samachara
www.samachara.com
ಕರುಣಾನಿಧಿ ಸಾವು & ದ್ರಾವಿಡನಾಡೆನ್ನುವ ದುಂಡು ಹೇಳಿಕೆಗಳು
ವಿಚಾರ

ಕರುಣಾನಿಧಿ ಸಾವು & ದ್ರಾವಿಡನಾಡೆನ್ನುವ ದುಂಡು ಹೇಳಿಕೆಗಳು

ಅಣ್ಣಾದೊರೈ ಕಟ್ಟಿ ಬೆಳೆಸಿದ ‘ದ್ರಾವಿಡ ಕಳಗಂ’ ಪಕ್ಷವನ್ನು ಕುಟುಂಬದ ಪಕ್ಷವಾಗಿಸಿ, ತಮ್ಮ ಮಕ್ಕಳಿಗೆ- ಆಸ್ತಿ ಹಂಚಿದಂತೆ- ಹಂಚಿಹೋಗಿರುವುದು ಮಾದರಿ ದ್ರಾವಿಡ ರಾಜಕಾರಣವಾ? 

ಅನೇಕರು ‘ದ್ರಾವಿಡ ಸೂರ್ಯ’ ಕರುಣಾನಿಧಿಯವರ ವಯೋಸಹಜ ಸಾವಿಗೆ ಅತಿಯಾಗಿಯೇ ವ್ಯಾಕುಲಗೊಂಡಿರುವಂತೆಯೂ, ಭಾವುಕರಾಗಿರುವಂತೆಯೂ ಕಾಣುತ್ತಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ದಕ್ಷಿಣ ಭಾರತೀಯರಿಗೆ, ಅದರಲ್ಲೂ ಬ್ರಾಹ್ಮಣ್ಯ ರಾಜಕಾರಣದ ಆರ್ಯತ್ವಕ್ಕೆ ವಿರುದ್ಧವಾಗಿ, ದ್ರಾವಿಡ ಅಸ್ಮಿತೆಯ ಸಾಂಸ್ಕೃತಿಕ ರಾಜಕಾರಣ‌ವನ್ನು ಪ್ರೀತಿಸುವವರಿಗೆ, ಬ್ರಾಹ್ಮಣ್ಯದ ಕಾರ್ಮೋಡ ತಂದಿರುವ ಆತಂಕಗಳ ಹಿನ್ನೆಲೆಯಲ್ಲಿ ಕರುಣಾನಿಧಿಯವರ ಸಾವು ಸಹಜವಾಗಿಯೇ ಅಲುಗಾಡಿಸಿದೆ ಮತ್ತು ಭಾವುಕಗೊಳಿಸಿದೆ.

ಹೀಗೆ ಭಾವುಕಗೊಳ್ಳುತ್ತಲೇ ತಮಿಳುನಾಡಿನ 'ದ್ರಾವಿಡ' ರಾಜಕಾರಣವನ್ನು ಪ್ರಶ್ನಾತೀತವಾಗಿ ಬ್ರಾಹ್ಮಣ್ಯದ ವಿರುದ್ದದ ಹೋರಾಟಕ್ಕೆ ದೊಡ್ಡ ಮಾದರಿ ಎಂಬಂತೆ ಮತ್ತು ಈ ದ್ರಾವಿಡ ರಾಜಕಾರಣ ಮಾಡಿದ ಕರುಣಾನಿಧಿ ಪ್ರಾದೇಶಿಕ ಸಾಂಸ್ಕೃತಿಕ ನಾಯಕತ್ವಕ್ಕೆ ದೊಡ್ಡ ಮಾದರಿಯಾಗಿ ಭಾವಿಸಹೊರಟಿದ್ದಾರೆ. ಸಾಮಾನ್ಯವಾಗಿ ತಾವು ನಂಬುವ ಐಡಿಯಾಲಜಿಗೆ ಪೂರಕವಾದ ಯಾವುದೇ ನಾಯಕನ ಸಾವಾದರು ಇಂತಹ ಪ್ರಶ್ನಾತೀತ ಪೊರೆಗಳು ಆವರಿಸುವಂತೆ ಮಾಡುತ್ತವೆ. ಈಗ ಕರುಣಾನಿಧಿಯವರ ಜೊತೆಯಲ್ಲಿ ತಮಿಳುನಾಡು ಎನ್ನುವ ದ್ರಾವಿಡ ರಾಜಕಾರಣದ ವಿಚಾರದಲ್ಲೂ ಈ ಪೊರೆಯಾರಿಸಿಕೊಂಡಂತೆ ಕಾಣಿಸುತ್ತಿದೆ.

ಆದರೆ, ಕರುಣಾನಿಧಿ ಮತ್ತು ತಮಿಳುನಾಡಿನ ದ್ರಾವಿಡ ಅಸ್ಮಿತೆಯ ರಾಜಕಾರಣದ ಒಳಗಿಳಿದು ನೋಡಿದರೆ ಅನೇಕ ಸೋಲುಗಳೂ ವೈರುಧ್ಯಗಳೂ ಇವೆ. 1914ರಲ್ಲಿ ನಟೇಶ್ ಮೊದಲಿಯಾರರ ‘ದ ದ್ರವಿಡಿಯನ್ ಹೋಮ್’, 1916ರಲ್ಲಿ ‘ಸೌತ್ ಇಂಡಿಯನ್ ಪೀಪಲ್ಸ್ ಅಸೋಸಿಯೇಷನ್’ ಹೆಸರಿನ ಸಂಸ್ಥೆ, ಮತ್ತು ಪೆರಿಯಾರ್ ರಾಮಸ್ವಾಮಿ ನಾಯ್ಕರ ‘ಆತ್ಮಗೌರವ’ ಚಳವಳಿಗಳ ಮೂಲಕ ಸ್ಪಷ್ಟ ರೂಪ ಪಡೆದ ದ್ರಾವಿಡ ಅಸ್ಮಿತೆಯ ಚಳವಳಿ ಮತ್ತು ರಾಜಕಾರಣ ಬ್ರಾಹ್ಮಣ್ಯವನ್ನು ಎದುರಾಕಿಕೊಂಡಷ್ಟೇ ತೀವ್ರವಾಗಿ ದಲಿತರನ್ನು ಒಳಗೊಳ್ಳಲಿಲ್ಲ. ಆರಂಭದ ದ್ರಾವಿಡ ಚಳವಳಿಗಳಲ್ಲಿ, ಪೆರಿಯಾರರ ಹೋರಾಟಗಳಲ್ಲಿ ದಲಿತರನ್ನು ಒಳಗೊಳ್ಳುವುದು ಇತ್ತಾದರು, ಕರುಣಾನಿಧಿಯ ಕಾಲಕ್ಕೆ ಅವು ಮಾಸಿದ್ದವು.

ಸದ್ಯಕ್ಕೆ ಭಾರತದ ಜಾತಿರಾಜಕಾರಣದಲ್ಲಿ ಜಾತಿ ದೌರ್ಜನ್ಯಗಳ ಮಾಲೀಕರೂ ಮತ್ತು ಕಾಲಾಳುಗಳು ಎರಡೂ ಆಗಿರುವ ಶೂದ್ರರು ತಮಿಳುನಾಡಿನ ದ್ರಾವಿಡ ರಾಜಕಾರಣದ ಮಾಲೀಕರು. ಹೊರನೋಟಕ್ಕೆ ತಮಿಳರು ಪ್ರಾದೇಶಿಕ ಭಾಷಾ ಅಸ್ಮಿತೆಯ ಕಡುಮೋಹಿಗಳು, ಬ್ರಾಹ್ಮಣ್ಯದ ವಿರೋಧಿ ತತ್ವದಲ್ಲಿ ಇತರರಿಗೆ ಮಾದರಿ ಎಂಬಂತಿದ್ದರು, ಇವೆಲ್ಲಾ ದುಂಡುಹೇಳಿಕೆಗಳಷ್ಟೆ.

ಇದರಾಚೆಗೆ ತಮಿಳು ‘ದ್ರಾವಿಡ ಸೂರ್ಯ’ನ ನಾಡಲ್ಲಿ ದಲಿತರನ್ನು ಒಳಗೊಳ್ಳದ ಶೂದ್ರ ದ್ರಾವಿಡ ರಾಜಕಾರಣವಿದೆ. ಉತ್ತರ ಭಾರತದ ಬೇರಾವುದೇ ರಾಜ್ಯಕ್ಕೆ ಸಮವಾಗುವಂತೆ ತಮಿಳುನಾಡಿನಲ್ಲಿ ದಲಿತರ ಮೇಲೆ ಜಾತಿ ದೌರ್ಜನ್ಯಗಳು ನಡೆಯುವುದು ಮಾಮೂಲಿಯಾಗಿದೆ. ಜಾತಿ ದೌರ್ಜನ್ಯಗಳು ಅತಿ ಹೆಚ್ಚು ನಡೆಯುವ ಭಾರತದ ಟಾಪ್ 15 ರಾಜ್ಯಗಳಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳೂ ಇವೆ. ಇದರಲ್ಲಿ ವೇಮನನ ಆಂಧ್ರ ಪ್ರದೇಶ 5ನೇ ಸ್ಥಾನದಲ್ಲಿ ಬಸವಣ್ಣನ ಕರ್ನಾಟಕ 6ನೇ ಸ್ಥಾನ, ಕಾಮ್ರೇಡುಗಳ ಕೇರಳ 12ನೇ ಸ್ಥಾನದಲ್ಲಿ, ಮತ್ತು ಪೆರಿಯಾರರ ದ್ರಾವಿಡ ರಾಜಕಾರಣದ ತಮಿಳುನಾಡು 11ನೇ ಸ್ಥಾನದಲ್ಲಿವೆ. ಕಳೆದ ವರ್ಷ ತಮಿಳುನಾಡಿನಲ್ಲಿ 25 ದಲಿತ ಹೋರಾಟಗಾರರು ಕೊಲೆಯಾಗಿದ್ದಾರೆ. ಭಾರತದ ಎಲ್ಲ ರಾಜ್ಯಗಳಲ್ಲೂ ಇರುವ ಅಸ್ಪಶ್ಯತೆಯ ಆಚರಣೆ, ದಲಿತರ ಮೇಲಿನ ಸಾಮಾಜಿಕ ಬಹಿಷ್ಕಾರ, ಅತ್ಯಾಚಾರ, ಕೊಲೆಗಳು ತಮಿಳುನಾಡಿನಲ್ಲೂ ನಡೆಯುತ್ತಿವೆ.

ತಮಿಳುನಾಡಿನಲ್ಲಿ 1967 ರಿಂದೀಚೆಗೆ ಅಧಿಕಾರ ರಾಜಕಾರಣ ಡಿಎಂಕೆ, ಎಐಡಿಎಂಕೆ ಸುತ್ತ ಕೇಂದ್ರಿಕೃತವಾಗಿಯೇ ಇದೆ. 1969ರಿಂದ 2018 ರ ಇಲ್ಲಿಯವರೆಗೂ, ಹೆಚ್ಚು ಕಡಿಮೆ‌ ಈ ಐವತ್ತು ವರ್ಷಗಳ ತಮಿಳುನಾಡಿನ ಅಧಿಕಾರ ಮತ್ತು ಪಕ್ಷ ರಾಜಕಾರಣಗಳೆರಡು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಾಯಕಾರಿಯಾದ ಏಕವ್ಯಕ್ತಿ ಕೇಂದ್ರಿತವಾಗಿ ಕರುಣಾನಿಧಿ, ಎಂಜಿಆರ್, ಜಯಲಲಿತ ಈ ಮೂವರ ಕೈಯಲ್ಲೇ ಇದ್ದವು. ಈ ಮೂವರು ತಾವು ಇದ್ದಷ್ಟು ಕಾಲ ಪಕ್ಷದ ಅಧಿಕಾರ ಮತ್ತು ಚುನಾವಣೆಯಲ್ಲಿ ಗೆದ್ದಾಗ ರಾಜ್ಯವಾಳುವ ಅಧಿಕಾರಗಳೆರಡನ್ನು ಸಂಪೂರ್ಣ ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದಾರೆ. ಪ್ರಜಾಪ್ರಭುತ್ವದ ಆದರ್ಶಮಯ ಚಲನೆಗೆ ಕಾರಣವಾಗುವ ಸಾಮೂಹಿಕ ನಾಯಕತ್ವವನ್ನು ಪಕ್ಷದಲ್ಲೂ, ಅಧಿಕಾರದಲ್ಲಿ ಇದ್ದಾಗಲೂ ಬೆಳೆಸದೆ ತಾವು ಸಾಯುವುದರ ಜೊತೆಯಲ್ಲೇ ತಮ್ಮ ಪಕ್ಷಗಳ ನಾಯಕತ್ವದಲ್ಲಿ ಶೂನ್ಯಗಳನ್ನು ತುಂಬಿಸುವ ಮೂಲಕ ಈ ಮೂವರು ಕೆಟ್ಟ ಮಾದರಿಗಳನ್ನು ನಿರ್ಮಿಸಿಹೋಗಿದ್ದಾರೆ. ಎಐಡಿಎಂಕೆಯಲ್ಲಿ ಎಂಜಿಆರ್ ಸತ್ತಾಗ ಎದ್ದಿದ್ದ ನಾಯಕತ್ವದ ಭಯಾನಕ ಬಿಕ್ಕಟ್ಟು, ಜಯಲಲಿತಾ ಸತ್ತು ಈಗ ಎದ್ದಿರುವ ಬಿಕ್ಕಟ್ಟು, ಡಿಎಂಕೆಯಲ್ಲಿ ಕರುಣಾನಿಧಿಯವರ ಸಾವಿನ ಮೂಲಕವೂ ಇದೇ ನಾಯಕತ್ವದ ಬಿಕ್ಕಟ್ಟಿನ ಪ್ರಶ್ನೆಗಳು ಎದ್ದಿವೆ. ಈ ಮೂವರೂ ತಮಿಳುನಾಡಿನ ರಾಜಕಾರಣದಲ್ಲಿ ‘ಸಿದ್ಧಾಂತವನ್ನು ವ್ಯಕ್ತಿ ಕೇಂದ್ರಿತ ಭ್ರಮೆಗಳ ಜೊತೆ ಬೆರೆಸಿ ಆಳುವ ಸರ್ವಾಧಿಕಾರಿ ಗುಣ’ದ‌ ಯಶಸ್ವಿ ಮಾದರಿಗಳನ್ನು ಕೊಟ್ಟು ಹೋಗಿದ್ದಾರೆ. ಇವೆಲ್ಲಾ ನಾವು ಆದರ್ಶವೆಂದುಕೊಳ್ಳಬಹುದಾದ ದ್ರಾವಿಡ ರಾಜಕಾರಣದ ನಾಡಿನಲ್ಲಿ ನಡೆದಿದೆ.

ಇನ್ನು ಪ್ರಜಾಪ್ರಭುತ್ವದ ದೊಡ್ಡ ಕಾಯಿಲೆಯಾಗಿ ಬೇರುಬಿಟ್ಟಿರುವ ಕುಟುಂಬ ರಾಜಕಾರಣವನ್ನು ಕರುಣಾನಿಧಿಯಂತಹ ‘ವೈಚಾರಿಕ–ಸಮಾಜವಾದಿ ಮನುಷ್ಯ’ ಸಹ ತೀವ್ರವಾಗಿಯೇ ಅಪ್ಪಿಕೊಂಡರು. ಅಣ್ಣಾದೊರೈ ಕಟ್ಟಿ ಬೆಳೆಸಿದ ‘ದ್ರಾವಿಡ ಕಳಗಂ’ ಪಕ್ಷವನ್ನು ಕುಟುಂಬದ ಪಕ್ಷವಾಗಿಸಿ ತಮ್ಮ ಮಕ್ಕಳಿಗೆ ಆಸ್ತಿ ಹಂಚಿದಂತೆ ಹಂಚಿಹೋಗಿರುವುದು ಮಾದರಿ ದ್ರಾವಿಡ ರಾಜಕಾರಣ ಎನ್ನಲು ಸಾಧ್ಯವೇ?