ಭಯ ಹುಟ್ಟಿಸುತ್ತಿರುವ ಮೊರಾರ್ಜಿ ವಸತಿ ಶಾಲೆಗಳು
ವಿಚಾರ

ಭಯ ಹುಟ್ಟಿಸುತ್ತಿರುವ ಮೊರಾರ್ಜಿ ವಸತಿ ಶಾಲೆಗಳು

ಕಳೆದ ಐದು ವರ್ಷಗಳಲ್ಲಿ ನಡೆದ ಇಂತಹ ಹಲವು ಘಟನೆಗಳು ನನ್ನನ್ನು ಮೊರಾರ್ಜಿ ಶಾಲೆ ಅಂಗಳಕ್ಕೆ ತಂದು ಬಿಟ್ಟಿದೆ. ಈ ಶಾಲೆಗಳಲ್ಲಿ ಭದ್ರತೆ ಕುಸಿತುತ್ತಿರುವುದು ಆತಂಕ ಮೂಡಿಸುವಂತಿದೆ.

  • ಗುರುರಾಜ್ ದೇಸಾಯಿ

ಶಿಕ್ಷಣ ಎಂಬುದು ಕೇವಲ ಜ್ಞಾನದ ಮೂಲ ಮಾತ್ರ ಅಲ್ಲ; ಇವತ್ತಿಗೆ ಅದು ಬದುಕು ಕಟ್ಟಿಕೊಳ್ಳಲು ಸಹಾಯಕ ಎಂಬ ನಂಬಿಕೆ ಇದೆ. ಮಕ್ಕಳು ಶಿಕ್ಷಣ ಪಡೆದು, ಒಳ್ಳೆಯ ಕೆಲಸ ಹಿಡಿದು, ಆ ಮೂಲಕ ಕುಟುಂಬಕ್ಕೆ ಆಶ್ರಯ ನೀಡಿ, ತನ್ನ ಕೈಲಾದಷ್ಟು ದೇಶ ಸೇವೆ ಮಾಡಲಿ ಎಂಬ ಆಶಯದಿಂದ ಮಕ್ಕಳನ್ನು ಪೋಷಕರು ಶಾಲೆಗಳಿಗೆ ಕಳುಹಿಸುತ್ತಾರೆ. ಕಿತ್ತು ತಿನ್ನುವ ಬಡತನ, ಆ ಪ್ರದೇಶದಲ್ಲಿ ಶಾಲೆಗಳು ಇಲ್ಲದಿರುವ ಕಾರಣ ವಸತಿ ಶಾಲೆಗಳನ್ನು ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಸಂಖ್ಯೆ ಹೆಚ್ಚುಕಡಿಮೆ ದ್ವಿಗುಣಗೊಳ್ಳುತ್ತಿದೆ.

ಅದಕ್ಕೆ ತಕ್ಕಂತೆ ಸರಕಾರ ವಸತಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ. ಖಾಸಗಿ ವಸತಿ ಶಾಲೆಗಳ ಹಾವಳಿಯನ್ನು ತಪ್ಪಿಸಲು ಸರಕಾರಿ ವಸತಿ ಶಾಲೆಗಳು ಪೈಪೋಟಿ ನೀಡುತ್ತಿವೆ. ಫಲಿತಾಂಶವೂ ಕೂಡ ಸರಕಾರಿ ವಸತಿ ಶಾಲೆಗಳಲ್ಲಿ ಉತ್ತಮವಾಗಿ ಬರುತ್ತಿದೆ.

ಆದರೆ, ಇತ್ತಿಚೆಗೆ ಸೌಲಭ್ಯಗಳ ಕೊರತೆ, ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ದಿಂದ ವಿದ್ಯಾರ್ಥಿಗಳ ಆತ್ಮಹತ್ಯೆ, ಹೊಂಡಕ್ಕೆ ಬೀಳುವುದು, ಲೈಂಗಿಕ ಕಿರುಕುಳವನ್ನು ವಿರೋಧಿಸಲಾಗದೆ ಸಾವನ್ನಪ್ಪುತ್ತಿರುವ ಘಟನೆಗಳು ಸರಕಾರ ವಸತಿ ಶಾಲೆಗಳಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಇಂತಹ ಹಲವು ಘಟನೆಗಳು ನನ್ನನ್ನು ಮೊರಾರ್ಜಿ ಶಾಲೆ ಅಂಗಳಕ್ಕೆ ತಂದು ಬಿಟ್ಟಿದೆ. ಈ ಶಾಲೆಗಳಲ್ಲಿ ಭದ್ರತೆ ಕುಸಿತುತ್ತಿರುವುದು ಆತಂಕ ಮೂಡಿಸುವಂತಿದೆ.

1) ಸತೀಶ್, ಸಿದ್ದಾಪುರದ (ಗಂಗಾವತಿ) ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ. ನೀರು ಕುಡಿಯಲು ಹೋಗಿ ಬಾವಿಗೆ ಬಿದ್ದು ಸಾವನ್ನಪ್ಪಿದ.

2) ಬುಡ್ಡೆಪ್ಪ, ಕೊಪ್ಪಳದ ಮೊರಾರ್ಜಿ ವಸತಿ ಶಾಲೆ. ರೈಲು ಹಳಿ ಪಕ್ಕದಲ್ಲೆ ಇರುವ ಪ್ರಮೋದ ಕಲ್ಯಾಣ ಮಂಟಪದಲ್ಲಿ ಬಾಡಿಗೆ ಪಡೆಯಲಾಗಿತ್ತು. ಶಿಕ್ಷಕರ ಕಿರುಕಿಳ ತಾಳಲಾಗದೆ ರೈಲು ಹಳಿಗೆ ಬಿದ್ದು ಸಾವನ್ನಪ್ಪಿದ.

3) ಗಣೇಶ್ ಲಮಾಣಿ, ಮುದ್ದೇಬಿಹಾಳ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ. ಹೊಂಡದಲ್ಲಿ ಬಿದ್ದು ಸಾವು.

4) ವಿಶ್ವನಾಥ್ , ಮಸ್ಕಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ. ಹಾವು ಕಚ್ಚಿ ಸಾವು. ಅದೇ ವಸತಿ ಶಾಲೆಯ ಇನ್ನೊಬ್ಬ ವಿದ್ಯಾರ್ಥಿ ಕಾಲುವೆಗೆ ಬಿದ್ದು ಸಾವು.

5) ಐಶ್ವರ್ಯ, ಕಾರಿಗನೂರು (ದಾವಣಗೆರೆ) ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ. ಅನುಮಾನಾಸ್ಪದ ಸಾವು.

6) ಪೃಥ್ವಿರಾಜ್, ಕಾರಿಕೇರಿ (ಹಾಸನ) ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ. ನೇಣು ಬಿಗಿದುಕೊಂಡು ಸಾವು.

7) ಅಶ್ವಿನಿ, ಯಲಬುರ್ಗಾದ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ. ಋತುಸ್ರಾವ ದ ವೇಳೆ ಅಧಿಕ ರಕ್ತ ಹೋದ ಕಾರಣ ಸಾವು.

8 ) ಬಸವರಾಜ ನಾಗಡದಿನ್ನಿ.ಇಲ್ಲದಿರುವು(ದೇವದುರ್ಗ) ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ. ಕೆರೆಗೆ ಬಿದ್ದು ಸಾವು.

ಈ ಒಂಬತ್ತು ವಿದ್ಯಾರ್ಥಿಗಳ ಸಾವಿನ ಪ್ರಕರಣ ನೋಡುತ್ತಿದ್ದರೆ (ಸಾವಿನ ಸಂಖ್ಯೆ ಇನ್ನೂ ಹೆಚ್ಚಿದೆ) ಶಾಲೆಗಳಲ್ಲಿರುವ ಸಿಬ್ಬಂದಿಗಳ ನಿರ್ಲಕ್ಷ್ಯ, ಕಿರುಕುಳ, ಕಾಂಪೌಂಡ್ ಇಲ್ಲದಿರುವುದು, ಕುಡಿಯುವ ನೀರು ಇಲ್ಲದಿರುವುದು, ಈ ವಸತಿ ಶಾಲೆಗಳಲ್ಲಿ ಭದ್ರತೆ ಇಲ್ಲದಿರುವುದನ್ನು ಕಾಣಿಸುತ್ತದೆ.

ಸಾವಿರಾರು ಕನಸನ್ನು ಹೊತ್ತ ವಸತಿ ಶಾಲೆಯಲ್ಲಿರುವ ಕಂದಮ್ಮಗಳ ಬಲಿಗೆ ಯಾರು ಹೊಣೆ? ಕುಟುಂಬಕ್ಕೆ ಯಾರು ಆಶ್ರಯ? ಸರಕಾರ 2 ಲಕ್ಷ, 5 ಲಕ್ಷ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ಆದರೆ ಅದು ಸಾವಿನ ಸಂಖ್ಯೆಯನ್ನು ಇಳಿಮುಖದೆಡೆಗೆ ಒಯ್ಯುತ್ತಿಲ್ಲ.

ಇನ್ನಾದರೂ ನಿರ್ಲಕ್ಷ್ಯವನ್ನು ಬದಿಗಿರಿಸಿ ಮಕ್ಕಳ ಭವಿಷ್ಯ ರೂಪಿಸಲು ಸರಕಾರ, ಅಧಿಕಾರಿಗಳು, ಸಿಬ್ಬಂದಿ ಮುಂದಾಗಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆಯವರ ಮುತುವರ್ಜಿ ಇನ್ನಷ್ಟು ಹೆಚ್ಚಾಗಬೇಕು. ವಸತಿ ಶಾಲೆಯ ಮಕ್ಕಳ ಬದುಕು ಹಸನಾಗಬೇಕು. ಆ ಮೂಲಕ ಕುಟುಂಬ, ದೇಶ, ಸಮಾಜ ನೆಮ್ಮದಿಯಿಂದಿರಲು ಸಾಧ್ಯ.

(ಲೇಖಕರು ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ರಾಜ್ಯ ಕಾರ್ಯದರ್ಶಿ)