರ. ಸಮ್ರವಾಗಿ ಪ್ರಾರ್ಥಿಸಬಲ್ಲ – ಅದೇ ಅವನ ಕರ್ತವ್ಯ, ಪುರುಷಾರ್ಥ.

ಆದರೆ, ಪ್ರತಿಯೊಬ್ಬ ಹಿಂದೂವೂ ಅಹಿಂಸಿಕನೇ? ನಿಜವಾಗಿ ನೋಡಿದರೆ, ಅಹಿಂಸಕರು ಯಾರೂ ಇಲ್ಲ; ನಾವು ಜೀವಹಿಂಸೆ ಮಾಡುತ್ತಲೇ ಇದೇವೆ. ಯಾವ ಬಗೆಯ ಜೀವಹಿಂಸೆಯನ್ನೂ ಮಾಡದಂತೆ ವಿಮೋಚನೆ ಪಡೆಯಲು ನಾವು ಬಯಸುತ್ತೇವೆ ಎಂದು ನಾವು ಅಹಿಂಸವಾದಿಗಳು. ಸಾಧಾರಣವಾಗಿ ಹಿಂದೂಗಳಲ್ಲಿ ಬಹಳ ಜನ ಮಾಂಸಾಹಾರಿಗಳು. ಆದುದರಿಂದ ಅವರು ಒಟ್ಟಿಗೆ ಇರಲಾರರು ಎನ್ನುವುದು ಶುದ್ಧ ಅಸಂಗತ.

ಸ್ವಾರ್ಥಿಗಳೂ ಮೋಸಗಾರರೂ ಆದ ಮತೋಪದೇಶಕರು ಈ ವಿಚಾರಗಳನ್ನೆಲ್ಲ ನಮ್ಮ ಮನಸ್ಸಿನಲ್ಲಿ ತುರುಕಿದ್ದಾರೆ. ಇಂಗ್ಲಿಷರು ಅದನ್ನು ಪೂರ್ಣಗೊಳಿಸಿದರು. ಅವರಿಗೆ ಇತಿಹಾಸ ಬರೆವ ರೂಢಿಯಿದೆ. ಎಲ್ಲಾ ಜಾತಿಗಳ ರೂಢಿ- ಸಂಪ್ರದಾಯಗಳನ್ನು ಅಧ್ಯಯನ ಮಾಡುವ ಸೋಗು ಹಾಕುತ್ತಾರೆ ಅವರು. ದೇವರು ನಮಗೆ ಮಿತವಾದ ಬುದ್ಧಿಶಕ್ತಿಯನ್ನು ಕೊಟ್ಟಿದ್ದಾನೆ. ಅವರು ತಾವೇ ದೇವರು ಎಂದು ಮನಬಂದಂತೆ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ತಮ್ಮ ಸಂಶೋಧನೆಗಳ ಬಗ್ಗೆ ಬಡಾಯಿ ಕೊಚ್ಚಿ, ಅದರ ಮೋಹಜಾಲದಲ್ಲಿ ನಮ್ಮನ್ನು ನೂಕುತ್ತಾರೆ, ಅಜ್ಞಾನ ವಶದಿಂದ ನಾವು ಅವರ ಕಾಲಿಗೆ ಬಿದ್ದು ಅದನ್ನೆಲ್ಲ ನಂಬುತ್ತೇವೆ.

ತಪ್ಪು ತಿಳಿವಳಿಕೆ ಬೇಡ ಎನ್ನುವವರು ಕುರಾನನ್ನೆ ಓದಲಿ. ಅದರಲ್ಲಿ ಹಿಂದೂಗಳಿಗೆ ಸಮ್ಮತವಾಗುವಂಥ ನೂರಾರು ಮಾತುಗಳು ಸಿಗುತ್ತವೆ. ಭಗವದ್ಗೀತೆಯಲ್ಲಿರುವ ವಾಕ್ಯಗಳಿಗೆ ಮುಸಲ್ಮಾನನೂ ವಿರೋಧ ಮಾಡಲಾರ. ಕುರಾನಿನಲ್ಲಿ ನನಗೆ ಅರ್ಥವಾಗದವು, ಇಷ್ಟವಿಲ್ಲದವು ಕೆಲವು ವಾಕ್ಯಗಳಿವೆ. ಅದಕ್ಕಾಗಿ ಮುಸಲ್ಮಾನರನ್ನು ನಾನು ತಿರಸ್ಕರಿಸಲೆ? ಎರಡು ಕೈ ಸೇರಿ ಚಪ್ಪಾಳೆ, ಇಬ್ಬರು ಕಲೆತು ಜಗಳ. ನನಗೆ ಜಗಳ ಬೇಡ ಎಂದರೆ ಮುಸಲ್ಮಾನ ಏನು ಮಾಡಬಲ್ಲ? ಹಾಗೆಯೆ, ಮುಸಲ್ಮಾನ ನನ್ನೊಡನೆ ಜಗಳವಾಡಲು ಸಿದ್ಧನಾಗಿಲ್ಲದಿದ್ದರೆ ನಾನೇನು ಮಾಡಬಲ್ಲೆ? ಗಾಳಿಯನ್ನು ಗುದ್ದಿದರೆ ಮೈ ನೋವು ಅಲ್ಲವೆ? ಪ್ರತಿಯೊಬ್ಬನೂ ತನ್ನ ತನ್ನ ಧರ್ಮದ ತಿರುಳನ್ನು ಅರಿತು ಅದರಂತೆ ನಡೆದರೆ, ಕಪಟ ಮತೋಪದೇಶಕರು ಹೇಳಿದಂತೆ ಕೇಳದಿದ್ದರೆ, ಜಗಳಕ್ಕೆ ಅವಕಾಶವೇ ಇರದು.

ಓದುಗ: ಆದರೆ, ಇಂಗ್ಲಿಷರು ಈ ಎರಡೂ ಜಾತಿಗಳನ್ನು ಒಟ್ಟಾಗಲು ಬಿಟ್ಟಾರೆಯೇ?

ಸಂಪಾದಕ: ಈ ಪ್ರಶ್ನೆ ಅಂಜಿಕೆಯ ಲಕ್ಷಣ. ನಮ್ಮ ಸಂಕುಚಿತತನ. ಹೀನತೆ ಇದರಿಂದ ತಿಳಿಯುತ್ತದೆ. ಇಬ್ಬರು ಅಣ್ಣತಮ್ಮಂದಿರು ಅನ್ಯೋನ್ಯವಾಗಿರಲು ಬಯಸಿದರೆ ಮೂರನೆಯವರು ಯಾರು ಅವರನ್ನು ಬೇರೆ ಬೇರೆ ಮಾಡಬಲ್ಲರು? ಇತರರ ದುಷ್ಟ ಸಲಹೆಗಳಿಗೆ ಅವರು ಕಿವಿಗೊಟ್ಟರೆ ಅವರು ಮೂರ್ಖರೆನ್ನಬೇಕು. ಅದೇ ರೀತಿ ಇಂಗ್ಲಿಷರ ಮಾತು ಕೇಳಿ ನಾವು ಹೋಳಾದರೆ - ನಾವು, ಹಿಂದೂಗಳು ಮುಸ್ಲಿಮರು - ನಮ್ಮನ್ನೇ ನಿಂದಿಸಿಕೊಳ್ಳಬೇಕು; ಅವರನ್ನೇಕೆ ಬೈಯಬೇಕು. ಹಸಿಗಡಿಗೆ ಒಂದಕ್ಕಲ್ಲಾ ಮತ್ತೊಂದಕ್ಕೆ ತಗಲಿ ಒಡೆದು ಹೋಗುತ್ತದೆ. ಯಾವುದಕ್ಕೂ ತಗುಲದಂತೆ ಗಡಿಗೆಯನ್ನು ದೂರ ಇಡುವುದಲ್ಲ ಉಪಾಯ; ಒಡಯದಂತೆ ಗಡಿಗೆಯನ್ನು ಸುಡುವುದು. ಆದುದರಿಂದ ನಮ್ಮ ಹೃದಯಗಳನ್ನು ಹಾಗೆ ಪಕ್ವಗೊಳಿಸಬೇಕು. ಆಗ ನಮಗೆ ಯಾವ ಭಯವೂ ಇಲ್ಲ. ಹಿಂದೂಗಳು ಇದನ್ನು ಸುಲಭವಾಗಿ ಮಾಡಬಲ್ಲರು. ಅವರ ಸಂಖ್ಯೆ ಹೆಚ್ಚು. ತಾವು ಹೆಚ್ಚು ಸುಶಿಕ್ಷಿತರೆಂಬ ಹೆಮ್ಮೆಯೂ ಅವರಿಗಿದೆ. ಮುಸಲ್ಮಾನರೊಡನೆ ತಾವು ಸ್ನೇಹವಾಗಿದ್ದರೆ, ಅದಕ್ಕೆ ಯಾವ ಆಘಾತ ಬಂದರೂ ತಡೆದುಕೊಳ್ಳಬಲ್ಲ ಶಕ್ತಿ ಅವರಿಗಿದೆ.

ಈಗ ಎರಡೂ ಜಾತಿಗಳಲ್ಲಿ ಪರಸ್ಪರ ಅವಿಶ್ವಾಸವಿದೆ. ಅದರಿಂದ ಮುಸಲ್ಮಾನರು ತಮಗೆ ಕೆಲವು ವಿಶೇಷ ರಿಯಾಯಿತಿ ಬೇಕೆಂದು ಲಾರ್ಡ್‌ ಮಾರ್ಲೆಯನ್ನು ಕೇಳುತ್ತಿದ್ದಾರೆ. ಇದನ್ನು ಹಿಂದೂಗಳೇಕೆ ವಿರೋಧಿಸಬೇಕು? ಹಿಂದೂಗಳು ವಿರೋಧಿಸದಿದ್ದರೆ ಇಂಗ್ಲಿಷರು ಅದನ್ನು ಗಮನಿಸಿಯಾರು, ಮುಸಲ್ಮಾನರು ಕ್ರಮೇಣ ಹಿಂದೂಗಳಲ್ಲಿ ವಿಶ್ವಾಸವಿಟ್ಟಾರು; ಕಡೆಗೆ ಸೋದರಭಾವ ಹುಟ್ಟೀತು. ನಮ್ಮ ಜಗಳಗಳನ್ನು ಇಂಗ್ಲಿಷರ ಬಳಿಗೊಯ್ಯಲು ನಮಗೆ ನಾಚಿಕೆಯಾಗಬೇಕು. ವಿರೋಧ ಮಾಡದಿದ್ದರೆ ಹಿಂದೂಗಳಿಗೇನೂ ನಷ್ಟವಿಲ್ಲ ಎಂಬುದು ಎಲ್ಲರಿಗೂ ತಿಳಿಯುವಂತಿದೆ. ಇನ್ನೊಬ್ಬನಿಗೆ ತನ್ನಲ್ಲಿ ವಿಶ್ವಾಸ ಹುಟ್ಟುವಂತೆ ಮಾಡಿದವರಿಗೆ ಯಾರಿಗೂ ಎಂದಿಗೂ ಎಳ್ಳಷ್ಟೂ ನಷ್ಟವಿಲ್ಲ.

ಹಿಂದೂಗಳು, ಮುಸಲ್ಮಾನರು ಎಂದಿಗೂ ಜಗಳವಾಡರು ಎನ್ನುತ್ತಿಲ್ಲ ನಾನು. ಒಟ್ಟಿಗಿರುವ ಅಣ್ಣತಮ್ಮಂದಿರೂ ಸಹ ಜಗಳವಾಡುತ್ತಾರೆ. ಒಮ್ಮೊಮ್ಮೆ ತಲೆಯೊಡೆದು ಹೋಗುವುದೂ ಉಂಟು. ಹೀಗೆ ಆಗಬೇಕಾದುದಿಲ್ಲ. ಆದರೆ, ಎಲ್ಲರಿಗೂ ಒಂದೇ ರೀತಿ ಮತಿಯಿಲ್ಲ. ಸಿಟ್ಟು ಬಂದಾಗ ಮನುಷ್ಯ ಎಷ್ಟೋ ಮೂರ್ಖತನ ಮಾಡುತ್ತಾನೆ. ಅದನ್ನು ನಾವು ಸೈರಿಸಬೇಕು. ಒಂದು ವೇಳೆ ಜಗಳವಾಡಿದರೂ, ಅದಕ್ಕಾಗಿ ವಕೀಲರನ್ನಿಟ್ಟು ಇಂಗ್ಲಿಷರ ಕೋರ್ಟುಗಳಿಗೆ ಹೋಗಬಾರದು. ಇಬ್ಬರು ಜಗಳವಾಡಿದರು; ಇಬ್ಬರ ತಲೆಯೂ ಒಡೆಯಿತು ಅಥವಾ ಒಬ್ಬನದೇ. ಅವರ ನಡುವೆ ಮೂರನೆಯವನೇನು ನ್ಯಾಯದಾನ ಮಾಡುವುದು? ಹೊಡೆದಾಡಿದವರು ಗಾಯಗೊಂಡರು. ಇದರಲ್ಲಿ ನ್ಯಾಯದ್ದೇನು ಮಾತು ಬಂತು?

ಕೃಪೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನ, ಬೆಂಗಳೂರು