samachara
www.samachara.com
‘ನಿಷೇಧಾಧಿಕಾರ’: ಸೈಂಟ್ ಆಗ್ನೆಸ್, ಹಿಜಾಬು ಮತ್ತು ಪ್ರತಿಕ್ರಿಯೆಗಳಲ್ಲಿ ಸಿಗದ ಜವಾಬು
ವಿಚಾರ

‘ನಿಷೇಧಾಧಿಕಾರ’: ಸೈಂಟ್ ಆಗ್ನೆಸ್, ಹಿಜಾಬು ಮತ್ತು ಪ್ರತಿಕ್ರಿಯೆಗಳಲ್ಲಿ ಸಿಗದ ಜವಾಬು

ಸಿಸ್ಟರ್ ಜೆಸ್ವನಾ ಆಗಲಿ ಸೈಂಟ್ ಆಗ್ನೇಸ್ ಕಾಲೇಜಿನ ಆಡಳಿತ ಮಂಡಳಿಯಾಗಲಿ ಹಿಜಾಬ್ ಕುರಿತು ತಮಗಿರುವ ಪೂರ್ವಾಗ್ರಹಗಳನ್ನು ಪ್ರದರ್ಶನಕ್ಕಿಡುವ ಮೊದಲು ಈ ಘಟನೆಯನ್ನೊಮ್ಮೆ ನೆನಪಿಸಿಕೊಳ್ಳಬೇಕಿತ್ತಲ್ಲವೆ?

ದಾದಾ ಖಲಂದರ್

ದಾದಾ ಖಲಂದರ್

ತಮ್ಮ ಕಾಲೇಜಿನೊಳಗೆ ವಿದ್ಯಾರ್ಥಿನಿಯರು ‘ಶಿರವಸ್ತ್ರ’ (ಸ್ಕಾರ್ಫ್/ಹಿಜಾಬ್) ಧರಿಸಬಾರದು ಎಂಬ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಆಡಳಿತ ಮಂಡಳಿಯ ನಿಯಮ ಪ್ರತಿಭಟನೆಗೆ ಕಾರಣವಾಗಿದ್ದು ಜೂನ್ ತಿಂಗಳ ಕೊನೆಯ ವಾರದ ಆರಂಭದಲ್ಲಿ.

ವಾರ ಪೂರ್ತಿ ಪ್ರತಿಭಟನೆ ಎಬ್ಬಿಸಿದ ‘ಕಾವು’, ವಾರಾಂತ್ಯದಲ್ಲಿ ತಣ್ಣಗಾಯಿತು. ಕಾಲೇಜಿನ ಪ್ರಾಂಶುಪಾಲೆ ಶಿಲುಬೆಯ ಹಾರದ ಅಚ್ಚ ಬಿಳಿಯ ನಿಲುವಂಗಿ ಹಾಗೂ ಸ್ಕಾರ್ಫ್ ತೊಟ್ಟ ಸಿಸ್ಟರ್ ಜೆಸ್ವನಾ, “ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿನಿಯರ ಪೋಷಕರ ಸಭೆ ಕರೆದು ಮಾತುಕತೆ ನಡೆಸಲಾಗುವುದು. ವಸ್ತ್ರ ಸಂಹಿತೆಯ ಬಗ್ಗೆ ಎಂತಹ ನಿಯಮ ಜಾರಿಗೆ ತಂದರೆ ವಿದ್ಯಾರ್ಥಿಗಳಿಗೆ ಒಪ್ಪಿಗೆಯಾಗಬಹುದೆಂದು ಸದ್ಯವೇ ನಿರ್ಧರಿಸಲಾಗುವುದು. ಇದಕ್ಕೆ ಸ್ವಲ್ಪ ಕಾಲಾವಕಾಶದ ಅಗತ್ಯವಿದೆ.” ಎಂದು ಭಿನ್ನವಿಸಿಕೊಂಡರು. ದಕ್ಷಿಣ ಕನ್ನಡದ ಶಿಕ್ಷಣ ಸಂಸ್ಥೆಯೊಂದರಲ್ಲಿ ಎದ್ದ ಸ್ಕಾರ್ಫ್ ವಿವಾದ ನಂತರ ತೆರೆಮರೆಗೆ ಸರಿಯಿತು.

ಈ ಪ್ರತಿಭಟನೆ ನಡೆಯುತ್ತಿದ್ದ ಅವಧಿಯುದ್ದಕ್ಕೂ ಸ್ಕಾರ್ಫ್‌ಧಾರಣೆ ಹಾಗೂ ಅದರ ನಿಷೇಧದ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾದ ಹಾಗೂ ವಿವಿಧ ಬಗೆಯ ಚರ್ಚೆಗಳು ನಡೆದವು. ಈ ಚರ್ಚೆಗಳಲ್ಲಿ ಭಾಗಿಯಾದವರ ವಾದಗಳನ್ನು ಮೂರು ನೆಲೆಗಳಲ್ಲಿ ನೋಡಬಹುದಿತ್ತು. “ಹೀಗೆಲ್ಲಾ ಗದ್ದಲವೆಬ್ಬಿಸಿ ಅತ್ತೂ ಕರೆದೂ ಮನೆ ಹಿರಿಯರನ್ನು ಒಪ್ಪಿಸಿ ಕಾಲೇಜು ಕಲಿಯುತ್ತಿರುವ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕಲ್ಲು ಹಾಕಬೇಡಿ”ರೆಂದು ಗೋಗರೆದು ಅನುಕಂಪದ ಅಲೆ ಸೃಷ್ಟಿಸುವವರು ಒಂದು ಕಡೆಯಾದರೆ, “ಹಿಜಾಬನ್ನು ಕಿತ್ತು ಹಾಕುವುದೊಂದೇ ಮುಸ್ಲಿಂ ಸ್ತ್ರೀಯರನ್ನು ಬಿಗಿದಿರುವ ಸಂಕೋಲೆಗಳಿಂದ ಬಿಡಿಸುವ ದಾರಿಯೆಂದು” ಛಲತೊಟ್ಟ ಸ್ತ್ರೀ ಸ್ವಾತಂತ್ರ್ಯವಾದಿಗಳು ಮತ್ತೊಂದು ಕಡೆ. ಇವೆರಡೂ ಗೋಗರೆತ- ಭೋರ್ಗರೆತಗಳ ನಡುವೆ ಮುಸ್ಲಿಮರ ಹಕ್ಕುಗಳಿಗೆ ಧಕ್ಕೆಯಾದರೆ ಮಾತ್ರ ವೀರಾವೇಶದಿಂದ ಕಣಕ್ಕಿಳಿಯುವ ಹಾಗೂ ಮುಸ್ಲಿಮರನ್ನೆ ಗುರಿಯಾಗಿಸಿ ತೇಲಿ ಬಿಡುವ ವಿವಾದಗಳ ಗುತ್ತಿಗೆದಾರರಂತಾಡುವ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ಕಡೆಯಿಂದಲೂ ಅರ್ತನಾದ. ಅದೂ, “ಮುಸ್ಲಿಂ ವಿದ್ಯಾರ್ಥಿನಿಯರ ಮೂಲಭೂತ ಹಕ್ಕು, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ದಾಳಿಯಾಗುತ್ತಿದೆಯೆಂಬ" ಗೋಗರೆತ.

ಆದರೆ, ವಾರಾಂತ್ಯದ ಹೊತ್ತಿಗೆ ಸಿಸ್ಟರ್ ಜೆಸ್ವನಾ ಸುದ್ದಿಗೋಷ್ಠಿ ನಡೆಸಿ, “ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರೇ ಸ್ವಯಂಪ್ರೇರಿತರಾಗಿ ಕಾಲೇಜಿನ ಆಡಳಿತ ಮಂಡಳಿಯ ಮುಂದೆ ಕ್ಷಮಾಪಣೆ ಕೇಳಿದ್ದಾರೆ, ಅವರು ಯಾರದೋ ಪ್ರಚೋದನೆಗೊಳಗಾಗಿ ಹೀಗೆಲ್ಲ ತಪ್ಪು ಮಾಡಿದೆವೆಂದು ನಮಗೆ ತಿಳಿಸಿದ್ದಾರೆ. ಆದಷ್ಟು ಬೇಗ ಸಭೆ ಸೇರಿ ಇದನ್ನು ಮರು ಪರಿಶೀಲಿಸಲಾಗುವುದು” ಎಂದು ಹೇಳಿದ ಕೂಡಲೆ ವಾರದುದ್ದಕ್ಕೂ ಎಳೆದಾಡಲಾಗುತ್ತಿದ್ದ ವಿವಾದದ ಕಾವು ಥಟ್ಟನೆ ಇಳಿದು ಹೋಯಿತು. ಇವನ್ನೆಲ್ಲ ಗಮನಿಸುತ್ತಿದ್ದವರಿಗೆ, ನಾವೆಲ್ಲ ಸ್ವಾತಂತ್ರ್ಯಪೂರ್ವದಲ್ಲೋ ನಮ್ಮ ದೇಶಕ್ಕೊಂದು ಸಂವಿಧಾನವೇ ಇಲ್ಲದ ಕಾಲದಲ್ಲೋ ಬದುಕುತ್ತಿರುವಂತೆಯೊ; ಅಥವಾ ಇತ್ತೀಚಿನ ವಿಧಾನಸಬಾ ಚುನಾವಣೆಯ ಫಲಿತಾಂಶದಿಂದ ಧ್ವನಿಯುಡುಗಿ ಹೋದವರೆಲ್ಲ ಕೂಡಿಕೊಂಡು ಮತ್ತೆ ಸುದ್ದಿ ಕೇಂದ್ರಕ್ಕೆ ಬರಲು ಹೀಗೊಂದು ‘ಪೂರ್ವನಿಯೋಜಿತ (Staged) ಪ್ರತಿಭಟನೆ’ಯನ್ನು ಹಮ್ಮಿಕೊಂಡಿದ್ದರೇನೋ ಎಂದು ಅನಿಸಿದ್ದಿರಬಹುದು.

ಅದೇನೆ ಇದ್ದರೂ, ಈ ವಿವಾದ ಒಂದು ರೀತಿಯಲ್ಲಿ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಹುಪಾಲು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿಯ ಪಾಲಾಗಿಸಿದ ಬಿಜೆಪೆಯೇತರ ಪಕ್ಷಗಳ ‘ಜಾತ್ಯಾತೀತ’ರ ಪಾಲಿಗೆ ತಮ್ಮ ‘ಧ್ವನಿ’ಯನ್ನು ಮರು-ಪರಿಶೀಲಿಸಿಕೊಳ್ಳುವ ‘ಮೈಕ್ ಟೆಸ್ಟಿಂಗ್’ನಂತೆ ಪರಿಣಮಿಸಿದ್ದು ಮಾತ್ರ ಸುಳ್ಳಾಗಿರಲಿಕ್ಕಿಲ್ಲ. ಹಾಗೆಂದೇ ಕಾಲೇಜಿನ ಪರ-ವಿರೋಧಿ ವಾದಗಳು ಎಲ್ಲೂ ‘ಗುರಿಹಲಗೆಯ ಕಣ್ಣ’ನ್ನು ತಾಕುವ ಗೋಜಿಗೆ ಹೋಗದೆ ಅದರ ಅಕ್ಕಪಕ್ಕದಲ್ಲೇ ಹಾದು ಹೋಗುವಂತಿದ್ದವು.

ವಾಸ್ತವದಲ್ಲಿ ನಾವೆಲ್ಲರೂ ಭಾರತೀಯರಾಗಿ, ಸಂವಿಧಾನವನ್ನು ಪ್ರೀತಿಸುವವರಾಗಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಆಡಳಿತ ಮಂಡಳಿಯು ಕಾಲೇಜಿನೊಳಗೆ ‘ಶಿರವಸ್ತ್ರ’ (ಸ್ಕಾರ್ಫ್/ಹಿಜಾಬ್) ಧರಿಸಬಾರದು ಎಂಬ ನಿಯಮದ ಕುರಿತಂತೆ ಹೇಗೆ ಪ್ರತಿಕ್ರಿಯಿಸಬೇಕಿತ್ತೋ ಹಾಗೆ ಪ್ರತಿಕ್ರಿಯಿಸಲಿಲ್ಲ. ಎಲ್ಲರೂ ಅಲ್ಲದಿದ್ದರೂ ಕೊನೆಯ ಪಕ್ಷ ಪ್ರತಿಭಟನೆಗಿಳಿದಿದ್ದ ವಿದ್ಯಾರ್ಥಿನಿಯರು ಮತ್ತು ಅವರ ಹೋರಾಟಕ್ಕೆ ಮುಂದಾಳತ್ವ ವಹಿಸಿದ್ದ ವಿದ್ಯಾರ್ಥಿ ಸಂಘಟನೆ ಈ ವಿವಾದವನ್ನು ನಿಭಾಯಿಸಬೇಕಾದ ರೀತಿಯಲ್ಲಿ ನಿಭಾಯಿಸಲಿಲ್ಲ. ಅದಕ್ಕೆ ಕಾರಣ ಸಾಮಾಜಿಕ ಜಾಲತಾಣದ ಬಳಕೆದಾರರಲ್ಲಿ ಅಂತರ್ಗತವಾದ ಅವಸರ ಮತ್ತು ಇತರೆ ಮಿತಿಗಳು; ಹೋರಾಟದಲ್ಲಿ ತೊಡಗಿಕೊಂಡಿದ್ದವರ ಪೂರ್ವಸಿದ್ಧತೆ ಹಾಗೂ ಕಾನೂನು ಜ್ಞಾನದ ಕೊರತೆ ಮತ್ತು ಮುಸ್ಲಿಂ ಧಾರ್ಮಿಕ ಅಸ್ಮಿತೆಯ ಕುರಿತಂತೆ ಇತರರಿಗಿರುವ ಪೂರ್ವಾಗ್ರಹಗಳು.

ಇಲ್ಲಿ ನಾವು ಮೊದಲು ಉತ್ತರ ಕಂಡುಕೊಳ್ಳಬೇಕಿದ್ದ ಪ್ರಶ್ನೆಗಳು:

ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು. 
ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು. 

‘The Apostolic Carmel Educational Society’ ಎಂಬ ಹೆಸರಿನಲ್ಲಿ ದಿನಾಂಕ 12 ಫೆಬ್ರುವರಿ 1957 ರಂದು ‘The Societies Registration Act, 1860’ ಅಡಿಯಲ್ಲಿ ನೊಂದಾಯಿತಗೊಂಡ ಒಂದು NGO ಸಂಸ್ಥೆಯಿಂದ ಪ್ರಾರಂಭಿಸಲ್ಪಟ್ಟ; ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಭಾರತೀಯ ಸಂವಿಧಾನದ ಆಶಯದಡಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿದ್ಯಾ ಸಂಸ್ಥೆಯೆಂದು ಸ್ಥಾಪಿಸಲ್ಪಟ್ಟ; ಸಂವಿಧಾನಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಧನ ಸಹಾಯ ಪಡೆಯುವ; ಉತ್ತಮ ಶೈಕ್ಷಣಿಕ ಔನ್ಯತೆಯನ್ನು ಸಾಧಿಸುವ ಧ್ಯೇಯೋದ್ದೇಶದಿಂದ ತಾನು ಭೋದಿಸುವ ಪ್ರತಿಯೊಂದು ತರಗತಿಗೂ ತನ್ನದೇ ಆದ ಪಠ್ಯಕ್ರಮ, ಭೋದನಾ ಕ್ರಮಗಳನ್ನು ರೂಪಿಸಿಕೊಂಡು ತನ್ನದೇ ಆದ ಸಂಶೋಧನಾ ವ್ಯವಸ್ಥೆ ಮತ್ತು ಫಲಿತಾಂಶ ಪ್ರಕಟಿಸುವ ಸ್ವಾಯತ್ತತೆಯನ್ನು ‘University Grants Commission (UGC)’ ಯಿಂದ ಶೈಕ್ಷಣಿಕ ವರ್ಷ 2005-06ರಲ್ಲಿ ಪಡೆದ; ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ತನ್ನ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡುವ ಒಂದು ಸ್ವಾಯತ್ತ ಕಾಲೇಜಾಗಿ ಕಾರ್ಯ ನಿರ್ವಹಿಸುತ್ತಿರುವ ಸೈಂಟ್ ಆಗ್ನೆಸ್ ಕಾಲೇಜಿನ ಆಡಳಿತ ಮಂಡಳಿಗೆ ‘ಸ್ಕಾರ್ಫ್’ ನಿಷೇಧಿಸುವ ಅಧಿಕಾರ ಅಥವಾ ಸ್ವಾತಂತ್ರ್ಯ ಇದೆಯೇ?.

UGCಯ ಜಾಲತಾಣದ ದಾಖಲೆಯ ಅನುಸಾರ ಸೈಂಟ್ ಆಗ್ನೆಸ್ ಕಾಲೇಜಿಗೆ ಸ್ವಾಯತ್ತ ಕಾಲೇಜೆಂಬ ಮಾನ್ಯತೆ ಶೈಕ್ಷಣಿಕ ವರ್ಷ 2016-17 ರವರೆಗೆ ಮಾತ್ರ ಇದ್ದು, ನಂತರದ ಶೈಕ್ಷಣಿಕ ವರ್ಷಗಳಿಗೆ ನವೀಕರಣಗೊಂಡಿರುವ ಬಗ್ಗೆ ಮಾಹಿತಿ ಯಾಕೆ ಲಭ್ಯವಿಲ್ಲ?

ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ UGCಯು ತನ್ನಿಂದ ಸ್ವಾಯತ್ತತೆ ಪಡೆದಿರುವ ಕಾಲೇಜುಗಳು ಪಾಲಿಸಬೇಕಾದ ನೀತಿ-ನಿಯಮಾವಳಿ ಮತ್ತು ಮಾರ್ಗದರ್ಶಿ ಸೂತ್ರಗಳ ಹೊತ್ತಗೆಯನ್ನು ಬಿಡುಗಡೆ ಮಾಡುತ್ತೆ. ಯಾವುದೇ ಸ್ವಾಯತ್ತ ಕಾಲೇಜಿನ ಆಡಳಿತ ಮಂಡಳಿಯು ತಮ್ಮ ಕಾಲೇಜಿಗೆ UGCಯಿಂದ ದಕ್ಕಿರುವ ಸ್ವಾಯತ್ತ ಅಧಿಕಾರವನ್ನು, ಮಾರ್ಗದರ್ಶಿ ಸೂತ್ರಗಳ ಹೊತ್ತಗೆಯಲ್ಲಿರುವ 13 ಸೂತ್ರಗಳ ಮಿತಿಯಲ್ಲೇ ಕಾರ್ಯಗತ ಗೊಳಿಸಬೇಕಿರುತ್ತೆ. ಈ ಮಾರ್ಗದರ್ಶಿ ಸೂತ್ರಗಳ ಅನ್ವಯ ಕಾಲೇಜಿನ ಆಡಳಿತ ಮಂಡಳಿಗೆ, ವಿದ್ಯಾರ್ಥಿನಿಯರು ಅಥವಾ ಭೋದಕ ವರ್ಗಕ್ಕೆ ‘ವಸ್ತ್ರಸಂಹಿತೆ’ಯನ್ನು ಹೇರಲಾಗಲಿ ಅಥವಾ ಯಾವುದಾದರೂ ಧಾರ್ಮಿಕ ವಸ್ತ್ರವನ್ನು ನಿಷೇಧಿಸುವುದಕ್ಕಾಗಲಿ ಅವಕಾಶವಿದೆಯೆ?

UGCಯು ದಿನಾಂಕ 2 ಮೇ, 2016 ರಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಹೆಣ್ಣುಮಕ್ಕಳು ಹಾಗೂ ದುರ್ಬಲರ (Vulnerable group) ಮೇಲಿನ ಲೈಂಗಿಕ ಕಿರುಕುಳ’ ತಡೆಯಲು ಪಾಲಿಸಬೇಕಾದ ನೀತಿ-ನಿಯಮಾವಳಿಗಳನ್ನು ರೂಪಿಸಿ ಹೊರಡಿಸಿದ ಅಧಿಸೂಚನೆಯಲ್ಲಿ ಹೇಳುವ ‘ತಾರತಮ್ಯ ತೋರುವ ನಿಯಮಗಳನ್ನು ಹೇರಬಾರದು’ ಎಂಬ ವಾಕ್ಯದ ವ್ಯಾಪ್ತಿಯೊಳಗೆ ಧಾರ್ಮಿಕತೆಯ ಗುರುತಾದ ಹಿಜಾಬ್ ನಿಷೇಧವನ್ನು ವ್ಯಾಖ್ಯಾನಿಸಲು ಸಾಧ್ಯವೆ?

UGC ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗುವ ಯಾವುದೇ ಕಾಲೇಜಿನ ಸ್ವಾಯತ್ತತೆಯನ್ನು ರದ್ದುಗೊಳಿಸುವ ಅಧಿಕಾರವನ್ನು UGCಯು ಉಳಿಸಿಕೊಂಡಿರುವುದರಿಂದ, ಮೇಲೆ ವಿವರಿಸಿದ ಅಂಶಗಳು ಮತ್ತು ಹುಡುಕಿದರೆ ಸಿಗಬಹುದಾಗಿದ್ದ ಮತ್ತಷ್ಟು ಅಂಶಗಳ ಆಧಾರದಲ್ಲಿ ಕಾಲೇಜಿನ ವೈಫಲ್ಯತೆಗಳ ಪಟ್ಟಿಯೊಂದನ್ನು UGCಗೆ ವರದಿ ಮಾಡಿ ಕಾಲೇಜಿನ ಆಡಳಿತ ಮಂಡಳಿಯನ್ನು ಸರಿದಾರಿಗೆ ತರಲು ಅವಕಾಶವಿದೆಯೆ?

ಇವೆಲ್ಲಕ್ಕಿಂತ ಮುಖ್ಯವಾಗಿ, ಸಂವಿಧಾನದ ಕಲಂ 25ರಲ್ಲಿ ನೀಡುವ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಇಂತಹ ಸಂಸ್ಥೆಗಳು ನಡೆಸುವ ದಾಳಿಯಿಂದ ಈ ನೆಲದ ನ್ಯಾಯಾಲಯಗಳ ಸಹಾಯದಿಂದ ಹೇಗೆ ರಕ್ಷಣೆ ಪಡೆಯಬಹುದು?

ಎಂದೆಲ್ಲಾ ಸೈಂಟ್ ಆಗ್ನೇಸ್ ಕಾಲೇಜಿನ ವಿಚಿತ್ರವಾದ ನಿಯಮದಿಂದ ಬಾಧಿತರಾದ ವಿದ್ಯಾರ್ಥಿನಿಯರು ಮತ್ತು CFI, SiO, SFI, KVS ಆದಿಯಾಗಿ ರಾಜ್ಯದಲ್ಲಿ ವಿದ್ಯಾರ್ಥಿ ಹೋರಾಟಗಳಲ್ಲಿ ಸಕ್ರಿಯರಾಗಿರುವ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿ, ರಾಜಕೀಯ ಉದ್ದೇಶಗಳನ್ನು ಬದಿಗಿಟ್ಟು, ಧರ್ಮಾತೀತವಾಗಿ ಚಿಂತಿಸಿ ವಿದ್ಯಾರ್ಥಿಗಳ ಹಾಗೂ ಪ್ರಜ್ನಾವಂತರ ಅಮೂಲ್ಯ ಸಮಯವನ್ನು ನುಂಗಿ ಹಾಕುವ ಇಂತಹ ವ್ಯರ್ಥ ವಿವಾದಗಳಿಗೆ ಒಂದು ಶಾಶ್ವತ ಪರಿಹಾರವನ್ನು ಹುಡುಕಬಹುದಿತ್ತು.

ಭಾರತೀಯ ಸಂವಿಧಾನದ ಕಲಂ 25 ಎಲ್ಲಾ ಭಾರತೀಯರಿಗೂ ನೀಡುವ ಧಾರ್ಮಿಕ ಸ್ವಾತಂತ್ರ್ಯದ ಯಾರಿಂದಲಾದರೂ ದಾಳಿಗೊಳಗಾದಾಗ ಈ ನೆಲದ ನ್ಯಾಯ ವ್ಯವಸ್ಥೆ ಹೇಗೆ ನಮ್ಮ ಸಹಾಯಕ್ಕೆ ಬರಬಹುದು ಎಂಬುದಕ್ಕೆ, Amna binth Basheer Vs CBSE, UOI ಪ್ರಕರಣದಲ್ಲಿ ಕೇರಳ ಹೈಕೋರ್ಟು ನೀಡಿದ ಈ ತೀರ್ಪನ್ನು ಗಮನಿಸಿದ್ದರೆ ಈ ವಿವಾದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬಹುದಾಗಿತ್ತು.

ದಿನಾಂಕ 3 ಮೇ, 2015 ರಂದು ದೇಶದಾದ್ಯಂತ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಬರೆದ CBSEಯ AIPMT ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳೊಳಗೆ ಬ್ಲೂಟೂತ್ ಮತ್ತು ಸಿಮ್ ಕಾರ್ಡುಗಳಂತಹ ಆಧುನಿಕ ಪರಿಕರಗಳನ್ನು ತಾವು ತೊಟ್ಟ ಬಟ್ಟೆಗಳಿಗೆ ಹೊಲಿದುಕೊಂಡು ಕಳ್ಳತನದಿಂದ ಸಾಗಿಸುವ ಮೂಲಕ ಗರಿಷ್ಠ ಪ್ರಮಾಣದಲ್ಲಿ ಕಾಪಿ-ಅವ್ಯವಹಾರ ನಡೆಸಿದ್ದಾರೆಂಬ ಪುಕಾರಿನ ಹಿನ್ನೆಲೆಯಲ್ಲಿ ಮಾನ್ಯ ಸುಪ್ರೀಂ ಕೋರ್ಟು ಅಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಿ ದಿನಾಂಕ 25 ಜುಲೈ, 2015 ರಂದು ಮರು-ಪರೀಕ್ಷೆ ನಡೆಸಬೇಕೆಂದು ಆದೇಶ ಹೊರಡಿಸುತ್ತೆ.

ಈ ಮರುಪರೀಕ್ಷೆಯಲ್ಲಿ ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರಗಳಿಗೆ ಅವಕಾಶವಾಗದಂತಿರಲು ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸುತ್ತೆ. ಅವುಗಳ ಪೈಕಿ, ಪರೀಕ್ಷಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಪೂರ್ಣ ತೋಳಿನ ಸಾಧಾರಣ ಅಂಗಿಯನ್ನು ಮಾತ್ರ ಧರಿಸಬೇಕು ಮತ್ತು ಅವಕ್ಕೆ ದೊಡ್ಡ ದೊಡ್ಡ ಗುಂಡಿಗಳು, ಬ್ರೋಚು ಅಥವವಾ ಬ್ಯಾಡ್ಜುಗಳನ್ನು ಅಳವಡಿಸಿರಕೂಡದು, ಯಾವುದೇ ಬಗೆಯ ಲೋಹದಲ್ಲಿ ತಯಾರಿಸಿದ ಹೇರ್ ಪಿನ್ ಅಥವಾ ಹೇರ್ ಬ್ಯಾಂಡುಗಳು ಮತ್ತು ಷೂಗಳನ್ನು ಧರಿಸುವಂತಿಲ್ಲ; ಸಾಧಾರಣ ಚಪ್ಪಲಿ ಮತ್ತು ಸಾಧಾರಣ ಅರ್ಧ ತೋಳಿನ ಅಂಗಿಯನ್ನು ಮಾತ್ರ ತೊಡಬೇಕು ಹಾಗೂ ಶಿರವಸ್ತ್ರಗಳನ್ನು ಧರಿಸಬಾರದು ಎಂಬ ಅತ್ಯಂತ ವಿಚಿತ್ರವಾದ ‘ವಸ್ತ್ರಸಂಹಿತೆ’ಯೂ ಸೇರಿತ್ತು.

ಇದರಿಂದ ಬಾಧಿತರಾದ ಆಮ್ನಾ ಬಿನ್ತ್ ಬಷೀರ್ ಹೆಸರಿನ ಕೇರಳ ರಾಜ್ಯದ ಯುವತಿಯು ತನ್ನ ತಂದೆ ಎ.ಪಿ.ಮುಹಮ್ಮದ್ ಬಷೀರ್ ಹಾಗೂ ಪ್ರತ್ಯೇಕವಾಗಿ ಇನ್ನಿಬ್ಬರು ಯುವತಿಯರು, ಭಾರತೀಯ ಸಂವಿಧಾನ ಕಲಂ 25ರ ಅನ್ವಯ ಈ ದೇಶದ ಪ್ರಜೆಗಳಿಗೆ ನೀಡಿದ ‘ಧಾರ್ಮಿಕ ಸ್ವಾತಂತ್ರ್ಯ’ಕ್ಕೆ ಧಕ್ಕೆ ತರುವ ಈ ‘ವಸ್ತ್ರಸಂಹಿತೆ’ಯನ್ನು ಮಾರ್ಪಾಡುಗೊಳಿಸಿ ಎಂದು ನ್ಯಾಯಾಲಯದ ಮೊರೆ ಹೋದರು. ‘ಶಿರವಸ್ತ್ರ(ಹಿಜಾಬ್)’ ಹಾಗೂ ಪೂರ್ಣ ತೋಳಿನ ಮೇಲಂಗಿ ಧರಿಸಿ ಮರು-ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಸಲ್ಲಿಸಿದ ರಿಟ್ ಅರ್ಜಿ(Writ Petition)ಗಳನ್ನು ಮಾನ್ಯ ಕೇರಳ ಹೈಕೋರ್ಟು ಮನ್ನಿಸಿತು. ಮಹಿಳಾ ಭದ್ರತಾ ಸಿಬ್ಬಂದಿಯಿಂದ ಸೂಕ್ತ ತಪಾಸಣೆಗೆ ಅನುವಾಗುವಂತೆ ಪರೀಕ್ಷೆ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿಯೇ ಈ ಮೂವರೂ ವಿದ್ಯಾರ್ಥಿನಿಯರು ಹಾಜರಾಗಬೇಕೆಂಬ ಷರತ್ತುಬದ್ಧ ಆದೇಶ ಹೊರಡಿಸಿ ವಿದ್ಯಾರ್ಥಿನಿಯರ ಪಾಲಿಗೆ ಆಪದ್ಬಾಂಧವನಾಗಿ ಬಂದಿತ್ತು. ಈ ಸಂದರ್ಭವನ್ನು ಆಧಾರವಾಗಿಟ್ಟುಕೊಂಡು ಹೋರಾಟವನ್ನು ಕಟ್ಟಬಹುದಿತ್ತು.

ಆಮ್ನಾ ಬಿನ್ತ್ ಬಷೀರ್. 
ಆಮ್ನಾ ಬಿನ್ತ್ ಬಷೀರ್. 
english.manoramaonline.com

‘ಉಗ್ರ ಹಿಂದುತ್ವ’ದ ಠೇಂಕಾರದಿಂದ ಧಾರ್ಮಿಕ ಅಲ್ಪಸಂಖ್ಯಾತರೆಲ್ಲರೂ ದುಗುಡಕ್ಕೀಡಾಗಿರುವ ಈ ದಿನಗಳಲ್ಲಿ, ವಿವಿಧ ಸಮುದಾಯಗಳು ಹಿಂದೆಂದಿಗಿಂತಲೂ ಹೆಚ್ಚು ಭ್ರಾತೃತ್ವ ಸಾಧಿಸುವ ನಿಟ್ಟಿನಲ್ಲಿ ಹೆಚ್ಚು ಜವಾಬ್ದಾರಿ ಹಾಗೂ ಜಾತ್ಯಾತೀತ ಬದ್ಧತೆಯಿಂದ ಕೆಲಸ ಮಾಡಬೇಕಿದೆ. ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಜೆಸ್ವನಾ ತಾವು ಮತ್ತು ತಮ್ಮ ಭೋದಕ ಸಿಬ್ಬಂದಿ ವರ್ಗ ಅಚ್ಚ ಬಿಳಿಯ ನಿಲುವಂಗಿ ಹಾಗೂ ಸ್ಕಾರ್ಫ್ ತೊಟ್ಟು ಕಾಲೇಜಿಗೆ ಬಂದಿದ್ದರು. ಆದರೂ, ಪತ್ರಕರ್ತರೊಬ್ಬರು ತಮ್ಮನ್ನುದ್ದೇಶಿಸಿ “ಕಾಲೇಜಿನ ಪ್ರಾಂಶುಪಾಲೆಯಾದ ನೀವೇ ಸ್ಕಾರ್ಫ್ ತೊಟ್ಟಿರುವಾಗ ಸ್ಕಾರ್ಫ್ ನಂಥದೇ ಹಿಜಾಬ್ ತೊಡುವುದನ್ನು ಯಾಕೆ ನಿಷೇಧಿಸುತ್ತೀರಿ” ಎಂದು ಪ್ರಶ್ನಿಸಿದಾಗ, “ನಾವು ತೊಡುವುದು ಧಾರ್ಮಿಕ ವಸ್ತ್ರ, ಬೆಳಿಗ್ಗೆ ಉಟ್ಟರೆ ಮಲಗುವವರೆಗೆ ಇದರಲ್ಲೇ ಇರುತ್ತೇವೆ” ಎಂದು ಉತ್ತರಿಸಿ ತಮ್ಮ ಹಿಪೊಕ್ರಸಿಯನ್ನು ಪ್ರದರ್ಶಿಸಿದರು.

ವಾಸ್ತವವಾಗಿ ಇಂತಹುದೇ ಒಂದು ಸಂದರ್ಭ ಕೇರಳದ ಕ್ಯಾಥೋಲಿಕ್ ನನ್ ಒಬ್ಬರಿಗೆ ಎದುರಾದಾಗ ಅಲ್ಲಿಯ ಚರ್ಚ್ ಹೇಗೆ ಪ್ರತಿಕ್ರಿಯಿಸಿತ್ತೆಂದು ಮುಂದೆ ಓದಿ. AIPMT ಪರೀಕ್ಷೆಯ ವಸ್ತ್ರಸಂಹಿತೆ ಸಂಬಂಧ ಮಾನ್ಯ ಕೇರಳ ಹೈಕೋರ್ಟು ನೀಡಿದ ಆದೇಶದಿಂದ ಉತ್ತೇಜಿತರಾದ ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್(SiO)’ ಹಾಗೂ ಇತರೆ ವಿದ್ಯಾರ್ಥಿ ಸಂಘಟನೆಗಳು ಆನಂತರದ ದಿನಗಳಲ್ಲಿ ಆಮ್ನಾ ಬಿನ್ತ್ ಬಷೀರ್ ಹಾಗೂ ಇನ್ನಿತರೆ ಈರ್ವರು ವಿದ್ಯಾರ್ಥಿನಿಯರಿಗೆ ಮಾನ್ಯ ಕೇರಳ ಹೈಕೋರ್ಟು ನೀಡಿದ ಅಂತಹುದೇ ಸಲಿಗೆಯನ್ನು ‘ಶಿರವಸ್ತ್ರ(ಹಿಜಾಬ್)’ ಹಾಗೂ ಪೂರ್ಣ ತೋಳಿನ ಮೇಲಂಗಿ ಧರಿಸಲು ಬಯಸುವ ಎಲ್ಲಾ ಮುಸ್ಲಿಂ ಪರೀಕ್ಷಾರ್ಥಿಗಳಿಗೆ ನೀಡಬೇಕೆಂದು ಕೋರಿ ಮಾನ್ಯ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಅರ್ಜಿಯನ್ನು ಪರಿಶೀಲಿಸಿದ ಮಾನ್ಯ ಸುಪ್ರೀಂ ಕೋರ್ಟು, CBSEಯು ನಿಷ್ಪಕ್ಷಪಾತವಾಗಿ ಹಾಗೂ ಸಮರ್ಪಕವಾಗಿ ಪರೀಕ್ಷೆಯನ್ನು ನಡೆಸುವ ಉದ್ದೇಶದಿಂದ ‘ವಸ್ತ್ರಸಂಹಿತೆ’ಯನ್ನು ಜಾರಿಗೊಳಿಸಿರುವುದರಿಂದ ಹಾಗೂ ಪರೀಕ್ಷೆಯ ಅವಧಿ ಕೇವಲ ಮೂರು ಗಂಟೆಯದಾಗಿದ್ದು, ಪರೀಕ್ಷೆಯ ನಂತರ ಅವರವರಿಷ್ಟದ ಉಡುಗೆ ತೊಡಲು ಎಲ್ಲರೂ ಮುಕ್ತರಿರುವುದರಿಂದ ಕೋರ್ಟಿನ ನಡಾವಳಿಗಳಲ್ಲಿ ಹೆಚ್ಚು ಸಮಯ ವ್ಯರ್ಥಗೊಳಿಸದೆ ಪರೀಕ್ಷೆಗೆ ಹಾಜರಾಗಿರೆಂದು ಸಲಹೆ ನೀಡಿ ಅರ್ಜಿಯನ್ನು ತಿರಸ್ಕರಿಸುತ್ತೆ.

ತದನಂತರ, ದಿನಾಂಕ 25 ಜುಲೈ 2015 ರಂದು, ಪರೀಕ್ಷೆಗೆ ನೊಂದಾವಣೆ ಪಡೆದ ವಿದ್ಯಾರ್ಥಿಗಳಲ್ಲಿ ಅನೇಕ ಸಿಖ್ ಪರೀಕ್ಷಾರ್ಥಿಗಳು ತಮ್ಮ ಧಾರ್ಮಿಕ ಗುರುತುಗಳಾದ ‘ಕ್ರಿಪಾಣ’ ಮತ್ತು ‘ಕಾರಸ್’ಗಳನ್ನು ಪರೀಕ್ಷಾ ಕೊಠಡಿಯ ಹೊರಗೆ ಬಿಟ್ಟು ಪರೀಕ್ಷೆಗೆ ಹಾಜರಾದರೆ, ತಾನು ತೊಟ್ಟು ಬಂದ ಅಬಾಯವನ್ನು ತೆಗೆಯಲು ನಿರಾಕರಿಸುತ್ತಾರೆ. ಉತ್ತರ ಪ್ರದೇಶದ ಲಕ್ನೊ ನಗರದ 20ರ ಹರೆಯದ ಮುಸ್ಲಿಂ ವಿದ್ಯಾರ್ಥಿನಿ ಮತ್ತು ಶಿಲುಬೆ ಅಳವಡಿಸಿದ ಉದ್ದನೆಯ ನಿಲುವಂಗಿ ಹಾಗೂ ಸ್ಕಾರ್ಫ್ ತೆಗೆಯಲು ನಿರಾಕರಿಸಿದ ಕೇರಳ ರಾಜ್ಯದ ತಿರುವನಂತಪುರಂ ನಗರದ 19ರ ಹರೆಯದ ‘ಕ್ಯಾಥೊಲಿಕ್ ನನ್’ ಪರೀಕ್ಷೆಯಿಂದ ಹೊರಗುಳಿಸಲ್ಪಡುತ್ತಾರೆ.

ಈ ಘಟನೆಯಿಂದ ಕಳವಳಗೊಂಡ ಕೇರಳ ಕ್ಯಾಥೋಲಿಕ್ ಚರ್ಚಿನ ಮತಾಧಿಕಾರಿಗಳು (Cardinal Baselios Mar Cleemis of Malankara Catholic Church), ‘ವಸ್ತ್ರಸಂಹಿತೆ’ಯ ಕಾರಣವೊಡ್ಡಿ ‘ಕ್ಯಾಥೊಲಿಕ್ ನನ್’ ಒಬ್ಬರನ್ನು ಪರೀಕ್ಷೆಗೆ ಹಾಜರಾಗಲು ಬಿಡದ CBSEಯ ಈ ಕ್ರಮವು ತೀರಾ ಆಘಾತಕಾರಿ, CBSEಯ ಉದ್ದೇಶ ಪರೀಕ್ಷಾ ಅವ್ಯವಹಾರಗಳನ್ನು ತಡೆಯುವುದೋ ಅಥವಾ ಧಾರ್ಮಿಕ ಚಿಹ್ನೆಗಳನ್ನು ಅನುಮಾನಿಸಿ, ಅವಮಾನಿಸಿ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುವುದೋ ಎಂದು CBSEಯನ್ನು ಕುಟುಕುತ್ತೆ.

ಸಿಸ್ಟರ್ ಜೆಸ್ವನಾ ಆಗಲಿ ಸೈಂಟ್ ಆಗ್ನೇಸ್ ಕಾಲೇಜಿನ ಆಡಳಿತ ಮಂಡಳಿಯಾಗಲಿ ಹಿಜಾಬ್ ಕುರಿತು ತಮಗಿರುವ ಪೂರ್ವಾಗ್ರಹಗಳನ್ನು ಪ್ರದರ್ಶನಕ್ಕಿಡುವ ಮೊದಲು ಈ ಘಟನೆಯನ್ನೊಮ್ಮೆ ನೆನಪಿಸಿಕೊಳ್ಳಬೇಕಿತ್ತಲ್ಲವೆ?

 ಸಿಸ್ಟರ್ ಜೆಸ್ವನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಂದ ಪ್ರತಿಕ್ರಿಯೆ. 
ಸಿಸ್ಟರ್ ಜೆಸ್ವನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಂದ ಪ್ರತಿಕ್ರಿಯೆ. 

ಕೇರಳದ ಚರ್ಚ್ ಮಾತ್ರವಲ್ಲ ಕೇರಳ PCC(Kerala Pradesh Congress Committee)ಯ ಅಧ್ಯಕ್ಷರಾದ V.M.ಸುಧೀಂದ್ರನ್ ಕೂಡ ‘ನನ್’ ಒಬ್ಬರನ್ನು ಪರೀಕ್ಷೆಗೆ ಹಾಜರಾಗುವುದನ್ನು ತಡೆದ CBSEಯ ಈ ಕ್ರಮವು ತೀರಾ ದುರದೃಷ್ಟಕರ, ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಇಂತಹ ನಿಯಮಗಳನ್ನು ಜಾರಿಗೊಳಿಸುವವರ ಮೇಲೆ ಕೇಂದ್ರ ಸರ್ಕಾರ ಈ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದರು. ಆದರೆ, ಇಲ್ಲಿ ಜಾತ್ಯಾತೀತತೆಯ ಗುತ್ತಿಗೆದಾರರಾದ ಕಾಂಗ್ರೆಸ್ಸಿಗರಾಗಲಿ, ಹಿಂದುತ್ವ ಉಗ್ರವಾದಿಗಳನ್ನು ಸೋಲಿಸಲು ಅವರನ್ನು ಬೆಂಬಲಿಸಿರೆಂದು ಕರೆ ಕೊಡುವ ಕಮ್ಯೂನಿಸ್ಟರಾಗಲಿ, ಸಂವಿಧಾನದತ್ತ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಮಾತನ್ನೂ ಆಡದೆ ಹಿಜಾಬ್ ತೊಡುವ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಂದಾಚಾರಿಗಳಂತೆ ಚಿತ್ರಿಸಿ, ಮುಸ್ಲಿಮರನ್ನು ಎಂದಿನಂತೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟುಗಳ ಮೇಲೆ ಪೋಸ್ಟುಗಳು, ಕಾಮೆಂಟುಗಳ ಮೇಲಿ ಕಾಮೆಂಟುಗಳನ್ನು ಕುಟ್ಟುತ್ತಾ ಬೆರಳು ತೀಟೆ ತೀರಿಸಿಕೊಳ್ಳುತ್ತಿದ್ದರು.

ಇನ್ನಾದರೂ ಮುಸ್ಲಿಂ ಹೆಣ್ಣುಮಕ್ಕಳು ಇವರ ವ್ಯರ್ಥ ಟೀಕೆ-ಗೇಲಿಗಳಿಗೆ ವಿಚಲಿತರಾಗದೆ ತಮ್ಮ ಧಾರ್ಮಿಕ ಶ್ರದ್ಧೆಯ ಭಾಗವಾಗಿ ತೊಡುವ ಹಿಜಾಬ್ ಯಾಕೆ ಇವರ ಕಣ್ಣಿಗೆ ಧಾರ್ಮಿಕ ಗುರುತಾಗಿ ಕಾಣುವುದಿಲ್ಲ ಹಾಗೂ ಸ್ತ್ರೀಸಮಾನತಾವಾದಿಗಳ ದೃಷ್ಟಿಯಲ್ಲಿ ಹಿಜಾಬ್ ಯಾಕೆ ಮುಸ್ಲಿಂ ಹೆಣ್ಣುಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿ ಪರಿಗಣಿತವಾಗುವುದಿಲ್ಲ ಎಂಬುದಕ್ಕೆ ತಮ್ಮ ತಂದೆ-ಅಣ್ಣ-ತಮ್ಮಂದಿರ ಸಹಭಾಗಿತ್ವದೊಂದಿಗೆ ಕಾನೂನು ಹೋರಾಟಗಳ ಮೂಲಕ ಒಂದು ಶಾಶ್ವತ ವ್ಯಾಖ್ಯಾನವನ್ನು ಕಲ್ಲಿನ ಮೇಲೆ ಕೆತ್ತಿಟ್ಟುಕೊಂಡು ತಮಗೆ ಗೌರವಯುತ ಬದುಕನ್ನು ಕೊಡುವ ಆಧುನಿಕ ಶಿಕ್ಷಣ, ಉದ್ಯೋಗಗಳತ್ತ ಗಮನ ಹರಿಸಿ ಸ್ವಾವಲಂಬಿಗಳಾಗಿ ಉತ್ತಮ ಸಮುದಾಯ ಕಟ್ಟುವ ಮಹತ್ಕಾರ್ಯದಲ್ಲಿ ತೊಡಗಿಕೊಳ್ಳಬೇಕು.