ಬಿಎಂಟಿಸಿ ಮುಖ್ಯಸ್ಥರಿಗೊಂದು ಬಹಿರಂಗ ಪತ್ರ
ವಿಚಾರ

ಬಿಎಂಟಿಸಿ ಮುಖ್ಯಸ್ಥರಿಗೊಂದು ಬಹಿರಂಗ ಪತ್ರ

ಕೆಲವು ನಿರ್ವಾಹಕರು ಹಿರಿಯ ನಾಗರೀಕರಿಗೆ ರಿಯಾಯಿತಿ ಟಿಕೇಟು ಕೊಡುವುದು ಬೇಸರದ ಅಥವಾ ಹೆಚ್ಚು ಹೊರೆಯ ಕೆಲಸ ಎಂದುಕೊಳ್ಳುತ್ತಾರೆ. ಇಂಥಹ ಅನುಭವಗಳು ನನಗೆ ಮತ್ತೆ ಮತ್ತೆ ಮರುಕಳಿಸಿವೆ.

ಇವರಿಗೆ,

ವಿ. ಪೊನ್ನುರಾಜ್

ವ್ಯವಸ್ಥಾಪಕ ನಿರ್ದೇಶಕರು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಬೆಂಗಳೂರು ಮಹಾನಗರ ಸಾರಿಗೆಯ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರೀಕರ ಸಂಖ್ಯೆ ದೊಡ್ದದೇ ಇದೆ. ಈ ದೊಡ್ಡ ಸಂಖ್ಯೆಯ ಜನರ ಕುಂದು ಕೊರತೆಗಳೂ ನೂರಾರು. ಆದರೆ ಅವುಗಳಲ್ಲಿ ಹೆಚ್ಚಿನವು ಬಗೆಹರಿಸಬಹುದಾದ ಸಮಸ್ಯೆಗಳು.

ಹಿರಿಯರಿಗೆ ಹೆಚ್ಚಿನ ಸಂದರ್ಭದಲ್ಲಿ ಸಮಸ್ಯೆ ಉಂಟು ಮಾಡುವುದು ಗುರುತಿನ ಚೀಟಿಗಳು. ಅದು ಬಿಟ್ಟರೆ ಹಿರಿಯರಿಗೆ ಕಾಯ್ದಿರಿಸಿದ ಜಾಗಗಳಲ್ಲಿ ಹಿರಿಯಲ್ಲದವರು ಕುಳಿತುಕೊಳ್ಳುವ ಪ್ರಕರಣಗಳೂ ಇವೆ. ಸರಕಾರ ಹಿರಿಯ ವಯಸ್ಸಿನವರಿಗೆ ಟಿಕೇಟು ದರದಲ್ಲಿ ವಿಧಿಸಿರುವ ರಿಯಾಯಿತಿಯೇ ಅನೇಕ ನಿರ್ವಾಹಕರಿಗೆ ಸಹಿಸದಾಗಿದೆ. ಇದರ ಜತೆಗೆ ಮೊದಲಿನಿಂದಲೂ ಹಿರಿಯರು ಎಂದು ದೃಢೀಕರಿಸುವ ಗುರುತಿನ ಚೀಟಿಯ ಬಗ್ಗೆ ಒಂದಲ್ಲಾ ಒಂದು ರೀತಿಯ ಗೊಂದಲವಿದೆ.

ಆರಂಭದಲ್ಲಿ ಸಾರಿಗೆ ಇಲಾಖೆ ನೀಡುವ ಗುರುತಿನ ಚೀಟಿಗಷ್ಟೇ ಮಾನ್ಯತೆ ಇತ್ತು. ಈಗ ನಿಯಮ ಬದಲಾಗಿದೆ. ಹಿರಿಯರ ನಾಗರೀಕರು ತಮ್ಮ ವಯಸ್ಸನ್ನು ದೃಢೀಕರಿಸುವಂತಹ ಯಾವುದೇ ಅಧಿಕೃತ ಗುರುತು ಚೀಟಿ ಇದ್ದಲ್ಲಿ ರಿಯಾಯಿತಿ ಟಿಕೇಟು ಪಡೆಯಲು ಅರ್ಹರು ಎಂಬ ತೀರ್ಮಾನಕ್ಕೆ ಸಾರಿಗೆ ಸಂಸ್ಥೆಗಳು ಬಂದಿವೆ. ಇದನ್ನು ಬಸ್ಸಿನ ನಿರ್ವಾಹಕರಿಗೆ ತಿಳಿಸಿರುತ್ತಾರೆ ಎನ್ನುವುದು ಶ್ರೀಸಾಮಾನ್ಯರ ನಂಬಿಕೆ. ಹೆಚ್ಚಿನ ಸಮಯದಲ್ಲಿ ಇದು ನಿಜವೂ ಹೌದು.

ಆದರೆ ಕೆಲವೊಮ್ಮೆ ಕೆಲವು ನಿರ್ವಾಹಕರು ಹಿರಿಯ ನಾಗರೀಕರಿಗೆ ರಿಯಾಯಿತಿ ಟಿಕೇಟು ಕೊಡುವುದು ಬೇಸರದ ಅಥವಾ ಹೆಚ್ಚು ಹೊರೆಯ ಕೆಲಸ ಎಂದುಕೊಳ್ಳುತ್ತಾರೆ. ಇಂಥಹ ಅನುಭವಗಳು ನನಗೆ ಮತ್ತೆ ಮತ್ತೆ ಮರುಕಳಿಸಿವೆ. ಆದರೆ ನಿನ್ನೆಯಷ್ಟೇ ಮರುಕಳಿಸಿದ ಇಂತಹದೊಂದು ಘಟನೆ ಬಹಳ ಅಪಮಾನ ಉಂಟುಮಾಡಿದ ಕಾರಣ ನನ್ನಲ್ಲಿರುವ ದಾಖಲೆಗಳೊಂದಿಗೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ.

ಬಿಎಂಟಿಸಿ ಮುಖ್ಯಸ್ಥರಿಗೊಂದು ಬಹಿರಂಗ ಪತ್ರ

ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿ ಗೇಟಿಗೆ ಜರಗನಹಳ್ಳಿಯಿಂದ ಹೋಗಿಬರುವ ಪ್ರಯಾಣಿಕ ನಾನು. ಹಿರಿಯ ನಾಗರೀಕನಾಗಿದ್ದೇನೆ ಎನ್ನುವುದಕ್ಕೆ ಭಾರತ ಸರಕಾರ ನೀಡಿರುವ ಮತದಾರರ ಗುರುತು ಚೀಟಿ, ವಾಹನ ಪರವಾನಗಿ ಪತ್ರ ಸದಾ ನನ್ನ ಬಳಿ ಇರುತ್ತದೆ. ಬಸ್ಸಿನ ನಿರ್ವಾಹಕರು ಕೇಳುವುದಕ್ಕೆ ಮುಂಚಿತವಾಗಿಯೇ ಅದನ್ನು ತೋರಿಸುವ ಹುಮ್ಮಸ್ಸು ನನ್ನದು . ನಿನ್ನೆಯ ದಿನ 27/09/2018ರಂದು ಮಧ್ಯಾಹ್ನ 12ರ ಸಮಯದಲ್ಲಿ ಸೋಮನಹಳ್ಳಿಯ ಕಡೆಯಿಂದ ಬಂದ ಬಸ್ಸು ಹತ್ತಿ ಖಾಲಿ ಇದ್ದ (ಅಪರೂಪಕ್ಕೊಮ್ಮೆ) ಆಸನದಲ್ಲಿ ಕುಳಿತು ‘ಹಿರಿಯ’ ಎಂದು ಹೇಳಿ ಸರಿಯಾದ ಮೊತ್ತ (ರೂ. 12) ಕೊಟ್ಟೆ. ನಿರ್ವಾಹಕರು ಚೀಟಿ ಕೊಡುವ ಯಂತ್ರದ ಗುಂಡಿಗಳನ್ನು ಒತ್ತಿ ಮುದ್ರಿತ ಚೀಟಿ ಕೊಟ್ಟು ಗುರುತು ಚೀಟಿ ತೋರಿಸಿ ಎಂದರು. ಆಗ ನನ್ನ ಬಳಿ ಇದ್ದ ಮತದಾರನ ಗುರುತು ಚೀಟಿ ತೋರಿಸಿದೆ. ಅದನ್ನು ನೋಡಿದ ಆತ ‘ನಿನ್ನ ವಯಸ್ಸು ನನಗಿಂತ ಕಡಿಮೆ ಇದೆ ಇದರಲ್ಲಿ’ ಎಂದು ಒಂದು ತೆರನಾದ ನಿಂದಿಸುವ, ಅಪಮಾನಿಸುವ ದನಿಯಲ್ಲಿ ಹೇಳಿದ. ವಿವರಿಸುವ ಪ್ರಯತ್ನ ಮಾಡಿ ಬೇಸತ್ತೆ. ಆತನಿಗೆ ಗುರುತು ಚೀಟಿಯಲ್ಲಿ ಇದ್ದ ವಯಸ್ಸು ಇಂತಿಷ್ಟು; ಅದು ಇಂತಹ ಇಸವಿಯಲ್ಲಿ ಮುದ್ರಿತವಾಗಿದ್ದು ಎನ್ನುವುದು ಸ್ಪಷ್ಟವಾದಂತೆ ತೋರಲಿಲ್ಲ. ಅಥವಾ ತಿಳಿಯಲು ತಾಳ್ಮೆ ಇರಲಿಲ್ಲ. (ಮತದಾರನ ಗುರುತು ಚೀಟಿಯಲ್ಲಿದ್ದ ದಿನಾಂಕ ಸುಮಾರು 20 ವರುಷಗಳ ಹಿಂದಿನದು.) ಇದಾದ ನಂತರ ಆತ …‘ಆಧಾರ್ ಕಾರ್ಡು ತೋರಿಸು, ಇಲ್ಲ ಬೇರೆ ಟಿಕೇಟು ತೋಗೋ,’ ಎಂದು ಒರಟಾಗಿಯೇ ಹೇಳಿದ. ಆತನ ನಡೆ ನುಡಿಗೆ ಬೆದರಿ ಮತ್ತೊಂದು ಚೀಟಿಗೆ ಪೂರ್ಣ ಹಣ ಕೊಟ್ಟು ಚೀಟಿ ಪಡೆದು ಪ್ರಯಾಣ ಮುಂದುವರಿಸಿದೆ.

ಈ ಘಟನೆಯ ಬಳಿಕ ನನಗೆ ಅನಿಸಿದ್ದು ಇಷ್ಟೇ. ಪರಪೀಡನೆಯ ಸ್ವಭಾವದ ವ್ಯಕ್ತಿಗಳು ಇಂತಹ ಹುದ್ದೆಗಳಲ್ಲಿ ತುಂಬಿದ್ದಾರೆ. ಜನಸಾಮಾನ್ಯರೊಂದಿಗೆ ಸದಾಕಾಲ ಬೆರೆಯಬೇಕಿರುವ ಈ ಸಿಬ್ಬಂದಿ (ಪೇದೆ, ಕಂಡಕ್ಟರ್, ಶುಶ್ರೂಷಕ, ಇತ್ಯಾದಿ ಹತ್ತಾರು ಹುದ್ದೆ) ಗಳ ಮನಸ್ಸು ಕೆಲಸಕ್ಕೆ ಸೇರಿದ ಕೆಲ ಸಮಯದ ನಂತರ ಒರಟುತನ, ಪಾಳೇಗಾರಿಕೆ ಮತ್ತು ಪರಪೀಡನೆಯ ಲಕ್ಷಣಗಳಿಂದ ತುಂಬಿ ಬಿಡುತ್ತದೆ. ಈ ಮೂಲಕ ಜನಸಾಮಾನ್ಯರನ್ನು ಹಿಂಸಿಸುವುದು, ನಿಂದಿಸುವುದೇ ತಮ್ಮ ಕರ್ತವ್ಯದ ವಿಧಾನ ಎನ್ನುವಂತಹ ಸ್ವಭಾವ ಇವರಲ್ಲಿ ಗಟ್ಟಿಯಾಗಿ ಬಿಡುತ್ತದೆ. ಇವರಲ್ಲಿ ಬಹುಪಾಲು ಸಾಮಾನ್ಯ ಜನರ ನೆಮ್ಮದಿ ಕೆಡಿಸಿ ಸಿಟ್ಟು, ಆವೇಶಗಳು ಹೆಚ್ಚುವುದಕ್ಕೂ ಕಾರಣರಾಗುತ್ತಾರೆ. ಇಂತಹವರ ವಿರುದ್ಧ ಮಾತಾಡಿದರೆ ಕೆಳ ಹಂತದ ಸಿಬ್ಬಂದಿಯ ಬಗ್ಗೆ ಅಸಡ್ಡೆ, ದರ್ಪ, ಎನ್ನುವಂತಹ ಮಾತುಗಳು ಕೇಳಿ ಬರುತ್ತವೆ.

ಆದರೆ ಹಿರಿಯ ನಾಗರೀಕರು ತಮ್ಮ ಹಕ್ಕನ್ನು ಪಡೆಯುವುದಕ್ಕೂ ಅಡ್ಡಿ ಬರುವ ಇಂತಹ ಸರಕಾರಿ ಸಿಬ್ಬಂದಿಗಳ ಅಸಭ್ಯ ವರ್ತನೆಗಳನ್ನು ಬದಲಾಯಿಸುವ ಕ್ರಮಗಳತ್ತ ಇಲಾಖೆ ಗಮನ ಹರಿಸುತ್ತಿಲ್ಲ ಎನ್ನುವುದೂ ಸ್ಪಷ್ಟ. ಪ್ರತಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರೀಕರ ಬಗ್ಗೆ ಒಂದಿಷ್ಟು ಕಾಳಜಿ ತೋರಿಸುವುದು ಕರ್ತವ್ಯವಷ್ಟೇ ಅಲ್ಲ, ಮಾನವೀಯತೆಯೂ ಹೌದು. ಕೊಂಚ ತಾಳ್ಮೆ, ಗೌರವದಿಂದ ವರ್ತಿಸುವಂತಹ ಸಾಮಾಜಿಕ ಸಂಪರ್ಕದ ಬಗ್ಗೆ ಪ್ರಶಿಕ್ಷಣ, ಅರಿವನ್ನು ಇವರಲ್ಲಿ ಮೂಡಿಸಬೇಕಾಗಿದೆ. ಇದಲ್ಲದೆ ಅಸಭ್ಯ ನಡೆ ನುಡಿಗಳಿಗೆ ಶಿಕ್ಷೆಯ ಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಇಂತಹ ವರ್ತನೆಗಳನ್ನು ಬದಲಾಯಿಸಲು ಸಾಧ್ಯವಿದೆ.

ಸರಕಾರಿ ಬಸ್ಸಿನಲ್ಲಿ ಆಗಾಗ್ಗೆ ಪ್ರಯಾಣ ಮಾಡುವ ನನ್ನಂತಹ ಅದೆಷ್ಟೋ ಹಿರಿಯರ ಮೂಖವೇದನೆಯನ್ನು ಸಾರಿಗೆ ಇಲಾಖೆಯ ಮುಖ್ಯಸ್ಥರು ಅರ್ಥ ಮಾಡಿಕೊಳ್ಳಬೇಕು. ಇಂತಹ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗದಂತೆ ತಡೆಗಟ್ಟಲು ಹಿರಿಯರ ಮೇಲಿನ ದೌರ್ಜನ್ಯದ ಕಾನೂನಿನಡಿ ಕ್ರಮ ಜರುಗಿಸುವ ನಿಟ್ಟಿನಲ್ಲಿಯೂ ಆಲೋಚಿಸಬೇಕು. ಈ ವಿಷಯಗಳ ಮಹತ್ವವನ್ನು ಸಿಬ್ಬಂದಿ ವರ್ಗಕ್ಕೆ ಮೇಲಿಂದ ಮೇಲೆ ಮನವರಿಕೆ ಮಾಡಿಸುವುದು ಮುಖ್ಯ. ಇನ್ನು ತಕ್ಷಣದಲ್ಲಿ, ಆಧಾರ್ ಒಂದು ಗುರುತಿನ ಚೀಟಿಯಲ್ಲ ಎನ್ನುವುದನ್ನು ಪ್ರಚಾರ ಮಾಡಬೇಕಿದೆ.

(ಲೇಖಕರು ರಾಜ್ಯದ ಖ್ಯಾತ ಮನೋ ವಿಜ್ಞಾನಿಗಳು)