samachara
www.samachara.com
‘ವೀರಶೈವ- ಲಿಂಗಾಯತ’: ಬ್ರಾಹ್ಮಣೋ ಬ್ರಹ್ಮಾಂಡ ಘಾತಕ ವರ್ಸಸ್ ಜಂಗಮೋ ಜಗದ್ಘಾತಕ!
ವಿಚಾರ

‘ವೀರಶೈವ- ಲಿಂಗಾಯತ’: ಬ್ರಾಹ್ಮಣೋ ಬ್ರಹ್ಮಾಂಡ ಘಾತಕ ವರ್ಸಸ್ ಜಂಗಮೋ ಜಗದ್ಘಾತಕ!

ವಿಧಾನಭೆ ಚುನಾವಣೆ ಮುಗಿದ ನಂತರ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಏನಾಗಲಿದೆ? ಎಂಬ ಪ್ರಶ್ನೆ ಎದುರಾಗಿದೆ. ಆದರೆ, 2019ರ ಲೋಕಸಭೆ ಚುನಾವಣೆ ಹೊತ್ತಿಗೆ ಈ ಕೂಗು ಮತ್ತೆ ಕಾವು ಪಡೆದುಕೊಂಡರೂ ಅಚ್ಚರಿ ಇಲ್ಲ.

ವಾದಿರಾಜ ಭಟ್ಟ

ವಾದಿರಾಜ ಭಟ್ಟ

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಬಹುತೇಕ ಮರೆಗೆ ಸರಿದಂತಿದೆ. ಕರ್ನಾಟಕದಲ್ಲಿ ಪ್ರತ್ಯೇಕ ಲಿಂಗಾಯತ ಸ್ಥಾನಮಾನಕ್ಕಾಗಿ, ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಬೃಹತ್ ಹೋರಾಟಗಳು ನಡೆದಿದ್ದವು. ಚುನಾವಣೆ ದಿನಾಂಕ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ರಾಜ್ಯ ಸರ್ಕಾರ, ಲಿಂಗಾಯತ– ವೀರಶೈವ ಧರ್ಮವನ್ನು ಪ್ರತ್ಯೇಕ ಧರ್ಮವಾಗಿ ಪರಿಗಣಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿತ್ತು.

ಆದರೆ, ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಬಹುದಾಗಿದ್ದ ಈ ವಿಷಯವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಕೈಬಿಟ್ಟಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಪರವಾಗಿ ಕಾಂಗ್ರೆಸ್ ನಾಯಕರು, ಸಚಿವರು ಮುಂಚೂಣಿಯಲ್ಲಿದ್ದರು. ಈ ವಿಷಯವನ್ನು ರಾಜಕೀಯ ಹೋರಾಟವಾಗಿ ಬಳಸಿಕೊಳ್ಳಲು ಆಡಳಿತ ಪಕ್ಷ ಆರಂಭದಲ್ಲಿ ಚಿಂತಿಸಿತ್ತು ಎನಿಸುತ್ತದೆ. ಆದರೆ, ವೀರಶೈವ ಮಠಾಧೀಶರು ಪ್ರತ್ಯೇಕತೆಯನ್ನು ವಿರೋಧಿಸಿದರು. ರಾಜ್ಯ ರಾಜ್ಯಕಾರಣದ ಮೇಲೆ ಈ ವೀರಶೈವ ಮಠಗಳು ಪ್ರಭಾವವನ್ನು ಬೀರಬಲ್ಲ ಸಾಮರ್ಥ್ಯ ಹೊಂದಿವೆ. ಇದರಿಂದಾಗಿ ಚುನಾವಣೆಯಲ್ಲಿಈ ವಿಷಯವನ್ನು ರಾಜ್ಯ ಕಾಂಗ್ರೆಸ್ ನಾಯಕರು ಕೈಬಿಟ್ಟಿದ್ದಾರೆ ಎನಿಸುತ್ತದೆ.

ಇನ್ನು ಬಿಜೆಪಿಗರಿಗೆ ಈ ವಿಷಯ ನುಂಗಲಾರದ ತುತ್ತಾಗಿತ್ತು. ಈ ವಿಷಯವನ್ನು ಹೇಗೆ ನಿರ್ವಹಿಸುವುದು ಎಂಬ ಗೊಂದಲ ಬಿಜೆಪಿಗರಲ್ಲಿ ಇನ್ನೂ ಮುಂದುವರೆದಿದೆ. 2013ರಲ್ಲಿ ಸ್ವತಃ ಬಿಎಸ್ ಯಡಿಯೂರಪ್ಪನವರೇ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಮೌನಕ್ಕೆ ಶರಣಾಗಬೇಕಾಗಿದೆ. ಇನ್ನು ವಿಧಾನಭೆ ಚುನಾವಣೆ ಮುಗಿದ ನಂತರ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಏನಾಗಲಿದೆ? ಎಂಬ ಪ್ರಶ್ನೆ ಎದುರಾಗಿದೆ. ಆದರೆ, 2019ರ ಲೋಕಸಭೆ ಚುನಾವಣೆ ಹೊತ್ತಿಗೆ ಈ ಕೂಗು ಮತ್ತೆ ಕಾವು ಪಡೆದುಕೊಂಡರೂ ಅಚ್ಚರಿ ಇಲ್ಲ.

ಲಿಂಗಾಯತಕ್ಕೆ ಪ್ರತ್ಯೇಕ ಸ್ಥಾನ ಮಾನ ಏಕೆ ಬೇಕು?

ಧಾರ್ಮಿಕ ಸಂಕೇತಗಳು. 
ಧಾರ್ಮಿಕ ಸಂಕೇತಗಳು. 

ಭಾರತದ 2011ರ ಜನಗಣತಿ ಪ್ರಕಾರ, ದೇಶದಲ್ಲಿ ಶೇ. 79.8ರಷ್ಟು ಹಿಂದೂಗಳು (96.62 ಕೋಟಿ), ಮುಸ್ಲಿಮರು ಶೇ. 14.23 (17.22 ಕೋಟಿ), ಕ್ರಿಶ್ಚಿಯನ್ನರು ಶೇ. 2.3 (2.78 ಕೋಟಿ), ಸಿಖ್ಖರು ಶೇ. 1.72 (2.08 ಕೋಟಿ), ಬೌದ್ಧರು ಶೇ. 0.70 (84.43 ಲಕ್ಷ), ಜೈನರು ಶೇ. 0.37 (44.52 ಲಕ್ಷ), ಇತರ ಧರ್ಮೀಯರು ಶೇ. 0.66 (79.38 ಲಕ್ಷ) ಇದ್ದಾರೆ.

ಮೇಲಿನ ಎಲ್ಲ ಧರ್ಮೀಯರ ಶೇಕಡಾವಾರು ಮತ್ತು ಜನಸಂಖ್ಯೆಯ ಆಧಾರದಲ್ಲಿ ಲಿಂಗಾಯತ ಧರ್ಮಕ್ಕೆ ಕೂಡ ಪ್ರತ್ಯೇಕ ಧರ್ಮದ ಸ್ಥಾನ ಸಿಗಬೇಕಿದೆ. ಈ ನಿಟ್ಟಿನಲ್ಲಿ ಲಿಂಗಾಯಿತ ಪ್ರತ್ಯೇಕತೆ ಹೋರಾಟ ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ಹೋರಾಟವಾಗಿದೆ. ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಮಾತ್ರ ಲಿಂಗಾಯಿತ ಧರ್ಮೀಯರು ಸೀಮಿತರಾಗಿದ್ದಾರೆ. ಅದರಲ್ಲೂ ಕೇರಳದಲ್ಲಿ ಬೆರಳೆಣಿಕೆಯಷ್ಟು ಲಿಂಗಾಯಿತರು ಸಿಗಬಹುದು. ಇದನ್ನು ಹೊರತುಪಡಿಸಿದರೆ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಅಲ್ಪ ಪ್ರಮಾಣದಲ್ಲಿ ಲಿಂಗಾಯಿತರು ಕಂಡುಬಂದರೆ, ಕರ್ನಾಟದಲ್ಲಿ ಲಿಂಗಾಯಿತರ ಪ್ರಾಬಲ್ಯವಿದೆ.

ಹಾವನೂರು ವರದಿ ಮತ್ತು ಕಾಂಗ್ರೆಸ್ ಸರ್ಕಾರ ನಡೆಸಿರುವ ಜಾತಿ ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಲಿಂಗಾಯಿತರು ಶೇ. 14ರ ಆಸುಪಾಸಿಗೆ ಸೀಮಿತರಾಗಿದ್ದಾರೆ. ಇದೇ ಆಧಾರದಲ್ಲಿ ದೇಶಾದ್ಯಂತ ಹಂಚಿಹೋಗಿರುವ ಶೇ. 14.23ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಂ ಧರ್ಮಕ್ಕೆ ಪ್ರತ್ಯೇಕ ಮತ್ತು ಅಲ್ಪಸಂಖ್ಯಾತ ಸ್ಥಾನ ನೀಡಲಾಗಿದೆ. ಇನ್ನು ಬಹುತೇಕ ಉದ್ಯಮಗಳಲ್ಲಿ ತೊಡಗಿರುವ ಜೈನ ಧರ್ಮೀಯರಿಗೆ ಕೂಡ ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ನೀಡಲಾಗಿದೆ. ಇವುಗಳ ಆಧಾರದಲ್ಲಿ ಲಿಂಗಾಯತ ಧರ್ಮಕ್ಕೆ ಕೂಡ ಪ್ರತ್ಯೇಕತೆಯ ಸ್ಥಾನಮಾನವನ್ನು ನೀಡಬೇಕಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೇಗೆ?

ಬಸವಣ್ಣ ನೀಡಿದ ಇಷ್ಟಲಿಂಗದ ಪರಿಕಲ್ಪನೆ. 
ಬಸವಣ್ಣ ನೀಡಿದ ಇಷ್ಟಲಿಂಗದ ಪರಿಕಲ್ಪನೆ. 

ಲಿಂಗಾಯತ ಪ್ರತ್ಯೇಕ ಧರ್ಮವಾಗಿ ಸ್ಥಾನಮಾನವನ್ನು ಪಡೆದರೆ ಬಸವಣ್ಣ ಸ್ಥಾಪಿಸಿದ ಧರ್ಮಕ್ಕೆ ಆಧುನಿಕ ಜಗತ್ತಿನಲ್ಲಿ ಅಧಿಕೃತವಾಗಿ ಧರ್ಮದ ಸ್ಥಾನಮಾನ ಸಿಗಲಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಕರ್ನಾಟದ ಹೊಸ ಧರ್ಮವೊಂದು ಗುರುತಿಸಿಕೊಂಡಂತಾಗುತ್ತದೆ. ಇಲ್ಲಿ ಗಮನಿಸಬೇಕಿರುವ ಮಹತ್ವದ ಸಂಗತಿ ಎಂದರೆ, ಸನಾತನ(ಹಿಂದೂ), ಕ್ರಿಶ್ಚಿಯನ್, ಮುಸ್ಲಿಂ, ಜೈನ, ಬೌದ್ಧ ಮೊದಲಾದ ಯಾವುದೇ ಧರ್ಮಕ್ಕಿಂಥ ತೀರಾ ಭಿನ್ನವಾದ ಆಚರಣೆಗಳನ್ನು ಲಿಂಗಾಯತ ಧರ್ಮ ಒಳಗೊಂಡಿದೆ.

ಉಳಿದ ಧರ್ಮಗಳಿಗೆ ಸಾಂಕೇತಿಕವಾಗಿ ಪೂಜೆ ಮೊದಲಾದ ಆಚರಣೆಗಳಿಗೆ ಒಂದು ಸ್ಥಳ ಇದೆ. ಆದರೆ, ಲಿಂಗಾಯತರಿಗೆ ಅವರು ಎಲ್ಲಿದ್ದರೂ ಇಷ್ಟಲಿಂಗ ಅವರೊಂದಿಗೇ ಇರುತ್ತದೆ. ಗುಡಿ, ಚರ್ಚ್, ಮಸೀದಿ, ದರ್ಗಾ, ಬಸದಿ, ಬೌದ್ಧ ವಿಹಾರಗಳು ಮೊದಲಾದ ಯಾವುದೇ ಧಾರ್ಮಿಕ ಕೇಂದ್ರಗಳಿಗೂ ಹೋಗಬೇಕಿಲ್ಲ ಎನ್ನುವುದು ಲಿಂಗಾಯತ ಧರ್ಮದ ತಳಹದಿ. ಇನ್ನುಳಿದಂಥೆ, ದೇವರು ಮತ್ತು ಭಕ್ತರ ನಡುವಿನ ಮಧ್ಯವರ್ತಿಗೆ ಅವಕಾಶವನ್ನೇ ಬಸವಣ್ಣ ನೀಡಿಲ್ಲ.

ಇದರೊಂದಿಗೆ ದಾಸೋಹ ಎಂಬ ಪರಿಕಲ್ಪನೆಯ ಮೂಲಕ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ತೊಡೆದು ಹಾಕಲು ಬಸವಣ್ಣ ಯತ್ನಿಸಿದ್ದ. ಆರ್ಥಿಕ ಅಸಮಾನತೆಗೆ ಆಧುನಿಕ ಸಂದರ್ಭದಲ್ಲಿ ಸರ್ಕಾರಗಳು ಜಾರಿಗೆ ತರುತ್ತಿರುವ ಕಲ್ಯಾಣ ಯೋಜನೆಗಳಿಗೂ ಪೂರ್ವದಲ್ಲೇ, 800 ಶತಮಾನಗಳಷ್ಟು ಹಿಂದೆಯೇ ದಾಸೋಹ ಪರಿಕಲ್ಪನೆಯನ್ನು ಜಾರಿಗೆ ತರಲು ಯತ್ನಿಸಲಾಗಿದೆ.

ಜಾತಿ, ಲಿಂಗಗಳ ನಡುವೆ ಇರುವ ಮೇಲು – ಕೀಳುಗಳನ್ನು ತೊಡೆದು ಹಾಕಲು 12ನೇ ಶತಮಾನದಲ್ಲೇ ಬಸವಣ್ಣ ಮುಂದಾಗಿದ್ದ. ಇದಕ್ಕಾಗಿ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ಲಿಂಗ, ವೃತ್ತಿಯವರಿಗೂ ಮುಕ್ತವಾದ ಅವಕಾಶವನ್ನು ನೀಡಲಾಗಿತ್ತು. ಇಂಥ ಉದಾತ್ತ ಧ್ಯೇಯಗಳು ಸನಾತನ (ಹಿಂದು) ಧರ್ಮದಲ್ಲಿಲ್ಲ. ಇಂಥ ಉದಾತ್ತತೆಯಿಂದಾಗಿ ಲಿಂಗಾಯತ ಈಗ ಹೇಳಲಾಗುತ್ತಿರುವ ಹಿಂದೂ ಧರ್ಮದಿಂದ ಸಂಪೂರ್ಣ ಪ್ರತ್ಯೇಕವಾಗಿ ನಿಂತಿದೆ.

ಆದರೆ, ಬ್ರಿಟಿಷರ ಕಲ್ಪನೆಯಾದ ಹಿಂದೂ ಧರ್ಮದ ತೆಕ್ಕೆಗೆ ಲಿಂಗಾಯತವನ್ನು ಸೇರಿಸಿಕೊಳ್ಳಲಾಗಿದೆ. ಇದಕ್ಕೆ 19ನೇ ಶತಮಾನದಿಂದ ವಿರೋಧ ವ್ಯಕ್ತವಾಗಿದೆ. ಪ್ರತ್ಯೇಕ ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟು ಶತಮಾನ ಕಳೆದಿದೆ.

ವೀರಶೈವ – ಲಿಂಗಾಯತ ನಡುವಿನ ವ್ಯತ್ಯಾಸವೇನು?

‘ವೀರಶೈವ- ಲಿಂಗಾಯತ’: ಬ್ರಾಹ್ಮಣೋ ಬ್ರಹ್ಮಾಂಡ ಘಾತಕ ವರ್ಸಸ್ ಜಂಗಮೋ ಜಗದ್ಘಾತಕ!

12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಲಿಂಗಾಯತಕ್ಕೂ ವೀರಶೈವಕ್ಕೂ ಬೆಸುಗೆ ಹಾಕಲಾಗಿದೆ. ರೇಣುಕಾಚಾರ್ಯ ಸ್ಥಾಪಿಸಿದ್ದಾನೆ ಎನ್ನಲಾಗುವ ವೀರಶೈವ ಧರ್ಮಕ್ಕೂ ಲಿಂಗಾಯತಕ್ಕೂ ಸಂಬಂಧವಿಲ್ಲ. ಬಹುತೇಕ ಲಭ್ಯ ಆಧಾರಗಳ ಪ್ರಕಾರ, ವೀರೈವರ ಆಧಾರ ಗ್ರಂಥವಾಗಿರುವ ಸಿದ್ಧಾಂತ ಶಿಖಾಮಣಿ 14ನೇ ಶತಮಾನದ ಆಸುಪಾಸಿಗೆ ಸೀಮಿತವಾಗಿದೆ. ಆದ್ದರಿಂದ ಬಸವಣ್ಣನೇ ಲಿಂಗಾಯತ ಧರ್ಮದ ಹರಿಕಾರ ಎನ್ನವುದರಲ್ಲಿ ಯಾವುದೇ ಸಂದೇಹಗಳಿಲ್ಲ.

ಇಂದಿನ ಬಹುತೇಕ ವೀರಶೈವ ಮಠಗಳು ವೇದ, ಶಾಸ್ತ್ರ, ಪುರಾಣ ಮತ್ತು ವೈದಿಕ ಆಚರಣೆಗಳನ್ನು ಯಥಾವತ್ತಾಗಿ ಅನುಕರಿಸುತ್ತಿವೆ. ಇದರೊಂದಿಗೆ, ತೀರಾ ಇತ್ತೀಚಿನವರೆಗೆ ವೀರಶೈವ ಮತ್ತು ಲಿಂಗಾಯಿತರ ನಡುವೆ ವೈವಾಹಿಕ ಸಂಬಂಧಗಳು ಕೂಡ ಇರಲಿಲ್ಲ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಜಾತಿ, ಧರ್ಮೀಯರಲ್ಲಿ ಬದಲಾಗುವಂತೆ ವೀರಶೈವ – ಲಿಂಗಾಯತರಲ್ಲಿ ಕೂಡ ವೈವಾಹಿಕ ಸಂಬಂಧಗಳಲ್ಲಿ ಪರಿವರ್ತನೆಯಾಗಿದೆ.

ಇನ್ನು ವೀರಶೈವರು ತಮ್ಮನ್ನು ಗುರುವಿನ ಸ್ಥಾನದಲ್ಲಿ ಪ್ರತಿಷ್ಠಾಪಿಸಿಕೊಂಡಿದ್ದಾರೆ. ಅವರು ಬಹುತೇಕ ವೈದಿಕರು ನಡೆಸುವ ಎಲ್ಲ ಆಚರಣೆಗಳನ್ನು ಇಂದು ಅನುಸರಿಸುತ್ತಿದ್ದಾರೆ. ದೇವಾಲಯಗಳು, ಮಠಗಳಲ್ಲಿ ವೈದಿಕ ಆಚರಣೆಗಳೇ ವಿಜೃಂಭಿಸುತ್ತಿವೆ. ವಿವಾಹ, ತಿಥಿ ಮೊದಲಾದ ಆಚರಣೆಗಳನ್ನು ಬ್ರಾಹ್ಮಣರು ಪುರೋಹಿತಿಕೆ ನಡೆಸುವಂತೆ, ವೀರಶೈವರು ಅಥವಾ ಜಂಗಮರು ನೆರವೇರಿಸುತ್ತಾರೆ. ಇನ್ನು ವೀರಶೈವ ಮಠಗಳಲ್ಲಿ ಕೂಡ ವೈದಿಕ ಆಚರಣೆಗಳಾದ ಪೂಜೆ, ಹೋಮ, ಹವನ, ಅಭಿಷೇಕ ಮೊದಲಾದ ಆಚರಣೆಗಳು ಜಾರಿಯಲ್ಲಿವೆ.

ಸಿದ್ದರಾಮಯ್ಯ ಲಿಂಗಾಯತರು – ವೀರಶೈವರನ್ನು ಒಡೆದರೆ?

‘ವೀರಶೈವ- ಲಿಂಗಾಯತ’: ಬ್ರಾಹ್ಮಣೋ ಬ್ರಹ್ಮಾಂಡ ಘಾತಕ ವರ್ಸಸ್ ಜಂಗಮೋ ಜಗದ್ಘಾತಕ!

ಬಹುತೇಕ ವೀರಶೈವ ಮಠಾಧೀಶರು, ಲಿಂಗಾಯತ ಪ್ರತ್ಯೇಕ ಸ್ಥಾನಮಾನ ವಿಚಾರವನ್ನು ವಿರೋಧಿಸಿದ ಬಿಜೆಪಿಗರು ಸಿಎಂ ಸಿದ್ದರಾಮಯ್ಯ ಜಾತಿಯನ್ನು ಒಡೆದರು ಎಂದು ಆರೋಪಿಸಿದರು. ಇದನ್ನೇ ಸ್ವತಃ ಲಿಂಗಾಯಿತರು ಕೂಡ ಒಪ್ಪುವಂಥ ಕಥನಗಳನ್ನು ಕಟ್ಟಿ ವಾಟ್ಸಾಪ್‌ ಗುಂಪುಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಹರಡಲಾಯಿತು. ಈ ಮೂಲಕ ಸಿದ್ದರಾಮಯ್ಯ ವಿರುದ್ಧ ಆರೋಪ ಹೊರಿಸಲಾಯಿತು. ಆದರೆ, ವಾಸ್ತವವೇ ಬೇರೆ ಇದೆ.

ಜಂಗಮರಲ್ಲಿ ತಾವು ಗುರುಸ್ಥಾನದಲ್ಲಿರುವುದರಿಂದ ಮೇಲು, ಲಿಂಗಾಯಿತರು ಶಿಷ್ಯ ಸ್ಥಾನದಲ್ಲಿ ಇರುವುದರಿಂದ ಕೀಳು ಎಂಬ ಭಾವನೆ ಬೇರೂರಿದೆ. ಇವೆಲ್ಲವುಗಳಿಗೆ ಕಲಶವಿಟ್ಟಂತೆ ಅಡ್ಡಪಲ್ಲಕ್ಕಿ ಮತ್ತು ಪಾದಪೂಜೆಗಳು ವೀರಶೈವರಲ್ಲಿ ಚಾಲ್ತಿಯಲ್ಲಿವೆ. ಮಠಾಧೀಶರನ್ನು ಭಕ್ತರು ಅಡ್ಡಪಲ್ಲಕ್ಕಿಯಲ್ಲಿ ಹೊತ್ತು ಸಾಗುತ್ತಾರೆ. ಪಾದ ಪೂಜೆಯ ವೇಳೆ, ಗುರು ಸ್ಥಾನದಲ್ಲಿರುವ ವೀರಶೈವರ ಪಾದವನ್ನು ಶಿಷ್ಯ ಸ್ಥಾನದಲ್ಲಿರುವ ಲಿಂಗಾಯಿತರು ಪೂಜೆ ಮಾಡುತ್ತಾರೆ. ಈ ವೇಳೆ ಅವರ ಪಾದ ತೊಳೆದ ನೀರಿನಲ್ಲಿ ಅದ್ದಿದ ಬಾಳೆ ಹಣ್ಣನ್ನು ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತದೆ. ಅಲ್ಲದೇ, ಇದೇ ನೀರನ್ನು ಪವಿತ್ರ ಎಂದು ಭಾವಿಸಿ, ಮನೆಯಲ್ಲೆಲ್ಲ ಚಿಮುಕಿಸುವ ಸಂಪ್ರದಾಯ ಜಾರಿಯಲ್ಲಿದೆ.

ಇಂಥ ಆಚರಣೆಗಳು ವೀರಶೈವರು ಮತ್ತು ಲಿಂಗಾಯಿತರ ನಡುವೆ ಇರುವ ಅಂತರಕ್ಕೆ ಉದಾಹರಣೆಯಾಗಿವೆ. ಆದರೆ, ಇತ್ತೀಚೆಗೆ ವೀರಶೈವರ ಈ ಆಚರಣೆ ಮತ್ತು ವೀರಶೈವ ಮಠಗಳ ಆಡಂಭರದಿಂದಾಗಿ ಎಚ್ಚೆತ್ತ ಲಿಂಗಾಯಿತರು ಅಡ್ಡಪಲ್ಲಕ್ಕಿ ಮತ್ತು ಪಾದ ಪೂಜೆಯಂಥವುಗಳನ್ನು ತಿರಸ್ಕರಿಸುತ್ತಿದ್ದಾರೆ. ಆದರೆ, ವೀರಶೈವರು ಮಾತ್ರ ತಾವು ಇನ್ನೂ ಗುರುಸ್ಥಾನದಲ್ಲಿರುವ ಮೂಢನಂಬಿಕೆಯಲ್ಲಿದ್ದಾರೆ.

ಇನ್ನೊಂದು ಮಹತ್ವದ ಸಂಗತಿ ಎಂದರೆ, ವೀರಶೈವರು ಮತ್ತು ವೈದಿಕರ ನಡುವಿನ ಸ್ಪರ್ಧೆ. ಪರಸ್ಪರರು ತಾವು ಶ್ರೇಷ್ಠರು ಎಂದು ಪೈಪೋಟಿಗೆ ಇವರು ಬಿದ್ದಿದ್ದಾರೆ. ಬ್ರಾಹ್ಮಣೋ ಬ್ರಹ್ಮಾಂಡ ಘಾತಕ ಎಂಬ ಹೇಳಿಕೆಗೆ ಪರ್ಯಾಯವಾಗಿ ಜಂಗಮೋ ಜಗದ್ಘಾತಕ ಎಂಬ ಪ್ರತಿ ಹೇಳಿಕೆಯನ್ನು ಸೃಷ್ಟಿಸಲಾಗಿದೆ. ಈ ಮೂಲಕ ವೈದಿಕರಿಗೆ ಪ್ರತಿಸ್ಪರ್ಧೆ ನೀಡಲು ವೀರಶೈವ ಮಠಗಳು ಹಗಲಿರುಳು ಶ್ರಮಿಸುತ್ತಿವೆ. ಈ ಎಲ್ಲ ಉದಾಹರಣೆಗಳು ಲಿಂಗಾಯತ ಮತ್ತು ವೀರಶೈವ – ವೈದಿಕ ಧರ್ಮಗಳ ನಡುವೆ ಇರುವ ಅಂತರವನ್ನು ಸಾಬೀತುಪಡಿಸುತ್ತವೆ.

ಲಿಂಗಾಯತ ಪ್ರತ್ಯೇಕವಾದರೆ ಲಾಭವೇನು?

ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಅನೇಕ ಲಾಭಗಳು ಈ ಧರ್ಮೀಯರಿಗೆ ಸಿಗಲಿವೆ. ಮುಖ್ಯವಾಗಿ ಇದುವರೆಗೆ 3ಬಿಯಡಿ ಮೀಸಲಾತಿ ಪಡೆಯುತ್ತಿರುವ ಲಿಂಗಾಯಿತರು 2ಎಯಡಿ ಉದ್ಯೋಗ, ಶೈಕ್ಷಣಿಕ ಮೀಸಲಾತಿ ಪಡೆಯಲಿದ್ದಾರೆ. ಇದರೊಂದಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಜೈನ, ಬೌದ್ಧ, ಮುಸ್ಲಿಂ, ಕ್ರಿಶ್ಚಿಯನ್ ಮೊದಲಾದ ಅಲ್ಪಸಂಖ್ಯಾತ ಧರ್ಮಗಳಿಗೆ ಸಿಗುವ ವಿಶೇಷ ಸವಲತ್ತು ಸಿಗಲಿದೆ. ಈ ಮೂಲಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೂಡ ಲಿಂಗಾಯಿತ ಧರ್ಮೀಯರಿಗೆ ಹೆಚ್ಚಿನ ಲಾಭವಾಗಲಿದೆ.

ವಚನ ಕಾಲದಲ್ಲಿ ವೈದಿಕ ಧರ್ಮಕ್ಕೆ ಪ್ರತಿಸ್ಪಂದಿಯಾಗಿ ಸೃಷ್ಟಿಸಲಾಗಿರುವ ಲಿಂಗಾಯತ ಯಾವುದೇ ನಿಟ್ಟಿನಿಂದ ನೋಡಿದರೂ ಪ್ರತ್ಯೇಕ ಧರ್ಮಕ್ಕೆ ಅರ್ಹ ಧರ್ಮವಾಗಿದೆ. ಆದರೆ, ಪುರೋಹಿತಶಾಹಿ ಮನಃಸ್ಥಿತಿಯ ಕಾರಣದಿಂದಾಗಿ ಲಿಂಗಾಯತ ಧರ್ಮ ಇಂದಿಗೂ ಹಿಂದೂ ಧರ್ಮದ ಕಪಿಮುಷ್ಟಿಯಲ್ಲಿ ಸಿಲುಕಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಿಂದೂ ಧರ್ಮವನ್ನೇ ಅಜೆಂಡಾ ಆಗಿಸಿಕೊಂಡಿದೆ. ಅಲ್ಲದೇ, ಧರ್ಮವನ್ನು ವೋಟ್ ಬ್ಯಾಂಕ್ ಆಗಿಸಿ ಅಧಿಕಾರ ಹಿಡಿಯುವಲ್ಲಿ ಅದು ಯಶಸ್ವಿಯಾಗಿದೆ. ಇಂಥ ಸಂದರ್ಭದಲ್ಲಿ ಹಿಂದೂ ಧರ್ಮದಿಂದ 6 ರಾಜ್ಯಗಳಲ್ಲಿರುವ ನಿರ್ದಿಷ್ಟ ಗುಂಪು ಹೊರಟು ಹೋದರೆ ಭವಿಷ್ಯದಲ್ಲಿ ಬಿಜೆಪಿಗೆ ರಾಜಕೀಯ ನಷ್ಟದ ಭೀತಿ ಎದುರಾಗಿದೆ. ಒಂದು ವೇಳೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕತೆಯ ಸ್ಥಾನಮಾನ ನೀಡಿದರೆ, ಇನ್ನಷ್ಟು ಗುಂಪುಗಳು ಪ್ರತ್ಯೇಕ ಧರ್ಮದ ಪ್ರಸ್ತಾವನೆಯನ್ನು ಇಡಬಹುದು ಎಂಬ ಆತಂಕ ಕೇಂದ್ರ ಸರ್ಕಾರಕ್ಕೆ ಇದ್ದಂತಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮದ ಪ್ರತ್ಯೇಕತೆಯ ಹೋರಾಟವನ್ನು ಇನ್ನಷ್ಟು ಸೂಕ್ಷ್ಮವಾಗಿ ಪರಿಗಣಿಸಬೇಕಿದೆ.