samachara
www.samachara.com
ಆಧುನಿಕ ಭಾರತವನ್ನು ಮರು ರೂಪಿಸುವ ‘ಅಂಬೇಡ್ಕರ್‌ ರೂಪಕ’
ವಿಚಾರ

ಆಧುನಿಕ ಭಾರತವನ್ನು ಮರು ರೂಪಿಸುವ ‘ಅಂಬೇಡ್ಕರ್‌ ರೂಪಕ’

ಅಂಬೇಡ್ಕರ್‌ರ ಚಿಂತನೆ, ವಿಚಾರಗಳು ಮೂರ್ತಿಗಳಲ್ಲಿ, ಪ್ರತಿಮೆಗಳಲ್ಲಿ, ಆರಾಧನೆಗಳಲ್ಲಿ ಕಳೆದು ಹೋಗದಂತಹ ಎಚ್ಚರ ನಮ್ಮದಾಗಬೇಕಿದೆ.

ಒಂದು ಚಿಕ್ಕ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಈ ಹೊತ್ತನ್ನು ಎದುರುಗೊಳ್ಳುವುದು ಸೂಕ್ತ ಎನ್ನುವುದು ನನ್ನ ಭಾವನೆ. ಶತಮಾನದ ಚರಿತ್ರೆಯಲ್ಲಿ ಎಂದೂ ಇಲ್ಲದಷ್ಟು ಯಾಕೆ ಬಾಬಾ ಸಾಹೇಬರು ಈ ಒಂದು ದಶಕದಿಂದೀಚೆಗೆ ಹೆಚ್ಚು ಹೆಚ್ಚು ಮುನ್ನಲೆಗೆ ಬರುತ್ತಿದ್ದಾರೆ? ಬಿಡಿಸುತ್ತಾ ಹೋದರೆ ಇದಂತೂ ಚಿಕ್ಕ ಪ್ರಶ್ನೆಯಾಗಿ ಉಳಿಯಲಾರದು.

ಕೇವಲ ಈ ಹತ್ತು ವರ್ಷಗಳಲ್ಲಿ ಚರಿತ್ರೆಗೆ ಇದ್ದಕ್ಕಿದ್ದಂತೆ ನೆರೆ ಬಂದಷ್ಟು ಹೊಸ ಹೊಸ ದೃಷ್ಠಿಕೋನಗಳ ಮೂಲಕ ಅಂಬೇಡ್ಕರ್ ಚಿಂತನೆಗಳ ವ್ಯಾಖ್ಯಾನ ಮುನ್ನಡೆದಿದೆ ಯಾಕಿರಬಹುದು? ‘ದಲಿತ’ ಅಥವಾ ಇನ್ನೂ ನಿರ್ದಿಷ್ಟ ಗೊಳಿಸುವುದಾದರೆ ಅಸ್ಪೃಶ್ಯರ ವಿಮೋಚನೆಗೆ ಮೊದಲ ಶತ್ರುವಾದ ‘ಹಿಂದುತ್ವ’ದ ದಿಗ್ವಿಜಯ ಇದಕ್ಕೆ ಕಾರಣವಾಗುತ್ತಿರಬಹುದೇ? ‘ಹಿಂದುತ್ವ’ ಬಾಬಾ ಸಾಹೇಬರ ಕಾಲಕ್ಕೆ ‘ಹಿಂದುತ್ವ’ ರಾಜಕಾರಣ ‘ಚಿತ್ಪಾವನ’ ವೃತ್ತಕ್ಕಷ್ಟೇ ನೆಲೆಗೊಂಡಿತ್ತು. ಕಾಂಗ್ರೆಸ್ ಅದರ Breeding Ground ಆಗಿದ್ದದ್ದನ್ನು ಅಂಬೇಡ್ಕರ್ ಅವರೇ ತಮ್ಮ ಬರಹಗಳಲ್ಲಿ ಕಾಣಿಸಿದ್ದಾರೆ.

‘ರಾಷ್ಟ್ರೀಯತೆ’ಯ ಒಡಲು ‘ಹಿಂದುತ್ವ’ದ ಹೋರಾಟಗಳನ್ನು ಪೋಷಿಸುವುದಕ್ಕೆ ಅತ್ಯಂತ ಜೀವ ಪೋಷಕ ಎಂಬುದನ್ನು ಅಂಬೇಡ್ಕರ್‌ ಅವರ ಕೃತಿ ‘What Gandhi and congress done to untouchable’ ಬೆಳಕು ಚೆಲ್ಲುತ್ತದೆ. ಆದ್ದರಿಂದಲೇ ಅವರು ‘ಹಿಂದುತ್ವ’ವನ್ನು ‘ಬ್ರಾಹ್ಮಣತ್ವ’ ಎಂದೇ ಬಿಂಬಿಸಿದ್ದಾರೆ. ಅವರ ‘ಬ್ರಾಹ್ಮಣ ಧರ್ಮದ ದಿಗ್ವಿಜಯ’ ಬರಹದಂತೆಯೇ ಇಂದು ‘ಬ್ರಾಹ್ಮಣತ್ವ, ಹಿಂದುತ್ವದ’ ಪೋಷಾಕನಲ್ಲಿದೆ.

ಹುಲಿಯು ಹಸುವಿನ ವೇಷ ತೊಟ್ಟಿರುವಂತೆ ಚೋಟಾ ರಾಷ್ಟ್ರಭಕ್ತರಾದ ಸಂಘ ಪ್ರಚಾರ ರಾಷ್ಟ್ರೀಯತೆ ವ್ಯಾಖ್ಯಾನವನ್ನು ಸಾಂಸ್ಕೃತಿಕ ರಾಷ್ಟ್ರೀಯತೆಯಾಗಿ ವ್ಯಾಖ್ಯಾನಿಸುವುದು ಆರಂಭವಾದದ್ದೆ ‘ಭಾರತ ಮಾತೆಯ’ ಒಂದು ಪಾದವನ್ನು ಇನ್ನೊಂದು ಪಾದ ತುಳಿದು ಹಾಕುವುದಕ್ಕೆ ತಕ್ಕಂತೆ ಬಲಪಡಿಸುವ ಸಿದ್ಧತೆಯಲ್ಲಿ. ಈಗ ಅದು ಅವರ ನಿರೀಕ್ಷೆಗೂ ಮೀರಿ ಬಲಗೊಂಡಿದೆ. ಕಾರ್ಪೋರೇಟ್ ಆರ್ಥಿಕತೆ ಹೀಗೆ ಬಲಗೊಳಿಸುತ್ತಿದೆ. ಇದು ಅನ್ಯಾಯಗಳ ಜೊತೆಗೆ ಅನಾರೋಗ್ಯವನ್ನೂ ನೆಲೆಗೊಳಿಸುತ್ತಿದೆ. ಇದು ಖಂಡಿತ ಸಬಲ ಭಾರತ, ಸದೃಢ ಭಾರತ, ಸಶಕ್ತ ಭಾರತದ ಮಾದರಿ ಅಲ್ಲ. ರೋಗಗ್ರಸ್ತ ಭಾರತದ ಮಾದರಿ.

ಮನುವಾದಿಗಳು ಇಂದು ಅತಿರೇಕದ ಆನಂದ ಅನುಭವಿಸುತ್ತಿದ್ದಾರೆ. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಹುಳು ಹುಪ್ಪಟೆಗಳಂತೆ ಹೊಸಗಿ ಹಾಕುವುದಕ್ಕೆ ಹಾಕಿಕೊಂಡಿರುವ ನೀಲನಕ್ಷೆಗಳು. ಭಾರತ ಮಾತೆಯ ಆ ಬಲಿಷ್ಟವಾದದ ಮೂಲಕ ಕೇವಲ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಹೀಗೆ ಹೊಸಗಿ ಹಾಕಬಹುದೆಂಬ ಅವರ ಅಂದಾಜಿಗೂ ಮಿಗಿಲಾಗಿ ಈ ಪಾದದಡಿ ಎಲ್ಲ ಜಾತಿ, ಜನ, ವರ್ಗಗಳೂ ಬಲಿಪಶುಗಳಾಗಲಿರುವ ಸತ್ಯವನ್ನು ಕಂಡುಕೊಳ್ಳುವುದಕ್ಕೆ ಹೆಚ್ಚು ಸಮಯವೇನೂ ಹಿಡಿಯಲಾರದು.

ಆಧುನಿಕ ಭಾರತವನ್ನು ಮರು ರೂಪಿಸುವ ‘ಅಂಬೇಡ್ಕರ್‌ ರೂಪಕ’

ಶತಮಾನ ಎಂಬುದು ಇದುವರೆಗಿನ ಚರಿತ್ರೆಯ ಬಹುದೊಡ್ಡ ಅಧ್ಯಾಯ ಏನಲ್ಲ. ಇರಲಿ, ಇಂಥ ಅನಪೇಕ್ಷಿತ ಅನ್ಯಾಯದ ರಾಷ್ಟ್ರೀಯತೆಗೆ ಎದುರಾಗಿ ಬಾಬಾ ಸಾಹೇಬರು ಕಂಡುಕೊಂಡ ರಾಷ್ಟ್ರೀಯತೆ ವಿರುದ್ಧ ನೆಲೆಯದು. ಆದ್ದರಿಂದ ನಮಗೆ ಉಳಿದಿರುವುದು ಸಂಘ ಪರಿವಾರ ಮುಂದಿಡುತ್ತಿರುವ ರಾಷ್ಟ್ರೀಯತೆ ಅಥವಾ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಬದಲಾಗಿ ಬಾಬಾ ಸಾಹೇಬರು ಮುಂದಿಟ್ಟಿರುವ ರಾಷ್ಟ್ರೀಯತೆ. ಬಾಬಾ ಸಾಬೇಬರ ರಾಷ್ಟ್ರೀಯತೆಯ ವ್ಯಾಖ್ಯಾನಗಳು ನಮ್ಮ ಭವಿಷ್ಯ ರಾಜಕಾರಣದ ದಿಕ್ಸೂಚಿಯಾಗಬೇಕು ಎಂದೇ ನಾನು ಭಾವಿಸಿರುವೆ.

ಇನ್ನು ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯ ಗೋಮುಖ ವ್ಯಾಘ್ರ ರೂಪವನ್ನು ಬಗೆಯೋಣ. ಇದೊಂದು ಕೇಡು ಮೂರ್ಖತನದ, ಬೌದ್ಧಿಕ ದಾರಿರ್ದ್ಯದ ನುಡಿಕಟ್ಟು ‘ರಾಷ್ಟ್ರೀಯತೆ’ ಎನ್ನಬಹುದಾದ್ದರ ಒಳಗೊಂಡ ಒಡಲು ‘ಸಂಸ್ಕೃತಿ’ಯೇ ಆಗಿರುತ್ತದೆ. ಅದಕ್ಕಾಗಿ ವಿಶೇಷಣ ಬಳಸುವ ಅಗತ್ಯವೇ ಇಲ್ಲ. ‘ಸಂಸ್ಕೃತಿ’ ಇಲ್ಲದವರು ಅಥವಾ ‘ಸಂಸ್ಕೃತಿಯ’ ಸೊಗಸು ತಿಳಿಯದವರು ಮಾತ್ರ ಇಂಥ ಕಣ್ಕಟ್ಟಿನ ನುಡಿಕಟ್ಟುಗಳನ್ನು ಬಳಸಬಲ್ಲರು. ನುಡಿಕಟ್ಟು ಆಟ ಕಾರ್ಪೋರೇಟ್ ಜಾಲದ ‘ಬೀಜಮಂತ್ರ’.

ದೇಶ ಒಡೆಯುವ ಈ ಮಾದರಿಗೆ ಹೊರತಾಗಿ ನಾವು ದೇಶ ಕಟ್ಟಿದ ಮಾದರಿಗಳನ್ನು ಮುಂದಿಟ್ಟುಕೊಳ್ಳಬೇಕಾದ್ದು ಬಾಬಾ ಸಾಹೇಬರ ಅನುಯಯಿಗಳಾಗಿರುವ ನಮ್ಮ ಕರ್ತವ್ಯ ಆದ್ದರಿಂದ ಆಧುನಿಕ ಮತ್ತು ಆಧುನಿಕೋತ್ತರ ಭಾರತವು ಈ ದೃಷ್ಠಿಕೋನದ ಮೂಲಕ ನೋಡುವುದಾದರೆ ಈ ಸಂರಚನೆಗಳ ಒಳ ಪದರುಗಳಲ್ಲಿರುವ ಒಳಗೊಳ್ಳುವ ನೆಲೆಗಳನ್ನು ಕಣ್ಣಾಗಿಸಿಕೊಳ್ಳುವ ಅಗತ್ಯವಿದೆ.

‘ವ್ಯಕ್ತಿ ನೆಲೆ’ ಮತ್ತು ಸಿದ್ಧಾಂತ ನೆಲೆಗಳನ್ನೂ ಸಮೀಕರಿಸಿಕೊಳ್ಳಬೇಕು ಹಾಗೆ ನೋಡುವುದಾದರೆ ಶ್ರೀರಾಮ, ಗಾಂಧಿ, ಕಬೀರ, ಅಂಬೇಡ್ಕರ್ - ಇವರನ್ನು ‘ವ್ಯಕ್ತಿ’ ನೆಲೆಗೆ ಮಿತಿಗೊಳಿಸದೆ ತನ್ನ ಮರು ಸಂರಚನೆಗಳಿಗೆ ಬಳಸಿಕೊಂಡಿರುವ ಅಥವಾ ಮುಂದೆ ಬಳಸಿಕೊಳ್ಳಬಹುದಾದ ‘ರೂಪಕ’ಗಳು ಎನ್ನುವುದನ್ನು ತಿಳಿಯಬಹುದು. ಒಂದೊಂದಾಗಿ ಭಾರತ ಕಟ್ಟುವುದಕ್ಕೆಂದೇ ಈ ರೂಪಕಗಳ ಸಾಧ್ಯ ಸಾಧ್ಯತೆಯನ್ನು ಪರಿಶೀಲಿಸೋಣ.

ಶ್ರೀರಾಮ ರೂಪಕದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇದು ಕಾರ್ಯ, ಕ್ರೌರ್ಯದ ಪ್ರತೀಕ. ಈ ಪ್ರತೀಕ ಸೃಷ್ಟಿಸುತ್ತಿರುವ ‘ಹಿಂಸಾಭಾರತ’ ಭಾರತೀಯನ ನಿತ್ಯ ಬದುಕಿನ ಭಾಗವಾಗಿರುವುದರಿಂದ ಇದು ನಮ್ಮ ಮಾದರಿ ಅಲ್ಲ ಎಂಬುದನ್ನು ಪ್ರಜ್ಞಾವಂತರು ಬಲ್ಲರು. ಗಾಂಧಿ ರೂಪಕವನ್ನು ಗಾಂಧಿವಾದಿಗಳೇ Eneffective ಮಾಡಿರುವುದನ್ನು ಕಾಣಬಹುದು ಹಾಗೂ ಈ ‘ರೂಪಕ’ ಈಗಾಗಲೇ ಬಳಸಿ ನೋಡಿರುವ ರೂಪಕ. ಎಲ್ಲಕ್ಕೂ ಮಿಗಿಲಾಗಿದ್ದು, ದಿನವಾದದ್ದು, ಉದ್ದಾಗಿದ್ದದ್ದು ‘ಕಬೀರ’ ರೂಪಕ. ಅದನ್ನು ‘ಪುರೋಹಿತಶಾಹಿ’ ಸ್ಥಗಿತಗೊಳಿಸಿದ್ದು ಅಲ್ಲದೆ ವಿರೂಪಗೊಳಿಸಿರುವ ರೀತಿಗೆ ರೋಸಿ ಹೋಗಿ ಆ ದಾರಿಯಿಂದಲೇ ಹೊರಬಿದ್ದವರಿನ್ನೂ ನಮ್ಮ ನಡುವೆ ಜೀವಂತ ಇದ್ದಾರೆ. ಹೀಗಾಗಿ ‘ನಮೋ ಬ್ರಿಗೇಡಿ’ಗೆ ‘ನಮೋ ಕಬೀರ’ ಉದ್ದಾಗುವ ಅವಕಾಶ ಕೈತಪ್ಪಿದೆ.

ಈಗ ಉಳಿದಿರುವುದು ಒಂದೇ ರೂಪಕ ಅದು ಅಂಬೇಡ್ಕರ್ ರೂಪಕ. ಅಂಬೇಡ್ಕರ್ ರೂಪಕಕ್ಕಿರುವ ಅಪಾರ ಸಾಧ್ಯತೆ ಅದು ತಾಯ್ತನದ್ದಾಗಿರುವುದು, ವೈಜ್ಞಾನಿಕವಾಗಿರುವುದು. ಅದು ಸೀತೆಯರ ಬಿಡುಗಡೆಗೆ ಹಂಬಲಿಸುವಂತದ್ದು. ನನಗಂತೂ ಭಾರತ ಮಾತೆಯ ಹೂತ ಪಾದ, ತನ್ನದೇ ಇನ್ನೊಂದು ಪಾದದ ಕೆಳಗೆ ಸಿಕ್ಕಿಬಿದ್ದಿರುವ ಪಾದ ಇದು ಆದರ್ಶನೀಯ, ಅರ್ಹ ಮಾದರಿ ಈ ರೂಪಕ. ಆದ್ದರಿಂದ ಈ ರೂಪಕದ ಸಾಧ್ಯತೆಯನ್ನು ಮತ್ತಷ್ಟು ಬಗೆಯೋಣ.

ಆಧುನಿಕ ಭಾರತವನ್ನು ಮರು ರೂಪಿಸುವ ‘ಅಂಬೇಡ್ಕರ್‌ ರೂಪಕ’

ಹೀಗೆ ಬಗೆಯ ಹೋದ ಮೊದಲಿಗೆ ಎದ್ದು ಕಾಣುವುದು ವೈರುಧ್ಯ. ನಾವು ಅರಿತೋ ಅರಿಯದೆಯೋ ತೊಡಗಿಕೊಂಡಿರುವ ಅಂಬೇಡ್ಕರ್ ಯಾರ್ತೀಕರಣ ಪ್ರಕ್ರಿಯೆ. ಇದರ ಆರಂಭದಲ್ಲಿಯೇ ಅಂಬೇಡ್ಕರ್‌ರೇ ಇದನ್ನು ಖಂಡಿಸಿರುವುದನ್ನು ನೋಡಿದರೆ ಅವರಿಗೆ ಅವರ ಅನುಯಾಯಿಗಳು ತಮ್ಮನ್ನು ಆರಾಧನೆಗಷ್ಟೇ ಸೀಮಿತಗೊಳಿಸುತ್ತಾರೆಂಬ ಭವಿಷ್ಯದ ಸೂಚನೆ ಸಿಕ್ಕಿಯೇ ಇತ್ತು. ಆದ್ದರಿಂದಲೇ ಅವರು ಸಾಧಾರಣಕ್ಕಾಗಿ ಇದನ್ನು ತಿರಸ್ಕರಿಸಿದ್ದರು. ಆದರೂ ನಾವೆಲ್ಲ ಒಂದು ಹಂತದವರೆಗೆ ಮೂರ್ತೀಕರಣ ಪ್ರಕ್ರಿಯೆಯಲ್ಲಿ ತೊಡಗಿದ್ದೆವು, ತೊಡಗಿದ್ದೇವೆ ಕೂಡ.

ಪುರೋಹಿತಶಾಹಿ ತನ್ನ ಎದುರು ನಿಲ್ಲುವ ವ್ಯಕ್ತಿ ಸಿದ್ಧಾಂತ, ಪಂಥ, ಧರ್ಮ ಅದು ಯಾವುದೇ ಇದ್ದರೂ ಅದನ್ನು ದುರ್ಬಲಗೊಳಿಸಿ ತನ್ನಷ್ಟಕ್ಕೆ ತಾನೇ ಕೆಡಿಸಿಕೊಳ್ಳುವ ಅಥವಾ ತನ್ನ ಬೆರಳಿಂದಲೇ ತನ್ನ ಕಣ್ಣ ಚುಚ್ಚುಕೊಳ್ಳುವಂತೆ ಮಾಡುವುದಕ್ಕೆ ಪರಿಣಾಮಕಾರಿ ಅಸ್ತ್ರವಾಗಿ ಈ ಮೂರ್ತೀಕರಣವನ್ನು ಬಳಸಿಕೊಳ್ಳುತ್ತದೆ. ಈಗಾಗುತ್ತಿರುವುದೂ ಅದೇನೆ.

ಬಾಬಾ ಸಾಹೇಬರ ಚಿಂತನೆಗಳ ಬಹುಮುಖಿ ಆಯಾಮಗಳು ಇಂದು ತೆರೆದುಕೊಳ್ಳುತ್ತಿರುವ ಚಾರಿತ್ರಿಕ ವಿದ್ಯಾಮಾನಗಳು. ಮನುವಾದಿಗಳಿಗೆ ಮಾತ್ರವಲ್ಲ ಮಾರ್ಕ್ಸ್‌ವಾದಿಗಳಾದವರಿಗೂ ಅಂಬೇಡ್ಕರ್ ವಾದಿಗಳಿಗೂ ಅಂಬೇಡ್ಕರ್ ರೂಪಕದ ಮೊರೆ ಹೋಗುವಂತೆ ಮಾಡಿವೆ. ಇಂಥ ಚಾರಿತ್ರಿಕ ಸಾಧ್ಯತೆ ಭಾರತದ ಇತಿಹಾಸದಲ್ಲಿ ಹಿಂದೆಂದು ಕೂಡಾ ಕೇಳಿರದ ವಿದ್ಯಾಮಾನವಾಗಿದೆ. ಆದ್ದರಿಂದ ಅಂಬೇಡ್ಕರ್‌ರ ಚಿಂತನೆ, ವಿಚಾರಗಳು ಮೂರ್ತಿಗಳಲ್ಲಿ, ಪ್ರತಿಮೆಗಳಲ್ಲಿ, ಆರಾಧನೆಗಳಲ್ಲಿ ಕಳೆದು ಹೋಗದಂತಹ ಎಚ್ಚರ ನಮ್ಮದಾಗಬೇಕಿದೆ. ಸಾಂಸ್ಕೃತಿಕ ರಾಷ್ಟ್ರೀಯತೆಯ ಇಂದ್ರಾಯುಧ ಮೂಲಕ ಈ ನೆಲದ ಮೂಲನಿವಾಸಿಗಳನ್ನು ಆದಿಮ ಅಸ್ತಿತ್ವದ ಗುರುತುಗಳನ್ನು ನಿರ್ಣಾಮ ಮಾಡುವುದನ್ನು ಎರಡು ಬಗೆಯಲ್ಲಿ ನಾವು ನಿರ್ವಹಿಸಿಕೊಳ್ಳಬೇಕೆನಿಸುತ್ತದೆ.

ಒಂದು ಮಾರ್ಕ್ಸ್‌ವಾದಿಗಳು ಈ ಗಳಿಗೆಗೂ ಅರ್ಥಮಾಡಿಕೊಳ್ಳದೆ ಹೋಗಿರುವ ಸಾಂಸ್ಕೃತಿಕ Super structure ಭಾರತದ ನೆಲದಲ್ಲಿ ಆರ್ಥಿಕ ತಳಹದಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯದಿಂದ ಗಮನಿಸಬೇಕಾದ ವೈರುಧ್ಯವಾಗಿದೆ. ಇದನ್ನು ಅಂಬೇಡ್ಕರ್ ಕೇವಲ ಗುರುತಿಸಿ ಕಾಣಿಸಿದ್ದಷ್ಟೇ ಅಲ್ಲ ಅದೇ ಅವರ Open Agenda ಆಗಿತ್ತು. ಮೊಟ್ಟ ಮೊದಲ ಬಾರಿಗೆ ಈ ಚಿಂತನೆಯ ವ್ಯಾಖ್ಯಾನ ಮತ್ತು ಚರ್ಚೆಯನ್ನು ಮುನ್ನೆಲೆಗೆ ತಂದಿರುವವರು ಅಂಬೇಡ್ಕರ್. 1930ರ ನಂತರ ಎರಡೂವರೆ ದಶಕಗಳನ್ನು ಅಂದರೆ ಅವರು ಪರಿನಿರ್ವಾಣ ಹೊಂದುವ ಕೊನೆಯ ಗಳಿಗೆಯವರೆಗೂ ಅವರು ಈ ನೆಲೆಯ ಚಿಂತನೆ ಮತ್ತು ಕ್ರಿಯೆ ಎರಡನ್ನೂ ನಿಭಾಯಿಸುತ್ತಿದ್ದರು.

ಸ್ನೇಹಿತರೆ, ಈ ಅಂಬೇಡ್ಕರ್ ರೂಪಕ ನಮ್ಮ ಘನತೆಯ ಅಸ್ತಿತ್ವಗಳ ಉಳಿವಿನ ರೂಪಕ. ಆದ್ದರಿಂದ ಮೂರ್ತಿಗಳಲ್ಲಿ ನಿಂತು ಹೋಗಿರುವ ಅಂಬೇಡ್ಕರರ ವಿಚಾರಗಳ ಸ್ಥಗಿತತೆ ಒಡೆದು ಬಹುರೂಪಕತ್ವ ಸಿದ್ಧಿಸುವಂತೆ ಮಾಡಬೇಕಿದೆ. ಅಥವಾ rigidificationಗೆ tribalism/Dalitism ಒಳಪಡಿಸಬೇಕಾಗಿದೆ.

ಗುರುತು ರಾಜಕಾರಣ ಇಂಥ rigidificationಗೆ ಪಕ್ಕಾಗಬೇಕೆಂದು ಹೇಳಿದವರು ಸಮಾಜ ವಿಜ್ಞಾನಿ ಶಿವ ವಿಶ್ವನಾಥನ್‌ರ ಗುರು ನಾರಾಯಣರಾವ್. ಸಂದರ್ಭ ಮೀಜೋರಾಂ ತನ್ನ ಪ್ರತ್ಯೇಕತೆ ಘೋಷಿಸಿಕೊಂಡ ದಿನ. ಅವರ ಶಿಷ್ಯನೇ ಮುಖ್ಯಮಂತ್ರಿ ಗಾದಿ ಏರುತ್ತಾನೆ. ನಾರಾಯಣರಾವ್ ಅವರಿಗೂ ಗುರುಗಳಾದ್ದರಿಂದ ಪ್ರಮಾಣವಚನ ಸ್ವೀಕರಿಸಿದ ನಂತರ ನೇರ ಗುರುಗಳ ಬಳಿ ಬಂದು ವಿಶ್ವವಿದ್ಯಾನಿಲಯಕ್ಕೆ ಕುಲಪತಿಗಳಾಗುವಂತೆ ಬೇಡಿಕೊಳ್ಳುತ್ತಾನೆ.

ಆಗ ನಾರಾಯಣರಾವ್ ಅಡುಗೆಯ ಮನೆಯಲ್ಲಿದ್ದ ತಮ್ಮ ಪತ್ನಿಗೆ ‘ಶುಂಠಿ’ ತರುವಂತೆ ಹೇಳಿ Tribalism ಅನ್ನುವುದು ಶುಂಠಿಯಂತೆ, ಅಂದರೆ ಯಾವ ಭಾಗ ಮುರಿದು ನೆಟ್ಟರು ಬೆಳೆಯುವಂಥ ಮಾಯಾ ಸ್ಪರ್ಶ ಪಡೆಯಬೇಕೆಂದು ಹೇಳಿ ಆಹ್ವಾನವನ್ನು ನಿರಾಕರಿಸುತ್ತಾರೆ. ಸಾಂಸ್ಕೃತಿಕ ರೂಪಕವಾಗಿ ನಾವು ಅಂಬೇಡ್ಕರರನ್ನು ಕೈಗೆತ್ತಿಕೊಳ್ಳುವುದಾದರೆ ಅದು ಶುಂಠಿಯಂತೆ rigidificationನ ಸಾಧ್ಯತೆಯಾಗುವಂತೆ ಇರಬೇಕಾಗುತ್ತದೆ.

ಅಂಬೇಡ್ಕರರನ್ನು ಯುವ ಜನರ ಬಳಿ ಒಯ್ಯುವ ಒಂದು ಹಂತದ ಕೆಲಸ ನಿರ್ವಹಿಸಿದ್ದಾರೆ. ಈಗ ನಾವು ಈ ದಿಕ್ಕಿನಲ್ಲಿ 101 ಬಗೆಗಳನ್ನು ಯೋಚಿಸಬೇಕಾಗಿ ಶಿಲಾರೂಪಿ ಅಂಬೇಡ್ಕರರನ್ನು ಬಹುರೂಪಿ ಅಂಬೇಡ್ಕರ್ ಆಗಿಸಬೇಕಿದೆ. ಅಂಬೇಡ್ಕರ್ ದಲಿತ ನೆಲೆಯ ಬೌದ್ಧಿಕತೆಗೆ ವಿಶ್ವಾತ್ಮಕತೆ ತಂದು ಕೊಟ್ಟವರು.

ಮರೆಯದಿರೋಣ ಅಂಬೇಡ್ಕರ್ ಒಂದು ಮಹಾನದಿ. ಈ ನದಿಯನ್ನು ಬಿಡುಗಡೆಗೆ ತಹತಹಿಸುವ ಬಾಯಾರಿಕೆ ಇರುವ ಎಲ್ಲ ಭಾರತೀಯರ ಬಳಿಗೂ ಹರಿಸಬೇಕಾದ್ದು ನಮ್ಮ ಆದ್ಯತೆ. ನಾವು ಅಂಬೇಡ್ಕರ್‌ಗೆ ಕೇವಲ ಜಾತಿಯ ಬೇಲಿ ಮಾತ್ರ ಹಾಕುವುದಾದರೆ ಅಂತೆಯೇ, ಅವರ ಚಿಂತನೆಗಳಿಗೆ ಆರ್ಥಿಕ ಆಯಾಮವನ್ನು ಜೊತೆ ಜೊತೆಗೆ ಬೆಸೆಯುವ ಪ್ರತಿರೋಧ ರಾಜಕಾರಣ ಸೃಷ್ಟಿಸದೆ ಹೋದರೆ ನಾವು ಆಗೂ ಈ ರೂಪಕ ಅಪೂರ್ಣ ಅಂಬೇಡ್ಕರ್‌ಗೆ ಮಾಡುವ ಅನ್ಯಾಯವಾಗುತ್ತದೆ.

ಅಂಬೇಡ್ಕರ್ ವಾದಿಗಳಷ್ಟೇ ಉಳಿದೆಲ್ಲ ವಾದಿಗಳೂ ಅಂಬೇಡ್ಕರ್‌ರನ್ನು ನಿಗಿ ನಿಗಿ ಸತ್ಯದ ಕೆಂಡಗಳೆಂದೇ ಮುಟ್ಟಬೇಕಿದೆ. ಅದು ಬಿಟ್ಟ Strategyಗಷ್ಟೇ ಮತ್ತು Mileage ರಾಜಕಾರಣಕ್ಕಷ್ಟೇ ಮಿತಿಯಾದರೆ ಅದು ತಪ್ಪು, ಮಾತ್ರವಲ್ಲ ಅಪರಾಧ ಕೂಡ. ‘ದಲಿತರಿಗೆ’ ಇಲಿಗಳ ಭೇಟೆಗೆ ಎಲ್ಲ Survival ಕಿಂಡಿಗಳನ್ನು ಮುಚ್ಚಿ ಹೊಗೆ ಹಾಕಿ ಹೊರಬಂದಾಗ ಬಲೆಹಾಕುವ ‘ಯುದ್ಧತಂತ್ರ’ ಬಳಸುತ್ತಿರುವ ಸಂಘ ಪರಿವಾರಕ್ಕೆ ಉತ್ತರ ದಲಿತರು ತಮ್ಮ ಉಳಿವಿಗಾಗಿ ತಮ್ಮದೇ ಆದ Banana Republic ಕಟ್ಟಿಕೊಳ್ಳುವುದು.