samachara
www.samachara.com
ಕೋಮುವಾದ VS ಭ್ರಷ್ಟಾಚಾರ: ಹೊರಳು ಹಾದಿಯಲ್ಲಿ ‘ಪ್ರಾದೇಶಿಕ’ ರಾಜಕಾರಣ
ವಿಚಾರ

ಕೋಮುವಾದ VS ಭ್ರಷ್ಟಾಚಾರ: ಹೊರಳು ಹಾದಿಯಲ್ಲಿ ‘ಪ್ರಾದೇಶಿಕ’ ರಾಜಕಾರಣ

‘ಈಗಿನ ಸಂದರ್ಭದಲ್ಲಿ ಬಿಜೆಪಿಯ ಕೋಮುವಾದಕ್ಕಿಂತಲೂ ಕಾಂಗ್ರೆಸ್‌ನ ಭ್ರಷ್ಟಾಚಾರ ಮೇಲು’ ಎಂಬಂಥ ಪರಿಸ್ಥಿತಿ ಪರ್ಯಾಯ ರಾಜಕಾರಣದ ಬಗ್ಗೆ ಯೋಚಿಸುತ್ತಿರುವವರ ವಲಯದಲ್ಲಿ ಪ್ರಧಾನವಾಗಿದೆ.

ನಂದಕುಮಾರ್ ಕೆ. ಎನ್‌

ನಂದಕುಮಾರ್ ಕೆ. ಎನ್‌

ರಾಷ್ಟ್ರೀಯ ಪಕ್ಷಗಳ ಅಬ್ಬರದ ಮಧ್ಯೆ ಪ್ರಾದೇಶಿಕ ಪಕ್ಷಗಳು ಉಳಿಯುವುದು ಕಷ್ಟ ಎಂಬ ಮಾತಿದೆ. ಆದರೆ, ಸ್ವಾತಂತ್ರ್ಯಾನಂತರ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣವನ್ನು ನೋಡಿದರೆ ಹಲವು ಪ್ರಾದೇಶಿಕ ಪಕ್ಷಗಳು ಹುಟ್ಟಿ, ಬೆಳೆದು, ಕೆಲವು ಅಸ್ತಿತ್ವ ಕಳೆದುಕೊಂಡಿರುವುದು ಎದ್ದು ಕಾಣುತ್ತದೆ. ಪ್ರಾದೇಶಿಕ ಪಕ್ಷಗಳ ಆರಂಭ ಹಾಗೂ ಅವನತಿಯ ಅಧ್ಯಾಯವೇನೂ ದೇಶದಲ್ಲಿ ಚಿಕ್ಕದಾಗಿಲ್ಲ.

1947ರ ನಂತರ ಕಾಂಗ್ರೆಸ್ಸಿನ ಆಡಳಿತದ ಪರಿ ನೋಡಿದ ಜನರು ಅಸಮಾಧಾನಗೊಳ್ಳತೊಡಗಿದ ಕಾಲದಿಂದಲೂ ಭಾರತದಲ್ಲಿ ಪರ್ಯಾಯ ಪಕ್ಷಗಳ ಬಗ್ಗೆ ಚರ್ಚೆಗಳು ಏಳತೊಡಗಿದ್ದವು. ಅದು ಎಡ ಪಕ್ಷವಾದ ಸಿ.ಪಿ.ಐ ನಲ್ಲೂ ಪ್ರತಿನಿಧಿಸತೊಡಗಿತ್ತು. ಸಿ ಪಿ ಐ ಆಗ ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸಿ ನಡೆದಿದ್ದು ಹಲವರಿಗೆ ಅಸಮಾಧಾನದ ವಿಚಾರವಾಗಿತ್ತು.

ಇದಕ್ಕೆ ಹೊರತಾಗಿ ಪ್ರಾದೇಶಿಕ ಪಕ್ಷಗಳು ರೂಪುಗೊಳ್ಳುವ ಪ್ರಕ್ರಿಯೆಗಳು ದೇಶದ ನಾನಾ ಕಡೆಗಳಲ್ಲಿ ನಡೆಯತೊಡಗಿದವು. ಅದು ಆಗ ಏಕಮಾದ್ವಿತೀಯ ಎನಿಸಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ಗೆ ಪರ್ಯಾಯವಾದ ಶಕ್ತಿಯಾಗಬೇಕೆಂಬ ಪ್ರಯತ್ನಗಳಾಗಿದ್ದವು. ಈ ಪ್ರಕ್ರಿಯೆಗಳು ಕರ್ನಾಟಕದಲ್ಲೂ ನಡೆದವು. ಆದರೆ ಪಕ್ಕದ ತಮಿಳುನಾಡಿನಲ್ಲಿ ನಡೆದ ರೀತಿಯಲ್ಲಿ ಆಗಿರಲಿಲ್ಲ. ಅಲ್ಲಿ ಪೆರಿಯಾರ್ ರಾಮಸ್ವಾಮಿಯವರು ಮುನ್ನೆಡೆಸಿದ ದ್ರಾವಿಡ ಚಳವಳಿಯ ಪ್ರಭಾವ ಬಳಸಿಕೊಂಡು ಕೇಂದ್ರಾಧಿಪತ್ಯ ಹೇರಿಕೆ, ಹಿಂದಿಹೇರಿಕೆ ಹಾಗೂ ಬ್ರಾಹ್ಮಣ ಶಾಹಿ ವಿರೋಧಿ ಚೌಕಟ್ಟುಗಳೊಳಗೆ ಅಲ್ಲಿನ ಪ್ರಾದೇಶಿಕ ರಾಜಕೀಯ ಪಕ್ಷಗಳು ಬೆಳೆದವು.

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಬೇರೊಂದು ರಾಜಕೀಯ ಪಕ್ಷ ಸ್ಪಷ್ಟ ಸೈದ್ಧಾಂತಿಕ ರಾಜಕೀಯ ಧೋರಣೆಯೊಂದಿಗೆ ರೂಪುಗೊಂಡಿದ್ದು ಎಂದು ಇದ್ದರೆ ಅದು ಸಂಯುಕ್ತ ಸೋಷಿಯಲಿಸ್ಟ್ ಪಕ್ಷ ಎಂದೇ ಹೇಳಬಹುದು. ಲೋಹಿಯಾ ಸಮಾಜವಾದ ಇದರ ಸಿದ್ಧಾಂತವಾಗಿತ್ತು. ಇದು 1960ರ ದಶಕದಲ್ಲಿ ಚಾಲ್ತಿಯಲ್ಲಿದ್ದ ಪಕ್ಷ. ಕಾಗೋಡು ಚಳವಳಿಯ ಶಾಂತವೇರಿ ಗೋಪಾಲ ಗೌಡ ಇದರ ಮುಂಚೂಣಿಯಲ್ಲಿದ್ದವರು. ಇವರು ಮೂರು ಬಾರಿ ಕೇವಲ ಜನರ ಬೆಂಬಲದಿಂದ ಮಾತ್ರ ಶಾಸಕರಾಗಿ ಆಯ್ಕೆಯಾದ ವ್ಯಕ್ತಿಯಾಗಿದ್ದರು.

ಗೋಪಾಲಗೌಡ.
ಗೋಪಾಲಗೌಡ.

ಒಂದು ಓಟು ಒಂದು ರೂಪಾಯಿ ನೋಟು ಎನ್ನುವುದು ಇವರ ಚುನಾವಣಾ ಘೋಷಣೆಗಳಲ್ಲಿ ಒಂದಾಗಿತ್ತು. ಓಟು ಕೊಟ್ಟವರಿಂದಲೇ ಚುನಾವಣಾ ಖರ್ಚುಗಳನ್ನು ಭರಿಸುವಂತೆ ಕೇಳಿಕೊಳ್ಳುವ ಘೋಷಣೆಯಾಗಿತ್ತು ಇದು. ಗೋಪಾಲ ಗೌಡರು 1952, 1962, 1967 ಹೀಗೆ ಮೂರು ಬಾರಿ ರಾಜ್ಯ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಯು. ಆರ್. ಅನಂತ ಮೂರ್ತಿಯವರು ಒಂದು ಕಡೆ ಮಾತಾಡುತ್ತಾ “ಆಗ ಪ್ರಧಾನ ವಿರೋಧ ಪಕ್ಷ ಸೋಷಿಯಲಿಸ್ಟ್ ಪಕ್ಷವಾಗಿತ್ತು ಚರ್ಚೆಗಳು ವಿಷಯಗಳನ್ನು ಕೇಂದ್ರೀಕರಿಸಿ ನಡೆಸುತ್ತಿದ್ದ ಸೋಷಿಯಲಿಸ್ಟ್ ರು ಇಡೀ ಸಭೆಯ ಗಮನವನ್ನು ಸೆಳೆಯುತ್ತಿದ್ದರು. ಆ ಚರ್ಚೆಗಳನ್ನು ಸಭೆ ಗಂಭೀರವಾಗಿ ಪರಿಗಣಿಸುತ್ತಿತ್ತು” ಎಂದಿದ್ದಾರೆ.

ಅದರ ನಂತರ ಶಾಂತವೇರಿ ಗೋಪಾಲಗೌಡರ ಪ್ರಭಾವದಲ್ಲಿ ಬೆಳೆದವರೆಂದು ಹೇಳುತ್ತಿದ್ದ ಜೆ ಹೆಚ್ ಪಟೇಲರಾಗಲೀ, ಸಾರೆಕೊಪ್ಪ ಬಂಗಾರಪ್ಪ ಆಗಲಿ, ಎಸ್.ಎಂ. ಕೃಷ್ಣ ಆಗಲೀ ಸಮಾಜವಾದಿ ಪ್ರಭಾವದವರೆಂದು ಗುರುತಿಸುವಷ್ಟು ಮಟ್ಟದಲ್ಲಿ ಕಾರ್ಯ ನಿರ್ವಹಿಸಿದವರಲ್ಲ. ಆದರೆ ಇದೇ ಪ್ರಭಾವದವರೆಂದು ಗುರ್ತಿಸಿಕೊಂಡಿದ್ದ ಡಿ. ದೇವರಾಜ ಅರಸು ಮಾತ್ರ ತಮ್ಮ ಸಮಾಜವಾದಿ ಛಾಪನ್ನು ಒತ್ತಿದ್ದರು. ಕರ್ನಾಟಕವೆಂದು ಹೆಸರು ನೀಡುವುದರಿಂದ ಹಿಡಿದು ಭೂ ಸುಧಾರಣೆಯವರೆಗೂ ಕರ್ನಾಟಕ ಇದುವರೆಗೂ ಕಾಣದಂತಹ ಪ್ರಗತಿಪರ ಕಾರ್ಯಗಳನ್ನು ಮಾಡಿದವರು ಅರಸು. ಆದರೆ ಅವರೂ ಕೂಡ ತಮ್ಮ ರಾಜಕೀಯ ಅಧಿಕಾರ ಉಳಿಸಿಕೊಳ್ಳಲು ಭ್ರಷ್ಟಾಚಾರ ಸೇರಿದಂತೆ ಸಮಾಜವಾದಿ ತತ್ವಕ್ಕೆ ವಿರುದ್ದವಾಗಿರುವ ಹಲವು ತಪ್ಪುಗಳನ್ನು ಮಾಡಿದವರೇ ಆಗಿದ್ದರು.

ಹಲವು ರಾಜಕೀಯ ನಾಯಕರುಗಳು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದ್ದರು. ಆದರೆ ಅದಕ್ಕೆ ಯಾವುದೇ ತತ್ವ ಸಿದ್ಧಾಂತಗಳು ಕಾರಣವಾಗಿರಲಿಲ್ಲ. ಬದಲಿಗೆ ಅದು ಕೇವಲ ತಮ್ಮ ಸಿಟ್ಟು, ಅಸಮಾಧಾನಗಳಿಗೆ ಕಂಡುಕೊಂಡ ಪರಿಹಾರ ಹಾಗೂ ಒತ್ತಡತಂತ್ರಗಳ ನಡೆಗಳಾಗಿದ್ದವು. ಯಾವುದೇ ಪ್ರಾದೇಶಿಕ ಆಶೋತ್ತರಗಳನ್ನು ಈ ಪಕ್ಷಗಳು ಹೊಂದಿರಲಿಲ್ಲ. ಇವರುಗಳು ಕಟ್ಟಿದ ಪ್ರಾದೇಶಿಕ ಪಕ್ಷಗಳಲ್ಲಿ ಮುಖ್ಯವಾದವೆಂದರೆ ದೇವರಾಜ ಅರಸು ಕಟ್ಟಿದ ಻ಅರಸು ಕಾಂಗ್ರೆಸ್, ಬಂಗಾರಪ್ಪ ಕಟ್ಟಿದ ಕ್ರಾಂತಿರಂಗ ಹಾಗೂ ಕರ್ನಾಟಕ ಕಾಂಗ್ರೆಸ್ ಮುಖ್ಯವಾದವುಗಳು. ಇವುಗಳು ಯಾವುವೂ ಕರ್ನಾಟಕದ ರಾಜಕಾರಣದಲ್ಲಿ ಪರ್ಯಾಯವೊಂದನ್ನು ನೀಡಲು ಶಕ್ತವಾಗಿರಲಿಲ್ಲ. ಹೆಚ್ಚಿನವು ನಂತರ ಕಾಂಗ್ರೆಸ್ಸಿನೊಂದಿಗೆ ವಿಲೀನಗೊಂಡವು.

ತುರ್ತು ಪರಿಸ್ಥಿತಿಯ ನಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರವನ್ನು ಅಲ್ಪ ಕಾಲಾವಧಿಯವರೆಗೆ ಹಿಡಿದಿತ್ತು. ಇದು ಜಯಪ್ರಕಾಶ್ ನಾರಾಯಣರ ‘ಸಂಪೂರ್ಣ ಕ್ರಾಂತಿ’ ಚಳವಳಿಯ ಲಾಭವನ್ನು ಪಡೆಯಲು ಶ್ರಮಿಸಿತು. ಇದು ರಾಷ್ಷ್ರ ಮಟ್ಟದಲ್ಲಿ ಮೊದಲಬಾರಿಗೆ ಕಾಂಗ್ರೆಸ್ಸಿಗೆ ಪರ್ಯಾಯವಾದ ರಾಜಕೀಯ ಶಕ್ತಿಯೊಂದರ ಭರವಸೆ ಹುಟ್ಟಿಸಿದ್ದಂತೂ ಸುಳ್ಳಲ್ಲ. ಆದರೆ ಇದು ಬಿ. ಜೆ. ಪಿ ಯ ಹಿಂದಿನ ರೂಪವಾದ ಜನಸಂಘದ ಬೆಂಬಲವನ್ನು ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. ಅದೇ ಮೊದಲ ಬಾರಿಗೆ ಸಂಘ ಪರಿವಾರ ಕೇಂದ್ರದಲ್ಲಿ ಅಧಿಕಾರ ಕೇಂದ್ರದ ಭಾಗವಾಯಿತು.

ಇದರ ಮೂಲದಿಂದಲೇ ಜನತಾ ಪಕ್ಷ ಕರ್ನಾಟಕದಲ್ಲಿ ಮೊದಲಬಾರಿಗೆ ಕಾಂಗ್ರೆಸ್ಸೇತರ ಸರಕಾರವಾಗಿ ಅಧಿಕಾರ ಹಿಡಿದು ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿಯಾದರು. ಹೆಚ್. ಡಿ. ದೇವೇಗೌಡರೊಂದಿಗೆ ಮನಸ್ತಾಪದ ಕಾರಣದಿಂದಾಗಿ ಅದು ಒಡೆದು ಜಾತ್ಯಾತೀತ ಜನತಾದಳವೆಂಬ ಹೆಸರಿನೊಂದಿಗೆ ಚಾಲ್ತಿಗೆ ಬಂದು ಒಂದು ಪ್ರಾದೇಶಿಕ ಪಕ್ಷದಂತೆ ಬಿಂಬಿತವಾಗತೊಡಗಿತು. ಆದರೆ ಇದು ತನ್ನದೇ ಪ್ರಾದೇಶಿಕ ಕಾರ್ಯಸೂಚಿಗಳಾಗಲೀ, ತನ್ನದೇ ರಾಜಕೀಯ ಕಾರ್ಯಕ್ರಮಗಳನ್ನಾಗಲೀ, ತನ್ನದೇ ತತ್ವ ಸಿದ್ಧಾಂತವನ್ನಾಗಲೀ ಹೊಂದಿರಲಿಲ್ಲ.

80 ರ ಕಾಲಘಟ್ಟದಲ್ಲಿ ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಮದಾಸ‍, ರೈತ ಸಂಘದ ಎಂ. ಡಿ ನಂಜುಂಡಸ್ವಾಮಿ ಮೊದಲಾದ ಪ್ರಗತಿಪರ ಹೋರಾಟಗಾರ ಶಕ್ತಿಗಳು ಸೇರಿಕೊಂಡು ಮೊದಲ ಬಾರಿಗೆ ಪ್ರಾದೇಶಿಕ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಒಂದು ಗಂಭೀರ ಪ್ರಯತ್ನವನ್ನು ಮಾಡಿದರು. ಅದು ಪ್ರಗತಿರಂಗವೆಂಬ ಹೆಸರಿನೊಂದಿಗೆ ಚಾಲ್ತಿಗೆ ಬಂದಿತು. ಅದು ಸಿದ್ದಾಂತವನ್ನು ಇಟ್ಟುಕೊಂಡು ಪ್ರಾದೇಶಿಕ ಪಕ್ಷವಾಗಿ ರೂಪುಗೊಳ್ಳಲು ನಡೆಸಿದ ಪ್ರಯತ್ನವೆನ್ನಬಹುದಾದರೂ ಅಲ್ಲಿ ವ್ಯಕ್ತಿವಾದಿ ಅಹಂಗಳು ಮೇಲುಗೈ ಪಡೆದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ತಡೆಯನ್ನೊಡ್ಡಿತೆನ್ನಬಹುದು.

ಆಗಿನಿಂದಲೂ ಕಾಂಗ್ರೆಸ್ಸಿಗೆ ಪರ್ಯಾಯವಾದ ಪ್ರಾದೇಶಿಕ ರಾಜಕೀಯ ಶಕ್ತಿಯೊಂದನ್ನು ಹುಟ್ಟುಹಾಕುವ ಪ್ರಯತ್ನಗಳು ನಡೆಯುತ್ತಲೇ ಬಂದಿದ್ದರೂ ಅವುಗಳು ರೂಪುಗೊಳ್ಳಲೇ ಇಲ್ಲ ಎನ್ನಬಹುದು.

ನಂತರ ನೋಡುವುದಾದರೆ ಯಡಿಯೂರಪ್ಪ ಬಿಜೆಪಿಯೊಂದಿಗಿನ ವೈಮನಸ್ಸಿನಿಂದ ಕಟ್ಟಿದ ಕರ್ನಾಟಕ ಜನತಾ ಪಾರ್ಟಿ, ಶ್ರೀರಾಮುಲು ಜನಾರ್ದನ ರೆಡ್ಡಿ ಸಹೋದರರು ಕಟ್ಟಿಕೊಂಡ ಬಡವರ ಶ್ರಮಿಕರ ರೈತರ ಪಕ್ಷ, ಹೀಗೆ ಹಲವನ್ನು ಪಟ್ಟಿಮಾಡಿದರೂ ಇವುಗಳು ಆಯಾ ಸಂದರ್ಭದ ಒತ್ತಡತಂತ್ರಗಳು ಹಾಗೂ ಲಾಬಿ ಮಾಡಲು ಮಾಡಿಕೊಂಡವುಗಳಾಗಿದ್ದವೇ ಹೊರತು ಬೇರೆ ಯಾವುದೇ ಪ್ರಾದೇಶಿಕ ರಾಜಕೀಯ ಕಾರ್ಯಸೂಚಿಗಳು ಇವಕ್ಕೆ ಇರಲಿಲ್ಲ.

ಇಂದು ಕಾಂಗ್ರೆಸ್ ಗೆ ಪರ್ಯಾಯವಾಗಿ ಬಿ.ಜೆ.ಪಿ ಬೆಳೆದು ನಿಂತಿದೆ. ಕೇಂದ್ರದಲ್ಲಿ ಅತ್ಯಧಿಕ ಬಹುಮತ ಗಳಿಸಿ ಅಧಿಕಾರದಲ್ಲಿದೆ. ದೇಶದ ಆಂದ್ರ, ತಮಿಳುನಾಡು, ಬಿಹಾರದಂತಹ ಕೆಲವೇ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸುತ್ತಿವೆ. ಇವುಗಳಲ್ಲಿ ಹೆಚ್ಚಿನವು ಬಿ ಜೆ ಪಿ ನೇತೃತ್ವದ ಎನ್ ಡಿ ಎಯ ತೆಕ್ಕೆಯೊಳಗೆ ಇರುವಂತಹವುಗಳೇ ಆಗಿವೆ. ಅಂದರೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಇಲ್ಲವೇ ಬಿಜೆಪಿ ನೇತೃತ್ವದ ಮೈತ್ರಿಕೂಟದೊಂದಿಗೆ ಗುರುತಿಸಿಕೊಳ್ಳಲೇಬೇಕೆಂಬ ಪರಿಸ್ಥಿತಿಯಲ್ಲಿರುವ ಬೆನ್ನೆಲುಬಿಲ್ಲದ ರಾಜಿಕೋರ ತಾತ್ಕಾಲಿಕ ರಾಜಕೀಯ ಶಕ್ತಿಗಳೇ ದೇಶದ ಹಲವು ಭಾಗದಲ್ಲಿರೋದು.

ಪ್ರಾದೇಶಿಕ ಪಕ್ಷ ಸ್ಥಾಪನೆ ವಿಚಾರದಲ್ಲಿ ಇಂಥ ಹುಚ್ಚಾಟಗಳಿಗೂ ರಾಜ್ಯ ಸಾಕ್ಷಿಯಾಗಿತ್ತು:

ಇಂದು ಭಾರತದ ಒಕ್ಕೂಟ ವ್ಯವಸ್ಥೆ ಬಹಳ ಶಿಥಿಲ ಸ್ಥಿತಿಯಲ್ಲಿದೆ. ರಾಜ್ಯಗಳ ಸ್ವಾಯತ್ತತೆ, ವಿಕೇಂದ್ರೀಕೃತ ಅಧಿಕಾರ ಚಲಾವಣೆ ಯೋಚಿಸಲು ಕೂಡ ಸಾಧ್ಯವಾಗದ ಸ್ಥಿತಿಯಲ್ಲಿವೆ. ಎಲ್ಲವನ್ನೂ ಕೇಂದ್ರೀಕರಣದಡಿ ಹಿಡಿದಿಡುವ ಕೆಲಸಗಳು ಬಿರುಸುಗೊಂಡಿವೆ. ಪ್ರಾದೇಶಿಕ ಆಶೋತ್ತರಗಳನ್ನು ಹಿಂದೆಂದೂ ಇಲ್ಲದ ರೀತಿಯಲ್ಲಿ ದಮನಕ್ಕೊಳಗಾಗುತ್ತಿವೆ. ಕನ್ನಡ, ಕರುನಾಡು, ಕರ್ನಾಟಕ ಎಂಬ ಅಸ್ಮಿತೆಗಳು ಬೆಳೆಯದಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಿದ್ದರೂ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಹುಟ್ಟಿ ಅಧಿಕಾರ ಹಿಡಿಯುವ ಲಕ್ಷಣಗಳು ಸದ್ಯದಲ್ಲಂತೂ ಕಾಣುತ್ತಿಲ್ಲ.

‘ಈಗಿನ ಸಂದರ್ಭದಲ್ಲಿ ಬಿಜೆಪಿಯ ಕೋಮುವಾದಕ್ಕಿಂತಲೂ ಕಾಂಗ್ರೆಸ್‌ನ ಭ್ರಷ್ಟಾಚಾರ ಮೇಲು’ ಎಂಬಂಥ ಪರಿಸ್ಥಿತಿ ಪರ್ಯಾಯ ರಾಜಕಾರಣದ ಬಗ್ಗೆ ಯೋಚಿಸುತ್ತಿರುವವರ ವಲಯದಲ್ಲಿ ಪ್ರಧಾನವಾಗಿದೆ.

ಕೆಲವು ವರ್ಷಗಳಿಂದ ಹಲವು ಸಂಘಟನೆಗಳು ಪರ್ಯಾಯ ರಾಜಕೀಯ ಶಕ್ತಿಯೊಂದರ ಬಗ್ಗೆ ಹೇಳುತ್ತಾ ಬಂದಿದ್ದರೂ ಚುನಾವಣೆಯ ಸಂದರ್ಭ ಬಂದಾಗ ಕಾಂಗ್ರೆಸ್ಸಿನ ತೆಕ್ಕೆಯೊಳಗೆ ಸೇರಿಹೋಗಿವೆ. ಆರಂಭದಲ್ಲಿ ಹತ್ತುಹಲವು ಸಂಘಟನೆಗಳು ಸೇರಿದ ಜನಾಂದೋಲನಗಳ ಮಹಾಮೈತ್ರಿ, ಸರ್ವೋದಯ ಕರ್ನಾಟಕ, ಸ್ವರಾಜ್ ಇಂಡಿಯಾ ಮೊದಲಾದವುಗಳು ಸೇರಿ ಈಗ ಸದ್ಯಕ್ಕೆ ಇರುವ ಪರ್ಯಾಯ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವುದು ಮಾತ್ರ. ಸಂವಿಧಾನವನ್ನು ರಕ್ಷಿಸಿ ದೇಶವನ್ನು ಬ್ರಾಹ್ಮಣಶಾಹಿ ಹಿಂದೂ ಫ್ಯಾಸಿಸ್ಟರಿಂದ ರಕ್ಷಿಸಿಕೊಳ್ಳಲು ಇದು ಬಿಟ್ಟರೆ ಸಧ್ಯದಲ್ಲಿ ಬೇರೆ ದಾರಿಯಿಲ್ಲ ಎಂದು ವಾದಿಸುತ್ತಾ ಕಾಂಗ್ರೆಸ್ ಪರ ಹಲವು ರೀತಿಗಳಲ್ಲಿ ಪ್ರಚಾರ ಗಳಲ್ಲಿ ತೊಡಗಿದ್ದಾರೆ. ಕನ್ನಡಪರ, ಕರ್ನಾಟಕಪರ, ಪ್ರಗತಿಪರ ಮನಸ್ಸುಗಳು ಎಂದೆಲ್ಲಾ ವ್ಯಾಖ್ಯಾನಿಸಲ್ಪಡುವ ಶಕ್ತಿಗಳು ಗಂಭೀರವಾಗಿ ಯೋಚಿಸಬೇಕಾದ ವಿಚಾರವಿದು.

ಅಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇಲ್ಲವೇ ಜನತಾದಳದ ಪ್ರಭಾವಗಳಿಂದ ಹೊರತಾದ ಸೈದ್ಧಾಂತಿಕ ನೆಲೆಗಟ್ಟಿರುವ ಪರ್ಯಾಯ ರಾಜಕೀಯ ಶಕ್ತಿಯೊಂದರ ಹುಟ್ಟು ಸಾಧ್ಯವಾಗದಿರುವುದು ಈಗಲೂ ಇರುವ ವಾಸ್ತವವಾಗಿದೆ.