samachara
www.samachara.com
ಅಟ್ಟ ಸೇರಿದ ಆದರ್ಶಗಳು; ಪಕ್ಷಾತೀತವಾಗಿ ಮೆರೆಯುತ್ತಿರುವ ಕುಟುಂಬ ರಾಜಕಾರಣ
ವಿಚಾರ

ಅಟ್ಟ ಸೇರಿದ ಆದರ್ಶಗಳು; ಪಕ್ಷಾತೀತವಾಗಿ ಮೆರೆಯುತ್ತಿರುವ ಕುಟುಂಬ ರಾಜಕಾರಣ

ದೇಶದ ರಾಜಕಾರಣವನ್ನು ಶೇ.30ಕ್ಕೂ ಹೆಚ್ಚು ಭಾಗ ಕುಟುಂಬ ರಾಜಕಾರಣವೇ ಆಕ್ರಮಿಸಿದೆ. ನಮ್ಮ ಸ್ವಾತಂತ್ರ ಹೋರಾಟಗಾರರು, ಗಾಂಧಿವಾದಿಗಳು, ಪ್ರಜಾಪ್ರಭುತ್ವವಾದಿಗಳು ದೇಶದ ಅಧಿಕಾರ ಹೇಗಿರಬೇಕು ಎಂದು ಕನಸು ಕಂಡಿದ್ದರೋ ಹಾಗಂತೂ ಇಲ್ಲ.

ರಾಜ್ಯದ ಜನತೆ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಈ ಹೊತ್ತಿಗೆ ಕರ್ನಾಟಕದಲ್ಲಿ ಹೊಸ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದಿರುತ್ತದೆ. ದುರಂತವೆಂದರೆ ಯಾವುದೇ ಪಕ್ಷ ಗೆದ್ದು ಸರ್ಕಾರ ರಚಿಸಿದರೂ ಪ್ರಜಾಪ್ರಭುತ್ವದ ಉದ್ದೇಶಗಳು ಮೂಲೆ ಗುಂಪಾಗಲಿವೆಯೇ ಎಂಬ ಆತಂಕ ಎದುರಾಗಿದೆ. ಕಾರಣ ತೆರೆಮರೆಯಲ್ಲಿ ನಡೆಯುತ್ತಿದ್ದ ಕುಟುಂಬ ಮತ್ತು ಜಾತಿ ರಾಜಕಾರಣ ಚುನಾವಣೆ ಘೋಷಣೆ ಆಗುತ್ತಿದ್ದಂತೆ ನೇರ ಬೀದಿಗೇ ಬಂದು ಮೆರೆದಾಟ ಆರಂಭಿಸಿವೆ.

ಭಾರತದಲ್ಲಿ ಕುಟುಂಬ ರಾಜಕೀಯ ಅಧಿಕಾರವನ್ನು ವಂಶಪಾರಂಪರ್ಯವಾಗಿ ಅನಾಯಾಸವಾಗಿ ಗಳಿಸಬಹುದು ಎಂಬುದು ನಿಜವಾಗಿ ಬಿಟ್ಟಿದೆ. ಹಿಂದೆ ದೇಶದ ಸಾಮಾಜಿಕ ಸ್ಥಿತಿಯನ್ನು ಜಮೀನ್ದಾರಿ ಮತ್ತು ಉಳಿಗಮಾನ್ಯ ಪದ್ಧತಿಗಳು ತೋಳ್ಬಲ ಮತ್ತು ಹಣ ಬಲದಿಂದ ಬೇಕಾದಂತೆ ಆಳುತ್ತಾ ಬಂದಿದ್ದನ್ನು ಕಂಡಿದ್ದೇವೆ. ಸ್ವಾತಂತ್ರ್ಯ ನಂತರ ಅವುಗಳಿಗೆ ಅಷ್ಟಿಷ್ಟು ಕಡಿವಾಣ ಹಾಕಲಾಗಿದೆ. ಆದರೆ ಅದರ ಜಾಗಗಳಲ್ಲಿ ಇಂದು ಬಂಡವಾಳಶಾಹಿ ವ್ಯವಸ್ಥೆ, ವಂಶ ರಾಜಕಾರಣ, ಕೋಮುವಾದ ಇತ್ಯಾದಿಗಳೂ ಕೂಡ ಅಧಿಕಾರವನ್ನು ತಂದುಕೊಡುವ ಸಾಧನಗಳಾಗಿ ಬೆಳೆದು ನಿಂತಿವೆ. ಇವು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ವ್ಯವಸ್ಥೆಯನ್ನು ಅಣಕ ಮಾಡುವಂತಿರುವುದೇ ಆತಂಕಕ್ಕೆ ಕಾರಣವಾಗಿದೆ.

ಹಣ ಬಲ ಮತ್ತು ತೋಳ್ಬಲ ಇದ್ದವರು ಮಾತ್ರ ಇಂದಿನ ರಾಜಕೀಯದಲ್ಲಿ ಸೆಣೆಸಬಹುದು ಎಂಬ ಕುಖ್ಯಾತಿಯ ಜತೆಗೆ ಕುಟುಂಬ ರಾಜಕಾರಣ ಮುನ್ನೆಲೆಗೆ ಬಂದಿದೆ. ರಾಜಕಾರಣಕ್ಕೆ ಹೊಸ ಯುವಜನ, ಹೊಸ ಚಿಂತನೆಗಳು, ಪ್ರಾದೇಶಿಕತೆ, ಅನುಭವಗಳು ಹರಿದು ಬರಲು ವಂಶಪಾರಂಪರ್ಯ ರಾಜಕಾರಣ ತಡೆಗೋಡೆಯಾಗಿದೆ. ಈ ವ್ಯವಸ್ಥೆ ಎಂದೂ ಅಧಿಕಾರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಹವಣಿಸುತ್ತದೆಯೇ ಹೊರತು ಹಂಚಿಕೆ ಮಾಡುವುದಿಲ್ಲ. ಅಧಿಕಾರ ಮತ್ತು ಆ ಮೂಲಕ ಬರುವ ಸಾಮಾಜಿಕ ಘನತೆ, ಸ್ಥಾನಮಾನ, ಆರ್ಥಿಕ ಅಭಿವೃದ್ಧಿ ಇತ್ಯಾದಿಗಳನ್ನು ಜನರಿಗೆ ಹಂಚಲು ಕುಟುಂಬ ರಾಜಕಾರಣ ಬಿಡದು. ಅಧಿಕಾರ ಎಂಬುದು ಕೆಲವೇ ಜನರ ಕೈ ವಶವಾಗಿ ದೇಶದ ಭವಿಷ್ಯ ಮಸುಕಾಗಬಹದು ಎಂದು ಗಾಂಧೀಜಿ ಹಾಗೂ ಅಂಬೇಡ್ಕರ್ ಅಂದು ಎದುರಿಸಿದ್ದ ಕಳವಳಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

ಕರ್ನಾಟಕದ ಮಟ್ಟಿಗೆ ಹೇಳಬಹುದಾದರೆ ಕಾಂಗ್ರೆಸ್ಸಿನ ಸಮಾಜವಾದ, ಜೆಡಿಎಸ್‌ನ ಜಾತ್ಯತೀತತೆ, ಬಿಜೆಪಿಯ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಇತ್ಯಾದಿ ಆದರ್ಶ ಮತ್ತು ತತ್ವಗಳು ಕುಟುಂಬ ರಾಜಕಾರಣದಿಂದಾಗಿ ಅರ್ಥ ಕಳೆದುಕೊಂಡಿವೆ. ಈ ಪಕ್ಷಗಳು ಅಧಿಕಾರ ವಿಕೇಂದ್ರೀಕರಣ ಮತ್ತು ಜಾತಿ ರಹಿತ ಜನತಂತ್ರದ ರಾಜಕೀಯವನ್ನು ಗುಜರಿಗೆ ತಳ್ಳಿವೆ. ಬದಲಾಗಿ ಅಧಿಕಾರ ಹಿಡಿಯಲು ಕುಟುಂಬ ಮತ್ತು ವಂಶಪಾರಂಪರ್ಯ ರಾಜಕಾರಣಗಳು ಕುರುಡು ಕಾಂಚಣದಂತೆ ಬೀದಿಯಲ್ಲಿ ಕುಣಿಯುತ್ತಿವೆ.

“ನೆಹರು ಆರಂಭಿಸಿದ ಕುಟುಂಬ ರಾಜಕಾರಣಕ್ಕೆ ತೆರೆ ಎಳೆದು ಕಾಂಗ್ರೆಸ್ ಮುಕ್ತ ಮಾಡುತ್ತೇವೆ,” ಎಂದು ಅಬ್ಬರಿಸುತ್ತಿದ್ದ ಬಿಜೆಪಿ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ತನ್ನ ಹೇಳಿಕೆಗೆ ಗುಡ್ ಬೈ ಹೇಳಿದೆ. ಇದಕ್ಕೆ ಅದು ತನ್ನ ಆಡಳಿತದ ವಿವಿಧ ರಾಜ್ಯಗಳಲ್ಲಿ ಕುಟುಂಬಗಳಿಗೆ ನೀಡಿದ ರಾಜಕೀಯ ಸ್ಥಾನಮಾನವನ್ನು ಗಮನಿಸಬಹುದು. ರಾಜಸ್ತಾನದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಮಗ ದುಷ್ಯಂತ್ ಸಿಂಗ್ ಈಗ ಸಂಸದ, ತಂಗಿ ಯಶೋಧರಾ ರಾಜೇ ಮಧ್ಯಪ್ರದೇಶದಲ್ಲಿ ಮಂತ್ರಿ. ಇವರ ತಾಯಿ ವಿಜಯರಾಜೇ ಸಿಂಧಿಯಾ ಕೂಡ ಬಿಜೆಪಿ ನಾಯಕಿ ಆಗಿದ್ದರು.

ಛತ್ತೀಸ್ಘಡದ ಮುಖ್ಯಮಂತ್ರಿ ರಮಣ್ಸಿಂಗ್ ಮಗ ಅಭಿಷೇಕ್ ಸಿಂಗ್ ಸಂಸದ, ಹಾಗೆ ಹಿಮಾಚಲ ಪ್ರದೇಶದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಪ್ರೇಮಕುಮಾರ್ ದುಮಾಲ್ ಪುತ್ರ ಅನುರಾಗ್ ಠಾಕೂರ್ ಕೂಡ ಕೇಂದ್ರ ಸಂಸದ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ತಂದೆ ಕೂಡ ಶಾಸನ ಸಭೆಯ ಸದಸ್ಯರಾಗಿದ್ದರು. ಅವರ ಕುಟುಂಬದ ಬಹುತೇಕ ಸದಸ್ಯರು ಬಿಜೆಪಿಯಿಂದ ರಾಜಕೀಯ ಅಧಿಕಾರ ಅನುಭವಿಸಿದವರೇ. ಗೋಪಿನಾಥ್ ಮುಂಡೆ, ಏಕನಾಥ್ ಖಡೆ, ಪ್ರಮೋದ್ ಮಹಾಜನ್ ಮಕ್ಕಳೂ ಈಗ ಅಪ್ಪಂದಿರ ರಾಜಕೀಯ ಬದುಕನ್ನು ಮುಂದುವರೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್ ಸಂಸದ, ಯಶ್ವಂತ್ ಸಿಂಗ್ ಪುತ್ರ ಜಯಂತ್ ಸಿಂಗ್ ಕೇಂದ್ರ ಸಚಿವ, ರಾಜಸ್ಥಾನ ರಾಜ್ಯಪಾಲ ಹಾಗು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಪುತ್ರ ರಾಜ್ವೀರ್ ಸಿಂಗ್ ಕೂಡ ಉತ್ತರ ಪ್ರದೇಶದ ಸಂಸದ. ಇದು ಉತ್ತರ ಪ್ರದೇಶದ ಮುಲಾಯಂ ಮತ್ತು ಬಿಹಾರದ ಲಾಲು ವಂಶ ರಾಜಕೀಯವನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದುಕೊಂಡಿದೆ.

ಇನ್ನು ಹಿಂದಿನ ಕರ್ನಾಟಕದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನದ್ದು ಡೈನಸ್ಟಿ ರಾಜಕೀಯ ಎಂದು ಹೀಗಳೆಯುತ್ತಿದ್ದ ಬಿಜೆಪಿ ಈಗ ತಾನೇ ಸೃಷ್ಟಿಸಿಕೊಂಡ ವಂಶ ರಾಜಕಾರಣದಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದುಕೊಂಡಿದೆ.

ಕುಟುಂಬ ರಾಜಕಾರಣದ ಕಾರಣಕ್ಕೆ ಯಾವಾಗಲೂ ಭಾರಿ ಟೀಕೆಗೆ ಒಳಗಾಗುತ್ತಿದ್ದ ಜೆಡಿಎಸ್ ಈ ಬಾರಿ ಇನ್ನಷ್ಟು ಪ್ರಶ್ನೆಗೆ ಗುರಿಯಾಗಿದೆ. ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ, ಪುತ್ರ ಪ್ರಜ್ವಲ್ ರೇವಣ್ಣ ವಿಧಾನಸಭಾ ಚುನಾವಣೆಗೆ ಇಳಿಯದ್ದರೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗಿದೆ. ಮುಂದೆ ಅವರ ಸ್ಪರ್ಧೆಯೂ ನಿಜವಾಗಲೂಬಹುದು.

ಸಮಾಜವಾದಿ ನಾಯಕ, ಅಹಿಂದ ಕಣ್ಮಣಿ ಎಂದು ಬಿಂಬಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಏರುತ್ತಿರುವ ಮೋದಿ ಅಲೆ ಮತ್ತು ಬಿಜೆಪಿ ಓಟವನ್ನು ಕಟ್ಟಿಹಾಕಲು ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ 2016ರ ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಕುಟುಂಬ ರಾಜಕಾರಣಕ್ಕೆ ಪ್ರೋತ್ಸಾಹ ನೀಡಿದರು. ಶಾಸಕ, ಸಚಿವರ ತಮ್ಮ, ಮಗ, ಅಪ್ಪ, ತಂಗಿ ಇತ್ಯಾದಿಗಳಿಗೇ ಹೆಚ್ಚಿನ ಜಿಲ್ಲಾ ಪಂಚಾಯ್ತಿಯಲ್ಲಿ ಸ್ಪರ್ಧೆಗೆ ಟಿಕೆಟ್ ನೀಡಲಾಯಿತು. ವಿಧಾನಸಭಾ ಚುನಾವಣೆಯಲ್ಲಿ ಅದರ ಮುಂದುವರೆದ ಭಾಗವೆಂಬಂತೆ ಈಗ ಸಚಿವ ಮತ್ತು ಸಂಸದರ ಮಕ್ಕಳಿಗೆ ಹೆಚ್ಚಿನ ಟಿಕೆಟ್ ನೀಡಲಾಗಿದೆ. ಹಣ ಮತ್ತು ಅಧಿಕಾರ ಇದ್ದವರು ಮಾತ್ರ ದುಡ್ಡು ಖರ್ಚು ಮಾಡಬಲ್ಲವರು, ಅವರು ಮಾತ್ರವೇ ಗೆದ್ದು ಬರಬಲ್ಲರು ಎಂಬ ರಾಜಕೀಯ ಸಾಮಾನ್ಯ ನಂಬಿಕೆಯೇ ಇಲ್ಲೂ ಗೆಲುವು ಸಾಧಿಸಿದೆ.

ಅದಕ್ಕೆ ಪುಷ್ಠಿ ನೀಡುವಂತೆ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರಿಗೆ ಮೈಸೂರಿನ ವರುಣಾದಿಂದಲೇ ಟಿಕೆಟ್ ಪಡೆದಿದ್ದಾರೆ. ಅಲ್ಲದೆ ತಾವು ಚಾಮುಂಡೇಶ್ವರಿ ಹಾಗೂ ಬಾದಾಮಿಯಿಂದ ಸ್ಪರ್ಧಿಸುವುದಾಗಿ ನಿಕ್ಕಿಯಾಗಿದೆ. ಅಲ್ಲದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ, ಜಯಚಂದ್ರ ಪುತ್ರ ಸಂತೋಷ್, ಶಾಮನೂರು ಶಿವಶಂಕರಪ್ಪ ಹಾಗೂ ಪುತ್ರನಿಗೆ ಮಾಮೂಲಿಯಂತೆ ಕಾಂಗ್ರೆಸ್ನಿಂದ ಟಿಕೆಟ್ ಸಿಕ್ಕಿದೆ.

ಹಿಂದಿನಂತೆ ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ ಹಾಗೂ ಮಗ ಪ್ರಿಯಾ ಕೃಷ್ಣ, ಮಲ್ಲೇಶ್ವರಂ ನಿಂದ ಎಐಸಿಸಿ ಪ್ರಧಾನಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಸಹೋದರ ಬಿಕೆ ಶಿವರಾಂ, ಕೇಂದ್ರದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ, ಧರ್ಮಸಿಂಗ್ ಪುತ್ರ ಅಜಯ್ ಸಿಂಗ್ ಸೇರಿದಂತೆ ದಂಡು ದಂಡು ನಾಯಕರ ಮಕ್ಕಳಿಗೆ ಸುಲಭವಾಗಿ ಅವಕಾಶ ನೀಡಲಾಗಿದೆ.

ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಮಗ ವಿಜಯೇಂದ್ರ ಅವರನ್ನು ವರುಣಾದಿಂದ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಯೂ ಟರ್ನ್‌ ಪಡೆದ ಬಿಎಸ್‌ವೈ, ಪುತ್ರ ವಿಜಯೇಂದ್ರ ಸ್ಪರ್ದಿಸುವುದಿಲ್ಲ ಎಂಬುದಾಗಿ ನಂಜನಗೂಡಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಆದರೂ ವಿಜಯೇಂದ್ರ ಅಪ್ಪನ ಉತ್ತರಾಧಿಕಾರಿ ಆಗುವುದು ದೂರದ ಮಾತಲ್ಲ. ಇನ್ನೊಬ್ಬ ಪುತ್ರ ರಾಘವೇಂದ್ರ ಈಗಾಗಲೆ ಸಂಸದನಾಗಿ ಆಯ್ಕೆಯಾಗಿ ಈ ಶಿಕಾರಿಪುರವನ್ನು ಪ್ರತಿನಿಧಿಸುತ್ತಿದ್ಧಾರೆ. ವಿಧಾನಪರಿಷತ್ ನಾಯಕ ಈಶ್ವರಪ್ಪ ಪುತ್ರ ಕಾಂತೇಶ್, ಸಿಎಂ ಉದಾಸಿ ಪುತ್ರ ಶಿವಕುಮಾರ್ ಉದಾಸಿ ಸೇರಿದಂತೆ ಬಿಜೆಪಿ ಕೂಡ ಗೆಲ್ಲುವ ಕುದುರೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.

ದೇಶದಲ್ಲಿ ಕುಟುಂಬ ರಾಜಕಾರಣವನ್ನು ಶೇ.30ಕ್ಕೂ ಹೆಚ್ಚು ಭಾಗ ಕುಟುಂಬ ರಾಜಕಾರಣವೇ ಆಕ್ರಮಿಸಿದೆ. ನಮ್ಮ ಸ್ವಾತಂತ್ರ ಹೋರಾಟಗಾರರು, ಗಾಂಧಿವಾದಿಗಳು, ಪ್ರಜಾಪ್ರಭುತ್ವವಾದಿಗಳು ದೇಶದ ಅಧಿಕಾರ ಹೇಗಿರಬೇಕು ಎಂದು ಕನಸು ಕಂಡಿದ್ದರೋ ಹಾಗಂತೂ ಇಲ್ಲ. ಇಲ್ಲಿ ಯಾರೇ ಗೆದ್ದರೂ, ಯಾವುದೇ ಪಕ್ಷ ಗೆದ್ದರೂ ಕೊನೆಗೆ ಪ್ರಜಾಪ್ರಭುತ್ವದ ದೊರೆಗಳಾದ ಜನತೆಗೆ ಸೋಲು ಕಟ್ಟಿಟ್ಟ ಬುತ್ತಿ. ಅಲ್ಲಿ ಗೆಲುವು ಹಣ ಮತ್ತು ತೋಳ್ಪಲ ನಿಭಾಯಿಸುವ ಕುಟುಂಬ ರಾಜಕಾರಣದಂಥ ಸಂಗತಿಗಳಿಗೇ ಗೆಲವು. ಹೀಗಾಗಿ ಜನತೆ ಈ ಉತ್ತಮ ಅಭ್ಯರ್ಥಿಗಳಿಲ್ಲ ಎಂದು ನಕಾರಾತ್ಮಕ ಭಾವನೆ ಬಿಡಬೇಕಿದೆ. ವೈಯಕ್ತಿಕ ವರ್ಚಸ್ಸಿನ ಮೇಲೆ ಬೆಳೆದು ಬಂದ ಜನಪರ ವ್ಯಕ್ತಿಗಳನ್ನು ಗೆಲ್ಲಿಸುವ ಮೂಲಕ ಕುಟುಂಬ ರಾಜಕಾರಣವನ್ನು ಸೋಲಿಸುವ ಹೊಣೆಗಾರಿಕೆ ಜನರ ಮೇಲಿದೆ.

- ಗೋವಿಂದರಾಜ ಬೈಚುಗುಪ್ಪೆ