3ನೇ ಮಹಾಯುದ್ಧದ ಭೀತಿ ಮತ್ತು ಜಗತ್ತಿಗೆ ಅಲೆಗ್ಸಾಂಡರ್‌ನ ಕೊನೆಯ ಸಂದೇಶ
ವಿಚಾರ

3ನೇ ಮಹಾಯುದ್ಧದ ಭೀತಿ ಮತ್ತು ಜಗತ್ತಿಗೆ ಅಲೆಗ್ಸಾಂಡರ್‌ನ ಕೊನೆಯ ಸಂದೇಶ

ಮೂರನೇ ಮಹಾಯುದ್ಧದ ಭೀತಿಯಲ್ಲಿರುವ ಇಂದಿನ ಜಗತ್ತಿಗೆ ಭೂಮಿಯನ್ನೇ ಗೆಲ್ಲಲು ಹೊರಟ ಅಲೆಗ್ಸಾಂಡರ್‌ನ ಕೊನೆಯ ಸಂದೇಶ ನೆನಪಾಗಬೇಕಾದ್ದು ಈ ಹೊತ್ತಿನ ಅಗತ್ಯ.

ಜಗತ್ತನ್ನು ಗೆಲ್ಲಬೇಕೆಂಬ ಅದಮ್ಯ ಬಯಕೆ ಅಲೆಗ್ಸಾಂಡರನದಾಗಿತ್ತು. ಸತತ ದಿಗ್ವಿಜಯದ ಹಂಬಲದಿಂದ ದೇಶಗಳ ಮೇಲೆ ದೇಶಗಳನ್ನು ತನ್ನ ವಶಕ್ಕೆ ಪಡೆದ. ಸಮಸ್ತ ವಿಶ್ವವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಅವನ ಆಸೆಗೆ ಕೊನೆಯೇ ಇರಲಿಲ್ಲ. ಅದಕ್ಕಾಗಿ ಜಗತ್ತನ್ನೇ ಗೆಲ್ಲಲು ಬೇಕಾದ ಸೇನಾ ಪಡೆ ಕಟ್ಟಿದ. ಸಮರ್ಥ ಸೇನಾಧಿಕಾರಿಗಳ ತಂಡವನ್ನು ತನ್ನ ಪಡೆಗೆ ನೇಮಿಸಿದ.

ಕ್ರಿಸ್ತಪೂರ್ವ 356-323ರ ಅವಧಿಯ ಮ್ಯಾಸಿಡೋನಿಯಾದ ಮಹಾರಾಜ ಅಲೆಗ್ಸಾಂಡರ್. ಈತ ತನ್ನ ಆಡಳಿತಾವಧಿಯಲ್ಲಿ ಬಹುತೇಕ ಸಮಯವನ್ನು ಏಷ್ಯಾ ಮತ್ತು ಆಗ್ನೇಯ ಆಫ್ರಿಕಾ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದ ಮಹಾ ಸೇನಾನಿ. ತನ್ನ 30ನೇ ವಯಸ್ಸಿಗೆ ಗ್ರೀಸ್‍ನಿಂದ ಈಶಾನ್ಯ ಭಾರತದವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಕೂಡ ಈತ ಯಶಸ್ವಿಯಾಗಿದ್ದ. ಇತಿಹಾಸದ ಪುಟಗಳಲ್ಲಿ ಈತ ಸೋಲರಿಯದ ಸರದಾರ ಎಂದೇ ಹೆಸರಾಗಿದ್ದಾನೆ. ಇನ್ನೊಂದು ಕುತೂಹಲಕರ ಸಂಗತಿ ಎಂದರೆ, ಜಗತ್ತಿನಲ್ಲಿ ಕಾವ್ಯ ಮೀಮಾಂಸೆ ಕುರಿತು ಕೃತಿ ಬರೆದ ಚಿಂತಕ ಅರಿಸ್ಟಾಟಲ್ ಈತನ ಗುರುವಾಗಿದ್ದ.

ತನ್ನ ಸೋದರ ಸಂಬಂಧಿಗಳನ್ನು ಹತ್ಯೆಗೈದು ಅಲೆಗ್ಸಾಂಡರ್ ಅಧಿಕಾರ ಹಿಡಿದ ಎಂದು ಕೆಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಅಧಿಕಾರದ ಆರಂಭದಲ್ಲೇ ಅಲೆಗ್ಸಾಂಡರ್‍ಗೆ ಥೀಬ್ಸ್, ಅಥೆನ್ಸ್ ಮೊದಲಾದೆಡೆ ದಂಗೆ ಎದುರಾದವು. ಆಗ ಜಾಣತನದಿಂದ ವರ್ತಿಸಿದ ಅಲೆಗ್ಸಾಂಡರ್ ದಂಗೆ ಶಮನಗೊಳಿಸುವಲ್ಲಿ ಯಶಸ್ವಿಯಾದ.

ಈಜಿಪ್ಟ್ ಮೊದಲಾದ ದೇಶಗಳ ಮೇಲಿನ ದಿಗ್ವಿಜಯದ ನಂತರ ಅಲೆಗ್ಸಾಂಡರ್‌ನ ಚಿತ್ತ ಭಾರತದತ್ತ ನೆಟ್ಟಿತ್ತು. ಈಗಿನ ಆಫ್ಘಾನಿಸ್ತಾನದಲ್ಲಿರುವ ಗಾಂಧಾರ ಮತ್ತು ತಕ್ಷಶಿಲೆಯತ್ತ ಅವನು ಸೇನೆಯನ್ನು ನುಗ್ಗಿಸಿದ. ಕ್ರಿಸ್ತಶಕ 327ರ ಅವಧಿಯಲ್ಲಿ ಭಾರತದಲ್ಲಿ ನಂದರು, ಮಗಧರು ಪ್ರಬಲರಾಗಿದ್ದರು. ಕೇವಲ 20,000 ಪದಾತಿ ದಳ ಮತ್ತು 2,000 ಅಶ್ವದಳದಿಂದ ಅಲೆಗ್ಸಾಂಡರನಿಗೆ ತಕ್ಕ ಪ್ರತ್ಯುತ್ತರ ಕೊಟ್ಟರು.

ಜೊತೆಗೆ ಇನ್ನಷ್ಟು ಸೇನಾದಳಗಳು ಇವರ ಬೆಂಬಲಕ್ಕೆ ನಿಲ್ಲಲು ಆಗಮಿಸುತ್ತಿರುವ ಸುದ್ದಿ ಕೂಡ ಅಲೆಗ್ಸಾಂಡರ್‌ನ ಸೇನಾಧಿಪತಿಗೆ ತಿಳಿಯಿತು. ಇದೇ ಅವಧಿಯಲ್ಲಿ ಸುದೀರ್ಘ ಅವಧಿಯ ಪ್ರಯಾಣ, ನಿರಂತರ ಯುದ್ಧ, ಹತ್ಯೆಗಳಿಂದ ಅಲೆಗ್ಸಾಂಡರ್‌ನ ಸೈನಿಕರು ದಣಿದಿದ್ದರು. ಇದನ್ನು ಅರಿತ ಸೇನಾಧಿಪತಿ ಸಿಯೋನಸ್, ತಮ್ಮ ಪೋಷಕರು, ಮಡದಿಯರು ಮತ್ತು ಮಕ್ಕಳನ್ನು ನೋಡಬೇಕು ಎಂದು ಅಲೆಗ್ಸಾಂಡರನಿಗೆ ಮನವರಿಕೆ ಮಾಡಿಕೊಟ್ಟ. ಅಲ್ಲದೇ, ಸ್ವದೇಶಕ್ಕೆ ತೆರಳೋಣ ಎಂದು ಮನ ಒಲಿಸುವಲ್ಲಿ ಯಶಸ್ವಿಯಾದ. ಇದರ ಪರಿಣಾಮದಿಂದಾಗಿ ಅಲೆಗ್ಸಾಂಡರ್ ಸೇನೆ ಮ್ಯಾಸಿಡೋನಿಯಾದತ್ತ ಮರಳಲು ಸಿದ್ಧತೆ ನಡೆಸಿತು.

ತನ್ನ 32ನೇ ವಯಸ್ಸಿನಲ್ಲೇ ಜಗತ್ತು ಕಂಡ ಅಪ್ರತಿಮ ಯುದ್ಧ ತಂತ್ರ ನಿಪುಣ ಅಲೆಗ್ಸಾಂಡರ್ ಬ್ಯಾಬಿಲೋನ್ ಪ್ರದೇಶದಲ್ಲಿ ಕೊನೆಯುಸಿರೆಳೆದ. ಸಾವಿನ ದಿನಾಂಕದ ಕುರಿತು ಕೆಲ ಇತಿಹಾಸಕಾರರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಆದರೆ, ಅವನ ಸಾವಿನ ರೀತಿ ಮತ್ತು ಸಾವಿನ ನಂತರ ಅವನು ನೀಡಿದ ಸಂದೇಶ ಮಹತ್ವ ಪಡೆದುಕೊಂಡಿದೆ.

ಇನ್ನು ಕೆಲವು ಇತಿಹಾಸಕಾರರು, ಅಲೆಗ್ಸಾಂಡರ್ ಸಾಯುವ ಮುನ್ನ ಜ್ವರ ಸಂಬಂಧಿ ರೋಗಗಳಿಂದ ನರಳುತ್ತಿದ್ದ. ತನ್ನ ಸೇನಾಧಿಪತಿಗಳನ್ನು ಬದಲಾಯಿಸಿದ ಸಂಭ್ರಮಾಚರಣೆ ವೇಳೆ ಅನಾರೋಗ್ಯ ಲೆಕ್ಕಿಸದೆ ಮದ್ಯ ಕುಡಿದ ಪರಿಣಾಮ ಅವನ ಆರೋಗ್ಯ ಮತ್ತಷ್ಟು ಬಿಗಡಾಯಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ. 11 ದಿನಗಳ ಕಾಲ ನಿಃಶಕ್ತಿಯಿಂದ ಬಳಲಿದ ಮಹಾಯೋಧ, ಇಹಲೋಕದ ಯಾತ್ರೆ ಮುಗಿಸಿದ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಇತಿಹಾಸಕಾರರ ಪ್ರಕಾರ, ಅಲೆಗ್ಸಾಂಡರ್‌ನ ಸೇನೆಯಲ್ಲಿದ್ದ ಮಹತ್ವಾಕಾಂಕ್ಷಿಗಳೇ ವಿಶಪ್ರಾಶನ ಮಾಡಿ ಕೊಂದಿದ್ದಾರೆ. ಇವೆಲ್ಲವುಗಳ ನಡುವೆ, 2003ರಲ್ಲಿ ಜಗತ್ತಿನ ಪ್ರಸಿದ್ಧ ಇಂಗ್ಲಿಷ್ ಸುದ್ದಿ ವಾಹಿನಿ ಅಲೆಕ್ಸಾಂಡರ್ ಜೀವನ ಕುರಿತು ಒಂದು ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತು. ಇದರ ಅಧ್ಯಯನ ಮತ್ತು 2014ರ ಕ್ಲಿನಿಕಲ್ ಟಾಕ್ಸಿಕಾಲಜಿ ಪತ್ರಿಕೆಗಳ ಪ್ರಕಾರ, ಅಲೆಗ್ಸಾಂಡರ್‌ಗೆ ವಿಶಪ್ರಾಶನ ಮಾಡಿ ಕೊಲ್ಲಲಾಗಿದೆ ಎಂಬ ಊಹೆಗಳು ವ್ಯಕ್ತವಾಗಿವೆ.

ಇನ್ನೊಂದು ಕುತೂಹಲಕರ ಸಂಗತಿ ಎಂದರೆ, ಮೂರು ಮದುವೆಯಾಗಿದ್ದ ಅಲೆಗ್ಸಾಂಡರ್ ಸಲಿಂಗ ಕಾಮಿಯೂ ಆಗಿದ್ದ ಎಂಬ ಊಹಾಪೋಗಹಗಳು ಚಾಲ್ತಿಯಲ್ಲಿವೆ. ಪ್ರಾಚೀನ ಐತಿಹಾಸಿಕ ಗ್ರಂಥಗಳಲ್ಲಿ ಈ ಕುರಿತು ಸಾಕ್ಷಿಗಳು ಸಿಕ್ಕಿಲ್ಲ. ಆದರೆ, ತನ್ನ ಸೇನಾಧಿಪತಿ ಮತ್ತು ಅಂಗರಕ್ಷಕ ಹೀಫೇಶನ್ ಸಾವಿನ ನಂತರ ಅಲೆಗ್ಸಾಂಡರ್ ಅನಾರೋಗ್ಯಪೀಡಿತನಾಗುತ್ತಾನೆ. ಇದರ ಆಧಾರದಲ್ಲಿ ಅಲೆಗ್ಸಾಂಡರ್ ಸಲಿಂಗಕಾಮಿ ಎಂಬ ಊಹಾಪೋಹಗಳು ಕೇಳಿಬಂದಿವೆ. ಕೆಲ ಇತಿಹಾಸಕಾರರ ಪ್ರಕಾರ, ಅಲೆಗ್ಸಾಂಡರ್ ಅವಧಿಯಲ್ಲಿ ಸಲಿಂಗ ಕಾಮ ವಿವಾದಾತ್ಮಕ ಅಂಶವಾಗಿರಲಿಲ್ಲವಂತೆ. ಒಟ್ಟಿನಲ್ಲಿ ಅಪ್ರತಿಮ ಯೋಧನ ಕುರಿತು ಅನೇಕ ರೀತಿಯ ಕತೆಗಳು, ಊಹಾಪೋಹಗಳು, ದಂತಕತೆಗಳು ಚಾಲ್ತಿಯಲ್ಲಿರುವುದಂಥೂ ನಿಜ.

ಸೋಲರಿಯದ ಸರದಾರ ಅಲೆಗ್ಸಾಂಡರ್ ನಡೆಸಿದ ಯುದ್ಧಗಳು
(ಇಸವಿಗಳು ಕ್ರಿಸ್ತಪೂರ್ವ)

 • 338 - ಮ್ಯಾಸಿಡೋನಿಯಾ
 • 335 - ಬಾಲ್ಕನ್ ಯುದ್ಧ
 • 335 - ಬಾಲ್ಕನ್ ಯುದ್ಧ
 • 335 - ಪರ್ಷಿಯನ್ ಯುದ್ಧ
 • 333 - ಪರ್ಷಿಯನ್ ಯುದ್ಧ
 • ಅಕ್ಟೋಬರ್, 331 - ಪರ್ಷಿಯನ್ ಯುದ್ಧ
 • ಡಿಸೆಂಬರ್, 331 - ಪರ್ಷಿಯನ್ ಯುದ್ಧ
 • 330 - ಪರ್ಷಿಯನ್ ಯುದ್ಧ
 • 329 - ಪರ್ಷಿಯನ್ ಯುದ್ಧ
 • ಅಕ್ಟೋಬರ್, 329 - ಪರ್ಷಿಯನ್ ಯುದ್ಧ
 • ಮೇ, 327 – ಮಾರ್ಚ್ 326 - ಭಾರತದ ಮೇಲೆ ದಾಳಿ
 • ಏಪ್ರಿಲ್, 326 - ಭಾರತದ ಮೇಲೆ ದಾಳಿ
 • ಮೇ, 326 - ಭಾರತದ ಮೇಲೆ ದಾಳಿ
 • ನವೆಂಬರ್ 326 – ಫೆ. 326 - ಭಾರತದ ಮೇಲೆ ದಾಳಿ

ಜಗತ್ತನ್ನು ಗೆದ್ದು ಆತ ಏನು ಮಾಡಿದ? ಎಂಬ ಪ್ರಶ್ನೆಗೆ ಸಿಕ್ಕ ಉತ್ತರ ಮಾತ್ರ ತೀರಾ ವಿಚಿತ್ರವಾಗಿದ್ದರೂ ಸತ್ಯ. ತನ್ನ ಸೇನಾಧಿಕಾರಿಗಳೊಡನೆ ಮರಳುಗಾಡಿನಲ್ಲಿ ಪ್ರಯಾಣಿಸುತ್ತಿದ್ದ ಅಲೆಗ್ಸಾಂಡರನಿಗೆ ಚರ್ಮದ ತತ್ರಾಣಿಯಲ್ಲಿ ಲೀಟರ್‌ಗಟ್ಟಲೇ ನೀರು ಹೊತ್ತ ಒಂಟೆ ದಳ ಸಜ್ಜಾಗಿತ್ತು. ಪ್ರಯಾಣ ಎಷ್ಟು ದಿನ ಎಂಬುದನ್ನು ಲೆಕ್ಕ ಹಾಕಿ, ಅಗತ್ಯ ಪ್ರಮಾಣದ ನೀರನ್ನು ಸಂಗ್ರಹಿಸಿ, ಸಾಗಿಸುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಚರ್ಮದ ತತ್ರಾಣಿಗಳಲ್ಲಿ ನೀರು ಹಾಳಾಗದಂತೆ ಸ್ವಚ್ಛ ಕುಡಿಯುವ ನೀರನ್ನು ಸಂಗ್ರಹಿಸಲಾಗುತ್ತಿತ್ತು.

ಯುದ್ಧದ ಯಾನ ಎಂದು ಮುಗಿಯುತ್ತದೆ? ಎಂಬ ಲೆಕ್ಕಾಚಾರದ ಪ್ರಕಾರ ನೀರಿನ ದಾಸ್ತಾನು ಇರುವಂತೆ ಯೋಜನೆ ರೂಪಿಸಿ ಪ್ರಯಾಣವನ್ನು ಅಲೆಗ್ಸಾಂಡರ್‌ನ ಸೇನೆ ಯುದ್ಧಕ್ಕೆ ಸನ್ನದ್ಧವಾಗುತ್ತಿತ್ತು. ಜಗತ್ತಿನಾದ್ಯಂತ ಯುದ್ಧಗಳ ಮೇಲೆ ಯುದ್ಧಗಳನ್ನು ಗೆದ್ದ ಅಲೆಗ್ಸಾಂಡರ್‌ಗೆ ಸವಾಲಾಗಿದ್ದು ಪ್ರಕೃತಿ. ಒಂದರ ಮೇಲೆ ಒಂದರಂತೆ ಗೆಲುವಿನ ಸೋಪಾನ ಕಟ್ಟಿದ್ದ ಅಲೆಗ್ಸಾಂಡರ್, ಕಡೆಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿಯಲ್ಲಿ ಕೊನೆಯುಸಿರೆಳೆದ.

ಕಡೆಗೆ ಅಲೆಗ್ಸಾಂಡರ್ ಆಸ್ತಿಯ ಪಾಲಿನ ವಿಷಯ ಹೃದಯ ವಿದ್ರಾವಕವಾಗಿದೆ. ಅಲೆಗ್ಸಾಂಡರ್‌ನ ದೇಹವನ್ನೇ ಕಿತ್ತುಕೊಳ್ಳುವ ಕುರಿತು ಕೂಡ ಕತೆಗಳಿವೆ. ದೇಹದ ಯಾವ ಅವಯವವನ್ನು ಯಾರು ಹೊಂದಿದ್ದಾರೋ ಅದರ ಆಧಾರದ ಮೇಲೆ ಆಸ್ತಿಯ ಪಾಲು ಎಂದು ನಿರ್ಧಾರವಾಗುತ್ತದೆ. ಜಗತ್ತನ್ನು ಗೆದ್ದ ಅಲೆಗ್ಸಾಂಡರ್‌ನ ಆಸ್ತಿ ಹಂಚಿಕೆಗೆ ಬಹುತೇಕರು ಹಕ್ಕು ಮಂಡಿಸುತ್ತಾರೆ. ಅಲೆಗ್ಸಾಂಡರ್‌ನ ವೈಶ್ಯೆ ಕೂಡ ಪಾಲು ಕೇಳುತ್ತಾಳೆ. ಒಬ್ಬೊಬ್ಬರೂ ಅಲೆಗ್ಸಾಂಡರ್‌ನ ದೇಹವನ್ನು ತುಂಡರಿಸಿಕೊಂಡು ಆಸ್ತಿಗಾಗಿ ಪೈಪೋಟಿಗಿಳಿಯುತ್ತಾರೆ. ದೇಹದಲ್ಲಿರುವ ಬೆಲೆ ಬಾಳುವ ವಜ್ರ ವೈಢೂರ್ಯಗಳಿಗಾಗಿ ಕೂಡ ಮೃತ ದೇಹವನ್ನು ಛಿದ್ರಗೊಳಿಸುತ್ತಾರೆ. ಅಖಂಡ ವಿಶ್ವವನ್ನೇ ತನ್ನ ಬಿಗಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯ ಅಲೆಗ್ಸಾಂಡರ್‌ನ ಜೀವನ ದುರಂತವಾಗುತ್ತದೆ.

ಅವನು ಸಾಯುವ ಮುನ್ನಿನ ಕತೆ ಅತ್ಯಂತ ಬೀಭತ್ಸಕರ. ಜೊತೆಯಲ್ಲಿರುವ ಅವನ ಪ್ರೇಯಸಿಯರು, ಸ್ನೇಹಿತರು, ಸೇನಾಧಿಪತಿಗಳು, ಗುಲಾಮರು ಒಬ್ಬೊಬ್ಬರಾಗಿ ನೀರಿಲ್ಲದೇ ಮಡಿಯುತ್ತಾರೆ. ಆದರೂ ಯುದ್ಧೋತ್ಸಾಹ ಅವನನ್ನು ಮುನ್ನುಗ್ಗುವಂತೆ ಮಾಡುತ್ತದೆ. ಇದರ ಪರಿಣಾಮದಿಂದ ಸೇನಾಧಿಪತಿಗಳಿಂದ ಗುಲಾಮರವರೆಗೆ ಎಲ್ಲರೂ ಅವನ ಕಣ್ಮುಂದೆಯೇ ಮರಳುಗಾಡಿನ ಪಾಲಾಗುತ್ತಾರೆ. ಕಡೆಗೆ ತನಗೇ ಕುಡಿಯಲು ನೀರಿಲ್ಲದಿದ್ದರೂ ತತ್ರಾಣಿಗಳನ್ನು ತನ್ನ ಒಡೆಯನಿಗಾಗಿ ಹೊತ್ತೊಯುತ್ತಿದ್ದ ಅಲೆಗ್ಸಾಂಡರನ ನೆಚ್ಚಿನ ಗುಲಾಮ ಮಡಿಯುತ್ತಾನೆ.

ಆಗ ಅಲೆಗ್ಸಾಂಡರನಿಗೆ ಒಂಟಿತನ ಕಾಡುತ್ತದೆ. ಇಷ್ಟು ದಿನಗಳ ತನ್ನ ಯುದ್ಧದಿಂದ ಸಾಧಿಸಿದ್ದೇನು? ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಕಡೆಗೆ ತಾನು ಈ ಜಗತ್ತಿಗೆ ಬರುವಾಗ ತಂದದ್ದು ಏನು? ಇಷ್ಟು ದಿನಗಳ ಕಾಲ ತಾನು ನಡೆಸಿದ ವೈಭವದ ಬದುಕು ಹೇಗಿತ್ತು? ಎಷ್ಟು ಯುದ್ಧಗಳಲ್ಲಿ ಹೇಗೆಲ್ಲ ಗೆದ್ದೆ? ಯಾರನ್ನೆಲ್ಲ ಸದೆಬಡಿದೆ? ಗೆಲ್ಲಲು ರೂಪಿಸಿದ ರಣತಂತ್ರಗಳೇನು? ಕಡೆಯ ಯುದ್ದದಲ್ಲಿ ಆರಂಭದಲ್ಲಿ ಸಿಕ್ಕ ಗೆಲುವು, ಅಂತಿಮವಾಗಿ ತನ್ನ ಎಲ್ಲ ಒಡನಾಡಿಗಳು ಹೇಗೆ ತನ್ನ ಕಣ್ಣೆದುರೆ ಜೀವ ಕಳೆದುಕೊಂಡರು? ಯುದ್ಧದಲ್ಲಿ ನಾನು ಗೆದ್ದೆನೇ? ಅಥವಾ ಸೋತೆನೇ ಎಂದು ಆಲೋಚಿಸುತ್ತಾನೆ.

ಕಡೆಗೆ, ತಾನು ಕಾಲವಶವಾದ ನಂತರ ಏನನ್ನೂ ನನ್ನೊಂದಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಸತ್ಯ ಅರಿವಾಗುತ್ತದೆ. ಆ ಹೊತ್ತಿಗೆ ಅವನನ್ನು ಹುಡುಕಿಕೊಂಡು ಅವನ ತಂಡ ತತ್ರಾಣಿ ಹೊತ್ತು ಬರುತ್ತದೆ. ಆದರೆ, ಅವನಿಗೆ ನೀರು ಕುಡಿದು ಜೀವ ಉಳಿಸಿಕೊಳ್ಳಬೇಕು ಎನಿಸುವುದರ ಬದಲು, ತನ್ನ ಜೀವನ ಮತ್ತು ಸಾವು ಮುಂದಿನ ಪೀಳಿಗೆಗೆ ದೊಡ್ಡ ಪಾಠವಾಗಿ ಎಲ್ಲರ ಮನಸಿನಲ್ಲಿ ಚಿರಸ್ಥಾಯಿಯಾಗಿ ನೆನಪಿನಲ್ಲುಳಿಯಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ.

ತನ್ನ ಸಂಗಡಿಗರಿಗೆ ತನ್ನನ್ನು ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿರುವ ರೀತಿಯಲ್ಲಿ ಸಮಾಧಿ ಮಾಡಿ. ಜಗತ್ತನ್ನು ಗೆದ್ದ ಮಹಾ ವೀರಾಧಿವೀರ ಕಡೆಗೆ ಈ ಜಗತ್ತಿನಿಂದ ಒಂದು ಹಿಡಿ ಮಣ್ಣನ್ನೂ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ ಎಂದು ಜಗತ್ತಿಗೆ ಗೊತ್ತಾಗಲಿ ಎಂದು ಹೇಳಿ ಜೀವ ಬಿಡುತ್ತಾನೆ. ಈ ಕುರಿತ ಹೆಚ್ಚಿನ ಮಾಹಿತಿಗೆ ಹಾಲಿವುಡ್ ಚಿತ್ರ ಅಲೆಗ್ಸಾಂಡರ್ ದ ಗ್ರೇಟ್ ನೋಡಬಹುದು. ಇನ್ನು ಕನ್ನಡದಲ್ಲಿ ಪ್ರೊ. ರಾಜಪ್ಪ ದಳವಾಯಿ ಅವರ ಒಂದು ಬೊಗಸೆ ನೀರು ಎಂಬ ನಾಟಕವನ್ನು ಓದಬಹುದು.

ಇಂದು ಮೂರನೇ ಮಹಾಯುದ್ಧದ ಕುರಿತು ಚರ್ಚೆಯಾಗುತ್ತಿದೆ. ಅಮೆರಿಕ ಇಂಧನಕ್ಕಾಗಿ ತೈಲರಾಷ್ಟ್ರಗಳ ಮೇಲೆ ಯುದ್ಧ ನಡೆಸಿ, ಭಯೋತ್ಪಾದನೆಯನ್ನು ತಡೆಯಲು ಯುದ್ಧ ನಡೆಸಿದ್ದೇನೆ ಎಂದಿದ್ದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ನೀರಿಗಾಗಿ ಯುದ್ಧ ನಡೆಯಲಿದೆಯೇ? ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. ಇಂಥ ಸಮಯದಲ್ಲಿ ಅಲೆಗ್ಸಾಂಡರನ ಕತೆ ಬಹುದೊಡ್ಡ ರೂಪಕವಲ್ಲವೇ? ಇನ್ನು ನೂರಾರು ರೂಪಾಯಿ ಕೊಟ್ಟು ಅತ್ಯಂತ ದುಬಾರಿ ದರದ ನೀರು ಕುಡಿಯುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ನಿಮಗೆ ನೆನಪಾದರೆ ಅದಕ್ಕೆ ಹೊಣೆ ಯಾರು?