samachara
www.samachara.com
ಮಂತ್ರಿಗಳೇ, ಬೀಗ ಜಡಿಯುವ ಬದಲು ಮಕ್ಕಳು ಸರಕಾರಿ ಶಾಲೆಗೆ ಬರುವಂತ ಕೆಲಸ ಮಾಡಿ
ವಿಚಾರ

ಮಂತ್ರಿಗಳೇ, ಬೀಗ ಜಡಿಯುವ ಬದಲು ಮಕ್ಕಳು ಸರಕಾರಿ ಶಾಲೆಗೆ ಬರುವಂತ ಕೆಲಸ ಮಾಡಿ

ಹುಟ್ಟಿದ ದಿನದಿಂದಲೇ ಕಾಣಿಸಿಕೊಳ್ಳುವ ಕಲಿಕೆ ಎನ್ನುವ ಕ್ರಮ ಒಂದು ಸಹಜ ಶಕ್ತಿ; ಈ ಶಕ್ತಿಯೂ ಪರಿಸರ ಮತ್ತು ಮನೆಯ ವಾತಾವರಣದ ಮೂಲಕ ಬಲಗೊಳ್ಳುತ್ತ ಮುಂದುವರೆಯುತ್ತದೆ. ಭಾಷೆಯೂ ಸಹ ಇಂತಹ ಕಲಿಕೆಯೊಂದಿಗೆ ಬೆರೆತಿರುವಂತಹ ಗುಣ.

ಕಳೆದ ಹಲವಾರು ದಶಕಗಳಿಂದ ಶಾಲಾ ಶಿಕ್ಷಣದ ಮಾಧ್ಯಮವು ಇಂಗ್ಲೀಷ್‌ ಭಾಷೆಯಲ್ಲಿಯೇ ಇರಬೇಕು ಎನ್ನುವಂತಹ ಮನೋಭಾವವನ್ನು ಪೋಷಿಸುತ್ತಾ ಬರಲಾಗುತ್ತಿದೆ. ರಾಜಕಾರಣಿಗಳು, “ಬಾಬು”ಗಳ ಸಮೂಹ ಇಂತಹದೊಂದರ ಹಿಂದೆ ಬೆಂಬಲವಾಗಿ ನಿಂತಿರುವುದು ತಿಳಿಯದ ಸಂಗತಿಯಲ್ಲ. ಇದು ಸ್ವಹಿತವನ್ನು ಕಾಪಾಡುವ ವ್ಯವಸ್ಥೆಯೂ ಹೌದು ಎನ್ನುವುದನ್ನು ಮರೆಮಾಚುವುದು ಸಂಪ್ರದಾಯವಾವಗಿದೆ.  ಆದರೆ, ಮನೋವೈಜ್ಞಾನಿಕ ತತ್ವಗಳು, ಅಧ್ಯಯನಗಳು ಹೇಳುವ, ತೋರಿಸಿಕೊಟ್ಟಿರುವ ಸಂಗತಿಗಳು ಈ ಮನೋಭಾವನೆಯನ್ನು ಅಲ್ಲಗೆಳೆಯುತ್ತವೆ.

ಹುಟ್ಟಿದ ದಿನದಿಂದಲೇ ಕಾಣಿಸಿಕೊಳ್ಳುವ ಕಲಿಕೆ ಎನ್ನುವ ಕ್ರಮ ಒಂದು ಸಹಜ ಶಕ್ತಿ; ಈ ಶಕ್ತಿಯೂ ಪರಿಸರ ಮತ್ತು ಮನೆಯ ವಾತಾವರಣದ ಮೂಲಕ ಬಲಗೊಳ್ಳುತ್ತ ಮುಂದುವರೆಯುತ್ತದೆ. ಭಾಷೆಯೂ ಸಹ ಇಂತಹ ಕಲಿಕೆಯೊಂದಿಗೆ ಬೆರೆತಿರುವಂತಹ ಗುಣ.  ಹಾಗೆ ನೋಡಿದರೆ ಕಲಿಯುವ ಶಕ್ತಿಯ ಹೆಚ್ಚಳವು ಪರಿಚಯವಿರುವ ಪರಿಸರದ ಭಾಷೆಯ ಮೂಲಕವೇ ಆಗುತ್ತದೆ. ಕಲಿಕೆಯ ವಾತಾವರಣ ಎಂದಾಗ ಕಲಿಯುವುದಕ್ಕೆ ಅಗತ್ಯವಿರುವಂತಹ ಪರಿಸ್ಥಿತಿಗಳು ಸುಲಭವಾಗಿ ಲಭ್ಯವಿರುವಂತಹ ಸ್ಥಿತಿ ಎನ್ನಬಹುದು.

ಮಕ್ಕಳು ಮೊದಲು ಕಲಿಯುವ ವಿಧಾನದಲ್ಲಿ ನೋಡಿ ಕಲಿಯುವುದು, ಆಡಿ ಕಲಿಯುವುದು ಮತ್ತು ಹೇಳಿಸಿಕೊಂಡು ಕಲಿಯುವ ಕ್ರಮಗಳಿರುವುದು ಸಾಮಾನ್ಯ. ಇದರಲ್ಲಿ ಮೊದಲಿನ ಎರಡು ಸ್ಥಿತಿಗಳು ಅತ್ಯುತ್ತಮ ಎನ್ನುವುದಕ್ಕೆ ಬೇಕಾದಷ್ಟು ವೈಜ್ಞಾನಿಕ ವಿವರಣೆಗಳಿವೆ. ವಿಶ್ವದ ಅನೇಕ ದೇಶಗಳ ಬಾಲ್ಯದ ದಿನಗಳ ಕಲಿಕೆಯತ್ತ ಗಮನ ಹರಿಸಿದರೆ ಯಾರಿಗಾದರೂ ಈ ಅಂಶ ತಿಳಿಯುತ್ತದೆ. ಕಲಿಸಿಕೊಡುವ ಕ್ರಿಯೆ ಎಂದಾಗ ಹೊರಗಿನವರಿಂದ ಕಲಿಸಿಕೊಳ್ಳುವುದು ಎನ್ನುವುದಂತೂ ಸ್ಪಷ್ಟ.  ಆಗ ಕಲಿಯುವವರ ಮತ್ತು ಕಲಿಸುವವರ ಆಸಕ್ತಿ, ಶಕ್ತಿಯ ಮಹತ್ವದ ಪಾತ್ರವನ್ನು ಗಮನಿಸಬೇಕಾಗುತ್ತದೆ.  ಕಲಿಸುವವರ ಶಕ್ತಿ ಬಹಳ ಮುಖ್ಯ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ನಮ್ಮ ಇಂದಿನ ಸಮಸ್ಯೆಯೇ ಇದಾಗಿರುತ್ತದೆ.

ಕಲಿಯುವರ ಸಾಮರ್ಥ್ಯದತ್ತ ಗಮನ ಹರಿಸದೆ ಕಲಿಸುವವರತ್ತ ಗಮನ ಹರಿಸುವುದು ಅಥವಾ ಕಲಿಸುವ ಮಾಧ್ಯಮ (ಇಂಗ್ಲೀಷ್‌)ಕ್ಕೆ ಆದ್ಯತೆ ನೀಡುವುದು ಮತ್ತು ಅದರ ಬಗ್ಗೆ ವಿನಾಕಾರಣ ಭಯ, ಆತಂಕ ಮೂಡಿಸುವುದು ಇಂದಿನ ಕುತಂತ್ರದ ವಿದ್ಯಮಾನಗಳಾಗಿ ನಿಂತಿವೆ. ಪ್ರತಿಯೊಂದು ಆರೋಗ್ಯವಂತ ಮಗುವಿನಲ್ಲಿ ಸಹಜವಾಗಿ ಬಂದಿರುವ ಮೊದಲ ಭಾಷೆಯ ಬಗ್ಗೆ ಸರಕಾರಿ ವ್ಯವಸ್ಥೆ ಸದಾ ಅಸಡ್ಡೆ ತೋರಿಸುತ್ತಲೇ ಬಂದಿದೆ ಎನ್ನುವುದಕ್ಕೆ ನಮ್ಮ ಸರಕಾರಿ ಶಾಲೆಗಳೇ ಅತ್ಯುತ್ತಮ ಉದಾಹರಣೆ.

ರಾಜಕಾರಣಿಗಳಿಗೆ ಆಧಿಕಾರಕ್ಕೆ ಬಂದ ಕೆಲವೇ ಸಮಯದಲ್ಲಿ  ವಿಧಾನ ಸೌಧದಲ್ಲಿರುವ ತಮ್ಮ ಕಛೇರಿ/ ಸರಕಾರಿ ಬಂಗಲೆಗಳನ್ನು ದುರಸ್ತಿ ಮಾಡಿಸುವಲ್ಲಿ ಇರುವ ಕಾಳಜಿ ಕುಸಿಯುತ್ತಿರುವ ಶಾಲೆಗಳ ದುರಸ್ತಿಯತ್ತ ಮನಸ್ಸು ಹೋಗುವುದಿಲ್ಲವೇಕೆ? ಬದಲಿಗೆ ಇಂಗ್ಲೀಷ್‌ ಭಾಷಾ ಮಾಧ್ಯಮದ ಕಡೆ ಸರಾಗವಾಗಿ ಕಣ್ಣುಹೊರಳುವುದು ಹೇಗೆ ?  ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸರಿ, ಮೊದಲು ಗಮನ ಹರಿಸುವ ವಿಷಯವೆಂದರೇ ಇಂಗ್ಲೀಷ್‌ ಮಾಧ್ಯಮದ ಶಿಕ್ಷಣ ಬೇಕೆನ್ನುವ ಮನಸ್ಸು. ಆದರೆ ಮಗುವಿನ ಮನೋವಿಕಾಸದಲ್ಲಿ ಭಾಷೆಯ ಮಹತ್ವ ಅಷ್ಟಿಷ್ಟಲ್ಲವೆನ್ನುತ್ತದೆ ಶಿಶುವಿಕಾಸದ ತತ್ವಗಳು.

ಮೊದಲ ಭಾಷೆಯ ಮೂಲಕ ಭಾವ, ಬದುಕುಗಳ ಬಗ್ಗೆ ಯಾವ ಯಂತ್ರವೂ ಕಲಿಸಲಾಗದ ರೀತಿ ಮತ್ತು ವೇಗದಲ್ಲಿ, ತನ್ನ ಬದುಕಿನ ಪರಿಸರವನ್ನು ಆಳುವಷ್ಟು ಸಾಮರ್ಥ್ಯವನ್ನು ಎರಡು ಮೂರು ವರ್ಷಗಳಲ್ಲಿ ಮಗು ಪಡೆಯುತ್ತದೆ. ಮಗು ಈ ಸಹಜ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವಂತಹ ಪ್ರಕ್ರಿಯೆಯನ್ನೇ ಸದಾ ಬಯಸುತ್ತದೆ. ಆದರೆ ಈ ಸಹಜ ಕಲಿಕೆಯ ನಿಯಮವನ್ನು ಬುಡಮೇಲು ಮಾಡುವ ಪ್ರವೃತ್ತಿಯನ್ನು ಸರಕಾರ ಮತ್ತು ಅಸಹಾಯಕ ಪೋಷಕರು ಉತ್ತೇಜಿಸುತ್ತಲೇ ಬಂದಿರುತ್ತಾರೆ. ಜೊತೆಗೆ ಎಳೆಯ ಮಕ್ಕಳ ಮನಸ್ಸನ್ನೂ ಲಾಭದಾಯಕ ವ್ಯಾಪಾರದ ಸರಕನ್ನಾಗಿ ಬಳಸಿಕೊಳ್ಳುವ ಶಿಕ್ಷಣದ ಸಂಸ್ಥೆಗಳ ಹಿಡಿತ ಸರಕಾರ ಮತ್ತು ಕಾನೂನು ಮಾಡುವವರ ಕೈಯಲ್ಲೂ ಇರುವುದು ತಿಳಿಯದ ವಿಷಯವೇನೂ ಅಲ್ಲ.

ವಿಜ್ಞಾನ, ಕಲೆ, ಸಾಹಿತ್ಯ , ವೈದ್ಯಶಾಸ್ತ್ರದಲ್ಲಿ ವಿಶ್ವದ ಗಮನ ಸೆಳೆದಿರುವಂತಹ  ಅನೇಕ ಕನ್ನಡಿಗರು, ತಮ್ಮ ಕಲಿಕೆಯ ಬುನಾದಿ ಗಟ್ಟಿಯಾಗಿದ್ದೇ ಮೊದಲನೆ ಭಾಷೆಯ ಶಿಕ್ಷಣದ ಮೂಲಕ ಎನ್ನುವುದನ್ನು ಸಾರಿ ಸಾರಿ ಹೇಳಿದ್ದಾರೆ. ಹಾಗಿದ್ದಾಗ್ಯೂ ನಮ್ಮ ಪೋಷಕರಲ್ಲಿ ತಮ್ಮ ಮಕ್ಕಳ ಶಿಕ್ಷಣದ ಭವಿಷ್ಯದ ಬಗ್ಗೆ ಆತಂಕ ಮೂಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿರುವುದು ಸರಕಾರದ ನಿಲುವುಗಳೇ ಆಗಿರುತ್ತದೆ. ಆದರೇ ಮಕ್ಕಳ ಶಿಕ್ಷಣವನ್ನು ರೂಪಿಸುವಂತಹ ಬಲವಿರುವುದು ಶಿಕ್ಷಣ ತಜ್ಞರಲ್ಲಿ.  ಮೊದಲ ಭಾಷೆಯಲ್ಲಿ ಕಲಿಕೆ ಶ್ರಮರಹಿತವಾದ ಮತ್ತು ನಿರ್ಭಯದಿಂದ ಕಲಿಯುವ ಮನೋಬಲವನ್ನು ಹೆಚ್ಚಿಸುತ್ತದೆ ಎನ್ನುವುದು ತಿಳಿದಿದ್ದರೂ ಅದನ್ನು ವಿರೋಧಿಸುತ್ತಿರುವುದು ಎಂದಿಗಿಂತಲೂ ಇಂದು ಹೆಚ್ಚಾಗಿದೆ.

ಅದಲ್ಲದೆಯೇ ನಮ್ಮ ನಗರಗಳಲ್ಲೀಗ ಸ್ಥಳೀಯ ಭಾಷೆಯನ್ನು ಆಡದವರೇ ಹೆಚ್ಚಾಗುತ್ತಿರುವುದು ಯಾರಿಗೆ ತಾನೇ ತಿಳಿದಿಲ್ಲ? ಅನ್ಯಭಾಷಿಗರನ್ನು ಸ್ವಾಗತಿಸುವುದರೊಂದಿಗೆ ನಾಡ ಭಾಷೆಯನ್ನು ಕಲಿಯುವುದರ ಅಗತ್ಯವಿಲ್ಲ ಎನ್ನುವಂತಹ ಭಾವನೆ ಮೂಡಿಸುತ್ತಿರುವವರು ಯಾರು? ಸರಕಾರ ಮತ್ತು ರಾಜಕಾರಣಿಗಳಲ್ಲದೇ ಮತ್ತಾರು ಇರಲು ಸಾಧ್ಯ?  ಇಂತಹದೊಂದು ಸ್ವಭಾವ ಮೂಡಿಬಂದಿರುವುದು ಕನ್ನಡದ ರಾಜಕಾರಣಿಗಳಲ್ಲಿಯೇ ಹೆಚ್ಚು ಎನ್ನುವುದು ಕೇವಲ ಸಂದೇಹದ ಅನಿಸಿಕೆಯಲ್ಲ.

ಅನ್ಯಭಾಷಿಕರೆದುರಿಗೆ ಸ್ವಂತ ಕನ್ನಡದಲ್ಲಿ ಮಾತಾಡುವುದಕ್ಕೂ ಹಿಂಜರಿಯವಂತಹ ಪ್ರವೃತ್ತಿ ನಮ್ಮಲ್ಲಿ ಗಾಢವಾಗಿ ಬೇರೂರಿದೆ.  ಹೀಗೆ ಹೇಳವುದಕ್ಕೆ ಕಾರಣಗಳಲ್ಲಿ ಒಂದು ಇದು: ಇಂದು ಬೆಂಗಳೂರಿನ ಹೊರವಲಯದತ್ತ ಸಂಚರಿಸುವ ಬಿಎಂಟಿಸಿ ಬಸ್ಸುಗಳು, ಮೆಟ್ರೋ ರೈಲು, ಟ್ಯಾಕ್ಸಿ ಮತ್ತು ಆಟೋವನಲ್ಲಿ ಹಿಂದಿ ಮಾತುಗಳು ಕೇಳಿಬರುವಷ್ಟು ಕನ್ನಡ ಇಲ್ಲ .ಇಂಗ್ಲೀಷ್‌ ಸಹ ಕೇಳಿಬರುತ್ತದೆ, ಆದರೆ ಹಿಂದಿಯಷ್ಟು ಇಲ್ಲದಿರಬಹುದು ಅಷ್ಟೇ.

ಇನ್ನು ಜಯನಗರ, ಗಾಂಧಿ ಬಜಾರ್‌, ಚಾಮರಾಜಪೇಟೆಗಳು ಹಿಂದಿಯ ನಾಡಾಗುತ್ತಿರುವುದು ನಮ್ಮ ‘ಔದರ್ಯ’ ಎಂದು ಹೆಮ್ಮೆಪಡುವವರೂ ಇದ್ದಾರೆ. ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ. ಬೆಂಗಳೂರಿನ ಬಸವನಗುಡಿ ಬೆಂಗಳೂರಿನಷ್ಟೇ ಹಳೆಯದು ಮತ್ತು ಕನ್ನಡವನ್ನು ಸದಾ ಪೋಷಿಸುತ್ತಾ ಬಂದಿದ್ದಂತಹ ವಲಯ. ಇತ್ತೀಚೆಗೆ ,ಇಲ್ಲಿರುವ ಪ್ರತಿಷ್ಠಿತ ಕಾಲೇಜೊಂದರ ವಾಣಿಜ್ಯ, ವಿಜ್ಞಾನ, ಭಾಷೆಯ ವಿಭಾಗಗಳ ಉಪನ್ಯಾಸಕರ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಬಂದಂತಹ ಅರ್ಜಿಗಳಲ್ಲಿ ಕನ್ನಡ ಗೊತ್ತಿದ್ದವರ ಸಂಖ್ಯೆ ಕೇವಲ 10%!! ಇದಕ್ಕೆ ಕಾರಣಗಳಲ್ಲಿ ಪ್ರಮುಖವಾಗಿದ್ದು ಇಂಗ್ಲೀಷ್‌ ಪತ್ರಿಕೆಯಲ್ಲಿ ಮಾತ್ರ ಜಾಹಿರಾತು ಕೊಟ್ಟಿದ್ದು ಇದ್ದಿರಬಹುದು. ಅಂದರೆ ಇಂಗ್ಲೀಷ್‌ ಕಲಿತ ಕನ್ನಡಿಗರು ಇಂಗ್ಲೀಷ್‌ ದಿನಪತ್ರಿಕೆಗಳನ್ನು ನೋಡುವುದಿಲ್ಲ ಎನ್ನಬಹುದೇ? ಇದಕ್ಕೆ ಉತ್ತರವೆನ್ನುವಂತೆ ಅದೇ ಕಾಲೇಜಿನವರು ಕನ್ನಡ ಪತ್ರಿಕೆಯಲ್ಲಿ ಮತ್ತೊಮ್ಮೆ ಜಾಹಿರಾತು ಕೊಟ್ಟಾಗ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಬಲ್ಲವರಿಂದ ಅರ್ಜಿ ಬಂದಿತ್ತು!

ಇವೆಲ್ಲಾ ಗಮನಿಸಿದಾಗ, ಕನ್ನಡ ಭಾಷೆಯ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಇಂಗ್ಲೀಷ್‌ ಕಲಿಕೆಯೇ ಉತ್ತಮ ಎನ್ನುವಂತಹ ಮನೋಭಾವದ ವಿರುದ್ಧದ ಹೋರಾಟ ನಡೆಯಬೇಕು. ಶಾಲಾ ಮತ್ತು ಕಾಲೇಜು ಶಿಕ್ಷಣ ಕನ್ನಡದಲ್ಲಿಯೇ ಆಗಬೇಕು ಅಥವಾ ಪಡೆಯುತ್ತವೆ ಎನ್ನುವ ಭಾವನೆ ಬಲಗೊಳ್ಳಬೇಕು. ಇದನ್ನು ಕಾರ್ಯರೂಪಕ್ಕೆ ತರಲು ಉಳಿದಿರುವ ಮಾರ್ಗವೆಂದರೇ ಹೋರಾಟವಷ್ಟೇ, ಇದರ ಸೂಚನೆಯಂತೂ ಈಗ ಕಂಡಿದೆ, ಇದು ಮುಂದುವರೆಯುವಂತೆ ಮಾಡುವ ಕೆಲಸ ಕನ್ನಡದ ಅಭಿಮಾನಿಗಳಿಂದ ಮಾತ್ರ ಸಾಧ್ಯ.